Monday | October 26, 2026 |

ಗಂಗಾ ಕಲ್ಯಾಣ ಯೋಜನೆ ಅನುಷ್ಠಾನದಲ್ಲಿ ಅಕ್ರಮ ಆರೋಪ; ಅಭಿವೃದ್ದಿ ನಿಗಮಗಳಿಂದ ಬಾರದ ವರದಿ, ಲೋಕಾಯುಕ್ತರಿಗೆ ಬರೆದ ಪತ್ರ ಬಹಿರಂಗ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ   ಗಂಗಾ ಕಲ್ಯಾಣ ಯೋಜನೆಯಡಿ ಕೊರೆದಿರುವ ಕೊಳವೆ ಬಾವಿಗಳು, ವಿದ್ಯುತ್‌ ಸಂಪರ್ಕಕ್ಕೆ ನಿಗದಿಪಡಿಸಿದ್ದ ಮೊತ್ತ, ಪೂರಕ ಸಾಮಗ್ರಿಗಳ ಖರೀದಿಗೆ ಕರೆದಿದ್ದ ಟೆಂಡರ್‍‌ಗಳ ವಿವರಗಳನ್ನು ಒದಗಿಸಬೇಕು ಎಂದು ಈಗಿನ ಕಾಂಗ್ರೆಸ್‌ ಸರ್ಕಾರವು ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಸಮುದಾಯ ಅಭಿವೃದ್ಧಿ ನಿಗಮಗಳಿಗೆ ನಿರ್ದೇಶಿಸಿದೆ.

ಗಂಗಾ ಕಲ್ಯಾಣ ಯೋಜನೆ ಅನುಷ್ಠಾನದಲ್ಲಿ ನಡೆದಿದೆ ಎನ್ನಲಾದ ವಿವಿಧ ರೀತಿಯ ಅಕ್ರಮಗಳಿಗೆ ಸಂಬಂಧಿಸಿದಂತೆ ಕೋಲಾರ ಮೂಲದ ಎನ್ ನಾರಾಯಣಸ್ವಾಮಿ ಎಂಬುವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಲೋಕಾಯುಕ್ತ ಹೆಚ್ಚುವರಿ ನಿಬಂಧಕರು ವರದಿ ಸಲ್ಲಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ 2026ರ ಫೆ 24, ಏಪ್ರಿಲ್‌ 22, ಜೂನ್‌ 5 ಮತ್ತು ಸೆಪ್ಟಂಬರ್ 29ರಂದು  ನಿರ್ದೇಶಿಸಿದ್ದರು. ಆದರೆ ಸರ್ಕಾರವು ನಿಗದಿತ ಅವಧಿಯಲ್ಲಿ ಲೋಕಾಯುಕ್ತರಿಗೆ  ವರದಿಯನ್ನು ಸಲ್ಲಿಸಿಲ್ಲ.

ಈ ಸಂಬಂಧ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ 2026ರ ಅಕ್ಟೋಬರ್‍‌ 17ರಂದು ಲೋಕಾಯುಕ್ತ ಹೆಚ್ಚುವರಿ ರಿಜಿಸ್ಟ್ರಾರ್‍‌ ಗೆ ಬರೆದಿರುವ ಪತ್ರದಲ್ಲಿ ಸಮುದಾಯ ಅಭಿವೃದ್ಧಿ ನಿಗಮಗಳಿಂದ ವರದಿ ಸ್ವೀಕೃತವಾದ ನಂತರ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಲೋಕಾಯುಕ್ತ ಹೆಚ್ಚುವರಿ ರಿಜಿಸ್ಟ್ರಾರ್ ಗೆ ಬರೆದಿರುವ ಪತ್ರದ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

ಲೋಕಾಯುಕ್ತ ಹೆಚ್ಚುವರಿ ರಿಜಿಸ್ಟ್ರಾರ್‍‌ ಗೆ ಬರೆದಿರುವ ಪತ್ರದಲ್ಲೇನಿದೆ?

ಗಂಗಾ ಕಲ್ಯಾಣ ಕುರಿತು ವಿಶೇಷ ಸದನ ಸಮಿತಿಯ ಮಧ್ಯಂತರ ವರದಿ ಮೇಲೆ ಕೈಗೊಳ್ಳಲಾಗಿರುವ ಕ್ರಮ ಹಾಗೂ ಪ್ರಸ್ತುತ ಹಂತದ ಮಾಹಿತಿ/ವರದಿಯನ್ನು ಸರ್ಕಾರಕ್ಕೆ ಒದಗಿಸಬೇಕು ಎಂದು ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ  2026ರ ಸೆ.7 ಮತ್ತು ಅಕ್ಟೋಬರ್‍‌ 14ರಂದು ಪತ್ರ ಬರೆಯಲಾಗಿದೆ. ಈ ನಿಗಮದಿಂದ ವರದಿ ಸ್ವೀಕೃತಗೊಂಡ ಕೂಡಲೇ ಸಲ್ಲಿಸಲಾಗುವುದು. ಕರ್ನಾಟಕ ವಿಧಾನ ಪರಿಷತ್‌ ರಚಿಸಿರುವ ವಿಶೇಷ ಸದನ ಸಮಿತಿಯ ಅಂತಿಮ ವರದಿಯನ್ನು 2025ರ ಆಗಸ್ಟ್‌ 22ರಂದು ಮಂಡಿಸಲಾಗಿದೆ. ವಿಶೇಷ ಸದನ ಸಮಿತಿಯ ಅಂತಿಮ ವರದಿಯನ್ನು ಲೋಕಾಯುಕ್ತ ಹೆಚ್ಚುವರಿ ರಿಜಿಸ್ಟ್ರಾರ್‍‌ ಗೆ ಒದಗಿಸಿರುವುದು ಪತ್ರದಿಂದ ಗೊತ್ತಾಗಿದೆ.

 

 

ಅಲ್ಲದೇ ಲೋಕಾಯುಕ್ತ ಹೆಚ್ಚುವರಿ ರಿಜಿಸ್ಟ್ರಾರ್‍‌ ಗೆ ಪತ್ರ ಬರೆದಿರುವ ದಿನದಂದೇ ಅಂದರೇ 2026ರ ಅಕ್ಟೋಬರ್‍‌ 17ರಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೂ ಪತ್ರ ಬರೆದಿದೆ.

‘2021-22 ಮತ್ತು 2022-23ನೇ ಸಾಲಿನಲ್ಲಿ ಕೊರೆಯಲಾಗಿರುವ ಕೊಳವೆ ಬಾವಿಗಳಿಗೆ ನಿಗದಿಪಡಿಸಿದ ಘಟಕ ವೆಚ್ಚದಲ್ಲಿ ವಿದ್ಯುತ್ ಸಂಪರ್ಕಕ್ಕೆ ನಿಗದಿಪಡಿಸಿದ ಮೊತ್ತ, ಕೊಳವೆ ಬಾವಿ ಕೊರೆದ  ನಂತರ ಪಂಪು-ಮೋಟಾರ್ ಹಾಗೂ ಇತರೆ ಪೂರಕ ಸಾಮಗ್ರಿಗಳ ಸರಬರಾಜಿಗಾಗಿ ಕರೆಯಲಾದ ಟೆಂಡರ್‍‌ನ ವಿವರ, ಪ್ರಸ್ತುತ ಹಂತದ ಮಾಹಿತಿ ಹಾಗೂ ಅಲ್ಪಾವಧಿ ಟೆಂಡರ್ ಕರೆಯುವ ಬಗ್ಗೆ ಅಭಿಪ್ರಾಯವನ್ನು ಎಲ್ಲಾ ನಿಗಮಗಳ ಪರವಾಗಿ ಒದಗಿಸಬೇಕು,’ ಎಂದು ಡಿ ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸರ್ಕಾರದ ಕಾರ್ಯದರ್ಶಿಯು ನಿರ್ದೇಶಿಸಿರುವುದು ತಿಳಿದು ಬಂದಿದೆ.

 

 

ಡಾ ಬಿ ಆರ್ ಅಂಬೇಡ್ಕರ್‍‌ ಅಭಿವೃದ್ದಿ ನಿಗಮವೂ ಸೇರಿದಂತೆ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳು ಅನುಷ್ಠಾನಗೊಳಿಸಿದ್ದ ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಿದ್ದ ಕೊಳವೆ ಬಾವಿಗಳಿಗೆ ಪೂರಕ ಸಾಮಗ್ರಿಗಳನ್ನು ಒದಗಿಸಿಲ್ಲ ಎಂಬ ಆರೋಪಕ್ಕೆ ಯಾವುದೇ ಆಧಾರಗಳಿಲ್ಲ ಎಂದು ಕೆಲ ಕಂಪನಿಗಳು ಪ್ರತಿಪಾದಿಸಿದ್ದವು.

ಗಂಗಾ ಕಲ್ಯಾಣ ಯೋಜನೆಯಡಿ ನಡೆದಿದೆ ಎನ್ನಲಾಗಿರುವ ವಿವಿಧ ರೀತಿಯ ಅಕ್ರಮಗಳ ಕುರಿತು ತನಿಖೆ ನಡೆಸಲು ಕರ್ನಾಟಕ ವಿಧಾನ ಪರಿಷತ್‌ನ ಸದಸ್ಯ ಡಾ ವೈ ಎ ನಾರಾಯಣಸ್ವಾಮಿ ನೇತೃತ್ವದ ವಿಶೇಷ ಸದನ ಸಮಿತಿಯು ಆರೋಪಿಸಿತ್ತು. ಈ ಸಮಿತಿಯು ರಾಯಚೂರು, ಬಳ್ಳಾರಿ ಸೇರಿದಂತೆ ವಿವಿಧೆಡೆ ಪ್ರವಾಸ ಮತ್ತು ಸ್ಥಳ ಪರಿಶೀಲನೆ ಕೈಗೊಂಡಿದ್ದ ಸಂದರ್ಭದಲ್ಲಿ ಫಲಾನುಭವಿಗಳು ಹಲವು ಅರೋಪಗಳನ್ನು ಮಾಡಿದ್ದರು. ಈ ಆರೋಪಗಳನ್ನು ಕಂಪನಿಗಳು ತಳ್ಳಿ ಹಾಕಿದ್ದವು.

ವಿಶೇಷ ಸದನ ಸಮಿತಿಗೆ ಯುನೈಟೆಡ್‌ ಇಂಜಿನಿಯರಿಂಗ್‌ ವರ್ಕ್ಸ್‌, ಅಹಮದಾಬಾದ್‌ ಮೂಲದ  ಮಹಾವೀರ್ ಸಬ್‌ ಮರ್ಸಿಬಲ್‌  ಪ್ರೈವೈಟ್‌ ಲಿಮಿಟೆಡ್‌ ಪತ್ರ ಬರೆದು ಸ್ಪಷ್ಟನೆ ನೀಡಿವೆ. ಈ ಕುರಿತು ಒಂದು ವಾರದೊಳಗಾಗಿ ಪರಿಶೀಲಿಸಿ ವರದಿ ನೀಡಬೇಕು ಎಂದು ಡಾ ಬಿ ಆರ್‍‌ ಅಂಬೇಡ್ಕರ್‍‌ ಅಭಿವೃದ್ಧಿ ನಿಗಮ, ಆದಿ ಜಾಂಬವ, ಬೋವಿ, ತಾಂಡ ಮತ್ತು ಅಲೆಮಾರಿ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಪತ್ರ ಬರೆದು ನಿರ್ದೇಶಿಸಿದ್ದರು.

ವಿಧಾನ ಪರಿಷತ್‌ನ ವಿಶೇಷ ಸದನ ಸಮಿತಿಯು ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಯಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿತ್ತು. ಈ ವೇಳೆ ಫಲಾನುಭವಿಗಳು ಯುನೈಟೆಡ್‌ ಇಂಜಿನಿಯರಿಂಗ್‌ ವರ್ಕ್ಸ್‌ ಮತ್ತು ಮಹಾವೀರ್‍‌ ಸಬ್‌ ಮರ್ಸಿಬಲ್ಸ್‌ ಪ್ರೈ ಲಿ., ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಕೊಳವೆ ಬಾವಿಗಳಿಗೆ ಪೂರಕ ಸಾಮಗ್ರಿಗಳನ್ನು ಪೂರೈಸಿಲ್ಲ ಎಂದು ದೂರು ಸಲ್ಲಿಸಿದ್ದರು. ಈ ದೂರಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಯುನೈಟೆಡ್‌ ಇಂಜಿನಿಯರಿಂಗ್‌ ವರ್ಕ್ಸ್‌ ಮತ್ತು ಮಹಾವೀರ್ ಸಬ್ ಮರ್ಸಿಬಲ್‌ ಪ್ರೈ ಲಿ., ಈ ದೂರುಗಳು ತಪ್ಪು ಗ್ರಹಿಕೆಯಿಂದ ಕೂಡಿವೆ. ಯಾವುದೇ ಆಧಾರವಿಲ್ಲ. ಸದನಕ್ಕೆ ಸಲ್ಲಿಕೆಯಾಗಿರುವ ವರದಿಯಲ್ಲಿನ ಅರೋಪ ಪಟ್ಟಿಯಿಂದ ಕೈ ಬಿಡಬೇಕು ಎಂದು ಸದನ ಸಮಿತಿಗೆ ಪತ್ರ ಬರೆದಿದ್ದವು.

 

 

ಈ ಕುರಿತಾದ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಒಂದು ವಾರದೊಳಗಾಗಿ ವರದಿ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿದ್ದ  ಮೇಜರ್ ಮಣಿವಣ್ಣನ್‌ ಅವರು ಪತ್ರದಲ್ಲಿ ನಿರ್ದೇಶಿಸಿದ್ದರು.

 

 

ಇವೇ ಕಂಪನಿಗಳು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮವು ಅನುಷ್ಠಾನಗೊಳಿಸಿದ್ದ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊರೆಸಿದ್ದ ಕೊಳವೆ ಬಾವಿಗಳಿಗೆ ಪೂರಕ ಸಾಮಗ್ರಿಗಳನ್ನು ಒದಗಿಸಿದ್ದವು. ಈ ಕಂಪನಿಗಳು ಬಳ್ಳಾರಿ ಜಿಲ್ಲೆಯಲ್ಲಿ ಪೂರೈಸಿದ್ದ ಸಾಮಗ್ರಿಗಳು ಗುಣಮಟ್ಟದಿಂದ ಕೂಡಿರಲಿಲ್ಲ. ಕೆಲವು ಕೊಳವೆ ಬಾವಿಗಳಲ್ಲಿ ಕಡಿಮೆ ನೀರು ಬಿದ್ದಿದೆ. ಮೋಟಾರ್‍‌ ಪಂಪ್‌ ಸರಬರಾಜು ಮಾಡಿಲ್ಲ. ಕೊಳವೆ ಬಾವಿಗಳಿಗೆ ಸಣ್ಣ ಪೈಪ್‌ಗಳನ್ನು ಅಳವಡಿಸಿದೆ ಎಂದು ಫಲಾನುಭವಿಗಳು ಯುನೈಟೆಡ್‌ ಇಂಜಿನಿಯರಿಂಗ್‌ ವರ್ಕ್ಸ್‌ ವಿರುದ್ಧ ದೂರು ಸಲ್ಲಿಸಿದ್ದವು.

 

 

ಅದೇ ರೀತಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಗೊಳಿಸಿದ್ದ ಕೊಳವೆ ಬಾವಿಗಳ ಯೋಜನೆಯಲ್ಲಿಯೂ ಸಾಕಷ್ಟು ಲೋಪಗಳು ಕಂಡು ಬಂದಿದ್ದವು. ಈ ಯೋಜನೆಯಡಿಯಲ್ಲಿ ಆಯ್ಕೆಯಾಗಿದ್ದ ಫಲಾನುಭವಿಗಳು ಮಹಾವೀರ್ ಸಬ್‌ ಮರ್ಸಿಬಲ್‌ ಪ್ರೈ ಲಿ ವಿರುದ್ಧ ಫಲಾನುಭವಿಗಳು  ದೂರಿದ್ದರು.

 

 

58 ಅಡಿಗೆ ಪಿವಿಸಿ ಕೇಸಿಂಗ್‌ ಪೈಪ್‌ ಹಾಕಲಾಗಿದೆ. ಅದು 60 ಅಡಿಗೆ ಒಡೆದು ಹೋಗಿದೆ. 20 ಅಡಿಗೆ ಪಿವಿಸಿ ಕೇಸಿಂಗ್‌ ಪೈಪ್‌ ಹಾಕಲಾಗಿದೆ. ನೀರಿನ ಮೂಲ 25 ಅಡಿ ಇದೆ. ಕೊಳವೆ ಬಾವಿ ಕೊರೆದು 4 ವರ್ಷಗಳಾಗಿದೆ. ಇದಾಗಿ 2 ವರ್ಷದ ನಂತರ ಮೋಟಾರ್ ನೀಡಲಾಗಿದೆ. ಆದರೆ ಇದುವರೆಗೂ ವಿದ್ಯುತ್‌ ಸಂಪರ್ಕ ನೀಡಿರುವುದಿಲ್ಲ. ಮೋಟಾರ್ ಒಂದು ವರ್ಷಕ್ಕೆ 4 ಬಾರಿ ದುರಸ್ತಿಗೆ ಬಂದಿದ್ದವು.

 

 

ಮಹಾವೀರ್‍‌ ಕಂಪನಿಯಿಂದ ನೀಡಿದ್ದ ಮೋಟಾರ್‍‌ ದುರಸ್ಥಿಯಲ್ಲಿದೆ. ಹೆಚ್‌ ಪಿ ಮೋಟಾರ್‍‌ ಎಂದು ನಿಗಮದವರು ಹೇಳುತ್ತಿದ್ದರೂ ಸಹ ಮೋಟಾರ್‍‌ ನೀರನ್ನೇ ಎತ್ತುವುದಿಲ್ಲ. ವಿದ್ಯುತ್‌ ಸಂಪರ್ಕ ಪಡೆಯಲು ಹಲವಾರು ಬಾರಿ ಕಚೇರಿಗೆ ಅಲೆದಾಡಬೇಕು. ಗುತ್ತಿಗೆದಾರರಿಗೆ 20-30 ಸಾವಿರ ನೀಡಬೇಕು. ಗುಣಮಟ್ಟದ ಮೋಟಾರ್‍‌ಗಳನ್ನು ನೀಡಿಲ್ಲ ಎಂದು ದೂರಿದ್ದರು.

 

 

ಆದರೆ ಈ ಎಲ್ಲಾ ಆರೋಪಗಳನ್ನೂ ಯುನೈಟೆಡ್‌ ಇಂಜಿನಿಯರಿಂಗ್‌ ವರ್ಕ್ಸ್‌ ತಳ್ಳಿ ಹಾಕಿದ್ದವು.

‘ನಿಗಮವು ನೀಡಿರುವ ಕಾರ್ಯಾದೇಶದಂತೆಯೇ ನಾವು ಪಂಪ್‌ಸೆಟ್‌ ಸಮೇತವಾಗಿ ಎಲ್ಲಾ ಸಾಮಗ್ರಿಗಳನ್ನೂ ಫಲಾನುಭವಿಗಳಿಗೆ ಒದಗಿಸಿದ್ದೇವೆ. ನಮ್ಮಿಂದ ಯಾವುದೇ ತರಹದ ಲೋಪ ದೋಷವಾಗಿಲ್ಲ. ಕಾರ್ಯಾದೇಶಕ್ಕೆ ಅನುಗುಣವಾಗಿ ಗುಣಮಟ್ಟದ ಸಾಮಗ್ರಿಗಳನ್ನು ಪೂರೈಸಿದ್ದೇವೆ.

 

 

ಸದನ ಸಮಿತಿಯು ಪರಿಶೀಲನೆ ಮಾಡಿರುವ ಎಲ್ಲಾ ಫಲಾನುಭವಿಗಳ ಸಾಮಗ್ರಿಗಳಿಗೆ ನೀಡಿರುವ ಎರಡು ವರ್ಷದ ಗ್ಯಾರಂಟಿ ಅವಧಿ ಮುಗಿದಿದೆ. ಹೀಗಾಗಿ ಫಲಾನುಭವಿಗಳು ತಪ್ಪು ಗ್ರಹಿಕೆಯಿಂದ ಆಧಾರವಿಲ್ಲದೇ ಆರೋಪ ಮಾಡಿದ್ದಾರೆ,’ ಎಂದು ಯುನೈಟೆಡ್‌ ಇಂಜಿನಿಯರಿಂಗ್‌ ವರ್ಕ್ಸ್‌ ಪ್ರತಿಪಾದಿಸಿದ್ದವು.

 

 

 

ಅದೇ ರೀತಿ ಅಹಮದಾಬಾದ್‌ ಮೂಲದ ಮಹಾವೀರ್ ಸಬ್‌ ಮರ್ಸಿಬಲ್‌ ಪ್ರೈ ಲಿ., ಕೂಡ ಆರೋಪಗಳನ್ನು ತಳ್ಳಿ ಹಾಕಿತ್ತು.  ‘ಸಮಿತಿ ಪರಿಶೀಲನೆ ಮಾಡಿರುವ ಪೈಕಿ ಗೋವಿಂದ ಸಿಂಗನೋಡಿ ಎಂಬ ರೈತನು ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಯಾಗಿಲ್ಲ. ಈ ಫಲಾನುಭವಿಗೆ ಏಷಿಯನ್‌ ಇಂಜಿನಿಯರ್ಸ್‌ ಸಾಮಗ್ರಿ  ಸರಬರಾಜು ಮಾಡಿದೆ. ಫಲಾನುಭವಿಯು ಮುಕ್ತ ಮಾರುಕಟ್ಟೆಯಲ್ಲಿ ನಮ್ಮ ಕಂಪನಿಯ ಪಂಪ್‌ ಸೆಟ್‌ ಖರೀದಿಸಿರಬಹುದು. ನಮ್ಮ ಕಂಪನಿಯ ನಿಯಮಾನುಸಾರ ಪಂಪ್‌ ಸೆಟ್‌ನ್ನು ಟ್ಯಾಂಪರ್‍‌ ಮಾಡಿದಲ್ಲಿ ಗ್ಯಾರಂಟಿ ಕೊಡಲು ಬರುವುದಿಲ್ಲ.

 

 

ನಮ್ಮನ್ನು ಸಂಪರ್ಕಿಸದೇ ತಾವೇ ರಿಪೇರಿ ಮಾಡಿಕೊಂಡ ರೈತನ ದೂರಿಗೆ ನಾವು ಜವಾಬ್ದಾರರಾಗಿಲ್ಲ. ಹಾಗೂ ಫಲಾನುಭವಿಗೆ ಬೇರೆ ಕಂಪನಿಯಿಂದ ಸಾಮಗ್ರಿಗಳನ್ನು ಸರಬರಾಜು ಮಾಡಿ ಬಿಲ್ ಕ್ಲೈಮ್‌ ಮಾಡಿರುವುದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ,’ ಎಂದು ಆರೋಪಗಳನ್ನು ತಳ್ಳಿ ಹಾಕಿದ್ದವು.

 

 

ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ನಿರ್ಮಾಣ ಕಾರ್ಯದಲ್ಲಿ ಶೇ.30 ರಿಂದ 40 ರಷ್ಟು ಅಕ್ರಮ ನಡೆದಿದೆ. 100 ಕೋಟಿ ರೂ. ಅನುದಾನದಲ್ಲಿ 30ರಿಂದ 40 ಕೋಟಿ ರೂ. ದೋಚುವ ಕೆಲಸ ಮಾಡಲಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್‌ನ ಗಂಗಾ ಕಲ್ಯಾಣ ವಿಶೇಷ ಸದನ ಸಮಿತಿಯ ಅಧ್ಯಕ್ಷ ಡಾ.ವೈ.ಎ. ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಗಂಗಾ ಕಲ್ಯಾಣ ಯೋಜನೆಯಲ್ಲಿ ಹಲವಾರು ಅಕ್ರಮಗಳು ನಡೆದಿದ್ದು ಸಮಿತಿಯ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಇದರ ಕುರಿತು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ 2015ರಿಂದ ಇಲ್ಲಿಯವರೆಗೆ ಕೋಟ್ಯಂತರ ರೂ. ಅಕ್ರಮ ನಡೆದಿರುವುದು ಸಮಿತಿಗೆ ಗೊತ್ತಾಗಿದೆ.  ಗೋಲ್‌ಮಾಲ್‌ನಲ್ಲಿ ಭಾಗಿಯಾದವರ ವಿರುದ್ಧ ಕ್ರಮಕೈಗೊಳ್ಳುವಂತೆ ಸಮಿತಿ ಶಿಫಾರಸು ಮಾಡಲಿದೆ ಎಂದಿದ್ದರು.

ಗಂಗಾ ಕಲ್ಯಾಣ ಯೋಜನೆಯಲ್ಲಿ ಅಕ್ರಮ; ಆರೋಪಗಳ ತಳ್ಳಿ ಹಾಕಿದ ಕಂಪನಿಗಳು, ವರದಿ ನೀಡಲು ನಿರ್ದೇಶಿಸಿದ ಸರ್ಕಾರ

 

ಗಂಗಾ ಕಲ್ಯಾಣ ಯೋಜನೆಯಡಿ 2015-16, 17, 18, 19 ರವರೆಗೆ ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ 2381, ವಾಲ್ಮೀಕಿ ಅಭಿವೃದ್ಧಿ ನಿಗಮದಡಿ 2344, ಹಿಂದುಳಿದ ಅಭಿವೃದ್ಧಿ ನಿಗಮದಡಿ 863, ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದಡಿ 325 ಸೇರಿ ಒಟ್ಟು 5913 ಕೊಳವೆಬಾವಿ ಕೊರೆಯಿಸಲಾಗಿದೆ. ಈ ಎಲ್ಲ ಕೊಳವೆ ಬಾವಿಗಳು ಕಾರ್ಯರೂಪಕ್ಕೆ ಬಂದಿದ್ದರೆ, 20 ಸಾವಿರ ಎಕರೆಗೆ ನೀರುಣಿಸಬಹುದಾಗಿತ್ತು. ಆದರೆ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಅಕ್ರಮಗಳಿಂದ 2 ಸಾವಿರ ಕೊಳವೆ ಬಾವಿಗಳು ಇಂದಿಗೂ ನೀರು ಕಂಡಿಲ್ಲ ಎಂದು ವಿವರಿಸಿದ್ದರು.

Hot this week

84.32 ಕೋಟಿ ರು ಮೊತ್ತಕ್ಕೆ ಸಲ್ಲಿಕೆಯಾಗದ ಎನ್‌ಡಿಸಿ ಬಿಲ್‌; ಸಿಎಜಿ ಬರೆದ ಪತ್ರಗಳಿಗೂ ಕಿಮ್ಮತ್ತಿಲ್ಲ, ಮೊತ್ತವೂ ಹೊಂದಾಣಿಕೆಯಾಗಿಲ್ಲ

ಬೆಂಗಳೂರು; ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮ...

ಸಿಎಂ ಆರ್ಥಿಕ ಸಲಹೆಗಾರರ ಆಪ್ತ ಶಾಖೆಗೆ ಖಾಸಗಿ ವ್ಯಕ್ತಿಗಳ ನೇಮಕ; ಆರ್ಥಿಕ ಇಲಾಖೆ ಅಭಿಪ್ರಾಯವನ್ನೇ ಬದಿಗೊತ್ತಿದ್ದೇಕೆ?

ಬೆಂಗಳೂರು; ಆಪ್ತ ಶಾಖೆಗೆ ಪ್ರತ್ಯೇಕವಾಗಿ ಸಿಬ್ಬಂದಿ ಪ್ರಮಾಣ ನಿಗದಿಯಾಗದೇ ಇರುವುದು ಮತ್ತು...

ಎಲೆಕ್ಟ್ರಿಕ್‌ ವಾಹನ ಪರೀಕ್ಷಾ ಕೇಂದ್ರ ಸ್ಥಾಪನೆಗೆ 10 ತಿಂಗಳಾದರೂ ಸಿಗದ ಭೂಮಿ; ವಿಳಂಬದಿಂದ ಕೈ ತಪ್ಪಿ ಹೋಗಲಿದೆಯೇ ಕೇಂದ್ರ?

ಬೆಂಗಳೂರು; ಮಂಡ್ಯ ಜಿಲ್ಲೆಯಲ್ಲಿ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ...

ಆರ್‍‌ಎಸ್‌ಎಸ್‌ ಪಥಸಂಚಲನ; ‘ಅರ್ಜಿ ಸಲ್ಲಿಸಿ, ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಅನುಮತಿ ದೊರೆಯುವವರೆಗೆ ಕಾಯಿರಿ’ ಎಂದ ಗೃಹ ಸಚಿವ

ಬೆಂಗಳೂರು; ವಿಜಯದಶಮಿಯ ಅಂಗವಾಗಿ 2026ರ ಅಕ್ಟೋಬರ್‍‌ 25ರಂದು ರಾಷ್ಟ್ರೀಯ ಸ್ವಯಂ ಸೇವಕ...
Please Scan to make Your Contribution

Topics

ಸಿಎಂ ಆರ್ಥಿಕ ಸಲಹೆಗಾರರ ಆಪ್ತ ಶಾಖೆಗೆ ಖಾಸಗಿ ವ್ಯಕ್ತಿಗಳ ನೇಮಕ; ಆರ್ಥಿಕ ಇಲಾಖೆ ಅಭಿಪ್ರಾಯವನ್ನೇ ಬದಿಗೊತ್ತಿದ್ದೇಕೆ?

ಬೆಂಗಳೂರು; ಆಪ್ತ ಶಾಖೆಗೆ ಪ್ರತ್ಯೇಕವಾಗಿ ಸಿಬ್ಬಂದಿ ಪ್ರಮಾಣ ನಿಗದಿಯಾಗದೇ ಇರುವುದು ಮತ್ತು...

ಎಲೆಕ್ಟ್ರಿಕ್‌ ವಾಹನ ಪರೀಕ್ಷಾ ಕೇಂದ್ರ ಸ್ಥಾಪನೆಗೆ 10 ತಿಂಗಳಾದರೂ ಸಿಗದ ಭೂಮಿ; ವಿಳಂಬದಿಂದ ಕೈ ತಪ್ಪಿ ಹೋಗಲಿದೆಯೇ ಕೇಂದ್ರ?

ಬೆಂಗಳೂರು; ಮಂಡ್ಯ ಜಿಲ್ಲೆಯಲ್ಲಿ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ...

ಕಾರ್ಯಾದೇಶ ಪಡೆದರೂ ಕಾಮಗಾರಿ ನಡೆಸದ ಗುತ್ತಿಗೆದಾರರು; ಅಂದಾಜು ವೆಚ್ಚದಲ್ಲಿ ಏರಿಕೆ, ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ

ಬೆಂಗಳೂರು;  ಸರ್ಕಾರದ ವಿವಿಧ ಇಲಾಖೆಗಳು, ಮಂಡಳಿಗಳು, ನಿಗಮಗಳು, ಪ್ರಾಧಿಕಾರಗಳು ಹಾಗೂ ಇತರೆ...

Related Articles

Popular Categories

error: Content is protected !!