ಕೊರೊನಾ ನಿರ್ವಹಣೆ; ಪಿ ಎಂ ಕೇರ್ಸ್ ನಿಧಿಯಿಂದ ರಾಜ್ಯಕ್ಕೆ ಬಿಡಿಗಾಸೂ ಬಂದಿಲ್ಲ

ಬೆಂಗಳೂರು; ಕೋವಿಡ್‌-19 ನಿರ್ವಹಣೆಗಾಗಿ ಪಿ. ಎಂ. ಕೇರ್ಸ್ ನಿಧಿಯಿಂದ ರಾಜ್ಯಕ್ಕೆ ಬಿಡಿಗಾಸೂ ಬಂದಿಲ್ಲ.

ಕರ್ನಾಟಕ ವಿಧಾನಪರಿಷತ್‌ ಸದಸ್ಯ ಎಂ ನಾರಾಯಣಸ್ವಾಮಿ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ‘ಕೊರೊನಾ ನಿರ್ವಹಣೆಗೆ ರಾಜ್ಯ ಸರ್ಕಾರಕ್ಕೆ ಪಿ ಎಂ ಕೇರ್ಸ್‌ ಫಂಡ್‌ನಿಂದ ಯಾವುದೇ ಅನುದಾನ ಬಂದಿರುವುದಿಲ್ಲ,’ ಎಂದು 2020ರ ಸೆ. 24ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉತ್ತರಿಸಿದ್ದಾರೆ.

ಮುಖ್ಯಮಂತ್ರಿ ಪರಿಹಾರ ನಿಧಿಯ ಕೋವಿಡ್‌-19 ಖಾತೆಗೆ ಈವರೆವಿಗೂ 307.11 ಕೋಟಿ ರು. ಸಂಗ್ರಹವಾಗಿದೆ. ಈ ಪೈಕಿ 170.21 ಕೋಟಿ ರು.ಗಳನ್ನು ಇಲಾಖೆಗಳಿಗೆ ಬಿಡುಗಡೆ ಮಾಡಿದೆ. ಇದರಲ್ಲಿ ಆರೋಗ್ಯ,ಕುಟುಂಬ ಕಲ್ಯಾಣ ಇಲಾಖೆಗೆ 109.85 ಕೋಟಿ, ವೈದ್ಯಕೀಯ ಶಿಕ್ಷಣ ಇಲಾಖೆಗೆ 51.25 ಕೋಟಿ, ಕಂದಾಯ ಇಲಾಖೆಗೆ 9.11 ಕೋಟಿ ರು. ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಯಡಿಯೂರಪ್ಪ ಅವರು ವಿವರ ಒದಗಿಸಿದ್ದಾರೆ.

 

ಕೋವಿಡ್ ವಿರುದ್ಧದ ಹೋರಾಟಕ್ಕೆಂದು ಪ್ರಾರಂಭಿಸಲಾಗಿದ್ದ ಪಿಎಂ-ಕೇರ್ಸ್‌ ನಿಧಿಯಲ್ಲಿ ಸಂಗ್ರಹವಾಗಿರುವ ಒಟ್ಟು ಮೊತ್ತದಲ್ಲಿ 3,100 ಕೋಟಿ ರೂ. ಮೊತ್ತವನ್ನು ವೆಂಟಿಲೇಟರ್‌ಗಳು, ವಲಸಿಗರ ಕಲ್ಯಾಣಕ್ಕೆ ಬಳಸಿಕೊಳ್ಳುವುದಾಗಿ ಪ್ರಧಾನಿ ಕಾರ್ಯಾಲಯ 2020ರ ಮೇ 14ರಂದು ಘೋಷಿಸಿತ್ತು.

ಇನ್ನು ವಲಸೆ ಕಾರ್ಮಿಕರ ಸಹಾಯಕ್ಕಾಗಿ ಬಿಡುಗಡೆ ಮಾಡಲಾಗಿರುವ 1000 ಕೋಟಿ ರೂಪಾಯಿಗಳನ್ನು ಎಲ್ಲಾ ರಾಜ್ಯ ಸರಕಾರಗಳಿಗೆ ಹಂಚಿಕೆ ಮಾಡಲಾಗುವುದು. ಜಿಲ್ಲಾಧಿಕಾರಿಗಳು ಅಥವಾ ಮುನ್ಸಿಪಲ್ ಕಮಿಷನರ್ ಗಳ ಮೂಲಕ ವಲಸೆ ಕಾರ್ಮಿಕರಿಗೆ ಆಹಾರ ಸಹಿತ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಉದ್ದೇಶಕ್ಕಾಗಿ ವಿನಿಯೋಗಿಸಲಾಗುವುದು ಎಂದು ಘೋಷಿಸಿದ್ದನ್ನು ಸ್ಮರಿಸಬಹುದು.

3,100 ಕೋಟಿ ರೂ.ಗಳ ಪೈಕಿ ಸುಮಾರು 2 ಸಾವಿರ ಕೋಟಿ ರೂ.ಗಳನ್ನು ವೆಂಟಿಲೇಟರ್‌ಗಳ ಖರೀದಿಗೆಂದು ಮೀಸಲಿಡಲಾಗಿದೆ. ಒಂದು ಸಾವಿರ ಕೋಟಿ ರೂ.ಗಳನ್ನು ವಲಸೆ ಕಾರ್ಮಿಕರ ಕಲ್ಯಾಣಕ್ಕೆ ಹಾಗೂ 100 ಕೋಟಿ ರೂ.ಗಳನ್ನು ಲಸಿಕೆ ಅಭಿವೃದ್ಧಿಪಡಿಸಲೆಂದು ಬಳಸಲಾಗುವುದು ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿತ್ತು.

ಹಾಗೆಯೇ ಭಾರತದಲ್ಲೇ ತಯಾರಾಗಿರುವ 50 ಸಾವಿರ ವೆಂಟಿಲೇಟರ್ ಗಳ ಖರೀದಿ ವೆಚ್ಚವನ್ನು ಈ ನಿಧಿಯ ಮೂಲಕವೇ ಪಾವತಿ ಮಾಡಲಾಗುವುದು ಮತ್ತು ಈ ವೆಂಟಿಲೇಟರ್ ಗಳು ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಸರಕಾರಗಳು ನಡೆಸುತ್ತಿರುವ ಕೋವಿಡ್ 19 ಆಸ್ಪತ್ರೆಗಳಿಗೆ ಪೂರೈಸಲಾಗುವುದು ಎಂದು ಹೇಳಿತ್ತು.

‘ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ತುರ್ತುಸ್ಥಿತಿ ಅಥವಾ ಬೇರೆ ಯಾವುದೇ ರೀತಿಯ ತುರ್ತುಸ್ಥಿತಿ, ಪ್ರಕೃತಿ ವಿಕೋಪ, ಮಾನವ ನಿರ್ಮಿತ ದುರಂತದಂತಹ ಪರಿಸ್ಥಿತಿಗಳಲ್ಲಿ ಈ ನಿಧಿಯನ್ನು ಬಳಸಲಾಗುತ್ತದೆ. ವೈದ್ಯಕೀಯ ಸವಲತ್ತುಗಳನ್ನು ಮೇಲ್ದರ್ಜೆಗೆ ಏರಿಸುವ ಮತ್ತು ಮೇಲೆ ವಿವರಿಸದೇ ಇರುವಂತಹ ತುರ್ತು ಸಂದರ್ಭಗಳಲ್ಲಿ ಈ ನಿಧಿ ಬಳಸಲಾಗುತ್ತದೆ’ ಎಂದು ಪಿಎಂ ಕೇರ್ಸ್‌ನ ಅಧಿಕೃತ ಜಾಲತಾಣದಲ್ಲಿ ವಿವರಿಸಲಾಗಿದೆ.

ಪಿಎಂಎನ್‌ಆರ್‌ಎಫ್ ನಿಧಿಯಲ್ಲಿ ಇರುವ ಹಣವನ್ನು ಕೋವಿಡ್–19 ವಿರುದ್ಧದ ಹೋರಾಟಕ್ಕೆ ಮಾತ್ರ ಬಳಸಲಾಗುತ್ತದೆಯೇ ಇಲ್ಲವೇ ಎಂಬುದರ ಬಗ್ಗೆ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ. ಪಿಎಂ ಕೇರ್ಸ್‌ ನಿಧಿ ಸ್ಥಾಪನೆಯಾಗಿ ವಾರದಲ್ಲಿ ₹ 6,500 ಕೋಟಿ ಜಮೆಯಾಗಿದೆ ಎಂದು ಕೆಲವು ಸುದ್ದಿತಾಣಗಳು ವರದಿ ಮಾಡಿದ್ದವು.

the fil favicon

SUPPORT THE FILE

Latest News

Related Posts