Friday | November 6, 2026 |

ಎಂ ಎಸ್‌ ಬಿಲ್ಡಿಂಗ್‌, ವಿಕಾಸಸೌಧ ಕ್ಯಾಂಟೀನ್‌ ಗುತ್ತಿಗೆದಾರನ ಬಳಿ ಲಂಚಕ್ಕೆ ಬೇಡಿಕೆ, ಫೋನ್‌ ಪೇ ಮೂಲಕ 10 ಲಕ್ಷ ವಸೂಲು ಮಾಡಿದ ಅಧಿಕಾರಿ; ಸರ್ಕಾರಕ್ಕೆ ಲೀಗಲ್‌ ನೋಟೀಸ್‌ ಜಾರಿ

ಬೆಂಗಳೂರು; ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಸಚಿವಾಲಯಗಳ ಕಚೇರಿಗಳನ್ನು ಹೊಂದಿರುವ ವಿಕಾಸ ಸೌಧ ಮತ್ತು ಬಹುಮಹಡಿ ಕಟ್ಟಡದಲ್ಲಿರುವ ಕ್ಯಾಂಟೀನ್‌ ನಡೆಸುವ ಗುತ್ತಿಗೆದಾರರಿಂದಲೂ ಅಧಿಕಾರಿಗಳು ಹಣ ಸುಲಿಗೆ ಮಾಡಿದ್ದಾರೆ. ಗುತ್ತಿಗೆದಾರನಿಗೆ ಪದೇ ಪದೇ  ಲಂಚಕ್ಕೆ ಬೇಡಿಕೆ ಇಟ್ಟಿದ್ದಲ್ಲದೇ ಬೆದರಿಕೆ ಒಡ್ಡಲಾಗಿದೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ.

ಅಧಿಕಾರಿಗಳ ಬೇಡಿಕೆಗೆ ಮಣಿದಿದ್ದ ಗುತ್ತಿಗೆದಾರ, ನೇರವಾಗಿ ಅಧಿಕಾರಿಗೆ ಹಲವು ಬಾರಿ ಫೋನ್‌ ಪೇ ಮೂಲಕ ಲಕ್ಷಾಂತರ ರುಪಾಯಿಗಳನ್ನು ಪಾವತಿಸಿರುವುದು ಇದೀಗ ಬಹಿರಂಗವಾಗಿದೆ. ಲಂಚಗುಳಿತನದ ಬಗ್ಗೆ  ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಖುದ್ದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈಚೆಗಷ್ಟೇ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಮುಖ್ಯಮಂತ್ರಿಯೇ ಸಚಿವರಾಗಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧಿಕಾರಿಗಳೇ ಲಂಚಕ್ಕೆ ಬೇಡಿಕೆ ಒಡ್ಡಿರುವುದು ಮತ್ತು ಫೋನ್ ಪೇ ಮೂಲಕ ಹಣ ಸ್ವೀಕರಿಸಿರುವ ಪ್ರಕರಣಗಳು ಮುನ್ನೆಲೆಗೆ ಬಂದಿವೆ.

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸಚಿವರಾಗಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ  ಇಲಾಖೆಯ ಸರ್ಕಾರದ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ವಿಧಾನ ಪರಿಷತ್‌ನ ಸಭಾಪತಿಗಳ ಆಪ್ತ ಕಾರ್ಯದರ್ಶಿ ಅವರಿಗೆ  ಗುತ್ತಿಗೆದಾರರು ವಕೀಲರ ಮೂಲಕ ನೋಟೀಸ್‌ ಜಾರಿಗೊಳಿಸಿದ್ದಾರೆ. 2026ರ ಸೆ.28ರಂದೇ ಈ ನೋಟೀಸ್‌ ಜಾರಿಗೊಳಿಸಿದೆ.

ಈ ನೋಟೀಸ್‌ನ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

 

 

ಗುತ್ತಿಗೆದಾರರಿಗೆ  ಬೆದರಿಕೆ ಹಾಕುವ ಮೂಲಕ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಈ ರೀತಿಯಾಗಿ ಬೆದರಿಕೆ ಹಾಕುವ ಮೂಲಕ ತಮ್ಮ ಬೇಡಿಕೆಗೆ ಒಪ್ಪಿಕೊಳ್ಳುವಂತೆ  ಒತ್ತಾಯಿಸಿದ್ದಾರೆ. ವಿವಿಧ ಸಂದರ್ಭಗಳಲ್ಲಿ ಒಟ್ಟು  ಹತ್ತು ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ಗುತ್ತಿಗೆದಾರರಿಂದ ವಸೂಲಿ ಮಾಡಿದ್ದಾರೆ. ಅಲ್ಲದೇ ಹಣವನ್ನು ಫೋನ್‌ ಪೇ ಮೂಲಕ ಇಲಾಖೆಯ ಅಧಿಕಾರಿಗಳು ಪಡೆದಿದ್ದಾರೆ ಎಂದು ನೋಟೀಸ್‌ನಲ್ಲಿ ವಿವರಿಸಿರುವ ಗುತ್ತಿಗೆದಾರರು ತಮ್ಮ ವಕೀಲರ ಮೂಲಕ ವಾಟ್ಸಾಪ್‌ ಸಂಭಾಷಣೆ ಮತ್ತು ಫೋನ್‌ ಪೇ ಮೂಲಕ ಹಣ ಪಾವತಿಸಿರುವ ಸ್ಕ್ರೀನ್‌ ಶಾಟ್‌ಗಳನ್ನು ಪುರಾವೆಯಾಗಿ ನೋಟೀಸ್‌ನಲ್ಲಿ ಲಗತ್ತಿಸಿರುವುದು ಗೊತ್ತಾಗಿದೆ.

ಈ ಆರೋಪಕ್ಕೆ ಪೂರಕವಾಗಿ ಗುತ್ತಿಗೆದಾರರು ವಾಟ್ಸಾಪ್‌ ಸಂಭಾಷಣೆ ಮತ್ತು ಫೋನ್ ಪೇ ಮೂಲಕ ಹಣ ಪಾವತಿ ವಿವರಗಳನ್ನೂ ಸಹ ನೋಟೀಸ್‌ನಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

ಲೀಗಲ್‌ ನೋಟೀಸ್‌ನಲ್ಲೇನಿದೆ?

ಶ್ರೀ ಮೂಕಾಂಬಿಕಾ ಕ್ಯಾಟರ್ಸ್ ಅಂಡ್ ಎಂಟರ್‌ಪ್ರೈಸಸ್‌ನ ಮಾಲೀಕರ ಪರವಾಗಿ ವಕೀಲರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಸೇರಿದಂತೆ ಹಲವರಿಗೆ ನೋಟೀಸ್‌ ನೀಡಿದ್ದಾರೆ.  ವಿಕಾಸ ಸೌಧದ ಆವರಣದಲ್ಲಿ ಕ್ಯಾಂಟೀನ್ ನಡೆಸುವ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಕರೆದಿದ್ದ ಟೆಂಡರ್‌ನಲ್ಲಿ  ಕಕ್ಷಿದಾರರು ಯಶಸ್ವಿ ಬಿಡ್‌ದಾರರಾಗಿದ್ದರು. ಯಶಸ್ವಿ ಬಿಡ್‌ದಾರರಾಗಿ ಆಯ್ಕೆಯಾದ ನಂತರ, ಟೆಂಡರ್‌ನ ಷರತ್ತುಗಳ ಪ್ರಕಾರ 2025ರ ಫೆ.27ರಂದು  ದಿನಾಂಕ  ಒಪ್ಪಂದ ಮಾಡಿಕೊಳ್ಳಲಾಗಿತ್ತು.  ಒಪ್ಪಂದದ ಷರತ್ತುಗಳ ಪ್ರಕಾರ ಮಾಸಿಕ ಬಾಡಿಗೆಯನ್ನು ರೂ. 2,40,000/- (ಎರಡು ಲಕ್ಷ ನಲವತ್ತು ಸಾವಿರ ರೂಪಾಯಿಗಳು) ಎಂದು ನಿಗದಿಪಡಿಸಲಾಗಿತ್ತು. ಅಲ್ಲದೆ, ರೂ. 6,00,000/- (ಆರು ಲಕ್ಷ ರೂಪಾಯಿಗಳು) ಭದ್ರತಾ ಠೇವಣಿಯನ್ನು ಪಾವತಿಸಲಾಗಿತ್ತು ಎಂದು ವಿವರಿಸಿರುವುದು ಗೊತ್ತಾಗಿದೆ.

 

 

2025ರ ಮಾರ್ಚ್‌ 1ರಿಂದ  ಪ್ರಾರಂಭವಾಗಿ 2026ರ ಫೆಬ್ರವರಿ ತಿಂಗಳ ಅಂತ್ಯದವರೆಗೆ, ಅಂದರೆ ಒಂದು ವರ್ಷದ ಅವಧಿಗೆ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು.  ಬಹುಮಹಡಿ  ಕಟ್ಟಡದಲ್ಲಿ ಕ್ಯಾಂಟೀನ್ ನಡೆಸುವ ಸಂಬಂಧ ಡಿಪಿಎಆರ್‍‌  ಕರೆದಿದ್ದ ಟೆಂಡರ್‌ನಲ್ಲಿಯೂ ಇದೇ ಗುತ್ತಿಗೆದಾರರು ಯಶಸ್ವಿ ಬಿಡ್‌ದಾರರಾಗಿದ್ದರು. ಈ ಸಂಬಂಧ 2025ರ ಫೆ.8ರಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದದ ಷರತ್ತುಗಳ ಪ್ರಕಾರ ಮಾಸಿಕ ಬಾಡಿಗೆಯನ್ನು ರೂ. 3,45,000/- (ಮೂರು ಲಕ್ಷ ನಲವತ್ತೈದು ಸಾವಿರ ರೂಪಾಯಿಗಳು) ಎಂದು ನಿಗದಿಪಡಿಸಲಾಗಿತ್ತು. ಅಲ್ಲದೆ, ರೂ. 12,00,000/- (ಹನ್ನೆರಡು ಲಕ್ಷ ರೂಪಾಯಿಗಳು) ಭದ್ರತಾ ಠೇವಣಿಯನ್ನು ಪಾವತಿಸಲಾಗಿತ್ತು.

 

ಬಹು ಮಹಡಿ ಕಟ್ಟಡದಲ್ಲಿರುವ ಕ್ಯಾಂಟೀನ್‌ ನ ಚಿತ್ರ

 

ಒಪ್ಪಂದದ ಷರತ್ತುಗಳ ಪ್ರಕಾರ ಈ ಗುತ್ತಿಗೆಯ ಅವಧಿ ಒಂದು ವರ್ಷವಾಗಿದ್ದು, 2026ರ ಫೆಬ್ರವರಿ ತಿಂಗಳ ಅಂತ್ಯಕ್ಕೆ ಮುಕ್ತಾಯಗೊಳ್ಳುತ್ತದೆ. ಟೆಂಡರ್ ಅಧಿಸೂಚನೆಯಲ್ಲಿ ನಮೂದಿಸಿರುವ ಪ್ರದೇಶ ಮತ್ತು ಆಯಾಮಗಳನ್ನು ಹೊರತುಪಡಿಸಿ, ಎರಡೂ ಒಪ್ಪಂದಗಳ ನಿಯಮ ಮತ್ತು ಷರತ್ತುಗಳು ಒಂದೇ ರೀತಿಯಾಗಿವೆ.  ಟೆಂಡರ್‌ನ ಷರತ್ತುಗಳು ಮತ್ತು ಒಪ್ಪಂದದ ಪ್ರಕಾರ ಕ್ಯಾಂಟೀನ್‌ಗಳನ್ನು ನಡೆಸುತ್ತಿದ್ದ ಸಂದರ್ಭದಲ್ಲಿ, ನಿಮ್ಮ ಪೈಕಿ ಮೂರನೇ ವ್ಯಕ್ತಿಯಾಗಿರುವ ಇಲಾಖೆಯ ಉಸ್ತುವಾರಿ ಹೊಂದಿರುವ ಅಧೀನ ಕಾರ್ಯದರ್ಶಿಯವರು ಗುತ್ತಿಗೆದಾರರ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ನೋಟೀಸ್‌ನಲ್ಲಿ ಗಮನಸೆಳೆದಿರುವುದು ತಿಳಿದು ಬಂದಿದೆ.

‘ಒಪ್ಪಂದ/ಟೆಂಡರ್ ಅನ್ನು ಯಾವುದಾದರೂ ಒಂದು ಕಾರಣ ಮುಂದಿಟ್ಟುಕೊಂಡು ರದ್ದುಗೊಳಿಸುವುದಾಗಿ ಬೆದರಿಕೆ ಹಾಕುವ ಮೂಲಕ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಈ ರೀತಿಯಾಗಿ ಬೆದರಿಕೆ ಹಾಕಿ, ತಮ್ಮ ಬೇಡಿಕೆಗೆ ಒಪ್ಪಿಕೊಳ್ಳುವಂತೆ ನನ್ನ ಕಕ್ಷಿದಾರರನ್ನು ಒತ್ತಾಯಿಸಿದ್ದಾರೆ. ಈ ರೀತಿಯಾಗಿ ವಿವಿಧ ಸಂದರ್ಭಗಳಲ್ಲಿ ಅವರು ರೂ. 10,00,000/- (ಹತ್ತು ಲಕ್ಷ ರೂಪಾಯಿಗಳು ಮಾತ್ರ) ಕ್ಕಿಂತ ಹೆಚ್ಚಿನ ಮೊತ್ತವನ್ನು ನನ್ನ ಕಕ್ಷಿದಾರರಿಂದ ಪಡೆದಿದ್ದಾರೆ. ಅವರು ಆಗಾಗ್ಗೆ ಹಣಕ್ಕೆ ಬೇಡಿಕೆ ಇಡುತ್ತಿದ್ದರು ಮತ್ತು ನನ್ನ ಕಕ್ಷಿದಾರರು ಆ ಬೇಡಿಕೆಗಳನ್ನು ಈಡೇರಿಸುತ್ತಿದ್ದರು,’ ಎಂದು ನೋಟೀಸ್‌ನಲ್ಲಿ ಆಪಾದಿಸಿರುವುದು ಗೊತ್ತಾಗಿದೆ.

 

 

ಹಲವು ಸಂದರ್ಭಗಳಲ್ಲಿ ಅವರು ನಗದು ರೂಪದಲ್ಲಿ ಹಣವನ್ನು ಸ್ವೀಕರಿಸಿದ್ದಾರೆ. ಆದರೆ, ಕೆಲವೊಂದು ಸಂದರ್ಭಗಳಲ್ಲಿ ಫೋನ್‌ಪೇ (PhonePe) ಮೂಲಕ ಹಣವನ್ನು ತಮ್ಮ ಸ್ವಂತ ಖಾತೆಗೆ ಅಥವಾ ರಕ್ಷಾ ಎಂಬ ಹೆಸರಿನಲ್ಲಿರುವ ತಮ್ಮ ಮಗನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

 

 

ಗಮನಿಸಬೇಕಾದ ಸಂಗತಿಯೆಂದರೆ, ಕೆಲವು ಸಂದರ್ಭಗಳಲ್ಲಿ ಸ್ವತಃ ಮಾಲೀಕರೇ ಹಣವನ್ನು ಪಾವತಿಸಿದ್ದಾರೆ.

 

 

ಕೆಲವು ಸಂದರ್ಭಗಳಲ್ಲಿ, ಇಲಾಖೆಯ ಅಧೀನ ಕಾರ್ಯದರ್ಶಿಯು, ಸಂಸ್ಥೆಯ ಮ್ಯಾನೇಜರ್ ಸುನಿಲ್ ಜಿ.ಎಸ್. ಅವರೊಂದಿಗೆ ಸಂಭಾಷಣೆ ನಡೆಸಿದ್ದಾರೆ ಎಂದು ನೋಟೀಸ್‌ನಲ್ಲಿ ಹೇಳಲಾಗಿದೆ.

 

ವಿಕಾಸಸೌಧ ಕಟ್ಟಡದಲ್ಲಿರುವ ಕ್ಯಾಂಟೀನ್‌ ಚಿತ್ರ

 

‘ಹಣಕ್ಕೆ ಬೇಡಿಕೆ ಇಟ್ಟಿರುವುದು ಹಾಗೂ ಹಳೆಯ ಬಾಕಿ ಮೊತ್ತವನ್ನು ಪಾವತಿಸುವಂತೆ ಒತ್ತಾಯಿಸಿರುವುದಕ್ಕೆ ಸಂಬಂಧಿಸಿದ ಆಡಿಯೋ ದಾಖಲೆಗಳು ಅವರ ಬಳಿ ಲಭ್ಯವಿವೆ. ಅಗತ್ಯವಿದ್ದಾಗ ಅಂತಹ ಸಂಭಾಷಣೆಗಳನ್ನು ಸಂಬಂಧಪಟ್ಟ ಪ್ರಾಧಿಕಾರದ ಮುಂದೆ ಸಾಕ್ಷ್ಯವಾಗಿ ಮಂಡಿಸಲಾಗುವುದು,’  ಎಂದು ನೋಟೀಸ್‌ನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಈ ಸಂಭಾಷಣೆಗಳಿಂದ ಹಣಕ್ಕೆ ಬೇಡಿಕೆ ಇಟ್ಟಿರುವುದು ಮತ್ತು ತಮ್ಮ ಅಧಿಕೃತ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ನನ್ನ ಕಕ್ಷಿದಾರರಿಂದ ರೂ. 10,00,000/- (ಹತ್ತು ಲಕ್ಷ ರೂಪಾಯಿಗಳು) ಕ್ಕಿಂತ ಹೆಚ್ಚಿನ ಹಣವನ್ನು ಪಡೆದು ಶೋಷಿಸಿರುವುದು ಸ್ಪಷ್ಟವಾಗುತ್ತದೆ. ಆದಾಗ್ಯೂ, ಒಪ್ಪಂದದ ಷರತ್ತುಗಳ ಪ್ರಕಾರ ಗುತ್ತಿಗೆಯ ಅವಧಿಯು ಮುಕ್ತಾಯಗೊಂಡಿದೆ. ಎರಡೂ ಒಪ್ಪಂದಗಳಿಗೆ ಸಂಬಂಧಿಸಿದಂತೆ ಭದ್ರತಾ ಠೇವಣಿ ಮೊತ್ತವನ್ನು ಹಿಂದಿರುಗಿಸುವಂತೆ ನನ್ನ ಕಕ್ಷಿದಾರರು ಬೇಡಿಕೆ ಸಲ್ಲಿಸಿದ್ದರೂ, ಒಪ್ಪಂದದ ಅವಧಿ ಮುಕ್ತಾಯಗೊಂಡ ನಂತರವೂ ನಿಮ್ಮ ಪೈಕಿ ಮೂರನೇ ವ್ಯಕ್ತಿಯು ನನ್ನ ಕಕ್ಷಿದಾರರಿಗೆ ಭದ್ರತಾ ಠೇವಣಿ ಮೊತ್ತವನ್ನು ಇದುವರೆಗೆ ಹಿಂದಿರುಗಿಸಿಲ್ಲ ಎಂದು ಇಲಾಖೆಯ ಗಮನಸೆಳೆದಿರುವುದು ಗೊತ್ತಾಗಿದೆ.

 

 

ಅಲ್ಲದೇ  ಗುತ್ತಿಗೆಯ ಅವಧಿ ಮುಕ್ತಾಯಗೊಳ್ಳುವ ಸಂದರ್ಭದಲ್ಲಿ, ಇಲಾಖೆಯ ಮೂರನೇ ವ್ಯಕ್ತಿಯು 2026ರ ಫೆ.24ರಂದು   ಪತ್ರ/ಆದೇಶ ಹೊರಡಿಸಿ, ಇಲಾಖೆಯು ಆವರಣದ ನವೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವವರೆಗೆ, ಅಂದರೆ 2026ರ ಮಾರ್ಚ್‌ 1ರಿಂದ  ಮುಂದಿನ ದಿನಗಳಲ್ಲಿ ಕ್ಯಾಂಟೀನ್ ವ್ಯವಹಾರವನ್ನು ಮುಂದುವರಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದರು. ಈ ಪತ್ರಕ್ಕೆ ಸಂಬಂಧಿಸಿದಂತೆ, ಕ್ಯಾಂಟೀನ್ ನಿರ್ವಹಣೆಯ ವೆಚ್ಚ ಹೆಚ್ಚಾಗಿರುವುದರಿಂದ ಮಾಸಿಕ ಬಾಡಿಗೆಯನ್ನು ಕಡಿಮೆ ಮಾಡಿದಲ್ಲಿ ಮಾತ್ರ ಕ್ಯಾಂಟೀನ್ ನಡೆಸಲು ಸಿದ್ಧ ಎಂದು ಗುತ್ತಿಗೆದಾರರು 2026ರ ಮಾರ್ಚ್‌ 10ರಂದು  ಇ-ಮೇಲ್ ಮೂಲಕ ಪತ್ರ ವ್ಯವಹಾರ ನಡೆಸಿದ್ದರು.

ಆದರೆ, ಇಂತಹ ಮನವಿ ಸಲ್ಲಿಸಿದ್ದರೂ, ನಿಮ್ಮ ಪೈಕಿ ಮೂರನೇ ವ್ಯಕ್ತಿಯು ಆ ಮನವಿಯನ್ನು ಪರಿಗಣಿಸದೆ, ಬಾಡಿಗೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲವೆಂದು ತಿಳಿಸಿದ್ದರು. ಇದರಿಂದ ಗುತ್ತಿಗೆದಾರರಿಗೆ  ಆರ್ಥಿಕ ನಷ್ಟ ಉಂಟಾಗಿದೆ. ಈ ಮಧ್ಯಂತರ ಅವಧಿಯಲ್ಲಿ, ವಿಕಾಸ ಸೌಧದಲ್ಲಿ ಕ್ಯಾಂಟೀನ್ ನಡೆಸಲು 2026ರ ಜನವರಿ 16ರಂದು  ಹೊಸದಾಗಿ ಟೆಂಡರ್ ಕರೆಯಲಾಗಿತ್ತು ಎಂಬುದು ತಿಳಿದುಬಂದಿದೆ.

 

 

‘ನನ್ನ ಕಕ್ಷಿದಾರರು ಆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರೂ, ಟೆಂಡರ್ ತೆರೆಯಲಾಗಿಲ್ಲ ಮತ್ತು ಅವರು ಪಾವತಿಸಿದ್ದ ಇಎಂಡಿ (EMD) ಮೊತ್ತವನ್ನು ಹಿಂದಿರುಗಿಸಲಾಗಿತ್ತು. ನಂತರ, ವಿಕಾಸ ಸೌಧದಲ್ಲಿ ಕ್ಯಾಂಟೀನ್ ನಡೆಸಲು 2026ರ ಮಾರ್ಚ್‌ 2 ರಂದು ಮತ್ತೊಂದು ಟೆಂಡರ್ ಕರೆಯಲಾಗಿತ್ತು. ನನ್ನ ಕಕ್ಷಿದಾರರು ಆ ಟೆಂಡರ್‌ನಲ್ಲಿ ಭಾಗವಹಿಸಿ ಬಿಡ್ ಸಲ್ಲಿಸಿದ್ದರು. ಆದರೆ, 2025ರಲ್ಲಿ ಹೊರಡಿಸಲಾಗಿದ್ದ ಟೆಂಡರ್ ಅಧಿಸೂಚನೆಯಲ್ಲಿ ನಿಗದಿಪಡಿಸಿದ್ದ ದರಕ್ಕಿಂತ ಕಡಿಮೆ ದರವನ್ನು ಅವರು ಉಲ್ಲೇಖಿಸಿದ್ದರು,’ ಎಂದು ನೋಟೀಸ್‌ನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಆದರೂ ಸಹ 2026ರ ಮಾರ್ಚ್ 2ರಂದು  ಕರೆಯಲಾಗಿದ್ದ ಈ ಟೆಂಡರ್ ಅನ್ನು ರದ್ದುಗೊಳಿಸಲಾಗಿದೆ.   ಟೆಂಡರ್ ರದ್ದುಗೊಳಿಸಿದ್ದರೂ, ಸಹ  ಠೇವಣಿಯಾಗಿ ಪಾವತಿಸಿದ್ದ ರೂ. 3,00,000/- (ಮೂರು ಲಕ್ಷ ರೂಪಾಯಿಗಳು) ಮೊತ್ತವನ್ನು ಇಂದಿನವರೆಗೂ ಹಿಂದಿರುಗಿಸಲಾಗಿಲ್ಲ. 2026ರ ಫೆ.2ರಂದು  ಹೊರಡಿಸಿದ್ದ  ಆದೇಶದ ಪ್ರಕಾರ ಬಹುಮಹಡಿ ಕಟ್ಟಡದಲ್ಲಿ ನವೀಕರಣ ಕಾಮಗಾರಿ ಪ್ರಾರಂಭವಾಗುವವರೆಗೆ ಹಾಗೂ ವಿಕಾಸ ಸೌಧದಲ್ಲಿ ಮುಂದಿನ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕ್ಯಾಂಟೀನ್ ವ್ಯವಹಾರವನ್ನು ಮುಂದುವರಿಸಲು ಅವಕಾಶ ನೀಡಲಾಗಿತ್ತು.

 

 

ವಿಕಾಸ ಸೌಧದ ಕ್ಯಾಂಟೀನ್‌ಗೆ ಸಂಬಂಧಿಸಿದಂತೆ ಕರೆಯಲಾಗಿದ್ದ ಟೆಂಡರ್ ಅನ್ನು ಎರಡು ಬಾರಿ ರದ್ದುಗೊಳಿಸಲಾಗಿದೆ. ಮಾನವೀಯ ನೆಲೆಗಟ್ಟಿನಲ್ಲಿ ಹಾಗೂ ಇಲಾಖೆಯ ಮೂರನೇ ವ್ಯಕ್ತಿಯ ಕೋರಿಕೆಯ ಮೇರೆಗೆ ಕ್ಯಾಂಟೀನ್ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಕ್ಯಾಂಟೀನ್‌ನ ಬಾಡಿಗೆಯನ್ನು ಕಡಿಮೆ ಮಾಡುವಂತೆ ಅವರು ಮನವಿ ಸಲ್ಲಿಸಿದ್ದರು. ಆದರೆ, ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಬದಲು, ಇಲಾಖೆಯ  ಮೂರನೇ ವ್ಯಕ್ತಿಯು ಮುಂದಿನ ಟೆಂಡರ್‌ಗಳಲ್ಲಿ ಭಾಗವಹಿಸದಂತೆ ನನ್ನ ಕಕ್ಷಿದಾರರನ್ನು ಕಪ್ಪುಪಟ್ಟಿಗೆ (Blacklist) ಸೇರಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ನೋಟೀಸ್‌ನಲ್ಲಿ ಆಪಾದಿಸಿರುವುದು ತಿಳಿದು ಬಂದಿದೆ.

‘ಅಷ್ಟೇ ಅಲ್ಲದೆ, ಅವರು ಹಣಕ್ಕೆ ಬೇಡಿಕೆ ಇಟ್ಟಿರುವುದಕ್ಕೆ ಸಂಬಂಧಿಸಿದ ಸಾಕಷ್ಟು ದಾಖಲೆಗಳು, ಛಾಯಾಚಿತ್ರಗಳು, ವಾಟ್ಸಾಪ್ ಸಂದೇಶಗಳು, ಆಡಿಯೋ ಸಂಭಾಷಣೆಗಳು ಹಾಗೂ ನನ್ನ ಕಕ್ಷಿದಾರರ ವೆಚ್ಚದಲ್ಲಿ ಪಾರ್ಟಿ ಮಾಡಿರುವುದನ್ನು ತೋರಿಸುವ ಛಾಯಾಚಿತ್ರಗಳು ಲಭ್ಯವಿವೆ. ಸೂಕ್ತ ಸಮಯದಲ್ಲಿ ಈ ಎಲ್ಲಾ ದಾಖಲೆಗಳನ್ನು ಸಂಬಂಧಪಟ್ಟ ಪ್ರಾಧಿಕಾರದ ಮುಂದೆ ಮಂಡಿಸಲಾಗುವುದು. ಇದಲ್ಲದೆ, ನನ್ನ ಕಕ್ಷಿದಾರರು ಕ್ಯಾಂಟೀನ್ ನಡೆಸುತ್ತಿದ್ದ ಸಂದರ್ಭದಲ್ಲಿ, ಉದ್ಯೋಗಿಗಳಿಗೆ ಪ್ರವೇಶ ಪಾಸ್‌ಗಳನ್ನು ಒದಗಿಸಬೇಕಾಗಿತ್ತು. ಅಂತಹ ಪಾಸ್‌ಗಳನ್ನು ಒದಗಿಸುವುದಕ್ಕೂ ಅವರು ಹಣಕ್ಕೆ ಬೇಡಿಕೆ ಇಟ್ಟಿದ್ದರು.  ನನ್ನ ಕಕ್ಷಿದಾರರು ಆ ಹಣವನ್ನು ಪಾವತಿಸಿದ್ದಾರೆ,’ ಎಂದು ವಕೀಲರು ತಮ್ಮ ನೋಟಿಸ್‌ನಲ್ಲಿ ಇಲಾಖೆಯ ಗಮನಸೆಳೆದಿರುವುದು ಗೊತ್ತಾಗಿದೆ.

2026ರ ಸೆ.16ರಿಂದ ಕ್ಯಾಂಟೀನ್ ವ್ಯವಹಾರವನ್ನು ಮುಂದುವರಿಸಲು ತಮಗೆ ಇಚ್ಛೆಯಿಲ್ಲವೆಂದು ಗುತ್ತಿಗೆದಾರರಿ ಸ್ಪಷ್ಟಪಡಿಸಿದ್ದರು. ಆದರೆ, ಯಾವುದೇ ಮುನ್ಸೂಚನೆ ನೀಡದೆ, ಸ್ವಾಧೀನವನ್ನು ಹಸ್ತಾಂತರಿಸಿಕೊಳ್ಳುವ ಸಂಬಂಧ ಯಾವುದೇ ಮಹಜರ್ (Mahazar) ನಡೆಸದೆ, ನಿಮ್ಮ ಪೈಕಿ ಮೂರನೇ ವ್ಯಕ್ತಿಯು ಕ್ಯಾಂಟೀನ್ ಆವರಣಕ್ಕೆ ಬೀಗ ಹಾಕಿದ್ದಾರೆ. ಕ್ಯಾಂಟೀನ್ ಒಳಗೆ ಇರಿಸಲಾಗಿದ್ದ ಸರಕುಗಳು ಮತ್ತು ಅಡುಗೆ ಸಾಮಗ್ರಿಗಳನ್ನು ಹೊರತೆಗೆಯಲು ಅವಕಾಶ ನೀಡದೆ ಬೀಗ ಹಾಕಲಾಗಿದೆ. ಬಹುಮಹಡಿ  ಕಟ್ಟಡದ ಕ್ಯಾಂಟೀನ್ ಒಳಗೆ ಸುಮಾರು ರೂ. 40,00,000/- (ನಲವತ್ತು ಲಕ್ಷ ರೂಪಾಯಿಗಳು) ಮೌಲ್ಯದ ಅಡುಗೆ ಪಾತ್ರೆಗಳು ಮತ್ತು ಇತರ ಸಾಮಗ್ರಿಗಳು ಇವೆ ಎಂದು ಗುತ್ತಿಗೆದಾರರು  ತಿಳಿಸಿದ್ದಾರೆ.

ಇಲಾಖೆಯ ಮೂರನೇ ವ್ಯಕ್ತಿಯು ನನ್ನ ಕಕ್ಷಿದಾರರಿಗೆ ಆ ಸಾಮಗ್ರಿಗಳನ್ನು ಹೊರತೆಗೆಯಲು ಅವಕಾಶ ನೀಡದೆ ಏಕಾಏಕಿ ಬಾಗಿಲಿಗೆ ಬೀಗ ಹಾಕಿದ್ದಾರೆ. ಇದಲ್ಲದೆ, ವಿವಿಧ ವ್ಯಕ್ತಿಗಳು/ಕಂಪನಿಗಳಿಂದ ಹಣ ಪಡೆದು ವಿಧಾನಸೌಧಕ್ಕೆ ಪ್ರವೇಶ, ವಿಐಪಿ (VIP) ಮತ್ತು ವಾಹನ ಪಾಸ್‌ಗಳನ್ನು ವಿತರಿಸಿರುವ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ಹಲವು ದೂರುಗಳು ಸಲ್ಲಿಕೆಯಾಗಿವೆ ಎಂದು ನೋಟೀಸ್‌ನಲ್ಲಿ ಉಲ್ಲೇಖಿಸಿರುವುದು  ತಿಳಿದುಬಂದಿದೆ.

‘ನನ್ನ ಕಕ್ಷಿದಾರರನ್ನು ಶೋಷಿಸಲು ಮತ್ತು ಅವರಿಂದ ಬಲವಂತವಾಗಿ ಹಣ ವಸೂಲಿ ಮಾಡಲು ನಿಮ್ಮ ಪೈಕಿ ಮೂರನೇ ವ್ಯಕ್ತಿಯು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಹಿಂದೆ ತಿಳಿಸಿರುವಂತೆ, ಆಡಿಯೋ ರೆಕಾರ್ಡಿಂಗ್‌ಗಳು, ಛಾಯಾಚಿತ್ರಗಳು, ಫೋನ್‌ಪೇ (PhonePe) ವಹಿವಾಟಿನ ದಾಖಲೆಗಳು ಹಾಗೂ ವಾಟ್ಸಾಪ್ ಸಂಭಾಷಣೆಗಳು ನಿಮ್ಮ ಪೈಕಿ ಮೂರನೇ ವ್ಯಕ್ತಿಯು ಹಣ ಪಡೆದಿರುವುದನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಾಗಿವೆ,’ ಎಂದು ನೋಟೀಸ್‌ನಲ್ಲಿ ಹೇಳಲಾಗಿದೆ.

ಹಣದ ಬೇಡಿಕೆಗಳನ್ನು ಈಡೇರಿಸದ ಕಾರಣಕ್ಕಾಗಿಯೇ, ಅವರು ಇದುವರೆಗೂ ಭದ್ರತಾ ಠೇವಣಿ ಮತ್ತು ಇಎಂಡಿ (EMD) ಮೊತ್ತವನ್ನು ಹಿಂದಿರುಗಿಸಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಇಲಾಖೆಯ ಉಪ ಕಾರ್ಯದರ್ಶಿ ಮತ್ತು ಅಧೀನ ಕಾರ್ಯದರ್ಶಿ ವಿರುದ್ಧ    ವಿಚಾರಣೆ ನಡೆಸಬೇಕು. ಈ ಕೃತ್ಯಗಳಿಂದ ಗುತ್ತಿಗೆದಾರರಿಗೆ   ಅಪಾರ ಪ್ರಮಾಣದ ಆರ್ಥಿಕ ನಷ್ಟ ಮತ್ತು ತೀವ್ರ ಮಾನಸಿಕ ವೇದನೆ ಉಂಟಾಗಿದೆ. ಅ ಲ್ಲದೇ ಎರಡೂ ಒಪ್ಪಂದಗಳಿಗೆ ಸಂಬಂಧಿಸಿದಂತೆ ಏಪ್ರಿಲ್ 2026ರಿಂದ 15 ಸೆಪ್ಟೆಂಬರ್ 2026ರವರೆಗಿನ ಅವಧಿಯ ಬಾಡಿಗೆಯನ್ನು ಮನ್ನಾ ಮಾಡಬೇಕು ಎಂದು ನೋಟೀಸ್‌ನಲ್ಲಿ ತಿಳಿಸಿರುವುದು ಗೊತ್ತಾಗಿದೆ.

ಗಮನಿಸಬೇಕಾದ ಅಂಶವೆಂದರೆ, ಏಪ್ರಿಲ್ 2026ರಿಂದ ಜನಗಣತಿ (Census) ಪ್ರಕ್ರಿಯೆ ನಡೆಯುತ್ತಿತ್ತು. ತದನಂತರ ಆಗಸ್ಟ್ ತಿಂಗಳಿನಿಂದ ಎಸ್‌ಐಆರ್ (SIR) ಪ್ರಕ್ರಿಯೆಯೂ ಪ್ರಾರಂಭವಾಗಿತ್ತು. ಈ ಕಾರಣಗಳಿಂದಾಗಿ ಹೆಚ್ಚಿನ ಉದ್ಯೋಗಿಗಳನ್ನು ವಿವಿಧ ಸ್ಥಳಗಳಿಗೆ ನಿಯೋಜಿಸಲಾಗಿತ್ತು. ಇದರಿಂದ ಕ್ಯಾಂಟೀನ್ ವ್ಯವಹಾರಕ್ಕೆ ಭಾರೀ ಪ್ರಮಾಣದ ನಷ್ಟ ಉಂಟಾಯಿತು. ಈ ಪ್ರಾಯೋಗಿಕ ಸಮಸ್ಯೆಗಳು ಮತ್ತು ತೊಂದರೆಗಳನ್ನು ನಿಮ್ಮ ಪೈಕಿ ಮೂರನೇ ವ್ಯಕ್ತಿಯ ಗಮನಕ್ಕೆ ತಂದಿದ್ದರೂ ಸಹ ಅಧಿಕಾರಿಗಳು   ನಿರ್ದಯವಾಗಿ ವರ್ತಿಸಿದ್ದಾರೆ.  ಕ್ಯಾಂಟೀನ್ ನಿರ್ವಹಣೆಯ ವೆಚ್ಚವು ಹಲವು ಪಟ್ಟು ಹೆಚ್ಚಾಗಿದೆ ಎಂದು ವಿವರಿಸಿರುವುದು ತಿಳಿದು ಬಂದಿದೆ.

ಯುದ್ಧದ ಅವಧಿಯಲ್ಲಿ ಅನಿಲದ ಬೆಲೆ ಏರಿಕೆಯಾಗಿರುವುದು ಸೇರಿದಂತೆ, ಈ ಹಿಂದೆ ವಿವರಿಸಿರುವ ಹಲವು ಕಾರಣಗಳಿಂದಾಗಿ ವೆಚ್ಚಗಳು ಹೆಚ್ಚಾಗಿ ಆರ್ಥಿಕ ನಷ್ಟ ಉಂಟಾಗಿದೆ. ಬಹುಮಹಡಿ ಕಟ್ಟಡದಲ್ಲಿರುವ ಕ್ಯಾಂಟೀನ್ ಆವರಣಕ್ಕೆ ನೀರು ನುಗ್ಗಿ, ಒಳಗೆ ಸಂಗ್ರಹಿಸಿಟ್ಟಿದ್ದ ಆಹಾರ ಪದಾರ್ಥಗಳು ಮತ್ತು ಪಡಿತರ ಸಾಮಗ್ರಿಗಳು ಹಾಳಾಗಿವೆ. ಈ ವಿಷಯವನ್ನು ಇಲಾಖೆಯ ಅಧೀನ ಕಾರ್ಯದರ್ಶಿ  ಗಮನಕ್ಕೆ ತಂದಿದ್ದರೂ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವ ಅಥವಾ ನೀರನ್ನು ಹೊರಹಾಕಲು ಅಗತ್ಯ ಕ್ರಮ ಕೈಗೊಂಡು ಸಮಸ್ಯೆಯನ್ನು ಬಗೆಹರಿಸುವ ಕನಿಷ್ಠ ಸೌಜನ್ಯವನ್ನೂ ಅವರು ತೋರಿಸಿಲ್ಲ ಎಂದು ಆಪಾದಿಸಿರುವುದು ಗೊತ್ತಾಗಿದೆ.

‘ಆದ್ದರಿಂದ, ಎರಡೂ ಒಪ್ಪಂದಗಳಿಗೆ ಸಂಬಂಧಿಸಿದ ಭದ್ರತಾ ಠೇವಣಿ ಮೊತ್ತವನ್ನು ಹಾಗೂ ನಂತರದ ಟೆಂಡರ್ ಅಧಿಸೂಚನೆಗೆ ಸಂಬಂಧಿಸಿದಂತೆ ಪಾವತಿಸಲಾದ ಇಎಂಡಿ (EMD) ಮೊತ್ತವನ್ನು ಹಿಂದಿರುಗಿಸಬೇಕೆಂದು ಈ ಮೂಲಕ ನಾನು ಒತ್ತಾಯಿಸುತ್ತೇನೆ. ಅಲ್ಲದೆ, ನಿಮ್ಮ ಪೈಕಿ ಮೂರನೇ ವ್ಯಕ್ತಿಯು ಅಕ್ರಮವಾಗಿ ಹಣ ಪಡೆದಿರುವುದು (Illegal Gratification) ಸೇರಿದಂತೆ ಇತರ ಆರೋಪಗಳ ಕುರಿತು ಅವರ ವಿರುದ್ಧ ವಿಚಾರಣೆ ನಡೆಸಬೇಕು,’ ಎಂದು ನೋಟೀಸ್‌ನಲ್ಲಿ ಆಗ್ರಹಿಸಿರುವುದು ತಿಳಿದು ಬಂದಿದೆ.

 

 

‘ಭದ್ರತಾ ಠೇವಣಿ ಮೊತ್ತ, ಇಎಂಡಿ (EMD) ಮೊತ್ತವನ್ನು ಹಿಂದಿರುಗಿಸಲು ಹಾಗೂ ಕ್ಯಾಂಟೀನ್‌ನಲ್ಲಿರುವ ಅಡುಗೆ ಪಾತ್ರೆಗಳು ಮತ್ತು ಇತರ ಸಾಮಗ್ರಿಗಳನ್ನು ನನ್ನ ಕಕ್ಷಿದಾರರಿಗೆ ಹಸ್ತಾಂತರಿಸಲು ವಿಫಲವಾದಲ್ಲಿ,  ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕಕ್ಷಿದಾರರು  ಸೂಚಿಸಿದ್ದಾರೆ. ಈ ಸಂಬಂಧ ಸಕ್ಷಮ ನ್ಯಾಯಾಲಯದ ಮುಂದೆ ಹಾಗೂ ಲೋಕಾಯುಕ್ತ ಸೇರಿದಂತೆ ಸಂಬಂಧಪಟ್ಟ ಪ್ರಾಧಿಕಾರಗಳ ಮುಂದೆ ಕಾನೂನು ಕ್ರಮ ಜರುಗಿಸಲಾಗುವುದು,’ ಎಂದು ನೋಟೀಸ್‌ನಲ್ಲಿ ಎಚ್ಚರಿಸಿರುವುದು ಗೊತ್ತಾಗಿದೆ.

Hot this week

ಗೆಜೆಟೆಡ್ ಪ್ರೊಬೇಷನರ್ಸ್‌ಗಳಿಗೆ ಅದೇಶ ಪತ್ರ ನೀಡಲು ಮುರುಘಾ, ಸಿದ್ದಗಂಗಾ ಮಠ ಶ್ರೀಗಳ ಮಧ್ಯ ಪ್ರವೇಶ; ಪತ್ರಗಳು ಬಹಿರಂಗ

ಬೆಂಗಳೂರು; ಗೆಜೆಟೆಡ್ ಪ್ರೊಬೇಷನರ್ಸ್‌ 2011ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ ವಿಶೇಷ ಮಸೂದೆ...

54,059.8 ಕೋಟಿ ರು ಮೊತ್ತದ 1,962 ಯೋಜನೆ; ಮುಖ್ಯಮಂತ್ರಿ ಸಚಿವಾಲಯಕ್ಕೇ ಮಾಹಿತಿ ಒದಗಿಸದ 23 ಇಲಾಖೆಗಳು

ಬೆಂಗಳೂರು; ರಾಜ್ಯದಲ್ಲಿ ಅನುಷ್ಠಾನಗೊಂಡಿರುವ ಒಟ್ಟು 78,490.4 ಕೋಟಿ ರು ಮೊತ್ತದ  2,867...

2011ರ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ; ಸುಪ್ರೀಂ ತೀರ್ಪಿನ ಬೆನ್ನಲ್ಲೇ ಮುನ್ನೆಲೆಗೆ ಬಂದ ಎಚ್‌ಡಿಡಿ, ಎಚ್‌ಡಿಕೆ ಟಿಪ್ಪಣಿ

ಬೆಂಗಳೂರು; ಗೆಜೆಟೆಡ್ ಪ್ರೊಬೇಷನರ್ಸ್‌ 2011ನೇ ಸಾಲಿನ ನೇಮಕಾತಿಯಲ್ಲಿ ಗಂಭೀರ ಸ್ವರೂಪದ ಅಕ್ರಮಗಳು...
Please Scan to make Your Contribution

Topics

ಗೆಜೆಟೆಡ್ ಪ್ರೊಬೇಷನರ್ಸ್‌ಗಳಿಗೆ ಅದೇಶ ಪತ್ರ ನೀಡಲು ಮುರುಘಾ, ಸಿದ್ದಗಂಗಾ ಮಠ ಶ್ರೀಗಳ ಮಧ್ಯ ಪ್ರವೇಶ; ಪತ್ರಗಳು ಬಹಿರಂಗ

ಬೆಂಗಳೂರು; ಗೆಜೆಟೆಡ್ ಪ್ರೊಬೇಷನರ್ಸ್‌ 2011ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ ವಿಶೇಷ ಮಸೂದೆ...

54,059.8 ಕೋಟಿ ರು ಮೊತ್ತದ 1,962 ಯೋಜನೆ; ಮುಖ್ಯಮಂತ್ರಿ ಸಚಿವಾಲಯಕ್ಕೇ ಮಾಹಿತಿ ಒದಗಿಸದ 23 ಇಲಾಖೆಗಳು

ಬೆಂಗಳೂರು; ರಾಜ್ಯದಲ್ಲಿ ಅನುಷ್ಠಾನಗೊಂಡಿರುವ ಒಟ್ಟು 78,490.4 ಕೋಟಿ ರು ಮೊತ್ತದ  2,867...

2011ರ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ; ಸುಪ್ರೀಂ ತೀರ್ಪಿನ ಬೆನ್ನಲ್ಲೇ ಮುನ್ನೆಲೆಗೆ ಬಂದ ಎಚ್‌ಡಿಡಿ, ಎಚ್‌ಡಿಕೆ ಟಿಪ್ಪಣಿ

ಬೆಂಗಳೂರು; ಗೆಜೆಟೆಡ್ ಪ್ರೊಬೇಷನರ್ಸ್‌ 2011ನೇ ಸಾಲಿನ ನೇಮಕಾತಿಯಲ್ಲಿ ಗಂಭೀರ ಸ್ವರೂಪದ ಅಕ್ರಮಗಳು...

Related Articles

Popular Categories

error: Content is protected !!