Tuesday | September 1, 2026 |

ಕನ್ಸೋರ್ಟಿಯಂ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಳ; ವೈಯಕ್ತಿಕ ಹೊಣೆಗಾರಿಕೆ ದುರ್ಬಲ, ಒಪ್ಪಂದ ನಿರ್ವಹಣೆ ಸಂಕೀರ್ಣ, ಲೀಡ್‌ ಮೆಂಬರ್‍‌ಗೆ ಅಗತ್ಯ ಅನುಭವವೇ ಇಲ್ಲ

ಬೆಂಗಳೂರು;  ಕಸ ಸಂಗ್ರಹಣೆ, ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆಗೆ ಸಂಬಂಧಿಸಿದ 21 ಪ್ಯಾಕೇಜ್‌ಗಳ ಟೆಂಡರ್ ಕನ್ಸೋರ್ಟಿಯಂ ಸದಸ್ಯರ ಸಂಖ್ಯೆ ಹೆಚ್ಚಿಸಿರುವುದರಿಂದ ವೈಯಕ್ತಿಕ ಹೊಣೆಗಾರಿಕೆ ದುರ್ಬಲಗೊಳಿಸಬಹುದು ಮತ್ತು ಒಪ್ಪಂದದ ನಿರ್ವಹಣೆಯನ್ನು ಸಂಕೀರ್ಣಗೊಳಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಲೋಕೋಪಯೋಗಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ  ಅಂಜುಂ ಪರ್ವೇಜ್‌ ನೇತೃತ್ವದ ಸಮಿತಿಯು ಕಳವಳ ವ್ಯಕ್ತಪಡಿಸಿದೆ.

ಅಲ್ಲದೇ ಹಲವು ಪ್ಯಾಕೇಜ್‌ಗಳಲ್ಲಿ ಲೀಡ್‌ ಮೆಂಬರ್‍‌ಗೆ ಅಗತ್ಯವೇ ಅನುಭವವಿಲ್ಲ. ಇದು ಮಾದರಿ ಟೆಂಡರ್ ದಾಖಲೆಯ ಷರತ್ತುಗಳಿಗೆ ವ್ಯತಿರಿಕ್ತವಾಗಿದೆ ಎಂಬ ಸಂಗತಿಯನ್ನೂ ಸಹ ಅಂಜುಂ ಪರ್ವೇಜ್‌ ನೇತೃತ್ವದ ಸಮಿತಿಯು ಹೊರಗೆಡವಿದೆ. ಹಾಗೆಯೇ ಕನ್ಸೋರ್ಟಿಯಂನ  ಎಲ್ಲಾ ಸದಸ್ಯರು ಪೂರ್ವ ಕಾರ್ಯಾನುಭವವನ್ನೇ ಹೊಂದಿಲ್ಲ ಎಂದು ಸಮಿತಿಯು ಬಹಿರಂಗಪಡಿಸಿದೆ.

ಸಮಿತಿಯು ವ್ಯಕ್ತಪಡಿಸಿರುವ ಹಲವು ಆಕ್ಷೇಪಣೆಗಳ ಪೈಕಿ  ಅಲ್ಲದೇ ಟೆಂಡರ್‍‌ ದಾಖಲೆಗಳಲ್ಲಿನ ಷರತ್ತುಗಳಿಗೆ ವಿರುದ್ಧವಾಗಿದೆ ಎಂದು ಪರಿಗಣಿಸಬಾರದು ಎಂದು ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ಮಂಡಳಿಯು,  ಸಮಿತಿಯ ಮುಂದೆ ಅಲವತ್ತುಕೊಂಡಿದೆ. ಈ ವರದಿ ಕುರಿತು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

21 ಪ್ಯಾಕೇಜ್‌ಗಳ ಟೆಂಡರ್ ಪ್ರಕ್ರಿಯೆ ಮತ್ತು  ಸಮಿತಿ ರಚನೆ ಮಾಡದೆಯೇ ಅನುಮೋದಿಸಿರುವ ಟೆಂಡರ್, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗಿದೆ ಮತ್ತು ಇದರಲ್ಲಿ ಬಹುದೊಡ್ಡ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಕುರಿತು ಪರಿಶೀಲನೆ ನಡೆಸಿರುವ ಅಂಜುಂ ಪರ್ವೇಜ್ ಸಮಿತಿಯು ಇಡೀ ಟೆಂಡರ್ ಪ್ರಕ್ರಿಯೆಯಲ್ಲಿನ ಹಲವು ಲೋಪಗಳನ್ನು ಪತ್ತೆ ಹಚ್ಚಿದೆ.

ಅಂಜುಂ ಪರ್ವೇಜ್ ಸಮಿತಿಯು ಸರ್ಕಾರಕ್ಕೆ ನೀಡಿರುವ ವರದಿಯ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

ಸಮಿತಿ ಕಳವಳ ವ್ಯಕ್ತಪಡಿಸಿರುವುದೇಕೆ?

ಸರ್ಕಾರದಿಂದ ನಿಗದಿಪಡಿಸಲಾದ ಮಾದರಿ ಟೆಂಡರ್ ದಾಖಲೆ ಪ್ರಕಾರ ಕನ್ಸೋಟೋರಿಯಂ ಗಾತ್ರವನ್ನು ಮೂರು ಸದಸ್ಯರಿಗೆ ಮಾತ್ರ ಸೀಮಿತಗೊಳಿಸಿತ್ತು. ಆದರೆ ಬಿಎಸ್‌ಡಬ್ಲ್ಯೂಎಂಎಲ್‌ ಐದು ಸದಸ್ಯರಿಗೆ ಅವಕಾಶ ಕಲ್ಪಿಸಿತ್ತು. ಇದನ್ನು ವಿಶ್ಲೇಷಿಸಿರುವ ಅಂಜುಂ ಪರ್ವೇಜ್‌ ಸಮಿತಿಯು ಒಂದೇ ಸಂಸ್ಥೆಯು ಸ್ವತಂತ್ರವಾಗಿ ಅರ್ಹತಾ ಮಾನದಂಡಗಳನ್ನು ಪೂರೈಸದಿರುವಲ್ಲಿ ತಾಂತ್ರಿಕ ಮತ್ತು ಆರ್ಥಿಕ ಸಾಮರ್ಥ್ಯಗಳನ್ನು ಒಟ್ಟುಗೂಡಿಸಲು ಕನ್ಸೋರ್ಟಿಯಂ ಅವಕಾಶ ಕಲ್ಪಿಸಿದೆ. ಕನ್ಸೋಟೋರಿಯಂನಲ್ಲಿನ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವುದರಿಂದ ಸಣ್ಣ ಸಣ್ಣ ಸಂಸ್ಥೆಗಳು ಸಂಪನ್ಮೂಲಗಳನ್ನು ಸಂಯೋಜಿಸಲು ಅವಕಾಶ ಉಂಟಾಗಿ ಟೆಂಡರ್ ಭಾಗವಹಿಸುವಿಕೆಯನ್ನು ಹೆಚ್ಚಿಸಬಹುದಾಗಿದೆ. ಆದರೆ ಅದೇ ಸಮಯಕ್ಕೆ  ಹೆಚ್ಚಿನ ಸದಸ್ಯರ ಕನ್ಸೋರ್ಟಿಯಂ ವೈಯಕ್ತಿಕ ಹೊಣೆಗಾರಿಕೆಯನ್ನು ದುರ್ಬಲಗೊಳಿಸುತ್ತದೆ. ಅಲ್ಲದೇ ಒಪ್ಪಂದದ ನಿರ್ವಹಣೆಯನ್ನು ಸಂಕೀರ್ಣಗೊಳಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಕಳವಳ ವ್ಯಕ್ತಪಡಿಸಿರುವುದು ವರದಿಯಿಂದ ತಿಳಿದು ಬಂದಿದೆ.

 

 

ಕನ್ಸೋರ್ಟಿಯಂನಲ್ಲಿನ ಸದಸ್ಯರ ಸಂಖ್ಯೆಯನ್ನು ಮೂರರಿಂದ ಐದಕ್ಕೆ ಹೆಚ್ಚಳ ಮಾಡುವುದರಿಂದ ಟೆಂಡರ್‍‌ನಲ್ಲಿನ ಸ್ಪರ್ಧೆ ಅಥವಾ ಒಪ್ಪಂದದ ಕಾರ್ಯಕ್ಷಮತೆಯ ಮೇಲೆ ಭೌತಿಕವಾಗಿ ಪರಿಣಾಮ ಬೀರುತ್ತದೆಯೇ ಎಂಬ ಪ್ರಮುಖ ಪ್ರಶ್ನೆಯನ್ನೂ ಸಹ ಸಮಿತಿಯು ಮುಂದಿರಿಸಿರುವುದು ಗೊತ್ತಾಗಿದೆ. ಪ್ಯಾಕೇಜ್‌ಗಳ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಸ್ಪರ್ಧೆಗೆ ಅವಕಾಶ ಕಲ್ಪಿಸಲು ಪ್ರಜ್ಞಾಪೂರ್ವಕವಾಗಿ ಅಳವಡಿಸಿಕೊಂಡಿದ್ದರೇ ಮತ್ತು ಎಲ್ಲಾ ಟೆಂಡರ್‍‌ದಾರರಿಗೆ ಏಕರೂಪವಾಗಿ ಅನ್ವಯಿಸಿದ್ದರೆ ಅದು ಸಮರ್ಥನೀಯವಾಗುತ್ತದೆ ಎಂದು ಸಮಿತಿಯು ವಿಶ್ಲೇಷಿಸಿರುವುದು ವರದಿಯಿಂದ ಗೊತ್ತಾಗಿದೆ.

ಈ ಪ್ರಕರಣದಲ್ಲಿ ವಿಧಾನಸಭಾ ಕ್ಷೇತ್ರವಾರು ಒಗ್ಗೂಡಿಸಿ ಪ್ಯಾಕೇಜ್‌ಗಳನ್ನು 33ಕ್ಕೆ ಸೀಮಿತಗೊಳಿಸಿ ಟೆಂಡರ್ ಆಹ್ವಾನಿಸಲು ತೀರ್ಮಾನಿಸಿದೆ. 2025ರ ಮೇ 9ರಂದು ನಡೆದಿದ್ದ  ಬಿಎಸ್‌ಡಬ್ಲ್ಯೂಎಂಎಲ್‌ನ 21ನೇ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಕೂಲಂಕುಷವಾಗಿ ಚರ್ಚಿಸಿದೆ. ಕನ್ಸೋರ್ಟಿಯಂಗೆ ಅವಕಾಶ ಕಲ್ಪಿಸಿ ಸ್ಪರ್ಧಾತ್ಮಕ ದೃಷ್ಟಿಯಿಂದ ಟೆಂಡರ್‍‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ  ಬಿಡ್‌ದಾರರು ಭಾಗವಹಿಸುವಂತೆ ಪ್ರೋತ್ಸಾಹಿಸುವ ಸಲುವಾಗಿ ಟೆಂಡರ್ ನಿಯಮದಲ್ಲಿ ಸಡಿಲಿಕೆ ಮಾಡಿ ಐದು ಸದಸ್ಯರು/ ಕಂಪನಿಗಳು ಒಗ್ಗೂಡಿ ಟೆಂಡರ್‍‌ನಲ್ಲಿ ಭಾಗವಹಿಸಲು ಅವಕಾಶ ನೀಡಲು ತೀರ್ಮಾನಿಸಿರುವುದನ್ನು ಸಮಿತಿಯು ಗಮನಿಸಿದೆ.

ಅನುಪಾಲನೆ ವರದಿಯಲ್ಲೇನಿದೆ?

ಸಮಿತಿಯ ಈ ಅಭಿಪ್ರಾಯಕ್ಕೆ ಬಿಎಸ್‌ಡಬ್ಲ್ಯೂಎಂಎಲ್‌ ಅನುಪಾಲನೆ ವರದಿ ನೀಡಿದೆ. ಸಮಿತಿಯು ಉಲ್ಲೇಖಿಸಿರುವ ಸರ್ಕಾರದ ಮಾದರಿ ಟೆಂಡರ್ ದಾಖಲೆಯು ಸಿವಿಲ್‌ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸ್ಟ್ಯಾಂಡರ್ಡ್‌ ಕ್ವಾಲಿಫಿಕೇಷನ್ ಡಾಕ್ಯುಮೆಂಟ್‌ ಆಗಿದ್ದು ನಿರ್ಮಾಣ ಕಾಮಗಾರಿಗಳನ್ನು  ನಿರ್ವಹಿಸುವ ಗುತ್ತಿಗೆದಾರರ ಪೂರ್ವಾರ್ಹತೆ ಪ್ರಕ್ರಿಯೆಯನ್ನು ಉದ್ದೇಶಿಸಿ ರೂಪಿಸಿದೆ ಎಂದು ಸಮರ್ಥಿಸಿಕೊಂಡಿದೆ. ಅದೇ ರೀತಿ ಈ ದಾಖಲೆಯಲ್ಲಿನ ಜಾಯಿಂಟ್‌ ವೆಂಚರ್‍‌/ಕನ್ಸೊಟೋರಿಯಂ ಸಂಬಂಧಿತ ನಿಬಂಧನೆಗಳು ಕಾಮಗಾರಿಗಳ ಸ್ವರೂಪ, ನಿರ್ಮಾಣ ಅನುಭವ, ತಾಂತ್ರಿಕ ಸಾಮರ್ಥ್ಯ ಹಾಗೂ ನಿರ್ಮಾಣ ಕಾರ್ಯಗಳ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದೆ ಎಂದು ಸಮಜಾಯಿಷಿ ನೀಡಿದೆ.

 

 

ಪ್ರಸ್ತುತ  ಆಹ್ವಾನಿಸಿರುವ ಟೆಂಡರ್‍‌, ಕಾಮಗಾರಿ ಟೆಂಡರ್ ಅಲ್ಲ. ಇದು ವಾಹನಗಳ ಒದಗಿಸುವಿಕೆ, ಚಾಲಕರು, ಸಹಾಯಕ ಸಿಬ್ಬಂದಿ ಮತ್ತು ಇತರೆ ಮಾನವ ಸಂಪನ್ಮೂಲವನ್ನು ನಿಯೋಜಿಸಿ ಪ್ರಾಥಮಿಕ ತ್ಯಾಜ್ಯ ಸಂಗ್ರಹಣೆ, ದ್ವಿತೀಯ ಹಂತದ ಸಾಗಾಣಿಕೆ ಕಾರ್ಯಕ್ಕಾಗಿ ಸರಕುಗಳನ್ನು ಒದಗಿಸಲಿದೆ. ಸಿಬ್ಬಂದಿಗಳ ಸೇವೆಯೊಂದಿಗೆ ನಿರಂತರವಾಗಿ ಒದಗಿಸುವ ಮಿಶ್ರಿತ ಮಾದರಿಯ ಟೆಂಡರ್ ಆಗಿದೆ. ಈ ಕಾರ್ಯಕ್ಕೆ ಟೆಂಡರ್ ದಾಖಲೆಯಲ್ಲಿಯೂ ಸಹ ಇದನ್ನು ಆಯ್ಕೆ ಆಧರಿತ ಸೇವಾ ಪೂರೈಕೆದಾರ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ. ಇದರ ಸ್ವರೂಪವು ಸಹ ನಿರ್ಮಾಣ ಕಾಮಗಾರಿಗಿಂತ ಭಿನ್ನವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ದಸ್ತಾವೇಜನ್ನು ತಯಾರಿಸಿಕೊಂಡು ಟೆಂಡರ್ ನಿರ್ವಹಿಸಲಾಗಿದೆ. ಇದು ಟೆಂಡರ್ ಸ್ವರೂಪ ನಿರ್ಮಾಣ, ಸೇವೆ ಸರಕು ಕಾಮಗಾರಿಗಿಂತ ಭಿನ್ನವಾಗಿದೆ ಎಂದು ಸಮಿತಿಯ ಮುಂದೆ ಪ್ರತಿಪಾದಿಸಿರುವುದು ತಿಳಿದು ಬಂದಿದೆ.

ಪ್ರಸ್ತುತ ಟೆಂಡರ್‍‌ನಲ್ಲಿ 198/243 ವಾರ್ಡ್‌ಗಳನ್ನು ಪುನರ್ ರಚಿಸಿ 33 ದೊಡ್ಡ ಪ್ಯಾಕೇಜ್‌ಗಳಾಗಿ ರೂಪಿಸಿದೆ. ಪ್ರತಿ ಪ್ಯಾಕೇಜ್‌ಗೆ ಗಣನೀಯ ಪ್ರಮಾಣದ ವಾಹನಗಳು, ಮಾನವ ಸಂಪನ್ಮೂಲ, ಕಾರ್ಯಾಚರಣೆ ವ್ಯವಸ್ಥೆ ಹಾಗೂ ಹಣಕಾಸಿನ ಸಾಮರ್ಥ್ಯ ಅಗತ್ಯವಿದೆ ಎಂದು ಹೇಳಿರುವ ಬಿಎಸ್‌ಡಬ್ಲ್ಯುಎಂಎಲ್‌, ಪ್ರಸ್ತುತ ವಾರ್ಡ್‌ ಮಟ್ಟದಲ್ಲಿ ಪ್ರಾಥಮಿಕ ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆ ಸೇವಾ ಸರಬರಾಜು ಗುತ್ತಿಗೆದಾರರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದೆ.

‘ಪ್ರಸ್ತುತ ವಾರ್ಡ್‌ವಾರು ಕಾರ್ಯಾದೇಶ, ಸರಬರಾಜು ಆದೇಶದ ಮೇಲೆ ಗುತ್ತಿಗೆದಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರ  ಹಣಕಾಸಿನ ಸಾಮರ್ಥ್ಯ ಮತ್ತು ಕಾರ್ಯಾಚರಣೆ ಕ್ಷಮತೆ ಸಣ್ಣ  ಗಾತ್ರದ್ದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಒಂದೇ ಸಂಸ್ಥೆಯು ಎಲ್ಲಾ ಅರ್ಹತಾ ಮಾನದಂಡಗಳನ್ನು  ಪೂರೈಸುವುದು ಎಲ್ಲಾ ಸಂದರ್ಭಗಳಲ್ಲೂ ಸಾಧ್ಯವಾಗದಿರಬಹುದು,’ ಎಂದು ಬಿಎಸ್‌ಡಬ್ಲ್ಯೂಎಂಎಲ್‌ ಹೇಳಿರುವುದು ಗೊತ್ತಾಗಿದೆ.

 

 

ವಾರ್ಡ್‌ ಹಂತದ ಗುತ್ತಿಗೆದಾರರು ತಮ್ಮ ತಾಂತ್ರಿಕ, ಹಣಕಾಸು ಮತ್ತು ಕಾರ್ಯಚರಣೆ ಸಂಪನ್ಮೂಲಗಳನ್ನು ಒಗ್ಗೂಡಿಸಿಕೊಂಡು ಸ್ಪರ್ಧಾತ್ಮಕವಾಗಿ ಟೆಂಡರ್‍‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಕನ್ಸೋರ್ಟಿಯಂ ಸದಸ್ಯರ ಸಂಖ್ಯೆಯನ್ನು ಐದರವರೆಗೆ ಅನುಮತಿಸಿದೆ. ಇದರಿಂದಾಗಿ ಆರ್ಥಿಕವಾಗಿ ಸಣ್ಣ ಮತ್ತು ಮಧ್ಯಮ ಗಾತ್ರದಲ್ಲಿ ಸಾಮರ್ಥ್ಯವುಳ್ಳ  ಮತ್ತು ಹೆಚ್ಚಿನ ಸಂಖ್ಯೆಯ ಅರ್ಹ  ಬಿಡ್‌ದಾರರ ಗುತ್ತಿಗೆದಾರರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುತ್ತದೆ. ಕನ್ಸೋಟೋರಿಯಂ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿರುವುದು ಯಾವುದೇ ನಿರ್ದಿಷ್ಟ ಬಿಡ್‌ದಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದಲ್ಲ. ಬದಲಿಗೆ ಹೆಚ್ಚಿನ ಅರ್ಹ ಸಂಸ್ಥೆಗಳಿಗೆ ಸಮಾನ ಅವಕಾಶ ಕಲ್ಪಿಸಿ ಸ್ಪರ್ಧಾತ್ಮಕ ವಾತಾವರಣವನ್ನು ನಿರ್ಮಿಸುವ ಉದ್ದೇಶವಿದೆ ಎಂದು ಸಮರ್ಥಿಸಿಕೊಂಡಿದೆ.

ಅಲ್ಲದೇ ಕನ್ಸೋರ್ಟಿಯಂನಲ್ಲಿ ಗರಿಷ್ಠ 5 ಸದಸ್ಯರು ಭಾಗವಹಿಸಲು ಅನುಮತಿ ನೀಡಬೇಕು ಎಂದು ಪ್ರಜ್ಞಾಪೂರ್ವಕವಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರತಿಪಾದಿಸಿರುವ ಬಿಎಸ್‌ಡಬ್ಲ್ಯೂಎಂಎಲ್‌, ಈ ಷರತ್ತನ್ನು ಎಲ್ಲಾ ಟೆಂಡರ್‍‌ದಾರರಿಗೆ ಏಕರೂಪವಾಗಿ ಅನ್ವಯಿಸಲಾಗಿದೆ ಮತ್ತು ಯಾವುದೇ ನಿರ್ದಿಷ್ಟ ಸಂಸ್ಥೆಗೆ ವಿಶೇಷ ವಿನಾಯಿತಿ ಅಥವಾ ಅನುಕೂಲವನ್ನು ನೀಡಿಲ್ಲ ಎಂದು ಸಮಿತಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿರುವುದು ವರದಿಯಿಂದ ತಿಳಿದು ಬಂದಿದೆ.

‘ಆದ್ದರಿಂದ ಕಾಮಗಾರಿ ಟೆಂಡರ್‍‌ಗಳಿಗೆ ಅನ್ವಯಿಸುವ ಮಾದರಿ ದಾಖಲೆಯಲ್ಲಿನ ಜಾಯಿಂಟ್‌ ವೆಂಚರ್/ಕನ್ಸೊಟೋರಿಯಂ ನಿಬಂಧನೆಗಳನ್ನು ಪ್ರಸ್ತುತ ಟೆಂಡರ್‍‌ಗೆ ಯಥಾವತ್ತಾಗಿ ಅನ್ವಯಿಸುವುದು ಸೂಕ್ತವಲ್ಲ. ಒಪ್ಪಂದದ ಸ್ವರೂಪ, ಅದರ ಕಾರ್ಯಾಚರಣೆ ಅವಶ್ಯಕತೆಗಳು, ಸ್ಪರ್ಧಾತ್ಮಕ ಬಿಡ್ಡಿಂಗ್‌ಗೆ ಉತ್ತೇಜನ ನೀಡುವ ಉದ್ದೇಶವನ್ನು ಪರಿಗಣಿಸಿದೆ. ಹೀಗಾಗಿ ಇದು ಸಮಂಜಸವಾಗಿದೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಸಮರ್ಥನೀಯವಾಗಿದೆ,’ ಬಲವಾಗಿ ಪ್ರತಿಪಾದಿಸಿಕೊಂಡಿರುವುದು ಗೊತ್ತಾಗಿದೆ.

 

 

ಬಿಎಸ್‌ಡಬ್ಲ್ಯೂಎಂಎಲ್‌ನ ಈ ಪ್ರತಿಪಾದನೆಗೂ  ಅಂಜುಂ ಪರ್ವೇಜ್‌ ನೇತೃತ್ವದ ಸಮಿತಿಯು ಮತ್ತಷ್ಟು ತಕರಾರುಗಳನ್ನು ಎತ್ತಿದೆ.

ಮಾದರಿ ಟೆಂಡರ್ ದಾಖಲೆ ಅನುಸಾರ ಕನ್ಸೋಟೋರಿಯಂನ ಎಲ್ಲಾ ಸದಸ್ಯರು ಕಾರ್ಯನಿರ್ವಹಣಾ ಅನುಭವ ಹೊಂದಿರುವುದು ಅಗತ್ಯವಾಗಿದೆ. ಆದರೆ ಪ್ರಸ್ತುತ ಸಂಗ್ರಹಣೆಗೆ ಬಳಕೆ ಮಾಡಿರುವ ಟೆಂಡರ್ ದಾಖಲೆಯಲ್ಲಿ  ಕಾರ್ಯನಿರ್ವಹಣೆಗೆ ಬದಲಾಗಿ ಒಪ್ಪಂದದ ನಿರ್ವಹಣೆಗಾಗಿ ರಚಿಸಲಾಗುವ ಕನ್ಸೋಟೋರಿಯಂನಲ್ಲಿ ಈಕ್ವಿಟಿ ಪಾಲು ಹೊಂದಿರುವ ಷರರ್‍ತು ವಿಧಿಸಿದೆ. ಸರ್ಕಾರದಿಂದ ಗುತ್ತಿಗೆಯನ್ನು ಪಡೆದಾದ ಮೇಲೆ ಅದನ್ನು ಯಶಸ್ವಿಯಾಗಿ ನಿರ್ವಹಿಸಲು ಅಗತ್ಯವಿರುವ ತಾಂತ್ರಿಕ ಅರ್ಹತೆಯನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಈ ಷರತ್ತನ್ನು ಟೆಂಡರ್ ಪೂರ್ವಾರ್ಹತೆಯಾಗಿ ಅಳವಡಿಸಲಾಗಿದೆ. ಸಂಸ್ಥೆಯಲ್ಲಿ ಪಾಲು ಹೊಂದಿರುವುದು ಮತ್ತು ತಾಂತ್ರಿಕ ಅನುಭವ ಈ ಎರಡೂ ಅಂಶಗಳು ಬೇರೆಬೇರೆಯಾಗಿವೆ ಎಂದು ಪ್ರತಿಪಾದಿಸಿರುವುದು ತಿಳಿದು ಬಂದಿದೆ.

ಸಮಿತಿಯ ಅನುಮಾನವೇನು?

ಅದೇ ರೀತಿ ಕನ್ಸೋರ್ಟಿಯಂನ ಯಾರಾದರೂ ಸದಸ್ಯರು ಕನ್ಸೋಟೋರಿಯಂನಿಂದ ಹೊರ ಹೋದಲ್ಲಿ ಉಳಿದ ಸದಸ್ಯರು ಸರ್ಕಾರದಿಂದ ವಹಿಸಿದ ಕಾರ್ಯನಿರ್ವಹಣೆಯನ್ನು ಮುಂದುವರೆಸಬೇಕು ಎಂಬುದು ಪ್ರಸ್ತಾವಿತ ಅನುಭವದ ಷರತ್ತು ಅಳವಡಿಸುವ ಉದ್ದೇಶವಾಗಿದೆ. ಇದನ್ನು ಅನುಸರಿಸದೇ ಇದ್ದಲ್ಲಿ ಟೆಂಡರ್‍‌ನಲ್ಲಿನ ಕಾಮಗಾರಿ, ಸೇವೆಗೆ ಸಂಬಂಧಿಸಿರದ ಪಾಲುದಾರರು ಕೇವಲ ಟರ್ನ್ ಓವರ್ ಷರತ್ತನ್ನು ಪೂರೈಸಲು ಕನ್ಸೋರ್ಟಿಯಂನ ಒಳಗಡೆ ಬಂದು ಸೇರುವಂತಾಗುತ್ತದೆ ಎಂದು ಅನುಮಾನ ವ್ಯಕ್ತಪಡಿಸಿರುವುದು ಗೊತ್ತಾಗಿದೆ.

 

 

ಟೆಂಡರ್‍‌ನ ದಸ್ತಾವೇಜು ಮತ್ತು ಬಿಡ್‌ದಾರರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿರುವ ಅಂಜುಂ ಪರ್ವೇಜ್ ನೇತೃತ್ವದ ಸಮಿತಿಯು ಹಲವು ಪ್ಯಾಕೇಜ್‌ಗಳಲ್ಲಿ ಲೀಡ್‌ ಮೆಂಬರ್‍‌ ಗೆ ಅಗತ್ಯ ಅನುಭವವೇ ಇಲ್ಲ ಎಂಬುದನ್ನು ಪತ್ತೆ ಹಚ್ಚಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತಾಪಿತ ಷರತ್ತನ್ನು ಮಾದರಿ ಟೆಂಡರ್ ದಾಖಲೆ ಷರತ್ತುಗಳಿಗೆ ವ್ಯತಿರಿಕ್ತವಾಗಿದೆ ಎಂದು ಸಮಿತಿಯು ಅಭಿಪ್ರಾಯಿಸಿದೆ.

Hot this week

ಐಪಿಎಸ್ ರವೀಂದ್ರ ಕಾಶಿನಾಥ್ ಗಡಾದಿ ವಿರುದ್ಧ ಆರೋಪ; 4 ತಿಂಗಳಾದರೂ ಸಲ್ಲಿಕೆಯಾಗದ ಚಾರ್ಜ್‌ಶೀಟ್‌, ಇಲಾಖೆ ವಿಚಾರಣೆ ವಿಳಂಬ

ಬೆಂಗಳೂರು; ಕರ್ತವ್ಯಲೋಪ ಮತ್ತು ನಿಯಮ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಐಪಿಎಸ್...

ಬೇನಾಮಿ ಆಸ್ತಿ ಹೊಂದಿದ ಆರೋಪ; ವಿಟಿಯು ಕುಲಪತಿ ವಿದ್ಯಾಶಂಕರ್ ಗೆ ಆದಾಯ ತೆರಿಗೆ ಇಲಾಖೆ ನೋಟೀಸ್‌

ಬೆಂಗಳೂರು;  ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ್ದಾರೆ ಎಂಬ ಆರೋಪ ಕುರಿತು ಆದಾಯ...

‘ಅದಾನಿ ಕಂಪನಿಯಿಂದಲೇ ವಿವಾದ, 850 ಕೋಟಿ ರು ಪಾವತಿಸುವ ಲಕ್ಷಣಗಳೂ ಗೋಚರಿಸುತ್ತಿಲ್ಲ, ಅಧಿಕಾರಿಗಳ ಕೈ ಕಟ್ಟಿ ಹಾಕಿದೆ’; ಸರ್ಕಾರದ ಅಸಹಾಯಕತೆ ಬಹಿರಂಗ

ಬೆಂಗಳೂರು;  'ಕಲ್ಬುರ್ಗಿಯ ವಾಡಿಯಲ್ಲಿ  ಸುಣ್ಣದ ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ಗಣಿಗಾರಿಕೆ...
Please Scan to make Your Contribution

Topics

ಐಪಿಎಸ್ ರವೀಂದ್ರ ಕಾಶಿನಾಥ್ ಗಡಾದಿ ವಿರುದ್ಧ ಆರೋಪ; 4 ತಿಂಗಳಾದರೂ ಸಲ್ಲಿಕೆಯಾಗದ ಚಾರ್ಜ್‌ಶೀಟ್‌, ಇಲಾಖೆ ವಿಚಾರಣೆ ವಿಳಂಬ

ಬೆಂಗಳೂರು; ಕರ್ತವ್ಯಲೋಪ ಮತ್ತು ನಿಯಮ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಐಪಿಎಸ್...

ಬೇನಾಮಿ ಆಸ್ತಿ ಹೊಂದಿದ ಆರೋಪ; ವಿಟಿಯು ಕುಲಪತಿ ವಿದ್ಯಾಶಂಕರ್ ಗೆ ಆದಾಯ ತೆರಿಗೆ ಇಲಾಖೆ ನೋಟೀಸ್‌

ಬೆಂಗಳೂರು;  ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ್ದಾರೆ ಎಂಬ ಆರೋಪ ಕುರಿತು ಆದಾಯ...

‘ಅದಾನಿ ಕಂಪನಿಯಿಂದಲೇ ವಿವಾದ, 850 ಕೋಟಿ ರು ಪಾವತಿಸುವ ಲಕ್ಷಣಗಳೂ ಗೋಚರಿಸುತ್ತಿಲ್ಲ, ಅಧಿಕಾರಿಗಳ ಕೈ ಕಟ್ಟಿ ಹಾಕಿದೆ’; ಸರ್ಕಾರದ ಅಸಹಾಯಕತೆ ಬಹಿರಂಗ

ಬೆಂಗಳೂರು;  'ಕಲ್ಬುರ್ಗಿಯ ವಾಡಿಯಲ್ಲಿ  ಸುಣ್ಣದ ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ಗಣಿಗಾರಿಕೆ...

ನೀರಾವರಿ ನಿಗಮಗಳ ಗುತ್ತಿಗೆದಾರರಿಗೆ 15,429.51 ಕೋಟಿ ರು ಬಾಕಿ; ಸ್ಥಗಿತಗೊಂಡಿವೆಯೇ ಕಾಮಗಾರಿಗಳು?

ಬೆಂಗಳೂರು;  ಕೃಷ್ಣಭಾಗ್ಯ ಜಲನಿಗಮ ಸೇರಿದಂತೆ ರಾಜ್ಯದ ನಾಲ್ಕು ನೀರಾವರಿ ನಿಗಮಗಳು ಅನುಷ್ಠಾನಗೊಳಿಸುತ್ತಿರುವ...

ಟೆಂಡರ್ ಇಲ್ಲದೆಯೇ 3.11 ಕೋಟಿ ನೇರ ಹೂಡಿಕೆ, ಮುಂಗಡ ಹಣ ಹೊಂದಾಣಿಕೆಯಲ್ಲೂ ವಿಳಂಬ, ಲಕ್ಷಾಂತರ ರು ನಷ್ಟ; ಮಹರ್ಷಿ ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಅಕ್ರಮ!

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಯಾವುದೇ ಟೆಂಡರ್‍‌ ಕರೆಯದೇ ನೇರವಾಗಿ...

Related Articles

Popular Categories

error: Content is protected !!