ಬೆಂಗಳೂರು; ಸಾವಿರಾರು ಕೋಟಿ ರು.ಗಳನ್ನು ದೇಣಿಗೆ ರೂಪದಲ್ಲಿ ಸಂಗ್ರಹಿಸುತ್ತಿರುವ ಇಸ್ಕಾನ್ ಧಾರ್ಮಿಕ ಸಂಸ್ಥೆಯು ತನ್ನ ವಸತಿ ಗೃಹಗಳಿಗೆ ಕಂದಾಯ ಪಾವತಿಯಿಂದ ವಿನಾಯಿತಿ ಕೋರಿದೆ. ಅಲ್ಲದೆ ಸಂಸ್ಥೆಗೆ ಬಿಬಿಎಂಪಿಯು ಕಂದಾಯ ನಿಗದಿಪಡಿಸಿರುವುದೇ ಅವೈಜ್ಞಾನಿಕ ಎಂಬ ವಾದವನ್ನೂ ಮುಂದೊಡ್ಡಿದೆ. ಬೃಹತ್ ಬೆಂಗಳೂರು ಮಹಾನಗರಪಾಲಿಕೆಯು ಪರಿಷ್ಕರಿಸಿರುವ ಕಂದಾಯ ಆದೇಶವನ್ನು ರದ್ದುಪಡಿಸಬೇಕು ಎಂದು ಇಸ್ಕಾನ್ ಸಂಸ್ಥೆಯು ಇದೀಗ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮೆಟ್ಟಿಲೇರಿದೆ.
ಸಮಿತಿಯ ಅಧ್ಯಕ್ಷ ರಾಮಲಿಂಗಾರೆಡ್ಡಿ ಅವರಿಗೆ ಇಸ್ಕಾನ್ ಸಂಸ್ಥೆಯ ಸಂಪರ್ಕ ಮತ್ತು ಯೋಜನೆ ಮುಖ್ಯಸ್ಥ ನವೀನ ನೀರದ ದಾಸ ಎಂಬುವರು 2021ರ ಜನವರಿ 12ರಂದು ಪತ್ರ ಬರೆದಿದ್ದಾರೆ. ಸಂಸ್ಥೆಯಿಂದ ಪಾವತಿಸಬೇಕಾಗಿದ್ದ ಸ್ವತ್ತಿನ ಸಂಖ್ಯೆ 6/5ರ ಕಂದಾಯವನ್ನು ಹಾಗೂ ಕಂದಾಯ ಪರಿಷ್ಕರಿಸಿರುವ ಆದೇಶವನ್ನು ರದ್ದುಪಡಿಸಿ ಧಾರ್ಮಿಕ ಸಂಸ್ಥೆಯನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕು,’ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ರಾಮಲಿಂಗಾರೆಡ್ಡಿ ಅವರಿಗೆ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ. ನೀರದ ದಾಸ ಅವರು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಬರೆದಿರುವ ಪತ್ರದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ರಾಜಾಜಿನಗರದಲ್ಲಿರುವ ಇಸ್ಕಾನ್ ಕಟ್ಟಡಕ್ಕೆ ಕೆಎಂಸಿ ಕಾಯ್ದೆ 1976ರ ಕಕಲಂ (110ಬಿ) ಅಡಿಯಲ್ಲಿ ಸೇವಾ ಶುಲ್ಕ ನಿಗದಿಪಡಿಸಿದೆ. ಅಲ್ಲದೆ 14 ವರ್ಷದ ಹಿಂದೆಯೇ ಅಂದರೆ 2007ರಲ್ಲಿ ಅಂದಿನ ಸರ್ಕಾರ ಇಸ್ಕಾನ್‌ನ ಎಲ್ಲಾ ಕಟ್ಟಡಗಳಿಗೂ ಉಪ ಸಂಖ್ಯೆ ನೀಡಿ ಕಂದಾಯವನ್ನು ನಿಗದಿಪಡಿಸಿತ್ತು. ಕಲ್ಯಾಣ ಮಂಟಪ, ಕಚೇರಿ ಸಂಕೀರ್ಣ, ವಸತಿ ಗೃಹ ಮತ್ತು ಉಪಹಾರ ಮಂದಿರ (ಒಟ್ಟು 67,900 ಚ ಅಡಿ ವಿಸ್ತೀರ್ಣ)ದ ಒಟ್ಟು ವಿಸ್ತೀರ್ಣಕ್ಕೆ 30,53,100 ರು.ಗಳನ್ನು ವಾರ್ಷಿಕ ಮೌಲ್ಯ ಮತ್ತು 10,22,789 ರು. ಆಸ್ತಿ ತೆರಿಗೆ, ಇತರೆ ಉಪ ಕರವೆಂದು ನಿಗದಿಪಡಿಸಿತ್ತು.
ಕಂದಾಯ ನಿಗದಿಯೇ ಅವೈಜ್ಞಾನಿಕವೆಂದ ಇಸ್ಕಾನ್
ಈ ಪೈಕಿ 6/5ರಲ್ಲಿದ್ದ ವಸತಿ ಗೃಹಕ್ಕೆ (4400 ಚ ಅಡಿ)ಗೆ ವಾರ್ಷಿಕ ಮೌಲ್ಯ 2,72,160 ರು., 91,174 ರು. ಆಸ್ತಿ ತೆರಿಗೆ, ಇತರೆ ಉಪ ಕರ, 6/6ರಲ್ಲಿನ ಉಪಹಾರ ಮಂದಿರ (4,220 ಚ ಅಡಿ)ಗೆ ವಾರ್ಷಿಕ ಮೌಲ್ಯ 1, 58,760 ರು., 53,185 ರು. ಆಸ್ತಿ ಮತ್ತು ಇತರೆ ಉಪ ಕರಗಳೆಂದು ನಿಗದಿಪಡಿಸಿತ್ತು. ಈ ಎರಡೂ ಸ್ವತ್ತುಗಳಿಗೆ ಬಿಬಿಎಂಪಿ ನಿಗದಿಮಾಡಿರುವ ಕಂದಾಯವೇ ಅವೈಜ್ಞಾನಿಕ ಎಂದು ಇಸ್ಕಾನ್ ಸಂಸ್ಥೆಯು ವಾದಿಸುತ್ತಿದೆ.
ಇಸ್ಕಾನ್ ದೇವಸ್ಥಾನಕ್ಕೆ ಸೇರಿದ 6/4ರಲ್ಲಿದ್ದ ಸ್ವತ್ತಿನ ಆದಾಯವನ್ನು ಧಾರ್ಮಿಕ ಕೆಲಸ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತಿದೆ ಎಂಬುದನ್ನು ಮುಂದಿರಿಸಿಕೊಂಡಿದ್ದ ಬಿಬಿಎಂಪಿಯು 2003ರ ಫೆ.19ರಂದು ಕಂದಾಯವನ್ನು ಮನ್ನಾ ಮಾಡಿತ್ತು. ಆದರೆ ಸ್ವತ್ತಿನ ಸಂಖ್ಯೆ 124/6/4/, 6/5, 6/6ರಲ್ಲಿ ನಿರ್ಮಿಸಿದ್ದ ಉಪಹಾರ ಮಂದಿರ, ವಸತಿಗೃಹ, ಕಚೇರಿ ಕೆಲಸಕ್ಕಾಗಿ ನಿರ್ಮಿಸಿದ್ದ ಕಟ್ಟಡಗಳಿಗೆ ಬಿಬಿಎಂಪಿಯು ವಾರ್ಷಿಕ ಮೌಲ್ಯವನ್ನು ನಿಗದಿಪಡಿಸಿತ್ತು.
18,36,000 ರು. ವಾರ್ಷಿಕ ಮೌಲ್ಯ(ವಸತಿಯೇತರ)ವನ್ನು 2006ರ ಏಪ್ರಿಲ್ 1ರಿಂದ ಜಾರಿ ಬರುವಂತೆ 2007ರ ಜುಲೈ 23ರಂದು ಬಿಬಿಎಂಪಿಯು ನಿಗದಿಪಡಿಸಿ ಆದೇಶ ಹೊರಡಿಸಿತ್ತು. 4,59,000 ರು. ಆಸ್ತಿ ತೆರಿಗೆ, 1,56,060 ರು. ಇತರೆ ಉಪ ಕರ ಸೇರಿದಂತೆ ಒಟ್ಟು ತೆರಿಗೆ 6,15,060 ರು.ಗಳಿಗೆ ನಿಗದಿಪಡಿಸಿ ಮಧುಪಂಡಿತ್ ದಾಸ್ ಅವರ ಹೆಸರಿನಲ್ಲಿಯೇ ಸ್ವತ್ತನ್ನು ಮುಂದುವರೆಸಿತ್ತು ಎಂಬ ಅಂಶ ಬಿಬಿಎಂಪಿಯ ದಾಖಲೆಯಿಂದ ತಿಳಿದು ಬಂದಿದೆ.
ಅಲ್ಲದೆ ಇದೇ ಸ್ವತ್ತಿನಲ್ಲಿ ನಿರ್ಮಿಸಿದ್ದ ವಸತಿ ಗೃಹ (6/5)ದ 7,200 ಚ.ಅಡಿಗಳಿಗೆ ವಾರ್ಷಿಕ ಮೌಲ್ಯ 2,72,160 ರು.(ವಸತಿಯೇತರ)ಗಳನ್ನು 2006ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ನಿಗದಿಪಡಿಸಿತ್ತು. ಇದಕ್ಕೆ 68,040 ರು. ಆಸ್ತಿ ತೆರಿಗೆ, 23,134 ರು. ಇತರೆ ಉಪಕರ ಸೇರಿದಂತೆ ಒಟ್ಟು 1,91,194 ರು.ಗಳನ್ನು ನಿಗದಿಪಡಿಸಿತ್ತು. ಹಾಗೆಯೇ ಇದೇ ಸ್ವತ್ತಿನ 4,200 ಚ.ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಿದ್ದ ಉಪಹಾರ ಮಂದಿರಕ್ಕೆ ವಾರ್ಷಿಕ ಮೌಲ್ಯ 1,58,760 ರು.ಗಳನ್ನು ನಿಗದಿಪಡಿಸಿದ್ದ ಬಿಬಿಎಂಪಿಯು 39,690 ರು. ಆಸ್ತಿ ತೆರಿಗೆ, ಇತರೆ ಉಪ ಕರ 13,495 ರು. ಸೇರಿದಂತೆ 53,185 ರು.ಗಳಿಗೆ ನಿಗದಿಪಡಿಸಿತ್ತು.
ಪಿಐಡಿ ಸಂಖ್ಯೆ ಸಂಖ್ಯೆ 14-1/6/5ಕ್ಕೆ ಕಂದಾಯ ನಿಗದಿಪಡಿಸಿರುವುದಕ್ಕೆ ಸಂಬಂಧಿಸಿದಂತೆ ಇಸ್ಕಾನ್‌ನ ಮಧು ಪಂಡಿತ್ ದಾಸ್ ಅವರು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದರು. ಪಿಐಡಿ ಸಂಖ್ಯೆ 14-1-6/5ನ್ನು ರದ್ದುಪಡಿಸಿ ಈ ಹಿಂದೆ ಇದ್ದ ಪಿಐಡಿ ಸಂಖ್ಯೆ 14-1-6/4ನ್ನು ಮುಂದುವರೆಸಲು ಕೋರಿದ್ದರು. ಅದರಂತೆ 14-1/6/5ನ್ನು ರದ್ದುಪಡಿಸಲಾಗಿತ್ತಲ್ಲದೆ ಈ ಹಿಂದೆ ನೀಡಿದ್ದ ವಸತಿ ಗೃಹ ಪಿಐಡಿ ಸಂಖ್ಯೆ 14-1-6/4ರನ್ನು ಮುಂದುವರೆಸಿ 2020ರ ಡಿಸೆಂಬರ್ 19ರಂದು ಬಿಬಿಎಂಪಿಯ ಸಹಾಯಕ ಕಂದಾಯಾಧಿಕಾರಿ ತಿಳಿವಳಿಕೆ ಪತ್ರ ಹೊರಡಿಸಿದ್ದರು.
ಬಿಬಿಎಂಪಿ ಹೊರಡಿಸಿದ್ದ ತಿಳಿವಳಿಕೆ ಪತ್ರದಂತೆ ಇಸ್ಕಾನ್ ಸಂಸ್ಥೆ ನಡೆದುಕೊಳ್ಳುತ್ತಿಲ್ಲ. ಬದಲಿಗೆ ‘ಈ ಸಂಸ್ಥೆಯಿಂದ ಧಾರ್ಮಿಕ ಉಪ ವಿಧಿಗಳ ನೇಮ, ನಿಯಮಗಳನ್ನು ಕಟ್ಟಡದಲ್ಲಿ ನಡೆಸುತ್ತಿದೆ. ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು ನಿರ್ವಹಿಸುತ್ತಿಲ್ಲ. 2020ರ ಡಿಸೆಂಬರ್ 12ರಂದು ಹೊರಡಿಸಿರುವ ತಿಳಿವಳಿಕೆ ಪತ್ರದಲ್ಲಿರುವಂತೆ ಉಪ ಸಂಖ್ಯೆಗಳನ್ನು ರದ್ದುಪಡಿಸಿ ಈ ಹಿಂದೆ ಇದ್ದ ಕೆಎಂಸಿ ಕಾಯ್ದೆ 1976ರ ಕಲಂ (110ಬಿ) ಅಡಿಯಲ್ಲಿ ಸೇವಾ ಶುಲ್ಕವನ್ನು ಸ್ವತ್ತಿನ ಸಂಖ್ಯೆ 6/4ಕ್ಕೆ ಮುಂದುವರೆಸಿದೆ.
ಇಸ್ಕಾನ್ ಸಂಸ್ಥೆಯು ತನ್ನ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ದೇಶ-ವಿದೇಶಗಳಲ್ಲಿರುವ ಭಕ್ತರಿಂದ ಮತ್ತು ಕಾರ್ಪೋರೇಟ್ ಕಂಪನಿಗಳಿಂದ ಸಾವಿರಾರು ಕೋಟಿ ರು.ಗಳನ್ನು ದೇಣಿಗೆ ರೂಪದಲ್ಲಿ ಸಂಗ್ರಹಿಸುತ್ತಿದೆ. ಹೀಗಿರುವಾಗ ಸಂಸ್ಥೆಯು ಆರ್ಥಿಕ ಸಂಕಷ್ಟದಲ್ಲಿದೆ ಎಂದು ಹೇಳುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪಗಳು ಕೇಳಿ ಬಂದಿವೆ.