ಕೊರೊನಾ ನಂತರ ತುಮಕೂರು ಜಿಲ್ಲೆ ನಿದ್ದೆಗೆಡಿಸಿವೆ 250 ಚಿರತೆಗಳು

ತುಮಕೂರು; ಕೊರೊನಾ ವೈರಸ್‌ ಭೀತಿಯಿಂದ ಸದ್ಯಕ್ಕೆ ಪಾರಾಗಿರುವ ತುಮಕೂರು ಜಿಲ್ಲೆಯಲ್ಲೀಗ ಚಿರತೆ ಭೀತಿ ಕಾಡತೊಡಗಿದೆ. ಜಿಲ್ಲೆಯಲ್ಲಿ ಎಲ್ಲಿ ಕೇಳಿದರೂ ಚಿರತೆಗಳದ್ದೇ ಸದ್ದು. ನರಹಂತಕ ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಅದಷ್ಟೇ ಯತ್ನಿಸಿದರೂ ಸಫಲವಾಗುತ್ತಿಲ್ಲ. 

ತುಮಕೂರು ತಾಲೂಕು, ಗುಬ್ಬಿ, ಕುಣಿಗಲ್ ಮತ್ತು ತುರುವೇಕೆರೆ ತಾಲೂಕು ವ್ಯಾಪ್ತಿಯ ಹಳ್ಳಿಗಳಲ್ಲಿ ಕೇವಲ 10 ಚಿರತೆಗಳಷ್ಟೇ ಅರಣ್ಯಾಧಿಕಾರಿಗಳ ಸೆರೆಗೆ ಸಿಕ್ಕಿವೆ. ಇನ್ನುಳಿದ 250 ಚಿರತೆಗಳು ತುಮಕೂರು ಜಿಲ್ಲೆಯಾದ್ಯಂತ ಈಗಲೂ ಓಡಾಡಿಕೊಂಡಿರುವುದು ಈ ಭಾಗದ ಜನರಲ್ಲಿ ಆತಂಕ ಮೂಡಿಸಿದೆ. 

ತುಮಕೂರು ಜಿಲ್ಲೆಯಾದ್ಯಂತ ಇರುವ ಚಿರತೆಗಳ ಬಗ್ಗೆ ತುರುವೇಕೆರೆ ಶಾಸಕ ಮಸಾಲ ಜಯರಾಮ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸಚಿವ ಆನಂದ್‍ಸಿಂಗ್ ಅವರು ತುಮಕೂರು ಜಿಲ್ಲೆಯಾದ್ಯಂತ ಈಗಲೂ 250 ಚಿರತೆಗಳಿವೆ ಎಂದು ಮಾಹಿತಿ ಒದಗಿಸಿದ್ದಾರೆ.

ತುಮಕೂರು ತಾಲೂಕಿನಲ್ಲಿ ಚಿರತೆ ಹಾವಳಿ ಪ್ರಕರಣಗಳು 2016-17ರಿಂದ 2018-19ರವರೆಗೆ ಹೆಚ್ಚಿವೆ. 2016-17ರಲ್ಲಿ 20 ಪ್ರಕರಣಗಳು, 2017-18ರಲ್ಲಿ 29, 2018-19ರಲ್ಲಿ 43, 2019-20ರಲ್ಲಿ 19 ಪ್ರಕರಣಗಳು ವರದಿಯಾಗಿರುವುದು ಆನಂದ್ ಸಿಂಗ್ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

ತುಮಕೂರು ತಾಲೂಕಿನಲ್ಲಿ ಸಾಕು ಪ್ರಾಣಿ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ 2016-17ರಲ್ಲಿ 1,98,000 ರು., 2017-18ರಲ್ಲಿ 2,33,798 ರು., 2018-19ರಲ್ಲಿ 3,29,000 ರು.ಗಳನ್ನು ಪರಿಹಾರ ನೀಡಲಾಗಿದೆ. ಗುಬ್ಬಿ ತಾಲೂಕಿನಲ್ಲಿ ಈ ಮೂರು ವರ್ಷಗಳಲ್ಲಿ 9,27,182 ರು, ಕುಣಿಗಲ್‍ನಲ್ಲಿ 31,29,498 ರು., ತುರುವೇಕೆರೆಯಲ್ಲಿ 2,91,833 ರು.ಗಳನ್ನು ಪರಿಹಾರ ವಿತರಿಸಿದೆ.

ಚಿರತೆ ದಾಳಿಯಿಂದ 2016-17ರಿಂದ 2018-19ರಲ್ಲಿ ಯಾವುದೇ ಮಾನವ, ಪ್ರಾಣ ಹಾನಿ ಆಗಿಲ್ಲ. 2019-20ರಲ್ಲಿ ಒಟ್ಟು 3 ಪ್ರಕರಣಗಳು ವರದಿಯಾಗಿವೆ. ತುಮಕೂರು, ಗುಬ್ಬಿ, ಕುಣಿಗಲ್ ವ್ಯಾಪ್ತಿಯಲ್ಲಿ ಆಗಿರುವ ಮಾನವ,ಪ್ರಾಣ ಹಾನಿಗೆ ಸಂಬಂಧಿಸಿದಂತೆ ಒಟ್ಟು 17 ಲಕ್ಷ ರು.ಗಳನ್ನು ಪರಿಹಾರ ರೂಪದಲ್ಲಿ ವಿತರಿಸಿದೆ ಎಂದು ಆನಂದ್‍ಸಿಂಗ್ ಅವರು ಉತ್ತರ ನೀಡಿದ್ದಾರೆ. 

Your generous support will help us remain independent and work without fear.

Latest News

Related Posts