ಬಿ ಸಿ ಪಾಟೀಲ್‌ ಹೆಸರು ಬಳಸಿ ಅಧಿಕಾರಿಗಳಿಂದ ಹಣ ಸುಲಿಗೆ?; ಮುಖ್ಯಕಾರ್ಯದರ್ಶಿಗೆ ದೂರು

ಬೆಂಗಳೂರು; ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೆಸರು ಬಳಸಿಕೊಂಡು ಹಿರಿಯ ಐಎಎಸ್‌ ಅಧಿಕಾರಿಯೊಬ್ಬರು ಗುತ್ತಿಗೆದಾರರೊಬ್ಬರಿಂದ 12 ಕೋಟಿ ಹಣ ಸುಲಿಗೆ ಮಾಡಿರುವ ಪ್ರಕರಣ ತೀವ್ರ ಕೋಲಾಹಲ ಸೃಷ್ಟಿಸಿದ್ದರ ಬೆನ್ನಲ್ಲೇ ಇದೀಗ ಕೃಷಿ ಸಚಿವ ಬಿ ಸಿ ಪಾಟೀಲ್‌ ಅವರ ಹೆಸರಿನಲ್ಲಿಯೂ ಅವರ ಆಪ್ತ ಕಾರ್ಯದರ್ಶಿ ಸೇರಿದಂತೆ ಕೆಲ ಖಾಸಗಿ ವ್ಯಕ್ತಿಗಳು ಇಲಾಖೆಯ ತಲಾ ಅಧಿಕಾರಿಗಳಿಂದಲೂ ಲಕ್ಷಾಂತರ ರು. ವಸೂಲಿ ಮಾಡಿದ್ದಾರೆ ಎಂಬ ಗುರುತರ ಆರೋಪಗಳು ಕೇಳಿ ಬಂದಿವೆ.

ಸಚಿವ ಬಿ ಸಿ ಪಾಟೀಲ್‌ ಅವರ ಹೆಸರಿನಲ್ಲಿ ಅವರ ಅಪ್ತ ಕಾರ್ಯದರ್ಶಿ ಶಿವಕುಮಾರ್‌ ಮತ್ತಿತರ ಖಾಸಗಿ ವ್ಯಕ್ತಿಗಳು ಕೃಷಿ ಇಲಾಖೆಯ ನೌಕರರಿಂದ ಸುಲಿಗೆ ಮಾಡುತ್ತಿದ್ದಾರೆ ಎಂಬ ದೂರು ಇದೀಗ ಮುಖ್ಯ ಕಾರ್ಯದರ್ಶಿಯ ಮೆಟ್ಟಿಲೇರಿದೆ.

ಈಗಾಗಲೇ ಕೃಷಿ ಇಲಾಖೆಯ ಇಲಾಖೆಯ ಕೆಲ ನೌಕರರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಸ್ವೀಕರಿಸಿರುವ ಮುಖ್ಯ ಕಾರ್ಯದರ್ಶಿ, ಈ ಸಂಬಂಧ ಕ್ರಮ ಕೈಗೊಳ್ಳಲು ಕೃಷಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರವನ್ನು ರವಾನಿಸಿದ್ದಾರೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಸಚಿವ ಬಿ ಸಿ ಪಾಟೀಲ್‌ ಅವರ ಆಪ್ತ ಕಾರ್ಯದರ್ಶಿ ಕೆಎಎಸ್‌ ಅಧಿಕಾರಿ ಶಿವಕುಮಾರ್‌, ದಯಾನಂದ್‌, ಮಂಜುನಾಥ್‌ ಎ ಸಿ,ಇಲಾಖೆಯ ನಿರ್ದೇಶಕ ಬಿ ವೈ ಶ್ರೀನಿವಾಸ್‌ ಅವರ ಹೆಸರನ್ನು ಪತ್ರದಲ್ಲಿ ಹೆಸರಿಸಿರುವ ಕೃಷಿ ಇಲಾಖೆಯ ಅಧಿಕಾರಿಗಳು, ಪಂಚಾಯ್ತಿಮಟ್ಟದ ಸಹಾಯಕ ಕೃಷಿ ಆಧಿಕಾರಿಗಳಿಂದ ಜಿಲ್ಲೆಯಲ್ಲಿನ ಜಂಟಿ ಕೃಷಿ ನಿರ್ದೇಶಕರಿಂದ ಲಕ್ಷಾಂತರ ರು.ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪಂಚಾಯ್ತಿಮಟ್ಟದ ಸಹಾಯಕ ಕೃಷಿ ಅಧಿಕಾರಿಗಳಿಗೆ 50 ಸಾವಿರದಿಂದದ 1.00 ಲಕ್ಷ, ಹೋಬಲಿ ಮಟ್ಟದ ಕೃಷಿ ಅಧಿಕಾರಿಗಳಿಗೆ 50 ಸಾವಿರದಿಂದ 1.50 ಲಕ್ಷ, ತಾಲೂಕು ಮಟ್ಟದ ಸಹಾಯಕ ಕೃಷಿ ನಿರ್ದೇಶಕರುಗಳಿಗೆ 5 ಲಕ್ಷದಿಂದ 10 ಲಕ್ಷ, ಉಪ ಕೃಷಿ ನಿರ್ದೇಶಕರುಗಳಿಗೆ 10 ಲಕ್ಷದಿಂದ 15 ಲಕ್ಷ, ಜಿಲ್ಲೆಗಳಲ್ಲಿನ ಜಂಟಿ ಕೃಷಿ ನಿರ್ದೇಶಕರುಗಳಿಗೆ 30 ಲಕ್ಷದಿಂದ 100.00 ಲಕ್ಷದವರಗೆ ಸೇರಿದಂತೆ ಒಂದು ಜಿಲ್ಲೆಯಿಂದ 50 ಲಕ್ಷದಿಂದ 1.5 ಕೋಟಿಯವರೆಗೆ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿ, ನೌಕರರು ಗಂಭೀರ ಆರೋಪ ಮಾಡಿರುವುದು ಪತ್ರದಿಂದ ತಿಳಿದು ಬಂದಿದೆ.

‘ನಾವು ಕೆಳಮಟ್ಟದ ಇಲಾಖೆಯ ಸೇವಕರಾಗಿ ಕೆಲಸ ನಿರ್ವಹಿಸುತ್ತಿದ್ದು ನಮ್ಮ ಸಂಬಳದಲ್ಲಿ ನಮ್ಮ ಸಂಸಾರ ನಡೆಸುವುದೇ ಕಷ್ಟಕರವಾಗಿದೆ. ನಮಗೆ ಏನಾದರೂ ಮಾಡಿದರೆ ಹೇಗೆ ಎಂದು ಹಣ ಹೊಂದಿಸುತ್ತಿದ್ದೇವೆ. ಇದು ಹೀಗೆ ಮುಂದುವರೆದರೆ ರೈತರ ಆತ್ಮಹತ್ಯೆ ಬದಲು ರೈತ ಇಲಾಖೆ ಅಧಿಕಾರಿಗಳು ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಸಮಯ ದೂರವಿಲ್ಲ. ಇದರಿಂದ ಮಾನಸಿಕ ಹಿಂಸೆ ಅನುಭವಿಸುವುದಕ್ಕಿಂತ ಅದೇ ಮೇಲು,’ ಎಂದು ಅಧಿಕಾರಿ, ನೌಕರರು ಅಳಲು ವ್ಯಕ್ತಪಡಿಸಿರುವುದು ಪತ್ರದಿಂದ ಗೊತ್ತಾಗಿದೆ.

ಆಪ್ತ ಕಾರ್ಯದರ್ಶಿ ಶಿವಕುಮಾರ್‌, ದಯಾನಂದ್‌ ಮತ್ತು ಮಂಜುನಾಥ್‌ ಎಂಬುವರು ಇಲಾಖೆಯ ಅಧಿಕಾರಿ, ನೌಕರರುಗಳಿಗೆ ವಾಟ್ಸಾಪ್‌ ಕರೆ ಮಾಡುವ ಮೂಲಕ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಪತ್ರದಲ್ಲಿ ದೂರಿರುವ ನೌಕರರು, ಕೃಷಿ ಯಾಂತ್ರೀಕರಣ, ಕೃಷಿ ಪರಿಕರ, ಕೀಟನಾಶಕಗಳು, ಸ್ಪ್ರಿಂಕಲ್‌/ಡ್ರಿಪ್‌ಗಳ ಅನುದಾನ ನೀಡುವುದರಲ್ಲಿಯೂ ಲೂಟಿ ಮಾಡಿದ್ದಾರೆ ಎಂದು ವಿವರಿಸಿದ್ದಾರೆ.

‘ಅನುದಾನ ಯಾರಿಗೆ ಕೊಡಬೇಕು ಎಂದು ಏಜೆಂಟರುಗಳು ಮಂತ್ರಿಗಳ ಕಚೇರಿ, ವಸೂಲಿಗಾಗಿ ಪ್ರತ್ಯೇಕ ಕಚೇರಿ ತೆರೆದು ಯಾರು ಹೆಚ್ಚಿನ ಕಮಿಷನ್‌ ನೀಡುತ್ತಾರೋ ಉಪಕರಣಗಳು ಗುಣಮಟ್ಟದಿಂದ ಕೂಡಿಲ್ಲದಿದ್ದರೂ ಆಪ್ತ ಕಾರ್ಯದರ್ಶಿ, ಖಾಸಗಿ ಏಜೆಂಟರುಗಳು ಸೂಚಿಸುವ ವ್ಯಕ್ತಿಗಳಿಗೆ ಜಂಟಿ ನಿರ್ದೇಶಕರುಗಳು ಇಂಡೆಂಟ್‌ಗಳನ್ನು ನೀಡಬೇಕು. ಎಲ್ಲದಕ್ಕೂ ಮಂತ್ರಿಗಳ ಹೆಸರನ್ನು ಹೇಳಲಾಗುತ್ತಿದೆ,’ ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

the fil favicon

SUPPORT THE FILE

Latest News

Related Posts