Friday | August 28, 2026 |

ಬೇನಾಮಿ ಆಸ್ತಿ ಹೊಂದಿದ ಆರೋಪ; ವಿಟಿಯು ಕುಲಪತಿ ವಿದ್ಯಾಶಂಕರ್ ಗೆ ಆದಾಯ ತೆರಿಗೆ ಇಲಾಖೆ ನೋಟೀಸ್‌

ಬೆಂಗಳೂರು;  ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ್ದಾರೆ ಎಂಬ ಆರೋಪ ಕುರಿತು ಆದಾಯ ತೆರಿಗೆ ಇಲಾಖೆ ತನಿಖೆ ವಿಭಾಗವು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ ವಿದ್ಯಾಶಂಕರ್ ಅವರಿಗೆ  ನೋಟೀಸ್‌ ಜಾರಿಗೊಳಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕುಲಪತಿ ಎಸ್‌ ವಿದ್ಯಾಶಂಕರ್‌ ನೇಮಕವನ್ನು ಪ್ರಶ್ನಿಸಲಾದ ಅರ್ಜಿಯು ಹೈಕೋರ್ಟ್‌ನಲ್ಲಿ  ವಿಚಾರಣೆ ಹಂತದಲ್ಲಿದೆ. ಇದರ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆಯು ಜಾರಿಗೊಳಿಸಿರುವ ನೋಟೀಸ್‌ ಮುನ್ನೆಲೆಗೆ ಬಂದಿದೆ.

ನಿಷೇಧಿತ ಬೇನಾಮಿ ಆಸ್ತಿ ವಹಿವಾಟುಗಳ ಕಾಯಿದೆ, 1988 (Prohibition of Benami Property Transactions Act, 1988) ಅಡಿಯಲ್ಲಿ ಡಾ ಎಸ್ ವಿದ್ಯಾಶಂಕರ್ ಅವರಿಗೆ ನೋಟೀಸ್‌ ಜಾರಿಗೊಳಿಸಿದೆ. 2026ರ ಜೂನ್‌ 19ರಂದು ನೋಟೀಸ್‌ ಜಾರಿಗೊಳಿಸಿದೆ. ಈ ನೋಟೀಸ್‌ನ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

ನೋಟೀಸ್‌ನಲ್ಲೇನಿದೆ?

‘ನಿಮ್ಮ ಹಾಗೂ ನಿಮ್ಮ ಕುಟುಂಬ ಸದಸ್ಯರ ಆದಾಯದ ವಿವರಗಳು, ಆದಾಯದ ಮೂಲದ ವಿವರಗಳೊಂದಿಗೆ, ಆದಾಯ ಪ್ರಾರಂಭವಾದ ದಿನಾಂಕದಿಂದ ಇಂದಿನವರೆಗೆ ಒದಗಿಸಬೇಕು. ಈ ಸಂಬಂಧ ಲೆಕ್ಕಪತ್ರ ಮತ್ತು ದಾಖಲೆಗಳನ್ನು ಒದಗಿಸಬೇಕು,ಈ ಸಂಬಂಧ ವೈಯಕ್ತಿಕ ಹೇಳಿಕೆ ನೀಡಬೇಕು,’ ಎಂದು ನೋಟೀಸ್‌ನಲ್ಲಿ ಸೂಚಿಸಿದೆ.

‘ನಿಮ್ಮ ಹೆಸರಿನಲ್ಲಿ ಹಾಗೂ ನಿಮ್ಮ ಕುಟುಂಬ ಸದಸ್ಯರ ಹೆಸರಿನಲ್ಲಿ ಹೊಂದಿರುವ ಎಲ್ಲಾ ಬ್ಯಾಂಕ್ ಖಾತೆಗಳ ವಿವರಗಳು, ಇಂದಿನವರೆಗಿನ ಸಂಬಂಧಿತ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳೊಂದಿಗೆ ಒದಗಿಸಬೇಕು. ನೀವು ಹಾಗೂ ನಿಮ್ಮ ಕುಟುಂಬ ಸದಸ್ಯರು ಇಂದಿನವರೆಗೆ ಹೊಂದಿರುವ ಎಲ್ಲಾ ಚರಾಸ್ತಿಗಳ (Movable Properties) ಪಟ್ಟಿ ಒದಗಿಸಬೇಕು,’ ಎಂದು ಸೂಚಿಸಿರುವುದು ನೋಟೀಸ್‌ನಿಂದ ತಿಳಿದು ಬಂದಿದೆ.

‘ನೀವು ಹಾಗೂ ನಿಮ್ಮ ಕುಟುಂಬ ಸದಸ್ಯರು ಹೊಂದಿರುವ ಎಲ್ಲಾ ಸ್ಥಿರಾಸ್ತಿಗಳ (Immovable Properties) ಪಟ್ಟಿ, ಅಂತಹ ಆಸ್ತಿಗಳನ್ನು ಖರೀದಿಸಲು ಬಳಸಿದ ಹಣದ ಮೂಲದ ವಿವರಗಳೊಂದಿಗೆ, ಇಂದಿನವರೆಗೆ (ಮಾರಾಟ ಮಾಡಿರುವ ಆಸ್ತಿಗಳನ್ನೂ ಒಳಗೊಂಡಂತೆ) ಒದಗಿಸಬೇಕು,’ ಎಂದು ನಿರ್ದೇಶಿಸಿರುವುದು ಗೊತ್ತಾಗಿದೆ.

 

 

‘ನೀವು ಅಥವಾ ನಿಮ್ಮ ಕುಟುಂಬ ಸದಸ್ಯರು ಇಂದಿನವರೆಗೆ ಮಾಡಿರುವ ಎಲ್ಲಾ ಸ್ಥಿರಾಸ್ತಿಗಳ ಮಾರಾಟ ಪತ್ರಗಳ (Sale Deeds) ಪ್ರತಿಗಳನ್ನು ಹಾಜರುಪಡಿಸಬೇಕು. ನೀವು ಮತ್ತು ನಿಮ್ಮ ಕುಟುಂಬ ಸದಸ್ಯರು ಇಂದಿನವರೆಗೆ ಮಾಡಿಕೊಂಡಿರುವ ಎಲ್ಲಾ ಒಪ್ಪಂದಗಳ ಪ್ರತಿಗಳನ್ನು (General Power of Attorney ಅಥವಾ Special Power of Attorney ಸೇರಿದಂತೆ) ಹಾಜರುಪಡಿಸಬೇಕು,’ ಎಂದು ವಿದ್ಯಾಶಂಕರ್ ಅವರಿಗೆ ಸೂಚಿಸಿದೆ.

‘ನೀವು ಹಾಗೂ ನಿಮ್ಮ ಕುಟುಂಬ ಸದಸ್ಯರ ಹೆಸರಿನಲ್ಲಿ ಹೊಂದಿರುವ ಎಲ್ಲಾ ಬ್ಯಾಂಕ್ ಲಾಕರ್‌ಗಳ ವಿವರಗಳನ್ನು ಒದಗಿಸಬೇಕು.ಈ ಸಂಬಂಧ 2026ರ ಜುಲೈ 2ರಂದು ಹಾಜರಾಗಿ ಸಾಕ್ಷ್ಯದೊಂದಿಗೆ ವೈಯಕ್ತಿಕವಾಗಿ ಹಾಜರುಪಡಿಸಬೇಕು,’ ಎಂದು ನಿರ್ದೇಶಿಸಿರುವುದು ತಿಳಿದು ಬಂದಿದೆ.

ಈಗಾಗಲೇ ಡಾ ಎಸ್ ವಿದ್ಯಾಶಂಕರ್ ಅವರ ನೇಮಕಾತಿಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ವಿಚಾರಣೆ (W.P.24822/2025) ನಡೆಯುತ್ತಿದೆ. ಈ ಅರ್ಜಿಯು ನ್ಯಾಯಮೂರ್ತಿ ನಾಗಪ್ರಸನ್ನ ಅವರ ನೇತೃತ್ವದ ಏಕ ಸದಸ್ಯ ಪೀಠದ ಮುಂದೆ 2026ರ ಆಗಸ್ಟ್‌ 18ರಂದು ವಿಚಾರಣೆ ನಡೆದಿತ್ತು. ಉಭಯ ಪಕ್ಷಕಾರರ ವಾದದ ನಂತರ ಈ ಪ್ರಕರಣದ ಕುರಿತು ಅಂತಿಮ ತೀರ್ಪುನ್ನು ಕಾಯ್ದಿರಿಸಿದೆ.

ಅಲ್ಲದೇ ವಿದ್ಯಾಶಂಕರ್ ಅವರು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಆಗಿದ್ದ ಅವಧಿಯಲ್ಲಿ  ಆಕ್ಸಿಸ್‌ ಬ್ಯಾಂಕ್‌ ಖಾತೆ ತೆರೆದು  ಲಕ್ಷಾಂತರ ರುಪಾಯಿಗಳ ಅಕ್ರಮ ವರ್ಗಾವಣೆ ಮತ್ತು  ಅಕ್ರಮವಾಗಿ ಲಾಭ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಕ್ರಿಮಿನಲ್ ಕ್ರಮ ಜರುಗಿಸಲು ಡಾ ಜಗದೀಶ್‌ ಬಾಬು ಎಂಬುವರು  ಪೂರ್ವಾನುಮತಿ ಕೋರಿರುವ ಅರ್ಜಿಯ (W.P. 18433/2025) ವಿಚಾರಣೆಯು ಸಹ 2026ರ ಸೆ.11ಕ್ಕೆ ನಿಗದಿಯಾಗಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ  ಕಲಂ 17 (ಎ) ಅಡಿಯಲ್ಲಿ ಪೂರ್ವಾನುಮತಿಗೆ ನಿರ್ದೇಶನ ಕೋರಿರುವುದು ಗೊತ್ತಾಗಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆಯೇ ಆದಾಯ ತೆರಿಗೆ ಇಲಾಖೆಯು ನೀಡಿರುವ ನೋಟೀಸ್‌ ಮಹತ್ವ ಪಡೆದುಕೊಂಡಿದೆ.

 

 

ಈ ಕುರಿತು ದಿ ಫೈಲ್ ವಿದ್ಯಾಶಂಕರ್ ಅವರ ಪ್ರತಿಕ್ರಿಯೆ ಕೋರಿ ಅವರ ಅಧಿಕೃತ ಇ ಮೈಲ್‌ ಗೆ ಪ್ರಶ್ನಾವಳಿ ಕಳಿಸಿತ್ತು. ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರತಿಕ್ರಿಯೆ ಲಭ್ಯವಾದ ನಂತರ ಇದೇ ವರದಿಯನ್ನು ನವೀಕೃತಗೊಳಿಸಲಾಗುವುದು.

ವಿಟಿಯು ಹಾಲಿ ಕುಲಪತಿ ಡಾ ಎಸ್‌ ವಿದ್ಯಾಶಂಕರ್ ಅವರ ನೇಮಕಾತಿಯನ್ನು ರದ್ದುಗೊಳಿಸಬೇಕು ಎಂದು ಸಲ್ಲಿಸಿದ್ದ ಅರ್ಜಿಗೆ  ಸಂಬಂಧಿಸಿದಂತೆ   ಹೈಕೋರ್ಟ್‌ ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರು   ಈ ಪ್ರಕರಣವು ನನ್ನ ಮುಂದೆ ಬೇಡ ಎಂದು ಹೇಳಿ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು.

 

ವಿಟಿಯು ಕುಲಪತಿ ವಿರುದ್ಧದ ಎರಡು ರಿಟ್ ಅರ್ಜಿ; ವಿಚಾರಣೆಯಿಂದಲೇ ಹಿಂದೆ ಸರಿದ ನ್ಯಾಯಮೂರ್ತಿ, ಚರ್ಚೆಗೆ ಗ್ರಾಸವಾದ ನಡೆ

 

ಲಕ್ಷಾಂತರ ರುಪಾಯಿಗಳ ಅಕ್ರಮ ವರ್ಗಾವಣೆ ಮತ್ತು ಅಕ್ರಮವಾಗಿ ಲಾಭ ಮಾಡಿಕೊಟ್ಟ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಕ್ಕೆ ಗುರಿಯಾಗಿರುವ  ವಿಟಿಯು ಹಾಲಿ ಕುಲಪತಿ ಡಾ ಎಸ್‌ ವಿದ್ಯಾಶಂಕರ್ ಮತ್ತಿತರ ವಿರುದ್ಧ  ವಿಚಾರಣೆಗೆ ಕೋರಿದ್ದ ಪೂರ್ವಾನುಮತಿ ಪ್ರಸ್ತಾವವನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಡಾ ಎಸ್ ವಿದ್ಯಾಶಂಕರ್ ಅವರ ನೇಮಕಾತಿಯನ್ನು ರದ್ದುಗೊಳಿಸಬೇಕು ಎಂಬ ಅರ್ಜಿ ವಿಚಾರಣೆಯಿಂದ ಹೈಕೋರ್ಟ್‌ ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರು ಹಿಂದೆ ಸರಿದಿರುವುದು ಚರ್ಚೆಗೆ ಗ್ರಾಸವಾಗಿತ್ತು.

ಇಂಜಿನಿಯರಿಂಗ್ ಪದವಿಯನ್ನು ಅವಧಿ ಮೀರಿ ಅಂದರೇ 5 ವರ್ಷಗಳಲ್ಲಿ ಡಾ ಎಸ್ ವಿದ್ಯಾಶಂಕರ್ ಅವರು  ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದರು. ಅಲ್ಲದೇ ಬೆಂಗಳೂರಿನ ಖಾಸಗಿ ಇಂಜಿನಿಯರಿಂಗ್‌ ಕಾಲೇಜಾದ ಬಿಐಟಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಆದರೂ ಸಹ ಇವರನ್ನು  ಕುಲಪತಿ ಹುದ್ದೆಗೆ ನೇಮಕಗೊಳಿಸಲಾಗಿತ್ತು. ಇದನ್ನು ಬೆಂಗಳೂರಿನ ಹಿರಿಯ ಪ್ರಾಧ್ಯಾಪಕ ಡಾ ನಾಗೇಶ್ವರರಾವ್ ಎಂಬುವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಲಕ್ಷಾಂತರ ರುಪಾಯಿಗಳ ಅಕ್ರಮ ವರ್ಗಾವಣೆ ಮತ್ತು ಅಕ್ರಮವಾಗಿ ಲಾಭ ಮಾಡಿಕೊಟ್ಟ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಕ್ಕೆ ಗುರಿಯಾಗಿರುವ  ವಿಟಿಯು ಹಾಲಿ ಕುಲಪತಿ ಡಾ ಎಸ್‌ ವಿದ್ಯಾಶಂಕರ್ ಮತ್ತಿತರ ವಿರುದ್ಧ  ವಿಚಾರಣೆಗೆ ಅನುಮತಿ ಕೊಡಬೇಕು ಎಂದು ಡಾ ಜಗದೀಶ್ ಬಾಬು ಅವರೂ ಸಹ ಕೋರಿದ್ದರು.
ಈ ಪ್ರಕರಣಗಳಲ್ಲಿ ರಿಟ್ ಅರ್ಜಿದಾರರ ಪರ ಹಿರಿಯ ವಕೀಲರಾದ  ವಿವೇಕ್ ಸುಬ್ಬಾರೆಡ್ಡಿ, ರಾಜ್ಯಪಾಲರ ಪರ  ಉದಯ ಹೊಳ್ಳ ಮತ್ತು ಡಾ. ವಿದ್ಯಾಶಂಕರ ಪರ  ರಾಜಗೋಪಾಲ್ ಅಸೋಸಿಯೇಟ್ಸ್  ವಿಚಾರಣೆಯಲ್ಲಿ ವಾದ ಮಂಡಿಸಿದ್ದರು.  ಕಳೆದ ಬೇಸಿಗೆ ರಜೆಯ ನಂತರ ತಮ್ಮ ಮುಂದೆಯೇ ಅಂದರೇ 2026ರ ಜೂನ್‌ 22ರಂದು ಈ ಅರ್ಜಿಗಳು  ವಿಚಾರಣೆಗೆ ಬಂದಾಗ   Not Before Me ಎಂದು ನ್ಯಾಯಮೂರ್ತಿ  ಅಶೋಕ್ ಎಸ್ ಕಿಣಗಿ ಅವರು ವಿಚಾರಣೆಯಿಂದ  ಹಿಂದೆ ಸರಿದಿದ್ದಾರೆ.  ಅದರೆ ಯಾವ ಕಾರಣಕ್ಕೆ ಈ ಅರ್ಜಿಯ ವಿಚಾರಣೆಯು ಬೇಡ ಎಂದು ಕಾರಣಗಳನ್ನು ತಿಳಿಸಿರಲಿಲ್ಲ.

 

 

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆನಂದ್ ಬೈರಾರೆಡ್ಡಿ ಅವರ ವರದಿಯನ್ನಾಧರಿಸಿ ವಿಚಾರಣೆಗೆ ಪೂರ್ವಾನುಮತಿ ಪ್ರಸ್ತಾವವನ್ನು ತಿರಸ್ಕರಿಸಿರುವುದು ರಾಜ್ಯಪಾಲರ ಪತ್ರದಿಂದ ಗೊತ್ತಾಗಿದೆ. ಈ ಪ್ರಕ್ರಿಯೆಯಲ್ಲಿ    ಡಾ. ಶರಣಪ್ಪ ಹಲಸೆ ಹಾಗೂ ರಾಜ್ಯಪಾಲರ ಸಚಿವಾಲಯದ ಸಿಬ್ಬಂದಿಗಳೂ ಸಹ ಶಾಮೀಲಾಗಿದ್ದಾರೆ ಎಂದು ದೂರುದಾರ ಜಗದೀಶ್‌ ಬಾಬು ಅವರು ಅರ್ಜಿಯಲ್ಲಿ ಆರೋಪಿಸಿದ್ದರು.

ಈ ರಿಟ್‌ ಅರ್ಜಿಯನ್ನು ಪರಿಗಣಿಸಿದ್ದ ಹೈಕೋರ್ಟ್‌, ಪ್ರಕರಣಕ್ಕೆ ಸಂಬಂಧಿಸಿದಂತೆ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರು ಸೇರಿದಂತೆ ಒಟ್ಟು 18 ಮಂದಿ ಪ್ರತಿವಾದಿಗಳಿಗೆ ನೋಟೀಸ್‌ ಜಾರಿಗೊಳಿಸಿತ್ತು.

ವಿದ್ಯಾಶಂಕರ್‌ ವಿರುದ್ಧ ರಾಜ್ಯಪಾಲರು, ಸುಮತಿ ಆರ್‌ ಗೌಡ ವಿರುದ್ಧ ತನಿಖೆಗೆ ಕುಲಪತಿಗಳು, ಡಾ ಎ ಖಾದರ್ ಪಾಷ ವಿರುದ್ಧ ತನಿಖೆಗೆ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕೆ ಎಲ್ ಎನ್ ಮೂರ್ತಿ ವಿರುದ್ಧ ಕುಲಪತಿಗಳು ವಿಚಾರಣೆಗೆ ಪೂರ್ವಾನುಮತಿ ನೀಡಬೇಕಿತ್ತು.

 

ಅಕ್ರಮ ಹಣ ವರ್ಗಾವಣೆ; ವಿಟಿಯು ಹಾಲಿ ಕುಲಪತಿ ಸೇರಿ ಇತರರ ವಿರುದ್ಧ ತನಿಖೆಗೆ ಸಿಗದ ಪೂರ್ವಾನುಮತಿ

 

‘ಮೈಸೂರು ಮುಕ್ತ ವಿವಿ ಕುಲಪತಿಗಳಾಗಿದ್ದ ಡಾ ಎಸ್‌ ವಿದ್ಯಾಶಂಕರ್, ಹಣಕಾಸು ಅಧಿಕಾರಿ ಡಾ ಎ ಖಾದರ್ ಪಾಷ, ಸಹಾಯಕ ಪ್ರಾಧ್ಯಾಪಕರಾದ ಡಾ ಸುಮತಿ ಆರ್ ಗೌಡ, ಕುಲ ಸಚಿವ ಡಾ ಎಸ್‌ ಎಲ್‌ ಎನ್‌ ಮೂರ್ತಿ ಅವರು ಆಕ್ಸಿಸ್‌ ಬ್ಯಾಂಕ್‌ನಲ್ಲಿ ಅಕ್ರಮವಾಗಿ ಖಾತೆ ತೆರೆದು ಸ್ವಂತಕ್ಕೆ ಡ್ರಾ ಮಾಡಿಕೊಂಡು ಹಣ ದುರುಪಯೋಗಪಡಿಸಿಕೊಂಡಿಸಿರುವ ಕುರಿತು ತನಿಖೆ, ವಿಚಾರಣೆ ಕೈಗೊಳ್ಳಲು ಪೂರ್ವಾನುಮತಿ ಒದಗಿಸಿಕೊಡಬೇಕು,’ ಎಂದು ಲೋಕಾಯುಕ್ತ ಪೊಲೀಸ್‌ ವಿಭಾಗದ ಮೈಸೂರು ಎಸ್ಪಿಯು ಲೋಕಾಯುಕ್ತ ಎಡಿಜಿಪಿಗೆ ಬರೆದಿದ್ದ ಪತ್ರದಲ್ಲಿ ಕೋರಿದ್ದರು.

 

 

ಈ ಪತ್ರ ಬರೆದು ಒಂದೂವರೆ ವರ್ಷವಾದರೂ ಇದುವರೆಗೂ ರಾಜ್ಯಪಾಲರಾದಿಯಾಗಿ ರಾಜ್ಯ ಸರ್ಕಾರದ ಸಕ್ಷಮ ಪ್ರಾಧಿಕಾರಗಳಿಂದ ಯಾವುದೇ ಅನುಮತಿ ದೊರೆತಿರಲಿಲ್ಲ.

ವಿಶ್ವವಿದ್ಯಾಲಯವು ಸ್ವಯಂ ನಿಧಿಯಡಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳ ದಾಖಲಾತಿ ಶುಲ್ಕ, ಪರೀಕ್ಷಾ ಶುಲ್ಕ, ಮತ್ತಿತರೆ ಶುಲ್ಕಗಳನ್ನು ಸಂಗ್ರಹಿಸುವ ಮೂಲಕ ವಿವಿಯ ಎಲ್ಲಾ ರೀತಿಯ ಹಣಕಾಸು ನಿಧಿಯನ್ನು ಸಂಗ್ರಹಿಸುತ್ತದೆ. ಹಣಕಾಸು ವೆಚ್ಚ ಮತ್ತು ಬ್ಯಾಂಕ್‌ ಖಾತೆಗಳ ನಿರ್ವಹಣೆಯನ್ನು ಕುಲಪತಿ ಮತ್ತು ರಿಜಿಸ್ಟ್ರಾರ್‌ ಅವರ ಆದೇಶದ ಪ್ರಕಾರ ಹಣಕಾಸು ಅಧಿಕಾರಿಯ ಹೆಸರಿನಲ್ಲಿ ಬ್ಯಾಂಕ್‌ ಖಾತೆ ತೆರೆದು ನಿರ್ವಹಿಸಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿತ್ತು.

ಆದರೆ ಮುಕ್ತ ವಿವಿಯ ಹಿಂದಿನ ಕುಲಪತಿ ಡಾ ಎಸ್‌ ವಿದ್ಯಾಶಂಕರ್‌ ಸೇರಿದಂತೆ ಇನ್ನಿತರರು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಲೋಕಾಯುಕ್ತ ಪೊಲೀಸ್‌ ತನಿಖೆಯಲ್ಲಿ ವಿವರಿಸಿತ್ತು.

ಆಕ್ಸಿಸ್‌ ಬ್ಯಾಂಕ್‌ನಲ್ಲಿ ಅಕ್ರಮವಾಗಿ ಖಾತೆ

2021ರ ಸೆಪ್ಟಂಬರ್‌ನಲ್ಲಿ ಮೈಸೂರಿನ ಕುವೆಂಪು ನಗರ ಶಾಖೆಯಲ್ಲಿನ ಆಕ್ಸಿಸ್‌ ಬ್ಯಾಂಕ್‌ನಲ್ಲಿ ಕೋ ಆರ್ಡಿನೇಟರ್‌, ಎಕ್ಸಟರ್ನಲ್‌ ಎಕ್ಸಾಮ್‌ ಹೆಸರಿನಲ್ಲಿ ಖಾತೆ (ಸಂಖ್ಯೆ; 92011003895267) ತೆರೆದಿದ್ದರು. ಈ ಖಾತೆಯನ್ನು ಅದೇ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ ಸುಮತಿ ಆರ್ ಗೌಡ ಅವರು, ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಬದಲಿಗೆ ಕೋ ಆರ್ಡಿನೇಟರ್‌ ಆಗಿ ನಿರ್ವಹಿಸಿದ್ದರು.

 

 

 

ಈ ಖಾತೆಯ 2021ರ ಸೆ.28ರಿಂದ 2022ರ ಮೇ 7ವರೆಗಿನ ಹಣಕಾಸು ವಹಿವಾಟನ್ನು ಗಮನಿಸಿರುವ ಲೋಕಾಯುಕ್ತ ಪೊಲೀಸರು ಈ ಶಾಖೆಯಲ್ಲಿ ಕೋ ಆರ್ಡಿಟನೇಟರ್‌ ಎಕ್ಸಟರ್ನಲ್‌ ಎಕ್ಸಾಮಿನೇಷನ್ಸ್‌ ಪದನಾಮದಲ್ಲಿ ಖಾತೆ ತೆರೆದು ಹಣಕಾಸು ವ್ಯವಹಾರ ನಡೆಸಲಾಗಿದೆ ಎಂದು ಸಾಬೀತುಪಡಿಸಿದ್ದರು.

 

 

ಈ ಖಾತೆಯಲ್ಲಿ ಮಾಡಿದ ಮೊದಲ ವ್ಯವಹಾರ 2021ರ ಸೆ.28 ಆಗಿದೆ. ಖಾತೆ ತೆರೆದು ಸುಮಾರು 9 ತಿಂಗಳ ನಂತರ ಕೆಎಸ್‌ಒಯುನ ಅಂದಿನ ಉಪ ಕುಲಪತಿ ಡಾ ಎಸ್‌ ವಿದ್ಯಾಶಂಕರ್ ಅವರು 2022ರ ಜುಲೈ 14ರಂದು ತಮ್ಮ ಹೆಸರಿನಲ್ಲಿ ಕಚೇರಿ ಆದೇಶ ಹೊರಡಿಸಿದ್ದರು. ಇದರ ಪ್ರಕಾರ ಆಕ್ಸಿಸ್‌ ಬ್ಯಾಂಕ್‌ನಲ್ಲಿ ತೆರೆದಿದ್ದ ಈ ಖಾತೆಯನ್ನು ತೆರೆದು ನಿರ್ವಹಿಸಬೇಕು ಎಂದು ಡಾ ಸುಮತಿ ಆರ್ ಗೌಡ ಅವರಿಗೆ ಆದೇಶಿಸಿದ್ದರು.

ಹಳೆಯ ದಿನಾಂಕ ನಮೂದಿಸಿದ್ದರೇ ವಿದ್ಯಾಶಂಕರ್?

ಆದರೆ ಈ ಆದೇಶದ ಪೂರ್ವದಲ್ಲಿಯೇ ಡಾ ಸುಮತಿ ಆರ್ ಗೌಡ ಅವರು ಆಕ್ಸಿಸ್‌ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದರು. ಹಣಕಾಸು ವ್ಯವಹಾರ ನಡೆಸಿದ್ದರು. ಇದು ಸಂಶಯಾಸ್ಪದವಾಗಿದೆ. ಅಕ್ರಮವಾಗಿ ಈ ಖಾತೆಯನ್ನು ತೆರೆಯಲಾಗಿದೆ. ಹಣವನ್ನೂ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆಕ್ಷೇಪವೂ ಇದೆ. ಹೀಗಾಗಿ ಈ ಆರೋಪದಿಂದ ಪಾರಾಗಲು ಡಾ ಎಸ್‌ ವಿದ್ಯಾಶಂಕರ್‌ ಅವರು ಹಳೆಯ ದಿನಾಂಕವನ್ನು ನಮೂದಿಸಿ ಡಾ ಎಸ್‌ ಸುಮತಿ ಆರ್ ಗೌಡ ಅವರಿಗೆ ಆಕ್ಸಿಸ್‌ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ನಿಯೋಜಿಸಿದಂತೆ ದಾಖಲಾತಿ ಸೃಷ್ಟಿಸಿರುವುದು ಕಂಡು ಬಂದಿದೆ ಎಂದು ಲೋಕಾ ಪೊಲೀಸರ ತನಿಖೆ ವರದಿಯಲ್ಲಿ ವಿವರಿಸಿತ್ತು.

 

 

 

ಖಾತೆಯ ಹಣಕಾಸು ವ್ಯವಹಾರಗಳನ್ನು ಲೋಕಾಯುಕ್ತ ಪೊಲೀಸರು ಪರಿಶೀಲಿಸಿದ್ದಾರೆ. 2021ರ ಡಿಸೆಂಬರ್‌ 18ರಿಂದ 2022ರ ಮೇ 7ವರಗೆ ಒಟ್ಟು 21,00,00 ಲಕ್ಷ ರು.ಗಳನ್ನು 1 ಲಕ್ಷ ರು.ಗಳಿಂದ 5 ಲಕ್ಷ ರು ಮೌಲ್ಯದ ವಿವಿಧ ಚೆಕ್‌ಗಳ ಮೂಲಕ ಸ್ವಂತಕ್ಕೆ ಡ್ರಾ ಮಾಡಿಕೊಂಡಿರುವುದು ಕಂಡು ಬಂದಿದೆ. ಅಲ್ಲದೇ ಸುಮತಿ ಅರ್‌ ಗೌಡ ಅವರು ಆಕ್ಸಿಸ್‌ ಬ್ಯಾಂಕ್‌ನ ಖಾತೆಯಿಂದ ಕುಲಪತಿ ಡಾ ಎಸ್‌ ವಿದ್ಯಾಶಂಕರ್‌, ಅವರ ಆಪ್ತ ಕಾರ್ಯದರ್ಶಿ ವಿಶಾಲ್‌ ಎನ್ ರಾಜ್‌, ಕೆಎಸ್‌ಒಯುನ ತಾತ್ಕಾಲಿಕ ನೌಕರ ಸಿದ್ದರಾಜು, ಡಾ ಎ ಪಾರ್ಥ, ಮತ್ತು ರಂಗರಾಜು ಅವರುಗಳ ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿರುವುದನ್ನು ಪತ್ತೆ ಹಚ್ಚಿದ್ದರು.

 

 

 

ಕರ್ನಾಟಕ ಹಣಕಾಸು ಸಂಹಿತೆ ನಿಯಮ 72(ಎ)ರಂತೆ ಸರ್ಕಾರಿ ಅಧಿಕಾರಿಯು ಒಂದು ಸಾವಿರಕ್ಕಿಂತ ಹೆಚ್ಚಿನ ಸರ್ಕಾರಿ ವೆಚ್ಚವನ್ನು ಕ್ರಾಸ್‌ ಚೆಕ್‌ ಮೂಲಕವೇ ಪಾವತಿಸುವಂತೆ ನಿರ್ದಿಷ್ಟಪಡಿಸಿದೆ. ಇದಕ್ಕೆ ಪೂರಕವಾಗಿ ಕರ್ನಾಟಕ ಸರ್ಕಾರದ ಆದೇಶದ (ಎಫ್‌ಡಿ 5 ಟಿಎಆರ್ 2017)ರ ಪ್ರಕಾರ ಯಾವುದೇ ಸರ್ಕಾರಿ ಅಧಿಕಾರಿಯು ಸರ್ಕಾರಿ ನಿಧಿಯ ಹಣವನ್ನು ಸ್ವಂತಕ್ಕೆ ಡ್ರಾ ಮಾಡುವುದು ಮತ್ತು ಸರ್ಕಾರಿ ಅಧಿಕಾರಿಗಳ ಖಾತೆಗೆ ವರ್ಗಾಯಿಸಿಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಿತ್ತು.

ಆದರೆ ಸುಮತಿ ಅರ್ ಗೌಡ ಅವರು ಕರ್ನಾಟಕ ಹಣಕಾಸು ಸಂಹಿತೆಯ ನಿಯಮ ಮತ್ತು ಆದೇಶಗಳನ್ನು ಉಲ್ಲಂಘಿಸಿ 21,00,00 ಲಕ್ಷ ರು.ಗಳನ್ನು ಸೆಲ್ಫ್‌ ಡ್ರಾ ಮಾಡಿದ್ದಾರೆ. ಅಲ್ಲದೇ ಸುಮಾರು 4,10,000 ರು.ಗಳನ್ನು ತನ್ನ ಹಾಗು ವಿಶ್ವವಿದ್ಯಾಲಯದ ಅಧಿಕಾರಿ ಸಿಬ್ಬಂದಿಗಳ ಖಾತೆಗೆ ವರ್ಗಾಯಿಸಿ ತಾನೂ ಅಕ್ರಮ ಲಾಭ ಮಾಡಿಕೊಂಡು ವಿಶ್ವವಿದ್ಯಾಲಯದ ನಿರ್ದಿಷ್ಟ ಅಧಿಕಾರಿ, ಸಿಬ್ಬಂದಿಗಳಿಗೂ ಅಕ್ರಮ ಲಾಭ ಮಾಡಿಕೊಟ್ಟಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತನಿಖೆ ವೇಳೆಯಲ್ಲಿ ಬಯಲು ಮಾಡಿದ್ದರು.

 

 

 

ಅದೇ ರೀತಿ ವಿಶ್ವವಿದ್ಯಾಲಯದ ವ್ಯವಹಾರ, ನಿಧಿಗಳ ಮೇಲ್ವಿಚಾರಣೆಯನ್ನು ನಡೆಸುವ ಜವಾಬ್ದಾರಿ ಹೊಂದಿದ್ದ ಹಣಕಾಸು ಅಧಿಕಾರಿ ಡಾ ಎ ಖಾದರ್‌ ಪಾಷ ಅವರು ಸಹ ಕರ್ತವ್ಯಲೋಪ ಎಸಗಿದ್ದಾರೆ ಎಂಬುದನ್ನೂ ಪತ್ತೆ ಹಚ್ಚಿದ್ದಾರೆ. ವಿವಿಯಲ್ಲಿರುವ ನಗದು, ಬ್ಯಾಂಕ್‌ ಖಾತೆಯಲ್ಲಿರುವ ಹಣ, ಹೂಡಿಕೆಗಳ ಮೇಲೆ ನಿರಂತರವಾಗಿ ಗಮನವಿಟ್ಟು ಮತ್ತು ವಾರ್ಷಿಕ ಲೆಕ್ಕಪತ್ರವನ್ನು ಸಿದ್ಧಪಡಿಸಿ ಹಣಕಾಸು ಸಮಿತಿಯ ಪರಿಶಿಲನೆಗೆ ಸಲ್ಲಿಸಬೇಕು. ನಂತರ ವ್ಯವಸ್ಥಾಪನ ಮಂಡಳಿಗೂ ಸಲ್ಲಿಸುವ ಜವಾಬ್ದಾರಿಯೂ ಹಣಕಾಸು ಅಧಿಕಾರಿಯದ್ದಾಗಿದೆ.

ಆದರೆ ಡಾ ಎ ಖಾದರ್ ಪಾಷ ಅವರು ಡಾ ಸುಮತಿ ಆರ್ ಗೌಡ ಅವರು ಆಕ್ಸಿಸ್‌ ಬ್ಯಾಂಕ್‌ನಲ್ಲಿ ನಿಯಮಬಾಹಿರವಾಗಿ ತೆರೆದಿದ್ದ ಬ್ಯಾಂಕ್‌ ಖಾತೆಯ ಅವ್ಯವಹಾರವನ್ನು ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ. ಮತ್ತು ಈ ಖಾತೆಯನ್ನು ವಿಶ್ವವಿದ್ಯಾಲಯದ ವಾರ್ಷಿಕ ಲೆಕ್ಕಪತ್ರಕ್ಕೆ ಸೇರಿಸದೇ ಮತ್ತು ಲೆಕ್ಕ ಪರಿಶೋಧನೆಗೆ ಒಳಪಡಿಸಿಲ್ಲ. ಇದರಿಂದಾಗಿ ಸುಮತಿ ಅರ್ ಗೌಡ ಹಾಗೂ ಇತರರಿಗೆ ಅಕ್ರಮ ಲಾಭ ಮಾಡಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಲೋಕಾಯುಕ್ತ ಪೊಲೀಸರ ತನಿಖೆಯು ಸಾಬೀತುಪಡಿಸಿರುವುದನ್ನು ಸ್ಮರಿಸಬಹುದು.

Hot this week

‘ಅದಾನಿ ಕಂಪನಿಯಿಂದಲೇ ವಿವಾದ, 850 ಕೋಟಿ ರು ಪಾವತಿಸುವ ಲಕ್ಷಣಗಳೂ ಗೋಚರಿಸುತ್ತಿಲ್ಲ, ಅಧಿಕಾರಿಗಳ ಕೈ ಕಟ್ಟಿ ಹಾಕಿದೆ’; ಸರ್ಕಾರದ ಅಸಹಾಯಕತೆ ಬಹಿರಂಗ

ಬೆಂಗಳೂರು;  'ಕಲ್ಬುರ್ಗಿಯ ವಾಡಿಯಲ್ಲಿ  ಸುಣ್ಣದ ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ಗಣಿಗಾರಿಕೆ...

ನೀರಾವರಿ ನಿಗಮಗಳ ಗುತ್ತಿಗೆದಾರರಿಗೆ 15,429.51 ಕೋಟಿ ರು ಬಾಕಿ; ಸ್ಥಗಿತಗೊಂಡಿವೆಯೇ ಕಾಮಗಾರಿಗಳು?

ಬೆಂಗಳೂರು;  ಕೃಷ್ಣಭಾಗ್ಯ ಜಲನಿಗಮ ಸೇರಿದಂತೆ ರಾಜ್ಯದ ನಾಲ್ಕು ನೀರಾವರಿ ನಿಗಮಗಳು ಅನುಷ್ಠಾನಗೊಳಿಸುತ್ತಿರುವ...

ಟೆಂಡರ್ ಇಲ್ಲದೆಯೇ 3.11 ಕೋಟಿ ನೇರ ಹೂಡಿಕೆ, ಮುಂಗಡ ಹಣ ಹೊಂದಾಣಿಕೆಯಲ್ಲೂ ವಿಳಂಬ, ಲಕ್ಷಾಂತರ ರು ನಷ್ಟ; ಮಹರ್ಷಿ ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಅಕ್ರಮ!

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಯಾವುದೇ ಟೆಂಡರ್‍‌ ಕರೆಯದೇ ನೇರವಾಗಿ...

ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಲೋಪ; ಹಣ ಪಾವತಿಯಲ್ಲಿ ಸರ್ಕಾರದ ಆದೇಶಗಳ ಉಲ್ಲಂಘನೆ, 51.21 ಕೋಟಿ ಮೊತ್ತದ ವಹಿವಾಟು ಪಾರದರ್ಶಕವಾಗಿವೆಯೇ?

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು ಹಣ ಪಾವತಿ ಸಂದರ್ಭಗಳಲ್ಲಿ ಸರ್ಕಾರದ...
Please Scan to make Your Contribution

Topics

‘ಅದಾನಿ ಕಂಪನಿಯಿಂದಲೇ ವಿವಾದ, 850 ಕೋಟಿ ರು ಪಾವತಿಸುವ ಲಕ್ಷಣಗಳೂ ಗೋಚರಿಸುತ್ತಿಲ್ಲ, ಅಧಿಕಾರಿಗಳ ಕೈ ಕಟ್ಟಿ ಹಾಕಿದೆ’; ಸರ್ಕಾರದ ಅಸಹಾಯಕತೆ ಬಹಿರಂಗ

ಬೆಂಗಳೂರು;  'ಕಲ್ಬುರ್ಗಿಯ ವಾಡಿಯಲ್ಲಿ  ಸುಣ್ಣದ ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ಗಣಿಗಾರಿಕೆ...

ನೀರಾವರಿ ನಿಗಮಗಳ ಗುತ್ತಿಗೆದಾರರಿಗೆ 15,429.51 ಕೋಟಿ ರು ಬಾಕಿ; ಸ್ಥಗಿತಗೊಂಡಿವೆಯೇ ಕಾಮಗಾರಿಗಳು?

ಬೆಂಗಳೂರು;  ಕೃಷ್ಣಭಾಗ್ಯ ಜಲನಿಗಮ ಸೇರಿದಂತೆ ರಾಜ್ಯದ ನಾಲ್ಕು ನೀರಾವರಿ ನಿಗಮಗಳು ಅನುಷ್ಠಾನಗೊಳಿಸುತ್ತಿರುವ...

ಟೆಂಡರ್ ಇಲ್ಲದೆಯೇ 3.11 ಕೋಟಿ ನೇರ ಹೂಡಿಕೆ, ಮುಂಗಡ ಹಣ ಹೊಂದಾಣಿಕೆಯಲ್ಲೂ ವಿಳಂಬ, ಲಕ್ಷಾಂತರ ರು ನಷ್ಟ; ಮಹರ್ಷಿ ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಅಕ್ರಮ!

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಯಾವುದೇ ಟೆಂಡರ್‍‌ ಕರೆಯದೇ ನೇರವಾಗಿ...

ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಲೋಪ; ಹಣ ಪಾವತಿಯಲ್ಲಿ ಸರ್ಕಾರದ ಆದೇಶಗಳ ಉಲ್ಲಂಘನೆ, 51.21 ಕೋಟಿ ಮೊತ್ತದ ವಹಿವಾಟು ಪಾರದರ್ಶಕವಾಗಿವೆಯೇ?

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು ಹಣ ಪಾವತಿ ಸಂದರ್ಭಗಳಲ್ಲಿ ಸರ್ಕಾರದ...

ಮಹರ್ಷಿ ವಾಲ್ಮೀಕಿ ವಿ.ವಿ.ಯಲ್ಲಿ 38.98 ಕೋಟಿ ರು ಗೆ ಆಕ್ಷೇಪಣೆ; ವಾರ್ಷಿಕ ಲೆಕ್ಕಪತ್ರಗಳಲ್ಲಿ ಬ್ಯಾಂಕ್‌ ಖಾತೆಗಳ ವಿವರ ಒದಗಿಸಿಲ್ಲವೇಕೆ?

ಬೆಂಗಳೂರು;  ರಾಯಚೂರಿನಲ್ಲಿರುವ  ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಟೆಂಡರ್ ಕರೆಯದೇ ನೇರವಾಗಿ ಏಜೆನ್ಸಿ...

ರಾಷ್ಟ್ರೋತ್ಥಾನ, ಜನಸೇವಾ ವಿಶ್ವಸ್ಥ, ಜನಸೇವಾ ಟ್ರಸ್ಟ್‌ಗೆ 121 ಎಕರೆ ಜಮೀನು ಮಂಜೂರು; ಸದನಕ್ಕೆ ಪಟ್ಟಿ ಒದಗಿಸಿದ ಸರ್ಕಾರ

ಬೆಂಗಳೂರು; ಕಳೆದ 16 ವರ್ಷಗಳಲ್ಲಿ  ರಾಷ್ಟ್ರೋತ್ಥಾನ ಪರಿಷತ್‌ ಮತ್ತು ಸಂಘ ಪರಿವಾರದ...

Related Articles

Popular Categories

error: Content is protected !!