ಅನರ್ಹರಿಗೆ 79.29 ಕೋಟಿ ಪಾವತಿ; ಪಿಎಸಿಗೆ ಗೈರಾಗಿದ್ದ ಡಿಸಿ ಬಗಾದಿ ಗೌತಮ್‌ ಸಮಜಾಯಿಷಿ ಒಪ್ಪದ ಸಿಎಸ್‌

photo credit;deccan hearald

ಬೆಂಗಳೂರು; ಮೂಲ ದಾಖಲೆ ಮತ್ತು ಸೂಕ್ತ ಪರಿಶೀಲನೆ ನಡೆಸದೆಯೇ 79.29 ಕೋಟಿ ರು. ಪಾವತಿಸಿರುವ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಕೆಎಎಸ್‌ ಅಧಿಕಾರಿ, ನೌಕರರ ವಿರುದ್ಧ ಕ್ರಮಕೈಗೊಂಡಿರುವ ಕುರಿತು ಒದಗಿಸದೇ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸಭೆಗೆ ಗೈರು ಹಾಜರಾಗಿದ್ದ ಮೈಸೂರಿನ ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್‌ ಅವರು ನೀಡಿದ್ದ ಸಮಜಾಯಿಷಿಯನ್ನು ಮುಖ್ಯ ಕಾರ್ಯದರ್ಶಿಗಳು ತಳ್ಳಿ ಹಾಕಿದ್ದಾರೆ.

 

ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಪೂರ್ವಾನುಮತಿಯನ್ನು ಪಡೆಯದೇ ಗೈರು ಹಾಜರಾಗಿರುವುದು ಸಮರ್ಥನೀಯವಲ್ಲ ಎಂದಿರುವ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರು ಗೈರು ಹಾಜರಿಗೆ ನೀಡಿದ್ದ ಕಾರಣವನ್ನು ಪರಿಗಣಿಸಿಲ್ಲ. ಈ ಸಂಬಂಧ ಮುಖ್ಯ ಕಾರ್ಯದರ್ಶಿಯು ಡಾ ಬಗಾದಿ ಗೌತಮ್‌ ಅವರಿಗೆ 2022ರ ಜುಲೈ 14ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

‘ಸಮಿತಿ ಸಭೆಗೆ ಖುದ್ದಾಗಿ ಹಾಜರಾಗುವಂತೆ ಮುಂಚಿತವಾಗಿ ಅಂದರೆ 23.06.2022ರಂದು ವಿದಾನಸಭೆ ಸಚಿವಾಲಯವು ನಿಮಗೆ ಸೂಚನೆ ನೀಡಿದ್ದರೂ ಸಹ ನೀವು ಸಮಿತಿಯ ಪೂರ್ವಾನುಮತಿಯನ್ನು ಪಡೆಯದೇ ಗೈರು ಹಾಜರಾಗಿರುವುದು ಸಮರ್ಥನೀಯವಲ್ಲ. ಅಲ್ಲದೆ ನಿಗದಿತ ಪೂರ್ವ ನಿರ್ಧಾರಿತ ಕಚೇರಿ ಕಾರ್ಯಕ್ರಮಕ್ಕೆ ಹಾಜರಾದ ಕಾರಣವನ್ನು ನಿಮ್ಮ ಗೈರು ಹಾಜರಿಗೆ ನೀಡಿರುವುದು ಮೇಲ್ನೋಟಕ್ಕೆ ಪರಿಗಣನಾರ್ಹವಾಗಿರುವುದಿಲ್ಲ ಮತ್ತು ಸೂಕ್ತವಾಗಿರುವುದಿಲ್ಲ. ಭವಿಷ್ಯದ ದಿನಗಳಲ್ಲಿ ವಿಧಾನಮಂಡಲದ ಸಮಿತಿ ಸಭೆಗಳಿಗೆ ಹಾಜರಗಲು ಸಾಧ್ಯವಾಗದ ಸಂದರ್ಭಗಳ್ಲಿ ಸಕಾರಣಗಳನ್ನು ನಮೂದಿಸಿ ಸಂಬಂಧಿಸಿದ ಸಮಿತಿಗಳ ಅಧ್ಯಕ್ಷರ ಪೂರ್ವಾನುಮತಿ, ವಿನಾಯಿತಿ ಪಡೆಯಬೇಕು. ಈ ರೀತಿಯ ಘಟನೆಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಬೇಕು,’ ಎಂದು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರು ಪತ್ರದಲ್ಲಿ ಸೂಚಿಸಿದ್ದಾರೆ.

 

ಮುಖ್ಯ ಕಾರ್ಯದರ್ಶಿ ಅವರು ಬರೆದಿರುವ ಪತ್ರದ ಪ್ರತಿ

 

ಜಿಲ್ಲಾಧಿಕಾರಿ ಪತ್ರದಲ್ಲೇನಿತ್ತು?

 

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಜಿಲ್ಲಾಧಿಕಾರಿಗಳು ಪ್ರತಿ ಮಂಗಳವಾರದಂದು ಜಿಲ್ಲಾ ವ್ಯಾಪ್ತಿಯ ತಾಲೂಕು ಕಚೇರಿಗೆ ಭೇಟಿ ನೀಡುವಂತೆ ಸೂಚಿಸಲಾಗಿತ್ತು. ಹೀಗಾಗಿ 2022ರ ಜೂನ್‌ 28ರಂದು ಮೈಸೂರು ಜಿಲ್ಲೆಯ ಕೃಷ್ಣರಾಜನಗರ ತಾಲೂಕು ಕಚೇರಿಗೆ ಪೂರ್ವನಿರ್ಧರಿತ ಭೇಟಿ ನೀಡಲಾಗಿತ್ತು. ಹಾಗೆಯೇ 2022 ಜೂನ್‌ 28ರಂದು ನಡೆದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸಭೆಯಲ್ಲಿ ನನ್ನ ಪ್ರತಿನಿಧಿಯಾಗಿ ಅಪರ ಜಿಲ್ಲಾಧಿಕಾರಿಗಳನ್ನು ಖುದ್ದು ಹಾಜರಾಗುವಂತೆ ನಿರ್ದೇಶಿಸಿದ್ದೇನೆ ಹೊರತು ಯಾವುದೇ ರೀತಿ ಅಗೌರವ ತೋರಿಸುವ ಉದ್ದೇಶ ಹೊಂದಿರುವುದಿಲ್ಲ,’ ಎಂದು ಸಮಜಾಯಿಷಿ ನೀಡಿದ್ದಾರೆ.

 

ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ಶಾಸನಸಭೆಯಿಂದ ರಚನೆಯಾಗಿರುವ ಸಮಿತಿಯಾಗಿದ್ದರೂ ಸಮಿತಿ ಅಧ್ಯಕ್ಷರಿಂದ ಯಾವುದೇ ಪೂರ್ವಾನುಮತಿ, ವಿನಾಯಿತಿಯನ್ನೂ ಪಡೆಯದೇ ಸಭೆಗೆ ಗೈರಾಗಿರುವುದನ್ನು ಸಮಿತಿಯು ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಮೈಸೂರು ಜಿಲ್ಲಾಧಿಕಾರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಕರ್ನಾಟಕ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ವಿಶಾಲಾಕ್ಷಿ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ 2022ರ ಜೂನ್‌ 29ರಂದು ಪತ್ರ ಬರೆದಿದ್ದನ್ನು ಸ್ಮರಿಸಬಹುದು.

 

79.29 ಕೋಟಿ ಪರಿಹಾರ ನೀಡುವಲ್ಲಿ ಆಗಿರುವ ಉಲ್ಲಂಘನೆಗಳಿವು

 

ಮೈಸೂರು ಜಿಲ್ಲೆಯ ಇಮ್ಮಾವು ಗ್ರಾಮದ 377.24 ಎಕರೆ ಭೂ ಸ್ವಾಧೀನಕ್ಕಾಗಿ 79.29 ಕೋಟಿ ರು.ಗಳನ್ನು ಪಾವತಿಸುವ ಮುನ್ನ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯು ಮೂಲ ದಾಖಲೆಗಳನ್ನು ಪಡೆದಿರಲಿಲ್ಲ ಮತ್ತು ಸೂಕ್ತ ಪರೀಕ್ಷೆಗಳನ್ನು ನಡೆಸಿರಲಿಲ್ಲ.

 

ಅಲ್ಲದೆ ಹಿಂದಿನ ವಿಶೇಷ ಭೂ ಸ್ವಾಧೀನಾಧಿಕಾರಿ ಹಿರಿಯ ಶ್ರೇಣಿ ಕೆಎಎಸ್‌ ಅಧಿಕಾರಿ ಎಚ್‌ ಕೆ ಕೃಷ್ಣಮೂರ್ತಿ ಅವರು ಭೂ ಪರಿಹಾರ ಕೋರಿದವರ ಕಡೆಯಿಂದ ಹಾಜರಪಡಿಸಿದ್ದ ಪಹಣಿ ಪತ್ರಿಕೆಗಳ ನೈಜತೆಯನ್ನು ಪರಿಶೀಲಿಸಿರಲಿಲ್ಲ, ಮರಣ ಪ್ರಮಾಣ ಪತ್ರ, ಮೃತ ಖಾತೆದಾರರಿಂದ ಉತ್ತರಾಧಿಕಾರತ್ವ ಪ್ರಮಾಣಪತ್ರ ಪಡೆಯದೇ ಪರಿಹಾರ ವಿತರಣೆ ಮಾಡಲಾಗಿತ್ತು.

 

ಪರಿಹಾರ ವಿತರಣೆ ಮಾಡುವ ಪೂರ್ವದಲ್ಲಿ ಪರಿಹಾರ ಪಡೆಯುವ ಅರ್ಹತೆ ಹೊಂದಿದ ಬಗ್ಗೆ ಸೂಕ್ತ ದಾಖಲಾತಿಗಳನ್ನು ಅರ್ಜಿದಾರರದಿಂದ ಪಡೆದು ಪರಿಶೀಲಿಸದೇ ಶಾಮೀಲಾಗಿದ್ದರು. ಅಲ್ಲದೆ ಪರಿಹಾರದ ಹಣವನ್ನು ವಿತರಣೆ ಮಾಡುವ ಮೂಲಕ ಸರ್ಕಾರಕ್ಕೆ ನಷ್ಟವನ್ನುಂಟು ಮಾಡಲಾಗಿದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ಹೇಳಲಾಗಿತ್ತು.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಶ್ರೇಣಿ ಕೆಎಎಸ್‌ ಅಧಿಕಾರಿ ಎಚ್‌ ಕೆ ಕೃಷ್ಣಮೂರ್ತಿ (ಸದ್ಯ ನಿವೃತ್ತ) ಇವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಮತ್ತು ರಿಕವರಿ ಸೂಟ್‌ ದಾಖಲಿಸಿ ಕ್ರಮ ಕೈಗೊಳ್ಳಬೇಕಿತ್ತು. ಅಲ್ಲದೆ ಕಂದಾಯ ಇಲಾಖೆಯಲ್ಲಿ ತಹಶೀಲ್ದಾರ್‌ ಆಗಿ ಸೇವೆ ಸಲ್ಲಿಸಿದ್ದ ನವೀನ್‌ ಜೋಸೆಫ್‌ (ಸದ್ಯ ಬಿಡಿಎ ಉಪ ಕಾರ್ಯದರ್ಶಿ), ಕೆಐಎಡಿಬಿಯ ತಪ್ಪಿತಸ್ಥ ಅಧಿಕಾರಿ ಕೃಷ್ಣಮೂರ್ತಿ ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ 2022ರ ಜನವರಿ 25ರಂದು ನಡೆದಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಗೆ ಮಾಹಿತಿ ಒದಗಿಸಲು ಸೂಚಿಸಲಾಗಿತ್ತು.

 

ಅದೇ ರೀತಿ ಅಧಿಕಾರಿಗಳು ಗಂಭೀರ ಸ್ವರೂಪದ ಪ್ರಕರಣದಲ್ಲಿ ಭಾಗಿಯಾಗಿರುವುದರಿಂದ ಅವರನ್ನು ಇಲಾಖೆ ತನಿಖೆ ಮುಗಿಯುವವರೆಗೂ ನಾನ್‌ ಎಕ್ಸಿಕ್ಯೂಟಿವ್‌ ಹುದ್ದೆಗೆ ನಿಯೋಜಿಸಬೇಕು ಎಂದು ಸಮಿತಿಯು ಸೂಚಿಸಿತ್ತು. ಈ ಎಲ್ಲಾ ಮಾಹಿತಿಗಳೊಂದಿಗೆ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್‌ ಅವರು 2022ರ ಜೂನ್‌ 28ರಂದು ನಡೆದ ಸಭೆಗೆ ಹಾಜರಾಗಿ ವಿವರಿಸಬೇಕಿತ್ತು.

the fil favicon

SUPPORT THE FILE

Latest News

Related Posts