ಬೆಂಗಳೂರು; ‘ಆರ್‍ಎಸ್‌ಎಸ್ ಅತೀ ಭ್ರಷ್ಟ ಸಂಘಟನೆ, ಯಡಿಯೂರಪ್ಪನವರು ಅಧಿಕಾರ ದುರುಪಯೋಗಪಡಿಸಿಕೊಂಡು ಹೊಸದಿಗಂತ ಪತ್ರಿಕೆಗೆ 5 ಕೋಟಿ ರು ಹಣ ನೀಡಿಕೆ ಮತ್ತು ಪ್ರಜಾವಾಣಿ ಪತ್ರಿಕೆಗೆ ಭೂಮಿಯ ವಿಚಾರವಾಗಿ ಅನುಕೂಲ ಮಾಡಿಕೊಡಲಾಗಿದೆ,’ ಎಂದು ಬಿಜೆಪಿ ಹಾಲಿ ಶಾಸಕ ಬಿ ಸುರೇಶ್ ಗೌಡ ಅವರು ಮಾತನಾಡಿದ್ದರು ಎನ್ನಲಾದ ಸೋರಿಕೆಯಾಗಿದ್ದ ವಿಡಿಯೋ ಆಧರಿಸಿ ತನಿಖೆಗೊಳಪಡಿಸಲು ವಿಶೇಷ ಸಮಿತಿ ರಚಿಸಬೇಕು ಎಂದು ಕೋರಿದ್ದ ಹೆಚ್ ಜಿ ರಮೇಶ್ ಕುಣಿಗಲ್ ಅವರ ಮನವಿ ಕುರಿತು ರಾಜ್ಯ ಕಾಂಗ್ರೆಸ್ ಸರ್ಕಾರವು 8 ತಿಂಗಳಾದರೂ ಒಂದೇ ಒಂದು ಕ್ರಮ ಜರುಗಿಸಿಲ್ಲ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆಪ್ತ ಕಾರ್ಯದರ್ಶಿಯಾಗಿದ್ದ ಡಾ ವೆಂಕಟೇಶಯ್ಯ ಅವರು ಗೃಹ ಸಚಿವರಾಗಿದ್ದ ಡಾ ಜಿ ಪರಮೇಶ್ವರ್ ಅವರ ಆಪ್ತ ಕಾರ್ಯದರ್ಶಿಗಳಿಗೆ 2025ರ ನವೆಂಬರ್‍ನಲ್ಲಿ ಹೊರಡಿಸಿದ್ದ ಟಿಪ್ಪಣಿಯು 8 ತಿಂಗಳಿನಿಂದಲೂ ಹಿಂದಿನ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರ ಲಾಗಿನ್‌ನಲ್ಲಿಯೇ ಇದೆ.
ವಿಶೇಷವೆಂದರೇ ಈ ಟಿಪ್ಪಣಿ ಹೊರಡಿಸಿದ್ದ ಡಾ ವೆಂಕಟೇಶಯ್ಯ ಅವರು ಸದ್ಯ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರಿಗೆ ಹೆಚ್ಚುವರಿ ಕಾರ್ಯದರ್ಶಿಗಳಾಗಿದ್ದಾರೆ. ಅಲ್ಲದೇ ಡಾ ಜಿ ಪರಮೇಶ್ವರ್ ಅವರಿಗೆ 2025ರಲ್ಲಿ ಆಪ್ತ ಕಾರ್ಯದರ್ಶಿಯಾಗಿದ್ದ ಚನ್ನಬಸಪ್ಪ ಎಂಬುವರು ಈಗಲೂ ಡಾ ಜಿ ಪರಮೇಶ್ವರ್ ಅವರಿಗೆ ಆಪ್ತ ಕಾರ್ಯದರ್ಶಿಗಳಾಗಿ ಮುಂದುವರೆದಿದ್ದಾರೆ. ಆದರೂ ಸಹ ಆರ್‍ಎಸ್‌ಎಸ್ ವಿರುದ್ಧ ಹೇಳಿಕೆ ನೀಡಿದ್ದ ಪ್ರಕರಣದ ಕುರಿತಾದ ತನಿಖೆ ಮಾತಿರಲಿ, ಈ ಕುರಿತು ಇಲಾಖೆ ಹಂತದಲ್ಲಿಯೇ ಮೇಲೆದ್ದಿಲ್ಲ. ಬದಲಿಗೆ ಈ ಟಿಪ್ಪಣಿಯು 8 ತಿಂಗಳಿನಿಂದಲೂ ಡಾ ಜಿ ಪರಮೇಶ್ವರ್ ಅವರ ಲಾಗಿನ್‌ನಲ್ಲಿಯೇ ಇದೆ.
ಆರ್‍ಎಸ್‌ಎಸ್ ಸಂಘಟನೆ ನೋಂದಣಿ ಸೇರಿದಂತೆ ಈ ಸಂಘಟನೆ ಕುರಿತು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಮತ್ತು ಹಾಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ದಿನನಿತ್ಯ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಇದೇ ಆರ್‍ಎಸ್‌ಎಸ್ ಸಂಘಟನೆ ಕುರಿತು ಬಿಜೆಪಿಯ ಶಾಸಕ ಬಿ ಸುರೇಶ್ ಗೌಡ ಅವರೇ ನೀಡಿದ್ದ ಹೇಳಿಕೆ ಆಧರಿಸಿ ತನಿಖೆ ಕುರಿತು ನಿಯಮಾನುಸಾರ ಪರಿಶೀಲಿಸಿ ಎಂದು ಹೊರಡಿಸಿದ್ದ ಟಿಪ್ಪಣಿಯು 8 ತಿಂಗಳಿನಿಂದಲೂ ತೆವಳುತ್ತಲೇ ಇರುವುದು ಚರ್ಚೆಗೆ ಗ್ರಾಸವಾಗಿದೆ.
ಡಾ ವೆಂಕಟೇಶಯ್ಯ ಹೊರಡಿಸಿದ್ದ ಟಿಪ್ಪಣಿಯಲ್ಲೇನಿದೆ?
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಹೆಚ್ ಜಿ ರಮೇಶ್ ಕುಣಿಗಲ್ ಅವರು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು. ಈ ಮನವಿ ಪತ್ರ ಆಧರಿಸಿ ಮುಖ್ಯಮಂತ್ರಿ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಎನ್ ವೆಂಕಟೇಶಯ್ಯ ಅವರು 2025ರ ನವೆಂಬರ್ 3ರಂದು ಗೃಹ ಸಚಿವರ ಆಪ್ತ ಕಾರ್ಯದರ್ಶಿಗಳಿಗೆ ಟಿಪ್ಪಣಿ ಹೊರಡಿಸಿದ್ದರು.
ತುಮಕೂರು ಜಿಲ್ಲೆಯ ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಹಾಲಿ ಬಿಜೆಪಿ ಶಾಸಕ ಬಿ ಸುರೇಶ್ ಗೌಡ ಅವರು ಯಡಿಯೂರಪ್ಪನವರು ಹಾಗೂ ಆರ್‍ಎಸ್‌ಎಸ್‌ನವರ ಭ್ರಷ್ಟಾಚಾರದ ಬಗ್ಗೆ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಆಡಿಯೋ ಸತ್ಯಾಸತ್ಯತೆ ಪರಿಶೀಲನೆಗೆ ಒಳಪಡಿಸುವ ಜೊತೆಗೆ ವಿಡಿಯೋದಲ್ಲಿ ಉಲ್ಲೇಖಿಸಿರುವಂತೆ ಆರ್‍ಎಸ್‌ಎಸ್ ಅತೀ ಭ್ರಷ್ಟ ಸಂಘಟನೆ ಎಂತಲೂ ಯಡಿಯೂರಪ್ಪನವರು ಅಧಿಕಾರ ದುರುಪಯೋಗಪಡಿಸಿಕೊಂಡು ಹೊಸದಿಗಂತ ಪತ್ರಿಕೆಗೆ 5 ಕೋಟಿ ರು ಹಣ ನೀಡಿರುವ ಬಗ್ಗೆ ಮತ್ತು ಪ್ರಜಾವಾಣಿ ಪತ್ರಿಕೆಗೆ ಭೂಮಿಯ ವಿಚಾರವಾಗಿ ಅನುಕೂಲ ಮಾಡಿಕೊಟ್ಟಿರುವ ಬಗ್ಗೆ ಪ್ರಸ್ತಾಪವಾಗಿದೆ.

ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಆರ್‍ಎಸ್‌ಎಸ್‌ನವರಿಗೆ ಅಕ್ರಮವಾಗಿ ಭೂ ಮಂಜೂರಾತಿ ಮಾಡಿಕೊಟ್ಟಿರುವುದು ಸಹ ಪತ್ರಿಕೆಗಳಲ್ಲಿ ವರದಿಯಾಗಿದೆ. ಆದ್ದರಿಂದ ಬಿಜೆಪಿ ಶಾಸಕ ಬಿ ಸುರೇಶ್ ಗೌಡ, ಆರ್‍ಎಸ್‌ಎಸ್ ಮತ್ತು ಯಡಿಯೂರಪ್ಪ ಅವರ ವಿರುದ್ಧ ಪ್ರಕರಣ ದಾಖಲಿಸಿ ವಿಶೇಷ ಸಮಿತಿ ಮೂಲಕ ತನಿಖೆಗೆ ಒಳಪಡಿಸಬೇಕು ಎಂದು ಹೆಚ್ ಜಿ ರಮೇಶ್ ಕುಣಿಗಲ್ ಅವರು ಕೋರಿರುತ್ತಾರೆ. ಇವರ ಕೋರಿಕೆ ಬಗ್ಗೆ ಗೃಹ ಸಚಿವರ ಗಮನಕ್ಕೆ ತಂದು ಪರಿಶೀಲಿಸಿ ನಿಯಮಾನುಸಾರ ಅಗತ್ಯ ಕ್ರಮವಹಿಸಬೇಕು ಎಂದು ಡಾ ವೆಂಕಟೇಶಯ್ಯ ಅವರು ಕೋರಿದ್ದರು.
ಈ ಟಿಪ್ಪಣಿಯ ಮೇಲೆ ಏನಾದರೂ ಕ್ರಮವಹಿಸಲಾಗಿದೆಯೇ ಎಂದು ದಿ ಫೈಲ್ 2026ರ ಜುಲೈ 31ರಂದು ಪರಿಶೀಲಿಸಿತು. ಸರ್ಕಾರದ ಇ-ಆಫೀಸ್‌ನಲ್ಲಿನ ಚಲನವಲನದ ಮೇಲೆ ಕಣ್ಣಾಡಿಸಿತು. ಲಭ್ಯವಾದ ದಾಖಲೆ ಪ್ರಕಾರ ಈ ಟಿಪ್ಪಣಿ ಆಧರಿಸಿ ಒಂದೇ ಒಂದು ಕ್ರಮ ಜರುಗಿಲ್ಲ. ಇದಕ್ಕೊಂದು 11170946 ಸಂಖ್ಯೆಯ ಕಂಪ್ಯೂಟರ್ ನಂಬರ್ ತೆರೆಯಲಾಗಿದೆ. 2025ರ ನವೆಂಬರ್ 4 ಬೆಳಿಗಗೆ 11.27ಕ್ಕೆ ಈ ಟಿಪ್ಪಣಿಯನ್ನು ಇ ಆಫೀಸ್‌ನಲ್ಲಿ ದಾಖಲಿಸಿದೆ.
ಈ ಟಿಪ್ಪಣಿಯನ್ನು ನಾಗರಾಜ್ ಎಂಬುವರು ಗೃಹ ಸಚಿವರಾಗಿದ್ದ ಡಾ ಜಿ ಪರಮೇಶ್ವರ್ ಅವರಿಗೆ ಇ ಆಫೀಸ್ ಲಾಗಿನ್‌ನಲ್ಲೇ ಕಳಿಸಿದ್ದಾರೆ. 2025ರ ನವೆಂಬರ್ 4ರಿಂದಲೂ ಇದು ಡಾ ಜಿ ಪರಮೇಶ್ವರ್ ಅವರ ಲಾಗಿನ್‌ನನ್ನೇ ತೋರಿಸುತ್ತಿರುವುದು ಇ ಆಫೀಸ್ ಚಲನವಲನದಿಂದ ಕಂಡುಬಂದಿದೆ.

ಪ್ರಿಯಾಂಕ್ ಖರ್ಗೆ ಅವರ ಟೀಕೆಯಲ್ಲೇನಿತ್ತು?
‘ನಮ್ಮ ಭಾರತ ದೇಶದಲ್ಲಿ ಶ್ರೀರಾಮನೇ ಲೆಕ್ಕ ಕೊಡಬೇಕು. ಇನ್ನು ಶ್ರೀರಾಮನ ಹೆಸರಿನಲ್ಲಿ ರಾಜಕೀಯ ಮಾಡಿದವರು ಲೆಕ್ಕ ಕೊಡಬಾರದಾ? ಆರ್‌ಎಸ್‌ಎಸ್‌ನವರು ದುರಹಂಕಾರ ಬಿಟ್ಟು ಕಾನೂನು ಪಾಲಿಸಬೇಕು,’ ಎಂದು ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ ನೀಡಿದ್ದರು.
ಈ ಕುರಿತು ಆರ್‌ಎಸ್‌ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿರುವ ಸಚಿವರು, ಸಂವಿಧಾನದ ಚೌಕಟ್ಟಿನಲ್ಲಿ ಯಾವುದೇ ಸಂಸ್ಥೆಯು ಕಾನೂನು ಮೇಲ್ವಿಚಾರಣೆ ಮತ್ತು ಸಾರ್ವಜನಿಕ ಹೊಣೆಗಾರಿಕೆಯಿಂದ ಹೊರಗಿರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದರು.
ದೇಶದ ಪ್ರಮುಖ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಅಸ್ತಿತ್ವದ ಶತಮಾನೋತ್ಸವದ (100 ವರ್ಷ) ಸಂದರ್ಭದಲ್ಲಾದರೂ ತನ್ನ ಕಾನೂನುಬದ್ಧ ಸ್ಥಾನಮಾನವನ್ನು ಸ್ಪಷ್ಟಪಡಿಸಬೇಕು. ಆರ್ಥಿಕ ಪಾರದರ್ಶಕತೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದರು.
‘ಸಾಮಾನ್ಯ ನಾಗರಿಕರು, ಕಾರ್ಮಿಕ ಸಂಘಟನೆಗಳು, ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ), ಟ್ರಸ್ಟ್‌ಗಳು ಮತ್ತು ಕಂಪನಿಗಳು ಸರ್ಕಾರದ ನಿಯಮಾವಳಿಗಳ ಪ್ರಕಾರ ನೋಂದಣಿ ಮಾಡಿಕೊಂಡು, ತಮ್ಮ ಆದಾಯ-ವೆಚ್ಚಗಳ ವಿವರಗಳನ್ನು ನೀಡುತ್ತಿರುವಾಗ ಆರ್‌ಎಸ್‌ಎಸ್‌ಗೆ ಮಾತ್ರ ಇದರಿಂದ ಏಕೆ ವಿನಾಯಿತಿ? ಸಂಘಟನೆಯ ಒಟ್ಟು ಆಸ್ತಿ ಎಷ್ಟು, ದೇಣಿಗೆಯ ಮೂಲಗಳೇನು, ಆರ್ಥಿಕ ವೆಚ್ಚಗಳು ಹೇಗೆ ನಡೆಯುತ್ತವೆ ಮತ್ತು ಚಾಲ್ತಿಯಲ್ಲಿರುವ ತೆರಿಗೆ ಕಾನೂನುಗಳ ಪ್ರಕಾರ ತೆರಿಗೆ ಪಾವತಿಸಲಾಗುತ್ತಿದೆಯೇ ಎಂಬ ಸಂಪೂರ್ಣ ವಿವರಗಳನ್ನು ಸಾರ್ವಜನಿಕವಾಗಿ ಇಡಬೇಕು,’ ಎಂದು ಒತ್ತಾಯಿಸಿದ್ದರು.
ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ವರದಿಯನ್ನೇ ಉಲ್ಲೇಖಿಸಿದ್ದ ಪ್ರಿಯಾಂಕ್ ಖರ್ಗೆ, ಕರ್ನಾಟಕವೊಂದರಲ್ಲೇ 4,127 ದೈನಂದಿನ ಶಾಖೆಗಳು, 1,389 ವಾರಾಂತರ ಸಭೆಗಳು, 60 ಮಾಸಿಕ ಮಂಡಳಿಗಳು ನಡೆಯುತ್ತಿವೆ. ಜೊತೆಗೆ 500ಕ್ಕೂ ಹೆಚ್ಚು ಪಥಸಂಚಲನಗಳು ಹಾಗೂ ಲಕ್ಷಾಂತರ ಜನರು ಭಾಗವಹಿಸುವ ಸಮಾಜೋತ್ಸವಗಳು ನಿರಂತರವಾಗಿ ಜರುಗುತ್ತಿವೆ. ಇಷ್ಟು ದೊಡ್ಡ ಮಟ್ಟದ ಸಾರ್ವಜನಿಕ ಸಜ್ಜುಗೊಳಿಸುವಿಕೆ ಹಾಗೂ ಗಣವೇಶಧಾರಿ ಪಥಸಂಚಲನಗಳನ್ನು “ಖಾಸಗಿ ಅಥವಾ ಅನೌಪಚಾರಿಕ ವ್ಯವಸ್ಥೆ” ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಅನುಮತಿಗಳ ವಿವರಗಳನ್ನು ಒದಗಿಸಬೇಕು ಎಂದು ಹೇಳಿದ್ದರು.
ಆರ್‌ಎಸ್‌ಎಸ್ ಕೇವಲ ಸಂಭ್ರಮಾಚರಣೆಗೆ ಸೀಮಿತವಾಗದೆ, ಭಾರತೀಯ ಸಂವಿಧಾನಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು. 100ನೇ ವರ್ಷದಲ್ಲಿ ಸಂಘಟನೆಯು ಕಾನೂನುಬದ್ಧವಾಗಿ ನೋಂದಾಯಿಸಿಕೊಂಡು, ಪಾರದರ್ಶಕತೆಯಿಂದ ಕಾರ್ಯನಿರ್ವಹಿಸುವುದೇ ದೇಶಕ್ಕೆ ನೀಡುವ ಅತ್ಯುತ್ತಮ ಕೊಡುಗೆಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದನ್ನು ಸ್ಮರಿಸಬಹುದು.




