Tuesday | June 30, 2026 |

‘ದಿ ಫೈಲ್‌’ ಹೊರಗೆಡವಿದ್ದ ಪೂಜೇನಹಳ್ಳಿ ಭೂ ಹಗರಣ; ಪಿಎಸಿಯಲ್ಲಿ ಚರ್ಚೆ

ಬೆಂಗಳೂರು; ‘ದಿ ಫೈಲ್‌’ ಎರಡು ತಿಂಗಳ ಹಿಂದೆಯೇ ಹೊರಗೆಡವಿದ್ದ ದೇವನಹಳ್ಳಿ ತಾಲೂಕಿನ ಪೂಜೇನಹಳ್ಳಿ ಭೂ ಹಗರಣವನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಚರ್ಚೆಗೆ ಕೈಗೆತ್ತಿಕೊಂಡಿದೆ.

ಅಂದಾಜು 500 ಕೋಟಿ ರು. ಗೂ ಅಧಿಕ ಬೆಲೆ ಬಾಳುವ 40 ಎಕರೆ ವಿಸ್ತೀರ್ಣದ ಸರ್ಕಾರಿ ಜಾಗಕ್ಕೆ ಸಂಬಂಧಿಸಿದಂತೆ ಕಡತಗಳೇ ನಾಪತ್ತೆಯಾಗಿದೆ ಎಂದು ತೋಟಗಾರಿಕೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್‌ ಕಟಾರಿಯಾ ಅವರು 2020ರ ಆಗಸ್ಟ್‌ 25ರಂದು ನಡೆದ ಸಮಿತಿ ಸಭೆಯಲ್ಲಿ ಬಹಿರಂಗಪಡಿಸಿದ್ದಾರೆ.

ಅಂತರರಾಷ್ಟ್ರೀಯ ಕೃಷಿ ಮಾರಾಟ ಕೇಂದ್ರ ಸ್ಥಾಪನೆಗೆ ದೇವನಹಳ್ಳಿ ತಾಲೂಕಿನ ಪೂಜೇನಹಳ್ಳಿಯಲ್ಲಿ ನೀಡಲಾಗಿದ್ದ ಒಟ್ಟು 77 ಎಕರೆ ಭೂಮಿ ಪೈಕಿ 24 ಎಕರೆ ವಿಸ್ತೀರ್ಣದ ಸರ್ಕಾರಿ ಜಾಗ ಖಾಸಗಿ ವ್ಯಕ್ತಿಗಳ ಪಾಲಾಗಿರುವ ಬಹುದೊಡ್ಡ ಭೂ ಕಬಳಿಕೆ ಪ್ರಕರಣವನ್ನು ‘ದಿ ಫೈಲ್’ 2020ರ ಜೂನ್‌ 8ರಂದು ಹೊರಗೆಡವಿತ್ತು.

500 ಕೋಟಿ ಮೌಲ್ಯದ 24 ಎಕರೆ ಸರ್ಕಾರಿ ಜಮೀನು ಕಬಳಿಕೆ; ಅಧಿಕಾರಿಗಳ ಪಾಲೆಷ್ಟು?

ತೋಟಗಾರಿಕೆ ಇಲಾಖೆಯ ಅನುಮೋದನೆ ಇಲ್ಲದೆ ಮತ್ತು ಇಲಾಖೆಯೊಂದಿಗೆ ಸಮಾಲೋಚಿಸದೆಯೇ ಕಂದಾಯ ಇಲಾಖೆ ಅಧಿಕಾರಿಗಳು ಖಾಸಗಿ ವ್ಯಕ್ತಿಗಳಿಗೆ ಜಮೀನು ಮಂಜೂರು ಮಾಡಿದ್ದರು. ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ 77 ಎಕರೆ ವಿಸ್ತೀರ್ಣ ಪೈಕಿ 53 ಎಕರೆಯಷ್ಟೇ ಇಲಾಖೆ ಬಳಿ ಉಳಿದಿದೆ ಎಂಬ ಮಾಹಿತಿಯನ್ನು ‘ದಿ ಫೈಲ್‌’ ದಾಖಲೆ ಸಮೇತ ಬಹಿರಂಗಗೊಳಿಸಿತ್ತು.

ಪ್ರಕರಣದ ಹಿನ್ನೆಲೆ

1972ರಲ್ಲಿದ್ದ ಅಂದಿನ ಸರ್ಕಾರ ಜಮೀನು ನೀಡಿದ್ದರೂ ತೋಟಗಾರಿಕೆ ಇಲಾಖೆ 13 ವರ್ಷಗಳವರೆಗೂ ಆರ್‌ಟಿಸಿ ಮಾಡಿಸಿಕೊಂಡಿರಲಿಲ್ಲ. ಒಟ್ಟು ವಿಸ್ತೀರ್ಣದಲ್ಲಿ 53 ಎಕರೆ ಹೊರತುಪಡಿಸಿ 24 ಎಕರೆ ವಿಸ್ತೀರ್ಣದ ಜಮೀನು ಯಾರ ವಶದಲ್ಲಿದೆ ಎಂಬ ಬಗ್ಗೆ ತೋಟಗಾರಿಕೆ ಇಲಾಖೆಯ ಬಳಿಯೇ ಮಾಹಿತಿ ಇರಲಿಲ್ಲ.

ಪೂಜೇನಹಳ್ಳಿ ಸರ್ವೆ ನಂಬರ್21ರಲ್ಲಿ 18.06 ಎಕರೆಯನ್ನು 1947ರ ಅಕ್ಟೋಬರ್ 23ರಂದು ಕಂದಾಯ ಇಲಾಖೆಯು ತೋಟಗಾರಿಕೆ ಇಲಾಖೆಗೆ ಹಸ್ತಾಂತರಿಸಿತ್ತು. 1984ರ ಮೇ 26ರಂದು ಬೆಂಗಳೂರು ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಯಾಗಿದ್ದವರು 7 ಮಂದಿಗೆ 17 ಎಕರೆಯನ್ನು ಮಂಜೂರು ಮಾಡಿದ್ದರು. ಆದರೆ ಇವರ್ಯಾರು ಈ ಭೂಮಿಯನ್ನು ತಮ್ಮ ಸ್ವಾಧೀನಕ್ಕೆ ಪಡೆದಿರಲಿಲ್ಲ.

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಇದೇ ಸರ್ವೆ ನಂಬರ್ನಲ್ಲಿ 17.32 ಎಕರೆ ಜಮೀನನ್ನು 1975ರಿಂದ 2003ರ ಮಧ್ಯೆ 11 ಮಂದಿಗೆ ಮಂಜೂರಾಗಿತ್ತು. ಆದರೆ ತೋಟಗಾರಿಕೆ ಇಲಾಖೆಗೆ ಇದಾವುದು ಗಮನಕ್ಕೆ ಬಂದಿರಲಿಲ್ಲ ಎಂಬುದನ್ನು ಹೊರಗೆಡವಿತ್ತು.

ಮೇಲ್ನೋಟಕ್ಕೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಎನ್ನಬಹುದಾದರೂ ಖಾಸಗಿ ವ್ಯಕ್ತಿಗಳಿಗೆ ಜಮೀನನ್ನು ಮಂಜೂರು ಮಾಡಿದ್ದ ಉಪ ವಿಭಾಗಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಲೋಪವೂ ಇದರಲ್ಲಿದೆ. ಆದರೂ ಈ ಅಧಿಕಾರಿಗಳ ವಿರುದ್ಧ ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ. ಅಲ್ಲದೆ ಒಟ್ಟು ಜಮೀನನ್ನು ಸರ್ವೆ ಮಾಡಿಸದೆ ಅಧಿಕಾರಿಗಳು ಭಂಡ ನಿರ್ಲಕ್ಷ್ಯ ವಹಿಸಿದ್ದರು ಎಂಬುದನ್ನು ದಾಖಲೆ ಸಮೇತ ‘ದಿ ಫೈಲ್‌’ ಬಹಿರಂಗಗೊಳಿಸಿತ್ತು.

2007-08 ಮತ್ತು 2008-09ರಲ್ಲಿ ಸರ್ವೆ ನಂಬರ್‌ 90, 21 ಮತ್ತು 73 ರಲ್ಲಿದ್ದ ಜಮೀನು ಸರ್ವೆ ಆಗಿದೆ. ಇದರಲ್ಲಿನ ಒಟ್ಟು 53.28 ಎಕರೆ ಪ್ರದೇಶದಲ್ಲಿ 5 ಎಕರೆ ಜಮೀನನ್ನು 30 ವರ್ಷಗಳ ಕಾಲ ಭೋಗ್ಯಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಗೆ ನೀಡಲಾಗಿದೆ. 3.08 ಎಕರೆ ಜಮೀನನ್ನು ಮೇಲು ರಸ್ತೆ ಮಾಡಲು ನೀಡಿದ್ದರೆ 0.20 ಗುಂಟೆ ಜಮೀನು ರಾಷ್ಟ್ರೀಯ ಹೆದ್ದಾರಿಗೆ ನೀಡಲಾಗಿದೆ. ಇನ್ನುಳಿದ 45.00 ಎಕರೆ ಇಲಾಖೆಯ ಸುಪರ್ದಿಯಲ್ಲಿದೆ. ಈ ಜಾಗದಲ್ಲಿ ಈವರೆವಿಗೂ ಯಾವುದೇ ಚಟುವಟಿಕೆಗಳು ಆರಂಭವಾಗಿಲ್ಲ ಎಂದು ಗಮನ ಸೆಳೆದಿತ್ತು.

ಸರ್ವೆ ನಂಬರ್‌ 90, 21 ಮತ್ತು 73ಕ್ಕೆ ಸಂಬಂಧಿಸಿದಂತೆ 2008ರಲ್ಲಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿದ್ದವು. 11 ವರ್ಷಗಳಿಂದಲೂ ಈ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. 2017-18ರಲ್ಲಿ ಈ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿತ್ತು. 2008 ಮೇ 27ರಂದು ಅಂದಿನ ವಿಭಾಗೀಯ ಆಯುಕ್ತರಾಗಿದ್ದ ಜಯರಾಂ ಅವರು ಸರ್ಕಾರಕ್ಕೆ ಈ ಬಗ್ಗೆ ವರದಿ ನೀಡಿದ್ದರು. ಆದರೆ ಈ ವರದಿ ಏನಾಯಿತು ಎಂಬುದು ಈವರೆಗೂ ಬಹಿರಂಗಗೊಂಡಿಲ್ಲ.

Hot this week

ವಿಟಿಯು ಕುಲಪತಿ ವಿರುದ್ಧದ ಎರಡು ರಿಟ್ ಅರ್ಜಿ; ವಿಚಾರಣೆಯಿಂದಲೇ ಹಿಂದೆ ಸರಿದ ನ್ಯಾಯಮೂರ್ತಿ, ಚರ್ಚೆಗೆ ಗ್ರಾಸವಾದ ನಡೆ

ಬೆಂಗಳೂರು;   ವಿಟಿಯು ಹಾಲಿ ಕುಲಪತಿ ಡಾ ಎಸ್‌ ವಿದ್ಯಾಶಂಕರ್ ಅವರ ನೇಮಕಾತಿಯನ್ನು...
Please Scan to make Your Contribution

Topics

ವಿಟಿಯು ಕುಲಪತಿ ವಿರುದ್ಧದ ಎರಡು ರಿಟ್ ಅರ್ಜಿ; ವಿಚಾರಣೆಯಿಂದಲೇ ಹಿಂದೆ ಸರಿದ ನ್ಯಾಯಮೂರ್ತಿ, ಚರ್ಚೆಗೆ ಗ್ರಾಸವಾದ ನಡೆ

ಬೆಂಗಳೂರು;   ವಿಟಿಯು ಹಾಲಿ ಕುಲಪತಿ ಡಾ ಎಸ್‌ ವಿದ್ಯಾಶಂಕರ್ ಅವರ ನೇಮಕಾತಿಯನ್ನು...

ಕೆಟಿಪಿಪಿ ಉಲ್ಲಂಘನೆ, ಅಧಿಕಾರ ದುರ್ಬಳಕೆ, 60 ಲಕ್ಷ ರು ದುರುಪಯೋಗ ಆರೋಪ; ಚೀಫ್‌ ಇಂಜಿನಿಯರ್ ವಿರುದ್ಧ ಚಾರ್ಜ್‌ಶೀಟ್‌

ಬೆಂಗಳೂರು; ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಮತ್ತು ಅಧಿಕಾರ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ...

Related Articles

Popular Categories

error: Content is protected !!