ಬೆಂಗಳೂರು; ನಕಲಿ ಸ್ಟಾಂಪ್ ಪೇಪರ್ಗಳ ಸೃಷ್ಟಿ, ಕಾನೂನುಬಾಹಿರವಾಗಿ ಫ್ರಾಂಕಿಂಗ್ , ಅರ್ಜಿ ನಮೂನೆ ಹಾಗೂ ಮುದ್ರಾಂಕ ಪತ್ರಗಳನ್ನು ಅನಧಿಕೃತವಾಗಿ ಮಾರಾಟ ಮಾಡುವುದು ಸೇರಿದಂತೆ ಮತ್ತಿತರ ಕೃತ್ಯಗಳು ರಾಜ್ಯದಲ್ಲಿ ಈಗಲೂ ಎಗ್ಗಿಲ್ಲದೇ ಮುಂದುವರೆಯುತ್ತಿವೆ. ಇಂತಹ ಕೃತ್ಯಗಳಿಂದಾಗಿ ರಾಜ್ಯದ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟವಾಗುತ್ತಿದೆ.
ವಿಶೇಷವೆಂದರೇ ನಕಲಿ ಮುದ್ರಾಂನಕಲಿ ಸ್ಟಾಂಪ್ ಪೇಪರ್ಗಳ ಮಾರಾಟ ಮಾಡುವ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದೆ ಎಂಬ ಗುರುತರವಾದ ಆರೋಪಕ್ಕೆ ಕರ್ನಾಟಕ ರಾಜ್ಯ ಪರವಾನಿಗೆ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘವು ಸಹ ಗುರಿಯಾಗಿದೆ. ಹಾಗೆಯೇ ಈ ಕೃತ್ಯದಲ್ಲಿ ಮೈಸೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೋಂದಣಿ ಮುದ್ರಾಂಕ ಇಲಾಖೆಯ ಹಿರಿಯ ಉಪ ನೋಂದಣಾಧಿಕಾರಿಗಳೂ ಸಹ ಭಾಗಿಯಾಗಿದ್ದಾರೆ.! ಆದರೂ ಇಂಧನ ಮತ್ತು ನೋಂದಣಿ ಮುದ್ರಾಂಕ ಇಲಾಖೆಯು ಮಾತ್ರ ಕಣ್ಮುಚ್ಚಿ ಕುಳಿತಿದೆ.
ಸದ್ದಿಲ್ಲದೇ ನಡೆಯುತ್ತಿದ್ದ ಇಂತಹ ಕೃತ್ಯವೊಂದನ್ನು ಮಂಗಳೂರು ಮೂಲದ ನಿವೃತ್ತ ಪತ್ರಿಕಾ ಛಾಯಾಗ್ರಾಹಕ ಆರ್ ಈಶ್ವರರಾಜ್ ಅವರು ನೇರವಾಗಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಮೂಲಕ ಗಮನಕ್ಕೆ ತಂದಿದ್ದರು. ಈ ವಿಷಯದ ಕುರಿತು ತನಿಖೆ ನಡೆಸಲು ಮತ್ತು ತನಿಖೆಯ ಮೇಲ್ವಿಚಾರಣೆ ಮಾಡಲು ವಿಶೇಷ ತಂಡ ರಚಿಸಲು ಮ್ಯಾಂಡಮಸ್ ರಿಟ್ ಹೊರಡಿಸಬೇಕೆಂದು ಅರ್ಜಿಯಲ್ಲಿ ಕೋರಿದ್ದರು.
ಈ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ಆದೇಶಗಳಲ್ಲಿನ ಅಂಶಗಳನ್ನಾಧರಿಸಿ ಸಿಬಿಐನಿಂದ ಸ್ವತಂತ್ರ ತನಿಖೆ ನಡೆಸಬೇಕು ಎಂದು ಈಶ್ವರರಾಜ್ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿ ಆಧರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಇಂಧನ ಇಲಾಖೆಯು ವಿದ್ಯುತ್ ಪರಿವೀಕ್ಷಣಾ ಇಲಾಖೆಯ ಮುಖ್ಯ ವಿದ್ಯುತ್ ಪರಿವೀಕ್ಷಕರಿಗೆ ಇದೀಗ ನಿರ್ದೇಶಿಸಿದೆ.
ಈ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯವು ನೀಡಿರುವ ತೀರ್ಪಿನ ಅಂಶಗಳನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಇಂಧನ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ಪತ್ರದಲ್ಲಿ ಸೂಚಿಸಿರುವುದು ಗೊತ್ತಾಗಿದೆ.
ನ್ಯಾಯಾಲಯವು ನೀಡಿದ್ದ ತೀರ್ಪು ಮತ್ತು ಸಿಬಿಐ ತನಿಖೆ ನಡೆಸುವ ಸಂಬಂಧ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಇಂಧನ ಸಚಿವ ಕೆ ಜೆ ಜಾರ್ಜ್ ಮತ್ತು ಕಂದಾಯ ಸಚಿವ ಹಾಗೂ ಉಪ ಮುಖ್ಯಮಂತ್ರಿಯೂ ಆಗಿರುವ ಡಾ ಜಿ ಪರಮೇಶ್ವರ್ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದರು. ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಕ್ಕೆ ಗುರಿಯಾಗಿರುವ ನೋಂದಣಿ ಮುದ್ರಾಂಕ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ ಸಂಬಂಧ ಇಲಾಖೆ ಅಧಿಕಾರಿಗಳು ಡಾ ಜಿ ಪರಮೇಶ್ವರ್ ಅವರೊಂದಿಗೆ ಸಮಾಲೋಚಿಸಿದ್ದರು ಎಂದು ತಿಳಿದು ಬಂದಿದೆ.
ಈ ಬೆಳವಣಿಗೆ ನಡುವೆಯೇ ಇಂಧನ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ಮುಖ್ಯ ವಿದ್ಯುತ್ ಪರಿವೀಕ್ಷಕರಿಗೆ ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.
ಇಂಧನ ಇಲಾಖೆಯು ಈ ಸಂಬಂಧ 2026ರ ಅಕ್ಟೋಬರ್ 7ರಂದು ಪತ್ರ ಬರೆದಿದೆ. ಈ ಪತ್ರದ ಪ್ರತಿ ಮತ್ತು ಈಶ್ವರರಾಜ್ ಅವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ, ನ್ಯಾಯಾಲಯವು ನೀಡಿರುವ ತೀರ್ಪಿನ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.

ಈಶ್ವರರಾಜ್ ಅವರು ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯಲ್ಲಿ ಒಟ್ಟು 23 ಮಂದಿಯನ್ನು ಪ್ರತಿವಾದಿಯನ್ನಾಗಿಸಿದ್ದರು. ಈ ಪೈಕಿ ಕರ್ನಾಟಕ ರಾಜ್ಯ ಪರವಾನಗಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘವು 23ನೇ ಪ್ರತಿವಾದಿಯಾಗಿದೆ. ಇದೇ ಸಂಘದ ವಿರುದ್ಧ ಈಶ್ವರರಾಜ್ ಅವರು ಗುರುತರವಾದ ಆರೋಪಗಳನ್ನು ಮಾಡಿರುವುದು ಅರ್ಜಿಯಿಂದ ಗೊತ್ತಾಗಿದೆ.

ಈ ಸಂಘವು ಕಾನೂನಿನ ನಿಯಮಗಳನ್ನು ಗಂಭೀರವಾಗಿ ಉಲ್ಲಂಘಿಸಿದೆ ಮತ್ತು ಕಾನೂನುಬದ್ಧ ಮಾನದಂಡಗಳನ್ನು ಕಡೆಗಣಿಸಿದೆ ಎಂದು ಆರೋಪಿಸಲಾಗಿದೆ.
ಅದೇ ರೀತಿ ‘ನಕಲಿ ಸ್ಟಾಂಪ್ ಪೇಪರ್ಗಳ ಸೃಷ್ಟಿಸುವುದು, ಕಾನೂನುಬಾಹಿರವಾಗಿ ಫ್ರಾಂಕಿಂಗ್ ಮಾಡುವುದು ಹಾಗೂ ಮುದ್ರಾಂಕ ಪತ್ರಗಳು ಮತ್ತು ಅರ್ಜಿ ನಮೂನೆಗಳನ್ನು ಅನಧಿಕೃತವಾಗಿ ಮಾರಾಟ ಮಾಡುವುದು ಸೇರಿದಂತೆ ಕೃತ್ಯಗಳಲ್ಲಿ ಈ ಸಂಘ ತೊಡಗಿಸಿಕೊಂಡಿದೆ,’ ಎಂದು ಅರ್ಜಿದಾರರಾದ ಈಶ್ವರರಾಜ್ ಅವರು ಆಪಾದಿಸಿರುವುದು ತಿಳಿದು ಬಂದಿದೆ.
ಈ ರೀತಿಯ ಕೃತ್ಯಗಳಿಂದ ದಾಖಲೆಗಳ ಪಾವಿತ್ರ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಕಾನೂನುಬದ್ಧ ದಾಖಲೆ ಸಿದ್ಧಪಡಿಸುವ ಪ್ರಕ್ರಿಯೆಯ ವಿಶ್ವಾಸಾರ್ಹತೆ ಹಾಗೂ ಪರಿಣಾಮಕಾರಿತ್ವ ಕುಂಠಿತವಾಗುತ್ತದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಇಂತಹ ಕಾನೂನುಬಾಹಿರ ಚಟುವಟಿಕೆಗಳು ಹಣಕಾಸಿನ ವಹಿವಾಟುಗಳ ನೈಜತೆ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆ ತರಲಿದೆ. ಮತ್ತು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳ ಭಾರೀ ನಷ್ಟವನ್ನು ಉಂಟುಮಾಡುತ್ತವೆ ಎಂದು ವಾದಿಸಿರುವುದು ಗೊತ್ತಾಗಿದೆ.

23ನೇ ಪ್ರತಿವಾದಿಯಾಗಿರುವ ಕರ್ನಾಟಕ ರಾಜ್ಯ ಪರವಾನಿಗೆ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಚಟುವಟಿಕೆಗಳು ಸ್ಟಾಂಪ್ ಪೇಪರ್ ವಿತರಣೆ ಮತ್ತು ಬಳಕೆಯನ್ನು ನಿಯಂತ್ರಿಸುವ ಕಾನೂನುಬದ್ಧ ನಿಬಂಧನೆಗಳಿಗೆ ವಿರುದ್ಧವಾಗಿವೆ ಎಂದು ಅರ್ಜಿದಾರರು ಹೇಳಿದ್ದಾರೆ. ಅಲ್ಲದೆ ಮೊದಲನೇ ಪ್ರತಿವಾದಿ ಕಂದಾಯ ಇಲಾಖೆಯಿಂದ ಹಿಡಿದು 21ನೇ ಪ್ರತಿವಾದಿಯಾದ ಮೈಸೂರು ಜಿಲ್ಲೆಯ ಜಿಲ್ಲಾ ನಿಬಂಧಕರು ಈ ಅಕ್ರಮ ಚಟುವಟಿಕೆಗಳನ್ನು ತಡೆಯಲು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪ ಮಾಡಿರುವುದು ತಿಳಿದು ಬಂದಿದೆ.
ಅರ್ಜಿದಾರರ ವಾದದ ಪ್ರಕಾರ, ಕರ್ನಾಟಕ ರಾಜ್ಯ ಪರವಾನಗಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘವು ಕರ್ನಾಟಕ ರಾಜ್ಯದ ಪರವಾನಗಿ ಪಡೆದ ವಿದ್ಯುತ್ ಗುತ್ತಿಗೆದಾರರ ಕಲ್ಯಾಣ ಸಂಘಕ್ಕೆ 2002ರಲ್ಲಿ ಕರ್ನಾಟಕ ಮುದ್ರಾಂಕ (ಮುದ್ರಾಂಕಗಳ ಫ್ರಾಂಕಿಂಗ್ ಮುದ್ರಣ) ನಿಯಮಗಳು, 2000ರ ಅಡಿಯಲ್ಲಿ ಎರಡು ಫ್ರಾಂಕಿಂಗ್ ಯಂತ್ರಗಳನ್ನು ಬಳಸಲು ಪರವಾನಗಿ ನೀಡಲಾಗಿತ್ತು. ಈ ಪರವಾನಗಿಯನ್ನು ಕಾಲಕಾಲಕ್ಕೆ ನವೀಕರಿಸಲಾಗಿತ್ತು. ಭಾರತೀಯ ಮುದ್ರಾಂಕ ಕಾಯ್ದೆ, 1899ರ ಅನುಸೂಚಿ ಮತ್ತು ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಅನುಸೂಚಿಯ ಅಡಿಯಲ್ಲಿ ಬರುವ ದಾಖಲೆಗಳು ಹಾಗೂ ಪತ್ರಗಳ ಮೇಲೆ ಮಾತ್ರ ಫ್ರಾಂಕಿಂಗ್ ಮಾಡಬೇಕು ಎಂಬ ಷರತ್ತುಗಳನ್ನು ಒಳಗೊಂಡಂತೆ ಪರವಾನಗಿ ನೀಡಲಾಗಿತ್ತು.
ಆದರೆ ಈ ಸಂಘವು ಪರವಾನಗಿಯ ಷರತ್ತುಗಳನ್ನು ಉಲ್ಲಂಘಿಸಿದೆ. ಮತ್ತು ವ್ಯವಸ್ಥೆಯಲ್ಲಿರುವ ಲೋಪದೋಷಗಳ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ಇದರ ಮೂಲಕ ಪ್ರತಿವಾದಿ ಸಂಘವು ಹಲವಾರು ದಾಖಲೆಗಳು ಮತ್ತು ಪತ್ರಗಳ ಪ್ರತಿಗಳ ಮೇಲೆ ಫ್ರಾಂಕಿಂಗ್ ಮಾಡುವ ಮೂಲಕ ರಾಜ್ಯದಾದ್ಯಂತ ಗ್ರಾಹಕರಿಂದ ಅತಿಯಾದ ಮತ್ತು ಅತಿರೇಕದ ದರಗಳನ್ನು ವಸೂಲಿ ಮಾಡಿದೆ ಎಂದು ಆರೋಪಿಸಲಾಗಿದೆ.

ಸದಸ್ಯರ ಕಲ್ಯಾಣ ನಿಧಿ (Members Welfare Fund) ಎಂಬ ಹೆಸರಿನಲ್ಲಿ ಸದಸ್ಯರಿಂದಲೂ ಮತ್ತು ಸದಸ್ಯರಲ್ಲದವರಿಂದಲೂ ಸಂಘವು ಕಾನೂನುಬಾಹಿರವಾಗಿ ಹಣ ಸಂಗ್ರಹಿಸುತ್ತಿದೆ ಎಂದು ಹೇಳಲಾಗಿದೆ. ಇದಲ್ಲದೆ, ಕಾನೂನಿನ ಪ್ರಕಾರ ಕನಿಷ್ಠ 200 ರೂಪಾಯಿ ಮೌಲ್ಯದ ಮುದ್ರಾಂಕ ಇರಬೇಕಾದ ನಷ್ಟ ಪರಿಹಾರ ಬಾಂಡ್ಗಳ ಮೇಲೆ ಆ ಕನಿಷ್ಠ ಮೌಲ್ಯವನ್ನು ಸೇರಿಸದೆ ಫ್ರಾಂಕಿಂಗ್ ಮಾಡಲಾಗಿದೆ ಎಂದು ಆಪಾದಿಸಿರುವುದು ತಿಳಿದು ಬಂದಿದೆ.
ಅದೇ ರೀತಿ 200 ರೂಪಾಯಿಗಿಂತ ಕಡಿಮೆ ಅಥವಾ 100 ರೂಪಾಯಿ ಮೌಲ್ಯದ ಮುದ್ರಾಂಕ ಹೊಂದಿರುವ ಲಕ್ಷಾಂತರ ಅರ್ಜಿ ನಮೂನೆಗಳ ಮೇಲೆ ಫ್ರಾಂಕಿಂಗ್ ಮಾಡಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಕರ್ನಾಟಕ ರಾಜ್ಯ ಪರವಾನಿಗೆ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘವು ನಕಲಿ ಮುದ್ರಾಂಕ ಪತ್ರಗಳನ್ನು ಮಾರಾಟ ಮಾಡುವ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿಗಳ ನಷ್ಟ ಉಂಟಾಗಿದೆ,’ ಎಂದು ಅರ್ಜಿದಾರರಾದ ಈಶ್ವರರಾಜ್ ಅವರು ಆರೋಪಿಸಿರುವುದು ಗೊತ್ತಾಗಿದೆ.
ಈ ಎಲ್ಲಾ ಚಟುವಟಿಕೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ, ಅವರು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದ ಈಶ್ವರರಾಜ್ ಅವರು 2024ರಲ್ಲೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ನ್ಯಾಯಾಲಯವು ಎಲ್ಲಾ ಪ್ರತಿವಾದಿಗಳಿಗೂ ನೋಟೀಸ್ ಜಾರಿಗೊಳಿಸಿತ್ತು.
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು (ವಿಪತ್ತು ನಿರ್ವಹಣೆ, ಮುದ್ರಾಂಕ ಮತ್ತು ನೋಂದಣಿ ಹಾಗೂ ಸಂಬಂಧಿತ ವಿಭಾಗಗಳು) 2024ರ ನವೆಂಬರ್ 19ರಂದು ಪ್ರಮಾಣಪತ್ರವನ್ನು (ಅಫಿಡವಿಟ್) ಸಲ್ಲಿಸಿದ್ದರು.

ಈ ಇಲಾಖೆಯು ವಿಶೇಷ ಲೆಕ್ಕಪರಿಶೋಧನೆ ನಡೆಸುವಂತೆ ಕೋರಿಕೆ ಸಲ್ಲಿಸಿತ್ತು. ಅದರ ಆಧಾರದ ಮೇಲೆ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಪ್ರಧಾನ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಸೆಕ್ಷನ್ 10A ಅಡಿಯಲ್ಲಿ ನಡೆದ ವಹಿವಾಟುಗಳಲ್ಲಿ ಉಂಟಾಗಿರುವ ವ್ಯತ್ಯಾಸಗಳನ್ನು ಪರಿಶೀಲಿಸಲು ಮೈಸೂರು ಜಿಲ್ಲೆಯ ಮೈಸೂರು ದಕ್ಷಿಣ ಮತ್ತು ಮೈಸೂರು ಪೂರ್ವ ಉಪನೋಂದಣಾಧಿಕಾರಿಗಳ ಕಚೇರಿಗಳ ಲೆಕ್ಕಪತ್ರಗಳ ವಿಶೇಷ ಲೆಕ್ಕಪರಿಶೋಧನೆ ನಡೆಸುವಂತೆ ಸೂಚಿಸಲಾಗಿತ್ತು ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ವಿವರಿಸಿದ್ದರು.
ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು 2024ರ ಫೆ.17ರಂದು ಬರೆದ ಪತ್ರದ ಅನುಸಾರ, ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳು 2024ರ ಮಾರ್ಚ್ 14ರಿಂದ 25ರವರೆಗೆ ವಿಶೇಷ ಲೆಕ್ಕಪರಿಶೋಧನೆ ನಡೆಸಿದ್ದರು.
2022–23ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಮೈಸೂರು ಪೂರ್ವ ಮತ್ತು ಮೈಸೂರು ದಕ್ಷಿಣ ಉಪನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಸೆಕ್ಷನ್ 10(A) ಅಡಿಯಲ್ಲಿ ನಡೆದ ವಹಿವಾಟುಗಳನ್ನು ಪರಿಶೀಲಿಸಿತ್ತು. ವಿಶೇಷ ಲೆಕ್ಕಪರಿಶೋಧನೆಯ ಪರಿಶೀಲನಾ ವರದಿಯನ್ನು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಪ್ರಧಾನ ನಿರ್ದೇಶಕರು 2024ರ ಏಪ್ರಿಲ್ 23ರಂದು ಹಣಕಾಸು ಇಲಾಖೆಗೆ ಸಲ್ಲಿಸಿದ್ದರು. ಈ ವರದಿ ಅಧರಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಆ ವರದಿಯನ್ನು ನೋಂದಣಿ ಮಹಾನಿರೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರಿಗೆ ಕಳುಹಿಸಲಾಗಿತ್ತು.
ವ್ಯವಸ್ಥೆಯಲ್ಲಿ ಗುರುತಿಸಲಾದ ಲೋಪದೋಷಗಳ ಆಧಾರದ ಮೇಲೆ, ಸರ್ಕಾರಿ ಆದಾಯದ ಸೋರಿಕೆಯನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರಲ್ಲಿ ಸಂಬಂಧಿತ ಕಾಯ್ದೆಯಾದ ಕರ್ನಾಟಕ ಮುದ್ರಾಂಕ ಕಾಯ್ದೆ ಮತ್ತು ಅದರ ನಿಯಮಗಳಿಗೆ ತಿದ್ದುಪಡಿ ತರುವ ಪ್ರಕ್ರಿಯೆಯೂ ಸೇರಿದೆ ಎಂದು ಪ್ರಮಾಣ ಪತ್ರದಲ್ಲಿ ವಿವರಿಸಿದ್ದರು.
ನೋಂದಣಿ ಮಾಡಬೇಕಾಗಿಲ್ಲದ ದಾಖಲೆಗಳ ವಹಿವಾಟುಗಳನ್ನು ಕಾವೇರಿ-2 ಪೋರ್ಟಲ್ ಮತ್ತು ಖಜಾನೆ-2 ಪೋರ್ಟಲ್ಗಳೊಂದಿಗೆ ಸಂಯೋಜಿಸಲು ಸಾಫ್ಟ್ವೇರ್ ಅಭಿವೃದ್ಧಿಪಡಿಸುವ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದೆ. ಇದರಿಂದ ಪ್ರಸ್ತುತ ಜಾರಿಯಲ್ಲಿರುವ ಪಾವತಿ ವಿಧಾನ ಹಾಗೂ ಕೈಯಾರೆ ದೃಢೀಕರಣ ಮತ್ತು ಸಹಿ ಮಾಡುವ ವ್ಯವಸ್ಥೆಯನ್ನು ತೆಗೆದುಹಾಕಲು ಉದ್ದೇಶಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.
ಈ ಹೊಸ ವ್ಯವಸ್ಥೆಯನ್ನು 2025ರ ಏಪ್ರಿಲ್ 1ರಿಂದ ಜಾರಿಗೆ ತರಲಾಗುವುದು ಎಂದು ತಿಳಿಸಲಾಗಿದೆ. ರಾಜ್ಯದ ಆದಾಯ ನಷ್ಟಕ್ಕೆ ಕಾರಣವಾದ ಕರ್ತವ್ಯಲೋಪ ಮತ್ತು ಕರ್ತವ್ಯ ನಿರ್ವಹಣೆಯಲ್ಲಿನ ತಪ್ಪುಗಳಿಗೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಆರಂಭಿಸಲಾಗುತ್ತಿದೆ. ನಿಯಮಗಳ ಪ್ರಕಾರ ಈ ಕ್ರಮವನ್ನು ಅದರ ತಾರ್ಕಿಕ ಅಂತ್ಯದವರೆಗೆ ಕೊಂಡೊಯ್ಯಲಾಗುವುದು ಎಂದೂ ನ್ಯಾಯಾಲಯಕ್ಕೆ ಹೇಳಿದ್ದರು.
ಅದೇ ರೀತಿ ರಾಜ್ಯಕ್ಕೆ ಆದಾಯ ನಷ್ಟ ಉಂಟಾಗಲು ನೆರವಾದ ಸಂಸ್ಥೆ ಅಥವಾ ಸಂಘ ಹಾಗೂ ಅದರಲ್ಲಿ ಭಾಗಿಯಾಗಿರುವ ಪದಾಧಿಕಾರಿಗಳ ವಿರುದ್ಧವೂ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಎಲ್ಲಾ ವಿಷಯಗಳಲ್ಲಿ ಕೈಗೊಂಡ ಕ್ರಮಗಳ ವಿವರಗಳನ್ನು ಒಳಗೊಂಡ ಸಮಗ್ರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಪ್ರಮಾಣ ಪತ್ರದಲ್ಲಿ ಹೇಳಲಾಗಿತ್ತು.
ಅದೇ ರೀತಿ 2025ರ ಫೆ.20ರಂದು ಮತ್ತೊಂದು ಪ್ರಮಾಣ ಪತ್ರ ಸಲ್ಲಿಸಿತ್ತು. ಅದರಲ್ಲಿ 2022–23ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳು 2024ರ ಮಾರ್ಚ್ 14ರಿಂದ 25ರವರೆಗೆ ಮೈಸೂರು ಪೂರ್ವ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ವಿಶೇಷ ಲೆಕ್ಕಪರಿಶೋಧನೆ ನಡೆಸಿದ್ದಾರೆ ಎಂದು ತಿಳಿಸಿತ್ತು.

ಈ ಪರಿಶೀಲನೆಯು ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಸೆಕ್ಷನ್ 10(A) ಅಡಿಯಲ್ಲಿ ನಡೆದ ವಹಿವಾಟುಗಳಿಗೆ ಸಂಬಂಧಿಸಿತ್ತು. ಹಿಂದಿನ ಪ್ರಮಾಣಪತ್ರದಲ್ಲಿ ತಿಳಿಸಿದ್ದ ವಿಷಯಗಳನ್ನು ಪುನರುಚ್ಚರಿಸಿತ್ತು. ವಿಶೇಷ ಲೆಕ್ಕಪರಿಶೋಧನೆಯ ವರದಿಯನ್ನು ಹಣಕಾಸು ಇಲಾಖೆಗೆ ಸಲ್ಲಿಸಲಾಗಿದೆ ಎಂದು ತಿಳಿಸಿತ್ತು. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸಕ್ಷಮ ಪ್ರಾಧಿಕಾರವಾದ ನೋಂದಣಿ ಮಹಾನಿರೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಶಿಸ್ತು ಕ್ರಮವನ್ನು ಆರಂಭಿಸಿದ್ದಾರೆ ಎಂದು ಕೊನೆಯ ಪ್ರಮಾಣಪತ್ರದಲ್ಲಿ ಹೆಚ್ಚುವರಿಯಾಗಿ ಮಾಹಿತಿ ಒದಗಿಸಿತ್ತು.
ಈ ಸಂಬಂಧ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 11ರ ಅಡಿಯಲ್ಲಿ 2025ರ ಫೆ. 7 ರಂದು ನೋಟಿಸ್ ಜಾರಿಗೊಳಿಸಲಾಗಿದೆ. ಶಿಸ್ತು ಕ್ರಮಕ್ಕೆ ಒಳಪಡಿಸಲಾದ ಅಧಿಕಾರಿಗಳ ಪಟ್ಟಿಯನ್ನೂ ಸಲ್ಲಿಸಿತ್ತು.

ಹಿರಿಯ ಉಪನೋಂದಣಾಧಿಕಾರಿಯಾದ ನಾಗರಾಜ್ ಎಚ್.ಜೆ, ಪ್ರಥಮದರ್ಜೆ ಸಹಾಯಕ ಕೆ.ಪಿ. ಮಹೇಶ್, ದ್ವಿತೀಯ ದರ್ಜೆ ಸಹಾಯಕರಾದ ಎಲ್. ರಜನಿ, ಸಿ. ಗುರುರಾಜ್, ನಾಗರಾಜ್, ಮೈಊರು ದಕ್ಷಿಣ ಎಚ್ ಡಿ ಕೋಟೆಯ ಹಿರಿಯ ಉಪನೋಂದಣಾಧಿಕಾರಿ ಸಿ.ಪಿ. ನಂದಿನಿ,ಉಪನೋಂದಣಾಧಿಕಾರಿ ವೆಂಕಟೇಶ್ ಟಿ, ಯಶಸ್ವಿನಿ ಜೆ, ಪ್ರಥಮ ದರ್ಜೆ ಸಹಾಯಕ ಎನ್. ನಿಂಗರಾಜು, ದ್ವಿತೀಯ ದರ್ಜೆ ಸಹಾಯಕ ನಾಗೇಂದ್ರ ಪ್ರಸಾದ್, ಎಂ. ಪ್ರೇಮಕುಮಾರ್, ಎಂ. ಶಿವಕುಮಾರ ಸ್ವಾಮಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ಮಾಹಿತಿ ಒದಗಿಸಿತ್ತು.

ಈ ಅಕ್ರಮ ಚಟುವಟಿಕೆಗಳಿಗೆ ನೆರವಾದ ಮತ್ತು ರಾಜ್ಯಕ್ಕೆ ಆದಾಯ ನಷ್ಟ ಉಂಟಾಗಲು ಕಾರಣರಾದ ಸಂಘ ಹಾಗೂ ಅದರ ಪದಾಧಿಕಾರಿಗಳ ವಿರುದ್ಧವೂ ನಿಯಮಾನುಸಾರ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ ಮತ್ತು ಆ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿತ್ತು.
ಈ ಸಂಬಂಧ ಪ್ರಥಮ ಮಾಹಿತಿ ವರದಿ (FIR) ದಾಖಲಿಸುವ ಪ್ರಕ್ರಿಯೆಯೂ ನಡೆಯುತ್ತಿದೆ ಎಂದು ಪ್ರಮಾಣಪತ್ರದಲ್ಲಿ ಹೇಳಿತ್ತು. ಈ ಪ್ರಮಾಣಪತ್ರವನ್ನು ಪರಿಗಣಿಸಿದಾಗ, ಪ್ರಸ್ತುತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಎತ್ತಲಾಗಿರುವ ವಿಷಯದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ನ್ಯಾಯಾಲಯವು ಅಭಿಪ್ರಾಯಿಸಿತ್ತು.
ಅಕ್ರಮಗಳು ಮತ್ತು ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಗುರುತಿಸಲು, ಪರಿಶೀಲಿಸಲು ಮತ್ತು ಸರಿಪಡಿಸಲು ಅಧಿಕಾರಿಗಳು ನಿರ್ದಿಷ್ಟ ಕ್ರಮಗಳನ್ನು ಕೈಗೊಂಡಿದ್ದಾರೆ. ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ತಪ್ಪೆಸಗಿರುವುದು ಕಂಡುಬಂದ ಅಧಿಕಾರಿಗಳ ವಿರುದ್ಧ ತಡೆಗಟ್ಟುವ ಕ್ರಮಗಳು ಹಾಗೂ ಶಿಸ್ತು ಕ್ರಮಗಳನ್ನೂ ಕೈಗೊಳ್ಳಲಾಗಿದೆ.
ಅಧಿಕಾರಿಗಳು ಈಗಾಗಲೇ ಆರಂಭಿಸಿರುವ ಕಾನೂನು ಪ್ರಕ್ರಿಯೆಯನ್ನು ಅದರ ತಾರ್ಕಿಕ ಅಂತ್ಯದವರೆಗೆ ಕೊಂಡೊಯ್ಯಬೇಕು ಎಂಬ ಅಭಿಪ್ರಾಯವನ್ನು ದಾಖಲಿಸಿತ್ತು.

ಮುದ್ರಾಂಕ ಪತ್ರಗಳ ಮೇಲೆ ಫ್ರಾಂಕಿಂಗ್ ಮಾಡುವ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಸೂಕ್ತ ಮತ್ತು ನಿರಂತರ ನಿಗಾ ವಹಿಸಬೇಕು, ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ನಕಲಿ ಅಥವಾ ಕೃತಕ ಮುದ್ರಾಂಕ ಪತ್ರಗಳನ್ನು ಸೃಷ್ಟಿಸುವುದು ಮತ್ತು ಬಳಸುವುದನ್ನು ತಡೆಯಬೇಕು, ಕಾನೂನುಬದ್ಧ ದಾಖಲೆಗಳನ್ನು ಸಿದ್ಧಪಡಿಸುವ ಪ್ರಕ್ರಿಯೆಯ ಪಾವಿತ್ರ್ಯ, ವಿಶ್ವಾಸಾರ್ಹತೆ ಮತ್ತು ನಿಯಮಬದ್ಧತೆಯನ್ನು ಕಾಪಾಡಬೇಕು ಎಂದು ನ್ಯಾಯಾಲಯವು ಸೂಚಿಸಿತ್ತು.
ಪ್ರತಿವಾದಿ ಅಧಿಕಾರಿಗಳು ಈಗಾಗಲೇ ಪರಿಹಾರಾತ್ಮಕ ಹಾಗೂ ತಡೆಗಟ್ಟುವ ಕ್ರಮಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ, ಈ ನ್ಯಾಯಾಲಯವು ಪ್ರಸ್ತುತ ವಿಚಾರಣೆಯನ್ನು ಮುಕ್ತಾಯಗೊಳಿಸಿತ್ತು. ಅಲ್ಲದೆ ಪ್ರಸ್ತುತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಇಲ್ಲಿಗೆ ಅಂತ್ಯಗೊಳಿಸಿ ಅದರಂತೆ ಅರ್ಜಿಯನ್ನು ವಿಲೇವಾರಿ ಮಾಡಿತ್ತು.

ನ್ಯಾಯಾಲಯವು ನೀಡಿದ್ದ ಈ ತೀರ್ಪಿನ ಅನುಸಾರ ಈ ಪ್ರಕರಣವನ್ನು ಸಿಬಿಐನಿಂದ ಸ್ವತಂತ್ರ ತನಿಖೆ ನಡೆಸಬೇಕು ಎಂದು ಅರ್ಜಿದಾರ ಈಶ್ವರರಾಜ್ ಅವರು ಸರ್ಕಾರದ ಮೆಟ್ಟಿಲೇರಿದ್ದರು. ಈ ಸಂಬಂಧ ಅವರು 2026ರ ಆಗಸ್ಟ್ 3ರಂದು ನೀಡಿದ್ದ ಮನವಿಯನ್ನು ಸರ್ಕಾರವು ಪರಿಶೀಲಿಸಿದೆ.

‘2025ರ ಫೆ.20ರಂದು ಹೈಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸಿ ಪ್ರಕರಣದ ಕುರಿತು ಕೇಂದ್ರ ತನಿಖಾ ದಳದಿಂದ ಸ್ವತಂತ್ರ ತನಿಖೆ ನಡೆಸುವಂತೆ ಕೋರಿರುತ್ತಾರೆ. ಈ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ಪರವಾನಿಗೆ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘವು 23ನೇ ಪ್ರತಿವಾದಿಯಾಗಿದೆ. ಈ ಸಂಸ್ಥೆಯ ವಿರುದ್ಧದ ಆರೋಪಗಳ ಬಗ್ಗೆ ಉಚ್ಛ ನ್ಯಾಯಾಲಯವು ನೀಡಿರುವ ತೀರ್ಪಿನ ಅಂಶಗಳನ್ನು ಪರಿಶೀಲಿಸಿ ಕೂಡಲೇ ನಿಯಮಾನುಸಾರ ಅಗತ್ಯ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು,’ ಎಂದು ಇಂಧನ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಸೂಚಿಸಿರುವುದು ತಿಳಿದು ಬಂದಿದೆ.




