Saturday | September 5, 2026 |

2,500 ಕೋಟಿ ರು ಮೂಲ ಬೆಲೆಯ ಮೇಲೆ 350 ಕೋಟಿ ಪ್ರೀಮಿಯಂ; ನಾಗರೀಕರ ಮೇಲೆ ಹೊರೆ ಸೃಷ್ಟಿಸಿತೇ ಬಿಎಸ್‌ಡಬ್ಲ್ಯೂಎಂಎಲ್?

ಬೆಂಗಳೂರು;  ಪ್ರಾಥಮಿಕ ಹಂತದ ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯುಎಂಎಲ್‌ ಕರೆದಿರುವ ಟೆಂಡರ್‍‌  ಪ್ರಕ್ರಿಯೆಗಳಲ್ಲಿ ಹಲವು ಲೋಪಗಳನ್ನು ಈಗಾಗಲೇ ಹಿರಿಯ ಐಎಎಸ್‌ ಅಧಿಕಾರಿ ಅಂಜುಂ ಪರ್ವೇಝ್ ನೇತೃತ್ವದ ಸಮಿತಿಯು ಬಯಲು ಮಾಡಿರುವ ಬೆನ್ನಲ್ಲೇ ಇದೀಗ ಇದೇ ಟೆಂಡರ್ ಪ್ರಕ್ರಿಯೆಗಳ ಮೇಲೆ ಆರ್ಥಿಕ ಇಲಾಖೆಯೂ ಸಹ ಮತ್ತಷ್ಟು ಲೋಪಗಳನ್ನು ಬಯಲು  ಮಾಡಿದೆ.

20 ಪ್ಯಾಕೇಜ್‌ಗಳಲ್ಲಿನ ಹೆಚ್ಚಿನ ಟೆಂಡರ್ ಪ್ರೀಮಿಯಂ ಕುರಿತು  ಅಂಜುಂ ಪರ್ವೇಝ್ ಸಮಿತಿ ಮುಂದೆ ಬಿಎಸ್‌ಡಬ್ಲ್ಯೂಎಂಎಲ್‌, ಸಮರ್ಥಿಸಿಕೊಂಡ ನಂತರವೂ  ದರ ಏರಿಕೆ ಸೂತ್ರದಲ್ಲಿನ ವಿರೋಧಾಭಾಸವನ್ನು ಆರ್ಥಿಕ ಇಲಾಖೆಯು ಮುನ್ನೆಲೆಗೆ ತಂದಿದೆ.

ಅಲ್ಲದೇ  ಟೆಂಡರ್ ದಾಖಲೆಯಲ್ಲಿ ಈ ಅಂಶದ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ, ಭವಿಷ್ಯದಲ್ಲಿ ಈ ವಿಚಾರವು ನ್ಯಾಯಾಂಗ ವ್ಯಾಜ್ಯಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ಸರ್ಕಾರವನ್ನು ಎಚ್ಚರಿಸಿದೆ. ಈ ಸಂಬಂಧ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೊಂದಿಗೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್‌ ಅವರು ಚರ್ಚಿಸಿದ್ದರು ಎಂದು ತಿಳಿದು ಬಂದಿದೆ.

ಆರ್ಥಿಕ ಇಲಾಖೆಯು ಸರ್ಕಾರಕ್ಕೆ ನೀಡಿರುವ ಅವಲೋಕನದ ವಿವರಗಳು ದಿ ಫೈಲ್‌ ಗೆ ಲಭ್ಯವಾಗಿವೆ.

ದರ ಏರಿಕೆ ಸೂತ್ರದಲ್ಲಿನ ವಿರೋಧಾಭಾಸ- ಟೆಂಡರ್ ದಾಖಲೆಯಲ್ಲಿ ಸ್ಪಷ್ಟತೆ ಇಲ್ಲ

ಆರ್ಥಿಕ ಇಲಾಖೆಯು ಸರ್ಕಾರಕ್ಕೆ ನೀಡಿರುವ ವರದಿಯ (ಕಂಡಿಕೆ 9.4) ಯಲ್ಲಿ ಟೆಂಡರ್ ಪ್ರೀಮಿಯಂ ಕುರಿತು ಚರ್ಚಿಸಿದೆ.  ಆಡಳಿತಾತ್ಮಕ ಅನುಮೋದನೆಯಲ್ಲಿ (Administrative Approval) ವಾರ್ಷಿಕವಾಗಿ ಶೇ 5ರಷ್ಟು ನಿಗದಿತ ದರ ಏರಿಕೆಯನ್ನು ಸೂಚಿಸಲಾಗಿದೆ. ಆದರೆ ಟೆಂಡರ್‍‌ನಲ್ಲಿ   ಕಾರ್ಮಿಕ ವೆಚ್ಚ ಮತ್ತು ಡೀಸೆಲ್ ವೆಚ್ಚಕ್ಕೆ ಸಂಬಂಧಿಸಿದಂತೆ ವಾಸ್ತವ ವೆಚ್ಚದ ಆಧಾರದ ಮೇಲೆ ದರ ಏರಿಕೆಗೆ ಅವಕಾಶ ನೀಡಲಾಗಿದೆ. ಎರಡು ಸ್ವತಂತ್ರ ವಿಧಾನಗಳು ಒಂದೇ ಸಮಯದಲ್ಲಿ ಜಾರಿಯಾಗಲು ಸಾಧ್ಯವಿಲ್ಲ. ಈ ಅಂಶಕ್ಕೆ ಸಂಬಂಧಿಸಿದಂತೆ ಟೆಂಡರ್ ದಾಖಲೆಯಲ್ಲಿ ಸ್ಪಷ್ಟತೆ ಇಲ್ಲ.  ಸಮಿತಿಯು ಈ ಆಕ್ಷೇಪಣೆಯನ್ನು ಎತ್ತಿದ ನಂತರವೇ ಬಿಎಸ್‌ಡಬ್ಲ್ಯೂಎಂಎಲ್‌ ಈ ಬಗ್ಗೆ ಸ್ಪಷ್ಟನೆ ನೀಡಿದೆ ಎಂದು ಹಣಕಾಸು ಇಲಾಖೆಯು ತನ್ನ ಅವಲೋಕನದಲ್ಲಿ ವಿವರಿಸಿದೆ.

 

 

‘ಟೆಂಡರ್ ದಾಖಲೆಯಲ್ಲಿ ಈ ಅಂಶದ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ, ಭವಿಷ್ಯದಲ್ಲಿ ಈ ವಿಚಾರವು ನ್ಯಾಯಾಂಗ ವ್ಯಾಜ್ಯಕ್ಕೆ ಕಾರಣವಾಗುವ ಸಾಧ್ಯತೆ ಇದೆ,’ ಎಂದು ಆರ್ಥಿಕ ಇಲಾಖೆಯು ಸರ್ಕಾರವನ್ನು ಎಚ್ಚರಿಸಿರುವುದು ಅವಲೋಕನದ ದಾಖಲೆಯಿಂದ ತಿಳಿದು ಬಂದಿದೆ.

ಅಲ್ಲದೇ 20 ಪ್ಯಾಕೇಜ್‌ಗಳಲ್ಲಿ ಹೆಚ್ಚಿನ ಟೆಂಡರ್ ಪ್ರೀಮಿಯಂಗೆ ಯಾವುದೇ ಸಮರ್ಥನೀಯ ಕಾರಣಗಳೇ ಇಲ್ಲ. ಅಲ್ಲದೇ ಇದನ್ನು ಮುಂದಿನ 7 ವರ್ಷಗಳಲ್ಲಿ ಭರಿಸಬೇಕಾಗುತ್ತದೆ. ಅಂದರೇ ಈ  7 ವರ್ಷಗಳಲ್ಲಿ  2,500 ಕೋಟಿ ರು ಮೂಲ ಬೆಲೆಯ ಮೇಲೆ ಸುಮಾರು 350 ಕೋಟಿ ಪ್ರೀಮಿಯಂ ಆಗಿದೆ.  ಇದನ್ನು ಬೆಂಗಳೂರಿನ ನಾಗರೀಕರು ಭರಿಸಬೇಕಾದ ಸ್ಥಿತಿ ಬರಬಹುದು. ಹೀಗಾಗಿ ಬೃಹತ್‌ ಟೆಂಡರ್ ಪ್ರೀಮಿಯಂನ್ನು ಪರಿಗಣಿಸುವಾಗ ಹಣಕಾಸಿನ ಪರಿಣಾಮಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವ ಅಗತ್ಯವಿದೆ ಎಂದು ಆರ್ಥಿಕ ಇಲಾಖೆಯು ಸರ್ಕಾರದ ಗಮನಸೆಳೆದಿದೆ.

 

 

ಆದರೆ ಬಿಎಸ್‌ಡಬ್ಲ್ಯುಎಂಎಲ್‌ ಈ ಅವಲೋಕನವನ್ನು ಒಪ್ಪಿಲ್ಲ.

ಟೆಂಡರ್ ಪ್ರೀಮಿಯಂ ಅನಿಯಂತ್ರಿತ ಆರ್ಥಿಕ ಹೊರೆಯಲ್ಲ. 147 ಬಿಡ್‌ಗಳು, ತಾಂತ್ರಿಕ ಮೌಲ್ಯಮಾಪನ, ಮೇಲ್ಮನವಿ ಪ್ರಕ್ರಿಯೆ, ಮಾತುಕತೆಗಳು, ಮಾರುಕಟ್ಟೆ ಆಧರಿತ ಬೆಲೆ ಆವಿಷ್ಕಾರ ಒಳಗೊಂಡಿರುವ ಪಾರದರ್ಶಕವಾಗಿದೆ. ಇದು ಮುಕ್ತ ಮತ್ತು ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯ ಫಲಿತಾಂಶವಾಗಿದ ಎಂದು ಸಮರ್ಥಿಸಿಕೊಂಡಿದೆ.

ಹಾಗೆಯೇ ಅಂದಾಜಿನ ನಂತರ ಪರಿಷ್ಕರಣೆಯು ಟೆಂಡರ್ ಮೌಲ್ಯಮಾಪನ ಪ್ರಕ್ರಿಯೆ ಮೇಲೆ ಪ್ರಭಾವ ಬೀರುವುದಿಲ್ಲ ಎಂದಿರುವ ಬಿಎಸ್‌ಡಬ್ಲ್ಯೂಎಂಎಲ್‌, ವೆಚ್ಚದ ಅಂಶಗಳನ್ನು ಸೇರಿಸಿದ ನಂತರ ಸ್ವೀಕೃತವಾಗಿರುವ ಬಿಡ್ ದರಗಳು ವಾಣಿಜ್ಯಕವಾಗಿ ಸಮಂಜಸವೆಂದು ಕಂಡು ಬಂದಿದೆ. ಸ್ವೀಕೃತ ಬಿಡ್‌ ಮೊತ್ತವನ್ನು ಮೂಲ ಅಂದಾಜಿನೊಂದಿಗೆ ಹೋಲಿಸುವ ಮೂಲಕ ಆರ್ಥಿಕ ಪರಿಣಾಮಗಳನ್ನು ನಿರ್ಣಯಿಸಲಾಗುವುದಿಲ್ಲ  ಎಂದು ಪ್ರತಿಪಾದಿಸಿರುವುದು ಗೊತ್ತಾಗಿದೆ.

 

 

ಟೆಂಡರ್ ಪ್ರೀಮಿಯಂಗೆ ಸಮರ್ಥನೆ ಒಪ್ಪದ ಆರ್ಥಿಕ ಇಲಾಖೆ

ಅಂತಿಮಗೊಳ್ಳದ ಸಕ್ರಿಯ ಟೆಂಡರ್‌ಗಳಿಗೆ ಶೇ. 14 ಅನ್ನು ಅನುಮೋದಿತ ಮಾನದಂಡ (benchmark) ಎಂದು ಬಿಎಸ್‌ಡಬ್ಲ್ಯೂಎಂಎಲ್‌ ಪರಿಗಣಿಸಲು ಸಾಧ್ಯವಿಲ್ಲ. ಇದಲ್ಲದೆ, 20 ಪ್ಯಾಕೇಜ್‌ಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಶೇ.5ಕ್ಕಿಂತ  ಹೆಚ್ಚಿನ ಟೆಂಡರ್ ಪ್ರೀಮಿಯಂ ಕೂಡ ಪರಿಶೀಲನೆಯಲ್ಲಿದೆ.  ಇನ್ನೂ ಅನುಮೋದನೆಯಾಗಿಲ್ಲ. ಪರಿಶೀಲನೆಯಲ್ಲಿರುವ ಟೆಂಡರ್‌ಗಳು ಪ್ರಸ್ತುತ ಡಿಸಿಎನ್‌ ವ್ಯಾಪ್ತಿಗೆ ಬರುವುದಿಲ್ಲ. ಆದ್ದರಿಂದ ಅವು ಅಂತಿಮಗೊಂಡ ನಂತರ ಪ್ರತ್ಯೇಕವಾಗಿ ಪರಿಗಣಿಸಬಹುದು. ಯಾವುದೇ ಸಂದರ್ಭದಲ್ಲಿಯೂ ಶೇ. 14ರಷ್ಟು ಟೆಂಡರ್ ಪ್ರೀಮಿಯಂ ಅನ್ನು ಅವುಗಳಿಗೆ ಅನುಮೋದಿತ ಮಾನದಂಡ ( benchmark ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಆರ್ಥಿಕ ಇಲಾಖೆಯು ಅವಲೋಕಿಸಿದೆ.

 

 

ಹಾಗೆಯೇ ಟೆಂಡರ್ ದಾಖಲೆಯು ಶೇ. 5ರಷ್ಟು ಹೆಚ್ಚಳ ಮತ್ತು ಅದೇ ಸಮಯದಲ್ಲಿ ಕಾರ್ಮಿಕರ ಮತ್ತು ಡೀಸೆಲ್‌ ವೆಚ್ಚದಲ್ಲಿನ ಹೆಚ್ಚಳಕ್ಕೆ ಸಂಬಂಧಿಸಿದಂತೆ ನೀಡಿರುವ ಸಮರ್ಥನೆಯೂ ಅಸ್ಪಷ್ಟತೆಯಿಂದ ಕೂಡಿದೆ. ಇದು ಎರಡೆರಡು ಬಾರಿ ಎಣಿಕೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಈ ಅಂಶವನ್ನು ಸಮಿತಿಯು ಮೊದಲು ಅವಲೋಕಿಸಿತ್ತು. ಆ ನಂತರವೇ ಬಿಎಸ್‌ಡಬ್ಲ್ಯೂಎಂಎಲ್‌ ಇದನ್ನು ತನ್ನ ಸಮರ್ಥನೆಯಲ್ಲಿ ಉಲ್ಲೇಖಿಸಿದೆ. ಬಿಡ್‌ ದಾಖಲೆಯು ಈ ಅಂಶದ ಬಗ್ಗೆ ಸ್ಪಷ್ಟತೆ ಹೊಂದಿಲ್ಲ. ಹೀಗಾಗಿ ಭವಿಷ್ಯದ ದಿನಗಳಲ್ಲಿ ಇದು ನ್ಯಾಯಾಂಗದ ಮೆಟ್ಟಿಲೇರಿ ಮೊಕದ್ದಮೆ ಅಥವಾ ವ್ಯಾಜ್ಯವನ್ನು ಸೃಷ್ಟಿಸಬಹುದು ಎಂದು ಆರ್ಥಿಕ ಇಲಾಖೆಯು ಅವಲೋಕಿಸಿರುವುದು ತಿಳಿದು ಬಂದಿದೆ.

ಬಿಎಸ್‌ಡಬ್ಲ್ಯೂಎಂಎಲ್‌, ಆರ್ಥಿಕ ಇಲಾಖೆಯ ಈ ಅವಲೋಕನವನ್ನು ಒಪ್ಪಿಲ್ಲ.

ಕೆಪಿಡಬ್ಲ್ಯೂಡಿ ಕೋಡ್‌ 214ರ ಕಂಡಿಕೆ 92 (8)(5)ರ ಪ್ರಕಾರ ಅಂದಾಜು ತಯಾರಿಸುವ ಸಂದರ್ಭದಲ್ಲಿ, ಅನುಷ್ಠಾನದ ಅವಧಿಯಲ್ಲಿ ವೆಚ್ಚಗಳಲ್ಲಿ ಸಂಭವಿಸಬಹುದಾದ ಹೆಚ್ಚಳವನ್ನು ಪರಿಗಣಿಸಿ, ಅಂದಾಜು ತಯಾರಿಸುವ ಮತ್ತು ಆಡಳಿತಾತ್ಮಕ ಅನುಮೋದನೆ ಪಡೆಯುವ ಉದ್ದೇಶಕ್ಕಾಗಿ ಮಾತ್ರ ಬಜೆಟ್‌ ಅಂದಾಜಿನ ಅವಕಾಶವದಂತೆ  ಶೇ. 5ರ ವಾರ್ಷಿಕ ದರದ ವೆಚ್ಚ ಏರಿಕೆ (Annual Escalation) ಯನ್ನು ಸೇರಿಸಲಾಗಿದೆ.

 

 

ಈ ಅವಕಾಶವನ್ನು  ಯಾವುದೇ ಒಪ್ಪಂದಾತ್ಮಕ ಹಕ್ಕು  ನೀಡುವ ಉದ್ದೇಶದಿಂದ ಸೇರಿಸಲಾಗಿಲ್ಲ ಹಾಗೂ  ನಿಗದಿತ ಅಥವಾ ಸ್ವಯಂಚಾಲಿತ ವೆಚ್ಚ ಏರಿಕೆ ಮೊತ್ತವನ್ನು ಪಾವತಿಸಬೇಕೆಂದು ಅರ್ಥೈಸಲಾಗುವುದಿಲ್ಲ. ಯಾವುದೇ ವೆಚ್ಚ ಏರಿಕೆ ಅನ್ವಯವಾಗುವುದಾದರೆ, ಅದು ಒಪ್ಪಂದದಲ್ಲಿರುವ ನಿಯಮಗಳು ಮತ್ತು ಷರತ್ತುಗಳಿಗೆ ಕಟ್ಟುನಿಟ್ಟಾಗಿ ಒಳಪಟ್ಟಿರುತ್ತದೆ.  ಹಾಗೂ ಅದರಲ್ಲಿ ಸ್ಪಷ್ಟವಾಗಿ ಒದಗಿಸಿರುವ ಮಟ್ಟಿಗೆ ಮಾತ್ರ ಪಾವತಿಸಲಾಗುತ್ತದೆ ಎಂದು ಸಮರ್ಥಿಸಿಕೊಂಡಿರುವುದು ಗೊತ್ತಾಗಿದೆ.

ರಿಯಾಯಿತಿದಾರರಿಗೆ ನಿಜವಾದ ಪಾವತಿಗಳನ್ನು ಟೆಂಡರ್ ದಾಖಲೆ ಅನುಬಂಧ 2ರಲ್ಲಿನ ಷರತ್ತಿನ ಪ್ರಕಾರ ಪ್ರತ್ಯೇಕವಾಗಿ ನಿಯಂತ್ರಿಸಲಾಗುತ್ತದೆ. ಬಜೆಟ್‌ ನಿಬಮಧನೆ ಮತ್ತು ಒಪ್ಪಂದದ ಏರಿಕೆ ಕಾರ್ಯ ವಿಧಾನವು ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ. ಹೀಗಾಗಿ ಇವು ಸ್ವತಂತ್ರ ಕ್ಷೇತ್ರಗಳು ಮತ್ತು ಎರಡೆರಡು ಬಾರಿ ಎಣಿಕೆಗೆ ಕಾರಣವಾಗುವುದಿಲ್ಲ ಎಂದು ಸಮಜಾಯಿಷಿ ನೀಡಿದೆ.

ಪ್ರದೇಶ ಆಧಾರಿತ ವೇಯ್ಟೇಜ್ ತಪ್ಪು ಅನ್ವಯ

ಹೆಚ್ಚಿನ ಟೆಂಡರ್ ಪ್ರೀಮಿಯಂಗಳನ್ನು ಸಮರ್ಥಿಸಲು ಬಿಎಸ್‌ಡಬ್ಲ್ಯೂಎಂಎಲ್‌, ಅನಿರೀಕ್ಷಿತ ವೆಚ್ಚಕ್ಕಾಗಿ ಮೀಸಲು   ಶೇ.  3ರಷ್ಟು  ಮೊತ್ತ ಮತ್ತು ಶೇ. 10ರಷ್ಟು ಪ್ರದೇಶ ಆಧರಿತ ವೇಯ್ಟೇಜ್‌ ನ್ನು ಒಟ್ಟಿಗೆ ಬಳಸಿದೆ. ಆದರೆ ಬೆಂಗಳೂರಿನ ಕನಿಷ್ಠ ವೇತನದ ಆಧಾರದ ಮೇಲೆ ಮಾನವ ಸಂಪನ್ಮೂಲ  ವೆಚ್ಚವನ್ನು ಈಗಾಗಲೇ ಬೆಂಗಳೂರಿಗೆ ಅನುಗುಣವಾಗಿ ನಿಗದಿಪಡಿಸಿದೆ. ಹೀಗಾಗಿ ಇದು ಮತ್ತೊಮ್ಮೆ ಎರಡೆರಡು ಬಾರಿ ಎಣಿಕೆ ಆಗಲಿದೆ.  ಇದಲ್ಲದೆ, ವಾಹನದ ಬಂಡವಾಳ ಮೊತ್ತವು  ಸ್ಥಳ ಬದಲಾದರೂ ಬದಲಾಗುವುದಿಲ್ಲ. ಸಮಿತಿಯು ಉಲ್ಲೇಖಿಸಿರುವಂತೆ ಬೆಂಗಳೂರಿನ ರಸ್ತೆ ಪರಿಸ್ಥಿತಿ ಮತ್ತು ವಾಹನಗಳ ಮೈಲೇಜ್‌ನ್ನೂ  ಈಗಾಗಲೇ ಪರಿಗಣಿಸಲಾಗಿದೆ.

 

 

‘ಆದ್ದರಿಂದ, ಹೆಚ್ಚಿನ ಟೆಂಡರ್ ಪ್ರೀಮಿಯಂಗೆ ಸಮರ್ಥನೆಯಾಗಿ ಶೇ. 10ರಷ್ಟು ಪ್ರದೇಶ ಅಧರಿತ ವೇಯ್ಟೇಜ್‌  ಬಳಸಿರುವ ಬಿಎಸ್‌ಡಬ್ಲ್ಯೂಎಂಎಲ್‌ನ ವಾದವೂ ಸಮರ್ಥನೀಯವಲ್ಲ.  ಏಕೆಂದರೆ ಅಂದಾಜು ಈಗಾಗಲೇ ಬೆಂಗಳೂರಿನ ಮಾನದಂಡಗಳಿಗೆ ಅನುಗುಣವಾಗಿ ಸೂಚ್ಯಂಕವನ್ನು  ನಿಗದಿಪಡಿಸಿದೆ,’ ಎಂದು ಆರ್ಥಿಕ ಇಲಾಖೆಯು ಸ್ಪಷ್ಟವಾಗಿ ಅವಲೋಕಿಸಿದೆ.

ಈ ಅವಲೋಕನಕ್ಕೆ ಸಮಜಾಯಿಷಿ ನೀಡಿರುವ  ಬಿಎಸ್‌ಡಬ್ಲ್ಯೂಎಂಎಲ್‌, ಶೇ 10ರಷ್ಟು ಏರಿಯಾ ವೇಯ್ಟೇಜ್ ಉಲ್ಲೇಖವು ಸ್ವೀಕೃತ ಟೆಂಡರ್‍‌ ಪ್ರೀಮಿಯಂ  ಸಮರ್ಥಿಸಲು ಏಕೈಕ ಆಧಾರವಾಗಿಲ್ಲ. ಬದಲಿಗೆ ಅಂದಾಜುಗಳ ಪರಿಶೀಲನೆಯ ಸಮಯದಲ್ಲಿ ಪರಿಗಣಿಸಲಾದ ಹಲವು ತಾಂತ್ರಿಕ ಸೂಚ್ಯಂಕಗಳಲ್ಲಿ ಒಂದಾಗಿದೆ. ನಿಗದಿತ ಪ್ರದೇಶದ ವೇಯ್ಟೇಜ್‌ನ್ನು ಶ್ರೇಣಿ-1 ನಗರಗಳಿಗೆ ಪಿಡಬ್ಲ್ಯೂಡಿ ದರಗಳ ಅಡಿಯಲ್ಲಿಯೇ ಒದಗಿಸಿದೆ. ಹೀಗಾಗಿ ಬೆಂಗಳೂರು ವೆಚ್ಚ ಸೂಚ್ಯಂಕಕ್ಕಿಂತ ಭಿನ್ನವಾಗಿದೆ,’ ಎಂದು ವಿವರಿಸಿದೆ.

ಕನ್ಸೊರ್ಟಿಯಂ  ಸದಸ್ಯರ ಹೆಚ್ಚಳ

ಬಿಎಸ್‌ಡಬ್ಲ್ಯುಎಂಎಲ್ ಬಳಸಿದ ಟೆಂಡರ್ ದಾಖಲೆಯು ಸ್ಟಾಂಡರ್ಡ್ ಬಿಡ್‌ ಡಾಕ್ಯುಮೆಂಟ್‌ನಲ್ಲಿ  ನಿಗದಿಪಡಿಸಿರುವ ಷರತ್ತುಗಳಿಂದ ಭಿನ್ನವಾಗಿದೆ. ಕನ್ಸೊರ್ಟಿಯಂ  ಸದಸ್ಯರ ಗರಿಷ್ಠ ಸಂಖ್ಯೆಯನ್ನು ಮೂರರಿಂದ ಐದಕ್ಕೆ ಹೆಚ್ಚಿಸಲಾಗಿದೆ.  ಅದಕ್ಕೆ ಅನುಗುಣವಾಗಿ ಅಗತ್ಯ ಷೇರು ಹೊಂದಿರುವಿಕೆ  ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಸ್ಟಾಂಡರ್ಡ್ ಬಿಡ್‌ ಡಾಕ್ಯುಮೆಂಟ್‌ ಪ್ರಕಾರ ಎಲ್ಲಾ ಕನ್ಸೋರ್ಟಿಯಂ  ಸದಸ್ಯರೂ ಸಮಾನ ಸ್ವರೂಪದ ಕೆಲಸದಲ್ಲಿ ಹಿಂದಿನ ಅನುಭವ ಹೊಂದಿರಬೇಕು. ಆದರೆ ಬಿಎಸ್‌ಡಬ್ಲ್ಯೂಎಂಎಲ್‌ ಬಳಸಿದ ಟೆಂಡರ್ ದಾಖಲೆಯ ಪ್ರಕಾರ ಒಬ್ಬ ಸದಸ್ಯನಿಗೆ ಮಾತ್ರ ಅಂತಹ ಅನುಭವವಿದ್ದರೂ ಕನ್ಸೋರ್ಟಿಯಂ ಅರ್ಹತೆ ಪಡೆಯಬಹುದು ಎಂದು ಆರ್ಥಿಕ ಇಲಾಖೆಯು ತನ್ನ ಅವಲೋಕನದಲ್ಲಿ ವಿವರಿಸಿದೆ.

 

ಬಿಎಸ್‌ಡಬ್ಲ್ಯೂಎಂಎಲ್‌ನ ಆಡಳಿತ ಮಂಡಳಿ  ಈ ಬದಲಾವಣೆಗಳನ್ನು ಅನುಮೋದಿಸಿರಬಹುದಾದರೂ, ಅದರ ಮೂಲ ಕಾರಣ ಮತ್ತು ಸಮರ್ಥನೆಯು ಆಡಳಿತ ಮಂಡಳಿಯ ನಡವಲಿಯಲ್ಲಿ ಸ್ಪಷ್ಟವಾಗಿ ಕಾಣಿಸುವುದಿಲ್ಲ.  ಇದಲ್ಲದೆ, ಈ ಸಡಿಲಿಕೆಗಳಿಗೆ ಸರ್ಕಾರದ ನಿರ್ದಿಷ್ಟ ಅನುಮೋದನೆಯನ್ನೂ ಪಡೆಯಲಾಗಿಲ್ಲ. 2026ರ ಮೇ 26ರಂದು ನಗರಾಭಿವೃದ್ದಿ ಇಲಾಖೆಯು ಹೊರಡಿಸಿರುವ ಆದೇಶದಲ್ಲಿ  ಯಾವುದೇ ಬದಲಾವಣೆಗೆ ಮುನ್ನ  ಸರ್ಕಾರದ ಅನುಮೋದನೆ ಪಡೆಯಬೇಕೆಂದು ಸ್ಪಷ್ಟವಾಗಿ ಸೂಚಿಸಲಾಗಿದೆ.

 

 

‘ಸರ್ಕಾರದ ನಿರ್ದೇಶನಗಳಿಂದ ಭಿನ್ನವಾಗಿ ನಡೆದುಕೊಳ್ಳುವುದು ಕೆಟ್ಟ ಮಾದರಿಯನ್ನು ನಿರ್ಮಿಸುವುದಲ್ಲದೆ, ಆಡಳಿತಾತ್ಮಕ ಶಿಸ್ತನ್ನೂ ಗಂಭೀರವಾಗಿ ದುರ್ಬಲಗೊಳಿಸುತ್ತದೆ.

ಇದು 2025ರ ಆಗಸ್ಟ್‌ 6ರಂದು  ಹಣಕಾಸು ಆಡಳಿತ ಹೊರಡಿಸಿದ್ದ  ಸುತ್ತೋಲೆಯಲ್ಲಿನ ನಿರ್ದಿಷ್ಟ ಸೂಚನೆಗಳನ್ನು ಬದಿಗೆ ಸರಿಸಿದೆ. ಆರ್ಥಿಕ ಇಲಾಖೆಯ ಸುತ್ತೋಲೆಯಲ್ಲಿ ನ ನಿರ್ದಿಷ್ಟ ಸೂಚನೆಗಳನ್ನು ಪಾಲಿಸದೇ ಇರುವುದು ಬಿಎಸ್‌ಡಬ್ಲ್ಯೂಎಂಎಲ್‌ನ ಲೋಪವಾಗಿದೆ,’ ತನ್ನ ಅವಲೋಕನದಲ್ಲಿ ಬಯಲು ಮಾಡಿದೆ.

ಅಲ್ಲದೇ 2005ರ ಆಗಸ್ಟ್‌ 6ರಂದು ಹೊರಡಿಸಿದ್ದ ಸರ್ಕಾರದ ಆದೇಶ ಮತ್ತು ಹಣಕಾಸು ಇಲಾಖೆ ಹೊರಡಿಸಿದ್ದ ಸುತ್ತೋಲೆಯನ್ನು ಪಾಲಿಸಿಲ್ಲ. ಹಣಕಾಸು ಇಲಾಖೆಯ ಸ್ಥಾಯಿ ಸೂಚನೆಗಳನ್ನೂ ಪಾಲಿಸದೇ ಇರುವುದು ಬಿಎಸ್‌ಡಬ್ಲ್ಯೂಎಂಎಲ್‌ನಿಂದ ಮತ್ತೊಂದು ಲೋಪವಾಗಿದೆ ಎಂದು ಆರ್ಥಿಕ ಇಲಾಖೆ ಹೇಳಿದೆ.

 

ಟೆಂಡರ್‌ದಾರರಿಗೆ ನೀಡಿದ್ದ  ಸೂಚನೆಗಳೇನು?

ಟೆಂಡರ್‌ ಸಲ್ಲಿಕೆಗಾಗಿ ಬಳಸುವ ನಮೂನೆಗಳು (ಬೇರೆ ರೀತಿಯಾಗಿ ನಿರ್ದಿಷ್ಟಪಡಿಸದಿದ್ದಲ್ಲಿ) ಹಾಗೂ ಪ್ರಮಾಣಿತ ಟೆಂಡರ್‌ ದಾಖಲೆಗಳಲ್ಲಿ ಸೂಚಿಸಿರುವ ಒಪ್ಪಂದದ ಸಾಮಾನ್ಯ ಷರತ್ತುಗಳನ್ನು ಬದಲಾಯಿಸಬಾರದು. ಆದಾಗ್ಯೂ, ಸ್ಥಳೀಯ ಅಗತ್ಯತೆ/ನಿರ್ದಿಷ್ಟ ಅವಶ್ಯಕತೆಗಳನ್ನು ಪೂರೈಸಲು ಮೇಲಿನವುಗಳಿಗೆ ಯಾವುದೇ ತಿದ್ದುಪಡಿಗಳು ಅಥವಾ ಪೂರಕ ಸೂಚನೆಗಳು ಅಗತ್ಯವಿದ್ದಲ್ಲಿ, ಅವುಗಳನ್ನು ದಾಖಲೆಗಳಲ್ಲಿ ಒದಗಿಸಿರುವ ಡೇಟಾ ಶೀಟ್‌ (Data Sheet) ಮತ್ತು  ಒಪ್ಪಂದದ ವಿಶೇಷ ಷರತ್ತುಗಳು (Special Conditions of Contract) ಗಳಲ್ಲಿ ನೀಡಬಹುದು ಎಂದು ಹೇಳಿತ್ತು.

ಆಕ್ಷೇಪಣೆಗಳೇ ಸಮರ್ಥನೀಯವಾಗಿಲ್ಲವೆಂದ ಬಿಎಸ್‌ಡಬ್ಲ್ಯೂಎಂಎಲ್‌

ಹಣಕಾಸು ಇಲಾಖೆಯು ಎತ್ತಿದ್ದ ಆಕ್ಷೇಪಣೆಗಳು ಸಮರ್ಥನೀಯವಾಗಿಲ್ಲ ಎಂದು ಬಿಎಸ್‌ಡಬ್ಲ್ಯೂಎಂಎಲ್ ಪ್ರತಿವಾದಿಸಿದೆ.

ಪರಿಷ್ಕೃತ ಸೇವಾ ಮಾದರಿಯ ಅಡಿಯಲ್ಲಿ, ವಾರ್ಡ್‌ ಮಟ್ಟದಲ್ಲಿ ನಡೆಯುತ್ತಿದ್ದ 198/243 ಕಾರ್ಯಾಚರಣೆಗಳನ್ನು 33 ದೊಡ್ಡ ಪ್ಯಾಕೇಜ್‌ಗಳಾಗಿ ಏಕೀಕರಿಸಲಾಗಿದೆ. ಪ್ರತಿಯೊಂದು ಪ್ಯಾಕೇಜ್‌ಗೂ ವಾಹನಗಳು, ಮಾನವ ಸಂಪನ್ಮೂಲ, ಕಾರ್ಯಾಚರಣಾ ಸಾಮರ್ಥ್ಯ ಹಾಗೂ ಆರ್ಥಿಕ ಸಾಮರ್ಥ್ಯದ ಗಣನೀಯ ನಿಯೋಜನೆ ಅಗತ್ಯವಿರುತ್ತದೆ ಎಂದು ಹೇಳಿದೆ.

‘ಪ್ರಸ್ತುತ ವಾರ್ಡ್‌ ಮಟ್ಟದ ಸೇವಾ ಪೂರೈಕೆದಾರರು ಮುಖ್ಯವಾಗಿ ಸಣ್ಣ ಮತ್ತು ಮಧ್ಯಮ…ಸ್ಪರ್ಧೆ, ಹೆಚ್ಚಿನ ಸಂಖ್ಯೆಯ ಭಾಗವಹಿಸುವಿಕೆ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಸಮರ್ಥ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡುವುದು ಸಾಧ್ಯವಾಗುತ್ತದೆ. ಆದ್ದರಿಂದ, ಒಕ್ಕೂಟ (Consortium) ಸಂಬಂಧಿತ ಈ ಆಕ್ಷೇಪಣೆಗಳು ಸಮರ್ಥನೀಯವಾಗಿಲ್ಲ,’ ಎಂದು ಬಿಎಸ್‌ಡಬ್ಲ್ಯೂಎಂಲ್ ವಾದಿಸಿರುವುದು ಗೊತ್ತಾಗಿದೆ.

Hot this week

ಬುಕ್ ಬ್ರಹ್ಮ ಸಾಹಿತ್ಯ ಉತ್ಸವಕ್ಕೆ 5 ಲಕ್ಷ ರು ಅನುದಾನ; ನೋಂದಣಿಯಾಗಿ 3 ವ‍ರ್ಷ ಪೂರೈಸದ ಬುಕ್‌ ಬ್ರಹ್ಮ ಫೌಂಡೇಷನ್‌ಗೆ ಒಂದು ಬಾರಿ ವಿನಾಯಿತಿ

ಬೆಂಗಳೂರು;  ಅನುದಾನ ಪಡೆಯುವ ಸಂಘ, ಸಂಸ್ಥೆಗಳು ನೋಂದಣಿಯಾಗಿ  3 ವರ್ಷಗಳನ್ನು ಪೂರೈಸಿರಬೇಕು...

ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ; ದರಗಳ ಪರಿಷ್ಕರಣೆಗೆ ಅನುಸರಿಸಿರುವ ಮಾನದಂಡದಲ್ಲಿ ಲೋಪವಿದೆಯೇ?

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ ದರಗಳ...

ಭ್ರಷ್ಟಾಚಾರ, ಅಧಿಕ ಆಸ್ತಿ ಗಳಿಕೆ ಆರೋಪ; 4 ವರ್ಷಗಳಲ್ಲಿ 1,248 ಪ್ರಕರಣ ದಾಖಲು, ಸಿ ಗುಂಪಿನ ನೌಕರರೇ ಹೆಚ್ಚು

ಬೆಂಗಳೂರು; ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ, ಲಂಚಕ್ಕಾಗಿ ಬೇಡಿಕೆಯಿಟ್ಟ  ಆರೋಪಗಳಿಗೆ ಸಂಬಂಧಿಸಿದಂತೆ ...

ಕನ್ಸೋರ್ಟಿಯಂ ಷರತ್ತು, ಸದಸ್ಯರ ಷೇರು; ಅಂಜುಂ ಪರ್ವೇಜ್ ಸಮಿತಿಯ ಆಕ್ಷೇಪಣೆ ತಳ್ಳಿ ಹಾಕಿದ ಘನತ್ಯಾಜ್ಯ ನಿರ್ವಹಣೆ ಮಂಡಳಿ

ಬೆಂಗಳೂರು; ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ 21 ಪ್ಯಾಕೇಜ್‌ಗಳಲ್ಲಿ ರೂಪಿಸಿರುವ  ಕನ್ಸೋರ್ಟಿಯಂನಲ್ಲಿ...
Please Scan to make Your Contribution

Topics

ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ; ದರಗಳ ಪರಿಷ್ಕರಣೆಗೆ ಅನುಸರಿಸಿರುವ ಮಾನದಂಡದಲ್ಲಿ ಲೋಪವಿದೆಯೇ?

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ ದರಗಳ...

ಭ್ರಷ್ಟಾಚಾರ, ಅಧಿಕ ಆಸ್ತಿ ಗಳಿಕೆ ಆರೋಪ; 4 ವರ್ಷಗಳಲ್ಲಿ 1,248 ಪ್ರಕರಣ ದಾಖಲು, ಸಿ ಗುಂಪಿನ ನೌಕರರೇ ಹೆಚ್ಚು

ಬೆಂಗಳೂರು; ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ, ಲಂಚಕ್ಕಾಗಿ ಬೇಡಿಕೆಯಿಟ್ಟ  ಆರೋಪಗಳಿಗೆ ಸಂಬಂಧಿಸಿದಂತೆ ...

ಕನ್ಸೋರ್ಟಿಯಂ ಷರತ್ತು, ಸದಸ್ಯರ ಷೇರು; ಅಂಜುಂ ಪರ್ವೇಜ್ ಸಮಿತಿಯ ಆಕ್ಷೇಪಣೆ ತಳ್ಳಿ ಹಾಕಿದ ಘನತ್ಯಾಜ್ಯ ನಿರ್ವಹಣೆ ಮಂಡಳಿ

ಬೆಂಗಳೂರು; ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ 21 ಪ್ಯಾಕೇಜ್‌ಗಳಲ್ಲಿ ರೂಪಿಸಿರುವ  ಕನ್ಸೋರ್ಟಿಯಂನಲ್ಲಿ...

Related Articles

Popular Categories

error: Content is protected !!