ಬೆಂಗಳೂರು; ಮೈಸೂರು ಸಕ್ಕರೆ ಕಾರ್ಖಾನೆಗೆ ಆರ್ಥಿಕ ಸಹಾಯವನ್ನು ಮಾತ್ರ ಒದಗಿಸಿದೆ ಎಂದು ಹೇಳಿರುವ ಆರ್ಥಿಕ ಇಲಾಖೆಯು ಈ ಕಂಪನಿಯಲ್ಲಿ ಸರ್ಕಾರವು ಯಾವುದೇ ಹೂಡಿಕೆ ಮಾಡಿಲ್ಲವೆಂದು ಸಿಎಜಿಯನ್ನೇ ದಾರಿ ತಪ್ಪಿಸಿದೆ!
ಆರ್ಥಿಕ ಸಹಾಯ ಒದಗಿಸಿದೆಯೇ ವಿನಃ ಯಾವುದೇ ಹೂಡಿಕೆ ಮಾಡಿಲ್ಲ ಎಂದು ಆರ್ಥಿಕ ಇಲಾಖೆ ಹೇಳಿದೆಯಾದರೂ ವಾಸ್ತವದಲ್ಲಿ ಹಣಕಾಸು ಲೆಕ್ಕದಲ್ಲಿ 335.78 ಕೋಟಿ ರು.ಗಳನ್ನು ಸರ್ಕಾರವು ಹೂಡಿಕೆ ಮಾಡಿತ್ತು ಎಂಬ ಅಂಶವನ್ನು ಸಿಎಜಿ ವರದಿಯು ಹೊರಗೆಡವಿದೆ. ಕಂಪನಿಯಲ್ಲಿ ಸರ್ಕಾರವು ಮಾಡಿದ್ದ ಹೂಡಿಕೆಯನ್ನು ಮರೆಮಾಚಿರುವ ಆರ್ಥಿಕ ಇಲಾಖೆಯ ಉದ್ದೇಶವೇನಿತ್ತು ಎಂಬುದು ನಿಗೂಢವಾಗಿದೆ.
ಮೈಸೂರು ಸಕ್ಕರೆ ಕಾರ್ಖಾನೆಯು 2016-17ರ ಅಂತ್ಯಕ್ಕೆ 416. 67 ಕೋಟಿ ಸಂಚಿತ ನಷ್ಟ ಅನುಭವಿಸಿತ್ತು. 2017-18ರಲ್ಲಿ 289.42 ಕೋಟಿ, 2018-19ರ ಅಂತ್ಯಕ್ಕೆ 460.89 ಕೋಟಿ ನಷ್ಟ ಅನುಭವಿಸಿತ್ತು. 2019-20ರಲ್ಲಿ ಸರ್ಕಾರವು 335.78 ಕೋಟಿಯಷ್ಟು ಹೂಡಿಕೆ ಮಾಡಿತ್ತು ಎಂಬುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.
ಮೈಸೂರು ಸಕ್ಕರೆ ಕಾರ್ಖಾನೆ ನಿಯಮಿತಕ್ಕೆ ಸಂಬಂಧಿಸಿದಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು (ಸೆ.2020) ದುಡಿಯುವ ಬಂಡವಾಳದ ಕೊರತೆಯಿಂದಾಗಿ ಕಂಪನಿಯು ನಷ್ಟವನ್ನು ಅನುಭವಿಸುತ್ತಿದೆ ಎಂದು ಹೇಳಿತ್ತು. 2015-16 ಮತ್ತು 2016-17ರ ಅವಧಿಯಲ್ಲಿ ಕಬ್ಬು ಅರೆಯುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ರೈತರ ಹಿತಾಸಕ್ತಿ ಮತ್ತು ಈ ಪ್ರದೇಶದ ಇತರ ಪೂರಕ ಘಟಕಗಳನ್ನು ಪುನರುಜ್ಜೀವನಗೊಳಿಸುವುದು ಹಾಗೂ ನೌಕರರಿಗೆ ಸಂಬಳ, ವೇತನ, ಪಿಂಚಣಿಗಳನ್ನು ಪಾವತಿಸಲು ಸರ್ಕಾರವು 2017-18 ಮತ್ತು 2018-19ರಲ್ಲಿ 57 ಕೋಟಿಗಳನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ 17 ಕೋಟಿಯನ್ನು ಸಾಲವನ್ನಾಗಿ ಪರಿಗಣಿಸಿತ್ತು ಎಂದು ಸಿಎಜಿ ವರದಿಯಲ್ಲಿ ಪ್ರಸ್ತಾಪವಾಗಿದೆ.
ಮೈಸೂರು ಸಕ್ಕರೆ ಕಾರ್ಖಾನೆಯನ್ನು ಅಂದಾಜು 500 ಕೋಟಿ ರು. ವೆಚ್ಚದಲ್ಲಿ ಪುನಶ್ಚೇತನಗೊಳಿಸುವ ಪ್ರಸ್ತಾವನೆ ಕುರಿತು ಸರ್ಕಾರದ ಹಂತದಲ್ಲಿ ತೀರ್ಮಾನಿಸಿಲ್ಲ. ಅಲ್ಲದೆ ಈ ಸಂಬಂಧ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದು ವಿಧಾನಸಭೆಯಲ್ಲಿ ಸೆ.17ರಂದು ಸಕ್ಕರೆ ಸಚಿವ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರು ಲಿಖಿತ ಉತ್ತರ ಒದಗಿಸಿದ್ದರು.
ಎಲ್‌ಆರ್‌ಓಟಿ ಆಧಾರದ ಮೇಲೆ 2021-22ನೇ ಹಂಗಾಮಿನಿಂದ 40 ವರ್ಷಗಳ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ನೀಡಲು 2020ರ ನವೆಂಬರ್ 18ರಂದು ಸರ್ಕಾರದ ಅನುಮತಿ ದೊರೆತಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ಯಶಸ್ವಿಯಾಗುವ ಗುತ್ತಿಗೆದಾರರು 2021-22ನೇ ಹಂಗಾಮಿನಿಂದ ಕಬ್ಬು ನುರಿಸುವ ಕಾರ್ಯವನ್ನು ಪ್ರಾರಂಭಿಸಬೇಕು ಎಂಬ ಷರತ್ತನ್ನೂ ವಿಧಿಸಲಾಗಿತ್ತು. ಆದರೆ ಮೈಸೂರು ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ಆಧಾರದ ಮೇಲೆ ನೀಡುವ ಪ್ರಸ್ತಾವನೆಗೆ ಕಾರ್ಖಾನೆಯ ವ್ಯಾಪ್ತಿಯಲ್ಲಿ ಕಬ್ಬು ಬೆಳೆಯುವ ರೈತರು, ಕಂಪನಿಯ ಷೇರುದಾರರು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಮೈಸೂರು ಸಕ್ಕರೆ ಕಾರ್ಖಾನೆ (ಮೈ ಷುಗರ್ಸ್) ಪುನರಾರಂಭಕ್ಕೆ ಸಂಬಂಧಿಸಿದಂತೆ ಹಿಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ‘ಈ ಹಿಂದೆ ಮೈ ಷುಗರ್ಸ್ ಪುನಶ್ಚೇತನಕ್ಕಾಗಿ ₹ 200 ಕೋಟಿ ಅನುದಾನವನ್ನು ನಾನೇ ಒದಗಿಸಿದ್ದೆ. ಆದರೆ, ಕಾರ್ಖಾನೆಯಲ್ಲಿನ ಗುಂಪುಗಾರಿಕೆಯಿಂದ ಮತ್ತೆ ನಷ್ಟ ಸಂಭವಿಸಿದೆ. ಈಗಲೂ ಕಾರ್ಖಾನೆ ನಡೆಸಲಾಗದ ಸ್ಥಿತಿ ಇದೆ. ಶೀಘ್ರದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಜತೆ ಸಭೆ ನಡೆಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ತರಿಸಿದ್ದನ್ನು ಸ್ಮರಿಸಬಹುದು.
‘ಹೊಸ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ತಕ್ಷಣಕ್ಕೆ ₹ 15 ಕೋಟಿ ವೆಚ್ಚ ಮಾಡಿದರೆ ಕಾರ್ಖಾನೆಯಲ್ಲಿ ಕಬ್ಬು ನುರಿಯಲು ಆರಂಭಿಸಬಹುದು. ಆದರೆ, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಹೊಂದಿರುವ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ 40 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲು ಸರ್ಕಾರ ಹೊರಟಿದೆ. ಈ ವಿಚಾರದಲ್ಲಿ ಖಾಸಗಿಯವರ ಒತ್ತಡಕ್ಕೆ ಮಣಿಯಲಾಗಿದೆಯೆ’ ಎಂದು ಶ್ರೀಕಂಠೇಗೌಡ ಅವರು ಸದನದಲ್ಲಿ ಪ್ರಶ್ನಿಸಿದ್ದರು. .
ಸಕ್ಕರೆ ಕಾರ್ಖಾನೆಯಿಂದ ₹ 30 ಕೋಟಿ ಆದಾಯ ತೆರಿಗೆ ಮತ್ತು ₹ 27 ಕೋಟಿ ವಿದ್ಯುತ್ ಬಿಲ್ ಬಾಕಿ ಇದೆ. ಇತ್ತೀಚೆಗೆ ನಿವೃತ್ತರಾದ ನೌಕರರಿಗೆ ₹ 8 ಕೋಟಿ ಬಾಕಿ ಪಾವತಿಸಬೇಕಾಗಿದೆ. ಯಂತ್ರೋಪಕರಣಗಳ ದುರಸ್ತಿ, ಹೊಸ ಯಂತ್ರಗಳ ಅಳವಡಿಕೆಗೆ ತುರ್ತಾಗಿ ₹ 100 ಕೋಟಿ ಅಗತ್ಯವಿದೆ. ಈ ಎಲ್ಲವನ್ನು ಪರಿಗಣಿಸಿ ಕಾರ್ಖಾನೆಯನ್ನು ಗುತ್ತಿಗೆಗೆ ನೀಡುವ ತೀರ್ಮಾನಕ್ಕೆ ಬರಲಾಗಿದೆ ಎಂದು ಸಚಿವ ಎಂ.ಟಿ.ಬಿ. ನಾಗರಾಜು ತಿಳಿಸಿದ್ದನ್ನು ಸ್ಮರಿಸಬಹುದು.