Thursday | November 19, 2026 |

ಸೋರಿಕೆಯಾದ ಪ್ರಶ್ನೆಪತ್ರಿಕೆಯಿಂದಲೇ ಆಯ್ಕೆಯಾಗಿದ್ದ ರಾಜ್‌ ಮೊಹಮ್ಮದ್‌; ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲು ಬಿಜೆಪಿ ಸರ್ಕಾರದ ಅವಧಿಯಲ್ಲೇ 4 ಕೋಟಿ ಸಂಗ್ರಹ ಆರೋಪ

ಬೆಂಗಳೂರು;  ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಅಕ್ರಮದ ವಿವಿಧ ಮುಖಗಳನ್ನು ಪರಿಚಯಿಸಿರುವ ಜಾರಿ ನಿರ್ದೇಶನಾಲಯವು  ದೋಷಾರೋಪಣೆ ಪಟ್ಟಿಯು ಈ ನೇಮಕಾತಿಗೆ 2020ರಲ್ಲಿಯೇ ನೇಮಕಾತಿ ಅಧಿಸೂಚನೆ ಹೊರಡಿಸಲು ಅರ್ಹ ಪಶು ವೈದ್ಯರಿಂದ ಸುಮಾರು 4 ಕೋಟಿ ಸಂಗ್ರಹಿಸಲಾಗಿತ್ತು ಎಂಬ ಮತ್ತೊಂದು ಸ್ಪೋಟಕ ಮಾಹಿತಿಯನ್ನು ಬಹಿರಂಗಪಡಿಸಿದೆ.

ಈ ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿರುವ ಬಸವರಾಜ ಕನ್ನಾಳೆಯು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದವರೊಬ್ಬರೊಂದಿಗೆ ನಿಕಟವಾದ ಸಂಪರ್ಕ ಹೊಂದಿದ್ದ ಎಂಬ ಮಾತುಗಳು ಕೇಳಿ ಬಂದಿರುವ ನಡುವೆಯೇ ಇದೇ ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ 4 ಕೋಟಿ ಸಂಗ್ರಹಿಸಲಾಗಿತ್ತು ಎಂದು ಅಭ್ಯರ್ಥಿಯೊಬ್ಬರು ಜಾರಿ  ನಿರ್ದೇಶನಾಲಯದ ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯು ಈ ಅಕ್ರಮದ ಮತ್ತೊಂದು ಮುಖವನ್ನು ತೆರೆದಿಟ್ಟಂತಾಗಿದೆ.

ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯ  ಪ್ರತಿ ದಿ ಫೈಲ್ ಗೆ ಲಭ್ಯವಾಗಿದೆ.

ಪಶು ವೈದ್ಯಾಧಿಕಾರಿ ಹುದ್ದೆಗಳಿಗೆ ಬರೆದಿದ್ದ  ಪರೀಕ್ಷೆಯಲ್ಲಿ ಉತ್ತಮ ಸ್ಥಾನ ಪಡೆದಿದ್ದ ಡಾ ರಾಜ್‌ ಮೊಹಮ್ಮದ್ ಎಂಬುವರು ಜಾರಿ ನಿರ್ದೇಶನಾಲಯಕ್ಕೆ 2026ರ ಆಗಸ್ಟ್‌  27 ಮತ್ತು 28ರಂದು ನೀಡಿರುವ ಹೇಳಿಕೆಯಲ್ಲಿ  ಈ ಮಾಹಿತಿ ಇದೆ.  ಕೆಪಿಎಸ್‌ಸಿಯು 2026ರ ಜನವರಿ 9ರಂದು ನಡೆಸಿದ್ದ ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ಪರೀಕ್ಷೆಗೆ ಹಾಜರಾಗಿದ್ದ  ಡಾ. ರಾಜ್ ಮೊಹಮ್ಮದ್ ಅವರು ಮೊದಲ ಸ್ಥಾನ ಪಡೆದು ಆಯ್ಕೆಯಾಗಿದ್ದರು. ಇವರು ತಮ್ಮ ಸಹೋದ್ಯೋಗಿ ಡಾ. ಓಂ ಪ್ರಕಾಶ್ ಅವರ ಮೂಲಕ  ಪವನ್ (ಮೊಬೈಲ್ ಸಂಖ್ಯೆ: 9180125725) ಅವರನ್ನು ಸಂಪರ್ಕಿಸಿದ್ದರು.

ಬೆಂಗಳೂರಿನ ವಿಲ್ಲಾವೊಂದರಲ್ಲಿ  ಬಸವರಾಜ್ ಕನ್ನಾಳೆ ಅವರ ಸಮ್ಮುಖದಲ್ಲಿ ಅವರಿಗೆ ಉತ್ತರಗಳ ಸಹಿತ ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ನೀಡಲಾಗಿತ್ತು. ಅದಕ್ಕಾಗಿ ₹30 ಲಕ್ಷ ಅಕ್ರಮ ಹಣ ಪಾವತಿಸಲು ಅವರು ಒಪ್ಪಿಕೊಂಡಿದ್ದರು. ಈ ಮೊತ್ತದಲ್ಲಿ ₹5 ಲಕ್ಷವನ್ನು ಮುಂಗಡವಾಗಿ ಪಾವತಿಸಿದ್ದರು ಎಂದು ಹೇಳಿಕೆಯಲ್ಲಿ ರಾಜ್‌ ಮೊಹಮದ್ ವಿವರಿಸಿರುವುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.

ಹೇಳಿಕೆಯ ಸಾರಾಂಶದಲ್ಲೇನಿದೆ?

ರಾಜ್ ಮೊಹಮ್ಮದ್ ಅವರು  ಹಾಸನದಲ್ಲಿ ಪಶುವೈದ್ಯಕೀಯ ಪದವಿಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. 2023ರಲ್ಲಿ ಬೀದರ್‌ನ ಪಶುವೈದ್ಯಕೀಯ ಕಾಲೇಜಿನಿಂದ ಪಶುವೈದ್ಯಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು. ಪ್ರಸ್ತುತ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ದೋರನಹಳ್ಳಿ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಪಶುವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ತಿಂಗಳಿಗೆ ಸುಮಾರು ₹50,000 ವೇತನ ಪಡೆಯುತ್ತಿದ್ದಾರೆ.

2026ರ ಜನವರಿ 9ರಂದು  ಬೆಂಗಳೂರಿನ ಯಲಹಂಕದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪಶುವೈದ್ಯಾಧಿಕಾರಿಗಳ ಪರೀಕ್ಷೆಗೆ (ನೋಂದಣಿ ಸಂಖ್ಯೆ: 241418629) ಹಾಜರಾಗಿದ್ದರು. 600 ಅಂಕಗಳಲ್ಲಿ 481.50 ಅಂಕಗಳನ್ನು ಪಡೆದು ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ್ದರು. ಇವರು  ನಾರಾಯಣ ಪ್ರಸಾದ್ (Vet Informatics) ಅವರಿಂದ ಆನ್‌ಲೈನ್ ತರಬೇತಿ ಪಡೆದಿದ್ದರು.

ರಾಜ್‌ ಮೊಹ್ಮದ್‌ ಅವರ ತಂದೆ ಮಾರ್ಚ್ 2026ರಲ್ಲಿ ₹25 ಲಕ್ಷದ ಗೃಹ ಸಾಲ ಪಡೆದಿದ್ದರು. 2025ರ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ, ತಮ್ಮ ಸಹೋದ್ಯೋಗಿ ಡಾ. ಓಂ ಪ್ರಕಾಶ್ (ಮೊಬೈಲ್ ಸಂಖ್ಯೆ: 7353506689) ಅವರು ಯಾದಗಿರಿಯ ಪಶುವೈದ್ಯಕೀಯ ಪಾಲಿಕ್ಲಿನಿಕ್‌ನ ಹೊರಭಾಗದಲ್ಲಿ ವ್ಯಕ್ತಿಯೊಬ್ಬರನ್ನು ಪರಿಚಯಿಸಿದ್ದರು ಎಂದು ಅವರು ತನಿಖಾಧಿಕಾರಿಗೆ ತಿಳಿಸಿದ್ದರು.  ಆ ವ್ಯಕ್ತಿಯ ಹೆಸರು ಪವನ್ (ಮೊಬೈಲ್ ಸಂಖ್ಯೆ: 9180125725) ಎಂದು ಅಸ್ಪಷ್ಟವಾಗಿ ನೆನಪಿದೆ.  ಅವರ ವಯಸ್ಸು ಸುಮಾರು 26–28 ವರ್ಷಗಳಿರಬಹುದು ಎಂದು ತನಿಖಾಧಿಕಾರಿಗೆ ಮಾಹಿತಿ ನೀಡಿರುವುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.

 

 

ಪವನ್ ಅವರು ‘₹70–80 ಲಕ್ಷ ಪಾವತಿಸಿದರೆ ಖಚಿತವಾಗಿ ಆಯ್ಕೆ ಮಾಡಿಸುವುದಾಗಿ ಭರವಸೆ ನೀಡಿದ್ದರು,’. ಇನ್ನಷ್ಟು ಅಭ್ಯರ್ಥಿಗಳನ್ನು ಪರಿಚಯಿಸಿದರೆ ಹಣದ ಮೊತ್ತವನ್ನು ಕಡಿಮೆ ಮಾಡುವುದಾಗಿಯೂ ತಿಳಿಸಿದ್ದರು.ತಮಗೆ ಅಷ್ಟು ಹಣ ಪಾವತಿಸಲು ಸಾಧ್ಯವಿಲ್ಲದ ಕಾರಣ, ಡಾ. ಓಂ ಪ್ರಕಾಶ್ ಅವರ ಮೂಲಕ ಮಾತುಕತೆ ನಡೆಸಿ ಬೇಡಿಕೆಯ ಮೊತ್ತವನ್ನು ₹30 ಲಕ್ಷಕ್ಕೆ ಇಳಿಸಲಾಗಿತ್ತು. 5 ಲಕ್ಷವನ್ನು ಮುಂಗಡವಾಗಿ ಪಾವತಿಸಬೇಕು.  ಮತ್ತು ಉಳಿದ ₹25 ಲಕ್ಷವನ್ನು ನೇಮಕಾತಿಯ ನಂತರ ಪಾವತಿಸಬೇಕು ಎಂಬ ಒಪ್ಪಂದವಾಗಿತ್ತು. ಉಳಿದ ಮೊತ್ತ ಪಾವತಿಸಲು ಸಾಲದ ವ್ಯವಸ್ಥೆ ಮಾಡಿಕೊಡುವುದಾಗಿ  ಪವನ್ ಭರವಸೆ ನೀಡಿದ್ದರು ಎಂದು ರಾಜ್‌ ಮೊಹಮ್ಮದ್‌ ಅವರು ತನಿಖಾಧಿಕಾರಿಗೆ ನೀಡಿರುವ ಹೇಳಿಕೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಬಹುತೇಕ ಎಲ್ಲಾ ಅಭ್ಯರ್ಥಿಗಳನ್ನು ಮಧ್ಯವರ್ತಿಗಳು ಸಂಪರ್ಕಿಸಿ, ಲಂಚ ಪಾವತಿಸದೆ ಕೆಪಿಎಸ್‌ಸಿಯಲ್ಲಿ  ಆಯ್ಕೆಯಾಗಲು ಸಾಧ್ಯವಿಲ್ಲ ಎಂದು ತಿಳಿಸುತ್ತಿದ್ದರು. ಆದ್ದರಿಂದ ತಾನು ಇದಕ್ಕೆ ಒಪ್ಪಿಕೊಂಡಿದ್ದೆ. 2026ರ ಜನವರಿ 5ರಂದು  ಪವನ್ ಅವರು ವಾಟ್ಸಾಪ್ ಮೂಲಕ ಕರೆ ಮಾಡಿ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದರು. ಅದರಂತೆ, ಯಾದಗಿರಿಯಿಂದ ಕೆಎಸ್‌ಆರ್‍‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿ 2026ರ ಜನವರಿ 7ರಂದು ಬೆಳಿಗ್ಗೆ ಸುಮಾರು 7:00 ಗಂಟೆಗೆ  ಸಲೀಂ  ಅವರೊಂದಿಗೆ ಬೆಂಗಳೂರಿಗೆ ತಲುಪಿದ್ದರು ಎಂದು ರಾಜ್‌ ಮೊಹಮ್ಮದ್‌ ಅವರು ತನಿಖಾಧಿಕಾರಿಗೆ ನೀಡಿರುವ ಹೇಳಿಕೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

2026ರ ಜನವರಿ 8ರಂದು  ಸಲೀಂ, ಬಸವರಾಜ್ ಮತ್ತು  ಸಿದ್ಧಾರ್ಥ ಅವರೊಂದಿಗೆ ಹೆಬ್ಬಾಳದಲ್ಲಿರುವ ಹೋಟೆಲ್ ವೈಟ್ ಲೋಟಸ್‌ಗೆ ಸ್ಥಳಾಂತರಗೊಂಡಿದ್ದರು. ಈ ಎರಡೂ ವಾಸ್ತವ್ಯಗಳಿಗೆ ಸಂಬಂಧಿಸಿದ ಯಾವುದೇ ಬಿಲ್‌ಗಳು ಅಥವಾ ಪಾವತಿ ಪುರಾವೆಗಳನ್ನು ಅವರು ಒದಗಿಸಲು ಸಾಧ್ಯವಾಗಲಿಲ್ಲ. ಅಲ್ಲದೆ, ಹೋಟೆಲ್ ಬದಲಾಯಿಸಿದ್ದಕ್ಕೆ ಯಾವುದೇ ನಿರ್ದಿಷ್ಟ ಕಾರಣವನ್ನೂ ನೀಡಲಿಲ್ಲ ಎಂದು ತನಿಖಾಧಿಕಾರಿಯು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿದ್ದಾರೆ.

ಮೊಬೈಲ್ ಫೋನ್‌ ಗೆ ನಿರ್ಬಂಧಿಸಿದ್ದ ಪವನ್

ತಮ್ಮ ಮೊಬೈಲ್ ಫೋನ್ ಅನ್ನು ಜೊತೆಯಲ್ಲಿ ತರಬಾರದು ಎಂದು ಪವನ್ ಸೂಚಿಸಿದ್ದರು. ಆದ್ದರಿಂದ ಮೊಬೈಲ್ ಫೋನ್ ಅನ್ನು ತಮ್ಮ ಸ್ನೇಹಿತರ ಬಳಿ ಬಿಟ್ಟು ಬಂದಿದ್ದಾಗಿ ತಿಳಿಸಿದರು. ಸಂಜೆ ಸುಮಾರು 6:00ರಿಂದ 7:00 ಗಂಟೆಯ ನಡುವೆ  ಪವನ್ ಅವರು ಬಿಳಿ ಬಣ್ಣದ ಕಾರಿನಲ್ಲಿ ಹೋಟೆಲ್ ವೈಟ್ ಲೋಟಸ್‌ನಿಂದ ಅವರನ್ನು ಕರೆದುಕೊಂಡು ಹೋಗಿದ್ದರು. ಸುಮಾರು ಒಂದೂವರೆ ಗಂಟೆಯಿಂದ ಎರಡು ಗಂಟೆಗಳ ಕಾಲ ಪ್ರಯಾಣಿಸಿದ ನಂತರ ಅವರು ಡ್ಯುಪ್ಲೆಕ್ಸ್ ವಿಲ್ಲಾವೊಂದಕ್ಕೆ ತಲುಪಿದರು. ಅಲ್ಲಿ  ಬಸವರಾಜ್ ಕನ್ನಾಳೆ ಅವರನ್ನು ಭೇಟಿಯಾಗಿದ್ದರು.

 

 

ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆ ಮಾಡಿದ್ದ ಕನ್ನಾಳೆ

ಬಸವರಾಜ್ ಕನ್ನಾಳೆ ಅವರ ವ್ಯಕ್ತಿಗಳು ರಾಜ್‌ ಮೊಹಮ್ಮದ್‌  ಅವರನ್ನು ತಪಾಸಣೆ ನಡೆಸಿ, ಮೆಟಲ್ ಡಿಟೆಕ್ಟರ್ ಮೂಲಕ ಪರೀಕ್ಷಿಸಿದ್ದರು.  ಅವರ ಪದವಿಪೂರ್ವ ಬ್ಯಾಚ್‌ಮೇಟ್ ಕಿರಣ್ ಗೌಡ ಸೇರಿದಂತೆ ಸುಮಾರು 15–20 ಅಭ್ಯರ್ಥಿಗಳನ್ನು ಮೇಲಿನ ಮಹಡಿಯ ಮಲಗುವ ಕೋಣೆಯಲ್ಲಿ ರಾತ್ರಿ ಪೂರ್ತಿ ಇರಿಸಲಾಗಿತ್ತು ಮತ್ತು ಅವರ ಮೇಲೆ ನಿಗಾ ಇಡಲಾಗಿತ್ತು.  ಸಾಮಾನ್ಯ ಅಧ್ಯಯನ (General Studies) ಮತ್ತು ನಿರ್ದಿಷ್ಟ ವಿಷಯದ (Specific) ಪ್ರಶ್ನೆಪತ್ರಿಕೆಗಳ ಮುದ್ರಿತ ಪ್ರತಿಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನೀಡಲಾಗಿತ್ತು. ಅವುಗಳಲ್ಲಿ ಸರಿಯಾದ ಉತ್ತರಗಳನ್ನು ಪೆನ್ನಿನಿಂದ ಗುರುತಿಸಲಾಗಿತ್ತು. ಈ ಪ್ರಶ್ನೆಪತ್ರಿಕೆಗಳನ್ನು ಅಭ್ಯರ್ಥಿಗಳ ನಡುವೆ ಸರದಿಯಂತೆ ಹಂಚಲಾಗುತ್ತಿತ್ತು ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಹಣದ ಕುರಿತು ಎಚ್ಚರಿಕೆ ನೀಡಿದ್ದ ಕನ್ನಾಳೆ

ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಪಾವತಿಸಿದ ಹಣದ ಕುರಿತು ಯಾರಿಗೂ ಬಹಿರಂಗಪಡಿಸಬಾರದು ಎಂದು  ಬಸವರಾಜ್ ಕನ್ನಾಳೆ ಅವರು ಅಭ್ಯರ್ಥಿಗಳಿಗೆ ಎರಡು-ಮೂರು ಬಾರಿ ಎಚ್ಚರಿಕೆ ನೀಡಿದ್ದರು. 2026ರ ಜನವರಿ 9ರಂದು ಬೆಳಿಗ್ಗೆ  ಪವನ್ ಅವರು ತಮ್ಮೊಂದಿಗೆ ಬಂದಿದ್ದರು.  ಅವರು ಒದಗಿಸಿದ್ದ ವಾಹನಗಳಲ್ಲಿ ಅಭ್ಯರ್ಥಿಗಳನ್ನು ಅವರವರ ಪರೀಕ್ಷಾ ಕೇಂದ್ರಗಳಿಗೆ ಕರೆದೊಯ್ಯಲಾಗಿತ್ತು. ನೈಜ ಪರೀಕ್ಷೆಯಲ್ಲಿ ವಿಲ್ಲಾದಲ್ಲಿ ನೀಡಲಾಗಿದ್ದ ಅದೇ ಪ್ರಶ್ನೆಗಳು ಬಂದಿದ್ದವು ಎಂದು ರಾಜ್‌ ಮೊಹಮ್ಮದ್ ಅವರು ಹೇಳಿಕೆಯಲ್ಲಿ ವಿವರಿಸಿದ್ದರು.

ಮುಂಗಡವಾಗಿ 5 ಲಕ್ಷ ನಗದು ಪಡೆದಿದ್ದ ಕನ್ನಾಳೆ

ರಾಜ್‌ ಮೊಹಮ್ಮದ್ ಅವರು 2026ರ ಜನವರಿ 8ರಂದು  ಮುಂಗಡವಾಗಿ ₹5 ಲಕ್ಷ ನಗದನ್ನು  ಬಸವರಾಜ್ ಕನ್ನಾಳೆ ಅವರಿಗೆ ಪಾವತಿಸಿದ್ದರು.  ಉಳಿದ ₹25 ಲಕ್ಷವನ್ನು ನೇಮಕಾತಿಯ ನಂತರ ಸಾಲ ಪಡೆದು ಪಾವತಿಸಬೇಕಾಗಿತ್ತು. ತಮ್ಮ ಬಳಿ ಚೆಕ್‌ಗಳು ಇರಲಿಲ್ಲ. ಹೀಗಾಗಿ  ಬಾಕಿ ಹಣ ಪಾವತಿಸಿದ ನಂತರ ಹಿಂದಿರುಗಿಸುವುದಾಗಿ ತಿಳಿಸಿದ್ದರು. ಭದ್ರತೆಗಾಗಿ ಬಸವರಾಜ್ ಕನ್ನಾಳೆ ಅವರು ತಮ್ಮಿಂದ ಸಹಿ ಮಾಡಿದ್ದ ಖಾಲಿ ಪ್ರಾಮಿಸರಿ ನೋಟ್ ಒಂದನ್ನು ಪಡೆದುಕೊಂಡಿದ್ದರು ಎಂದು ಹೇಳಿಕೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಸುಮಾರು 15 ದಿನಗಳ ಹಿಂದೆಯೇ ತಮ್ಮ OMR ಉತ್ತರ ಪತ್ರಿಕೆಯನ್ನು ಸಿಐಡಿಗೆ ಸಲ್ಲಿಸಿದ್ದರು ಮತ್ತು ಅದರ ಪ್ರತಿ ತಮ್ಮ ಬಳಿ ಇರಲಿಲ್ಲ. ಛಾಯಾಚಿತ್ರಗಳನ್ನು ತೋರಿಸಿದಾಗ, ತಾವು ₹5 ಲಕ್ಷ ಪಾವತಿಸಿದ ವ್ಯಕ್ತಿ ಹಾಗೂ ಉತ್ತರಗಳ ಸಹಿತ ಸೋರಿಕೆಯಾದ ಪ್ರಶ್ನೆಪತ್ರಿಕೆಗಳನ್ನು ಒದಗಿಸಿದ ವ್ಯಕ್ತಿ  ಬಸವರಾಜ್ ಕನ್ನಾಳೆ ಎಂದು ಗುರುತಿಸಿದ್ದರು. ಖಚಿತವಾಗಿ  ಆಯ್ಕೆ ಮಾಡಿಸುವುದಾಗಿ ಭರವಸೆ ನೀಡಿ, ತನ್ನ ಸ್ನೇಹಿತನ ತಂದೆಯಿಂದ ₹80 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಮತ್ತೊಬ್ಬ ಮಧ್ಯವರ್ತಿಯ (ಮೊಬೈಲ್ ಸಂಖ್ಯೆ: 9513199148) ಹೆಸರನ್ನೂ ರಾಜ್ ಮೊಹಮ್ಮದ್ ಅವರು ತನಿಖಾಧಿಕಾರಿಗೆ ತಿಳಿಸಿದ್ದರು.

2020ರಲ್ಲೇ ನೇಮಕಾತ ಅಧಿಸೂಚನಗೆ 4ಕೋಟಿ ಸಂಗ್ರಹ?

2020ರಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಲು ಅರ್ಹ ಪಶುವೈದ್ಯರಿಂದ ಸುಮಾರು ₹4 ಕೋಟಿ ಸಂಗ್ರಹಿಸಲಾಗಿತ್ತು. ಆದರೆ, ಆ ನೇಮಕಾತಿ ಅಧಿಸೂಚನೆಯನ್ನು ಕರ್ನಾಟಕದ  ಉಚ್ಚ ನ್ಯಾಯಾಲಯವು 2023ರಲ್ಲಿ ರದ್ದುಗೊಳಿಸಿತ್ತು ಎಂದು ರಾಜ್‌ ಮೊಹಮ್ಮದ್ ಅವರು ತನಿಖಾಧಿಕಾರಿ ಮುಂದೆ  ಆರೋಪಿಸಿದ್ದರು.

ಪಿಎಂಎಲ್‌ಎ   2002ರ ಸೆಕ್ಷನ್ 50ರ ಅಡಿಯಲ್ಲಿ ದಾಖಲಿಸಲಾದ ಡಾ. ರಾಜ್ ಮೊಹಮ್ಮದ್ ಅವರ  ಹೇಳಿಕೆಯಿಂದ, ಪಶುವೈದ್ಯಾಧಿಕಾರಿಗಳ ಪರೀಕ್ಷೆಯಲ್ಲಿ ಖಚಿತ ಆಯ್ಕೆ ಮಾಡಿಸುವುದಾಗಿ ಭರವಸೆ ನೀಡಿ, ಡಾ. ಓಂ ಪ್ರಕಾಶ್ ಮತ್ತು  ಪವನ್ ಅವರ ಮೂಲಕ ಅವರನ್ನು ಸಂಪರ್ಕಿಸಲಾಗಿತ್ತು.  ಮತ್ತು ₹30 ಲಕ್ಷ ಅಕ್ರಮ ಹಣ ಪಾವತಿಸಲು ಅವರು ಒಪ್ಪಿಕೊಂಡಿದ್ದರು ಎಂಬುದು ಸ್ಪಷ್ಟವಾಗುತ್ತದೆ,’ ಎಂದು ದೋಷಾರೋಪಣೆ ಪಟ್ಟಿಯಲ್ಲಿ ಹೇಳಲಾಗಿದೆ.

 

 

ಹೀಗಾಗಿ, ಡಾ. ರಾಜ್ ಮೊಹಮ್ಮದ್ ಅವರು ಸೋರಿಕೆಯಾದ ಪ್ರಶ್ನೆಪತ್ರಿಕೆಯ ಮೂಲಕ ಪಶುವೈದ್ಯಾಧಿಕಾರಿಗಳ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ. ಮತ್ತು ಅವರು ಪಾವತಿಸಿದ ₹5 ಲಕ್ಷದ ಅಕ್ರಮ ಹಣವು ಕೆಪಿಎಸ್‌ಸಿ ನೇಮಕಾತಿ ಪರೀಕ್ಷೆಗಳಿಂದ ಸೃಷ್ಟಿಯಾದ ಅಪರಾಧದ ಆದಾಯದ ಭಾಗವಾಗಿದೆ ಎಂಬುದನ್ನು ಈ ಸಂಗತಿಗಳು ಸ್ಪಷ್ಟವಾಗಿ ಸೂಚಿಸುತ್ತವೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

Hot this week

ಗಂಗ್ವಾರ್‍‌ರಿಂದ ಪ್ರಶ್ನೆಪತ್ರಿಕೆ ಸಂಗ್ರಹಿಸಿ ಅಭ್ಯರ್ಥಿಗಳಿಗೆ ಹಂಚಿಕೆ; ಗಂಗ್ವಾರ್ ಬಳಕೆಗಾಗಿ ಖಾತೆ, ಕನ್ನಾಳೆಯಿಂದಲೇ ನಿರ್ವಹಣೆ

ಬೆಂಗಳೂರು;  ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ  ಗ್ಯಾನೇಂದ್ರ ಕುಮಾರ್ ಗಂಗ್ವಾರ್...

ಮನೆಯಲ್ಲಿ ವಾಸಿಸದಿದ್ದರೂ ಬಾಡಿಗೆದಾರ, ಪುತ್ರಿಯ ವೈದ್ಯಕೀಯ ಶಿಕ್ಷಣದ ವೆಚ್ಚ ಭರಿಸಿದ್ದ ಸಾಹುಕಾರ್; ಸದಸ್ಯೆ ಗೀತಾ ಹೇಳಿಕೆಯಲ್ಲಿದೆ ಕುತೂಹಲಕರ ಸಂಗತಿ

ಬೆಂಗಳೂರು; ಕರ್ನಾಟಕ ಲೋಕಸೇವಾ ಆಯೋಗವು 2026ರ ಜನವರಿಯಲ್ಲಿ  ನಡೆಸಿದ್ದ ಪಶು ವೈದ್ಯಾಧಿಕಾರಿಗಳ...

ಪ್ರಶ್ನೆಪತ್ರಿಕೆ, ಉತ್ತರ ಸೋರಿಕೆ, ಅರ್ಹತಾ ಪಟ್ಟಿಯೂ ದುರುಪಯೋಗ; ಅಪರಾಧದ ಮೂಲಕ ಆರೋಪಿತರು ಗಳಿಸಿದ್ದು 8.69 ಕೋಟಿ, ಹೇಳಿಕೆ ಬಿಡುಗಡೆ ಮಾಡಿದ ಜಾರಿ ನಿರ್ದೇಶನಾಲಯ

ಬೆಂಗಳೂರು; ಪಶು ವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿಗೆ ನಡೆದಿದ್ದ  ಪರೀಕ್ಷೆಯ ಪ್ರಶ್ನೆ ಪತ್ರಿಕೆ...
Please Scan to make Your Contribution

Topics

ಗಂಗ್ವಾರ್‍‌ರಿಂದ ಪ್ರಶ್ನೆಪತ್ರಿಕೆ ಸಂಗ್ರಹಿಸಿ ಅಭ್ಯರ್ಥಿಗಳಿಗೆ ಹಂಚಿಕೆ; ಗಂಗ್ವಾರ್ ಬಳಕೆಗಾಗಿ ಖಾತೆ, ಕನ್ನಾಳೆಯಿಂದಲೇ ನಿರ್ವಹಣೆ

ಬೆಂಗಳೂರು;  ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ  ಗ್ಯಾನೇಂದ್ರ ಕುಮಾರ್ ಗಂಗ್ವಾರ್...

ರಾಷ್ಟ್ರೀಯ ವಿದ್ಯಾರ್ಥಿ ವೇತನ; ಕೊನೆ ದಿನಾಂಕ ಸಮೀಪಿಸಿದರೂ ರಾಜ್ಯದ 2,418 ಶಾಲೆಗಳ ಒಟ್ಟು 6,991 ಅರ್ಜಿಗಳು ಪರಿಶೀಲನೆಗೆ ಬಾಕಿ

ಬೆಂಗಳೂರು; ಬೀಡಿ, ಚಲನಚಿತ್ರ (ಸಿನಿ), ಕಬ್ಬಿಣದ ಅದಿರು, ಮ್ಯಾಂಗನೀಸ್, ಕ್ರೋಮ್, ಸುಣ್ಣದ...

Related Articles

Popular Categories

error: Content is protected !!