ಬೆಂಗಳೂರು; ಕೃಷಿ ಇಲಾಖೆಯಲ್ಲಿ ಗ್ರೂಪ್ ಎ, ಬಿ ಮತ್ತು ಸಿ ಗುಂಪಿನ ಅಧಿಕಾರಿ, ನೌಕರರ ವರ್ಗಾವಣೆಗಾಗಿ ಸಚಿವ ಬಿ ಸಿ ಪಾಟೀಲ್ ಮತ್ತು ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಹಣಕ್ಕಾಗಿ ಬೇಡಿಕೆ ಇರಿಸಿದ್ದರು. ಈ ಸಂಬಂಧ ಸಚಿವರು ಮತ್ತು ಅವರ ಆಪ್ತಕೂಟ ಅಧಿಕಾರಿಗಳೊಂದಿಗೆ ನಡೆಸಿದ್ದ ಮಾತುಕತೆಯ ಧ್ವನಿ ಮತ್ತು ದೃಶ್ಯಾವಳಿಗಳೂ ಸಂತ್ರಸ್ತ ಅಧಿಕಾರಿ, ನೌಕರರ ಬಳಿ ಇವೆ!.
ಸಚಿವ ಬಿ ಸಿ ಪಾಟೀಲ್ ಅವರ ಹೆಸರು ಬಳಸಿ ಅವರ ಆಪ್ತಕೂಟ ಕೃಷಿ ಇಲಾಖೆ ಅಧಿಕಾರಿ, ನೌಕರರುಗಳಿಂದ ಲಕ್ಷಗಟ್ಟಲೇ ಸುಲಿಗೆ ಮಾಡಿದೆ ಎಂದು ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರ ಸದ್ದು ಮಾಡಿರುವ ಬೆನ್ನಲ್ಲೇ ಇದೇ ಇಲಾಖೆಯ ಗ್ರೂಪ್ ಎ , ಗ್ರೂಪ್ ಬಿ ಮತ್ತು ಗ್ರೂಪ್ ಸಿ ವರ್ಗದ ಅಧಿಕಾರಿ ನೌಕರರ ವರ್ಗಾವಣೆಯಲ್ಲಿಯೂ ಲಂಚಕ್ಕಾಗಿ ಬೇಡಿಕೆ ಇರಿಸಲಾಗಿತ್ತು ಎಂಬ ಮಾಹಿತಿಯನ್ನು ಸ್ವತಃ ಕೆಲ ಅಧಿಕಾರಿ, ನೌಕರರುಗಳೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ತಂದಿರುವುದು ಗೊತ್ತಾಗಿದೆ.
ಈ ಕುರಿತು ಒಂದಷ್ಟು ಅಧಿಕಾರಿಗಳು ಲಿಖಿತವಾಗಿ ಮುಖ್ಯಮಂತ್ರಿಗೆ 2020ರ ಜುಲೈ 1ರಂದು ಪತ್ರ ಮುಖೇನ ಗಮನಕ್ಕೆ ತಂದಿದ್ದಾರೆ ಎಂದು ಗೊತ್ತಾಗಿದೆ. ಈ ಪತ್ರದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
‘2020-21ನೇ ಸಾಲಿನ ಗ್ರೂಪ್ ಎ, ಗ್ರೂಪ್ ಮತ್ತು ಗ್ರೂಪ್ ಸಿ ವರ್ಗದ ಅಧಿಕಾರಿ/ನೌಕರರಿಗೆ ಮಾತ್ರ ಅನ್ವಯವಾಗುವಂತೆ 2020ರ ಜುಲೈ 10ರವರೆಗೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖೆ ಸಚಿವರುಗಳಿಗೆ ಅಧಿಕಾರಿ ಪ್ರತ್ಯಾಯೋಜಿಸಲಾಗಿದೆ. ಈ ಆದೇಶದ ಹಿನ್ನೆಲೆಯಲ್ಲಿ ಕೃಷಿ ಸಚಿವರಿಗೆ ಹಣ ಸಂದಾಯ ಮಾಡಬೇಕು ಎಂಬ ಸಬೂಬು ಹೇಳಿ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ತಮ್ಮ ಅಧೀನದಲ್ಲಿರುವ ಅಧಿಕಾರಿ/ನೌಕರರು ವರ್ಗಾವಣೆ ಪಡೆಯಬೇಕಾದರೆ ಅಥವಾ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಚೇರಿಗಳಲ್ಲಿಯೇ ಮುಂದುವರೆಯಬೇಕಾದರೆ ಲಕ್ಷ ರು.ಗಳನ್ನು ಕಡ್ಡಾಯವಾಗಿ ನೀಡಬೇಕು,’ ಎಂದು ಆದೇಶ ನೀಡಿರುತ್ತಾರೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಅಲ್ಲದೆ ಈ ಸಂಬಂಧ ಕೃಷಿ ಸಚಿವರ ಹಾಗೂ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳ ಹೇಳಿಕೆಗಳನ್ನು ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್ ಮಾಡಲಾಗಿದೆ ಎಂದೂ ನೌಕರರು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದಾರೆ ಎಂದು ಗೊತ್ತಾಗಿದೆ.
ಇನ್ನು, ಸಚಿವ ಬಿ ಸಿ ಪಾಟೀಲ್ ಅವರ ಆಪ್ತ ಕಾರ್ಯದರ್ಶಿ ಕೆಎಎಸ್ ಅಧಿಕಾರಿ ಸಿ ಎಲ್ ಶಿವಕುಮಾರ್, ಎ ಸಿ ಮಂಜುನಾಥ್, ದಯಾನಂದ ಎಂಬ ಆಪ್ತಕೂಟಕ್ಕೆ ಹಣ ಸಂದಾಯ ಮಾಡಿರುವ ಪಟ್ಟಿಯನ್ನೂ ಕೃಷಿ ಇಲಾಖೆ ಸಿಬ್ಬಂದಿಗಳು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಜಂಟಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್ 50 ಲಕ್ಷ, ಅಪರ ನಿರ್ದೇಶಕರುಗಳು 50 ಲಕ್ಷ, ಬೆಳಗಾವಿ ಜಂಟಿ ನಿರ್ದೇಶಕರು (ಜಿಲಾನಿ ಮತ್ತು ಪಾಟೀಲ್) 2 ಕೋಟಿ, ಕಲ್ಬುರ್ಗಿ ಜಂಟಿ ನಿರ್ದೇಶಕ (ಸೂಗೂರು) 1 ಕೋಟಿ, ರೂಪಾದೇವಿ 75 ಲಕ್ಷ, ಅಪರ ನಿರ್ದೇಶಕರು( ದಿವಾಕರ) 1 ಕೋಟಿ, ಚಿಕ್ಕಬಳ್ಳಾಪುರ ಜಂಟಿ ನಿರ್ದೇಶಕರು (ರೂಪ) 50 ಲಕ್ಷ, ದಾವಣಗೆರೆ ಜಂಟಿ ನಿರ್ದೇಶಕರು 50 ಲಕ್ಷ, ಜಂಟಿ ನಿರ್ದೇಶಕರು ಹಾವೇರಿ (ಮಂಜುನಾಥ್) 1 ಕೋಟಿ ನೀಡಿದ್ದಾರೆ ಎಂದು ಕೃಷಿ ಇಲಾಖೆ ಸಿಬ್ಬಂದಿ ಮುಖ್ಯ ಕಾರ್ಯದರ್ಶಿಗೆ ಪಟ್ಟಿ ಸಮೇತ ದೂರು ಸಲ್ಲಿಸಿರುವುದು ಗೊತ್ತಾಗಿದೆ.
ಆಪ್ತ ಕಾರ್ಯದರ್ಶಿ ಶಿವಕುಮಾರ್, ದಯಾನಂದ್ ಮತ್ತು ಮಂಜುನಾಥ್ ಎಂಬುವರು ಇಲಾಖೆಯ ಅಧಿಕಾರಿ, ನೌಕರರುಗಳಿಗೆ ವಾಟ್ಸಾಪ್ ಕರೆ ಮಾಡುವ ಮೂಲಕ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಪತ್ರದಲ್ಲಿ ದೂರಿರುವ ನೌಕರರು, ಕೃಷಿ ಯಾಂತ್ರೀಕರಣ, ಕೃಷಿ ಪರಿಕರ, ಕೀಟನಾಶಕಗಳು, ಸ್ಪ್ರಿಂಕಲ್/ಡ್ರಿಪ್‌ಗಳ ಅನುದಾನ ನೀಡುವುದರಲ್ಲಿಯೂ ಲೂಟಿ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.
‘ಈ ಪ್ರಕರಣ ಬಹಳ ಗಂಭೀರವಾದದ್ದು. ಕೃಷಿ ಇಲಾಖೆ ಸಿಬ್ಬಂದಿಗಳು ಬರೆದಿದ್ದಾರೆ ಎನ್ನಲಾಗಿರುವ ದೂರರ್ಜಿಯನ್ನು ಮುಖ್ಯ ಕಾರ್ಯದರ್ಶಿಗಳು ತಕ್ಷಣವೇ ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿಗೆ ನೇರವಾಗಿ ಕಳಿಸಿ ತುರ್ತಾಗಿ ಪ್ರಾಥಮಿಕ ತನಿಖೆ ನಡೆಸಲು ಆದೇಶಿಸಬೇಕು. ಹಾಗೆಯೇ ಬಿ ಸಿ ಪಾಟೀಲ್ ಅವರು ಈ ಪತ್ರದಲ್ಲಿ ಪ್ರಸ್ತಾಪಿತವಾಗಿರುವ ಅಧಿಕಾರಿ, ಏಜೆಂಟರ ಜತೆಗೆ ತಮಗಿರುವ ಸಂಬಂಧದ ಕುರಿತು ಕೂಡಲೇ ಸ್ಪಷ್ಟನೆ ನೀಡಬೇಕು,’
ರವಿ ಕೃಷ್ಣಾರೆಡ್ಡಿ, ಕರ್ನಾಟಕ ರಾಷ್ಟ್ರಸಮಿತಿ ರಾಜ್ಯಾಧ್ಯಕ್ಷ
‘ಅನುದಾನ ಯಾರಿಗೆ ಕೊಡಬೇಕು ಎಂದು ಏಜೆಂಟರುಗಳು ಮಂತ್ರಿಗಳ ಕಚೇರಿ, ವಸೂಲಿಗಾಗಿ ಪ್ರತ್ಯೇಕ ಕಚೇರಿ ತೆರೆದು ಯಾರು ಹೆಚ್ಚಿನ ಕಮಿಷನ್ ನೀಡುತ್ತಾರೋ ಉಪಕರಣಗಳು ಗುಣಮಟ್ಟದಿಂದ ಕೂಡಿಲ್ಲದಿದ್ದರೂ ಆಪ್ತ ಕಾರ್ಯದರ್ಶಿ, ಖಾಸಗಿ ಏಜೆಂಟರುಗಳು ಸೂಚಿಸುವ ವ್ಯಕ್ತಿಗಳಿಗೆ ಜಂಟಿ ನಿರ್ದೇಶಕರುಗಳು ಇಂಡೆಂಟ್‌ಗಳನ್ನು ನೀಡಬೇಕು. ಎಲ್ಲದಕ್ಕೂ ಮಂತ್ರಿಗಳ ಹೆಸರನ್ನು ಹೇಳಲಾಗುತ್ತಿದೆ,’ ಎಂದು ದೂರಿನಲ್ಲಿ ಆರೋಪಿಸಿರುವುದು ಗೊತ್ತಾಗಿದೆ.