ಕೋವಿಡ್‌-19 ಜಾಹೀರಾತಿನ ಜಾಲ; 3 ತಿಂಗಳಲ್ಲಿ 11 ಕೋಟಿ ವೆಚ್ಚ

ಬೆಂಗಳೂರು; ಕೋವಿಡ್‌-19 ನಿರ್ವಹಣೆಗಾಗಿ ಹಣವಿಲ್ಲ, ಸಂಪನ್ಮೂಲ ಸ್ಥಗಿತಗೊಂಡಿದೆ, ಖಜಾನೆ ಬರಿದಾಗಿದೆ ಎಂದೆಲ್ಲಾ ದೈನೈಸಿ ಸ್ಥಿತಿಯನ್ನು ಮುಂದಿರಿಸಿದ್ದ ರಾಜ್ಯ ಬಿಜೆಪಿ ಸರ್ಕಾರ, 2020ರ ಮಾರ್ಚ್‌ನಿಂದ ಮೇ ವರೆಗೆ ಒಟ್ಟು 11 ಕೋಟಿ ರು.ಗಳನ್ನು ಜಾಹೀರಾತಿಗಾಗಿ ವೆಚ್ಚ ಮಾಡಿದೆ.

ಅಲ್ಲದೆ 2019-20 ಮತ್ತು 2020-21ನೇ ಸಾಲಿನ ಆಗಸ್ಟ್‌ ಅಂತ್ಯಕ್ಕೆ ಪತ್ರಿಕೆಗಳು, ಟಿ ವಿ , ರೇಡಿಯೋಗಳಲ್ಲಿ ಪ್ರಸಾರವಾಗಿರುವ ಜಾಹೀರಾತಿಗೆ ರಾಜ್ಯ ಸರ್ಕಾರ ಒಟ್ಟಾರೆ 37 ಕೋಟಿ ರು. ವೆಚ್ಚ ಮಾಡಿದೆ.

2019-20ನೇ ಸಾಲಿನಲ್ಲಿ 22.34 ಕೋಟಿ, 2020-21ನೇ ಸಾಲಿನಲ್ಲಿ 15.43 ಕೋಟಿ ವೆಚ್ಚ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸದನಕ್ಕೆ ಮಾಹಿತಿ ನೀಡಿದ್ದಾರೆ. 2020-21ನೇ ಸಾಲಿನ ಆಗಸ್ಟ್‌ ಅಂತ್ಯಕ್ಕೆ ವೆಚ್ಚವಾಗಿರುವ 15.43 ಕೋಟಿ ರು.ಪೈಕಿ, 11.48 ಕೋಟಿ ರು. ಕೋವಿಡ್‌ ಸಂದರ್ಭದಲ್ಲಿ ವೆಚ್ಚ ಮಾಡಿದೆ ಎಂದು ಉತ್ತರದಲ್ಲಿ ತಿಳಿಸಿದ್ದಾರೆ.

ಕೋವಿಡ್‌-19ರ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಮತ್ತು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಂಬಂಧ ಜಾಹೀರಾತು ಬಿಡುಗಡೆ ಮಾಡಿದೆ. ಪತ್ರಿಕೆ, ಟಿ ವಿ, ರೇಡಿಯೋಗಳಿಗೆ ಜಾಹೀರಾತು ಹೆಸರಿನಲ್ಲಿ ಮಾಡಿರುವ ಒಟ್ಟು ವೆಚ್ಚದ ಮಾಹಿತಿಯನ್ನು ಒದಗಿಸಿರುವ ಯಡಿಯೂರಪ್ಪ ಅವರು, ಪತ್ರಿಕೆಗಳು, ಟಿ ವಿ ಗಳಿಗೆ ನೀಡಿರುವ ಜಾಹೀರಾತು ಮತ್ತು ಮಾಡಿರುವ ವೆಚ್ಚವನ್ನು ಪತ್ರಿಕೆವಾರು, ಟಿ ವಿ ಚಾನಲ್‌ವಾರು ಪ್ರತ್ಯೇಕವಾಗಿ ವಿವರ ನೀಡಿಲ್ಲ.

ಕೊರೊನಾ ವೈರಸ್‌ ರಾಜ್ಯಕ್ಕೆ ಪ್ರವೇಶ ಮಾಡಿದ ಮಾರ್ಚ್‌ನಲ್ಲಿ 4.36 ಕೋಟಿ, ಏಪ್ರಿಲ್‌ನಲ್ಲಿ 4.51 ಕೋಟಿ, ಮೇ ತಿಂಗಳಲ್ಲಿ 2.60 ಕೋಟಿ ರು.ಗಳನ್ನು ಜಾಹೀರಾತಿಗಾಗಿ ವ್ಯಯಿಸಿರುವುದು ಯಡಿಯೂರಪ್ಪ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

ಕೋವಿಡ್‌-19ರ ಕುರಿತು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು 15 ನಿಮಿಷ ಅವಧಿಯ ವಿಶೇಷ ಕಾರ್ಯಕ್ರಮ, ಕೋವಿಡ್‌-19ರ ಮುಂಜಾಗ್ರತಾ ಕ್ರಮ ಕುರಿತು ಮುಖ್ಯಮಂತ್ರಿ ಮಾಡಿದ್ದ ಮನವಿ, ವೈದ್ಯರು, ಶುಶ್ರೂಷಕರು, ವೈದ್ಯಕೀಯ ಸಿಬ್ಬಂದಿ ಮನವಿ, ರೈತರು ಬೆಳೆದ ಉತ್ಪನ್ನ, ತರಕಾರಿ ಮಾರುಕಟ್ಟೆಗಳಲ್ಲಿ ಮಾರಾಟ ಕುರಿತು, ಕೋವಿಡ್‌-19ರ ಸಹಾಯವಾಣಿ ಕುರಿತು ಪತ್ರಿಕಾ ಜಾಹೀರಾತು, ಕೋವಿಡ್‌ ಸುಳ್ಳು ಸುದ್ದಿ ತಡೆಗಟ್ಟುವ ಕುರಿತು 30 ಸೆಕೆಂಡಿನ ರೇಡಿಯೋ ಜಾಹೀರಾತು, ಕೋವಿಡ್‌-19ರ ಮುಂಜಾಗ್ರತೆ ಕುರಿತು 60 ಸೆಕೆಂಡಿನ ಜಾಹೀರಾತು, ವಲಸೆ ಕಟ್ಟಡ ಕಾರ್ಮಿಕರಿಗೆ ನೆರವಿನ ಕುರಿತು ಪತ್ರಿಕಾ ಜಾಹೀರಾತು, ಅಸಂಘಟಿತ ಕಾರ್ಮಿಕರ ಹಿತರಕ್ಷಣೆ ಕುರಿತು 70 ಸೆಕೆಂಡಿನ ಟಿ ವಿ ಜಾಹೀರಾತು, ಜನ್‌ಧನ್‌ ಮಹಿಳಾ ಖಾತೆಗಳಿಗೆ ನೇರ ಹಣ ಪಾವತಿ, ಕೋವಿಡ್‌-19ರ ರೈತರ ಹಿತರಕ್ಷಣೆ, ಅಗ್ರಿ ವಾರ್‌ರೂಂ ಸ್ಥಾಪನೆ, ಎಪಿಎಂಸಿ ತೆರೆದಿರುವುದು ಸೇರಿದಂತೆ ಕೋವಿಡ್‌-19ರ ಹಿನ್ನೆಲೆಯಲ್ಲಿ ಮೂರ್ನಾಲ್ಕು ದಿನಗಳ ಕಾಲ ಪತ್ರಿಕೆಗಳಿಗೆ, ಟಿ ವಿ ಗಳಿಗೆ ಜಾಹೀರಾತು ನೀಡಿದೆ.

ಅತಿಥಿ ಉಪನ್ಯಾಸಕರಿಗೆ ಗೌರವ ಸಂಭಾವನೆ, ಆಟೋ ಚಾಲಕರು, ತರಕಾರಿ, ಹೂ ಬೆಳೆಗಾರರು, ನೇಕಾರರು, ಸವಿತಾ ಸಮಾಜ, ವಲಸೆ ಕಟ್ಟಡ ಕಾರ್ಮಿಕರು ಸೇರಿದಂತೆ ಇನ್ನಿತರರಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡದ ಸರ್ಕಾರ, ಜಾಹೀರಾತು ಹೆಸರಿನಲ್ಲಿ ಕೇವಲ 3 ತಿಂಗಳಲ್ಲಿ 11 ಕೋಟಿ ರು. ವೆಚ್ಚ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.

ಅದೇ ರೀತಿ ಅತಿವೃಷ್ಟಿ, ಅನಾವೃಷ್ಟಿ ಸಂದರ್ಭವನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದರೂ 2019-20ರ ಪ್ರವಾಹ ಸಂದರ್ಭದಲ್ಲೂ ಒಟ್ಟು 22.34 ಕೋಟಿ ರು. ಜಾಹೀರಾತು ನೀಡಿದೆ. ಅತಿವೃಷ್ಟಿ ಸಂಬಂಧ ಮುಖ್ಯಮಂತ್ರಿ ಜನತೆಗೆ ಮಾಡಿದ್ದ ಮನವಿ, ಪ್ರಧಾನ ಮಂತ್ರಿ ಫಸಲ್‌ ಭೀಮಾ ಯೋಜನೆ, ಸಾಲಮನ್ನಾ ಕುರಿತು, ಬಾಗಿನ ಅರ್ಪಣೆ, ನೆರೆ ಸಂತ್ರಸ್ತರಿಗೆ ಪರಿಹಾರ ನೀಡಿರುವುದು, ಪ್ರವಾಹ ಪರಿಹಾರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿರುವುದು ಸೇರಿದಂತೆ ವಿವಿಧ ಸಂದರ್ಭಗಳನ್ನು ಮುಂದಿರಿಸಿಕೊಂಡು ಜಾಹೀರಾತು ನೀಡಿರುವುದು ಉತ್ತರದಿಂದ ಗೊತ್ತಾಗಿದೆ.

SUPPORT THE FILE

Latest News

Related Posts