ಮಾಸ್ಕ್‌ ಧರಿಸದ ಶ್ರೀರಾಮುಲುರಿಂದ ಮಾರ್ಗಸೂಚಿ ಉಲ್ಲಂಘನೆ; ಪುಕ್ಕುಲತನ ಮೆರೆಯಿತೇ ಜಿಲ್ಲಾಡಳಿತ?

ಬೆಂಗಳೂರು; ಕೋವಿಡ್‌ 2ನೇ ಅಲೆಯ ತೀವ್ರತೆಯನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿದ್ದ ಆರೋಗ್ಯ ಇಲಾಖೆಯ ಸಚಿವರಾಗಿದ್ದ ಹಾಲಿ ಸಮಾಜ ಕಲ್ಯಾಣ ಸಚಿವ ಬಿ ಶ್ರೀರಾಮುಲು ಅವರು ಮಾಸ್ಕ್‌ ಧರಿಸದೆಯೇ ಬಳ್ಳಾರಿಯ ಮಹಾನಗರಪಾಲಿಕೆ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಕೋವಿಡ್‌ ಮಾರ್ಗಸೂಚಿಗಳನ್ನು ಶ್ರೀರಾಮುಲು ಉಲ್ಲಂಘಿಸುತ್ತಿದ್ದರೂ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ಮೌನ ವಹಿಸುವ ಮೂಲಕ ಕರ್ತವ್ಯಲೋಪ ಆರೋಪಕ್ಕೆ ಗುರಿಯಾಗಿದ್ದಾರೆ.

ಮಾಸ್ಕ್‌ ಧರಿಸದೆಯೇ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವುದು ಅವರ ಅಧಿಕೃತ ಟ್ವಿಟರ್‌ ಖಾತೆಯಿಂದ ತಿಳಿದು ಬಂದಿದೆ. ಮಾಸ್ಕ್‌ ಧರಿಸದ ಸಾಮಾನ್ಯರಿಂದ ದಂಡ ವಸೂಲಿ ಮಾಡುತ್ತಿರುವ ಬಳ್ಳಾರಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ಸಚಿವ ಶ್ರೀರಾಮುಲು ಅವರು ಮಾಸ್ಕ್‌ ಧರಿಸದೇ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದರೂ ಯಾವುದೇ ಕ್ರಮ ವಹಿಸದಿರುವುದು ಹಲವರು ಆಕ್ಷೇಪ ಎತ್ತಿದ್ದಾರೆ.

ಕೋವಿಡ್‌ ಹರಡುವಿಕೆ ಆರಂಭವಾದ ವರ್ಷದಲ್ಲಿ ಶ್ರೀರಾಮುಲು ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು. ಕೋವಿಡ್‌ ನಿರ್ವಹಣೆಯಲ್ಲಿ ಅಸಮರ್ಥರಾಗಿದ್ದ ಕಾರಣಕ್ಕೆ ಅವರನ್ನು ಆರೋಗ್ಯ ಇಲಾಖೆಯಿಂದ ವಿಮುಕ್ತಗೊಳಿಸಲಾಗಿತ್ತು. ಆದರೂ ತವರು ಜಿಲ್ಲೆಯಲ್ಲಿ ಕೋವಿಡ್‌ ನ ಮಾರ್ಗಸೂಚಿ ಉಲ್ಲಂಘಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಮತ್ತು ಕೋವಿಡ್‌ ಮಾರ್ಗಸೂಚಿಗಳಿಗೆ ಸವಾಲು ಎಸೆದಿದ್ದಾರೆ.

ಕೋವಿಡ್‌-19 ಸೋಂಕಿತ ಪ್ರಕರಣಗಳು ಬಳ್ಳಾರಿ ಜಿಲ್ಲೆಯಲ್ಲಿ 2021ರ ಏಪ್ರಿಲ್‌ 21ರ ಅಂತ್ಯಕ್ಕೆ 792 ಪ್ರಕರಣಗಳು ಒಂದೇ ದಿನದಲ್ಲಿ ದಾಖಲಾಗಿವೆ. ಈ ಪೈಕಿ ಬಳ್ಳಾರಿ ನಗರವೊಂದರಲ್ಲೇ 432 ಪ್ರಕರಣಗಳು ಕೋವಿಡ್‌ ದೃಢಪಟ್ಟಿವೆ. ಅಲ್ಲದೆ ನಗರದಲ್ಲಿ 1,386 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯಲ್ಲಿ ಈವರೆವಿಗೆ ಒಟ್ಟು 45,537 ಪ್ರಕರಣಗಳು ಕೋವಿಡ್‌ ದೃಢಪಟ್ಟಿವೆ. ಅಲ್ಲದೆ ಇನ್ನು 3,023 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 626 ಮಂದಿ ಕೋವಿಡ್‌ನಿಂದಾಗಿ ಸಾವನ್ನಪ್ಪಿದ್ದಾರೆ.

ಕೊರೊನಾ ಸೊಂಕು ಕುರಿತು ನಿರ್ಲಕ್ಷ್ಯ ಮನೋಭಾವ ತಾಳಿ ಮಾಸ್ಕ್ ಧರಿಸದೇ ಬಳ್ಳಾರಿ ನಗರದಲ್ಲಿ ಅಡ್ಡಾಡುತ್ತಿದ್ದ ನಾಗರಿಕರಿಗೆ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ ನೇತೃತ್ವದ ತಂಡ ಮೈ ಚಳಿ ಬಿಡಿಸಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯನ್ನು ಪ್ರಕಟಿಸಿದ್ದಾರೆ. ಮಾಸ್ಕ್ ಧರಿಸದವರನ್ನು ಗುರಿಯಾಗಿಸಿಕೊಂಡು ಭೇಟೆಗಿಳಿದ ಪೊಲೀಸ್ ಪಡೆ ನಗರದಲ್ಲಿಯೇ ಸಂಜೆ ಎರಡು ಗಂಟೆಗಳಲ್ಲಿಯೇ 50 ಸಾವಿರ ರೂ. ದಂಡ ವಸೂಲಿ ಮಾಡಿದೆ ಎಂದು ಅಂಕಿಅಂಶಗಳನ್ನು ಒದಗಿಸಿದ್ದಾರೆ. ಆದರೆ ಶ್ರೀರಾಮುಲು ಅವರು ಮಾಸ್ಕ್‌ ಧರಿಸದೇ ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲವೇಕೆ ಎಂಬ ಪ್ರಶ್ನೆಗಳೂ ಕೇಳಿ ಬಂದಿವೆ.

ಎಲ್ಲಾ ನೀತಿ ನಿಯಮಗಳು ಜನಸಾಮಾನ್ಯರಿಗೆ ಮಾತ್ರ. ಸ್ವಾಯತ್ತ ಚುನಾವಣೆ ಆಯೋಗವಾಗಲಿ, ಡಿಸಿ ಮತ್ತು ಎಸ್ಪಿ ಸೇರಿದಂತೆ ಸರ್ಕಾರದ ಯಾವುದೇ ಅಧಿಕಾರಿಗಳಾಗಲಿ ಸಚಿವ ಶ್ರೀರಾಮುಲು ಸೇರಿದಂತೆ ಯಾವುದೇ ಸಚಿವ, ಶಾಸಕರ ಮೇಲೆ ಕ್ರಮ ಕೈಗೊಳ್ಳಲಾಗದ ಅಸಮರ್ಥರು ಮತ್ತು ಪುಕ್ಕಲರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜಕಾರಣಿಗಳಷ್ಟೇ ಅಲ್ಲ ಅಧಿಕಾರಿಗಳೇ ನೇರ ಕಾರಣ. ಜನ ತಿರುಗಿಬೀಳುವ ದಿನಗಳು ದೂರವಿಲ್ಲ.

ರವಿಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷರು,ಕರ್ನಾಟಕ ರಾಷ್ಟ್ರಸಮಿತಿ

ಜಿಲ್ಲೆಯಲ್ಲಿ ಕೋವಿಡ್ ಸೊಂಕಿನ ಪ್ರಮಾಣ ದಿನೇದಿನೇ‌ ಹೆಚ್ಚಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಪಾಲನೆ ಹಾಗೂ ಸ್ಯಾನಿಟೈಸರ್ ಬಳಕೆ ಅತ್ಯಂತ ಅನಿವಾರ್ಯವಾಗಿದೆ. ಆದ್ರೂ ಜನರು ಇದರ ಗಂಭೀರತೆಯನ್ನು ಅರಿವು ಮಾಡಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ‌ವ್ಯಕ್ತಪಡಿಸುತ್ತಿರುವ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮಾಸ್ಕ್‌ ಧರಿಸದ ಸಚಿವ ಶ್ರೀರಾಮುಲು ಅವರಿಗೇಕೆ ದಂಡ ವಿಧಿಸುತ್ತಿಲ್ಲ ಮತ್ತು ಮಾರ್ಗಸೂಚಿ ಉಲ್ಲಂಘಿಸಿದ ಕಾರಣಕ್ಕೆ ಅವರ ವಿರುದ್ಧ ಕ್ರಮವನ್ನೇಕೆ ಜರುಗಿಸುತ್ತಿಲ್ಲ ಎಂದು ಬಳ್ಳಾರಿ ನಾಗರಿಕರು ಪ್ರಶ್ನಿಸುತ್ತಿದ್ದಾರೆ.

the fil favicon

SUPPORT THE FILE

Latest News

Related Posts