ಶೈಕ್ಷಣಿಕ ಉದ್ದೇಶಕ್ಕೆ ಗೋಮಾಳ ಮಂಜೂರು; ಶಿಕ್ಷಣ ಇಲಾಖೆಯ ಅನುಮತಿ ಪಡೆಯದ ರಾಷ್ಟ್ರೋತ್ಥಾನ ಪರಿಷತ್‌!

Photo Credit; Financial Express

ಬೆಂಗಳೂರು; ಶೈಕ್ಷಣಿಕ ಚಟುವಟಿಕೆಗಳ ಹೆಸರಿನಲ್ಲಿ ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ಹುರುಳಿಚಿಕ್ಕನಹಳ್ಳಿ ಗ್ರಾಮದಲ್ಲಿ 9-32 ಎಕರೆ ಗೋಮಾಳ ಜಮೀನನ್ನು ಮಂಜೂರು ಮಾಡಿಸಿಕೊಂಡಿರುವ ರಾಷ್ಟ್ರೋತ್ಥಾನ ಪರಿಷತ್‌ ಸಂಸ್ಥೆಯು ಈ ಸಂಬಂಧ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದಿರುವ ದಾಖಲೆಗಳನ್ನು ಸಲ್ಲಿಸಿರಲಿಲ್ಲ ಎಂಬುದು ತಿಳಿದು ಬಂದಿದೆ.

 

ರಾಷ್ಟ್ರೋತ್ಥಾನ ಪರಿಷತ್‌ಗೆ ಗೋಮಾಳ ಜಮೀನು ಮಂಜೂರಾತಿ ಸಂಬಂಧದ 388 ಪುಟಗಳನ್ನೊಳಗೊಂಡ ಸಮಗ್ರ ಕಡತವನ್ನು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಪಡೆದಿದೆ. ಗೋಮಾಳ ಮಂಜೂರಾತಿ ಸಂಬಂಧ ಪತ್ರ ವ್ಯವಹಾರ ನಡೆಸಿರುವ ಕಂದಾಯ ಇಲಾಖೆಯು ಟಿಪ್ಪಣಿಯ ಹಾಳೆಯೊಂದರಲ್ಲಿ ಈ ಅಂಶವನ್ನು ಪ್ರಸ್ತಾಪಿಸಿದೆ.

 

ಕರ್ನಾಟಕ ಭೂ ಮಂಜೂರಾತಿ ನಿಯಮಗಳೂ 1969ರ ನಿಯಮ 21 ಮತ್ತು ನಿಯಮ 22(ಎ)(i) ಅಡಿಯಲ್ಲಿ ಪ್ರಾಥಮಿಕದಿಂದ ಪ್ರೌಢಶಿಕ್ಷಣವನ್ನು ಒಳಗೊಂಡ ತಾಂತ್ರಿಕ, ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಗಳ ಉದ್ದೇಶಕ್ಕೆ ಜಮೀನು ಮಂಜೂರು ಮಾಡಲು ಪ್ರಸ್ತಾಪಿಸಲಾಗಿತ್ತು. ಆದರೆ ಶಿಕ್ಷಣ ಇಲಾಖೆಯಿಂದಲೇ ಅನುಮತಿ ಪಡೆದಿಲ್ಲ ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

‘ಅರ್ಜಿದಾರ ಸಂಸ್ಥೆಯು ಸಲ್ಲಿಸಿರುವ ದಾಖಲೆಗಳಲ್ಲಿ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದಿರುವ ಬಗ್ಗೆ ಯಾವುದೇ ದಾಖಲೆಗಳೂ ಕಂಡು ಬರುವುದಿಲ್ಲ. ಅನುಮತಿ ಪಡೆಯದೇ ಇದ್ದಲ್ಲಿ ಅನುಮತಿ ಪಡೆಯಲು ಸರ್ಕಾರದ ಮಟ್ಟದಲ್ಲಿ ಸೂಚಿಸಬಹುದಾಗಿರುತ್ತದೆ,’ ಎಂದು ಪ್ರಾದೇಶಿಕ ಆಯುಕ್ತರು ವರದಿ ಸಲ್ಲಿಸಿದ್ದರು ಎಂಬುದು ಕಡತಗಳ ಟಿಪ್ಪಣಿ ಹಾಳೆಗಳಿಂದ ಗೊತ್ತಾಗಿದೆ.

 

ಪ್ರಾದೇಶಿಕ ಆಯುಕ್ತರು ನೀಡಿರುವ ವರದಿ ಪ್ರತಿ

 

ಪ್ರಸ್ತಾಪಿತ ಜಮೀನು ಬಿಬಿಎಂಪಿ ವ್ಯಾಪ್ತಿಯ 18 ಕಿ ಮೀ ಒಳಪಟ್ಟಿದೆ. ಈ ಸಂಸ್ಥೆಯು ಈಗಾಗಲೇ 74 ಎಕರೆ ಜಮೀನಿನ ವಿವರ ಮತ್ತು 5 ವರ್ಷಗಳ ಆಡಿಟ್‌ ವರದಿಗಳೊಂದಿಗೆ ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್‌ರು ವರದಿ ಸಲ್ಲಿಸಿದ್ದಾರೆ.

 

ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕು ಹೆಸರಘಟ್ಟ ಹೋಬಳಿಯ ಹುರಳಿಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂಬರ್‌ 69ರ ಜಮೀನು ಮೂಲತಃ ಸರ್ಕಾರಿ ಗೋಮಾಳ ಜಮೀನಾಗಿದ್ದು, ಆಕಾರ್‌ಬಂದ್‌ನಂತೆ 23-23 ಎಕರೆ ವಿಸ್ತೀರ್ಣವಿದೆ. ಇದರಲ್ಲಿ 9-32 ಎಕರೆ ಜಮೀನನ್ನು ರಾಷ್ಟ್ರೋತ್ಥಾನ ಪರಿಷತ್‌ಗೆ ಶೈಕ್ಷಣಿಕ ಉದ್ದೇಶಕ್ಕೆ ಮಂಜೂರು ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ವರದಿ ನೀಡಿದ್ದರು.

 

ಇದನ್ನಾಧರಿಸಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರೂ ವರದಿಯೊಂದನ್ನು ಸಲ್ಲಿಸಿದ್ದರು. ಇದರ ಪ್ರಕಾರ ‘ಅರ್ಜಿದಾರ ಸಂಸ್ಥೆಯು ಸಲ್ಲಿಸಿರುವ ದಾಖಲೆಗಳಲ್ಲಿ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದಿರುವ ಬಗ್ಗೆ ಯಾವುದೇ ದಾಖಲೆಗಳು ಕಂಡು ಬಂದಿರುವುದಿಲ್ಲ.  ಅನುಮತಿ ಪಡೆಯದೇ ಇದ್ದಲ್ಲಿ ಅನುಮತಿ ಪಡೆಯಲು ಸರ್ಕಾರದ ಮಟ್ಟದಲ್ಲಿ ಸೂಚಿಸಬಹುದಾಗಿದೆ ಎಂದು ಪ್ರಾದೇಶಿಕ ಆಯುಕ್ತರು ಎಂದು 2021ರ ಜನವರಿ 20ರಂದೇ ಅಭಿಪ್ರಾಯಿಸಿದ್ದರು.

 

ಆದರೆ ವರ್ಷ ಕಳೆದರೂ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದಿರುವ ಬಗ್ಗೆ ಯಾವುದೇ ದಾಖಲಾತಿಗಳು ಕಡತದಲ್ಲಿ ಕಂಡು ಬಂದಿಲ್ಲ. ಈ ಸಂಬಂಧ ಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಅವರಿಗೂ ಯಾವುದೇ ಕಡತ ಸಲ್ಲಿಕೆಯಾಗಿಲ್ಲ ಎಂದು ಗೊತ್ತಾಗಿದೆ.

 

ಹೀಗಾಗಿ ರಾಷ್ಟ್ರೋತ್ಥಾನ ಪರಿಷತ್‌ ಸಂಸ್ಥೆಯು ಹುರಳಿಚಿಕ್ಕನಹಳ್ಳಿಯಲ್ಲಿ ಶೈಕ್ಷಣಿಕ ಚಟುವಟಿಕೆ ನಡೆಸಲು ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆಯೂ ಇಲ್ಲವಾಗಿದೆ.

 

ರಾಜ್ಯದ ವಿವಿಧೆಡೆ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿರುವ ರಾಷ್ಟ್ರೋತ್ಥಾನ ಪರಿಷತ್‌ ನೋಂದಾಯಿತ ಸಂಸ್ಥೆಯಾಗಿರುವುದಿಲ್ಲ ಎಂದು ಕಾನೂನು ಇಲಾಖೆ ತನ್ನ ಅಭಿಪ್ರಾಯದಲ್ಲಿ ಉಲ್ಲೇಖಿಸಿತ್ತು. ಆರ್ಥಿಕ ಮತ್ತು ಕಾನೂನು ಇಲಾಖೆಯು ಅಸಮ್ಮತಿ ವ್ಯಕ್ತಪಡಿಸಿತ್ತು ಎಂಬುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts