ಆರೆಸ್ಸೆಸ್‌ ಬೆಂಬಲದ ವನವಾಸಿ ಕಲ್ಯಾಣ ಸಂಸ್ಥೆಗೆ ಜಮೀನು; ಆರ್ಥಿಕ ಇಲಾಖೆ ತಿರಸ್ಕರಿಸಿದರೂ ಒತ್ತಡ ಹೇರಿಕೆ

photo credit;bangaloremirror

ಬೆಂಗಳೂರು; ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ದ ಬೆಂಬಲದೊಂದಿಗೆ ಮತ್ತು ಸಂಘ ಪರಿವಾರದ ಸಂಘಟನೆಯಾಗಿರುವ ವನವಾಸಿ ಕಲ್ಯಾಣ ಸಂಸ್ಥೆಯು ಜಮೀನು ಮಂಜೂರು ಮಾಡಿಸಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕಂದಾಯ ಇಲಾಖೆ ಮೂಲಕ ವನವಾಸಿ ಕಲ್ಯಾಣ ಸಂಸ್ಥೆಯು ಜಮೀನು ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಈಗಾಗಲೇ ತಿರಸ್ಕರಿಸಿದ್ದರೂ ಸರ್ಕಾರದ ಮೇಲೆ ಒತ್ತಡ ಹೇರಲಾರಂಭಿಸಿದೆ.

 

ರಾಷ್ಟ್ರೋತ್ಥಾನ ಪರಿಷತ್‌ಗೆ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಹುರಳಿಚಿಕ್ಕನಹಳ್ಳಿ ಗ್ರಾಮದಲ್ಲಿ 9 ಎಕರೆ ಗೋಮಾಳವನ್ನು ಕಾನೂನು ಇಲಾಖೆಯ ಆಕ್ಷೇಪದ ನಡುವೆಯೂ ಮಂಜೂರು ಮಾಡಿರುವ ಬೆನ್ನಲ್ಲೇ ವನವಾಸಿ ಕಲ್ಯಾಣ ಸಂಸ್ಥೆಯು ಜಮೀನು ಮಂಜೂರು ಮಾಡಿಸಿಕೊಳ್ಳಲು ಸಲ್ಲಿಸಿರುವ ಪ್ರಸ್ತಾವನೆಯು ಮುನ್ನೆಲೆಗೆ ಬಂದಿದೆ.

 

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಗ್ರಾಮದಲ್ಲಿರುವ 1 ಎಕರೆ ವಿಸ್ತೀರ್ಣದ ಜಮೀನನ್ನು ಮಂಜೂರು ಮಾಡಿಕೊಡಲು ಕೆಲ ದಿನಗಳ ಹಿಂದೆಯಷ್ಟೇ ವನವಾಸಿ ಕಲ್ಯಾಣ ಸಂಸ್ಥೆಯು ಕಂದಾಯ ಇಲಾಖೆಗೆ ಪ್ರಸ್ತಾವನೆಯನ್ನು (ಕಡತ ಸಂಖ್ಯೆ; ಆರ್‌ಡಿ 10 ಎಲ್‌ಜಿಎನ್‌) ಸಲ್ಲಿಸಿದೆ. ಈ ಪ್ರಸ್ತಾವನೆ ಸಲ್ಲಿಸಲು ಕಂದಾಯ ಸಚಿವ ಆರ್‌ ಅಶೋಕ್‌ ಅವರು ಅನುಮೋದಿಸಿದ್ದರು ಎಂದು ತಿಳಿದು ಬಂದಿದೆ. ಈ  ಕುರಿತು ಆರ್ಥಿಕ ಇಲಾಖೆಯ ಅಭಿಪ್ರಾಯಕ್ಕಾಗಿ ಸಲ್ಲಿಕೆಯಾಗಿತ್ತು. ಆದರೆ ಆರ್ಥಿಕ ಇಲಾಖೆಯು ಈ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂದು ತಿಳಿದು ಬಂದಿದೆ.

 

ಆರ್ಥಿಕ ಇಲಾಖೆ ನೀಡಿರುವ ಅಭಿಪ್ರಾಯದ ಪ್ರತಿ

 

ಈ ಕುರಿತು 2022ರ ಮೇ 6ರಂದು ಆರ್ಥಿಕ ಇಲಾಖೆಯು ತನ್ನ ಅಭಿಪ್ರಾಯವನ್ನು ಕಂದಾಯ ಇಲಾಖೆಗೆ ಕಳಿಸಿದೆ. ‘ ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ಪ್ರಸ್ತಾವನೆಗೆ ಸಂಬಂಧಿಸಿದಂತೆ, ವನವಾಸಿ ಕಲ್ಯಾಣ ಸಂಸ್ಥೆಯು ಖಾಸಗಿ ಸಂಸ್ಥೆಯಾಗಿರುವುದರಿಂದ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22ಎ(2)ರ ಅನ್ವಯ ಖಾಸಗಿ ಸಂಸ್ಥೆಗಳಿಗೆ ನಗರ ಪೌರ ಸರಹದ್ದಿನೊಳಗಿರುವ ಜಮೀನನ್ನು ಮಂಜೂರು ಮಾಡಲು ಅವಕಾಶವಿಲ್ಲ. ಹೀಗಾಗಿ ಈ ಪ್ರಸ್ತಾವನೆಗೆ ಆರ್ಥಿಕ ಸಹಮತಿಯಿಲ್ಲ,’ ಎಂದು ಕಂದಾಯ ಇಲಾಖೆಗೆ ತನ್ನ ಅಭಿಪ್ರಾಯವನ್ನು ತಿಳಿಸಿದೆ.

 

ವನವಾಸಿ ಕಲ್ಯಾಣ ಸಂಸ್ಥೆಯ ಹಿನ್ನೆಲೆ

 

ವನವಾಸಿ ಕಲ್ಯಾಣ ಸಂಸ್ಥೆಯನ್ನು ಆರ್‌ಎಸ್‌ಎಸ್‌ನ ಪರಿವಾರ ಸಂಘಟನೆಯಾದ ಹಿಂದೂ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಅಜಿತ್‌ಕುಮಾರ್‌ ಮತ್ತಿತರರು ಸ್ಥಾಪಿಸಿದರು. ಸಿದ್ದಿಗಳು ಸೇರಿದಂತೆ ಗಿರಿಜನರ ಕಲ್ಯಾಣಕ್ಕಾಗಿ ಆರಂಭವಾದ ಈ ಸಂಸ್ಥೆಯನ್ನು ಶೃಂಗೇರಿ ಮೂಲದ ಪ್ರಕಾಶ್‌ ಕಾಮತ್‌ ಎಂಬುವರು ಮುನ್ನೆಡೆಸಿದರು.

 

ವನವಾಸಿ ಕಲ್ಯಾಣ ಆಶ್ರಮ ಎಂಬ ಸಂಘಟನೆಗೆ ಆರ್ ಎಸ್ ಎಸ್ ಮಾತೃಸಂಸ್ಥೆ. ಆರ್ ಎಸ್ ಎಸ್ ಸಿದ್ದಾಂತ, ನಿಲುವುಗಳನ್ನು ಜಾರಿ ಮಾಡಲೆಂದೇ ಇರುವ ಹತ್ತಾರು ವಿಭಾಗಗಳ ಪೈಕಿ ವನವಾಸಿ ಕಲ್ಯಾಣ ಆಶ್ರಮವೂ ಒಂದು ಎಂದು ಹೇಳಲಾಗುತ್ತಿದೆ.

 

ಆರ್ ಎಸ್ ಎಸ್ ನ ಉಳಿದ ವಿಭಾಗಗಳು ತಮ್ಮ ಕಾರ್ಯನಿರ್ವಹಣೆಯಲ್ಲೇ ರಾಜಕೀಯ ಕಾರ್ಯಸೂಚಿಯನ್ನು ಬಹಿರಂಗಗೊಳಿಸುತ್ತದೆ.‌ ಆದರೆ ವನವಾಸಿ ಕಲ್ಯಾಣ ಆಶ್ರಮವು ಆದಿವಾಸಿಗಳು, ಕಾಡಿನ ನಿವಾಸಿಗಳ ಮಧ್ಯೆ ಕೆಲಸ ಮಾಡುವಾಗ ತನ್ನ ರಾಜಕೀಯ ಸಿದ್ದಾಂತವನ್ನಾಗಲೀ, ಭವಿಷ್ಯದ ಕಾರ್ಯಸೂಚಿಯನ್ನಾಗಲೀ ಹೇಳುವುದಿಲ್ಲ. ಬದಲಾಗಿ ಶಿಕ್ಷಣ, ಸಂಸ್ಕಾರ, ಧರ್ಮ, ದೇವರು, ದೇಶ, ಕ್ರೀಡೆಯ ಹೆಸರಿನಲ್ಲಿ ಆದಿವಾಸಿ ವನವಾಸಿಗಳ ಮಧ್ಯೆ ಕೆಲಸ ಮಾಡುತ್ತಾ ಗುಪ್ತ ಅಜೆಂಡಾವನ್ನು ಜಾರಿ ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.

 

ಬುಡಕಟ್ಟು, ವನವಾಸಿಗಳು ಅವರದ್ದೇ ಆದ ಸುಂದರ ಸಂಸ್ಕೃತಿ ಮತ್ತು ದೇವಾರಾಧನೆಯನ್ನು ಹೊಂದಿದ್ದಾರೆ. ಅದನ್ನು ನಿಧಾನಕ್ಕೆ ವೈದಿಕೀಕರಣಗೊಳಿಸುವ ಕೆಲಸವೇ ವನವಾಸಿ ಕಲ್ಯಾಣ ಸಂಸ್ಥೆಯು ಮೊದಲ ಕೆಲಸ. ಕಾಡಿನ ಮನೆಗಳಲ್ಲೂ ಸತ್ಯನಾರಾಯಣ ಪೂಜೆ ಮಾಡಿಸಿ ಆ ಕಾಡಿನ ಬಡ ಮಕ್ಕಳಿಂದಲೂ ದಕ್ಷಿಣೆ ಹಾಕಿಸುವುದೇ ನಾಗರಿಕತೆ ಎಂದು ವನವಾಸಿ ಕಲ್ಯಾಣ ಸಂಸ್ಥೆಯು ಸ್ಥಳೀಯರಲ್ಲಿ ಬಿತ್ತನೆ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

 

ಅಲ್ಲದೆ ವನವಾಸಿಗಳ ಮಕ್ಕಳಿಗೆ ಶ್ಲೋಕ, ಬಿಲ್ವಿದ್ದೆ ಹೇಳಿಕೊಡುವ ಮೂಲಕ ಮತ್ತೊಂದು ಅಜ್ಞಾನದ ಕೂಪಕ್ಕೆ ತಳ್ಳುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದೆ. ಈ ಮೂಲಕ ಸ್ವಲ್ಪವಾದರೂ ಅನ್ಯಾಯದ ವಿರುದ್ದದ ಪ್ರತಿಭಟನೆ ಮಾಡಿ ಹಕ್ಕು ಪಡೆಯುವ ಛಾತಿ ಹೊಂದಿರುವ ಅರಣ್ಯವಾಸಿಗಳನ್ನು ಗುಲಾಮಗಿರಿಗೆ ತಳ್ಳುವ ಕೆಲಸವನ್ನು ಮಾಡಲಾಗುತ್ತಿದೆ ಎಂಬ ಆರೋಪವೂ ಇದೆ.

 

ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ವನವಾಸಿ ಕಲ್ಯಾಣ ಆಶ್ರಮ ತುಂಬಾ ಸಕ್ರೀಯವಾಗಿ ಕೆಲಸ ಮಾಡುತ್ತಿದೆ ಎಂದು ಗೊತ್ತಾಗಿದೆ. ಮುಖ್ಯವಾಗಿ ಪಶ್ಚಿಮ ಘಟ್ಟದ ವನವಾಸಿಗಳನ್ನು ಗುರಿಯಾಗಿರಿಸಿಕೊಂಡು ವನವಾಸಿ ಕಲ್ಯಾಣ ಆಶ್ರಮ ಕೆಲಸ ಮಾಡುತ್ತದೆ.

the fil favicon

SUPPORT THE FILE

Latest News

Related Posts