447 ಎಕರೆ ಗೋಮಾಳ ಕಬಳಿಕೆ; ದಾಖಲೆಯಿಲ್ಲದಿದ್ದರೂ 258 ಅನಧಿಕೃತ ಕಟ್ಟಡ ನಿರ್ಮಾಣ

ಬೆಂಗಳೂರು; ಆನೇಕಲ್‌ ತಾಲೂಕಿನ ಜಿಗಣಿ ಹೋಬಳಿಯ ಹುಲಿಮಂಗಲದ ಸರ್ವೆ ನಂಬರ್‌ 154 ಸೇರಿದಂತೆ ಒಟ್ಟು 4 ಸರ್ವೇ ನಂಬರ್‌ಗಳಲ್ಲಿ 447 ಎಕರೆ 48 ಗುಂಟೆ ವಿಸ್ತೀರ್ಣದ ಮೂಲ ಗೋಮಾಳ ಕಬಳಿಕೆಯಾಗಿದೆ. ಹಲವರಿಗೆ ಗೋಮಾಳ ಮಂಜೂರಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಮಂಜೂರಾತಿ ದಾಖಲೆಗಳೇ ಲಭ್ಯವಿಲ್ಲ. ಹಾಗೆಯೇ ಕಬಳಿಕೆ ಆಗಿರುವ ಗೋಮಾಳದಲ್ಲಿ 258ಕ್ಕೂ ಹೆಚ್ಚು ಅನಧಿಕೃತ ಕಟ್ಟಡಗಳನ್ನು ನಿರ್ಮಿಸಲಾಗಿದೆ.

ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್‌ ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಕಂದಾಯ ಸಚಿವ ಆರ್‌ ಅಶೋಕ್‌ ಅವರು ಆನೇಕಲ್‌ ತಾಲೂಕಿನ ಜಿಗಣಿ ಹೋಬಳಿಯೊಂದರಲ್ಲಿ 469 ಎಕರೆ ವಿಸ್ತೀರ್ಣದ ಮೂಲ ಗೋಮಾಳ ಕಬಳಿಕೆಯಾಗಿದೆ ಎಂದು ನೀಡಿರುವ ಲಿಖಿತ ಉತ್ತರವು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಹೊಣೆಗಾರಿಕೆಯನ್ನು ಬಯಲು ಮಾಡಿದೆ.

ಹುಲಿಮಂಗಲ ಜಿಗಣಿ ಹೋಬಳಿಯ ಸರ್ವೆ ನಂಬರ್‌ 154, 155, 156, 350ರಲ್ಲಿ ಒಟ್ಟು 469 ಎಕರೆ 57 ಗುಂಟೆ ವಿಸ್ತೀರ್ಣದ ಮೂಲ ಗೋಮಾಳವಿದೆ. ಈ ಪೈಕಿ ಮೂರು ಸರ್ವೆ ನಂಬರ್‌ಗಳಲ್ಲಿನ ಒಟ್ಟು 447 ಎಕರೆ 48 ಗುಂಟೆ ವಿಸ್ತೀರ್ಣದ ಮೂಲ ಗೋಮಾಳದಲ್ಲಿ 66 ಮಂದಿಗೆ ಮಂಜೂರಾಗಿರುವ ಕುರಿತು ದಾಖಲೆಗಳೇ ಇಲ್ಲ.

ಸರ್ವೆ ನಂಬರ್‌ 154ರಲ್ಲಿ ಇರುವ 177 ಎಕರೆ 23 ಗುಂಟೆ ವಿಸ್ತೀರ್ಣದ ಮೂಲ ಗೋಮಾಳ ಮಂಜೂರಿಯಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಮಂಜೂರಿ ದಾಖಲೆಗಳೇ ಲಭ್ಯವಿಲ್ಲ ಎಂದು ಸಚಿವ ಆರ್‌ ಅಶೋಕ್‌ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

ಸರ್ವೆ ನಂಬರ್‌ 155ರಲ್ಲಿ 125 ಎಕರೆ 17 ಗುಂಟೆ ವಿಸ್ತೀರ್ಣದಲ್ಲಿ ಮೂಲ ಗೋಮಾಳವನ್ನು 32 ಮಂದಿಗೆ ಮಂಜೂರಾಗಿರುವ ಕುರಿತು ಮಂಜೂರಿ ದಾಖಲೆಗಳೇ ಲಭ್ಯವಿಲ್ಲ. ಈ ಪ್ರದೇಶದಲ್ಲಿ ಒಟ್ಟು ನಿರ್ಮಿಸಿರುವ 45 ಕಟ್ಟಡಗಳ ಪೈಕಿ 41 ಕಟ್ಟಡಗಳು ಅನಧಿಕೃತ ಎಂಬುದು ಉತ್ತರದಿಂದ ಗೊತ್ತಾಗಿದೆ.

ಅದೇ ರೀತಿ ಸರ್ವೆ ನಂಬರ್‌ 156ರಲ್ಲಿ ಒಟ್ಟು 145 ಎಕರೆ 08 ವಿಸ್ತೀರ್ಣದ ಗೋಮಾಳವಿದೆ. ಇದನ್ನು 34 ಮಂದಿಗೆ ಮಂಜೂರಿ ಮಾಡಲಾಗಿದೆ ಎಂದು ಇಲಾಖೆ ಹೇಳಿದ್ದರೂ ಈ ಪೈಕಿ ಯಾವುದೇ ಮಂಜೂರಿ ದಾಖಲಾತಿಗಳೇ ಲಭ್ಯವಿಲ್ಲ. 145 ಎಕರೆ ವಿಸ್ತೀರ್ಣದ ಈ ಗೋಮಾಳದಲ್ಲಿ ಅನಧಿಕೃತವಾಗಿ 217 ಕಟ್ಟಡಗಳನ್ನು ನಿರ್ಮಿಸಲಾಗಿದೆ. ವಿಶೇಷವೆಂದರೆ ಈ ಜಮೀನಿಗೆ ಭೂ ಪರಿವರ್ತನೆಯೇ ಆಗಿಲ್ಲ. ಆದರೂ 217 ಕಟ್ಟಡಗಳನ್ನು ನಿರ್ಮಿಸಿರುವುದು ಅಚ್ಚರಿ ಮೂಡಿಸಿದೆ.

ಸರ್ವೆ ನಂಬರ್‌ 350ರಲ್ಲಿ ಒಟ್ಟು 22 ಎಕರೆ 09 ಗುಂಟೆ ವಿಸ್ತೀರ್ಣದ ಮೂಲ ಗೋಮಾಳವಿದ್ದು, ಇದರಲ್ಲಿ 2 ಎಕರೆ 15 ಗುಂಟೆ ವಿಸ್ತೀರ್ಣದ ಜಮೀನನ್ನು ಸಾರ್ವಜನಿಕ ರಸ್ತೆಗೆ ಕಾಯ್ದಿರಿಸಲಾಗಿದೆ. ಉಳಿದ 17 ಎಕರೆ 17 ಗುಂಟೆ ವಿಸ್ತೀರ್ಣದ ಜಮೀನು ಹರಾಜು ಪ್ರಕ್ರಿಯೆ ನಡೆಸುವ ಸಂಬಂಧದ ಪ್ರಸ್ತಾವನೆ ಜಿಲ್ಲಾಧಿಕಾರಿ ಹಂತದಲ್ಲಿದೆ ಎಂದು ಸಚಿವ ಅಶೋಕ್‌ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

ಹಾಗೆಯೇ ಕೆ ಆರ್‌ ಪುರಂ ವಿಧಾನಸಭೆ ಕ್ಷೇತ್ರದಲ್ಲಿನ ವಾರ್ಡ್‌ 81ರಲ್ಲಿನ ಸರ್ವೆ ನಂಬರ್‌ 199ರಲ್ಲಿ ಇರುವ ಸರ್ಕಾರಿ ಜಮೀನನ್ನು ಕಬಳಿಸಲಾಗಿದೆ. ಬೆಂಗಳೂರು ಪೂರ್ವ ತಾಲೂಕಿನ ಮಹದೇವಪುರ ಹೋಬಳಿಯ ಮಹದೇವಪುರ ಗ್ರಾಮದ ಸರ್ವೆ ನಂಬರ್‌ 199ರಲ್ಲಿ ಖರಾಬು ಬಂಡೆ ಜಮೀನಿದೆ. ಈ ಜಮೀನನ್ನು ಮಹೇಶ್‌ ಎಂಬುವರು ಸೇರಿದಂತೆ ಒಟ್ಟು 14 ಮಂದಿ ಕಬಳಿಕೆ ಮಾಡಿದ್ದಾರಲ್ಲದೆ ಅನಧಿಕೃತ ಮನೆಗಳನ್ನೂ ನಿರ್ಮಿಸಿದ್ದಾರೆ ಎಂದು ಅಶೋಕ್‌ ಅವರು ಉತ್ತರ ನೀಡಿದ್ದಾರೆ.

ಗೋಮಾಳವೂ ಸೇರಿದಂತೆ ಸರ್ಕಾರಿ ಜಮೀನನ್ನು ಉಳಿಸಿಕೊಳ್ಳಲು ಆಯಾ ತಾಲೂಕಿನ ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಕರ್ತವ್ಯಲೋಪದಿಂದಾಗಿಯೇ ಆನೇಕಲ್‌ ತಾಲೂಕು ಸೇರಿದಂತೆ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ವಿವಿಧೆಡೆ ಸರ್ಕಾರಿ ಜಮೀನು ಕಬಳಿಕೆ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. ಆದರೂ ಕಂದಾಯ ಮತ್ತು ಗ್ರಾಮೀಣಾಭಿವೃದ್ದಿ ಪಂಚಾಯತ್‌ರಾಜ್‌ ಇಲಾಖೆ ಎಚ್ಚೆತ್ತುಕೊಂಡಿಲ್ಲ.

the fil favicon

SUPPORT THE FILE

Latest News

Related Posts