Thursday | October 8, 2026 |

ವಿಶ್ವನಾಥ್‌ ಹಿರೇಮಠ್‌ ಪ್ರಕರಣ; ಸರ್ಕಾರ, ಕೆಪಿಎಸ್‌ಸಿಗೆ ಹೈಕೋರ್ಟ್‌ ನೋಟೀಸ್‌

ಬೆಂಗಳೂರು; ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಪ್ತ ಕಾರ್ಯದರ್ಶಿ ಆಗಿದ್ದ ವಿಶ್ವನಾಥ್‌ ಪಿ ಹಿರೇಮಠ್‌ ಅವರಿಗಷ್ಟೇ ಸೀಮಿತಗೊಳಿಸಿ ಗ್ರೂಪ್‌ -ಎ (ಕೆಎಎಸ್‌ ಕಿರಿಯ ಶ್ರೇಣಿ) ಹುದ್ದೆಯನ್ನು ಕರುಣಿಸಿದ್ದ ಆದೇಶವನ್ನು ಪ್ರಶ್ನಿಸಿ 49 ಕೆಎಎಸ್‌ ಅಧಿಕಾರಿಗಳು ಸಲ್ಲಿಸಿದ್ದ ರಿಟ್‌ ಅರ್ಜಿಗೆ ಸಂಬಂಧಿಸಿದಂತೆ  ಸರ್ಕಾರ ಮತ್ತು ಕೆಪಿಎಸ್‌ಸಿ ಮತ್ತು ಪ್ರತಿವಾದಿಯೊಬ್ಬರಲ್ಲಾದ ವಿಶ್ವನಾಥ್‌ ಹಿರೇಮಠ್‌ ಅವರಿಗೂ ಹೈಕೋರ್ಟ್‌ ನೋಟೀಸ್‌ ಜಾರಿಗೊಳಿಸಿದೆ.

ನೋಟೀಸ್‌ ಜಾರಿಗೊಳಿಸಿರುವ ನ್ಯಾಯಮೂರ್ತಿ ಅರವಿಂದ ಕುಮಾರ್‌ ಮತ್ತು ಶಿವಶಂಕರ್‌ ಅಮರಣ್ಣನವರ್‌ ಪೀಠವು ವಿಚಾರಣೆಯನ್ನು ಇದೇ ನವೆಂಬರ್‌ 12ಕ್ಕೆ ಮುಂದೂಡಿದೆ. ಅಲ್ಲದೆ ಆಕ್ಷೇಪಣೆ ಸಲ್ಲಿಸಲು 7 ದಿನಗಳ ಕಾಲಾವಕಾಶ ನೀಡಿದೆ.

ಕೃಷಿ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿರುವ ವಿಶ್ವನಾಥ್‌ ಹಿರೇಮಠ್‌ ಅವರಿಗೆ ಕೆಎಎಸ್‌ ಹುದ್ದೆ ನೀಡಿದ್ದಕ್ಕೆ ಕೆಎಎಸ್‌ ಅಧಿಕಾರಿಗಳ ವಲಯದಲ್ಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. 49 ಕೆಎಎಸ್‌ ಅಧಿಕಾರಿಗಳು ಸರ್ಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರಿಂದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮುಜುಗರಕ್ಕೀಡಾಗಿಸಿತ್ತು.

ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿರುವ ಅಧಿಕಾರಿಗಳ ಪಟ್ಟಿಯಲ್ಲಿ ಉಪ ಮುಖ್ಯಮಂತ್ರಿ ಡಾ ಸಿ ಎನ್‌ ಅಶ್ವಥ್‌ನಾರಾಯಣ್‌ ಅವರ ಆಪ್ತ ಕಾರ್ಯದರ್ಶಿ ಸತೀಶ್‌ಕುಮಾರ್‌, ಕಂದಾಯ ಸಚಿವ ಆರ್‌ ಅಶೋಕ್‌ ಅವರ ಆಪ್ತ ಕಾರ್ಯದರ್ಶಿ ಡಾ ಆರ್‌ ಪ್ರಶಾಂತ್‌, ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರ ಆಪ್ತ ಕಾರ್ಯದರ್ಶಿ ಪಿ ಎಸ್‌ ಕಾಂತರಾಜು, ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರ ಆಪ್ತ ಕಾರ್ಯದರ್ಶಿ ನಾಗರಾಜ್‌ ಸಿಂಗ್ರೇರ್‌ ಕೂಡ ಇದ್ದಾರೆ.

ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ರಿಟ್‌ ಅರ್ಜಿಯಲ್ಲಿ (12040/2020(ಎಸ್‌-ಕೆಎಟಿ) ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ಅವರನ್ನು ಮೊದಲ ಪ್ರತಿವಾದಿಯನ್ನಾಗಿಸಿದ್ದರೆ, ಡಿಪಿಎಆರ್‌ನ ಪ್ರಧಾನ ಕಾರ್ಯದರ್ಶಿ ಹೇಮಲತಾ, ಕೆಪಿಎಸ್ಸಿ ಕಾರ್ಯದರ್ಶಿ ಮತ್ತು ವಿಶ್ವನಾಥ್‌ ಹಿರೇಮಠ್‌ ಅವರನ್ನೂ ಪ್ರತಿವಾದಿಯನ್ನಾಗಿಸಲಾಗಿದೆ.

ಪ್ರಕರಣದ ಹಿನ್ನೆಲೆ

1998, 99 ಮತ್ತು 2004ನೇ ಸಾಲಿನ ಕೆಎಎಸ್‌ ಅಧಿಕಾರಿಗಳ ನೇಮಕಾತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ಮತ್ತು ಕರ್ನಾಟಕ ಆಡಳಿತ ನ್ಯಾಯ ಮಂಡಳಿ ನೀಡಿದ್ದ ಯಾವ ತೀರ್ಪನ್ನು ಪಾಲಿಸದೇ ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದ ರಾಜ್ಯ ಸರ್ಕಾರವು, ಲಾಕ್‌ಡೌನ್‌ ನಡುವೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಪ್ತ ಕಾರ್ಯದರ್ಶಿ (1)ಯಾಗಿರುವ ವಿಶ್ವನಾಥ ಪಿ ಹಿರೇಮಠ ಅವರಿಗಷ್ಟೇ ಸೀಮಿತಗೊಳಿಸಿ 2020ರ ಜುಲೈ 13ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಗ್ರೂಪ್‌-ಎ (ಕೆಎಎಸ್‌ ಕಿರಿಯ ಶ್ರೇಣಿ) ಹುದ್ದೆಯನ್ನು ಕರುಣಿಸಿತ್ತು.

ವಿಶ್ವನಾಥ ಪಿ ಹಿರೇಮಠ ಅವರು ಸೇರಿದಂತೆ ಒಟ್ಟು 5 ಅಭ್ಯರ್ಥಿಗಳನ್ನು 2009ರ ಮಾರ್ಚ್‌ 19ರಂದು ಶಾಖಾಧಿಕಾರಿ ಹುದ್ದೆಗಳಿಗೆ ನೇಮಕ ಮಾಡಿ ಅಧಿಸೂಚನೆ ಹೊರಡಿಸಿತ್ತು. ನಂತರದಲ್ಲಿ ಇವರು ಕೆಎಟಿಯಲ್ಲಿ ಸಲ್ಲಿಸಿದ್ದ ಅರ್ಜಿ( ಸಂಖ್ಯೆ 2121/2010)ಗೆ ಸಂಬಂಧಿಸಿದಂತೆ 2017ರ ಡಿಸೆಂಬರ್‌ 15ರಂದು ತೀರ್ಪು ನೀಡಿತ್ತು. ವಿಶೇಷವೆಂದರೆ ಕೆಎಟಿಯಲ್ಲಿ ಈ ಅರ್ಜಿ 10 ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಆಕ್ಷೇಪಣೆಯನ್ನೇ ಸಲ್ಲಿಸಿರಲಿಲ್ಲ.

ಅಲ್ಲದೆ ಪ್ರಕರಣವು ಕೆಎಟಿಯ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೆಎಟಿಯ ಆಡಳಿತಾತ್ಮಕ ಸದಸ್ಯರೊಬ್ಬರು ಆಕ್ಷೇಪಣೆ ಎತ್ತಿದ್ದರು. ಹಾಗೆಯೇ ಅವರು ರಜೆ ಮೇಲೆ ತೆರಳಿದ್ದ ಸಂದರ್ಭವನ್ನು ಬಳಸಿಕೊಂಡು ಅಂದಿನ ನ್ಯಾಯಾಂಗ ಸದಸ್ಯರೋರ್ವರು ಸರ್ಕಾರ ಆಕ್ಷೇಪಣೆ ಸಲ್ಲಿಸದೇ ಇದ್ದರೂ ಈ ಪ್ರಕರಣದಲ್ಲಿ ವಿಶ್ವನಾಥ ಪಿ ಹಿರೇಮಠ ಅವರಿಗೆ ಗ್ರೂಪ್‌ ಎ ಹುದ್ದೆಯನ್ನು ನೀಡಲು ತೀರ್ಪು ನೀಡಿದ್ದರು. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೂಡ ಒಬ್ಬ ಪ್ರತಿವಾದಿಯಾಗಿದ್ದರೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮೇಲ್ಮನವಿ ಸಲ್ಲಿಸಿರಲಿಲ್ಲ.

2017ರಲ್ಲಿ ಕೆಎಟಿ ನೀಡಿದ್ದ ತೀರ್ಪು 3 ವರ್ಷಗಳಾದರೂ ಅನುಷ್ಠಾನಕ್ಕೆ ಬಂದಿರಲಿಲ್ಲ. ಅಲ್ಲದೆ ಸರ್ಕಾರವೂ ಮೇಲ್ಮನವಿಯನ್ನೂ ಸಲ್ಲಿಸಿರಲಿಲ್ಲ. ಈ ಮಧ್ಯೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುತ್ತಿದ್ದಂತೆ ವಿಶ್ವನಾಥ ಹಿರೇಮಠ ಅವರು 2019ರಲ್ಲಿ ಸರ್ಕಾರದ ವಿರುದ್ಧ ಕರ್ನಾಟಕ ನ್ಯಾಯ ಮಂಡಳಿಯಲ್ಲಿ ನ್ಯಾಯಾಂಗ ನಿಂದನೆ ಅರ್ಜಿ(104/2019) ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಗೆ ಬಾಕಿ ಇದೆ. ಇದರ ಮಧ್ಯೆಯೇ ರಾಜ್ಯ ಸರ್ಕಾರ ಇವರಿಗೆ ಗ್ರೂಪ್‌ ಎ ಹುದ್ದೆಯನ್ನು ಕರುಣಿಸಿರುವುದು ಸಂಶಯಗಳಿಗೆ ಕಾರಣವಾಗಿತ್ತು.

ಗ್ರೂಪ್‌ ಎ ಹುದ್ದೆಯನ್ನು ಕರುಣಿಸಿರುವ ರಾಜ್ಯ ಸರ್ಕಾರ, ಕೆಪಿಎಸ್‌ಸಿಯ ನೇಮಕಾತಿ ಅಧಿಸೂಚನೆ 2004ರ ನವೆಂಬರ್‌ 4ರ ಪ್ರಕಾರ ಕೆಎಎಸ್‌(ಕಿರಿಯ ಶ್ರೇಣಿ) ಹುದ್ದೆಗೆ ನೇಮಕಾತಿ ಹೊಂದಿದ ಅಭ್ಯರ್ಥಿಗಳಿಗೆ ಅನ್ವಯವಾಗಿರುವ ಎಲ್ಲಾ ಸೌಲಭ್ಯಗಳನ್ನು ಅನ್ವಯಿಸಿ ಗ್ರೂಪ್‌ ಎ ಹುದ್ದೆಯನ್ನು ಅನುಗ್ರಹಿಸಿತ್ತು.

1998, 99 ಹಾಗೂ 2004ನೇ ಸಾಲಿನಲ್ಲಿ ಒಟ್ಟು 60 ಕೆಎಎಸ್‌ ಸಹಾಯಕ ಆಯುಕ್ತರ ಹುದ್ದೆಗಳು ಲಭ್ಯವಿದ್ದವು. ಇದರಲ್ಲಿ ಸಂಖ್ಯಾತಿರಿಕ್ತ ಹುದ್ದೆಯನ್ನು ಸೃಜಿಸಲಾಗಿತ್ತು. ಆದರೆ ವಿಶ್ವನಾಥ ಪಿ ಹಿರೇಮಠ ಅವರು ಈ ಹುದ್ದೆಯನ್ನು ಪಡೆಯಲು ರೋಸ್ಟರ್‌ ಬಿಂದುವಾಗಲಿ, ಅರ್ಹತೆಯನ್ನಾಗಲಿ ಹೊಂದಿರಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.

1995ರಲ್ಲಿ ರೂಪಿತವಾಗಿದ್ದ ಅಂಗವಿಕಲರ ಸಮಾನ ಹಕ್ಕುಗಳ ಕಾಯ್ದೆ 1996ರಲ್ಲಿ ಜಾರಿಗೆ ಬಂದಿತ್ತು. ಈ ಕಾಯ್ದೆ ಪ್ರಕಾರ ವೃಂದ ಬಲದಲ್ಲಿ ಶೇ. 3ಕ್ಕೆ ಕಡಿಮೆ ಇಲ್ಲದಂತೆ ಮೀಸಲಾತಿ ನೀಡಬೇಕಿತ್ತು. ಶೇ. 4ಕ್ಕೆ ಕಡಿಮೆ ಇಲ್ಲದಂತೆ ಮೀಸಲಾತಿ ನೀಡಬೇಕು ಎಂದು 2016ರಲ್ಲಿ ಇದೇ ಕಾಯ್ದೆಗೆ ತಿದ್ದುಪಡಿಯಾಗಿತ್ತು.
ಕರ್ನಾಟಕ ಸರ್ಕಾರ ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿ ನಿಯಮಗಳನ್ನು 1997ರ ಜುಲೈ 24ರಲ್ಲಿ ಜಾರಿಗೆ ತಂದಿತ್ತು. 1995ರ ಕಾಯ್ದೆ ನಂತರ 1998 ಮತ್ತು 1999ರಲ್ಲಿ ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿತ್ತು. ತದ ನಂತರ 2004ರ ನವೆಂಬರ್‌ 4ರಂದು ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿತ್ತು.

1998ರ ನೇಮಕಾತಿ ಅಧಿಸೂಚನೆಯಲ್ಲಿ 20 ಸಹಾಯಕ ಆಯುಕ್ತರ ಹುದ್ದೆಯು, 1999 ಮತ್ತು 2004ರಲ್ಲೂ ತಲಾ 20 ಸಹಾಯಕ ಆಯುಕ್ತರ ಹುದ್ದೆಗಾಗಿ ಕೆಪಿಎಸ್‌ಸಿ ಅರ್ಜಿ ಕರೆದಿತ್ತು. ಸರ್ವೋಚ್ಛ ನ್ಯಾಯಾಲಯದ ಬೇರೆ ಬೇರೆ ತೀರ್ಪಿನ ಪ್ರಕಾರ 1996ರಿಂದಲೇ ಎಲ್ಲಾ ವೃಂದಗಳಲ್ಲೂ ವಿಕಲಚೇತನರಿಗೆ ಮೀಸಲಾತಿ ನೀಡಲೇಬೇಕಿತ್ತು.

ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ 1999, 2002, 2005ರ ಆದೇಶಗಳಲ್ಲಿ ಪ್ರತಿ ವರ್ಗದ 19ನೇ ರೋಸ್ಟರ್‌ ಬಿಂದುಗಳನ್ನು ವಿವಿಧ ಪ್ರಕಾರದ ಅಂಗವಿಕಲ ಅಭ್ಯರ್ಥಿಗಳಿಗಾಗಿ ಮೀಸಲಿಡಬೇಕಿತ್ತು. ಆದರೆ ರಾಜ್ಯ ಸರ್ಕಾರ ಮೀಸಲಿಟ್ಟಿರಲಿಲ್ಲ. ಸಾಮಾನ್ಯ ವರ್ಗದ 19ನೇ ರೋಸ್ಟರ್‌ ಬಿಂದು 1998ನೇ ಸಾಲಿನಲ್ಲೂ ಬಂದಿತ್ತು. 2004ನೇ ಸಾಲಿಗೆ 19ನೇ ರೋಸ್ಟರ್‌ ಬಿಂದು ಲಭ್ಯಗೊಳಿಸಿರಲಿಲ್ಲ.

Hot this week

ಜೆಎಸ್‌ಡಬ್ಲ್ಯೂನಿಂದ ಸರ್ಕಾರಿ ಜಮೀನು ಒತ್ತುವರಿ ದೃಢಪಡಿಸಿದ ಪರಿಶೀಲನಾ ತಂಡ; ಅಂದಾಜು ಸಮಿತಿಗೆ ಕಂದಾಯ ಇಲಾಖೆ ವರದಿ, ಒತ್ತುವರಿ ತೆರವುಗೊಂಡಿದೆಯೇ?

ಬೆಂಗಳೂರು; ಜೆಎಸ್‌ಡಬ್ಲ್ಯೂ ಲಿಮಿಟೆಡ್‌ ಬಳ್ಳಾರಿಯ ವಿವಿಧೆಡೆ   ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದೆ...

120 ಎಕರೆ ಅರಣ್ಯ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಪಾರ್ಕ್‌; ಕಂದಾಯ ಇಲಾಖೆ ನಡೆಸಿರುವ ಸಭೆಯ ಮಾಹಿತಿಯೇ ಅರಣ್ಯ ಇಲಾಖೆ ಬಳಿ ಇಲ್ಲ!

ಬೆಂಗಳೂರು; ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್‌ನ ಸರ್ವೆ...
Please Scan to make Your Contribution

Topics

ಜೆಎಸ್‌ಡಬ್ಲ್ಯೂನಿಂದ ಸರ್ಕಾರಿ ಜಮೀನು ಒತ್ತುವರಿ ದೃಢಪಡಿಸಿದ ಪರಿಶೀಲನಾ ತಂಡ; ಅಂದಾಜು ಸಮಿತಿಗೆ ಕಂದಾಯ ಇಲಾಖೆ ವರದಿ, ಒತ್ತುವರಿ ತೆರವುಗೊಂಡಿದೆಯೇ?

ಬೆಂಗಳೂರು; ಜೆಎಸ್‌ಡಬ್ಲ್ಯೂ ಲಿಮಿಟೆಡ್‌ ಬಳ್ಳಾರಿಯ ವಿವಿಧೆಡೆ   ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದೆ...

120 ಎಕರೆ ಅರಣ್ಯ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಪಾರ್ಕ್‌; ಕಂದಾಯ ಇಲಾಖೆ ನಡೆಸಿರುವ ಸಭೆಯ ಮಾಹಿತಿಯೇ ಅರಣ್ಯ ಇಲಾಖೆ ಬಳಿ ಇಲ್ಲ!

ಬೆಂಗಳೂರು; ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್‌ನ ಸರ್ವೆ...

21 ಪ್ಯಾಕೇಜ್‌ ಟೆಂಡರ್ ನಲ್ಲಿ ಭ್ರಷ್ಟಾಚಾರ ಆರೋಪ; ಅಂಜುಂ ಪರ್ವೇಝ್ ಸಮಿತಿ ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು; ಹಸಿ ತ್ಯಾಜ್ಯ, ಒಣ ತಾಜ್ಯ, ನೈರ್ಮಲ್ಯ ತ್ಯಾಜ್ಯ, ರಸ್ತೆ ಗುಡಿಸುವಿಕೆ,...

ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಮನವಿ; ಸ್ಪಷ್ಟ ಅಭಿಪ್ರಾಯ ಸಲ್ಲಿಸಲು ಡಿಜಿಐಜಿಪಿಗೆ ನಿರ್ದೇಶನ

ಬೆಂಗಳೂರು;   ಎಡಿಜಿಪಿ ಚಂದ್ರಶೇಖರ್ ಅವರ ವಿರುದ್ಧದ ಪ್ರಕರಣದಲ್ಲಿ ಸಿಐಡಿ ವಿಶೇಷ ವಿಚಾರಣೆ...

ಗೋವಿಂದರಾವ್ ವರದಿ ಶಿಫಾರಸ್ಸಿನಂತೆ ನಿಗದಿಯಾಗದ ಅನುದಾನ; ಕೃಷಿ ಇಲಾಖೆಯನ್ನೇ ನಿರ್ಲಕ್ಷ್ಯಿಸಿತೇ ಸರ್ಕಾರ?

ಬೆಂಗಳೂರು; ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತು ಆರ್ಥಿಕ ತಜ್ಞ ಪ್ರೊ ಎಂ...

Related Articles

Popular Categories

error: Content is protected !!