ಒಂದು ಡೋಸ್‌ಗೆ ಪ್ರತಿಶತ 2000ರಷ್ಟು ಲಾಭ; ಸಾಂಕ್ರಾಮಿಕದಲ್ಲೂ ಲಾಭದ ರಾಜಕುಮಾರ

ಬೆಂಗಳೂರು; ಕೋವಿಡ್‌ 2ನೇ ಅಲೆಗೆ ತತ್ತರಿಸಿರುವ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬಲಪಂಥೀಯ ಸರ್ಕಾರವು ಈ ಮಹಾವಿಪತ್ತನ್ನು ತಗ್ಗಿಸುವ ಬದಲು ಲಸಿಕೆ ಉತ್ಪಾದಿಸುವ ಕಂಪನಿಗಳಿಗೆ ಲಾಭದ ಹೊಳೆಯನ್ನೇ ಹರಿಸಿರುವುದು ಮತ್ತು ಈ ಸಾಂಕ್ರಾಮಿಕವನ್ನು ಲಸಿಕೆ ತಯಾರಿಕೆ ಕಂಪನಿಗಳು ಹೇಗೆ ದುರುಪಯೋಗಪಡಿಸಿಕೊಂಡಿವೆ ಎಂಬುದು ಇದೀಗ ನಿಚ್ಚಳವಾಗಿ ಕಾಣಲಾರಂಭಿಸಿದೆ.

ಸಾಂಕ್ರಾಮಿಕ ಸಮಯದಲ್ಲಿ ಮಾನವೀಯತೆಯನ್ನೇ ಕಣ್ಮರೆಯಾಗಿಸಿದ ಮೋದಿ ಸರ್ಕಾರವು ಆಧಾರ್‌ ಪೂನಾವಾಲರಂತಹ ಲಸಿಕೆ ಉತ್ಪಾದಕ ದಿಗ್ಗಜನ ಉದ್ಯಮಶೀಲ ಬಳಕೆಗೆ ಅನುಕೂಲ ಮಾಡಿಕೊಟ್ಟಿತು. ಮತ್ತು ಇದರಿಂದ ಪೂನಾವಾಲನ ಒಡೆತನದಲ್ಲಿರುವ ಸಿರಮ್‌ ಕಂಪನಿಯು ಲಸಿಕೆ ಮಾರಾಟದಲ್ಲಿ ಗಳಿಸಿರುವ ಪ್ರತಿಶತ ಲಾಭಾಂಶವು ಯಾರ ಊಹೆಗೂ ನಿಲುಕದಂತಾಯಿಸಿತು.

ಕೋವಿಡ್‌ ಸಾಂಕ್ರಾಮಿಕದ ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಲಸಿಕೆ ತಯಾರಿಕೆ ಕಂಪನಿಗಳು ಹೇಗೆಲ್ಲಾ ಲಾಭ ಗಳಿಸಿವೆ ಮತ್ತು ಮೋದಿ ಸರ್ಕಾರದ ಲಸಿಕೆ ನೀತಿಯು ಈ ಕಂಪನಿಗಳಿಗೆ ಹೇಗೆ ಲಾಭದ ಹೊಳೆಯನ್ನು ಹರಿಸಿತ್ತು ಎಂಬುದನ್ನು ದಿ ಇಂಟರ್‌ಸೆಪ್ಟ್‌ ಸುದ್ದಿ ಜಾಲ ತಾಣ ವರದಿ ಮಾಡುವ ಮೂಲಕ ಲಸಿಕೆ ಉದ್ಯಮವನ್ನು ವಿಶ್ಲೇಷಿಸಿದೆ.

ದೇಶದ ಒಟ್ಟು ಲಸಿಕೆ ದಾಸ್ತಾನುಗಳಲ್ಲಿ 75 ಪ್ರತಿಶತವನ್ನು ನೇರವಾಗಿ ಕಂಪನಿಗಳಿಂದ ಸಂಗ್ರಹಿಸಿ ರಾಜ್ಯಗಳಿಗೆ ಉಚಿತವಾಗಿ ವಿತರಣೆ ಮಾಡುವ ಅಭಿಯಾನಕ್ಕೆ ಜೂನ್‌ 21ರಂದು ಚಾಲನೆ ಸಿಕ್ಕಿದೆ. ಆದರೂ ಲಸಿಕೆ ದಾಸ್ತಾನಿನ ಶೇ.25ರಷ್ಟು ಭಾಗವು ಖಾಸಗಿ ಆಸ್ಪತ್ರೆಗಳಿಗೆ ಬೆಲೆ ನಿಗದಿಗೊಳಿಸಿದರೂ ಅವುಗಳು ಶ್ರೀಮಂತರಿಗಷ್ಟೇ ಮೀಸಲಾಗಿರುತ್ತದೆ. ಲಸಿಕೆ ತಯಾರಕರ ಲಾಭದ ದರಗಳು ಪ್ರತಿಶತ 1,000ರ ಗಡಿ ದಾಟಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಕೋವಿಡ್‌ ಸಾಂಕ್ರಾಮಿಕ ರೋಗದುದ್ದಕ್ಕೂ ಮೋದಿ ಸರ್ಕಾರವು ಔಷಧೀಯ ಲಾಭವನ್ನು ತಡೆಯಲಾಗಲಿಲ್ಲ. ಸೀರಮ್ ಮತ್ತು ಭಾರತ್ ಬಯೋಟೆಕ್‌ಗೆ ಕ್ಲಿನಿಕಲ್ ಟ್ರಯಲ್ ಸಪೋರ್ಟ್ ಮತ್ತು ಉತ್ಪಾದನಾ ಪ್ರಗತಿಯನ್ನು ಒದಗಿಸಲು ತೆರಿಗೆದಾರರ ಹಣವನ್ನು ಬಳಸುತ್ತಿದ್ದರೂ ಸಹ ಭಾರತದ ಜನರಿಗೆ ಲಸಿಕೆಗಳನನ್ನು ಕೈಗೆಟುಕುವ ದರ ಒದಗಿಸುವಲ್ಲಿ ವಿಫಲವಾಗಿದೆ. ಕೇಂದ್ರ ಸರ್ಕಾರವು ತಲಾ $ 2 ಕ್ಕೆ ಎಲ್ಲಾ ಡೋಸ್‌ಗಳನ್ನು ಮೇ ವರೆಗೆ ಸಂಗ್ರಹಿಸಿತ್ತು. ಲಸಿಕೆ ಕಂಪನಿಗಳು ಪ್ರತಿಶತ 188 ರಿಂದ 500 ರಷ್ಟು ಲಾಭವನ್ನು ಗಳಿಸಿವೆ ಎಂದು ವರದಿಯಾಗಿದೆ.

ಭಾರತ ಸರ್ಕಾರವು ತನ್ನ ಲಸಿಕೆ ವಿತರಣೆಯಲ್ಲಿನ ‘ಉದಾರೀಕೃತ” ನೀತಿಯು ಬೆಲೆ ಏರಿಕೆಗೆ ದಾರಿಮಾಡಿಕೊಟ್ಟಿದೆ. ಇದು ಮಾರಾಟಗಾರರಿಗೆ ಅನುಕೂಲವಾಗಿಸುವ ಉದ್ದೇಶದಿಂದಲೇ ಮಾರುಕಟ್ಟೆಯನ್ನು ತೆರೆದಿಟ್ಟಿತು. ಮೇ 1 ರಿಂದ ಕೇಂದ್ರ ಸರ್ಕಾರವು ದೇಶದ ಎಲ್ಲಾ ಲಸಿಕೆಗಳ ಸಂಗ್ರಹ ಮತ್ತು ವಿತರಣೆಯನ್ನು ಸ್ಥಗಿತಗೊಳಿಸಿತು. ಇದರ ಬದಲಿಗೆ ಲಸಿಕೆ ಪೂರೈಕೆಯ ಅರ್ಧದಷ್ಟು ಮಾತ್ರ ಖರೀದಿಸಲು ಆರಂಭಿಸಿತು.

ಹೀಗಾಗಿ ಖಾಸಗಿ ಮಾರುಕಟ್ಟೆಯಲ್ಲಿ ಭಾರತದ 28 ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳು ಉಳಿದ ಪ್ರಮಾಣಗಳನ್ನು ಖರೀದಿಸಲು ಪೈಪೋಟಿ/ಸ್ಪರ್ಧೆಗಿಳಿಯುವಂತಾಯಿತು. ಅದು ಕೂಡ ಲಸಿಕೆ ಕಂಪನಿಗಳು ನಿಗದಿಪಡಿಸಿದ ಬೆಲೆಯಲ್ಲಿಯೇ ಖರೀದಿಸಲು ಸ್ಪರ್ಧಿಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದಂತಾಯಿತು. ಲಸಿಕೆ ದರ ನಿಗದಿಪಡಿಸುವ ವಿಚಾರದಲ್ಲಿ ಎಲ್ಲ ಅವಕಾಶಗಳನ್ನೂ ಬಂಡವಾಳಶಾಹಿಗಳಿಗೇ ಬಿಟ್ಟುಕೊಟ್ಟಿತು. ದೇಶದ ಲಸಿಕೆ ದಾಸ್ತಾನಿನ ಶೇ.25ರಷ್ಟನ್ನು ಖಾಸಗಿ ಆಸ್ಪತ್ರೆಗಳಿಗೆ ಕಾಯ್ದಿರಿಸಿತ್ತು. ಲಸಿಕೆ ಉತ್ಪಾದಕರು ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದರಿಂದ ಅಲ್ಲಿಯೂ ದರವೂ ಕೈಗೆಟುಕದಂತಾಯಿತು. ಇದೆಲ್ಲದರ ಒಟ್ಟಾರೆ ಸಾರಾಂಶವೆಂದರೆ ಭಾರತದ ಲಸಿಕೆ ಅಭಿಯಾನವು ಖಾಸಗಿ ವಲಯದ ಏಕಸ್ವಾಮ್ಯೀಕರಣಕ್ಕೆ ಅನುಕೂಲಕ್ಕೆ ತಕ್ಕಂತೆ ವಿನ್ಯಾಸಗೊಳಿಸಿತು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದಾರ್‌ ಪೂನವಾಲಾ ನೇತೃತ್ವದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಸಂಸ್ಥಾಪಕ ಕೃಷ್ಣ ಎಲಾ ನಿರ್ವಹಿಸುತ್ತಿರುವ ಭಾರತ್ ಬಯೋಟೆಕ್‌ ಕಂಪನಿಗಳು ತಮ್ಮ ಲಸಿಕೆಗಳನ್ನು ವಿಶ್ವದಲ್ಲೇ ಅಗ್ಗ ಎಂದು ಪದೇ ಪದೇ ಪ್ರಚಾರ ಮಾಡುತ್ತಿವೆಯಾದರೂ ಆ ಲಸಿಕೆಗಳು ನಿಜಾರ್ಥದಲ್ಲಿ ವಿಶ್ವದಲ್ಲೇ ಅತ್ಯಂತ ಲಾಭದಾಯಕವಾಗಿದ್ದವು ಎಂಬ ಅಂಶವನ್ನು ವರದಿ ಹೊರಗೆಡವಿದೆ.

ಸೀರಮ್‌ ಇನ್ಸಿಟಿಟ್ಯೂಟ್‌ ತಯಾರಿಸುವ ಕೋವಿಶೀಲ್ಡ್‌ ಲಸಿಕೆಯು ಖಾಸಗಿ ಆಸ್ಪತ್ರೆಗಳಿಗೆ ಮಾರಾಟವಾಗುವ ಪ್ರತಿ ಡೋಸ್‌ಗೆ ಸೀರಮ್ ಕಂಪನಿಯು ಪ್ರತಿಶತ 2,000ದಷ್ಟು ಲಾಭವನ್ನು ಗಳಿಸುತ್ತಿದೆ. ಹಾಗೆಯೇ ಭಾರತ್ ಬಯೋಟೆಕ್‌ ಪ್ರತಿಶತ 4,000 ಲಾಭ ಗಳಿಸುತ್ತಿದೆ. ಹಾಗೆಯೇ ಒಂದು ಡೋಸ್ ಉತ್ಪಾದನೆಯ ಅಂದಾಜು ವೆಚ್ಚದ ಆಧಾರದ ಮೇಲೆ ಫಿಜರ್ ಮತ್ತು ಮಾಡರ್ನಾದ ಲಾಭಾಂಶಗಳು ಕ್ರಮವಾಗಿ ಪ್ರತಿಶತ 650 ಮತ್ತು 500ರಷ್ಟು ಲಾಭ ಗಳಿಸುತ್ತಿವೆ ಎಂದು ದಿ ಇಂಟರ್‌ಸೆಪ್ಟ್‌ ವರದಿಯಲ್ಲಿ ವಿವರಿಸಲಾಗಿದೆ.

ಲಾಭದ ರಾಜಕುಮಾರ ಆದಾರ್‌ ಪೂನಾವಾಲಾ

ಲಾಭಕ್ಕಾಗಿಯೇ ಕೆಲಸ ಮಾಡುವ ಉದ್ಯಮಿ ಎಂದೇ ಕರೆಸಿಕೊಂಡಿರುವ ವಿಶ್ವದ ಅತಿದೊಡ್ಡ ಲಸಿಕೆ ತಯಾರಕನಾದ ಆಧಾರ್‌ ಪೂನಾವಾಲಾ ಕೋವಿಡ್‌ ಸಾಂಕ್ರಾಮಿಕದಲ್ಲಿ ಅತಿ ಹೆಚ್ಚು ಲಾಭಗಳಿಸಿದ್ದಾರೆ. ಹೀಗಾಗಿ ಇವರು ಸಾರ್ವಜನಿಕ ಹಿತದೃಷ್ಟಿಯಿಂದ ಕೆಲಸ ಮಾಡುವ ಮಾನವತಾವಾದಿಯಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಸಾಂಕ್ರಾಮಿಕ ಸಮಯದಲ್ಲಿ ಲಸಿಕೆ ತಯಾರಿಕೆ, ಮಾರಾಟದಿಂದ ಗಳಿಸಿದ ಲಾಭವೇ ಪೂನವಾಲ್ಲಾ ಅವರ ಆಸ್ತಿಯ ನಿವ್ವಳ ಮೌಲ್ಯವು ಐದು ತಿಂಗಳಲ್ಲಿ 85 ಪ್ರತಿಶತದಷ್ಟು ಹೆಚ್ಚಲು ಏಣಿಯನ್ನಾಗಿ ಬಳಸಿಕೊಳ್ಳಲಾಯಿತು.

ಪ್ರತಿವರ್ಷ 1.5 ಬಿಲಿಯನ್ ಡೋಸ್ ವಿವಿಧ ಲಸಿಕೆಗಳನ್ನು ತಯಾರಿಸುವ ಪುಣೆ ಮೂಲದ ಸೀರಮ್ ಅದನ್ನು 170 ದೇಶಗಳಲ್ಲಿ ಮಾರಾಟ ಮಾಡುತ್ತದೆ. ನಿಮಿಷಕ್ಕೆ 5,000 ಡೋಸ್ ಕೋವಿಶೀಲ್ಡ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕೋವಿಡ್ -19 ಲಸಿಕೆಗಾಗಿ ಸೀರಮ್ ಯು.ಎಸ್. ಕಂಪನಿ ನೋವಾವಾಕ್ಸ್‌ನೊಂದಿಗೆ ವಾಣಿಜ್ಯ ಸಹಭಾಗಿತ್ವದಲ್ಲಿ ಉತ್ಪಾದಿಸುತ್ತಿದೆ.

ಸೀರಮ್ ಬ್ರಿಟಿಷ್-ಸ್ವೀಡಿಷ್ ಕಂಪನಿ ಅಸ್ಟ್ರಾಜೆನೆಕಾ ಜೊತೆ 2020ರಲ್ಲಿ ಪಾಲುದಾರಿಕೆ ಹೊಂದಿತ್ತು. ಇದೊಂದು ಲಾಭದಾಯಕ ಒಪ್ಪಂದವಾಗಿತ್ತು. ಇದರ ಮೂಲಕ ಸೀರಮ್, ರಾಯಲ್ಟಿಗಳಿಗೆ ಬದಲಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಲಸಿಕೆಯನ್ನು ತಯಾರಿಸಿತು. ಇದೇ ಭಾರತದಲ್ಲಿ ಕೋವಿಶೀಲ್ಡ್ ಎಂದು ಕರೆಯಲ್ಪಡುತ್ತಿದೆ. ದೇಶದ ಲಸಿಕೆ ಮಾರುಕಟ್ಟೆ ಪಾಲಿನ 90 ಪ್ರತಿಶತವನ್ನು ಸೀರಮ್‌ ವಶಪಡಿಸಿಕೊಂಡಿದೆ. ಜಾಗತಿಕ ಲಸಿಕೆ ಹಂಚಿಕೆ ಮಾಡುವ ನಿಟ್ಟಿನಲ್ಲಿ ಈ ಕಂಪನಿಯು 200 ಮಿಲಿಯನ್ ಡೋಸ್‌ಗಳವರೆಗೆ ರಫ್ತು ಮಾಡಲು ಬದ್ಧವಾಗಿರುವುದು ವರದಿಯಿಂದ ಗೊತ್ತಾಗಿದೆ.

ವಿಶ್ವದ ಬಡವರಿಗೆ ಲಸಿಕೆ ಹಾಕಲು ಸೀರಮ್‌ನ ಉತ್ಪಾದನಾ ಸಾಮರ್ಥ್ಯ ಹೆಚ್ಚಾಗಬೇಕು ಎಂದು ಒತ್ತಿ ಹೇಳಿದ್ದರ ಹಿಂದೆಯೂ ಇತರ ತಯಾರಕರು ಲಸಿಕೆ ಮಾರುಕಟ್ಟೆಗೆ ಪ್ರವೇಶಿಸುವುದನ್ನು ತಡೆಗಟ್ಟುವ ಹುನ್ನಾರವೂ ಇಲ್ಲ ಎಂಬುದನ್ನು ಅಲ್ಲಗಳೆಯಲಾಗದು. ಅಷ್ಟೇ ಅಲ್ಲ ಸೀರಮ್‌ನ ಪ್ರಾಥಮಿಕ ಗುರಿ ಜಗತ್ತಿಗೆ ಸಮನಾಗಿ ಲಸಿಕೆ ನೀಡುವುದು ಅಥವಾ ಏಕಸ್ವಾಮ್ಯವನ್ನು ಒಡೆಯುವುದೂ ಅಲ್ಲ. ಬದಲಿಗೆ ಇದು ಭಾರತದೊಳಗೆ ಪ್ರಾಬಲ್ಯವನ್ನು ಉಳಿಸಿ ಹೆಚ್ಚಿಸಿಕೊಳ್ಳುವ ಜತೆಗೇ ಹೊಸ ಉತ್ಪಾದಕರು ಮಾರುಕಟ್ಟೆಗೆ ಬರದಂತೆ ಮತ್ತು ಅವರನ್ನು ಮೂಲೆಗುಂಪು ಮಾಡುವುದೇ ಆಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸೀರಮ್‌ ಕಂಪನಿ ಮಾತ್ರ ಲಸಿಕೆ ಲಾಭದಲ್ಲಿ ತೊಡಗಿಲ್ಲ. ಸಾರ್ವಜನಿಕ ನಿಧಿಯೊಂದಿಗೆ ಕೊವಾಕ್ಸಿನ್‌ನ್ನು ಅಭಿವೃದ್ಧಿಪಡಿಸಿದ ಭಾರತ್‌ ಬಯೋಟೆಕ್‌ ಕೂಡ ಡೋಸ್‌ಗೆ ಅತಿಯಾದ ದರವನ್ನೂ ವಿಧಿಸಿದೆ. ಕೋವಿಶೀಲ್ಡ್‌ನಂತೆ ಕೊವಾಕ್ಸಿನ್‌ನ್ನು ಯಾವುದೇ ದೊಡ್ಡ ಔಷಧ ಕಂಪನಿಯು ಪೇಟೆಂಟ್‌ನಿಂದ ನಿರ್ಬಂಧಿಸಿಲ್ಲ. ಕೊವಾಕ್ಸಿನ್‌ನ ಬೌದ್ಧಿಕ ಆಸ್ತಿ ಹಕ್ಕುಗಳ ಒಂದು ಭಾಗವನ್ನು ಭಾರತ ಸರ್ಕಾರ ನಿಯಂತ್ರಿಸುತ್ತದೆ. ಆದರೂ ಭಾರತ್‌ ಬಯೋಟೆಕ್‌ ಒಂದು ತಿಂಗಳ ಹಿಂದೆಯಷ್ಟೇ ಲಸಿಕೆ ಉತ್ಪಾದನೆಯನ್ನು ಏಕಸ್ವಾಮ್ಯಗೊಳಿಸಿತು.

the fil favicon

SUPPORT THE FILE

Latest News

Related Posts