ಪಶು ವೈದ್ಯಾಧಿಕಾರಿಗಳ ಶಾಶ್ವತ ವಿಲೀನ;ತಿರಸ್ಕೃತ ಪ್ರಸ್ತಾವನೆಗೆ ಸಿಗುವುದೇ ಪುರಸ್ಕಾರ?

ಬೆಂಗಳೂರು; ನಿಯೋಜನೆ ಮೇರೆಗೆ ಹಲವು ವರ್ಷಗಳಿಂದಲೂ ತಳವೂರಿರುವ ಮುಖ್ಯ ಪಶು ವೈದ್ಯಾಧಿಕಾರಿಗಳನ್ನು ಮಾತೃ ಇಲಾಖೆಗೆ ಹಿಂದಿರುಗಿಸಲು ಇಲಾಖೆ ಹೊರಡಿಸಿದ್ದ ಅಧಿಸೂಚನೆ ಪಾಲಿಸಲು ನಿರ್ದೇಶಿಸಬೇಕಿದ್ದ ಸಚಿವ ಪ್ರಭು ಚವ್ಹಾಣ್‌, ಇದೀಗ ಇಲಾಖೆಯನ್ನೇ ಕತ್ತಲಲ್ಲಿಟ್ಟು ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶಾಶ್ವತ ವಿಲೀನಗೊಳಿಸಲು ಮುಂದಾಗಿದ್ದಾರೆ!

ಶಾಶ್ವತ ವಿಲೀನಗೊಳಿಸುವ ಸಂಬಂಧ ಇಲಾಖೆಯ ಅಯುಕ್ತಾಲಯ ಮತ್ತು ಸರ್ಕಾರದ ಕಾರ್ಯದರ್ಶಿ ಹಂತದಲ್ಲಿ ಕಡತ ಸೃಜನೆಯಾಗಬೇಕು. ಆದರೆ ಈ ಪ್ರಕ್ರಿಯೆಯನ್ನು ನಡೆಸದೆಯೇ ನೇರವಾಗಿ ಮಧ್ಯಪ್ರವೇಶಿಸಿದ್ದಾರೆ ಎಂಬ ಆರೋಪಕ್ಕೆ ಸಚಿವ ಪ್ರಭು ಚವ್ಹಾಣ್‌ ಗುರಿಯಾಗಿದ್ದಾರೆ.

ವಿಲೀನಗೊಳಿಸುವ ಪ್ರಕ್ರಿಯೆಗೆ ಅನುಮೋದನೆ ದೊರಕಿಸಿಕೊಡಲು ಸಚಿವರ ಆಪ್ತ ಕಾರ್ಯದರ್ಶಿಯೊಬ್ಬರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿದು ಬಂದಿದೆ. ಸಚಿವರ ಹಂತದಲ್ಲೇ ಸೃಜನೆಯಾಗಿರುವ ಕಡತವನ್ನು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ ಅವರಿಗೆ ಈಗಾಗಲೇ ತಲುಪಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ‘ದಿ ಫೈಲ್‌’ಗೆ ತಿಳಿಸಿವೆ.

ಹಲವು ವರ್ಷಗಳಿಂದಲೂ ತಳವೂರಿರುವ ಮುಖ್ಯ ಪಶು ವೈದ್ಯಾಧಿಕಾರಿಗಳ ಸೇವೆ ಹಿಂಪಡೆದು ಮಾತೃ ಇಲಾಖೆಗೆ ಹಿಂಪಡೆಯಬೇಕು ಎಂದು ಸರ್ಕಾರ 2020ರ ಜೂನ್‌ 9ರಂದು ಅಧಿಸೂಚನೆ ಹೊರಡಿಸಿತ್ತು. ಇದರ ಬೆನ್ನಲ್ಲೆ ಅಧಿಸೂಚನೆ ಅನುಷ್ಠಾನಗೊಳ್ಳದಂತೆ 6 ತಿಂಗಳವರೆಗೆ ತಡೆಹಿಡಿದು ಹೊರಡಿಸುವ ಆದೇಶಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಅನುಮೋದನೆ ಪಡೆಯುವಲ್ಲಿ ಪ್ರಭಾವಿ ಪಶು ವೈದ್ಯಾಧಿಕಾರಿಗಳು ಯಶಸ್ವಿಯಾಗಿದ್ದರು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದಾರಿತಪ್ಪಿದರೇ?

ತಡೆಹಿಡಿದು ಹೊರಡಿಸಿದ್ದ ಆದೇಶದ ಅವಧಿ ಮುಕ್ತಾಯಗೊಳ್ಳುವ ಮುನ್ನವೇ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ ಅವರನ್ನೂ 32 ಮಂದಿ ಪಶು ವೈದ್ಯಾಧಿಕಾರಿಗಳು ದಾರಿತಪ್ಪಿಸಿ ವಿಶ್ವವಿದ್ಯಾಲಯದಲ್ಲಿ ಶಾಶ್ವತವಾಗಿ ವಿಲೀನಗೊಳ್ಳಲು ಕಸರತ್ತು ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ವಿಲೀನ ಪ್ರಕ್ರಿಯೆ ತಿರಸ್ಕರಿಸಿದ್ದ ಮಾತೃ ಇಲಾಖೆ

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ನೇಮಕಾತಿಯಾಗಿ ಅನ್ಯ ಸೇವೆ ಅಡಿಯಲ್ಲಿ ಮತ್ತು ಇತರೆ ಇಲಾಖೆ, ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ 5 ವರ್ಷ ಸೇವೆ ಪೂರ್ಣಗೊಳಿಸಿರುವ ಒಟ್ಟು 36 ಮುಖ್ಯ/ಹಿರಿಯ/ ಪಶುವೈದ್ಯಾಧಿಕಾರಿಗಳ ಸೇವೆಯನ್ನು 2020ರ ಜೂನ್‌ 9ರ ಆದೇಶದನ್ವಯ ಪಶುವೈದ್ಯ ಸೇವಾ ಇಲಾಖೆಗೆ ಹಿಂಪಡೆದು ಆದೇಶಿಸಿತ್ತು. ಅಲ್ಲದೆ ವಿಶ್ವವಿದ್ಯಾಲಯದಲ್ಲಿ ವಿಲೀನಗೊಳಿಸುವ ಪ್ರಸ್ತಾಪವನ್ನೇ ಇಲಾಖೆ ತಿರಸ್ಕರಿಸಿತ್ತು.

ಇದರ ಅನ್ವಯ ಪಶು ವೈದ್ಯಾಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು ಎಂದು ವಿಶ್ವವಿದ್ಯಾಲಯದ ಕುಲಸಚಿವರು 2020ರ ಜೂನ್‌ 17ರಂದು ನೀಡಿದ್ದ ಸೂಚನೆಯನ್ನು ಪಾಲಿಸದ ವಿಶ್ವವಿದ್ಯಾಲಯವು ಸರ್ಕಾರದ ಆದೇಶವನ್ನು ಉಲ್ಲಂಘಿಸಿತ್ತು.

ವಿಲೀನ ಪ್ರಕ್ರಿಯೆಗೆ ಮಾತೃ ಇಲಾಖೆಯ ಅನುಮತಿ ಹೇಗೆ ಅಗತ್ಯವೋ ಸಮಾಜ ಕಲ್ಯಾಣ ಇಲಾಖೆಯ ಅನುಮತಿಯೂ ಅತ್ಯಗತ್ಯ. ವಿಲೀನ ಪ್ರಕ್ರಿಯೆಗೆ ಒಂದೊಮ್ಮೆ ಸರ್ಕಾರ ಅನುಮೋದನೆ ನೀಡಿದಲ್ಲಿ ರೋಸ್ಟರ್‌ ಬದಲಾಯಿಸಬೇಕು. ಆದರೆ ಈವರೆಗೂ ಸಮಾಜ ಕಲ್ಯಾಣ ಇಲಾಖೆಯಿಂದ ಯಾವ ಪತ್ರವ್ಯವಹಾರವನ್ನು ನಡೆಸಿಲ್ಲ ಎಂದು ತಿಳಿದು ಬಂದಿದೆ.

ಪ್ರಕರಣ ಹಿನ್ನೆಲೆ

ಪಶು ವೈದ್ಯಾಧಿಕಾರಿಗಳಾಗಿ ನೇಮಕ ಹೊಂದಿರುವವರ ಪೈಕಿ 36 ಮಂದಿ ಮುಖ್ಯ ಪಶುವೈದ್ಯಾಧಿಕಾರಿಗಳು, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ, ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಶಿವಮೊಗ್ಗದಲ್ಲಿರುವ ವನ್ಯಜೀವಿ ಘಟಕ ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ, ಶಿವಮೊಗ್ಗ, ಹಾಸನ, ಹೆಬ್ಬಾಳ, ಬೀದರ್‌ ಪಶು ವೈದ್ಯಕೀಯ ಕಾಲೇಜುಗಳಲ್ಲಿ 5 ವರ್ಷಗಳಿಗೂ ಮೀರಿ ನಿಯೋಜನೆಯಲ್ಲಿಯೇ ಮುಂದುವರೆದಿದ್ದಾರೆ. ಇವರಲ್ಲಿ 30 ಮಂದಿ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ಮತ್ತು ಕರ್ನಾಟಕ ಪಶು ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವುದು ತಿಳಿದು ಬಂದಿದೆ.

ಸರ್ಕಾರದ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆ ಅಥವಾ ನಿಗಮ, ಮಂಡಳಿ, ವಿಶ್ವವಿದ್ಯಾಲಯದಲ್ಲಿ 5 ವರ್ಷ ಅವಧಿಯವರೆಗೆ ಮಾತ್ರ ನಿಯೋಜನೆಯಲ್ಲಿ ಕಾರ್ಯನಿರ್ವಹಿಸಲು ಅವಕಾಶವಿದೆ. ಆದರೆ ಪಶು ವೈದ್ಯಕೀಯ ಕಾಲೇಜು ಮತ್ತು ಪಶು ವಿಜ್ಞಾನಗಳ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಕಳೆದ 5 ವರ್ಷಗಳಿಗೂ ಮೀರಿ ನಿಯೋಜನೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಗೊತ್ತಾಗಿದೆ.

ಈ ವೈದ್ಯಾಧಿಕಾರಿಗಳ ಸೇವೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಮಾತೃ ಇಲಾಖೆಯಾಗಿರುವ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಗೆ ಹಿಂಪಡೆಯಲು 2020ರ ಜೂನ್‌ 9ರಂದು ಇಲಾಖೆ ಆದೇಶ ಹೊರಡಿಸಿತ್ತು. ಪಶು ವೈದ್ಯಾಧಿಕಾರಿಗಳ ತೀವ್ರ ಕೊರತೆಯಿಂದಾಗಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಹಲವು ಯೋಜನೆಗಳು ಮುಗ್ಗರಿಸಿ ಬಿದ್ದಿವೆ.

ತಳವೂರಿರುವರ ಪಟ್ಟಿ

ಮುಖ್ಯ ಪಶುವೈದ್ಯಾಧಿಕಾರಿ ಡಾ ರವಿ ಸಾಲಿಗೌಡ(ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ) ಡಾ ಡಿ ಎನ್‌ ನಾಗರಾಜು(ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ), ಡಾ ವಿನಯ್‌ ಎಸ್‌ (ವನ್ಯಜೀವಿ ಘಟಕ, ಶಿವಮೊಗ್ಗ), ಡಾ ಎಂ ಎಲ್‌ ಕ್ಷಮಾ(ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ), ಡಾ ವಸಂತಕುಮಾರ್‌ ಶೆಟ್ಟಿ, ಡಾ ಗಣೇಶ್‌ ಹೆಗಡೆ, ಡಾ ರಾಜಶೇಖರ ಬಿ , ಡಾ ಲೋಹಿತ್‌ ಟಿ ಎಸ್‌, ಡಾ ಪ್ರವೀಣ್‌ಕುಮಾರ್ ಜಿ ಆರ್‌, ಡಾ ರಂಗನಾಥ್‌ ಎಸ್‌, ಡಾ ಸುಮಂತ್‌ಕುಮಾರ್‌ ಆರ್‌, ಡಾ ಶ್ರೀವತ್ಸ ವಿ, ಡಾ ರಶ್ಮಿ ಎಸ್‌, ಡಾ ಮಂಜುನಾಥ್‌ ವಿ., ಡಾ ಶಿವಮೂರ್ತಿ ವಕಾರೆ, ಡಾ ಕೆ ಪಿ ಮಂಜುನಾಥ, ಇವರು ಬೆಂಗಳೂರಿನ ಪಶು ಆರೋಗ್ಯ ಜೈವಿಕ ಸಂಸ್ಥೆಯಲ್ಲಿ ನಿಯೋಜನೆ ಮೇರೆಗೆ ಕಳೆದ 5 ವರ್ಷಗಳಿಗೂ ಮೀರಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಗೊತ್ತಾಗಿದೆ.

ಅದೇ ರೀತಿ ಡಾ ಎಸ್‌ ಸುಂದರೇಶನ್‌,ಡಾ ಬಿ ಎ ದೇಸಾಯಿ( ಪಶು ವೈದ್ಯಕೀಯ ಕಾಲೇಜು ಶಿವಮೊಗ್ಗ),ಡಾ ಕೆ ಎಲ್‌ ಫಣಿರಾಜ್‌, ಡಾ ಸಿ ಆರ್‌ ಗೋಪಿನಾಥ, ಡಾ ಪಿ ಎಂ ಗುರುರಾಜ ( ಪಶು ವೈದ್ಯಕೀಯ ಕಾಲೇಜು ಬೆಂಗಳೂರು), ಡಾ ಕೆ ಎನ್‌ ಪವನಕುಮಾರ್‌, ಡಾ ಚಂದ್ರಶೇಖರ್‌, ಡಾ ಚಂದ್ರೇಗೌಡ, ಡಾ ಅಶ್ವಥನಾರಾಯಣಪ್ಪ, ಡಾ ಎಂ ಎ ಸುನೀಲಕುಮಾರ, ಡಾ ಶಂಭುಲಿಂಗಪ್ಪ ಬಡ್ಡಿ ಅವರು ಹಾಸನದಲ್ಲಿರುವ ಪಶು ವೈದ್ಯಕೀಯ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಡಾ ಮುತ್ತುರಾಜ್ ಪಚ್ಚನ್ನವರ, ಡಾ ಸುದರ್ಶನ ಗಡದ, ಡಾ ನಾಗಪ್ಪ ಭಾನುವಳ್ಳಿ, ಡಾ ಕೆ ಪಿ ಹರೀಶಕುಮಾರ, ಡಾ ಜಿ ಚಂದ್ರಶೇಖರ್, ಡಾ ಎಂ ಭರತಭೂಷಣ, ಡಾ ಎಂ ನವೀನ್‌, ಡಾ ವೈ ಮಧುರಾ ಶಿವಮೊಗ್ಗದಲ್ಲಿರುವ ಪಶು ವೈದ್ಯಕೀಯ ಕಾಲೇಜಿನಲ್ಲಿ ಮತ್ತು ಡಾ ಅನಂತರಾವ್ ದೇಸಾಯಿ(ಬೀದರ್‌ನ ಪಶುವೈದ್ಯಕೀಯ ಕಾಲೇಜು) ಕಾರ್ಯನಿರ್ವಹಿಸುತ್ತಿರುವುದು ಸರ್ಕಾರದ ಆದೇಶದಿಂದ ತಿಳಿದು ಬಂದಿದೆ.

5 ವರ್ಷಗಳಿಗೂ ಮೀರಿ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಅಧಿಕಾರಿಗಳಿಗೆ ಒಂದೊಮ್ಮೆ ಹಿಂಬಾಗಿಲಿನ ಮೂಲಕ ಶಾಶ್ವತವಾಗಿ ವಿಲೀನಗೊಂಡಿದ್ದೇ ಆದಲ್ಲಿ ನಿವೃತ್ತಿ ಆಗುವವರೆಗೂ ಈ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುವುದಿಲ್ಲ. ಹೀಗಾಗಿ ಮೀಸಲಾತಿ ನೀತಿಗೂ ಭಾರೀ ಪೆಟ್ಟು ಬೀಳಲಿದೆ ಎಂದು ಹೇಳಲಾಗಿದೆ.

ಅಲ್ಲದೆ, ಪಶು ವೈದ್ಯಕೀಯ ವಿಜ್ಞಾನಗಳ ಪದವೀಧರರಿಗೆ ವಿಶ್ವವಿದ್ಯಾಲಯ ಮತ್ತು ಪಶು ವೈದ್ಯಕೀಯ ಕಾಲೇಜುಗಳಲ್ಲಿ ಉದ್ಯೋಗ ಅವಕಾಶಗಳಿಂದ ವಂಚಿತರಾಗಲಿದ್ದಾರೆ. ಇದರಿಂದ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಪದವೀಧರರಿಗೆ ಅನ್ಯಾಯವಾಗಲಿದೆ ಎಂಬ ಅರೋಪವೂ ಕೇಳಿ ಬಂದಿದೆ.

ಈ ಕುರಿತು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಆಯುಕ್ತ ಎಚ್‌ ಬಸವರಾಜೇಂದ್ರ ಅವರ ಪ್ರತಿಕ್ರಿಯೆಗಾಗಿ ‘ದಿ ಫೈಲ್‌’ ಸಂಪರ್ಕಿಸಲಾಯಿತಾದರೂ ಅವರು ಕರೆಯನ್ನು ಸ್ವೀಕರಿಸಲಿಲ್ಲ.

the fil favicon

SUPPORT THE FILE

Latest News

Related Posts