ಬೆಂಗಳೂರು; ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆ ಹೊರಡಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಉರ್ದು ವಿಷಯದ ಶಿಕ್ಷಕರ ಹುದ್ದೆಗಳನ್ನು ಪ್ರಕಟಿಸಿಲ್ಲ. ಅಲ್ಲದೇ ಎನ್‌ಇಪಿ ಪದ್ಧತಿಯ ವಿದ್ಯಾರ್ಥಿಗಳಿಗೂ ಅನ್ಯಾಯವಾಗಿದೆ. ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಪ್ರಕಟಿಸಿರುವ ಕರಡು ಅಧಿಸೂಚನೆಗಳು ಲೋಪಗಳಿಂದ ಕೂಡಿವೆ. ಹೀಗಾಗಿ ಇಲಾಖೆಗೆ ಹಲವು ಆಕ್ಷೇಪಗಳು ಸಲ್ಲಿಕೆಯಾಗಿವೆ.
ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳ (ನೇಮಕಾತಿ) (ವಿಶೇಷ) ನಿಯಮಗಳು–2026ರ ಕರಡು ಅಧಿ ಸೂಚನೆಗೆ ಹಲವು ಸಂಘಟನೆಗಳು ಆಕ್ಷೇಪಣೆಗಳು ಸಲ್ಲಿಕೆಯಾಗಿರುವ ನಡುವೆಯೇ ಇದೀಗ ಅಭ್ಯರ್ಥಿಗಳು ವೈಯಕ್ತಿಕವಾಗಿ ಸಲ್ಲಿಸಿರುವ ಆಕ್ಷೇಪಣೆಗಳು ಮುನ್ನೆಲೆಗೆ ಬಂದಿವೆ. ಹಲವು ಅಭ್ಯರ್ಥಿಗಳು ಸಲ್ಲಿಸಿರುವ ಆಕ್ಷೇಪಣೆಗಳ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿವೆ.
ಈ ಆಕ್ಷೇಪಣೆಗಳ ಕುರಿತು ಚರ್ಚಿಸಲು ರಾಜ್ಯದಲ್ಲಿ ಇನ್ನೂ ಶಿಕ್ಷಣ ಖಾತೆಗೆ ಸಚಿವರನ್ನು ನೇಮಿಸಿಲ್ಲ. ಸದ್ಯ ಈ ಖಾತೆಯು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಬಳಿಯೇ ಇದೆ.
ಎನ್‌ಇಪಿ ವಿದ್ಯಾರ್ಥಿಗಳಿಗೆ ಆಗಿದೆಯೇ ಅನ್ಯಾಯ?
ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಪದವಿ ವ್ಯಾಸಾಂಗ ಮಾಡುತ್ತಿರುವ ಮತ್ತು ವ್ಯಾಸಾಂಗ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಆಕ್ಷೇಪಣೆ ಸಲ್ಲಿಸಿದ್ದಾರೆ. ಜಿಪಿಎಸ್‌ಟಿಆರ್ (6-8) ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಕರಡು ನಿಯಮಗಳಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆಗೆ ತಕರಾರು ಎತ್ತಿದ್ದಾರೆ. ಗಣಿತ ಮತ್ತು ವಿಜ್ಞಾನ ವಿಷಯಗಳ ಹುದ್ದೆಗಳಿಗೆ ಅರ್ಜಿ ಸಲ್ಲಸಲು ಅಭ್ಯರ್ಥಿಗಳು ಮೂರು ಮುಖ್ಯ ವಿಷಯಗಳನ್ನು ಮೂರು ವರ್ಷಗಳ ಕಾಲ ಅಧ್ಯಯನ ಮಾಡಿರಬೇಕು ಎಂದು ಅರ್ಹತೆ ನಿಗದಿಪಡಿಸಿದೆ.

ಆದರೆ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ವ್ಯಾಸಾಂಗ ಮಾಡಿದ ವಿದ್ಯಾರ್ಥಿಗಳಿಗೆ ಕೇವಲ ಎರಡು ಮುಖ್ಯ ವಿಷಯಗಳನ್ನು ಮಾತ್ರ ಅಧ್ಯಯನ ಮಾಡುವ ಅವಕಾಶವಿದೆ. ಮೂರು ಮುಖ್ಯ ವಿಷಯಗಳನ್ನು ಅಧ್ಯಯನ ಮಾಡುವ ಅವಕಾಶವೇ ಎನ್‌ಇಪಿ ಪಠ್ಯಕ್ರಮದಲ್ಲಿ ಇಲ್ಲ. ಕರಡು ನಿಯಮದಲ್ಲಿರುವ ಈ ಷರತ್ತು ಸಾವಿರಾರು ಎನ್‌ಇಪಿ ಅಭ್ಯರ್ಥಿಗಳನ್ನು ಈ ನೇಮಕಾತಿಯಿಂದ ಹೊರಗಿಟ್ಟಂತಾಗುತ್ತದೆ ಎಂದು ಆಕ್ಷೇಪಣೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
‘ಸರ್ಕಾರ ಜಾರಿಗೆ ತಂದಿರುವ ಶಿಕ್ಷಣ ನೀತಿಯನ್ನು ಅನುಸರಿಸಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಅದೇ ಕಾರಣದಿಂದ ಸರ್ಕಾರಿ ಉದ್ಯೋಗದ ಅವಕಾಶವನ್ನು ನಿರಾಕರಿಸುವುದು ನ್ಯಾಯಸಮ್ಮತವಲ್ಲ. ಇದರಿಂದ ಸಾವಿರಾರು ಅರ್ಹ ಅಭ್ಯರ್ಥಿಗಳ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ,’ ಎಂದು ಆಕ್ಷೇಪಣೆಯಲ್ಲಿ ಆತಂಕ ವ್ಯಕ್ತಪಡಿಸಿರುವುದು ತಿಳಿದು ಬಂದಿದೆ.
ಉರ್ದು ವಿಷಯದ ಶಿಕ್ಷಕರ ಹುದ್ದೆಗಳನ್ನು ಪ್ರಕಟಿಸಿಲ್ಲವೇಕೆ?
ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಹೊರಡಿಸಿರುವ ಕರಡು ನಿಯಮದ ಪಟ್ಟಿಯಲ್ಲಿ ಉರ್ದು ವಿಷಯದ ಶಿಕ್ಷಕರ ಹುದ್ದೆಗಳನ್ನು ಕೈ ಬಿಟ್ಟಿದೆ. ಪ್ರೌಢಶಾಲೆ ಶಿಕ್ಷಣದ ಅತ್ಯಂತ ಪ್ರಮುಖ ವಿಷಯಗಳಲ್ಲಿ ಉರ್ದು ಕೂಡ ಒಂದು. ರಾಜ್ಯದ ಅನೇಕ ಸರ್ಕಾರಿ ಪ್ರೌಢಶಾಲೆಗಳಲ್ಲಿ ಉರ್ದು ಶಿಕ್ಷಕರ ಅಗತ್ಯತೆ ಇದೆ. ಆದರೂ ಈ ವಿಷಯದ ಹುದ್ದೆಗಳನ್ನು ಪ್ರಕಟಿಸಿಲ್ಲ. ಹೀಗಾಗಿ ಸಾವಿರಾರು ಅಭ್ಯರ್ಥಿಗಳಿಗೆ ನಿರಾಸೆಯಾಗಿದೆ. ಇದು ಸಮಾನ ಅವಕಾಶದ ತತ್ವಕ್ಕೂ ಧಕ್ಕೆಯಾಗುತ್ತದೆ ಎಂದು ಅಭ್ಯರ್ಥಿ ಪರ್ವೀನ್ ಬಾಬು ನದಾಫ್ ಎಂಬುವರು ಆಕ್ಷೇಪಣೆ ಸಲ್ಲಿಸಿರುವುದು ಗೊತ್ತಾಗಿದೆ.
‘ಉರ್ದು ವಿಷಯದ ಖಾಲಿ ಹುದ್ದೆಗಳ ಮಾಹಿತಿಯನ್ನು ಮರು ಪರಿಶೀಲಿಸಬೇಕು. ಖಾಲಿ ಇರುವ ಎಲ್ಲಾ ಉರ್ದು ಶಿಕ್ಷಕರ ಹುದ್ದೆಗಳನ್ನು ಎಚ್‌ಎಸ್‌ಟಿಆರ್ ಮತ್ತು ಜಿಪಿಎಸ್‌ಟಿಆರ್ ನೇಮಕಾತಿಗೆ ಸೇರಿಸಬೇಕು. ಅಗತ್ಯವಿದ್ದಲ್ಲಿ ತಿದ್ದುಪಡಿ ಅಧಿಸೂಚನೆ ಹೊರಡಿಸಿ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು,’ ಎಂದು ಆಕ್ಷೇಪಣೆಯಲ್ಲಿ ಕೋರಿರುವುದು ತಿಳಿದು ಬಂದಿದೆ.

ಉರ್ದು ಮಾಧ್ಯಮಕ್ಕೆ ಸಂಬಂಧಿಸಿದಂತೆ, ಎಚ್‌ಎಸ್‌ಟಿಆರ್ (HSTR) ನೇಮಕಾತಿಯಡಿ ಉರ್ದು ಮಾಧ್ಯಮದ ಸಮಾಜ ವಿಜ್ಞಾನ ಹಾಗೂ ಉರ್ದು ಭಾಷಾ ಶಿಕ್ಷಕರ ಹುದ್ದೆಗಳ ಬಗ್ಗೆ ಯಾವುದೇ ಉಲ್ಲೇಖ ಇಲ್ಲದಿರುವುದು ಆತಂಕಕಾರಿ. ಹಿಂದಿನ ನೇಮಕಾತಿಗಳಲ್ಲಿ ಉರ್ದು ಮಾಧ್ಯಮದ ಅಭ್ಯರ್ಥಿಗಳಿಗೆ ಉರ್ದು ಭಾಷೆಯಲ್ಲೇ ಪರೀಕ್ಷೆ ಬರೆಯಲು ಅವಕಾಶವಿತ್ತು. ಆದರೇ ಹೊಸ ಕರಡು ನಿಯಮಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಿಗೆ ಮಾತ್ರ ಅವಕಾಶ ಕಲ್ಪಿಸಿರುವುದು ಉರ್ದು ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಆಕ್ಷೇಪಿಸಲಾಗಿದೆ.
ಉರ್ದು ಭಾಷಾ ಶಿಕ್ಷಕರ ನೇಮಕಾತಿಯಲ್ಲಿ 100 ಅಂಕಗಳ ಉರ್ದು ಭಾಷಾ ಪ್ರಾವೀಣ್ಯ ಪರೀಕ್ಷೆ ಇತ್ತು. ಹೊಸ ಕರಡು ನಿಯಮದಲ್ಲಿ ಅದರ ಬದಲಿಗೆ 50 ಅಂಕಗಳ ಕನ್ನಡ ಮತ್ತು 50 ಅಂಕಗಳ ಇಂಗ್ಲಿಷ್ ಪರೀಕ್ಷೆಯನ್ನು ನಿಗದಿಪಡಿಸಿರುವುದು ಉರ್ದು ಭಾಷೆಯನ್ನು ಕಡೆಗಣಿಸಿದಂತಾಗಿದೆ.
ಗಣಿತ ಶಿಕ್ಷಕರ ಕೊರತೆ ಎದುರಾಗಲಿದೆಯೇ?
ಕರಡು ನಿಯಮಗಳ ಅನುಸೂಚಿ–1ರಲ್ಲಿ ಪ್ರೌಢಶಾಲಾ ಸಹಾಯಕ ಶಿಕ್ಷಕರ ವೃಂದದಲ್ಲಿ ಕಲೆ, ಜೈವಿಕ ವಿಜ್ಞಾನ ಮತ್ತು ಭಾಷಾ ಶಿಕ್ಷಕರ ಹುದ್ದೆಗಳನ್ನು ಸೇರಿಸಲಾಗಿದ್ದರೂ, ಗಣಿತ ಸಹಾಯಕ ಶಿಕ್ಷಕರ ಹುದ್ದೆಗಳನ್ನು ಸೇರಿಸಿಲ್ಲ. ಇದರಿಂದ ಅರ್ಹ ಗಣಿತ ಪದವೀಧರರ ಉದ್ಯೋಗಾವಕಾಶಕ್ಕೆ ಧಕ್ಕೆಯಾಗಿದೆ. ಸರ್ಕಾರಿ ಪ್ರೌಢಶಾಲೆಗಳಲ್ಲಿ ಗಣಿತ ಶಿಕ್ಷಕರ ಕೊರತೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಖಾಲಿ ಇರುವ ಎಲ್ಲ ಗಣಿತ ಶಿಕ್ಷಕರ ಹುದ್ದೆಗಳನ್ನು ಪ್ರಸಕ್ತ ನೇಮಕಾತಿಯಲ್ಲಿ ಸೇರಿಸಿ, ಅಗತ್ಯವಿದ್ದರೆ ತಿದ್ದುಪಡಿ ಅಧಿಸೂಚನೆ ಹೊರಡಿಸಬೇಕು ಎಂದು ಆಕ್ಷೇಪಣೆಗಳೂ ಸಲ್ಲಿಕೆಯಾಗಿವೆ.

ಪ್ರೌಢಶಾಲೆ ಸಹಾಯಕ ಶಿಕ್ಷಕರ (ಹೈಸ್ಕೂಲ್) ಪರೀಕ್ಷಾ ಯೋಜನೆಯಲ್ಲಿ, ಕರಡು ಪ್ರತಿಯಲ್ಲಿ ಭಾಷಾ ಶಿಕ್ಷಕರು (ಕನ್ನಡ), ಭಾಷಾ ಶಿಕ್ಷಕರು (ಇಂಗ್ಲಿಷ್), ಸಿಬಿಝೆಡ್ (CBZ) ಶಿಕ್ಷಕರು ಮತ್ತು ಕಲಾ ಶಿಕ್ಷಕರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ, ಭೌತಶಾಸ್ತ್ರ-ಗಣಿತ (PM) ಶಿಕ್ಷಕರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ.

ಇದು ಬಿಎಸ್‌ಸಿ, ಎಂಎಸ್‌ಸಿ (ಭೌತಶಾಸ್ತ್ರ/ಗಣಿತ) ಜೊತೆಗೆ ಬಿ ಇಡಿ (ಭೌತಶಾಸ್ತ್ರ-ಗಣಿತ ಬೋಧನಾ ವಿಧಾನ) ಪೂರ್ಣಗೊಳಿಸಿ ಹಲವು ವರ್ಷಗಳಿಂದ ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಕರ್ನಾಟಕದಾದ್ಯಂತ ಇರುವ ಇಂತಹ ಸಾವಿರಾರು ಅಭ್ಯರ್ಥಿಗಳಲ್ಲಿ ತೀವ್ರ ಕಳವಳ ಮತ್ತು ಅನಿಶ್ಚಿತತೆಯನ್ನು ಉಂಟುಮಾಡಿದೆ ಂದು ಪ್ರವೀಣ್ ಹೂಗಾರ್ ಎಂಬುವರು ಆಕ್ಷೇಪಣೆಯಲ್ಲಿ ವಿವರಿಸಿದ್ದಾರೆ.
ಅಂತಿಮ ನೇಮಕಾತಿ ನಿಯಮಗಳಲ್ಲಿ ಭೌತಶಾಸ್ತ್ರ-ಗಣಿತ (PM) ಶಿಕ್ಷಕರ ಪ್ರವರ್ಗವನ್ನು ಸೇರಿಸಬೇಕು. ಇಲ್ಲದಿದ್ದರೇ ಅರ್ಹರಾದ ಸಾವಿರಾರು ಅಭ್ಯರ್ಥಿಗಳಿಗೆ ವಂಚನೆ ಎಸಗಿದಂತಾಗುತ್ತದೆ. ಅಂತಿಮ ನೇಮಕಾತಿ ನಿಯಮಗಳು ಸಮಾನ ಅವಕಾಶ, ಪಾರದರ್ಶಕತೆ ಮತ್ತು ಸ್ಪಷ್ಟತೆಯನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕೋರಿರುವುದು ತಿಳಿದು ಬಂದಿದೆ.
ಅದೇ ರೀತಿ ಪ್ರೌಢಶಾಲಾ ಸಹಾಯಕ ಶಿಕ್ಷಕರ ಆಯ್ಕೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ (ಸಿಇಟಿ) ಶೇ.85 ಹಾಗೂ ಶೈಕ್ಷಣಿಕ ಅರ್ಹತೆಗೆ ಶೇ.13 ಅಂಕ ನಿಗದಿಪಡಿಸಿರುವುದನ್ನು ಮರುಪರಿಶೀಲಿಸಬೇಕು. ಶೈಕ್ಷಣಿಕ ಸಾಧನೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಹಲವು ಕೋರಿರುವುದು ಗೊತ್ತಾಗಿದೆ.
ಚಿತ್ರಕಲಾ ಶಿಕ್ಷಕರ ಸೇರ್ಪಡೆಯಾಗಿಲ್ಲವೇಕೆ?
15,000 ಶಿಕ್ಷಕರ ನೇಮಕಾತಿ ಕರಡು ಅಧಿಸೂಚನೆಯಲ್ಲಿ ಚಿತ್ರಕಲಾ ಶಿಕ್ಷಕರ ಹುದ್ದೆಯನ್ನೇ ಸೇರ್ಪಡೆ ಮಾಡಿಲ್ಲ. ಚಿತ್ರಕಲೆಯು ವಿದ್ಯಾರ್ಥಿಗಳ ಸೃಜನಶೀಲತೆ, ಕಲ್ಪನಾ ಶಕ್ತಿ, ಸೌಂದರ್ಯ ಪ್ರಜ್ಞೆ, ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಮಹತ್ವದ ವಿಷಯವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಸಹ ಕಲೆ ಮತ್ತು ಕೌಶಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಆದರೂ ಕರಡು ನಿಯಮಗಳಲ್ಲಿ ಚಿತ್ರಕಲಾ ಶಿಕ್ಷಕರ ಹುದ್ದೆಗಳನ್ನು ಸೇರ್ಪಡೆಗೊಳಿಸಿಲ್ಲ. ಈ ಕುರಿತು ಚಿತ್ರಕಲಾ ಪದವೀಧರರು ಇಲಾಖೆಗೆ ಆಕ್ಷೇಪಣೆ ಸಲ್ಲಿಸಿರುವುದು ತಿಳಿದು ಬಂದಿದೆ.

ವಿವರಣಾತ್ಮಕ ಉತ್ತರ ಪದ್ಧತಿಗೆ ಆಕ್ಷೇಪ
ಪ್ರೌಢಶಾಲೆ ಶಿಕ್ಷಕರ ನೇಮಕಾತಿಯಲ್ಲಿನ ಅರ್ಹತಾ ಮಾನದಂಡಗಳಲ್ಲಿ ಪತ್ರಿಕೆ 2 ಮತ್ತು ಪತ್ರಿಕೆ 3 ರಲ್ಲಿ 200 ಅಂಕಗಳಿಗೆ ವಿವರಣಾ ಮಾದರಿಯಲ್ಲಿ ಉತ್ತರ ಪದ್ಧತಿ ಪರಿಚಯಿಸಿದೆ. ಇದಕ್ಕೆ ಹಲವು ಅಭ್ಯರ್ಥಿಗಳು ಆಕ್ಷೇಪ ಎತ್ತಿದ್ದಾರೆ.

ಇದು ಅವೈಜ್ಞಾನಿಕ ಮತ್ತು ಅನಾವಶ್ಯಕವಾಗಿದೆ. ಮೊದಲ ಪತ್ರಿಕೆಯಂತೆಯೇ ಉಳಿದ ಪತ್ರಿಕೆಗಳನ್ನು ವಸ್ತುನಿಷ್ಟ ಮಾದರಿಯಲ್ಲಿ ಉತ್ತರಿಸುವ ಪದ್ಧತಿಯನ್ನು ಉಳಿಸಿಕೊಳ್ಳಬೇಕು ಎಂದು ಕೋರಿರುವುದು ಗೊತ್ತಾಗಿದೆ.




