ಬೆಂಗಳೂರು; ರಾಜ್ಯದ 26 ಜಿಲ್ಲೆಗಳ 1,731 ಗ್ರಾಮ ಪಂಚಾಯ್ತಿಗಳು 236.39 ಕೋಟಿ ರು ಮೊತ್ತದಷ್ಟು ಮಾಡಿರುವ ವೆಚ್ಚಗಳಿಗೆ ಪೂರಕ ಬಿಲ್‌ಗಳನ್ನೇ ಒದಗಿಸಿಲ್ಲ. ಅಲ್ಲದೇ ಈ ವೆಚ್ಚಗಳಿಗೆ ಸಂಬಂಧಿಸಿದಂತೆ ತೆರೆದಿರುವ ಕಡತ ಮತ್ತಿತರೆ ದಾಖಲೆಗಳನ್ನೂ ಲೆಕ್ಕ ಪರಿಶೋಧಕರಿಗೆ ಒದಗಿಸಿಲ್ಲ.
ಪ್ರಿಯಾಂಕ್ ಖರ್ಗೆ ಅವರು ಸಚಿವರಾಗಿದ್ದ ಅವಧಿ ಅಂದರೇ 2023-24ನೇ ಸಾಲಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ಸರ್ಕಾರಕ್ಕೆ ಸಲ್ಲಿಸಿರುವ ವಾರ್ಷಿಕ ಕ್ರೋಢೀಕೃತ ಲೆಕ್ಕಪರಿಶೋಧನೆ ವರದಿಯಲ್ಲಿ ಈ ಮಾಹಿತಿ ಇದೆ.
ಇಲಾಖೆಯು ಸಲ್ಲಿಸಿರುವ ಲೆಕ್ಕ ಪರಿಶೋಧನಾ ವರದಿಯು ದಿ ಫೈಲ್ ಗೆ ಲಭ್ಯವಾಗಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 58 ಹಾಗೂ ಅನುಸೂಚಿ 1ರಲ್ಲಿ ಸೂಚಿಸಿದಂತೆ ಗ್ರಾಮ ಪಂಚಾಯ್ತಿ ನಿಧಿಯಡಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳೀಗೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸ್ವೀಕೃತವಾದ ಅನುದಾನಗಳಿಗೆ ಕ್ರಿಯಾ ಯೋಜನೆಗಳನ್ನು ತಯಾರಿಸಿ ಅನುಷ್ಠಾನಗೊಳಿಸಬೇಕಾಗಿರುತ್ತದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕ್ರಿಯಾ ಯೋಜನೆಯನ್ನು ತಯಾರಿಸಲು ಮಾರ್ಗಸೂಚಿಗಳನ್ನೂ ಹೊರಡಿಸಿದೆ. ಗ್ರಾಮಮಟ್ಟದಲ್ಲಿ ವಿಶೇಷ ಗ್ರಾಮ ಸಭೆ ನಡೆಸಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 2022-23ನೇ ಸಾಲಿನ ವಾರ್ಷಿಕ ಕ್ರಿಯಾಯೋಜನೆಗೆ ಅನುಮೋದನೆ ಪಡೆಯಬೇಕು. ಆದರೆ ಗ್ರಾಮ ಪಂಚಾಯ್ತಿಯು ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಕ್ರಿಯಾ ಯೋಜನೆ ಇಲ್ಲದೇ ಯೋಜನೆ ಅನುಷ್ಠಾನಗೊಳಿಸಿರುವ ಪ್ರಕರಣಗಳನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.
ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ಕ್ರಿಯಾ ಯೋಜನೆ ಇಲ್ಲದೇ ರಾಜ್ಯದ 5 ಜಿಲ್ಲೆಗಳ 14 ಗ್ರಾಮ ಪಂಚಾಯ್ತಿಗಳು ಯೋಜನೆ ಅನುಷ್ಠಾನಗೊಳಿಸಿವೆ. ಇದರ ಮೊತ್ತವೇ 42.04 ಲಕ್ಷ ರು ನಷ್ಟಿದೆ.

ಕನಾfಟಕ ಪಂಚಾಯತ್‌ರಾಜ್ (ಗ್ರಾಮ ಪಂಚಾಯ್ತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮಗಳು 2006ರ ನಿಯಮ 43 ಅನ್ವಯ ಪ್ರತಿ ಪಾವತಿಗೆ ವಿರುದ್ಧವಾಗಿ ಬಿಲ್ ಅಥವಾ ವೋಚರ್‍ಗಳ ಅಧಾರ ಇರಬೇಕು. ಕರ್ನಾಟಕ ಆರ್ಥಿಕ ಸಂಹಿತೆ 1958ರ ಸೆಕ್ಷನ್ 3 ಮತ್ತು 49ರ ಅನ್ವಯ ವೆಚ್ಚಗಳಿಗೆ ಪೂರಕವಾದ ಲೆಕ್ಕಪತ್ರಗಳನ್ನು ನಿರ್ವಹಿಸಬೇಕು ಮತ್ತು ಅಂತಹ ದಾಖಲೆಗಳನ್ನು ಒದಗಿಸಬೇಕು.
ವೋಚರ್ ಹಾಗೂ ಅಗತ್ಯ ಪೂರಕ ದಾಖಲೆಗಳನ್ನು ಸರ್ಕಾರವು ಹೊರಡಿಸಿರುವ ಆದೇಶ ಮತ್ತು ಸುತ್ತೋಲೆ ಪ್ರಕಾರ ( ಸಂಖ್ಯೆ; ಗ್ರಾಅಪ/ಲೆಪವ/26- ದಿನಾಂಕ 18.04.2007 ಮತ್ತು ಸರ್ಕಾರದ ಸುತ್ತೋಲೆ ಸಂಖ್ಯೆ ಗ್ರಾಅಪ 105/ಎಎಆರ್/2007 ದಿನಾಂಕ 22.05.2007) ಲೆಕ್ಕ ಪರಿಶೋಧನೆಗೆ ಹಾಜರುಪಡಿಸಬೇಕು. ಒಂದೊಮ್ಮೆ ಲೆಕ್ಕ ಪರಿಶೋಧನೆಗೆ ಹಾಜರುಪಡಿಸದೇ ಇದ್ದಲ್ಲಿ ಈ ಆದೇಶ ಮತ್ತು ಸುತ್ತೋಲೆ ಪ್ರಕಾರ ಬಟವಾಡೆ ಅಧಿಕಾರಿಗಳದ್ದು ಕರ್ತವ್ಯಲೋಪವೆಂದು ಪರಿಗಣಿಸಬಹುದು.

ಅಲ್ಲದೇ ಶಿಸ್ತು ಕ್ರಮ ಜರುಗಿಸಬಹುದು. ಸೇವಾ ಬಡ್ತಿ ತಡೆಹಿಡಿಯಬಹುದು. ಹಾಗೆಯೇ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವೂ ಇದೆ. ಅಲ್ಲದೇ ಆಡಿಟ್ ಕೈಪಿಡಿ ನಿಯಮ 537ರ ಪ್ರಕಾರ ಇದನ್ನು ಹಣ ದುರುಪಯೋಗವೆಂದೂ ಸಹಾ ಪರಿಗಣಿಸಬಹುದು.

ಇಷ್ಟೆಲ್ಲಾ ನೀತಿ, ನಿಯಮ, ಆದೇಶ, ಸುತ್ತೋಲೆಗಳು ಜಾರಿಯಲ್ಲಿದ್ದರೂ ಸಹ ರಾಜ್ಯದ 26 ಜಿಲ್ಲೆಗಳ 1,731 ಗ್ರಾಮ ಪಂಚಾಯ್ತಿಗಳು 236.39 ಕೋಟಿ ರು ಮೊತ್ತದಷ್ಟು ಮಾಡಿರುವ ವೆಚ್ಚಗಳಿಗೆ ಪೂರಕ ಬಿಲ್‌ಗಳನ್ನೇ ಒದಗಿಸಿಲ್ಲ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 15ನೇ ಹಣಕಾಸು ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಒಟ್ಟು 2.57 ಲಕ್ಷ ರು ಹಾಗೂ ನರೇಗಾ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ 8.65 ಲಕ್ಷ ರು ಭರಿಸಿದೆ. ಈ ಪಾವತಿಗಳಿಗೆ ಎದುರಾಗಿ ಯಾವುದೇ ವೋಚರ್‍ಗಳನ್ನು ಮತ್ತು ದಾಖಲೆಗಳನ್ನು ಲೆಕ್ಕ ಪರಿಶೋಧನೆಗೆ ಹಾಜರುಪಡಿಸಿಲ್ಲ. ಆಯಾ ಯೋಜನೆ ಮಾರ್ಗಸೂಚಿಗಳ ಅನುಸಾರ ವೆಚ್ಚ ಭರಿಸಲಾಗಿದೆಯೇ ಇಲ್ಲವೇ ಎಂಬ ಬಗ್ಗೆ ಲೆಕ್ಕ ಪರಿಶೋಧನೆಯಲ್ಲಿಯೂ ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಭರಿಸಿರುವ ವೆಚ್ಚ ಒಟ್ಟಾರೆ 11.22 ಲಕ್ಷ ರುಗ.ಳನ್ನು ವಸೂಲು ಮಾಡಬೇಕು ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲೂಕಿನ ಶಂಕರಬಂಡೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಸಿ ಸಿ ರಸ್ತೆ ನಿರ್ಮಾಣ ಮತ್ತು ಚರಂಡಿಗೆ ಬೂದು ನೀರು ನಿರ್ವಹಣೆ ಮುಂತಾದ ವಿವಿಧ ಕಾಮಗಾರಿಗೆ 94.48 ಲಕ್ಷ ರು ವೆಚ್ಚ ಮಾಡಲಾಗಿದೆ. ಆದರೆ ಈ ವೆಚ್ಚಕ್ಕೆ ಸಂಬಂಧಿಸಿದಂತೆ ಕಡತ ದಾಖಲೆಗಳು ಮತ್ತು ವೋಚರ್‍ಗಳನ್ನು ಲೆಕ್ಕಪರಿಶೋಧನೆಗೆ ಹಾಜರುಪಡಿಸಿಲ್ಲ. ಹೀಗಾಗಿ ಈ ಕಾಮಗಾರಿಗೆ ಕೈಗೊಂಡ ಮೊತ್ತ 94.48 ಲಕ್ಷ ರು.ಗಳನ್ನು ವಸೂಲು ಮಾಡಬೇಕು ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ಶಿಫಾರಸ್ಸು ಮಾಡಿದೆ.

ಹಾಗೆಯೇ ರಾಜ್ಯದ 10 ಜಿಲ್ಲೆಗಳ 75 ಗ್ರಾಮ ಪಂಚಾಯ್ತಿಗಳು ಸಕ್ಷಮ ಪ್ರಾಧಿಕಾರದಿಂದ ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮೋದನೆ ಪಡೆಯದೇ 1 ಕೋಟಿ 64 ಲಕ್ಷ ರು ಮೊತ್ತದ ಕ್ರಿಯಾ ಯೋಜನೆಯನ್ನು ಅನುಷ್ಠಾನಗೊಳಿಸಿರುವುದನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.
ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯತ್ ಆಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮಗಳು 2006 ನಿಯಮ 77 (ii) ಮತತು (iv) ಪ್ರಕಾರ ಅಂದಾಜು ಕಾಮಗಾರಿಗಳಿಗೆ ತಾಂತ್ರಿಕ ಮಂಜೂರಾತಿ ಪಡೆಯಬೇಕು. ಗ್ರಾಮ ಪಂಚಾಯ್ತಿ ಮಟ್ಟದ ಇಂಜಿನಿಯರ್‍ಗೆ 25,000 ರು ಮಿತಿಗೆ ಒಳಪಟ್ಟು ತಾಂತ್ರಿಕ ಮಂಜೂರಾತಿ ನೀಡಲು ಅಧಿಕಾರವನ್ನು ನೀಡಲಾಇದೆ. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಧಿಕಾರ ವ್ಯಾಪ್ತಿಯೊಳಗೆ 25 ಸಾವಿರ ಮೀರುವ ಮತ್ತು 4,00,000.00 ರು ಒಳಗಿನ ಮೊತ್ತಕ್ಕೆ, ಕಾರ್ಯನಿರ್ವಾಹಕ ಇಂಜಿನಿಯರ್ ಅಧಿಕಾರ ವ್ಯಾಪ್ತಿಯೊಳಗೆ 4,00,000.00 ರು ಮೀರುವ ಮತ್ತು 10,00,000.00 ರು ಒಳಗಿನ ಮೊತ್ತಕ್ಕೆ, ಅಧೀಕ್ಷಕ ಇಂಜಿನಿಯರ್ 10,00,000.00 ರು ಮೀರುವ ಮೊತ್ತದ ಕ್ರಿಯಾ ಯೋಜನೆಗೆ ತಾಂತ್ರಿಕ ಅನುಮೋದನೆ ನೀಡಲು ಅಧಿಕಾರವಿದೆ.
ಕರ್ನಾಟಕ ಪಂಚಾಯತ್ ರಾಜ್ (ಗ್ರಾಮ ಪಂಚಾಯತ್ ಆಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮಗಳು 2006 ನಿಯಮ 80ರ ಪ್ರಕಾರ ಆಡಳಿತಾತ್ಮಕ ಅನುಮೋದನೆ ಪಡೆಯದ ಹೊರತು ಕಾಮಗಾರಿ ಅರಂಭಿಸುವಂತಿಲ್ಲ. ಅದೇ ರೀತಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಸಹ 5,000 ರು ಒಳಗಿನ ಮೊತ್ತಕ್ಕೆ ಮತ್ತು ಗ್ರಾಮ ಪಂಚಾಯ್ತಿಯು 5,000 ರು ಮೀರುವ ಮತ್ತು 10,00,000.00 ರು ಒಳಗಿನ ಮೊತ್ತಕ್ಕೆ, ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು 10,00,000.00 ರು ಮೀರುವ 30,00,000.00 ರು ಒಳಗಿನ ಮೊತ್ತಕ್ಕೆ ಮತ್ತು ಸರ್ಕಾರವು 30,00,000.00 ರು ಮೀರುವ ಮೊತ್ತದ ಕ್ರಿಯಾ ಯೋಜನೆಗೆ ತಾಂತ್ರಿಕ ಅನುಮೋದನೆ ನೀಡಲು ಅಧಿಕಾರ ಹೊಂದಿದೆ.

ಆದರೆ ರಾಜ್ಯದ 10 ಜಿಲ್ಲೆಗಳ 75 ಗ್ರಾಮ ಪಂಚಾಯ್ತಿಗಳು ಸಕ್ಷಮ ಪ್ರಾಧಿಕಾರದಿಂದ ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮೋದನೆ ಪಡೆಯದೇ 1 ಕೋಟಿ 64 ಲಕ್ಷ ರು ಮೊತ್ತದ ಕ್ರಿಯಾ ಯೋಜನೆಯನ್ನು ಅನುಷ್ಠಾನಗೊಳಿಸಿವೆ.

ಅದೇ ರೀತಿ ಕರ್ನಾಟಕ ಪಿಡಬ್ಲ್ಯೂಡಿ ಎ ಕೋಡ್ 2014 ಕಂಡಿಕೆ 173 (1)(ಸಿ) ಅನ್ವಯ ಅಂಗೀಕರಿಸಲಾದ ಟೆಂಡರ್ ಗೆ ಎದುರಾಗಿ ನಿರ್ದಿಷ್ಟ ಪಡಿಸಿದ ಭದ್ರತಾ ಠೇವಣಿಯನ್ನು ಪಡೆಯಬೇಕು. ಕರ್ನಾಟಕ ಪಂಚಾಯತ್‌ರಾಜ್ (ಗ್ರಾಮಪಂಚಾಯ್ತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮಗಳು 2006ರ ನಿಯಮ 100ರ ನಮೂನೆ 47ರಲ್ಲಿ ಕಾಮಗಾರಿಗಳಿಗೆ ಭದ್ರತಾ ಠೇವಣಿಯ ನಿರ್ವಹಣೆ ಬಗ್ಗೆ ಹೇಳಿದೆ.

ಗುತ್ತಿಗೆದಾರರು ಕಾಮಗಾರಿಗಳನ್ನು ಪೂರ್ಣಗೊಳಿಸದಿರುವ ಪಕ್ಷದಲ್ಲಿ ಅಥವಾ ಇಲಾಖೆಗೆ ಗುತ್ತಿಗೆದಾರರಿಂದ ನಷ್ಟ ಉಂಟಾದಲ್ಲಿ ನಷ್ಟಕ್ಕೆ ಎದುರಾಗಿ ಪಡೆದಿರುವ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ಸ್ಪಷ್ಟವಾಗಿ ಹೇಳಿದೆ.

ಆದರೂ ರಾಜ್ಯದ 2 ಜಿಲ್ಲೆಗಳ 95 ಗ್ರಾಮ ಪಂಚಾಯ್ತಿಗಳು 56.58 ಲಕ್ಷ ರು ಮೊತ್ತದ ಕಾಮಗಾರಿಗಳನ್ನು ಯಾವುದೇ ಭದ್ರತಾ ಠೇವಣಿ ಪಡೆಯದೇ ನಿರ್ವಹಿಸಿವೆ ಎಂದು ಲೆಕ್ಕ ಪರಿಶೋಧಕರು ಬಯಲು ಮಾಡಿರುವುದು ವರದಿಯಿಂದ ತಿಳಿದು ಬಂದಿದೆ.




