Monday | July 6, 2026 |

ಸರ್ಕಾರಕ್ಕೆ ಜಮೆಯಾಗಿಲ್ಲ 834.11 ಕೋಟಿ, ಅವಕಾಶವಿರದಿದ್ದರೂ 168.85 ಕೋಟಿ ಶಿಕ್ಷಣ ತೆರಿಗೆ ವಸೂಲಿ; ಭಿಕ್ಷುಕರು, ಗ್ರಂಥಾಲಯ, ಆರೋಗ್ಯ ತೆರಿಗೆ ಮೊತ್ತಕ್ಕೂ ಕನ್ನ!

ಬೆಂಗಳೂರು;  ಭಿಕ್ಷುಕರ ತೆರಿಗೆ, ಗ್ರಂಥಾಲಯ ತೆರಿಗೆ, ಆರೋಗ್ಯ ತೆರಿಗೆ ಮತ್ತು ಶಿಕ್ಷಣ ತೆರಿಗೆಯ ಲೆಕ್ಕ ಶೀರ್ಷಿಕೆಗಳಲ್ಲಿ  ಗ್ರಾಮ ಪಂಚಾಯ್ತಿಗಳು ವಸೂಲು ಮಾಡಿದ್ದ ಒಟ್ಟು ಹಣದ ಪೈಕಿ 834.11  ಕೋಟಿ ರುಪಾಯಿ ಸರ್ಕಾರಕ್ಕೆ ಜಮೆಯಾಗಿಲ್ಲ.  ಅಲ್ಲದೇ ಶಿಕ್ಷಣ ಉಪ ಕರ ವಿಧಿಸುವುದು ಮತ್ತು ವಸೂಲು ಮಾಡಲು ಅವಕಾಶವಿರದಿದ್ದರೂ ಸಹ ಗ್ರಾಮ ಪಂಚಾಯ್ತಿಗಳು 168.85 ಕೋಟಿ ರುಪಾಯಿ ವಸೂಲು ಮಾಡಿದ್ದವು. ಈ ರೀತಿ ವಸೂಲು ಮಾಡಿದ್ದ  ಮೊತ್ತದಲ್ಲಿಯೂ ಸಹ 167.27 ಕೋಟಿ ರುಪಾಯಿಗಳನ್ನು ಸರ್ಕಾರಕ್ಕೆ  ಜಮೆ ಮಾಡಿಲ್ಲ.

ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಸಚಿವರಾಗಿದ್ದ ಅವಧಿ ಅಂದರೇ 2023-24ನೇ ಸಾಲಿಗೆ (2024ರ ಮಾರ್ಚ್‌ ಅಂತ್ಯ)  ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯು ವರದಿ ನೀಡಿದೆ. ಹಲವು ತೆರಿಗೆಗಳನ್ನು ವಸೂಲು ಮಾಡಿರುವ ಪಂಚಾಯ್ತಿಗಳು ಸರ್ಕಾರಕ್ಕೆ  ಜಮೆ ಮಾಡದೇ ಇರುವುದು ಪಂಚಾಯ್ತಿಗಳಲ್ಲಿ ಬಹುದೊಡ್ಡ ಅಕ್ರಮ ನಡೆದಿದೆ ಎಂಬುದಕ್ಕೆ ಪುರಾವೆ ಒದಗಿಸಿದಂತಿದೆ.

ಅಯೋಧ್ಯೆಯಲ್ಲಿನ ರಾಮಮಂದಿರ ನಿರ್ಮಾಣಕ್ಕೆ ನೀಡಿದ ದೇಣಿಗೆ ಮೊತ್ತ ಕಳ್ಳತನವಾಗಿರುವ ಪ್ರಕರಣದ ಕುರಿತು  ಸಚಿವ ಪ್ರಿಯಾಂಕ್ ಖರ್ಗೆ ಅವರು ಕಟುವಾಗಿ ಟೀಕಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಅವರ ಅವಧಿಯಲ್ಲಿನ ರಾಜ್ಯದ ಗ್ರಾಮ ಪಂಚಾಯ್ತಿಗಳಲ್ಲಿ 834.11 ಕೋಟಿ ರು ಸರ್ಕಾರಕ್ಕೆ ಜಮೆಯಾಗಿಲ್ಲ ಎಂದು ಕರ್ನಾಟಕ ರಾಜ್ಯ ಲೆಕ್ಕಪತ್ರ  ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ನೀಡಿರುವ ವರದಿಯು ಮುನ್ನೆಲೆಗೆ ಬಂದಿದೆ.

ಇಷ್ಟೊಂದು ದೊಡ್ಡ ಪ್ರಮಾಣದ ಮೊತ್ತವಾಗಿರುವ 834.11  ಕೋಟಿ ರುಪಾಯಿ ಈಗ ಪಂಚಾಯ್ತಿ ನಿಧಿಯಲ್ಲಿಯೇ ಇದೆಯೇ ಅಥವಾ ಇಲ್ಲವೇ ಎಂಬ ಬಗ್ಗೆಯೂ ಲೆಕ್ಕ ಪರಿಶೋಧನೆ ವರದಿಯಲ್ಲಿ ಯಾವುದೇ ಮಾಹಿತಿಯೂ ಇಲ್ಲ. ತೆರಿಗೆ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡದೇ ಇದ್ದರೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಅದನ್ನು ಕಾಲಕಾಲಕ್ಕೆ ಪರಿಶೀಲನೆಯನ್ನೂ ಮಾಡದಿರುವುದು ಸಹ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ.

ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯು ನೀಡಿರುವ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಕರ್ನಾಟಕ ಪಂಚಾಯತ್‌ ರಾಜ್‌ ಅಧಿನಿಯಮ 1993ರ ಪ್ರಕರಣ 199ರ ಪ್ರಕಾರ ಗ್ರಾಮ ಪಂಚಾಯ್ತಿಗಳು ಭೂಮಿ, ಕಟ್ಟಡಗಳ ಮೇಲೆ ವಿಧಿಸುವ ತೆರಿಗೆ ಮೇಲೆ ಆರೋಗ್ಯ ಉಪಕರ ಶೇ. 15, ಗ್ರಂಥಾಲಯ ಉಪ ಕರ ಶೇ. 0.6 ಮತ್ತು ಭಿಕ್ಷುಕರ ಉಪ ಕರ ಶೇ. 0.3ರಷ್ಟು ವಸೂಲು ಮಾಡಿ  ಸಂಬಂಧಿಸಿದ ಲೆಕ್ಕ ಶೀರ್ಷಿಕೆಗಳಿಗೆ ವಿಳಂಬ ಮಾಡದೇ ಪಾವತಿಸಬೇಕು.

ಅದೇ ರೀತಿ ಗ್ರಾಮ ಪಂಚಾಯ್ತಿಗಳು ಭೂಮಿ ಮತ್ತು ಕಟ್ಟಡಗಳ ಮೇಲೆ ವಿಧಿಸುವ ತೆರಿಗೆ ಮೇಲೆ ಪ್ರತಿ ಒಂದು ರುಪಾಯಿಗೆ 10 ಪೈಸೆವರೆಗೆ ಶಿಕ್ಷಣ ಉಪಕರ ವನ್ನು ವಸೂಲು ಮಾಡಲು ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಪ್ರಕಾರ ಅವಕಾಶವಿಲ್ಲ. ಅಲ್ಲದೇ 2019ರ ಮಾರ್ಚ್‌ 19ರಂದು ಹೊರಡಿಸಿರುವ ಸುತ್ತೋಲೆ ಶಿಕ್ಷಣ ಉಪ ಕರ ವಿಧಿಸುವುದನ್ನು ಸ್ಥಗಿತಗೊಳಿಸಿದೆ.

ಆದರೂ 2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿಯೂ ಗ್ರಾಮ ಪಂಚಾಯ್ತಿಗಳು ಶಿಕ್ಷಣ ಕರ ವಸೂಲು ಮಾಡಿವೆ  ಎಂದು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.

ಹಾಗೆಯೇ ಗ್ರಾಮ ಪಂಚಾಯ್ತಿಗಳು ವಸೂಲು ಮಾಡಿರು ಉಪ ಕರಗಳನ್ನು ಸರ್ಕಾರದ ಸಂಬಂಧಿಸಿದ ಲೆಕ್ಕ ಶೀರ್ಷಿಕೆಗಳಿಗೆ ಜಮೆ ಮಾಡದೇ ಹಿಂದಿನಿಂದಲೂ ಗ್ರಾಮ ಪಂಚಾಯ್ತಿ ನಿಧಿಯಲ್ಲಿಯೇ ಉಳಿಸಿಕೊಂಡಿದೆ. ಅಲ್ಲದೇ ಬ್ಯಾಂಕ್‌ ಖಾತೆಯಿಂದ ಡ್ರಾ ಮಾಡಿ ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮೆ ಮಾಡದಿರುವ ಹಲವು ಪ್ರಕರಣಗಳು ಲೆಕ್ಕ ಪರಿಶೋಧನೆ ವೇಳೆ ಕಂಡುಬಂದಿದೆ.

 

 

ರಾಜ್ಯದ 30 ಜಿಲ್ಲೆಗಳ 5,364 ಪಂಚಾಯ್ತಿಗಳು ವಸೂಲು ಮಾಡಿದ್ದ ತೆರಿಗೆ ಮೊತ್ತ  ಒಟ್ಟಾರೆ 81.61 ಕೋಟಿ ರು.ಗಳನ್ನು ಸರ್ಕಾರದ ವಿವಿಧ ಇಲಾಖೆಗಳ ಲೆಕ್ಕ ಶೀರ್ಷಿಕೆಗಳಿಗೆ ಜಮೆ ಮಾಡಿಲ್ಲ. ಬದಲಿಗೆ ಇಷ್ಟೂ ಮೊತ್ತ ಪಂಚಾಯ್ತಿಗಳ ನಿಧಿಯಲ್ಲಿಯೇ ಉಳಿಸಿಕೊಂಡಿರುವುದನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.

 

 

ಆರೋಗ್ಯ ಉಪ ಕರ ಲೆಕ್ಕಶೀರ್ಷಿಕೆಯ ಆರಂಭಿಕ ಶಿಲ್ಕು ರೂಪದಲ್ಲಿ 375.53 ಕೋಟಿ ರು ಇತ್ತು. ಈ ಪೈಕಿ 62.56 ಕೋಟಿ ರು ವಸೂಲು ಆಗಿತ್ತು. ಒಟ್ಟಾರೆ 438.09 ಕೋಟಿಯಷ್ಟಿತ್ತು. ಈ ಪೈಕಿ ಸರ್ಕಾರಕ್ಕೆ  ಜಮೆ ಮಾಡಿದ್ದು ಕೇವಲ 10.92 ಕೋಟಿ ರು ಮಾತ್ರ. ಸರ್ಕಾರಕ್ಕೆ 427.17 ಕೋಟಿ ರುಪಾಯಿ ಜಮೆಯೇ ಆಗಿಲ್ಲ ಎಂದು ಲೆಕ್ಕ ಪರಿಶೋಧಕರು ಬಯಲು ಮಾಡಿದ್ದಾರೆ.

ಅದೇ ರೀತಿ ಗ್ರಂಥಾಲಯ ಕರ ಆರಂಭಿಕ ಶಿಲ್ಕುವಿನಲ್ಲಿ 157.51 ಕೋಟಿ ರು ಇತ್ತು. 30.43.81 ಕೋಟಿ ರು ವಸೂಲಾಗಿತ್ತು. ಒಟ್ಟಾರೆ 187.94 ಕೋಟಿ ರು ವಸೂಲಾಗಿತ್ತು. ಈ ಪೈಕ ಸರ್ಕಾರಕ್ಕೆ ಜಮೆ ಮಾಡಿದ್ದು  ಕೇವಲ 7.09 ಕೋಟಿ ರು ಮಾತ್ರ. ಸರ್ಕಾರಕ್ಕೆ  180.85 ಕೋಟಿ ರು ಜಮೆಯನ್ನೇ ಮಾಡಿಲ್ಲ. ಅದೇ ರೀತಿ ಭಿಕ್ಷುಕರ ಕರ ಲೆಕ್ಕ ಶೀರ್ಷಿಕೆ ಆರಂಭಿಕ ಶಿಲ್ಕುವಿನ್ಲಿ 53.39 ಕೋಟಿ ರು ಇತ್ತು. 15.09 ಕೋಟಿ ರು ವಸೂಲಾಗಿತ್ತು. ಒಟ್ಟಾರೆ 68.48 ಕೋಟಿ ರು ಇತ್ತು. ಈ ಪೈಕಿ ಸರ್ಕಾರಕ್ಕೆ ಜಮೆ ಮಾಡಿದ್ದು 9.72 ಕೋಟಿ ರು ಮಾತ್ರ. 58.76 ಕೋಟಿ ರು ಸರ್ಕಾರಕ್ಕೆ ಜಮೆಯನ್ನೇ ಮಾಡಿಲ್ಲ.

 

 

ಹೀಗೆ ಆರೋಗ್ಯ ಉಪಕರ, ಗ್ರಂಥಾಲಯ ಉಪ ಕರ, ಭಿಕ್ಷುಕರ ಉಪ ಕರ ವಸೂಲು ಮಾಡಿದ್ದ ಪಂಚಾಯ್ತಿಗಳು ಒಟ್ಟಾರೆ 660.78 ಕೋಟಿ ಸರ್ಕಾರಕ್ಕೆ ಜಮೆಯಾಗಿಲ್ಲ.

 

 

 

 

ಅದೇ ರೀತಿ ನಿಯಮಗಳಲ್ಲಿ ಅವಕಾಶವಿರದಿದ್ದರೂ 2023-24ರಲ್ಲೂ ಗ್ರಾಮ ಪಂಚಾಯ್ತಿಗಳು 168.85 ಕೋಟಿ ರು ವಸೂಲು ಮಾಡಿದ್ದವು. ಈ ಪೈಕಿ ಸರ್ಕಾರಕ್ಕೆ ಜಮೆ ಮಾಡಿದ್ದು ಕೇವಲ 1.58 ಕೋಟಿ ರು ಮಾತ್ರ. ನಿಯಮಬಾಹಿರವಾಗಿ ಶಿಕ್ಷಣ ಉಪ ಕರ ವಸೂಲು ಮಾಡಿದ್ದಲ್ಲದೇ 167.27 ಕೋಟಿ ರುಪಾಯಿಗಳನ್ನು ಸರ್ಕಾರಕ್ಕೂ ಜಮೆ ಮಾಡಿಲ್ಲ. ಒಟ್ಟಾರೆಯಾಗಿ ಈ ಎಲ್ಲಾ ಲೆಕ್ಕ ಶೀರ್ಷಿಕೆಗಳಲ್ಲಿನ ವಸೂಲು ಮಾಡಿದ್ದ ಒಟ್ಟು ಹಣದ ಪೈಕಿ 834.11  ಕೋಟಿ ರುಪಾಯಿ ಸರ್ಕಾರಕ್ಕೆ ಜಮೆಯಾಗಿಲ್ಲ.

 

 

ಇದಷ್ಟೇ ಅಲ್ಲ ಕಟ್ಟಡ ನಿರ್ಮಾಣ ಪರವಾನಗಿ ಪ್ರಕರಣಗಳಲ್ಲಿಯೂ ಸಹ ಕಾರ್ಮಿಕ ಕಲ್ಯಾಣ ಉಪ ಕರವನ್ನು ವಸೂಲು ಮಾಡಿಲ್ಲ.  ಇದರಿಂದ ಸರ್ಕಾರಕ್ಕೆ ಮತ್ತು ಪಂಚಾಯ್ತಿಗೆ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಿರುವುದನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿರುವುದು ತಿಳಿದು ಬಂದಿದೆ.

 

 

ರಾಜ್ಯದ 9 ಜಿಲ್ಲೆಗಳಲ್ಲಿನ 83 ಪಂಚಾಯ್ತಿಗಳು ಒಟ್ಟಾರೆ 35.99 ಲಕ್ಷ ರು ವಸೂಲು ಮಾಡಿಲ್ಲ. ಹೀಗಾಗಿ ಸರ್ಕಾರ ಮತ್ತು ಪಂಚಾಯ್ತಿಗಳ ಬೊಕ್ಕಸಕ್ಕೆ ಇದು ನಷ್ಟವುಂಟಾಗಿದೆ ಎಂದು ಲೆಕ್ಕ ಪರಿಶೋಧಕರು ತಮ್ಮ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಹಾಸನ ಜಿಲ್ಲೆಯ ಹಾಸನ ತಾಲೂಕಿನ ತೇಜೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವಸತಿ ಕಟ್ಟಡಗಳ ನಿರ್ಮಾಣಕ್ಕೆ 12 ಲೈಸೆನ್ಸ್‌ ನೀಡಿತ್ತು. ಈ ಸಂಬಂಧ 2.50 ಲಕ್ಷ ರು ಕಾರ್ಮಿಕ ಉಪ ಕರ ವಸೂಲು ಮಾಡಬೇಕಿತ್ತು. ಆದರೆ 0.92 ಲಕ್ಷ ರು ವಸೂಲು ಮಾಡಿದೆ. ಬಾಕಿ 1.58 ಲಕ್ಷ ರು ವಸೂಲು ಮಾಡಿರಲಿಲ್ಲ. ಅದೇ ರೀತಿ ತುಮಕೂರು ತಾಲೂಕಿನ ಸ್ವಾಂದೇನಹಳ್ಳಿಯಲ್ಲಿ 2023-24ನೇ ಸಾಲಿನಲ್ಲಿ 10 ಲಕ್ಷ ರು ಮೇಲ್ಪಟ್ಟ ಪ್ರಕರಣಗಳಲ್ಲಿ ಒಟ್ಟು 12 ಕಟ್ಟಡಗಳಿಗೆ ಪರವಾನಿಗೆ ನೀಡಿತ್ತು. ಕಾರ್ಮಿಕ ಉಪ ಕರವೆಂದು 2.54 ಕೋಟಿ ರು ವಸೂಲು ಮಾಡಬೇಕಿತ್ತು. ಆದರೆ ಶೇ. 1ರಷ್ಟು ಅಂದರೇ ಕೇವಲ 2.54 ಲಕ್ಷ ರು ಮಾತ್ರ ವಸೂಲು ಮಾಡಿರುವುದನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.

Hot this week

3 ವರ್ಷವಾದರೂ ಆರಂಭವಾಗದ ಕಟ್ಟಡ ಭಗ್ನಾವಶೇಷ ಘಟಕ; ನಗರಾಭಿವೃದ್ಧಿ ಸಚಿವರ ತವರಲ್ಲೇ ನಾಗರಿಕರಿಗೆ ದಂಡ, ರದ್ದಾಗದ ಬೈಲಾ

ಮೈಸೂರು;  ನಗರಾಭಿವೃದ್ಧಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿನ ...

ಖಾಸಗಿ ಮಠದ ಒಡೆತನದ ಆಸ್ತಿಯಲ್ಲಿ ಸರ್ಕಾರಿ ಕಾಮಗಾರಿ, 8.4 ಕೋಟಿ ವೆಚ್ಚ; ತನಿಖೆ ಹಾದಿ ತಪ್ಪಿಸಿದರೇ ನಿವೃತ್ತ ಐಎಎಸ್ ಅಧಿಕಾರಿ ಐಎಸ್‌ಎನ್ ಪ್ರಸಾದ್‌?

ಬೆಂಗಳೂರು;  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನ...

ಸಿಎಂ, ಡಿಸಿಎಂ ಸೇರಿ ಐವರು ಸಚಿವರ ವಸತಿಗೃಹ ನವೀಕರಣ, ದುರಸ್ತಿ, ಪೀಠೋಪಕರಣ, ಗೃಹಪಯೋಗಿ ವಸ್ತುಗಳ ಖರೀದಿ; 3 ವರ್ಷದಲ್ಲಿ 19.01 ಕೋಟಿ ರು ವೆಚ್ಚ

ಬೆಂಗಳೂರು; ಸರ್ಕಾರಿ ಶಾಲೆ, ಸರ್ಕಾರಿ ವಿದ್ಯಾರ್ಥಿ ನಿಲಯಗಳ ನಿರ್ಮಾಣ, ಇರುವ ಕೊಠಡಿಗಳ...

ಶಾಲಾ ಶಿಕ್ಷಣಕ್ಕಾಗಿ ಹಣಕಾಸು ಪೂರೈಕೆ; ವೆಚ್ಚ ಸಾಲದು, ಹೆಚ್ಚಿದ ಸಂಪನ್ಮೂಲ ಅಂತರ, ಬಜೆಟ್‌ನಲ್ಲಿ ಕುಸಿತ, ಖಾಸಗೀಕರಣಕ್ಕೆ ದಾರಿಯಾಗಲಿದೆಯೇ?

ಬೆಂಗಳೂರು; ರಾಜ್ಯದ ಶಾಲೆಗಳಲ್ಲಿ ದಾಖಲಾತಿ ಪ್ರಮಾಣವು ವೇಗವಾಗಿ ಹೆಚ್ಚುತ್ತಿದ್ದರೂ ಸಹ ಶಿಕ್ಷಣದ ಮೇಲಿನ...
Please Scan to make Your Contribution

Topics

3 ವರ್ಷವಾದರೂ ಆರಂಭವಾಗದ ಕಟ್ಟಡ ಭಗ್ನಾವಶೇಷ ಘಟಕ; ನಗರಾಭಿವೃದ್ಧಿ ಸಚಿವರ ತವರಲ್ಲೇ ನಾಗರಿಕರಿಗೆ ದಂಡ, ರದ್ದಾಗದ ಬೈಲಾ

ಮೈಸೂರು;  ನಗರಾಭಿವೃದ್ಧಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿನ ...

ಖಾಸಗಿ ಮಠದ ಒಡೆತನದ ಆಸ್ತಿಯಲ್ಲಿ ಸರ್ಕಾರಿ ಕಾಮಗಾರಿ, 8.4 ಕೋಟಿ ವೆಚ್ಚ; ತನಿಖೆ ಹಾದಿ ತಪ್ಪಿಸಿದರೇ ನಿವೃತ್ತ ಐಎಎಸ್ ಅಧಿಕಾರಿ ಐಎಸ್‌ಎನ್ ಪ್ರಸಾದ್‌?

ಬೆಂಗಳೂರು;  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನ...

ಶಾಲಾ ಶಿಕ್ಷಣಕ್ಕಾಗಿ ಹಣಕಾಸು ಪೂರೈಕೆ; ವೆಚ್ಚ ಸಾಲದು, ಹೆಚ್ಚಿದ ಸಂಪನ್ಮೂಲ ಅಂತರ, ಬಜೆಟ್‌ನಲ್ಲಿ ಕುಸಿತ, ಖಾಸಗೀಕರಣಕ್ಕೆ ದಾರಿಯಾಗಲಿದೆಯೇ?

ಬೆಂಗಳೂರು; ರಾಜ್ಯದ ಶಾಲೆಗಳಲ್ಲಿ ದಾಖಲಾತಿ ಪ್ರಮಾಣವು ವೇಗವಾಗಿ ಹೆಚ್ಚುತ್ತಿದ್ದರೂ ಸಹ ಶಿಕ್ಷಣದ ಮೇಲಿನ...

Related Articles

Popular Categories

error: Content is protected !!