ಬೆಂಗಳೂರು; ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿಯ ಅನುದಾನ ಬೇಡಿಕೆ ಮುಂದಿರಿಸಿರುವ ಇಲಾಖೆಗಳ ಪೈಕಿ ನಗರಾಭಿವೃದ್ಧಿ ಇಲಾಖೆಯು 34,715.13 ಕೋಟಿ ರು ಮೊತ್ತದ ಅನುದಾನವನ್ನು ಕೋರಿದೆ. ಈ ಮೂಲಕ ಅತೀ ಹೆಚ್ಚು ಅನುದಾನ ಬೇಡಿಕೆ ಇಟ್ಟಿರುವ ಇಲಾಖೆಯಾಗಿದೆ. ಇಲಾಖೆಗಳಿಂದ ಒಟ್ಟಾರೆ 1,68,846.52 ಕೋಟಿ ಮೊತ್ತದ ಅನುದಾನ ಬೇಡಿಕೆಯು ಸರ್ಕಾರಕ್ಕೆ ಸ್ವೀಕೃತವಾಗಿದೆ.
ವಿಶೇಷವೆಂದರೇ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಜಿಲ್ಲೆ ಕಲ್ಬುರ್ಗಿಯು ಅತೀ ಕಡಿಮೆ ಎಂದರೇ ಕೇವಲ 442.75 ಕೋಟಿ ರು ಅನುದಾನಕ್ಕೆ ಬೇಡಿಕೆ ಇರಿಸಿದೆ. ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ಜಿಲ್ಲಾ ಉಸ್ತುವಾರಿ ಹೊತ್ತಿರುವ ಶಿವಮೊಗ್ಗ ಜಿಲ್ಲೆಯು ಜಿಲ್ಲಾವಾರು ಪಟ್ಟಿಯಲ್ಲಿ 25,288.88 ಕೋಟಿ ರು ಬೇಡಿಕೆ ಇಡುವ ಮೂಲಕ ಅತೀ ಹೆಚ್ಚು ಅನುದಾನಕ್ಕೆ ಬೇಡಿಕೆ ಇರಿಸಿರುವ ಜಿಲ್ಲೆಯಾಗಿದೆ.
2026-27ನೇ ಸಾಲಿಗೆ ಕೆಳ ಹಂತದ ಯೋಜನೆಗಳೊಂದಿಗೆ ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ವರದಿ ಸಿದ್ಧಪಡಿಸಿರುವ ಯೋಜನಾ ಇಲಾಖೆಯು ಈ ಕುರಿತು ಇಲಾಖೆಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದೆ. ಜಿಲ್ಲಾವಾರು ಕರಡು ಅಭಿವೃದ್ಧಿ ಯೋಜನೆಗಳ ಕುರಿತು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈಗಾಗಲೇ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇಲಾಖೆಗಳು ಬೇಡಿಕೆ ಇರಿಸಿರುವ ಅನುದಾನದ ವಿವರಗಳು ದಿ ಫೈಲ್ ಗೆ ಲಭ್ಯವಾಗಿವೆ.

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನೆ ಆಯೋಗ ಹಾಗೂ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಅಭಿವೃದ್ಧಿ ಸಮಿತಿಯು 2025ರ ಮೇ 15ರಂದು ಜಂಟಿ ಸಭೆ ನಡೆಸಿತ್ತು. ಈ ಸಭೆಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 309 ಮತ್ತು 310 ಅನ್ವಯ 2026-27ನೇ ಸಾಲಿಗೆ ಗ್ರಾಮ ಸಭಾ ಮತ್ತು ವಾರ್ಡ್ ಸಭೆಗಳ ಮೂಲಕ ಕೆಳ ಹಂತದ ಯೋಜನೆಗಳು ಮತ್ತು ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಯೋಜನೆಗಳ ಸಂಯೋಜನೆ ಮಾಡಿತ್ತು. ತಾಲೂಕು ಹಾಗೂ ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ಸಿದ್ಧಪಡಿಸಿತ್ತು.
ಜಿಲ್ಲಾ ಯೋಜನೆ ಸಮಿತಿ ಮೂಲಕ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಗೆ ಸಲ್ಲಿಸಬೇಕು ಮತ್ತು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಸಲ್ಲಿಸಿತ್ತು. ವಿವಿಧ ಇಲಾಖೆಗಳೊಂದಿಗೆ ಅಭಿವೃದ್ಧಿ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಸೂಚಿಸಿತ್ತು.
ಇದರ ಪ್ರಕಾರ ರಾಜ್ಯದ 31 ಜಿಲ್ಲೆಗಳು 2026-27ನೇ ಸಾಲಿಗೆ ವಾರ್ಷಿಕ ಕರಡು ಅಭಿವೃದ್ಧಿಯ ಅನುದಾನ ಬೇಡಿಕೆ ವಿವರಗಳನ್ನು ಒದಗಿಸಿದೆ. ಇದರ ಪ್ರಕಾರ ಒಟ್ಟು ಅನುದಾನದ ಬೇಡಿಕೆ 1,68,846.52 ಕೋಟಿ ರು ಸ್ವೀಕೃತವಾಗಿದೆ. ಇದರಲ್ಲಿ ಪ್ರಮುಖವಾಗಿ ನಗರಾಭಿವೃದ್ಧಿ ಇಲಾಖೆಯಿಂದ 34,715.13 ಕೋಟಿ ರು ಬೇಡಿಕೆ ಇರಿಸಿದೆ. ಈ ಇಲಾಖೆಯಿಂದಲೇ ಅತೀ ಹೆಚ್ಚು ಅನುದಾನ ಬೇಡಿಕೆ ಸ್ವೀಕೃತವಾಗಿರುವುದು ಅಭಿವೃದ್ಧಿ ಯೋಜನೆ ವರದಿಯಿಂದ ತಿಳಿದು ಬಂದಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 29,991.27 ಕೋಟಿ ರು ಅನುದಾನ ಬೇಡಿಕೆಯಿಟ್ಟಿದ್ದರೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 20,873.44 ಕೋಟಿ ರು. ಅನುದಾನ ಬೇಡಿಕೆ ಇಟ್ಟಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂಧ 0.04 ಕೋಟಿ ರು ಬೇಡಿಕೆ ಇರಿಸುವ ಮೂಲಕ ಅತೀ ಕಡಿಮೆ ಅನುದಾನ ಬೇಡಿಕೆಯಿಟ್ಟಿದೆ.
ಜಿಲ್ಲೆಗಳ ಪೈಕಿ ಶಿವಮೊಗ್ಗ ಜಿಲ್ಲೆ ಅತೀ ಹೆಚ್ಚು ಎಂದರೇ 25,888.88 ಕೋಟಿ ರು ಅನುದಾನ ಬೇಡಿಕೆ ಇರಿಸಿದೆ. ಉತ್ತರ ಕನ್ನಡ ಜಿಲ್ಲೆಯಿಂದ 13,811.221 ಕೋಟಿ ರು, ಧಾರವಾಡ ಜಿಲ್ಲೆಯು 10,490.37 ಕೋಟಿ ರು ಅನುದಾನ ಮತ್ತು ಕಲ್ಬುರ್ಗಿ ಜಿಲ್ಲೆಯಿಂದ ಅತೀ ಕಡಿಮೆ ಎಂದರೇ 442.75 ಕೋಟಿ ರು ಅನುದಾನ ಬೇಡಿಕೆ ಇಟ್ಟಿದೆ.

ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಕೆಕೆಆರ್‍ಡಿಬಿ ಮೂಲಕ ಮತ್ತು ರಾಜ್ಯ ಸರ್ಕಾರದ ಮುಖಾಂತರ ಹೆಚ್ಚಿನ ವಿಶೇಷ ಅನುದಾನಕ್ಕೆ ಬೇಡಿಕೆ ಇಡಲಾಗಿದೆ. ಪ್ರಮುಖವಾಗಿ ಕುಡಿಯುವ ನೀರು, ರಸ್ತೆಗಳು, ಕೈಗಾರಿಕಾ ಕ್ಷೇತ್ರ ಹಾಗೂ ಕೃಷಿ ವಲಯಕ್ಕೆ ಹೆಚ್ಚಿನ ಅನುದಾನ ಒದಗಿಸುವಂತೆ ಸಾರ್ವಜನಿಕರು ಮತ್ತು ತಜ್ಞರು ನಿರಂತರವಾಗಿ ಒತ್ತಾಯಿಸಿದ್ದರು.
ಕಲಬುರಗಿ ಜಿಲ್ಲೆಯ ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ₹25 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿತ್ತು.
ಈ ಯೋಜನೆಯಡಿ ಒಟ್ಟು 20.65 ಕಿಲೋಮೀಟರ್ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದ್ದು, ರಾಜ್ಯ ಹೆದ್ದಾರಿ–156ರ ಕಟ್ಟಿಸಂಗವಿ–ಯನಗುಂಟಿ–ನರಿಬೋಳ–ಮಾಲ್-ಕೆ ಕ್ರಾಸ್ ಮಾರ್ಗದ 9.045 ಕಿಲೋಮೀಟರ್ ರಸ್ತೆ ಹಾಗೂ ಕೆಲ್ಲೂರು–ಆಂದೋಳ ಜಿಲ್ಲಾ ಮುಖ್ಯ ರಸ್ತೆಯ 3.900 ಕಿಲೋಮೀಟರ್ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಪ್ರಸ್ತುತ 3.75 ಮೀಟರ್ ಅಗಲವಿರುವ ರಸ್ತೆಯನ್ನು ಆಯ್ದ ಭಾಗಗಳಲ್ಲಿ 5.5 ಮೀಟರ್ ಅಗಲಕ್ಕೆ ವಿಸ್ತರಿಸಿ ಗುಣಮಟ್ಟದ ರಸ್ತೆ ನಿರ್ಮಿಸಲಿದೆ ಎಂದು ತಿಳಿದು ಬಂದಿದೆ.
2026-27ನೇ ಸಾಲಿನ ಆಯವ್ಯಯ ಕಂಡಿಕೆ 291ರಲ್ಲಿ ಗ್ರಾಮ ಮಟ್ಟದಿಂದ ಯೋಜನೆಗಳನ್ನು ಸಿದ್ಧಪಡಿಸಲು 26 ಜಿಲ್ಲೆಗಳಲ್ಲಿ ಜಿಲ್ಲಾ ಯೋಜನಾ ಸಮಿತಿ ರಚಿಸಿದೆ. ಜನರ ಯೋಜನೆಯನ್ನು ರೂಪಿಸಲಾಗಿದೆ. ಜನರ ಯೋಜನೆಯನ್ನು ರಾಜ್ಯ, ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯ್ತಿಗಳಲ್ಲಿ ಪೂರ್ವ ಸಿದ್ಧತೆ ಕೈಗೊಳ್ಳುವುದು, ವಿವಿಧ ಹಂತಗಳಾದ ಗ್ರಾಮ ಪಂಚಾಯತ್, ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದ ಹಂತಗಳಲ್ಲಿ ಜನರ ಯೋಜನೆ ಸಿದ್ಧಪಡಿಸಲು ಯೋಜನಾ ಚೌಕಟ್ಟನ್ನು ಸಿದ್ಧಪಡಿಸಲು ಸೂಚಿಸಿದೆ.

ಗ್ರಾಮೀಣ ಪ್ರದೇಶಗಳಲ್ಲಿ ವಾರ್ಡ್ ಮತ್ತು ಗ್ರಾಮ ಸಭೆಗಳು, ನಗರ ಪ್ರದೇಶಗಳಲ್ಲಿ ವಾರ್ಡ್ ಸಭೆಗಳನ್ನು ಪೂರ್ಣಗೊಳಿಸಬೇಕು. ಗ್ರಾಮಪಂಚಾಯ್ತಿಗಳೀಂದ ಸ್ವೀಕೃತಿಯಾಗಿರುವ ಪ್ರಸ್ತಾವನೆಗಳನ್ನು ಕ್ರೋಢೀಕರಿಸಬೇಕು. ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಜನರ ಯೋಜನೆ 2027-28ರ ಯೋಜನಾ ವರದಿ ಸಿದ್ಧಪಡಿಸಬೇಕು ಎಂದು ನಿರ್ದೇಶನ ನೀಡಿದೆ.




