ಕರ್ನಾಟಕ ಸಾರಿಗೆ ಸಂಸ್ಥೆ ಸಿಬ್ಬಂದಿಯ ಅಸಹಾಯಕತೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ವರವಾಗಿದೆ. ಈ ಸಿಬ್ಬಂದಿ ಬಸ್ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಕ್ಕೂ ಹೊಟ್ಟೆ ತುಂಬ ಅನ್ನದ ಪ್ರಶ್ನೆಯೇ ಕಾರಣವಾಗಿತ್ತು. ಮುಷ್ಕರ ಸ್ಥಗಿತಗೊಳಿಸಿ ಕೆಲಸಕ್ಕೆ ಮರಳುವುದಕ್ಕೂ ಅನ್ನವೇ ಕಾರಣವಾಗಿತ್ತು. ಸ್ವಾಭಿಮಾನದಿಂದ ಬದುಕಲು ಶ್ರಮಕ್ಕೆ ತಕ್ಕ ಪ್ರತಿಫಲ ಬೇಕೆನ್ನುವುದು ಸಾರಿಗೆ ಸಿಬ್ಬಂದಿಯ ಬೇಡಿಕೆಯಾಗಿತ್ತು. ಪ್ರತಿಫಲ ಎಂಬುದು ಕೇವಲ ವೇತನದ್ದಷ್ಟೇ ಆಗಿರದೇ ಸುಭದ್ರ ಬದುಕಿನ ಖಾತ್ರಿ ಈ ಶ್ರಮಜೀವಿಗಳಿಗೆ ಬೇಕಿತ್ತು.
ನಿಷ್ಕಾರಣವಾಗಿ, ಸರ್ಕಾರವನ್ನು ಬ್ಲ್ಯಾಕ್ ಮೇಲ್ ಮಾಡಲೆಂದೇ ಸಂಚಿನ ಭಾಗವಾಗಿ ಎಲ್ಲ ಸಿಬ್ಬಂದಿಯನ್ನು ಒಗ್ಗೂಡಿಸುವುದು ಸಾಧ್ಯವೇ ಇಲ್ಲ. ಹಸಿವು ಮಾತ್ರ ಎಲ್ಲ ಸಿದ್ಧಾಂತ, ರಾಜಕೀಯ ಪಕ್ಷಗಳು, ಪ್ರಭಾವಗಳನ್ನು ಮೀರಿ ಒಗ್ಗೂಡುವುದಕ್ಕೆ ನೆರವಾಗುತ್ತದೆ. ಸಿಬ್ಬಂದಿಯಲ್ಲೂ ಕಾಂಗ್ರೆಸ್ ಒಲವಿರುವವರು, ಬಿಜೆಪಿ ಬೆಂಬಲಿಗರು, ಯಡಿಯೂರಪ್ಪ ಅಭಿಮಾನಿಗಳು, ಸಿದ್ದರಾಮಯ್ಯರನ್ನು ಪ್ರೀತಿಸುವವರು, ಜಾತಿ ಕಾರಣದಿಂದ ಯಾವುದೋ ನಾಯಕನ ಬಗ್ಗೆ ಅಂಧಾಭಿಮಾನ ಬೆಳೆಸಿಕೊಂಡವರೂ ಇರುತ್ತಾರೆ.
ಇಂಥವರ ನಡುವೆ ಸಮನ್ವಯ ಸಾಧ್ಯವಾಗುವುದು ಪ್ರಾಮಾಣಿಕ ಕಾರಣ ಮತ್ತು ಗುರಿ ಇದ್ದಾಗ ಮಾತ್ರ. ಆದರೂ ಈ ಹೋರಾಟ ಗುರಿ ಮುಟ್ಟದೇ ವಿಫಲವಾಯಿತು. ಬಹುತೇಕ ಕಾರ್ಮಿಕರು ಕೆಲಸಕ್ಕೆ ವಾಪಸಾದರು. ಈ ಹೋರಾಟಕ್ಕೆ ಮಣಿಯಬಾರದೆಂಬ ರಾಜ್ಯ ಸರ್ಕಾರದ ನಿಲುವು ಮೊದಲ ದಿನದಿಂದಲೂ ಅಚಲವಾಗಿತ್ತು. ಹೀಗಾಗಿಯೇ ಅದು ಕೋಡಿಹಳ್ಳಿ ಚಂದ್ರಶೇಖರ್ ಗೂ ಸಾರಿಗೆ ಸಿಬ್ಬಂದಿಯ ಮುಷ್ಕರಕ್ಕೂ ಏನು ಸಂಬಂಧ, ಅವರೇನಾದರೂ ಸುತ್ತಿಗೆ ಹಿಡಿದಿದ್ದಾರಾ, ಸ್ಪಾನರ್ ಹಿಡಿದಿದ್ದಾರಾ ಎನ್ನುವ ರೀತಿಯಲ್ಲಿ ಚಿಲ್ಲರೆ ಪ್ರಶ್ನೆಗಳನ್ನೇ ಮುಂದಿಟ್ಟಿತು.
ಹೋರಾಟದ ನಾಯಕ ಯಾರೇ ಇರಲಿ, ಸಿಬ್ಬಂದಿಯ ಬೇಡಿಕೆ ಎಷ್ಟು ಮುಖ್ಯ ಅನ್ನುವುದನ್ನು ಪರಿಗಣಿಸಬೇಕಿತ್ತು. ಆದರೆ ಮುಷ್ಕರ ನಡೆಸುತ್ತಿದ್ದ ಸ್ಥಳಕ್ಕೆ ರಾಜ್ಯ ಸರ್ಕಾರದ ಒಬ್ಬನೇ ಒಬ್ಬ ಪ್ರತಿನಿಧಿ ಹಾಜರಾಗದೇ ಭಂಡ ನಿರ್ಲಕ್ಷ್ಯ ಮೆರೆಯಿತು. ಸಾರಿಗೆ ಸಿಬ್ಬಂದಿಯ ಹೋರಾಟಗಳ ಇತಿಹಾಸದಲ್ಲಿ ಇದೇ ಮೊದಲ ಸಲ ಸಾರಿಗೆ ಸಚಿವ ಅಥವಾ ಸರ್ಕಾರದ ಪ್ರತಿನಿಧಿ ಹಾಜರಾಗಿರಲಿಲ್ಲ. ಒಂಬತ್ತು ಬೇಡಿಕೆ ಈಡೇರಿಸಿದ್ದೇವೆ, ಇನ್ನೊಂದು ಬೇಡಿಕೆಯಷ್ಟೇ ಈಡೇರಿಸುವುದು ಸಾಧ್ಯವಿಲ್ಲ ಎನ್ನುವುದು ಸರ್ಕಾರದ ಖಡಾಖಂಡಿತ ದನಿಯಾಗಿತ್ತು. ಸಾರಿಗೆ ಸಿಬ್ಬಂದಿ ಜನಸಾಮಾನ್ಯರಿಗೆ ತೊಂದರೆ ನೀಡುವ ಕಾರಣದಿಂದಲೇ ಪ್ರತಿಭಟನೆ ನಡೆಸಿರಲಿಲ್ಲ.
ಆದರೆ ಸರ್ಕಾರವನ್ನು ಟೀಕಿಸಬೇಕಾದ ಜನರು ಸಾರಿಗೆ ಸಿಬ್ಬಂದಿ ಬಗ್ಗೆ ಕೆಂಗಣ್ಣು ಬೀರುವಂತೆ ವ್ಯವಸ್ಥಿತ ಪ್ರಯತ್ನ ನಡೆಯಿತು. ಸಿಬ್ಬಂದಿ ಮತ್ತು ಅವರ ಕುಟುಂಬಕ್ಕೆ ಸುಭದ್ರ ಜೀವನ ಖಾತ್ರಿಪಡಿಸಬೇಕಿದ್ದ ಸರ್ಕಾರ ಅವರನ್ನೇ ಸೇವೆಯಿಂದ ವಜಾ ಮಾಡಿ ಅನ್ನವನ್ನೇ ಕಿತ್ತುಕೊಳ್ಳುವ ಅಮಾನವೀಯ ನಿರ್ಧಾರ ಕೈಗೊಂಡಿತು. ಒಂದಷ್ಟು ಮಂದಿ ಅಮಾನತಿಗೆ ಒಳಗಾದರು. ಸರ್ಕಾರದ ಈ ಭಂಡ ಧೈರ್ಯದ ಗುಟ್ಟಾದರೂ ಏನು? ಕಾರ್ಮಿಕರ ಹಿತಾಸಕ್ತಿ ತನ್ನ ಗುತ್ತಿಗೆ ಎಂಬಂತೆ ಈವರೆಗೂ ನಡೆದುಕೊಳ್ಳುತ್ತಿದ್ದ ಎಡಪಂಥೀಯ ಕಾರ್ಮಿಕ ಸಂಘಟನೆ ಈ ಪ್ರತಿಭಟನೆಯಲ್ಲಿ ಕೈಜೋಡಿಸಿರಲಿಲ್ಲ. ಹೋರಾಟಕ್ಕೆ ಬೆಂಬಲ ಹೋಗಲಿ ಒಂದೇ ಒಂದು ಅನುಕಂಪದ ಮಾತುಗಳನ್ನಾಡಿರಲಿಲ್ಲ. ವರ್ಷಗಳ ಕಾಲ ಸಾರಿಗೆ ಸಿಬ್ಬಂದಿಯ ಮುಷ್ಕರವನ್ನು ಸಂಘಟಿಸುತ್ತಲೇ ಬಂದಿದ್ದ ಎಡಪಂಥೀಯ ಸಂಘಟನೆ ನಿಗೂಢ ಮೌನ ವಹಿಸಿತ್ತು.
ವಿಚಿತ್ರ ಎಂದರೆ ಪ್ರತಿಭಟನೆ ವಿರೋಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಎಡಪಂಥೀಯ ಪಕ್ಷಗಳ ಸಕ್ರಿಯ ಕಾರ್ಯಕರ್ತರು ಮತ್ತು ಬಹುತೇಕ ಬ್ರಾಹ್ಮಣರ ನಿಲುವು(ಕೆಲವು ಅಪವಾದಗಳನ್ನು ಹೊರತುಪಡಿಸಿ)ಒಂದೇ ರೀತಿ ಇರುತ್ತಿತ್ತು. ಈಗಲೂ ಅದು ಮುಂದುವರಿದಿದೆ. ಎಡಪಂಥೀಯ ಪಕ್ಷಗಳ ನಾಯಕರಂತೂ ಇದು ಹೋರಾಟಕ್ಕೆ ಸಕಾಲವಲ್ಲ, ಕರೋನ ರೋಗಿಗಳು ಆಸ್ಪತ್ರೆಗೆ ಓಡಾಡುವುದಕ್ಕೆ ಸಾರಿಗೆ ಸಂಸ್ಥೆಯ ಬಸ್ ಗಳ ಅಗತ್ಯ ಇದೆ, ಈ ಕಾರಣದಿಂದಲಾದರೂ ಪ್ರತಿಭಟನೆ ಸ್ಥಗಿತಗೊಳಿಸುವುದು ಒಳಿತು ಎಂದು ಸಲಹೆ ನೀಡುತ್ತಿದ್ದರು.
ಸದಾ ಕಾರ್ಮಿಕರ ಹಿತಾಸಕ್ತಿ ಕಾಪಾಡುವ ಮಾತುಗಳನ್ನಾಡುತ್ತಿದ್ದ, ಪ್ರತಿಭಟನೆಗಳನ್ನು ಸಂಘಟಿಸುತ್ತಿದ್ದ ಎಡಪಂಥೀಯ ಪಕ್ಷಗಳ ನಿಲುವಿನಲ್ಲಿ ಏಕಾದರೂ ಈ ಬದಲಾವಣೆ ಆಗಿರಬಹುದು? ಒಂದೋ ಅದು ಕೇವಲ ಕಾರ್ಮಿಕರ ಹಿತಕ್ಕಷ್ಟೇ ಸೀಮಿತವಾದ ಪಕ್ಷ ಎಂಬ ಹಣೆಪಟ್ಟಿ ಕಿತ್ತೆಸೆದು ಅದರ ನೆಲೆ ಜನಸಮುದಾಯದಲ್ಲಿ ವಿಸ್ತರಿಸುವ ಉದ್ದೇಶ ಇರಬೇಕು, ಈ ಕಾರಣದಿಂದಲೇ ಸಾರಿಗೆ ಸಿಬ್ಬಂದಿಯ ಹೋರಾಟವನ್ನು ನಿರ್ಲಕ್ಷಿಸಿ ಜನಸಾಮಾನ್ಯರ ಸಮಸ್ಯೆ ಎಂಬ ಹೆಚ್ಚು ವಿಸ್ತ್ರತವಾದ ನೆಲೆಗಟ್ಟಿಗೆ ತನ್ನನ್ನು ವರ್ಗಾಯಿಸಿಕೊಂಡಿರಬೇಕು ಅಥವಾ ಎಡಪಂಥೀಯ ಪಕ್ಷದ ಕಾರ್ಮಿಕ ಸಂಘಟನೆ ಹಳಸಲಾಗಿ ಸಿಬ್ಬಂದಿಯಿಂದ ತಿರಸ್ಕೃತಗೊಂಡಿರಬೇಕು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟದ ಈ ಅವಕಾಶವನ್ನು ಎಡಪಂಥೀಯ ಪಕ್ಷಗಳು ಕಳೆದುಕೊಳ್ಳುವುದಕ್ಕೆ ಬೇರೆ ಗಂಭೀರ ಕಾರಣಗಳೇನೂ ನನಗೆ ಕಾಣಿಸುತ್ತಿಲ್ಲ.
ಲಿಂಗಾಯತ ಲಾಬಿ ಪ್ರಯತ್ನ ಅಥವಾ ವ್ಯಾವಹಾರಿಕ ಕಾರಣಗಳೇನೂ ಇದ್ದಂತಿಲ್ಲ. ಆದರೆ ರೈತ ಸಂಘಟನೆಯೊಂದರ ನಾಯಕ ಸಾರಿಗೆ ಸಿಬ್ಬಂದಿಯ ಹೋರಾಟವನ್ನು ಮುನ್ನಡೆಸಲು ಧುತ್ತನೆ ಕಾಣಿಸಿಕೊಂಡದ್ದನ್ನು ಮಾತ್ರ ಸಹಿಸಿಕೊಳ್ಳಲು ಎಡ ಪಕ್ಷಗಳ ನಾಯಕರು ಸಿದ್ಧರಿರಲಿಲ್ಲ ಎನ್ನುವುದು ಅವರ ವರ್ತನೆ, ಹೇಳಿಕೆಗಳಿಂದಲೇ ಗೊತ್ತಾಗುತ್ತಿತ್ತು. ಈ ಹೋರಾಟವನ್ನು ಇನ್ಯಾರೋ ಹೈಜ್ಯಾಕ್ ಮಾಡಿದ್ದಾರೆಂಬ ಹಿಡಿತ ಕಳೆದುಕೊಂಡ ಆತಂಕ ಎಡಪಕ್ಷಗಳಲ್ಲಿ ಹುಟ್ಟಿಕೊಂಡಿತ್ತು. ಸಾರಿಗೆ ಸಿಬ್ಬಂದಿಯ ಹೋರಾಟಕ್ಕೆ ಎಡಪಕ್ಷಗಳ ಬೆಂಬಲ ಇಲ್ಲದಿದ್ದುದೇ ಯಡಿಯೂರಪ್ಪ ಅವರಿಗೆ ಆನೆಬಲ ಬಂದಂತಾಗಿ ಸ್ವಪ್ರತಿಷ್ಠೆ ಮತ್ತು ಹಠಕ್ಕೆ ಜೋತುಬಿದ್ದರು. ಒಂದರ್ಥದಲ್ಲಿ ತಮಗೇ ಅರಿವಿಲ್ಲದಂತೆ ಎಡಪಕ್ಷಗಳು ಬಿಜೆಪಿ ಸರ್ಕಾರವನ್ನು ಬೆಂಬಲಿಸಿದವು.
ಹಾಗೆ ನೋಡಿದರೆ ಮುಷ್ಕರ ಸ್ಥಗಿತಗೊಳಿಸಿ ಕೆಲಸಕ್ಕೆ ವಾಪಸಾದ ಸಿಬ್ಬಂದಿ ಸೋತಿಲ್ಲ. ಸೋತಿರುವುದು ಮನುಷ್ಯತ್ವ. ಯಡಿಯೂರಪ್ಪ ಸರ್ಕಾರವೇನೂ ಗೆದ್ದಿಲ್ಲ. ತಾವೇ ಗೆದ್ದಿರುವುದಾಗಿ ಯಡಿಯೂರಪ್ಪ ಭಾವಿಸಿದರೆ ಎಡಪಕ್ಷಗಳ ನಾಯಕರು ಮುಸಿಮುಸಿ ನಕ್ಕಾರು. ಮಠಗಳಿಗೆ, ಜಾತಿಗಳಿಗೆ ಕೋಟಿ ಕೋಟಿ ಬಿಡುಗಡೆ ಮಾಡುತ್ತಲೇ ಇರುವ ಯಡಿಯೂರಪ್ಪ ಸರ್ಕಾರವಾಗಲೀ, ತಮ್ಮ ವೇತನ, ಭತ್ಯೆ, ಸೌಕರ್ಯಗಳನ್ನು ಯಾವುದೇ ಚರ್ಚೆ, ವಿರೋಧವಿಲ್ಲದೆ ಏರಿಸುವ ನಿರ್ಧಾರ ಕೈಗೊಳ್ಳುವ ಶಾಸಕರಾಗಲೀ ತಮ್ಮದೇ ಕುಟುಂಬದ ಭಾಗದಂತಿರುವ ಸಾರಿಗೆ ಸಿಬ್ಬಂದಿಯನ್ನು ನಿರ್ಲಕ್ಷಿಸಿರುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಒಳ್ಳೆಯ ಬೆಳವಣಿಗೆಯಂತೂ ಅಲ್ಲ.
ಸಿಬ್ಬಂದಿಯ ಒಡಲುರಿ ಅಸಹಾಯಕತೆಯಿಂದಾಗಿ ಸದ್ಯಕ್ಕೆ ತಣ್ಣಗಾದಂತೆ ಕಾಣುತ್ತಿರಬಹುದು. ಆದರೆ ಆರಿದಂತಿಲ್ಲ.ಇದನ್ನು ಸರ್ಕಾರವಷ್ಟೇ ಅಲ್ಲ, ಎಡಪಕ್ಷಗಳೂ ಅರ್ಥ ಮಾಡಿಕೊಳ್ಳಬೇಕು. ಈ ವೈಫಲ್ಯದಿಂದ ಹೋರಾಟ ಸಂಘಟಿಸುವುದರಲ್ಲಿ ಎಡಪಕ್ಷಗಳು ಮಾತ್ರ ನುರಿತಿವೆ ಎಂದೇನೂ ಭಾವಿಸಬೇಕಿಲ್ಲ., ಅದನ್ನು ತಾತ್ಕಾಲಿಕವಾಗಿ ದಮನ ಮಾಡಿರುವ ಸರ್ಕಾರಕ್ಕೂ ಭವಿಷ್ಯದಲ್ಲೂ ಇದೇ ರೀತಿಯ ಅನುಕೂಲಕರ ವಾತಾವರಣ ಇರುತ್ತದೆಂದೂ ಹೇಳಲಾಗದು.ಸಾವಿರಾರು ಸಾರಿಗೆ ಸಿಬ್ಬಂದಿಯ ಪ್ರೀತಿ, ವಿಶ್ವಾಸ ಗಳಿಸುವ ಒಂದು ಒಳ್ಳೆಯ ಅವಕಾಶವನ್ನು ಯಡಿಯೂರಪ್ಪ ಕಳೆದುಕೊಂಡರು.