ಬೆಂಗಳೂರು; ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಅಕ್ರಮ ಆಸ್ತಿ ಸಂಪಾದಿಸಿದ ಆರೋಪದಡಿ ಪ್ರಕರಣದಡಿಯಲ್ಲಿ ಕರ್ನಾಟಕ, ದೆಹಲಿ ಮತ್ತು ಮುಂಬೈನ 14 ಸ್ಥಳಗಳಲ್ಲಿ ಶೋಧ ಮುಂದುವರೆಸಿರುವ ಸಿಬಿಐ, ಅಂದಾಜು 57 ಲಕ್ಷ ಮತ್ತು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಸಿಬಿಐ, ದಾಳಿ ವೇಳೆಯಲ್ಲಿ ಆಸ್ತಿಪಾಸ್ತಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳು, ಕಂಪ್ಯೂಟರ್ ಹಾರ್ಡ್‌ಡಿಸ್ಕ್, ಬ್ಯಾಂಕ್ ವಹಿವಾಟಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ. ಅಲ್ಲದೆ ತನಿಖೆಯನ್ನು ಮುಂದುವರೆಸಿದೆ ಎಂದೂ ಹೇಳಿಕೆ ಬಿಡುಗಡೆ ಮಾಡಿದೆ.
74.93 ಕೋಟಿ ರು. ಮೊತ್ತದಲ್ಲಿ ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಆರೋಪದಡಿಯಲ್ಲಿ ಡಿ ಕೆ ಶಿವಕುಮಾರ್ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ, ಮಾರ್ಚ್ 2020ರಲ್ಲೇ ಪ್ರಾಥಮಿಕ ವಿಚಾರಣೆ ನಡೆಸಿತ್ತು.
‘ಕರ್ನಾಟಕದ ಒಂಭತ್ತು, ದೆಹಲಿಯ ನಾಲ್ಕು ಮತ್ತು ಮುಂಬೈನ ಒಂದು ಸ್ಥಳದಲ್ಲಿ ಶೋಧ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ. ಸಿಬಿಐನ ಬೆಂಗಳೂರು ಭ್ರಷ್ಟಾಚಾರ ನಿಗ್ರಹ ದಳ ಡಿ ಕೆ ಶಿವಕುಮಾರ್ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಮತ್ತು ಇತರ ಕಾಯ್ದೆಗಳ ಅಡಿಯಲ್ಲಿ ಪ್ರಕರಣ (RC-10/A/2020- BANGALORE) ದಾಖಲಿಸಿದೆ. ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆದು ಸೋಮವಾರ(2020 ಅಕ್ಟೋಬರ್ 5) ಬೆಳಿಗ್ಗೆಯೇ ದಾಳಿ ನಡೆಸಿತ್ತು.