ಕಳಪೆ ಸ್ಯಾನಿಟೈಸರ್‌ ಖರೀದಿ; ಔಷಧ ನಿಯಂತ್ರಕರ ಪರೀಕ್ಷೆಯಲ್ಲಿ ಸಾಬೀತಾದರೂ ಲಕ್ಷಾಂತರ ರು ಪಾವತಿ

ಬೆಂಗಳೂರು; ಕೋವಿಡ್‌ ಎರಡನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಗುಣಮಟ್ಟವಿಲ್ಲದ ಸ್ಯಾನಿಟೈಸರ್‌ ಖರೀದಿಸಿದೆ. ಗುಣಮಟ್ಟವಿಲ್ಲದ ಸ್ಯಾನಿಟೈಸರ್‌ನ್ನು ಪೂರೈಸಿದೆ ಎಂದು 2021ರ ಆಗಸ್ಟ್‌ 8ರಂದು ವರದಿ ನೀಡಿದ್ದರೂ ಅಯೋಡಿನ್‌ ಕಂಪನಿಗೆ ಖರೀದಿ ಮೊತ್ತದ ಅಂದಾಜು 9 ಕೋಟಿ ಮೊತ್ತದ ಪೈಕಿ 9 ಲಕ್ಷವನ್ನು 2021ರ ಸೆಪ್ಟಂಬರ್‌ನಲ್ಲಿ ತರಾತುರಿಯಲ್ಲಿ ಪಾವತಿಸಿರುವದು ಇದೀಗ ಬಹಿರಂಗವಾಗಿದೆ.

ಕೋವಿಡ್‌ ಮೊದಲ ಅಲೆಯಲ್ಲಿಯೂ ಸ್ಯಾನಿಟೈಸರ್‌ ಖರೀದಿಯಲ್ಲಿ ಬಹುದೊಡ್ಡ ಅಕ್ರಮ ಎಸಗಿದ್ದ ಕೆಡಿಎಲ್‌ಡಬ್ಲ್ಯೂಎಸ್‌ನ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸದ ಕಾರಣ ಕೋವಿಡ್‌ ಎರಡನೇ ಅಲೆಯಲ್ಲಿಯೂ ಸ್ಯಾನಿಟೈಸರ್‌ ಖರೀದಿಯಲ್ಲಿಯೂ ಅಕ್ರಮಗಳು ಮುಂದುವರೆದಿದೆ.

ಅಯೋಡಿನ್‌ ಪ್ರಕರಣ

500 ಎಂ ಎಲ್‌ ಸಾಮರ್ಥ್ಯದ 31,500 ಬಾಟಲ್‌ ಸ್ಯಾನಿಟೈಸರ್‌ ಖರೀದಿ ಸಂಬಂಧ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು 2021ರ ಏಪ್ರಿಲ್‌ 24ರಂದು ದರಪಟ್ಟಿ ಆಹ್ವಾನಿಸಿತ್ತು. ಇದಾದ ಎರಡೇ ದಿನದಲ್ಲಿ ಅಂದರೆ 2021ರ ಏಪ್ರಿಲ್‌ 28ರಂದು ಖರೀದಿ ಪ್ರಮಾಣವನ್ನು 5.00 ಲಕ್ಷಕ್ಕೇರಿಸಿ ದರಪಟ್ಟಿಯಲ್ಲಿ ಒಟ್ಟು 5.31 ಲಕ್ಷ ಪ್ರಮಾಣ ಎಂದು ತಿದ್ದುಪಡಿ ಮಾಡಲಾಗಿತ್ತು.

ಈ ದರಪಟ್ಟಿಯಲ್ಲಿ ಒಟ್ಟು 22 ಮಂದಿ ಬಿಡ್‌ದಾರರು ಭಾಗವಹಿಸಿದ್ದರು. ಇದರಲ್ಲಿ 11 ಮಂದಿ ಬಿಡ್‌ದಾರರು ಷರತ್ತುಗಳನ್ನು ಪೂರೈಸಿರಲಿಲ್ಲ. ಅರ್ಹ ಬಿಡ್‌ದಾರರ ಪೈಕಿ ಅಯೋಡಿನ್‌ ಫಾರ್ಮಾಸ್ಯುಟಿಕಲ್ಸ್‌ ಪ್ರೈವೈಟ್‌ ಲಿಮಿಟೆಡ್‌, ದಿನೇಶ್‌ ಫಾರ್ಮಾ ಮತ್ತು ರಮನ್‌ ಅಂಡ್‌ ವೇಲ್‌ ಕಂಪನಿಯು ಕ್ರಮವಾಗಿ ಎಲ್‌ 1, ಎಲ್‌ 2 ಮತ್ತು ಎಲ್‌ 3 ಆಗಿ ಅರ್ಹತೆ ಪಡೆದಿದ್ದವು.

ಈ ಪೈಕಿ ಎಲ್‌ 1 ಆಗಿದ್ದ ಅಯೋಡಿನ್‌ ಫಾರ್ಮಾಸ್ಯುಟಿಕಲ್ಸ್‌ ಮತ್ತು ಎಲ್ 2 ದಿನೇಶ್‌ ಫಾರ್ಮಾಗೆ 5.31 ಲಕ್ಷ ಪೈಕಿ ತಲಾ 2.33 ಕೋಟಿ ಮೌಲ್ಯದ 2.50 ಲಕ್ಷ ಪ್ರಮಾಣದಲ್ಲಿ ಸ್ಯಾನಿಟೈಸರ್‌ ಪೂರೈಸಲು ಸರಬರಾಜು ಆದೇಶ ನೀಡಿತ್ತು. ಅಲ್ಲದೆ 8 ಕೋಟಿ ರು. ಮೌಲ್ಯದ 5 ಲೀಟರ್‌ ಸಾಮರ್ಥ್ಯದ ಸ್ಯಾನಿಟೈಸರ್‌ ಸರಬರಾಜಿಗೆ 2021ರ ಮೇ 4ರಂದು ಖರೀದಿ ಆದೇಶ ನೀಡಿತ್ತು ಎಂದು ತಿಳಿದು ಬಂದಿದೆ.

ಗುಣಮಟ್ಟದಿಂದ ಕೂಡಿರದ ಸ್ಯಾನಿಟೈಸರ್‌

ಎಲ್‌ 1 ಬಿಡ್‌ದಾರ ಅಯೋಡಿನ್‌ ಫಾರ್ಮಾಸ್ಯುಟಿಕಲ್ಸ್‌ ಸರಬರಾಜು ಮಾಡಿದ್ದ ಸ್ಯಾನಿಟೈಸರ್‌ ಕಳಪೆಯಿಂದ ಕೂಡಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಅಯೋಡಿನ್‌ ಕಂಪನಿಯು ಸರಬರಾಜು ಮಾಡಿದ್ದ ಸ್ಯಾನಿಟೈಸರ್‌ ಬ್ರಿಲಿಯಂಟ್‌ ಬ್ಲೂ ಬಣ್ಣದಿಂದ ಕೂಡಿದೆ ಎಂದು ಹೇಳಿತ್ತಾದರೂ ಉಗ್ರಾಣಗಳಿಗೆ ಪೂರೈಸಿದ್ದ ಸ್ಯಾನಿಟೈಸರ್‌ ಬಿಳಿ ಬಣ್ಣಕ್ಕೆ ತಿರುಗಿತ್ತು.

ಈ ಸಂಬಂಧ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದ್ದ ಔ‍ಷಧ ನಿಯಂತ್ರಕರು ಅಯೋಡಿನ್‌ ಫಾರ್ಮಾಸ್ಯುಟಿಕಲ್ಸ್‌ ಸರಬರಾಜು ಮಾಡಿದ್ದ ಸ್ಯಾನಿಟೈಸರ್‌ನ ಕೆಲ ಬ್ಯಾಚ್‌ಗಳು ಗುಣಮಟ್ಟದಿಂದ ಕೂಡಿರಲಿಲ್ಲ ಎಂದು 2021ರ ಆಗಸ್ಟ್‌ 27ರಂದು ವರದಿ ಪ್ರಕಟಿಸಿತ್ತು. ಈ ವರದಿ ನಿಗಮದ ಕೈ ಸೇರುವ ಹೊತ್ತಿಗೆ ರಾಜ್ಯದ ಎಲ್ಲಾ ಉಗ್ರಾಣಗಳಿಗೆ ಸ್ಯಾನಿಟೈಸರ್‌ ಪೂರೈಕೆಯಾಗಿತ್ತು ಎಂದು ಗೊತ್ತಾಗಿದೆ.

ಔಷಧ ನಿಯಂತ್ರಕರು ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ ವರದಿ ನೀಡಿ ತಿಂಗಳಾದರೂ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಅಯೋಡಿನ್‌ ಫಾರ್ಮಾಸ್ಯುಟಿಕಲ್ಸ್‌ನ್ನು ಕಪ್ಪು ಪಟ್ಟಿಗೆ ಸೇರಿಸಿಲ್ಲ. ಅಧಿಕಾರಿಗಳ ಈ ನಡೆ ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಬಿಡ್‌ನಲ್ಲಿ ಭಾಗವಹಿಸುವ ಕಂಪನಿಗಳೊಂದಿಗೆ ದರ ಕಡಿಮೆಗೊಳಿಸಲು ಚೌಕಾಸಿಗಿಳಿಯುವ ನಿಗಮದ ಅಧಿಕಾರಿಗಳು ಕಡೆಗೆ ಗುಣಮಟ್ಟದ ಸ್ಯಾನಿಟೈಸರ್‌ ಪೂರೈಸುವ ಕಂಪನಿಗಳನ್ನು ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದ ಅಧಿಕಾರಿಗಳು ಬದಿಗಿರಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಸ್ಯಾನಿಟೈಸರ್‌ನ್ನು ಖರೀದಿಸುವ ನಿಗಮವು ಅದನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಆ ನಂತರ ಗುಣಮಟ್ಟದ್ದೆಂದು ಸಾಬೀತಾದ ನಂತರ ನಿಗಮದ ಉಗ್ರಾಣ ಮತ್ತು ಜಿಲ್ಲಾ ಮತ್ತುಇ ತಾಲೂಕು ಆಸ್ಪತ್ರೆಗಳಿಗೆ ಪೂರೈಕೆ ಮಾಡಬೇಕಿತ್ತು. ಆದರಿಲ್ಲಿ ನಿಗಮವು ಸ್ಯಾನಿಟೈಸರ್‌ನ್ನು ಪೂರೈಕೆ ಮಾಡಿದ ನಂತರ ಪರೀಕ್ಷೆಗಾಗಿ ಔಷಧ ನಿಯಂತ್ರಕರಿಗೆ ಕಳಿಸಲಾಗುತ್ತಿದೆ. ಪೂರೈಕೆಯಾಗಿರುವ ಸ್ಯಾನಿಟೈಸರ್‌ ಗುಣಮಟ್ಟದಿಂದ ಕೂಡಿಲ್ಲ ಎಂಬ ವರದಿ ಕೈಸೇರುವ ಹೊತ್ತಿಗೆ ಕಳಪೆ ಗುಣಮಟ್ಟದ ಸ್ಯಾನಿಟೈಸರ್‌ ಉಗ್ರಾಣಗಳಿಗೆ ಸೇರಿರುವುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts