ಬೆಂಗಳೂರು; ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದಲ್ಲಿ 54 ಎಕರೆಗೆ ಅಕ್ರಮವಾಗಿ ಖಾತೆ ಮಾಡಿ 79.28 ಕೋಟಿ ರು.ಗಳನ್ನು ಅನರ್ಹರಿಗೆ ಪರಿಹಾರ ನೀಡಿರುವ ಪ್ರಕರಣದಲ್ಲಿ ಕೆಎಎಸ್ ಹಿರಿಯ ಶ್ರೇಣಿ ಅಧಿಕಾರಿ ನವೀನ್ ಜೋಸೆಫ್ ಅವರ ವಿರುದ್ಧದ ಎರಡನೇ ಬಾರಿ ಮರು ವಿಚಾರಣೆ ನಡೆಸಲು ಸರ್ಕಾರವು ಆದೇಶ ಹೊರಡಿಸಿದೆ.
ಇದೇ ಪ್ರಕರಣದಲ್ಲಿ ನವೀನ್ ಜೋಸೆಫ್ ಅವರ ವಿರುದ್ಧ 2023ರ ಫೆ.6ರಂದು ಮೊದಲನೇ ವಿಚಾರಣೆ ವರದಿಯನ್ನು ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಎಚ್ ಎಸ್ ಕಮಲ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.ಈ ವಿಚಾರಣೆ ವರದಿಯಲ್ಲಿ ಆರೋಪಿತ ಅಧಿಕಾರಿ ನವೀನ್ ಜೋಸೆಫ್ ಅವರ ವಿರುದ್ಧದ ಆರೋಪಗಳು ಸಾಬೀತಾಗಿರಲಿಲ್ಲ. ಈ ವಿಚಾರಣೆ ವರದಿಯನ್ನು ಸರ್ಕಾರವು ಒಪ್ಪದೇ ತಿರಸ್ಕರಿಸಿತ್ತು. ಇದೀಗ ಇದೇ ಪ್ರಕರಣವನ್ನು ಮರು ವಿಚಾರಣೆಗೊಳಪಡಿಸಲು ಸರ್ಕಾರವು ಮುಂದಾಗಿದೆ.
ಕಂದಾಯ ಇಲಾಖೆಯ ( ಕಂದಾಯ, ಭೂ ಸ್ವಾಧೀನ, ಪುನರ್ ವಸತಿ ಮತ್ತು ಪುನರ್ ನಿರ್ಮಾಣ, ಸಾಮಾಜಿಕ ಭದ್ರತೆ) ಆಯುಕ್ತರಾದ ಮೀನಾ ನಾಗರಾಜ್ ಅವರ ನೇತೃತ್ವದಲ್ಲಿ ಮರು ವಿಚಾರಣೆ ನಡೆಸಲಿದೆ. ಈ ಸಂಬಂಧ 2026ರ ಆಗಸ್ಟ್ 1ರಂದು ಆದೇಶ ಹೊರಡಿಸಿದೆ.
ಈ ಆದೇಶದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಈ ಪ್ರಕರಣದ ನಡೆದ ಹೊತ್ತಿನಲ್ಲಿ ಆಪಾದಿತ ಅಧಿಕಾರಿ ನವೀನ್ ಜೋಸೆಫ್ ಅವರು ನಂಜನಗೂಡು ತಾಲೂಕಿನಲ್ಲಿ ತಹಶೀಲ್ದಾರ್ ಆಗಿದ್ದರು. ಈ ಪ್ರಕರಣದ ಬಗ್ಗೆ ಸಿಎಜಿಯೂ ಸಹ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಸಿಎಜಿ ವರದಿ ಆಧರಿಸಿ ಕೃಷ್ಣ ಬೈರೇಗೌಡ ಅವರು ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಇದನ್ನು ಸಿಒಡಿಗೆ ವಹಿಸಲು ತೀರ್ಮಾನಿಸಿತ್ತು. ಆದರೆ ಸಿಐಡಿಗೆ ಈ ಪ್ರಕರಣವನ್ನು ವಹಿಸಲಾಯಿತೇ ಎಂಬ ಬಗ್ಗೆ ಯಾವ ಮಾಹಿತಿಯನ್ನೂ ಸರ್ಕಾರವು ಬಹಿರಂಗಗೊಳಿಸಿಲ್ಲ. ಈ ಆದೇಶ ಹೊರಬಿದ್ದಾಗ ಆರೋಪಿತ ಅಧಿಕಾರಿ ನವೀನ್ ಜೋಸೆಫ್ ಅವರು ಡಾ ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಕುಲಸಚಿವರಾಗಿದ್ದರು. ಸದ್ಯ ನವೀನ್ ಜೋಸೆಫ್ ಅವರು ಭದ್ರಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.
ಏನಿದು ಪ್ರಕರಣ?
ನವೀನ್ ಜೋಸೆಫ್ ಅವರು ನಂಜನಗೂಡು ತಹಶೀಲ್ದಾರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆ ಅವಧಿಯಲ್ಲಿ ನಂಜನಗೂಡು ಭೂ ನ್ಯಾಯ ಮಂಡಳಿಯಲ್ಲಿ ಸದಸ್ಯ ಕಾರ್ಯದರ್ಶಿಯಾಗಿಯೂ ಸಹ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ನಂಜನಗೂಡು ತಾಲೂಕಿನ ಚಿಕ್ಕಯ್ಯನ ಛತ್ರ ಹೋಬಳಿ ಇಮ್ಮಾವು ಗ್ರಾಮದ ಸರ್ವೇ ನಂಬರ್ 390ರಿಂದ 422, 424ಕ್ಕೆ ಸಂಬಂಧಿಸಿದ ಜಮೀನುಗಳ ಬಗ್ಗೆ ಭೂ ನ್ಯಾಯಮಂಡಳಿಯಲ್ಲಿ (ಎಲ್ ಆರ್ ಎಫ್ 94/1976-77) ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನವೀನ್ ಜೋಸೆಫ್ ಅವರು 2011ರ ಸೆ.14 ಮತ್ತು ಅಕ್ಟೋಬರ್ 26ರಂದು ಎರಡು ಆದೇಶಗಳನ್ನು ಹೊರಡಿಸಿದ್ದರು.
ಈ ಆದೇಶದ ಮೂಲಕ ಕೆಲವು ಖಾಸಗಿ ವ್ಯಕ್ತಿಗಳಿಗೆ ಜಮೀನು ಹಂಚಿಕೆಯಾಗಿತ್ತು. ಈ ಪ್ರಕರಣದಲ್ಲಿ ಭೂ ನ್ಯಾಯ ಮಂಡಳಿಯ ಆದೇಶಗಳು, ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಉಪಬಂಧಗಳು ಉಲ್ಲಂಘನೆಯಾಗಿದ್ದರೂ ಸಹ ತಹಶೀಲ್ದಾರ್ ಆಗಿದ್ದ ಎ ನವೀನ್ ಜೋಸೆಫ್ ಅವರು ತರಾತುರಿಯಲ್ಲಿ ಭೂ ನ್ಯಾಯಮಂಡಳಿ ಆದೇಶವನ್ನು ಜಾರಿಗೊಳಿಸಲು 2011ರ ಸೆ.16ರಂದೇ ಚೆಕ್ ಲೀಸ್ಟ್ ತಯಾರಿಸಿದ್ದರು. ಕರ್ನಾಟಕ ಭೂಕಂದಾಯ ಅಧಿನಿಯಮ 1964ರ ಉಪಬಂಧಗಳನ್ನು ಉಲ್ಲಂಘಿಸಿ ಈ ಜಮೀನುಗಳ ಖಾತೆ ವರ್ಗಾವಣೆ ಮಾಡಿ ಸೂಕ್ತ ಬದಲಾವಣೆ ಮಾಡಬೇಕು ಎಂದು ಆದೇಶಿಸಿದ್ದರು ಎಂದು ಕಂದಾಯ ಇಲಾಖೆಯು ಹೊರಡಿಸಿರುವ ನಡವಳಿಯ ಪ್ರಸ್ತಾವನೆಯಿಂದ ತಿಳಿದು ಬಂದಿದೆ.

ಭೂ ನ್ಯಾಯಮಂಡಳಿ ಆದೇಶಕ್ಕೆ ಅಧ್ಯಕ್ಷರ ಸಹಮತಿ ಇರಲಿಲ್ಲ
ಭೂನ್ಯಾಯಮಂಡಳಿ ಅಧ್ಯಕ್ಷರು 2011ರ ಅಕ್ಟೋಬರ್ 21ರಂದು ಬರೆದಿದ್ದ ಪತ್ರದ ಪ್ರಕಾರ ಕೃಷ್ಣಾನಂದಗಿರಿ ಗೋಪಾಲಸ್ವಾಮಿ ಅವರು ಫೌತಿಯಾಗಿದ್ದರು. ಅವರ ವಾರಸುದಾರರಿಗೆ ಸೂಕ್ತ ದಾಖಲೆಗಳನ್ನು ಪಡೆದು ಖಾತೆ ಮಾಡಲು ಸೂಕ್ತ ಕ್ರಮ ವಹಿಸಬೇಕು ಎಂದು ಸೂಚಿಸಲಾಗಿತ್ತು ಇದರ ಪ್ರಕಾರ 2011ರ ಅಕ್ಟೋಬರ್ 22ರಂದು ಚೆಕ್ ಲೀಸ್ಟ್ ತಯಾರಿಸಿ ಜ್ಞಾಪನ ಪತ್ರ ಹೊರಡಿಸಿ ಗಣಕ ಶಾಖೆಗೆ ಕಳಿಸಿದ್ದರು. ಅಲ್ಲದೇ 2011ರ ಸೆ.14ರಂದು ಹೊರಡಿಸಿದ್ದ ಭೂ ನ್ಯಾಯಮಂಡಳಿ ಆದೇಶಕ್ಕೆ ಅಧ್ಯಕ್ಷರ ಸಹಮತಿ ಇರಲಿಲ್ಲ. ಆದರೂ 2011ರ ಸೆ.16ರಂದು ಖಾತೆ ವರ್ಗಾವಣೆಗೆ ಆದೇಶಿಸಲಾಗಿತ್ತು.
ಭೂ ನ್ಯಾಯಮಂಡಳಿಯು ಹೊರಡಿಸಿದ್ದ ಈ ಆದೇಶವನ್ನು ಬಹುಮತದ ಆದೇಶ ಎಂದು ಪರಿಗಣಿಸಬೇಕೇ ಅಥವಾ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದೇ ಎಂಬ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು 2011ರ ಅಕ್ಟೋಬರ್ 26ರಂದು ಮೈಸೂರು ಜಿಲ್ಲಾಧಿಕಾರಿಗೆ ಕೋರಿದ್ದರು. ಇದಕ್ಕೆ ಉತ್ತರಿಸಿದ್ದ ಮೈಸೂರು ಜಿಲ್ಲಾಧಿಕಾರಿ ಈಗಾಗಲೇ ಭೂ ನ್ಯಾಯಮಂಡಳಿ ನೀಡಿರುವ ಆದೇಶದ ಪ್ರಕಾರ ಕಾನೂನಿನ ಅನ್ವಯ ನಿಮ್ಮ ಹಂತದಲ್ಲಿಯೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದರು.
ಬೊಕ್ಕಸಕ್ಕೆ 79.29 ಕೋಟಿ ರು ನಷ್ಟ
ಹಾಗೆಯೇ ನಂಜನಗೂಡು ತಾಲೂಕು ಭೂ ನ್ಯಾಯಮಂಡಳಿಯ ಆದೇಶಗಳಲ್ಲಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 63(2) ಮತ್ತು 2(12) ಹಾಗೂ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ನಿಯಮ 64, 65 ಉಲ್ಲಂಘನೆಯಾಗಿರುವುದು ಕಂಡುಬಂದಿತ್ತು. ಆದರೂ ಕರ್ನಾಟಕ ಭೂ ಸುಧಾರಣೆ ಕಾಯ್ದೆಯ ಕಲಂ 122(ಎ) ಅನ್ವಯ ಭೂನ್ಯಾಯಮಂಡಳಿಯ ಆದೇಶವನ್ನು ಪುನರ್ ವಿಮರ್ಶಿಸಲು ಸಕಾಲದಲ್ಲಿ ಮನವಿ ಸಲ್ಲಿಸಲಿಲ್ಲ. ಅಥವಾ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ದಾಖಲಿಸಲು ಕ್ರಮ ಕೈಗೊಳ್ಳಲಿಲ್ಲ. ತರಾತುರಿಯಲ್ಲಿ ಖಾತೆ ಬದಲಾವಣೆ ಮಾಡಲು ಆದೇಶಿಸಲಾಗಿತ್ತು. ಈ ಮೂಲಕ ಈ ಜಮೀನುಗಳಿಗೆ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ದಿ ಮಂಡಳಿಯಿಂದ ಭೂ ಸ್ವಾಧೀನ ಪರಿಹಾರ ನೀಡಲು ಕಾರಣವಾಗಿತ್ತು. ಇದು ಸರ್ಕಾರದ ಬೊಕ್ಕಸಕ್ಕೆ 79.29 ಕೋಟಿ ರು ನಷ್ಟವುಂಟಾಗಿತ್ತು. ಇದು ಕರ್ತವ್ಯಲೋಪ, ಕರ್ತವ್ಯದಲ್ಲಿ ನಿರ್ಲಕ್ಷ್ಯತೆ ತೋರಲಾಗಿತ್ತು ಎಂದು ನಡವಳಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಈ ಆರೋಪಕ್ಕೆ ಸಂಬಂಧಿಸಿದಂತೆ ನವೀನ್ ಜೋಸೆಫ್ ಅವರಿಗೆ ಕಾರಣ ಕೇಳುವ ನೋಟೀಸ್ ಮತ್ತು ದೋಷಾರೋಪಣೆ ಪಟ್ಟಿ (ಅನುಬಂಧ 1-4) ಜಾರಿ ಮಾಡಲಾಗಿತ್ತು. ಈ ನೋಟೀಸ್‌ಗೆ ನವೀನ್ ಜೋಸೆಫ್ ಅವರು ಉತ್ತರಿಸಿದ್ದರು. ಅಲ್ಲದೇ ಲಿಖಿತ ಸಮಜಾಯಿಷಿಯನ್ನೂ ಸಹ ಸಲ್ಲಿಸಿದ್ದರು. ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದ ನವೀನ್ ಜೋಸೆಫ್ ಅವರು ಈ ಪ್ರಕರಣದಲ್ಲಿ ತಾನು ಯಾವುದೇ ಕರ್ತವ್ಯಲೋಪವೆಸಗಿಲ್ಲ, ತಮ್ಮ ವಿರುದ್ಧದ ಆರೋಪ ಪಟ್ಟಿಯನ್ನು ಮುಕ್ತಾಯಗೊಳಿಸಬೇಕು ಎಂದು ಕೋರಿದ್ದರು.

ಲಿಖಿತ ಸಮಜಾಯಿಷಿ ಒಪ್ಪದ ಸರ್ಕಾರ
ಆದರೆ ಕಂದಾಯ ಇಲಾಖೆಯು ಈ ಲಿಖಿತ ಸಮಜಾಯಿಷಿಯನ್ನು ಒಪ್ಪಿರಲಿಲ್ಲ. ಭೂ ನ್ಯಾಯ ಮಂಡಳಿಯು 2011ರ ಸೆ14 ಮತ್ತು ಅಕ್ಟೋಬರ್ 26ರಂದು ಹೊರಡಿಸಿದ್ದ ಆದೇಶಗಳ ಅನ್ವಯ ಕ್ರಮವಹಿಸಲಾಗಿದೆ ಎಂದು ನವೀನ್ ಜೋಸೆಫ್ ಅವರು ಹೇಳಿರುವುದು ಪರಿಗಣನೆಗೆ ಅರ್ಹವಾಗಿಲ್ಲ. ಕೆಐಎಡಿಬಿಯು ಈ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು 2008ರ ಏಪ್ರಿಲ್ 3ರಂದು ಅಂತಿಮ ಅಧಿಸೂಚನೆ ಹೊರಡಿಸಿರುವ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮೇಲ್ಮನವಿ ಸಲ್ಲಿಲಸಲು ಕ್ರಮವಹಿಸಬಹುದಾಗಿತ್ತು. 2015ರ ಮಾರ್ಚ್ ಅಂತ್ಯಕ್ಕೆ ನೀಡಿದ್ದ ಮಹಾಲೇಖಪಾಲರ ವರದಿಯಲ್ಲಿ ನಂಜನಗೂಡು ತಾಲೂಕಿನ ಇಮ್ಮಾವು ಗ್ರಾಮದ ವಿವಿಧ ಸರ್ವೇ ನಂಬರ್‍ಗಳಲ್ಲಿನ ಜಮೀನುಗಳಿಗೆ ಸಂಬಂಧಿಸಿದಂತೆ ಭೂ ಪರಿಹಾರಧನವನ್ನು ಅನರ್ಹರಿಗೆ ಪಾವತಿಸಲಾಗಿತ್ತು. ಸರ್ಕಾರದ ಬೊಕ್ಕಸಕ್ಕೆ 79.29 ಕೊಟಿ ನಷ್ಟವುಂಟಾಗಿದೆ ಎಂದು ವರದಿ ಹೇಳಿತ್ತು.
‘ಈ ಅಂಶಗಳ ಹಿನ್ನೆಲೆಯಲ್ಲಿ ಅಧಿಕಾರಿಯು ಕರ್ತವ್ಯಲೋಪವೆಸಗಿ ಸರ್ಕಾರಕ್ಕೆ ಆರ್ಥಿಕ ನಷ್ಟವುಂಟಾಗಲು ಕಾರಣರಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಇವರ ವಿರುದ್ಧ ಇಲಾಖೆ ವಿಚಾರಣೆ ಮುಂದುವರೆಸುವುದು ಸೂಕ್ತ ,’ ಎಂದು ಇಲಾಖೆಯು ನಿರ್ಧರಿಸಿತ್ತು. ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಹೆಚ್ ಎಸ್ ಕಮಲ ಅವರ ನೇತೃತ್ವದಲ್ಲಿ 2020ರ ಆಗಸ್ಟ್ 11ರಂದು ವಿಚಾರಣೆಗೆ ಆದೇಶಿಸಲಾಗಿತ್ತು. ಹೆಚ್ ಎಸ್ ಕಮಲ ಅವರು 2023ರ ಫೆ.6ರಂದು ವಿಚಾರಣೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ವಿಚಾರಣೆ ವರದಿಯಲ್ಲಿ ಅಧಿಕಾರಿ ವಿರುದ್ಧದ ಆರೋಪಗಳು ಸಾಬೀತಾಗಿಲ್ಲ ಎಂದು ಅಭಿಪ್ರಾಯಿಸಿದ್ದರು.
ಈ ವಿಚಾರಣೆ ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸಿದ್ದ ಸರ್ಕಾರವು ಹಲವು ಲೋಪಗಳನ್ನು ಪುನಃ ಪತ್ತೆ ಹಚ್ಚಿತ್ತು. ಭೂ ನ್ಯಾಯಮಂಡಳಿಯ ಆದೇಶ ಮತ್ತು ನಂತರದ ಪ್ರಕ್ರಿಯೆಗಳನ್ನೂ ಪರಿಶೀಲಿಸಿತ್ತು. ಇದರ ಪ್ರಕಾರ 1961ರಲ್ಲಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ ಜಾರಿಗೆ ಬಂದ ನಂತರ ಮೈಸೂರಿನ ಪಿ ಕೃಷ್ಣನಂದಗಿರಿಗೋಸ್ವಾಮಿ, ಮಹಂತ, ತ್ರಿಪುರ ಭೈರವಿಮಠವು 1969ರ ನವೆಂಬರ್ 11ರಂದು ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 66 ಅನ್ವಯ ನಮೂನೆ 1ರಲ್ಲಿ ನಂಜನಗೂಡು ತಹಶೀಲ್ದಾರ್‍ರಿಗೆ ಘೋಷಣೆ ಸಲ್ಲಿಸಿದ್ದರು. ಇದರ ಪ್ರಕಾರ ನಂಜನಗೂಡು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟಾರೆ 891 ಎಕರೆ 01 ಗುಂಟೆ ಜಮೀನನ್ನು ಹೊಂದಿದ್ದರು. ಈ ಘೋಷಣೆ ಪ್ರಕಾರ ಇವರು ಒಬ್ಬರೇ ಮತ್ತು ಅವಿವಾಹಿತರಾಗಿದ್ದರು. ಹಾಗೆಯೇ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 2(12) ಅನ್ವಯ ಒಬ್ಬನೇ ಇರುವ ವ್ಯಕ್ತಿ ಹಾಗೂ ಅವಿವಾಹಿತರಿಗೆ, ಕುಟುಂಬದ ಸದಸ್ಯರ ಸಂಖ್ಯೆಯು ಒಂದನ್ನು ಮೀರುವುದಿಲ್ಲ.
ಗರಿಷ್ಠ ಪರಿಮಿತಿಯ ಸ್ಪಷ್ಟ ಉಲ್ಲಂಘನೆ
ಇದೇ ಕಾಯ್ದೆಯ 1961ರ ಸೆಕ್ಷನ್ 63(2)ರ ಪ್ರಕಾರ ಐದು ಸದಸ್ಯರಿಗಿಂತ ಹೆಚ್ಚಿಲ್ಲದ ಒಂದು ಕುಟುಂಬವು ಗರಿಷ್ಠ 10 ಯೂನಿಟ್ ಭೂಮಿಯನ್ನು ಮಾತ್ರ ಹೊಂದಬಹುದು. ಐದಕ್ಕಿಂತ ಹೆಚ್ಚು ಸದಸ್ಯರಿರುವ ದೊಡ್ಡ ಕುಟುಂಬಗಳಿಗೆ ಪ್ರತಿ ಹೆಚ್ಚುವರಿ ಸದಸ್ಯರಿಗೆ 2 ಹೆಚ್ಚುವರಿ ಯೂನಿಟ್‌ಗಳನ್ನು ನೀಡಬಹುದು. ಆದರೆ ಯಾವುದೇ ಕಾರಣಕ್ಕೂ ಒಟ್ಟು ಬೂಮಿ 20 ಯೂನಿಟ್ ಮೀರಬಾರದು. ಹೀಗಾಗಿ ಭೂ ನ್ಯಾಯಮಂಡಳಿಯು ಆರಂಭದಲ್ಲಿ 40 ಯೂನಿಟ್‌ಗಳನ್ನು ಮತ್ತು ಅಂತಿಮವಾಗಿ ಒಂದೇ ವಂಶಾವಳಿಗೆ 90 ಯೂನಿಟ್‌ಗಳನ್ನು ಅಂದರೇ 486 ಎಕರೆ ಮಂಜೂರು ಮಾಡಿದೆ. ಇದು ನೇರವಾಗಿ ಶಾಸನಬದ್ಧ ಗರಿಷ್ಠ ಪರಿಮಿತಿಯ ಸ್ಪಷ್ಟ ಉಲ್ಲಂಘನೆಯಾಗಿದೆ.

ಆದರೂ ಈ ಉಪಬಂಧವನ್ನು ಅನ್ವಯಿಸಿಲಿಲ್ಲ. 2005ರಲ್ಲಿ ತಿದ್ದುಪಡಿ ತಂದಿದ್ದ ಹಿಂದೂ ಸಕ್ಸಷನ್ ಕಾಯ್ದೆ ಉಪಬಂಧವನ್ನು ಬಳಸಿರುವ ಭೂ ನ್ಯಾಯಮಂಡಳಿಯು 2011ರ ಸೆ.14 ಮತ್ತು ನವೆಂಬರ್ 26ರಂದು ಹೊರಡಿಸಿರುವ ಆದೇಶಗಳು ಮೇಲ್ನೋಟಕ್ಕೆ ದೋಷಪೂರಿತವಾಗಿವೆ. ಆದರೂ ಅಧಿಕಾರಿಯು ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 122( ಎ) ಅಡಿ ಪರಿಷ್ಕೃತ ಮನವಿ ಮಾಡದೇ ಅಥವಾ ಉಚ್ಛ ನ್ಯಾಯಾಲಯದಲ್ಲಿ ಈ ಆದೇಶಗಳನ್ನು ಪ್ರಶ್ನಿಸಲು ಮೇಲಾಧಿಕಾರಿಗೆ ಪ್ರಸ್ತಾವನೆಯನ್ನು ಸಲ್ಲಿಸಿರಲಿಲ್ಲ.
ಅಕ್ರಮ ಖಾತೆ ವರ್ಗಾವಣೆಗೆ ಬುನಾದಿ
2011ರ ಸೆ.14ರಂದು ಭೂ ನ್ಯಾಯಮಂಡಳಿ ಹೊರಡಿಸಿದ್ದ ಆದೇಶದ ಅನುಸಾರ ಜಮೀನಿನ ಹಕ್ಕು ವರ್ಗಾವಣೆಗೆ ಅಧೀನ ಸಿಬ್ಬಂದಿಗೆ ಸೂಚಿಸಲಾಗಿತ್ತು. ಅಧೀನ ಸಿಬ್ಬಂದಿಯು ಅದೇ ದಿನದಂದು ಜಮೀನಿನ ಖಾತೆ ವರ್ಗಾಯಿಸಿದ್ದರು. ಹಾಗೆಯೇ ಫೌತಿಯಾದ ಕೃಷ್ಣನಂದ ಗಿರಿ ಗೋಸ್ವಾಮಿ ಅವರ ಪಾಲಿನ ಜಮೀನನ್ನು ಸೋನು, ಪ್ರದೀಪ್ ಎಂಬುವರಿಗೆ ಸೂಕ್ತ ದಾಖಲೆ ಪಡೆದು ಖಾತೆ ಮಾಡಲು ಸೂಕ್ತ ಕ್ರಮವಹಿಸಬೇಕು ಎಂದು ಭೂ ನ್ಯಾಯಮಂಡಳಿ ಅಧ್ಯಕ್ಷರು 2011ರ ಅಕ್ಟೋಬರ್ 21ರಂದು ಪತ್ರ ಬರೆದಿದ್ದರು. ಈ ಪತ್ರ ಬರೆದ ಮಾರನೇ ದಿನ ಅಂದರೇ 2011ರ ಅಕ್ಟೊಬರ್ 22ರಂದೇ ಅಗತ್ಯ ಚೆಕ್ ಲೀಸ್ಟ್ ತಯಾರಿಸಬೇಕು ಎಂದು ಜ್ಞಾಪನ ಪತ್ರ ಹೊರಡಿಸುವ ಮೂಲಕ ಅಕ್ರಮ ಖಾತೆ ವರ್ಗಾವಣೆಗೆ ಬುನಾದಿ ಹಾಕಿದ್ದಾರೆ ಎಂದು ನಡವಳಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಭೂ ನ್ಯಾಯಮಂಡಳಿ ಆದೇಶವು ನೇರವಾಗಿ ಅಧೀನ ಸಿಬ್ಬಂದಿಗೆ ವಿಳಾಸಿಸಲ್ಪಟ್ಟಿರಲಿಲ್ಲ. ಬದಲಿಗೆ ಕಚೇರಿ ಮುಖ್ಯಸ್ಥರಾದ ತಹಶೀಲ್ದಾರ್ ಮೂಲಕವೇ ಅಧೀನ ಸಿಬ್ಬಂದಿಗೆ ತಲುಪಿತ್ತು. ಹೀಗಾಗಿ ತಹಶೀಲ್ದಾರ್ ಸೂಚನೆ ನಂತರವೇ ಖಾತೆ ವರ್ಗಾಯಿಸಲಾಗಿತ್ತು. ಹೀಗಾಗಿ ಜಮೀನುಗಳ ಖಾತೆಯನ್ನು ನಂಜನಗೂಡು ತಹಶೀಲ್ದಾರ್ ಜ್ಞಾಪನಪತ್ರ ಹೊರಡಿಸಿದ ಕೂಡಲೇ ವರ್ಗಾಯಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

‘ಹೀಗೆ ವರ್ಗಾಯಿಸುವಾಗ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ನ್ 129 ಮತ್ತು ಕರ್ನಾಟಕ ಭೂ ಕಂಧಾಯ ನಿಯಮಗಳು 1966ರ ನಿಯಮ 64, ನಿಯಮ 65ರಲ್ಲಿ ನಿಗದಿಪಡಿಸಿದ್ದ ಪ್ರಕ್ರಿಯೆಗಳನ್ನು ಪಾಲಿಸಿರಲಿಲ್ಲ. ಉಪಬಂಧಗಳನ್ನು ಉಲ್ಲಂಘಿಸಿರುವುದು ಕಂಡು ಬರುತ್ತದೆ,’ ಎಂದು ವಿವರಿಸಿದೆ.
ಅವೈಜ್ಞಾನಿಕ ಪ್ರಕ್ರಿಯೆ ನಡೆಸಿದ್ದರೇ ನವೀನ್ ಜೋಸೆಫ್?
ಅದೇ ರೀತಿ ತಹಶೀಲ್ದಾರ್ ನವೀನ್ ಜೋಸೆಫ್ ಅವರು ಈ ಪ್ರಕರಣದಲ್ಲಿ ಅವೈಜ್ಞಾನಿಕವಾಗಿ ಪ್ರಕ್ರಿಯೆ ಅನುಸರಿಸಿದ್ದರು ಎಂದು ನಡವಳಿ ಯಲ್ಲಿ ಹೇಳಲಾಗಿದೆ. ಅಧಿಕಾರಿಯು ತಹಶೀಲ್ದಾರ್ ಆಗಿ ಭೂ ನ್ಯಾಯಮಂಡಳಿಯ ಅದೇಶ ಮತ್ತು ಭೂ ನ್ಯಾಯಮಂಡಳಿಯ ಅಧ್ಯಕ್ಷರ ಸೂಚನೆ ಅನುಸಾರ ಖಾತೆ ಬದಲಾವಣೆಗೆ ಆದೇಶಿಸಿದ್ದರು. ಅದು ಜಾರಿಯಾದ ನಂತರ ಮೈಸೂರು ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿತ್ತು. ಇದನ್ನು ಬಹುಮತದ ಆಆದೇಶವೆಂದು ಪರಿಗಣಿಸುವುದೇ ಅಥವಾ ನ್ಯಾಯಾಲಯದಲ್ಲಿ ಮೇಲ್ಮನವಿ ದಾಖಲಿಸಬಹುದೇ ಎಂದು ಸ್ಪಷ್ಟೀಕರಣ ಕೋರಿದ್ದರು. ಭೂ ನ್ಯಾಯಮಮಡಳಿಯ ಆದೇಶವನ್ನು ಜಾರಿಗೊಳಿಸಿದ ನಂತರ ಅದನ್ನು ಜಾರಿಗೊಳಿಸುವ ಕುರಿತು ಅಥವಾ ಮೇಲ್ಮನವಿ ದಾಖಲಿಸುವ ಕುರಿತು ಸ್ಪಷ್ಟೀಕರಣ ಕೋರಿರುವುದು ಅವೈಜ್ಞಾನಿಕ ಪ್ರಕ್ರಿಯೆಯಾಗಿದೆ ಎಂದು ನಡವಳಿಯಲ್ಲಿ ಹೇಳಿದೆ.
ಭೀಷ್ಮ ಪಿತಾಮಹ ಅವರ ಐದು ಜನ ಹೆಣ್ಣು ಮಕ್ಕಳಿಗೆ 50 ಯೂನಿಟ್‌ಗಳಷ್ಟು ಭೂಮಿಯನ್ನು ಮಂಜೂರು ಮಾಡುವುದು ಸಂಪೂರ್ಣವಾಗಿ ದೋಷಪೂರಿತವಾಗಿದೆ. ಅಲ್ಲದೇ ಅವರ ಉತ್ತರಾಧಿಕಾರ ಪ್ರಮಾಣ ಪತ್ರಗಳು ಶಂಕಾಸ್ಪದವಾಗಿದೆ ಎಂದು ಭೂ ನ್ಯಾಯಮಂಡಳಿ ಅಧ್ಯಕ್ಷರು ಲಿಖಿತ ರೂಪದಲ್ಲಿ ಸ್ಪಷ್ಟವಾಗಿ ದಾಖಲಿಸಿದ್ದರು. ಆದರೂ ಅಧ್ಯಕ್ಷರ ಈ ಲಿಖಿತ ಭಿನ್ನಮತದ ಟಿಪ್ಪಣಿಯನ್ನು ಕಡೆಗಣಿಸಲಾಗಿತ್ತು. ಹರ್ಷ ಎಂಬುವರು 2011ರ ಅಕ್ಟೋಬರ್ 22ರಂದು ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದಾಗ ತಹಶೀಲ್ದಾರ್ ಕಚೇರಿಯು ಕೇವಲ ಮೂರೇ ಮೂರು ದಿನದಲ್ಲಿ ಅಂದರೇ 2011ರ ಸೆ.25ರೊಳಗೆ ಅಂತಿಮ ಅನುಮೋದನೆ ನೀಡಲು ತರಾತುರಿ ಮಾಡಿತು. ಇದು ಕಾನೂನಿನ ಪ್ರಕಾರ ಕಡ್ಡಾಯವಾಗಿ ನೀಡಬೇಕಿದ್ದ 30 ದಿನಗಳ ಸಾರ್ವಜನಿಕ ಆಕ್ಷೇಪಣೆ ಕಾಲಾವಕಾಶವನ್ನೂ ನೀಡಿರಲಿಲ್ಲ. ಇದನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿತ್ತು.

‘ಈ ಖಾತೆ ಬದಲಾವಣೆಗಳನ್ನು ತುರ್ತಾಗಿ ಜಾರಿಗೆ ತರಲು ತೋರಿಸಿದ ಅತಿಯಾದ ತರಾತುರಿಯು ಕೆಐಎಡಿಬಿ ತನ್ ಭೂ ಪರಿಹಾರ ಮೊತ್ತವನ್ನು ಅಂತಿಮಗೊಳಿಸುವ ಸಮಯಕ್ಕೆ ಹೊಂದಿಕೆಯಾಗುವಂತೆ ಉದ್ದೇಶಪೂರ್ವಕವಾಗಿ ಯೋಜಿಸಿರುವುದು ಕಂಡುಬಂದಿರುತ್ತದೆ. ಈ ಮೂಲಕ ಅನರ್ಹ ವ್ಯಕ್ತಿಗಳು ಸರಿಯಾದ ಸಮಯಕ್ಕೆ ಪರಿಹಾರದ ಚೆಕ್‌ಗಳನ್ನು ಪಡೆಯಲು ಮಾಲೀಕರಾಗಿ ನೋಂದಾಯಿಸಿಕೊಂಡಿರುವುದು ಕಂಡುಬರುತ್ತದೆ,’ ಎಂದು ನಡವಳಿಯಲ್ಲಿ ವಿವರಿಸಿದೆ.
ಈ ಪ್ರಕರಣದಲ್ಲಿ ಇಷ್ಟೆಲ್ಲಾ ಲೋಪದೋಷ, ನಿಯಮಬಾಹಿರ ಚಟುವಟಿಕೆಗಳು ನಡೆದಿದ್ದರೂ ಸಹ ವಿಚಾರಣಾಧಿಕಾರಿಯವರು ಅಧಿಕಾರಿಯವರ ವಿರುದ್ಧ ಶಿಸ್ತು ಪ್ರಾಧಿಕಾರವು ಮಾಡಿರುವ ಆರೋಪಗಳು ರುಜುವಾತಾಗಿಲ್ಲ ಎಂದು ಅಭಿಪ್ರಾಯಿಸಿದ್ದರು. ಅಲ್ಲದೇ ವಿಚಾರಣಾಧಿಕಾರಿಯ ತನಿಖೆಯನ್ನೇ ಕಂದಾಯ ಇಲಾಖೆಯು ಒರೆಗೆ ಹಚ್ಚಿತ್ತು.
ನೈಜ ಮೂಲ ದಾಖಲೆಗಳ ಪರಿಶೀಲನೆ ನಡೆದಿರಲಿಲ್ಲ!
ಈ ಪ್ರಕರಣಕ್ಕೆ ಅತ್ಯಗತ್ಯವಾಗಿದದ ಕಡತಗಳನ್ನು ವಿಚಾರಣೆಯ ಸಮಯದಲ್ಲಿ ಅಧಿಕೃತವಾಗಿ ಅಭಿಯೋಜನೆ ಸಾಕ್ಷಿದಾರರು ಮಂಡಿಸಿರಲಿಲ್ಲ. ಪಾಟಿ ಸವಾಲಿನಲ್ಲಿ (ಪಿಡಬ್ಲ್ಯೂ 3 ಮತ್ತು 4) ದಾಖಲಾಗಿರುವಂತೆ ಸಾಕ್ಷಿದಾರರು ತಾವು ಸಂಪೂರ್ಣ ಕಡತ ನೋಡಿಲ್ಲ ಮತ್ತು ಕೇವಲ ದೋಷಾರೋಪಣೆ ಪಟ್ಟಿ ಅಥವಾ ದ್ವಿತೀಯ ಹಂತದ ಸಾರಾಂಶಗಳನ್ನು ಆಧರಿಸಿ ಸಾಕ್ಷ್ಯ ಹೇಳಿರುವುದನ್ನು ಒಪ್ಪಿಕೊಂಡಿದ್ದಾರೆ. ಹಾಗಾಗಿ ಇಂತಹ ದ್ವಿತೀಯ ಹಂತದ ವರದಿಗಳಿಗಿಂತ ನೈಜ ಮೂಲ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸುವುದು ಅವಶ್ಯಕವಾಗಿದೆ ಎಂದು ಕಂದಾಯ ಇಲಾಖೆಯು ಅಭಿಪ್ರಾಯಿಸಿದೆ.
ಅಲ್ಲದೇ ವರದಿಯಲ್ಲಿ ದಾಖಲಾಗಿರುವ ಹಲವು ಎದ್ದು ಕಾಣುವ ಕಾಲಾನುಕ್ರಮದ ಅಸಂಗತತೆಗಳನ್ನು ಹಾಗೆಯೇ ಒಪ್ಪಿಕೊಂಡಿತ್ತು. ಈ ಕೃತ್ಯದ ನಿಖರವಾದ ಕಾಲಾನುಕ್ರಮದ ಸರಣಿಯನ್ನು ಅಂತಿಮವಾಗಿ ತಾಳೆ ಮಾಡಿರಲಿಲ್ಲ. ಮೂಲ ಮಂಜೂರಾತಿದಾರರ ಬದಲಿಗೆ ಯಾವುದೇ ಮಧ್ಯಂತರ ಮರು-ಮಂಜೂರಾತಿಯನ್ನು ನೋಂದಣಿ ಇಲ್ಲದೆಯೇ ನೇರವಾಗಿ ಅವರ ವಾರಸುದಾರರ ಹೆಸರಿಗೆ ಖಾತೆಯನ್ನು ನವೀಕರಿಸಿರುವುದನ್ನು ವರದಿಯು ಉಲ್ಲೇಖಿಸಿದೆ. ಈ ನಿರ್ದಿಷ್ಟ ಕ್ರಮವು ಕರ್ನಾಟಕ ಭೂ ನಿಯಮಾವಳಿಗಳ ಉಲ್ಲಂಘನೆಯಾಗುತ್ತದೆಯೇ ಎಂಬುದನ್ನು ವಿಶ್ಲೇಷಿಸುವಲ್ಲಿ ವಿಚಾರಣಾಧಿಕಾರಿಯು ವಿಫಲರಾಗಿದ್ದಾರೆ ಎಂದು ನಡವಳಿಯಲ್ಲಿ ವಿವರಿಸಿದೆ.

ಜೆರಾಕ್ಸ್ ಪ್ರತಿಗಳ ಪರಿಗಣನೆ- ಸಹಿಗಳೂ ಸ್ಪಷ್ಟವಾಗಿರಲಿಲ್ಲ
ಪ್ರಮುಖ ದಾಖಲೆಗಳ ಪೈಕಿ ಗುರುತಿಸಿದ್ದ ದಾಖಲೆಗಳು ಜೆರಾಕ್ಸ್ ಪ್ರತಿಗಳಾಗಿದ್ದವು. ಹೀಗಾಗಿ ಆ ದಾಖಲೆಗಳಲ್ಲಿ ಸಹಿಗಳು ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ ಎಂದು ವರದಿಯು ಉಲ್ಲೇಖಿಸಿದೆ. ಮೂಲದಾಖಲೆಗಳನ್ನು ಹಾಜರುಪಡಿಸಲು ಅಥವಾ ಆ ಸಹಿಗಳನ್ನು ಸಾಬೀತುಪಡಿಸಲು ಪೂರಕ ಸಾಕ್ಷ್ಯಗಳನ್ನು ಮಂಡಿಸಲು ಪ್ರಾಸಿಕ್ಯೂಷನ್ ಅಥವಾ ರಕ್ಷಣಾ ಕಡೆಯವರಿಗೆ ಸೂಕ್ತ ಅವಕಾಶ ನೀಡಿರಲಿಲ್ಲ. ಪಾಟಿ ಸವಾಲಿನ ಸಮಯದಲ್ಲಿ ಸಾಕ್ಷಿಗಳು ಪ್ರಮುಖವಾದ ಅಂಶಗಳನ್ನು ಒಪ್ಪಿಕೊಂಡ ನಂತರವೂ ಮಂಡನಾಧಿಕಾರಿಯು ಆ ಸಾಕ್ಷಿಗಳನ್ನು ಪರಿಣಾಮಕಾರಿಯಾಗಿ ಪುನರ್ ವಿಚಾರಣೆಗೆ ಒಳಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ವಿವರಿಸಿದೆ.

ವಿಚಾರಣೆಗೆ ಒಳಪಡದ ಕಾರ್ಯವಿಧಾನದ ದುರ್ನಡತೆ
ಭೂ ಹಂಚಿಕೆಯ ವಿರುದ್ಧ ಸಲ್ಲಿಕೆಯಾಗಿದ್ದ ದೂರುಗಳನ್ನು ಉಚ್ಛ ನ್ಯಾಯಾಲಯ ಮತ್ತು ಉಪ ಲೋಕಾಯುಕ್ತರು ವಜಾಗೊಳಿಸಿದ್ದರು ಎಂಬ ಅಂಶದ ಮೇಲೆ ಈ ವರದಿಯು ಹೆಚ್ಚು ಅವಲಂಬಿತವಾಗಿದೆ. ಅದರೆ ಆ ನ್ಯಾಯಾಲಯಗಳು ಕೇವಲ ಆಸ್ತಿಯ ಮಾಲೀಕತ್ವದ ಸಿಂಧುತ್ವದ ಬಗ್ಗೆ ಮಾತ್ರ ತೀರ್ಪು ನೀಡಿದ್ದವೇ ಅಥವಾ ಆಡಳಿತಾತ್ಮಕ, ತರಾತುರಿಯ ಕ್ರಮಗಳ ಆರೋಪಗಳಿಂದಲೂ ಈ ಅಧಿಕಾರಿಯನ್ನು ಸ್ಪಷ್ಟವಾಗಿ ಮುಕ್ತಗೊಳಿಸಿದ್ದವೇ ಎಂಬುದನ್ನು ಹೆಚ್ಚಿನ ವಿಚಾರಣೆಯಲ್ಲಿ ಪರಿಶೀಲಿಸಬಹುದಾಗಿದೆ. ಒಂದು ವೇಳೆ ಆದೇಶದ ಸಿವಿಲ್ ಸಿಂಧುತ್ವವನ್ನು ಎತ್ತಿ ಹಿಡಿದಿದ್ದರೂ ಸಹ ಅಧಿಕಾರಿಯು ಅದನ್ನು ಜಾರಿಗೊಳಿಸುವಾಗ ಕಾರ್ಯವಿಧಾನದ ದುರ್ನಡತೆ ಎಸಗಿದ್ದರೇ ಎಂಬುದನ್ನು ವಿಚಾರಣೆಗೆ ಒಳಪಡಿಸಿಲ್ಲ ಎಂದು ಹೇಳಿದೆ.
ವಿಚಾರಣಾಧಿಕಾರಿ ವರದಿ ವಾಸ್ತವಾಂಶಕ್ಕೆ ವಿರುದ್ಧವಾಗಿತ್ತೇ?
ಲೋಕಾಯುಕ್ತ ಸಂಸ್ಥೆಯಲ್ಲಿನ ದೂರು ಅರ್ಜಿಯು ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕಾದ ಪ್ರಕರಣ ಎಂದು ಮುಕ್ತಾಯಗೊಳಿಸಿದೆ. ಪ್ರಕರಣವು ಉಚ್ಛ ನ್ಯಾಯಾಲಯದಲ್ಲಿ ಅಂತಿಮತೆ ತಲುಪಿಲ್ಲ. ಭೂ ನ್ಯಾಯಮಂಡಳಿಯ ಆದೇಶಗಳನ್ನು ಬಾದಿತ ತ್ರಿಪುರ ಭೈರವಿ ಮಠವು ರಿಟ್ ಅರ್ಜಿ (1052/2014) ದಾಖಲಿಸಿತ್ತು. ಭೂ ನ್ಯಾಯಮಂಡಳಿ ಆದೇಶಗಳ ಮೇಲೆ ನ್ಯಾಯಾಲಯದಲ್ಲಿ ಅಂತಿಮ ಆದೇಶವಾಗಿಲ್ಲ. ಹಾಗೂ ಈ ಪ್ರಕರಣವು ಅಂತಿಮ ಘಟ್ಟವನ್ನು ತಲುಪಿರಲಿಲ್ಲ. ಇಲಾಖೆ ವಿಚಾರಣೆ ಸಂದರ್ಭದಲ್ಲಿಯೂ ಸಹ ಈ ಅಂಶಗಳನ್ನು ವಿಚಾರಣೆ ಪ್ರಾಧಿಕಾರಿಯು ಪರಿಗಣಿಸಿಲ್ಲ. ಭೂ ನ್ಯಾಯಮಂಡಳಿಯ ಆದೇಶವನ್ನು ಉಚ್ಛ ನ್ಯಾಯಾಲಯವು ಎತ್ತಿ ಹಿಡಿದಿದೆ ಎಂದು ಉಲ್ಲೇಖಿಸಿರುವುದು ವಾಸ್ತವಾಂಶಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ.
ಹಾಗೆಯೇ ವಿಚಾರಣೆ ವರದಿಯು ಬಹುಮುಖ್ಯವಾಗಿ ಆಪಾದಿತ ಅಧಿಕಾರಿಯು ಮೈಸೂರು ಜಿಲ್ಲಾಧಿಕಾರಿಗೆ ಸ್ಪಷ್ಟೀಕರಣ ಕೋರಿ ಬರೆದ ಪತ್ರ, ಅದಕ್ಕೆ ಮೈಸೂರು ಜಿಲ್ಲಾಧಿಕಾರಿಯಿಂದ ಸ್ವೀಕೃತವಾದ ಪತ್ರಗಳನ್ನು (ನಿಶಾನೆ ಡಿ 3, ನಿಶಾನೆ ಡಿ 4) ಗುರುತಿಸಿತ್ತು. ಹಿಂದಿನ ಮೈಸೂರು ಉಪ ವಿಭಾಗಾಧಿಕಾರಿಗಳು ಸಲ್ಲಿಸಿದ್ದ ವರದಿ (ನಿಶಾನೆ ಪಿ 6) ಯನ್ನು ಪರಿಗಣಿಸಿರಲಿಲ್ಲ. ಆದರೆ ಭೂ ನ್ಯಾಯಮಂಡಳಿಯ ಆದೇಶಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಿದ ನಂತರ ಆಪಾದಿತರು ಈ ಪತ್ರವನ್ನು ಬರೆದಿದ್ದಾರೆ ಎಂಬುದನ್ನು ವಿಚಾರಣೆ ಅಧಿಕಾರಿಯು ಗಮನಿಸಿಲ್ಲ.
ಈ ಎಲ್ಲಾ ಕಾರಣಗಳಿಂದ ಇಡೀ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಲು ಸರ್ಕಾರವು ನಿರ್ಧರಿಸಿದೆ. ಈ ಸಂಬಂಧ ಮರು ವಿಚಾರಣೆ ನಡೆಸಲು ಕಂದಾಯ ಇಲಾಖೆಯ ಆಯುಕ್ತರಾದ ಮೀನಾ ನಾಗರಾಜ್ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಿದೆ.

2014-15ನೇ ಸಾಲಿನ ಭಾರತ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ವರದಿ (ಕಂಡಿಕೆ 3.13)ಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸೂಚನೆ ಮೇರೆಗೆ ಕಂದಾಯ ಇಲಾಖೆಯು ಪ್ರಕರಣವನ್ನು ಸಿಐಡಿಗೆ ವಹಿಸಲು ನಿರ್ಧರಿಸಿತ್ತು.
ಅನರ್ಹರಿಗೆ 79 ಕೋಟಿ ಪಾವತಿ; ಪಿಎಸಿ ಸೂಚನೆ ಮೇರೆಗೆ ಸಿಐಡಿಗೆ ವಹಿಸಲು ನಿರ್ಧಾರ
ಆದರೆ ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಯಿತೇ ಎಂಬ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಅನರ್ಹರಿಗೆ 79.29 ಕೋಟಿ ಪಾವತಿ; ಪಿಎಸಿಗೆ ಗೈರಾಗಿದ್ದ ಡಿಸಿ ಬಗಾದಿ ಗೌತಮ್ ಸಮಜಾಯಿಷಿ ಒಪ್ಪದ ಸಿಎಸ್
ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಗೂ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ಬಗಾದಿ ಗೌತಮ್ ಅವರು ಗೈರುಹಾಜರಾಗಿದ್ದರು.
79.29 ಕೋಟಿ ರು ಪಾವತಿ; ಪಿಎಸಿ ಸಭೆಗೆ ಗೈರಾದ ಡಿಸಿ ಬಗಾದಿ ಗೌತಮ್ ವಿರುದ್ಧ ಕ್ರಮಕ್ಕೆ ನಿರ್ದೇಶನ
ಈ ಕುರಿತು ಪಿಎಸಿ ಅಧ್ಯಕ್ಷ ಕೃಷ್ಣಬೈರೇಗೌಡ ಅವರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಕ್ರಮಕ್ಕೆ ಸೂಚಿಸಿದ್ದನ್ನು ಸ್ಮರಿಸಬಹುದು.




