ಬೆಂಗಳೂರು; ದಿ ಫೈಲ್ ಸುದ್ದಿ ಜಾಲತಾಣದಲ್ಲಿ ಪ್ರಕಟಿಸಿದ್ದ ವರದಿ ಉಲ್ಲೇಖಿಸಿ ಸಂಪಾದಕರಿಗೆ ಮೊಬೈಲ್ ವಾಟ್ಸಾಪ್ ಕರೆ ಮೂಲಕ ಜೀವ ಬೆದರಿಕೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಂದಿನಿ ಲೇ ಔಟ್ ಪೊಲೀಸ್ ಠಾಣೆಯ ಪೊಲೀಸರು ಕಡೆಗೂ ಎಫ್ಐಆರ್ ದಾಖಲಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಸ್ವೀಕರಿಸಿದ್ದ ನಂದಿನಿ ಲೇ ಔಟ್ ಪೊಲೀಸ್ ಠಾಣೆ ಪೊಲೀಸರು ಆರಂಭದಲ್ಲಿ ಎನ್ಸಿಆರ್ ನೀಡಿದ್ದರು. ಅಪರಿಚಿತನ ವಿರುದ್ಧ ಎಫ್ಐಆರ್ ದಾಖಲಿಸದೆಯೇ ಎನ್ಸಿಆರ್ ಮೂಲಕ ಹಿಂಬರಹ ನೀಡಿದ್ದನ್ನು ಕರ್ನಾಟಕ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ ವೈ ವಿಜಯೇಂದ್ರ, ಕರ್ನಾಟಕ ರಾಷ್ಟ್ರಸಮಿತಿ ಸೇರಿದಂತೆ ಹಲವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಹಾಗೆಯೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವೂ ಸಹ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು.
ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ವಕೀಲರು ಮತ್ತು ಸಾಮಾಜಿಕ ಹೋರಾಟಗಾರರು ಸಹ ಪೊಲೀಸರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ್ದರಲ್ಲದೇ ಖಂಡಿಸಿದ್ದರು. ಈ ಬೆಳವಣಿಗೆಗಳು ಮತ್ತು ಒತ್ತಡ ತೀವ್ರವಾದ ನಂತರ ನಂದಿನಿ ಪೊಲೀಸ್ ಠಾಣೆ ಪೊಲೀಸರು 2026 ಸೆಪ್ಟಂಬರ್ 11ರಂದು ಬೆಳಿಗ್ಗೆ 10 ಗಂಟೆಗೆ ಎಫ್ಐಆರ್ ದಾಖಲಿಸಿದ್ದಾರೆ.
ದೂರರ್ಜಿಯಲ್ಲಿ ನಮೂದಿಸಿದ್ದ ಮೊಬೈಲ್ ಸಂಖ್ಯೆಯನ್ನು ಎಫ್ಐಆರ್ ಸಾರಾಂಶದಲ್ಲಿ ಉಲ್ಲೇಖಿಸಿರುವ ಪೊಲೀಸರು ಅಪರಿಚಿತ ವ್ಯಕ್ತಿ ವಿರುದ್ಧ ಬಿಎನ್ಎಸ್ 2023ರ ಸೆಕ್ಷನ್ 352 ಮತ್ತು, 351 (3) ಅಡಿಯಲ್ಲಿ ಎಫ್ಐಆರ್ (ಮೊಕದ್ದಮೆ ಸಂಖ್ಯೆ; 364/2026) ದಾಖಲಿಸಿದ್ದಾರೆ.

ಬಿಎನ್ಎಸ್ 351 (3) ರ ಪ್ರಕಾರ ಗಂಭೀರ ಸ್ವರೂಪದ ಬೆದರಿಕೆ ಒಡ್ಡಿದ ಆರೋಪವಾಗಿದೆ. ಈ ಆರೋಪವು ಸಾಬೀತಾದಲ್ಲಿ ಗರಿಷ್ಠ 7 ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಈ ಎರಡನ್ನೂ ವಿಧಿಸಬಹುದು. ಕಲಂ 352 ಪ್ರಕಾರ ಉದ್ದೇಶಪೂರ್ವಕ ಅವಮಾನ ಮತ್ತು ಶಾಂತಿಭಂಗದ ಆರೋಪವಾಗಿದೆ. ಯಾರಾದರೂ ಒಬ್ಬ ವ್ಯಕ್ತಿಯನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿ, ಆ ಮೂಲಕ ಆ ವ್ಯಕ್ತಿಯು ಸಾರ್ವಜನಿಕ ಶಾಂತಿಯನ್ನು ಕದಡುವಂತೆ ಅಥವಾ ಯಾವುದೇ ಅಪರಾಧವನ್ನು ಮಾಡುವಂತೆ ಪ್ರಚೋದಿಸಿದರೆ ಈ ಸೆಕ್ಷನ್ ಅನ್ವಯವಾಗಲಿದೆ.

ಇದು ಕೇವಲ ಬಯ್ಗುಳ್ಳವಲ್ಲ, ಬದಲಿಗೆ ಎದುರಾಳಿಯು ಹಿಂಸಾಚಾರಕ್ಕೆ ಇಳಿಯಲು ಎಂಬ ಉದ್ದೇಶದಿಂದ ಮಾಡುವ ತೀವ್ರ ಅವಮಾನವಾಗಿದೆ. ಈ ಅಪರಾಧ ಸಾಬೀತಾದರೆ 2 ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ನ್ಯೂಸ್ ವೆಬ್ಸೈಟಿನಲ್ಲಿ ಪ್ರಕಟಿಸಿದ ವರದಿಗಳಿಗೆ ಸಂಬಂಧಿಸಿ ಅಪರಿಚಿತ ವ್ಯಕ್ತಿಯೋರ್ವ ಮೊಬೈಲ್ ಕರೆ ಹಾಗೂ ವಾಟ್ಸ್ಆ್ಯಪ್ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಜಿ ಮಹಂತೇಶ್ ಅವರು ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ 2026ರ ಸೆ.10ರಂದು ದೂರು ನೀಡಿದ್ದರು.
ಸೆ.8 ಮತ್ತು 9ರಂದು ಪ್ರಕಟಿಸಿದ್ದ ವರದಿಗಳನ್ನು ತಮ್ಮ ಹೆಸರಿನಲ್ಲಿರುವ ‘Mahanthesh Bhadravathi’ ಹಾಗೂ ‘The-File’ ಫೇಸ್ಬುಕ್ ಖಾತೆಗಳಲ್ಲಿ ಪೋಸ್ಟ್ ಮಾಡಿರುವುದಾಗಿ ತಿಳಿಸಿರುವ ಅವರು, ಈ ವರದಿಗಳಿಗೆ ಸಂಬಂಧಿಸಿ ವ್ಯಕ್ತಿಯೋರ್ವ 9916706273 ಸಂಖ್ಯೆಯಿಂದ ಮೊಬೈಲ್ ಹಾಗೂ ವಾಟ್ಸ್ಆ್ಯಪ್ ಕರೆ ಮಾಡಿ, ವರದಿಗಳ ಬಗ್ಗೆ ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, ವರದಿಗಳನ್ನು ತೆಗೆದುಹಾಕದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದರು.
ತಮ್ಮ ಫೇಸ್ಬುಕ್ ಖಾತೆಗಳಲ್ಲಿ ಪ್ರಕಟಿಸಿದ್ದ ಪೋಸ್ಟ್ಗಳಿಗೂ ಅವಾಚ್ಯ ಶಬ್ದಗಳಿಂದ ಕಮೆಂಟ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ರಕ್ಷಿಸುವಂತೆ ಹಾಗೂ ಬೆದರಿಕೆ ಹಾಕಿದ ವ್ಯಕ್ತಿಯನ್ನು ಪತ್ತೆಹಚ್ಚಿ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅವರು ಮನವಿ ಮಾಡಿದ್ದರು.



ಈ ದೂರನ್ನು ಸ್ವೀಕರಿಸಿದ್ದ ನಂದಿನಿ ಲೇ ಔಟ್ ಪೊಲೀಸರು, ನ್ಯಾಯಾಲಯದ ಅನುಮತಿ ಪಡೆದಲ್ಲಿ ಮಾತ್ರ ದೂರು ದಾಖಲಿಸಿ ತನಿಖೆ ಮುಂದುವರೆಸಲಾಗುವುದು ಎಂದು ಹಿಂಬರಹದಲ್ಲಿ ವಿವರಿಸಿದ್ದರು.


ಗೃಹ ಇಲಾಖೆ ಯಾರನ್ನು ರಕ್ಷಿಸುತ್ತಿದೆ?
ಈ ಪ್ರಕರಣದ ಕುರಿತು ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ‘ಪತ್ರಕರ್ತನಿಗೆ ಜೀವ ಬೆದರಿಕೆ – FIR ದಾಖಲಿಸಲು ನಿರಾಕರಣೆ! ಪ್ರಿಯಾಂಕ್ ಖರ್ಗೆ ಅವರ ಗೃಹ ಇಲಾಖೆ ಯಾರನ್ನು ರಕ್ಷಿಸುತ್ತಿದೆ,’ ಎಂದು ಪ್ರಶ್ನಿಸಿದ್ದರು.

ಭಾಷಣದ ಮೌಲ್ಯಗಳು ಎಲ್ಲಿ ಅಡಗಿ ಕುಳಿತುಕೊಂಡಿವೆ?
ಗೃಹ ಸಚಿವ ಅವರೇ, ನೀವು ಗೃಹ ಸಚಿವರಾಗಿರೋದು ಜನಸಾಮಾನ್ಯರಿಗೆ ರಕ್ಷಣೆ ಕೊಡಲೋ ಅಥವಾ ನಿಮ್ಮ ವೈಯಕ್ತಿಕ ಮತ್ತು ರಾಜಕೀಯ ಹಿತಾಸಕ್ತಿಗಳನ್ನು ಕಾಯಲು ಪೋಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುವುದದಕ್ಕೊ? ಮೈಕು ಸಿಕ್ಕರೆ ಸಾಕು ಸಂವಿಧಾನ, ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು “ಮೊಹಬ್ಬತ್ ಕಿ ದುಕಾನ್” ಬಗ್ಗೆ ಉದ್ದುದ್ದ ಭಾಷಣ ಮಾಡುವ ತಾವು, ಸತ್ಯವನ್ನು ವರದಿ ಮಾಡಿದ ಪತ್ರಕರ್ತನಿಗೆ ಬೆದರಿಕೆ ಹಾಕಿರುವಾಗ ನಿಮ್ಮ ಈ ಭಾಷಣದ ಮೌಲ್ಯಗಳು ಎಲ್ಲಿ ಅಡಗಿ ಕುಳಿತುಕೊಂಡಿವೆ ಎಂದು ಪ್ರಶ್ನಿಸಿದ್ದರು.
ಕೈ ತೊಳೆದುಕೊಂಡಿದ್ದೇಕೆ ಪೊಲೀಸರು?
ಸ್ವತಂತ್ರ ಮಾಧ್ಯಮ ಸಂಸ್ಥೆ The File ನ ಪ್ರಧಾನ ಸಂಪಾದಕರಾದ ಜಿ. ಮಹಾಂತೇಶ್ ಅವರು ಸಿದ್ಧಾರ್ಥ ವಿಹಾರ ಟ್ರಸ್ಟ್ಗೆ ಸಂಬಂಧಿಸಿದ ಅಕ್ರಮಗಳ ಕುರಿತು ತನಿಖಾ ವರದಿ ಪ್ರಕಟಿಸಿದ ತಕ್ಷಣವೇ (ಸೆಪ್ಟೆಂಬರ್ 8 ಮತ್ತು 9), ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿವೆ. ಅತ್ಯಂತ ಕೆಟ್ಟ ಭಾಷೆಯಲ್ಲಿ ನಿಂದಿಸಿ, “ಮನೆ ಬಾಗಿಲಿಗೆ ಬಂದು ಹೊಡೆಯುತ್ತೇನೆ” ಬೆದರಿಕೆ ಒಡ್ಡಲಾಗಿದೆ. ಆದರೆ ನಿಮ್ಮ ಪೋಲಿಸರು ಏನು ಮಾಡಿದರು, ಪ್ರಿಯಾಂಕ್ ಖರ್ಗೆ ಅವರೇ? ದೂರು ನೀಡಲು ಹೋದ ಪತ್ರಕರ್ತನ ದೂರು ಸ್ವೀಕರಿಸಿ, ರಕ್ಷಣೆ ಕೊಟ್ಟು, ತನಿಖೆ ನಡೆಸುವ ಬದಲು, ಎಫ್ಐಆರ್ ದಾಖಲಿಸಲು ನೇರವಾಗಿ ನಿರಾಕರಿಸಿದ್ದಾರೆ. NCR No. 556/2026 ನೀಡಿ, “ನ್ಯಾಯಾಲಯದಿಂದ ಅನುಮತಿ ತನ್ನಿ” ಎಂದು ಕಳಿಸಿ ತಮ್ಮ ಕೈತೊಳೆದುಕೊಂಡಿದ್ದಾರೆ, ಅಂದರೆ ಪರೋಕ್ಷವಾಗಿ ಬೆದರಿಕೆ ಒಡ್ಡಿದವರ ರಕ್ಷಣೆಗೆ ನಿಂತಿದ್ದಾರೆ.ಇದೇನಾ ನೀವು ಗೌರವಿಸುವ ಸಂವಿಧಾನ ಎಂದೂ ತರಾಟೆಗೆ ತೆಗೆದುಕೊಂಡಿದ್ದರು.

ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೂಂಡಾಗಿರಿಯಿಂದ ಅಡಗಿಸಲು ಯತ್ನಿಸುತ್ತಿದ್ದರೂ ಗೃಹ ಇಲಾಖೆ ಯಾಕೆ ಮೌನ ವಹಿಸಿದೆ. ಇದೇನಾ ನಿಮ್ಮ ಪ್ರಜಾಪ್ರಭುತ್ವ? ಗಂಭೀರ ಜೀವ ಬೆದರಿಕೆಯನ್ನು “ಅಸಂಜ್ಞೆಯ ಅಪರಾಧ” (NCR) ಎಂದು ಪರಿಗಣಿಸಿ, ಬೆದರಿಕೆ ಹಾಕಿದ ಗೂಂಡಾಗಳಿಗೆ ಪೋಲೀಸ್ ರಕ್ಷಣೆ ನೀಡಲಾಗುತ್ತಿದೆ. ಇದೇನಾ ನೀವು ಕರ್ನಾಟಕದಲ್ಲಿ ತೆರೆದಿರುವ ಅವರ ‘ಮೊಹಬ್ಬತ್ ಕಿ ದುಕಾನ್’ ಎಂದು ಸರ್ಕಾರವನ್ನು ಕುಟುಕಿದ್ದರು.

‘ಸತ್ಯ ವರದಿ ಮಾಡುವ ಪತ್ರಕರ್ತರಿಗೆ ಬೆದರಿಕೆ. ದೂರು ಕೊಡಲು ಹೋದರೆ, ರಕ್ಷಣೆ ಕೋರಿದರೆ ಪೋಲೀಸರ ಅಸಹಕಾರ ಮತ್ತು ಅಧಿಕಾರ ದುರ್ಬಳಕೆ! ಪ್ರಿಯಾಂಕ್ ಖರ್ಗೆ ಅವರೇ, ಪತ್ರಕರ್ತರ ಮೇಲೆ ದೌರ್ಜನ್ಯ ಮಾಡುವವರನ್ನು ರಕ್ಷಿಸುವುದನ್ನು ಬಿಟ್ಟು: ತಕ್ಷಣವೇ ಬೆದರಿಕೆ ಹಾಕಿದವರ ವಿರುದ್ಧ ಎಫ್ಐಆರ್ ದಾಖಲಿಸಿ. ಪತ್ರಕರ್ತ ಜಿ. ಮಹಾಂತೇಶ್ ಅವರಿಗೆ ತಕ್ಷಣವೇ ಸೂಕ್ತ ಪೋಲೀಸ್ ಭದ್ರತೆ ಒದಗಿಸಿ. ಜೀವ ಬೆದರಿಕೆ ದೂರಿನ ಮೇಲೆ ಕ್ರಮ ಕೈಗೊಳ್ಳದೆ ಜಾರಿಕೊಂಡ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ. ಕರ್ನಾಟಕದ ಜನತೆ ನೋಡುತ್ತಿದ್ದಾರೆ, ನಿಮ್ಮ ಪೋಲೀಸ್ ಇಲಾಖೆ ಇರುವುದು ಪ್ರಾಮಾಣಿಕ ಪತ್ರಕರ್ತನ ರಕ್ಷಣೆಗೆಯೋ ಅಥವಾ ಹೆದರಿಸಿ, ಬೆದರಿಸಿ ಸತ್ಯವನ್ನು ಮುಚ್ಚಿಡಲು ಯತ್ನಿಸುತ್ತಿರುವವರ ರಕ್ಷಣೆಗೋ, ಜನರಿಗೆ ಗೊತ್ತಾಗಲಿ,’ ಎಂದು ಸವಾಲು ಹಾಕಿದ್ದರು.
ಅದೇ ರೀತಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ ವೈ ವಿಜಯೇಂದ್ರ ಅವರು ‘ಕಾಂಗ್ರೆಸ್ ಸರಕಾರದ ಅಡಿಯಲ್ಲಿ ಹಿಂದು ಕಾರ್ಯಕರ್ತರು, ಸರಕಾರಿ ಅಧಿಕಾರಿಗಳಿಗೆ ಮಾತ್ರವಲ್ಲ, ಪತ್ರಕರ್ತರಿಗೂ ಜೀವ ರಕ್ಷಣೆ ಇಲ್ಲ ಎಂಬುದು ಪತ್ರಕರ್ತ ಜಿ.ಮಹಾಂತೇಶ ಅವರಿಗೆ ಗೂಂಡಾಗಳಿಂದ ಜೀವ ಬೆದರಿಕೆ ಬಂದಿರುವುದು ಜ್ವಲಂತ ನಿದರ್ಶನ ಆಗಿದೆ. ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ನೇರ ಸಂಬಂಧ ಹೊಂದಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್ ಅಕ್ರಮದ ಕುರಿತು ವರದಿ ಮಾಡಿರುವ @thefileindia ನ್ಯೂಸ್ ಪೋರ್ಟಲ್ ಮುಖ್ಯಸ್ಥ ಜಿ. ಮಹಾಂತೇಶ ಅವರಿಗೆ ಗೂಂಡಾಗಳಿಂದ ಫೋನ್ ಕರೆ ಮಾಡಿ ಜೀವ ಬೆದರಿಕೆ ಹಾಕಿರುವುದು ಅಕ್ಷಮ್ಯ ಅಪರಾಧ,’ ಎಂದು ಟ್ವೀಟ್ ಮಾಡಿದ್ದರು.

‘ಅದಾದ ಬಳಿಕ ಸಂತ್ರಸ್ತ ಮಹಾಂತೇಶ ಆ ಬಗ್ಗೆ ಪೋಲಿಸರಿಗೆ ದೂರು ನೀಡಿದರೂ ದೂರು ದಾಖಲಿಸದೇ ಇರುವುದು ಈ ರಾಜ್ಯದಲ್ಲಿ ಹಿಟ್ಲರ್ ಆಡಳಿತ ಜಾರಿಯಲ್ಲಿರುವುದಕ್ಕೆ ಸ್ಪಷ್ಟ ನಿದರ್ಶನ. ಮಾತೆತ್ತಿದರೆ ಸಂವಿಧಾನದ ಹಿತರಕ್ಷಕರೆಂದು ಪೋಸ್ ಕೊಡುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಎಂತಹ ಭಕ್ಷಕರು ಎಂಬುದು ಸಾಬೀತಾಗಿದೆ. ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಕಿಂಚಿತ್ತಾದರೂ ನೈತಿಕತೆ ಮತ್ತು ಹೊಣೆಗಾರಿಕೆ ಪ್ರಜ್ಞೆ ಇದ್ದರೆ ಮೊದಲು ಸಂತ್ರಸ್ತ ನೀಡಿದ ದೂರು ದಾಖಲಿಸಬೇಕು. ನಂತರ ಪ್ರಕರಣದ ಕುರಿತು ಗಂಭೀರ ತನಿಖೆ ನಡೆಯಬೇಕು,’ ಎಂದು ಟ್ವೀಟ್ನಲ್ಲಿ ಒತ್ತಾಯಿಸಿದ್ದರು.

‘ಈ ಪ್ರಕರಣದಲ್ಲಿ ರಾಜ್ಯದ ಗೃಹ ಸಚಿವರೇ ಆರೋಪಿ ಆಗಿರುವುದರಿಂದ ಮಾನ್ಯ ಮುಖ್ಯಮಂತ್ರಿಗಳು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಪಡೆದು ನಿಷ್ಪಕ್ಷಪಾತ ತನಿಖೆಗೆ ದಾರಿ ಮಾಡಿಕೊಡಬೇಕು. ಓರ್ವ ಪತ್ರಕರ್ತನಿಗೇ ಈ ರಾಜ್ಯದಲ್ಲಿ ಬದುಕುವ, ವೃತ್ತಿ ನಡೆಸುವ ಅವಕಾಶ ಇಲ್ಲ ಎಂದಾದರೆ ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹೇಗೆ ಕುಸಿದು ಬಿದ್ದಿದೆ ಎಂಬುದು ಸಾಬೀತಾಗುತ್ತದೆ.

ಈ ಪ್ರಕರಣದ ಹಿನ್ನೆಲೆಯಲ್ಲಿ ಬಿಜೆಪಿ ಮುಂದೆ ಏನು ಮಾಡಬೇಕು ಎಂಬುದನ್ನು ಗಂಭೀರವಾಗಿ ಆಲೋಚನೆ ಮಾಡುತ್ತದೆ,’ ಎಂದು ಟ್ವೀಟ್ನಲ್ಲಿ ಹೇಳಿದ್ದರು.




