ಬೆಂಗಳೂರು; ಕಾಂಗ್ರೆಸ್ ಮತ್ತು ಜೆಡಿಎಸ್ ಪಾಲುದಾರಿಕೆಯ ಸಮ್ಮಿಶ್ರ ಸರ್ಕಾರವನ್ನು ಕೆಡವಿ ಅಸ್ತಿತ್ವಕ್ಕೆ ಬಂದಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 2 ವರ್ಷ ಪೂರ್ಣಗೊಳ್ಳುವುದರೊಳಗೇ ಸಂಪುಟದ ನಾಲ್ವರು ಸಚಿವರ ವಿರುದ್ಧ ಅಧಿಕಾರಿಗಳಿಂದ ಲಂಚಕ್ಕಾಗಿ ಬೇಡಿಕೆ ಇಟ್ಟ ಪ್ರಕರಣಗಳಿವೆ.
ಈ ಪೈಕಿ ವರ್ಗಾವಣೆಗಾಗಿ 1 ಕೋಟಿ ರು. ಹಣಕ್ಕಾಗಿ ಬೇಡಿಕೆ ಇರಿಸಿದ್ದರು ಎಂಬ ದೂರಿನ ಮೇರೆಗೆ ಅಬಕಾರಿ ಸಚಿವ ಎಚ್ ನಾಗೇಶ್ ಅವರನ್ನು ದೂರು ಕೇಳಿ ಬಂದ ಒಂದೇ ತಿಂಗಳ ಅಂತರದಲ್ಲಿ ಅವರಿಂದ ರಾಜೀನಾಮೆ ಪಡೆಯಲಾಗಿತ್ತು. ಈ ಪ್ರಕರಣವನ್ನು ‘ದಿ ಫೈಲ್’ ಹೊರಗೆಡವಿತ್ತು. ಇದೀಗ ಅಬಕಾರಿ ಇಲಾಖೆಯ ಹಾಲಿ ಸಚಿವ ಕೆ ಗೋಪಾಲಯ್ಯ ಅವರ ವಿರುದ್ಧವೂ ಅಬಕಾರಿ ಇನ್ಸ್‌ಪೆಕ್ಟರ್‌ಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬುದು ಇಲಾಖೆಯ ಅಧಿಕಾರಿಗಳಿಬ್ಬರ ಮಧ್ಯೆ ನಡೆದಿದೆ ಎನ್ನಲಾಗಿರುವ ಸಂಭಾಷಣೆಯ ಆಡಿಯೋ ತುಣುಕು ಬಹಿರಂಗವಾಗಿತ್ತು.
ಈ ಎರಡೂ ಪ್ರಕರಣಗಳು ಬಹಿರಂಗವಾಗುವ ಮುನ್ನವೇ ಕೃಷಿ ಸಚಿವ ಬಿ ಸಿ ಪಾಟೀಲ್ ವಿರುದ್ಧವೂ ಇಂತಹದ್ದೇ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲೂ ಕೃಷಿ ಇಲಾಖೆಯ ನೊಂದ ಅಧಿಕಾರಿಗಳೇ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆದಿಯಾಗಿ ಹಲವರಿಗೆ ಲಿಖಿತ ದೂರು ಸಲ್ಲಿಸಿದ್ದರು.
ಎಚ್ ನಾಗೇಶ್ ಅವರ ಪ್ರಕರಣ ಬಹಿರಂಗವಾದ ಕೆಲವೇ ತಿಂಗಳಲ್ಲಿ ಕಂದಾಯ ಸಚಿವ ಆರ್ ಆಶೋಕ್ ಅವರ ವಿರುದ್ಧವೂ ಅಧಿಕಾರಿಗಳಿಂದ ಹಣ ವದಸೂಲಿ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಆರ್ ಅಶೋಕ್ ಅವರ ಆಪ್ತ ಸಹಾಯಕ ಗಂಗಾಧರ್ ಎಂಬುವರ ವಿರುದ್ಧ ಸಬ್ ರಿಜಿಸ್ಟ್ರಾರ್ ಚೆಲುವರಾಜು ಅವರು ಎಸಿಬಿಗೆ ದೂರು ದಾಖಲಿಸಿದ್ದರು. ಈ ದೂರಿನ ಮೇಲೆ ಎಫ್‌ಐಆರ್ ದಾಖಲಿಸಿಕೊಂಡಿರುವ ಎಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಅಬಕಾರಿ ಸಚಿವ ಗೋಪಾಲಯ್ಯ ಅವರ ವಿರುದ್ಧ ಸಾಕ್ಷ್ಯಾಧಾರ ಸಮೇತ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಎಲ್ಲಾ ನಾಲ್ಕು ಪ್ರಕರಣಗಳ ಸುತ್ತ ಪ್ರಕಟಿಸಿದ್ದ ಮೂರು ವರದಿಗಳನ್ನು ‘ದಿ ಫೈಲ್’ ಸಂಕ್ಷಿಪ್ತವಾಗಿ ಮತ್ತೊಮ್ಮೆ ಮುನ್ನೆಲೆಗೆ ತರುತ್ತಿದೆ.
ಪ್ರಕರಣ 1
ಕೃಷಿ ಸಚಿವ ಬಿ ಸಿ ಪಾಟೀಲ್ ಅವರ ಹೆಸರಿನಲ್ಲಿ ಅವರ ಅಪ್ತ ಕಾರ್ಯದರ್ಶಿ ಶಿವಕುಮಾರ್ ಮತ್ತಿತರ ಖಾಸಗಿ ವ್ಯಕ್ತಿಗಳು ಕೃಷಿ ಇಲಾಖೆಯ ನೌಕರರಿಂದ ಸುಲಿಗೆ ಮಾಡುತ್ತಿದ್ದಾರೆ ಎಂಬ ದೂರು ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ಸಲ್ಲಿಕೆಯಾಗಿತ್ತು.
ದಯಾನಂದ್, ಮಂಜುನಾಥ್ ಎ ಸಿ, ಇಲಾಖೆಯ ನಿರ್ದೇಶಕ ಬಿ ವೈ ಶ್ರೀನಿವಾಸ್ ಅವರ ಹೆಸರನ್ನು ಪತ್ರದಲ್ಲಿ ಹೆಸರಿಸಿರುವ ಕೃಷಿ ಇಲಾಖೆಯ ಅಧಿಕಾರಿಗಳು, ಪಂಚಾಯ್ತಿಮಟ್ಟದ ಸಹಾಯಕ ಕೃಷಿ ಆಧಿಕಾರಿಗಳಿಂದ ಜಿಲ್ಲೆಯಲ್ಲಿನ ಜಂಟಿ ಕೃಷಿ ನಿರ್ದೇಶಕರಿಂದ ಲಕ್ಷಾಂತರ ರು.ವಸೂಲಿ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಬಿ ಸಿ ಪಾಟೀಲ್ ಹೆಸರು ಬಳಸಿ ಅಧಿಕಾರಿಗಳಿಂದ ಹಣ ಸುಲಿಗೆ?; ಮುಖ್ಯಕಾರ್ಯದರ್ಶಿಗೆ ದೂರು
ಪಂಚಾಯ್ತಿಮಟ್ಟದ ಸಹಾಯಕ ಕೃಷಿ ಅಧಿಕಾರಿಗಳಿಗೆ 50 ಸಾವಿರದಿಂದದ 1.00 ಲಕ್ಷ, ಹೋಬಳಿ ಮಟ್ಟದ ಕೃಷಿ ಅಧಿಕಾರಿಗಳಿಗೆ 50 ಸಾವಿರದಿಂದ 1.50 ಲಕ್ಷ, ತಾಲೂಕು ಮಟ್ಟದ ಸಹಾಯಕ ಕೃಷಿ ನಿರ್ದೇಶಕರುಗಳಿಗೆ 5 ಲಕ್ಷದಿಂದ 10 ಲಕ್ಷ, ಉಪ ಕೃಷಿ ನಿರ್ದೇಶಕರುಗಳಿಗೆ 10 ಲಕ್ಷದಿಂದ 15 ಲಕ್ಷ, ಜಿಲ್ಲೆಗಳಲ್ಲಿನ ಜಂಟಿ ಕೃಷಿ ನಿರ್ದೇಶಕರುಗಳಿಗೆ 30 ಲಕ್ಷದಿಂದ 100.00 ಲಕ್ಷದವರಗೆ ಸೇರಿದಂತೆ ಒಂದು ಜಿಲ್ಲೆಯಿಂದ 50 ಲಕ್ಷದಿಂದ 1.5 ಕೋಟಿಯವರೆಗೆ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿ, ನೌಕರರು ಗಂಭೀರವಾಗಿ ದೂರಿನಲ್ಲಿ ಪ್ರಸ್ತಾಪಿಸಿದ್ದರು.
2020-21ನೇ ಸಾಲಿನ ಗ್ರೂಪ್ ಎ, ಗ್ರೂಪ್ ಮತ್ತು ಗ್ರೂಪ್ ಸಿ ವರ್ಗದ ಅಧಿಕಾರಿ/ನೌಕರರಿಗೆ ಮಾತ್ರ ಅನ್ವಯವಾಗುವಂತೆ 2020ರ ಜುಲೈ 10ರವರೆಗೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖೆ ಸಚಿವರುಗಳಿಗೆ ಅಧಿಕಾರಿ ಪ್ರತ್ಯಾಯೋಜಿಸಲಾಗಿದೆ. ಈ ಆದೇಶದ ಹಿನ್ನೆಲೆಯಲ್ಲಿ ಕೃಷಿ ಸಚಿವರಿಗೆ ಹಣ ಸಂದಾಯ ಮಾಡಬೇಕು ಎಂಬ ಸಬೂಬು ಹೇಳಿ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ತಮ್ಮ ಅಧೀನದಲ್ಲಿರುವ ಅಧಿಕಾರಿ/ನೌಕರರು ವರ್ಗಾವಣೆ ಪಡೆಯಬೇಕಾದರೆ ಅಥವಾ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಚೇರಿಗಳಲ್ಲಿಯೇ ಮುಂದುವರೆಯಬೇಕಾದರೆ ಲಕ್ಷ ರು.ಗಳನ್ನು ಕಡ್ಡಾಯವಾಗಿ ನೀಡಬೇಕು,’ ಎಂದು ಆದೇಶ ನೀಡಿರುತ್ತಾರೆ ಎಂದು ಪತ್ರದಲ್ಲಿ ವಿವರಿಸಿದ್ದರು.
ಬಿ ಸಿ ಪಾಟೀಲ್‌ರಿಂದಲೇ ಹಣಕ್ಕಾಗಿ ಬೇಡಿಕೆ!; ಮುಖ್ಯಮಂತ್ರಿಗೆ ನೌಕರರಿಂದಲೇ ಸಾಕ್ಷ್ಯ?
ಜಂಟಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್ 50 ಲಕ್ಷ, ಅಪರ ನಿರ್ದೇಶಕರುಗಳು 50 ಲಕ್ಷ, ಬೆಳಗಾವಿ ಜಂಟಿ ನಿರ್ದೇಶಕರು (ಜಿಲಾನಿ ಮತ್ತು ಪಾಟೀಲ್) 2 ಕೋಟಿ, ಕಲ್ಬುರ್ಗಿ ಜಂಟಿ ನಿರ್ದೇಶಕ (ಸೂಗೂರು) 1 ಕೋಟಿ, ರೂಪಾದೇವಿ 75 ಲಕ್ಷ, ಅಪರ ನಿರ್ದೇಶಕರು( ದಿವಾಕರ) 1 ಕೋಟಿ, ಚಿಕ್ಕಬಳ್ಳಾಪುರ ಜಂಟಿ ನಿರ್ದೇಶಕರು (ರೂಪ) 50 ಲಕ್ಷ, ದಾವಣಗೆರೆ ಜಂಟಿ ನಿರ್ದೇಶಕರು 50 ಲಕ್ಷ, ಜಂಟಿ ನಿರ್ದೇಶಕರು ಹಾವೇರಿ (ಮಂಜುನಾಥ್) 1 ಕೋಟಿ ನೀಡಿದ್ದಾರೆ ಎಂಬ ಸಂಗತಿ ಕೃಷಿ ಇಲಾಖೆ ಸಿಬ್ಬಂದಿ ಮುಖ್ಯ ಕಾರ್ಯದರ್ಶಿಗೆ ಪಟ್ಟಿ ಸಮೇತ ಸಲ್ಲಿಸಿದ್ದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಪ್ರಕರಣ 2
ಅಬಕಾರಿ ಸಚಿವರಾಗಿದ್ದ ಎಚ್ ನಾಗೇಶ್ ಅವರು ಜಂಟಿ ಆಯುಕ್ತರಾಗಿದ್ದ ಮೋಹನ್ ಅವರ ವರ್ಗಾವಣೆಗಾಗಿ 1 ಕೋಟಿ ರು. ಲಂಚಕ್ಕಾಗಿ ಬೇಡಿಕೆ ಇರಿಸಿದ್ದರು ಎಂದು ಅಧಿಕಾರಿಯ ಪುತ್ರಿ ಪ್ರಧಾನಿ ಕಚೇರಿಗೆ ಲಿಖಿತ ದೂರು ಸಲ್ಲಿಸಿದ್ದರು. ಅನಾರೋಗ್ಯಪೀಡಿತರಾಗಿರುವ ತಮ್ಮ ತಂದೆಯು 1 ಕೋಟಿ ರು.ಗಳನ್ನು ಲಂಚದ ರೂಪದಲ್ಲಿ ನೀಡಲು ಶಕ್ತರಾಗಿಲ್ಲ ಎಂದು ದೂರಿನಲ್ಲಿ ವಿವರಿಸಿದ್ದ ಅವರ ಪುತ್ರಿ, ವರ್ಗಾವಣೆಗಾಗಿ ಹಣಕ್ಕೆ ಬೇಡಿಕೆ ಇರಿಸಿದ್ದನ್ನು ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್‌ನಾರಾಯಣ್ ಅವರ ಗಮನಕ್ಕೆ ತಂದಿದ್ದರು. ಪ್ರಧಾನಿ ಕಚೇರಿಗೆ ಸಲ್ಲಿಸಿದ್ದ ದೂರಿನಲ್ಲಿ ಈ ಅಂಶವನ್ನು ಪ್ರಮುಖವಾಗಿ ಪ್ರಸ್ತಾಪ ಮಾಡಲಾಗಿತ್ತು.
ಈ ಪ್ರಕರಣವನ್ನು ‘ದಿ ಫೈಲ್’ ಹೊರಗೆಡವಿದ ಎರಡು ತಿಂಗಳೊಳಗೆ ಎಚ್ ನಾಗೇಶ್ ಅವರಿಂದ ರಾಜೀನಾಮೆ ಪಡೆಯಲಾಗಿತ್ತು.
‘ದಿ ಫೈಲ್’ ವರದಿ ಪರಿಣಾಮ; ಸಚಿವ ನಾಗೇಶ್‌ರಿಂದ ರಾಜೀನಾಮೆ ಪಡೆದ ಮುಖ್ಯಮಂತ್ರಿ
ಪ್ರಕರಣ 3
ಕಂದಾಯ ಸಚಿವ ಆರ್ ಅಶೋಕ್ ಅವರು ಸಬ್ ರಿಜಿಸ್ಟ್ರಾರ್‌ಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ಕಂದಾಯ ಸಚಿವ ಅಶೋಕ್ ಅವರ ಆಪ್ತ ಸಹಾಯಕ ಗಂಗಾಧರ್ ಎಂಬುವರು ಹಣಕ್ಕೆ ಬೇಡಿಕೆ ಇರಿಸಿದ್ದರು ಎಂದು ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜು ಅವರು ಎಸಿಬಿಗೆ ದೂರು ದಾಖಲಿಸಿದ್ದರು.
ಸಚಿವ ಅಶೋಕ್ ಆಪ್ತ ಸಹಾಯಕನಿಂದ ಸಬ್ ರಿಜಿಸ್ಟ್ರಾರ್ ಬಳಿ ಹಣಕ್ಕಾಗಿ ಬೇಡಿಕೆ?
ಈ ಸಂಬಂಧ ಆಪ್ತ ಸಹಾಯಕ ಗಂಗಾಧರ್ ಅವರು ಕಳಿಸಿದ್ದ ವಾಟ್ಸಾಪ್ ಸಂದೇಶವನ್ನು ದೂರಿನಲ್ಲಿ ಪ್ರಸ್ತಾಪಿಸಿದ್ದರು. ಎಸಿಬಿ ಪೊಲೀಸರು ಅಶೋಕ್ ಅವರ ಆಪ್ತ ಸಹಾಯಕ ಗಂಗಾಧರ್ ಅವರ ವಿರುದ್ದ ಎಫ್‌ಐಆರ್ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಯುತ್ತಿದೆ.
ಹಣಕ್ಕಾಗಿ ಬೇಡಿಕೆ; ಸಚಿವ ಅಶೋಕ್ ಆಪ್ತ ಸಹಾಯಕನ ವಿರುದ್ಧ ಠಾಣೆಯಲ್ಲಿ ದೂರು ದಾಖಲು
ಅಬಕಾರಿ ಇಲಾಖೆಯ ಅಧಿಕಾರಿಗಳಿಬ್ಬರ ಮಧ್ಯೆ ನಡೆದಿದೆ ಎನ್ನಲಾಗಿರುವ 10 ನಿಮಿಷದ ಸಂಭಾಷಣೆಯ ತುಣುಕಿನಲ್ಲಿ ಕೊಪ್ಪಳ ಜಿಲ್ಲೆಯಿಂದ 5 ಲಕ್ಷ ಸಂಗ್ರಹಿಸಿ ಕೊಡಲು ಸೂಚಿಸಿದ್ದಾರೆ ಎಂಬ ಅಂಶ ಪ್ರಸ್ತಾಪವಾಗಿದೆ. ಅಲ್ಲದೆ ಮಂಜುನಾಥ್, ನಾಗರಾಜಪ್ಪ, ರಮೇಶ್, ಶಿವಪ್ರಸಾದ್ ಸೇರಿದಂತೆ ಹಲವು ಜಿಲ್ಲೆಗಳ ಅಧಿಕಾರಿಗಳ ಹೆಸರು ಪ್ರಸ್ತಾಪವಾಗಿದೆಯಲ್ಲದೆ ಕೊಪ್ಪಳ ಜಿಲ್ಲೆಯ ಇಕ್ಬಾಲ್ ಅನ್ಸಾರಿ ಎಂಬುವರ ಹೆಸರು ಪ್ರಸ್ತಾಪವಾಗಿರುವುದು ಚರ್ಚೆಗೆ ಗ್ರಾಸವಾಗಿತ್ತು.
ಸಚಿವರ ಮನೆಯಲ್ಲೇ ನಡೆದಿತ್ತು ಸಭೆ?
ಅಬಕಾರಿ ಸಚಿವ ಕೆ ಗೋಪಾಲಯ್ಯ ಅವರ ಮನೆಯಲ್ಲಿ ಅಬಕಾರಿ ಜಿಲ್ಲಾ ಅಧಿಕಾರಿಗಳು, ಜಂಟಿ ಆಯುಕ್ತರುಗಳ ಸಭೆ ನಡೆದಿತ್ತು ಎಂಬುದು ಮಹಿಳಾ ಅಧಿಕಾರಿಯೊಬ್ಬರ ಆಡಿಯೋ ತುಣುಕಿನಿಂದ ಗೊತ್ತಾಗಿದೆ. ಸಚಿವರ ಮನೆಯಲ್ಲಿ ಸಭೆ ನಡೆಯುವ ಮುನ್ನ ವಿಕಾಸಸೌಧದಲ್ಲಿ ಅಬಕಾರಿ ಇಲಾಖೆಯ ಜಂಟಿ ಆಯುಕ್ತರು, ಅಬಕಾರಿ ನಿರೀಕ್ಷಕರ ಸಭೆ ನಡೆದಿತ್ತು. ಈ ಸಭೆಯಲ್ಲಿ ಸಚಿವ ಗೋಪಾಲಯ್ಯ ಅವರು ಕೆಲ ಜಿಲ್ಲೆಗಳ ಅಬಕಾರಿ ನಿರೀಕ್ಷಕರ ಕಾರ್ಯವೈಖರಿಯನ್ನು ಮೆಚ್ಚಿ ಪ್ರಶಂಸಿದ್ದರು. ಅದೇ ದಿನ ಸಂಜೆ ಸಚಿವರ ಮನೆಯಲ್ಲಿ ಆಯ್ದ ಜಂಟಿ ಆಯುಕ್ತರು ಮತ್ತು ಅಬಕಾರಿ ನಿರೀಕ್ಷಕರ ಸಭೆ ನಡೆದಿತ್ತು. ಈ ಸಭೆಯಲ್ಲಿ ಮಂಜುನಾಥ್, ಕುಮಾರ್, ನಾಗರಾಜಪ್ಪ ಎಂಬ ಅಧಿಕಾರಿಗಳು ಹಾಜರಾಗಿದ್ದರು ಎಂಬುದು ಆಡಿಯೋ ತುಣುಕಿನಿಂದ ತಿಳಿದು ಬಂದಿತ್ತು.
ಆಡಿಯೋ ಬಹಿರಂಗಪಡಿಸಿದ್ದರು ಎನ್ನಲಾದ ನಾಲ್ವರು ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಸದ್ಯ ಈ ಪ್ರಕರಣ ಕುರಿತು ಕರ್ನಾಟಕ ರಾಷ್ಟ್ರಸಮಿತಿಯು ಎಸಿಬಿಯಲ್ಲಿ ದೂರು ದಾಖಲಿಸಿದೆ.