ಬೆಂಗಳೂರು; ಘನ ತ್ಯಾಜ್ಯವನ್ನು ಸಾಗಾಣಿಕೆ ಕೇಂದ್ರಗಳಿಂದ ನಿಗದಿತ ಸಂಸ್ಕರಣೆ ಕೇಂದ್ರಗಳಿಗೆ ಎಂಎಸ್‌ಡಬ್ಲ್ಯೂ (MSW) ದ್ವಿತೀಯ ಸಾಗಾಣಿಕೆ, ಸಂಸ್ಕರಣೆ ಮತ್ತು ವಿಲೇವಾರಿ ಕಾರ್ಯಗಳಿಗೆ 30 ವರ್ಷದ ಅವಧಿಗೆ ವಾರ್ಷಿಕ ಶೇ.5ರಷ್ಟು ಏರಿಕೆಯಂತೆ 39,437.37 ಕೋಟಿ ರು ಪರಿಷ್ಕೃತ ಮೊತ್ತಕ್ಕೆ ಸಚಿವ ಸಂಪುಟವು ಸದ್ದಿಲ್ಲದೇ ಅನುಮೋದಿಸಿರುವುದು ಇದೀಗ ಬಹಿರಂಗವಾಗಿದೆ.
ವಾರ್ಷಿಕ ಶೇ.5ರಷ್ಟು ಏರಿಕೆಯಂತೆ 30 ವರ್ಷದ ಅವಧಿಗೆ ಗುತ್ತಿಗೆ ಮತ್ತು ಒಬ್ಬರೇ ವೆಂಡರ್‍ಗೆ ಎರಡೂ ಪ್ಯಾಕೇಜ್‌ಗಳನ್ನು ನೀಡಿದರೆ ಅವರೊಬ್ಬರನ್ನೇ ಅವಲಂಬಿಸುವ ಅನಿವಾರ್ಯತೆ, 30 ವರ್ಷಗಳ ಅಂತ್ಯಕ್ಕೆ ಮೂಲ ದರವು ಪ್ರಸ್ತುತ ದರಕ್ಕಿಂತ ಸುಮಾರು ನಾಲ್ಕೂವರೆ ಪಟ್ಟು ಹೆಚ್ಚಳ ಅಂದರೆ ಇದು 430% ಹೆಚ್ಚಳವಾಗಲಿದೆ, ವಾರ್ಷಿಕ ಏರಿಕೆಯನ್ನು ಕೂಡ ವರ್ಷಕ್ಕೆ ಶೇ. 2.5 ಕ್ಕೆ ಮಿತಿಗೊಳಿಸಬೇಕು. ಇದರಿಂದ ದೀರ್ಘಾವಧಿಯ ಒಪ್ಪಂದದಲ್ಲಿ ವರ್ಷದಿಂದ ವರ್ಷಕ್ಕೆ ಆಗುವ ಹೆಚ್ಚಳ ನಿಯಂತ್ರಿತವಾಗಿರುತ್ತದೆ ಎಂದು ಆರ್ಥಿಕ ಇಲಾಖೆಯು ಎಚ್ಚರಿಸಿತ್ತು.
ಆದರೂ ಸಹ ಅದನ್ನು ಬದಿಗೊತ್ತಿ 30 ವರ್ಷದ ಅವಧಿಗೆ ವಾರ್ಷಿಕ ಶೇ.5ರಷ್ಟು ಏರಿಕೆಯಂತೆ 39,437.37 ಕೋಟಿ ರು ಕೋಟಿ ರು ಪರಿಷ್ಕೃತ ಅಂದಾಜು ಮೊತ್ತಕ್ಕೆ ಸದ್ದಿಲ್ಲದೇ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಭೂಮಿ ಪಡೆಯದೇ ಟೆಂಡರ್ ಅಂತಿಮಗೊಳಿಸಿರುವುದು ಮಾನವ ಸಂಪನ್ಮೂಲ ಮತ್ತು ಸಮಯದ ವ್ಯರ್ಥ ಮತ್ತು ಸಾರ್ವಜನಿಕ ಸಂಪನ್ಮೂಲಗಳ ದುರುಪಯೋಗಗೊಳಿಸಲು ಸಚಿವ ಸಂಪುಟವೇ ದಾರಿಮಾಡಿಕೊಟ್ಟಂತಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಉತ್ತರ ಮತ್ತು ದಕ್ಷಿಣ ಪ್ಯಾಕೇಜ್ ಕೈಗೊಳ್ಳುವುದರಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ನಿರ್ದಿಷ್ಟ ಕಂಪನಿಗೆ ಅನುಕೂಲ ಮಾಡಿಕೊಡಲು ಷರತ್ತುಗಳನ್ನೇ ಬದಲಾಯಿಸಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನೇರವಾಗಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಆರ್ಥಿಕ ಇಲಾಖೆಯು ಸಹ ಶಾಸಕ ಯತ್ನಾಳ್ ಅವರು ಬರೆದಿದ್ದ ಪತ್ರವನ್ನೂ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿತ್ತು. ಆದರೆ ಎಲ್ಲವನ್ನೂ ಬದಿಗೊತ್ತಿ 39,437.37 ಕೋಟಿ ರು ಪರಿಷ್ಕೃತ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ ಭಾರೀ ಹಗರಣವನ್ನು ಮೈ ಮೇಲೆ ಎಳೆದುಕೊಂಡಂತಾಗಿದೆ.
ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯು ಮಂಡಿಸಿದ್ದ ಸಮಗ್ರ ಪ್ರಸ್ತಾವದ (ನಅಇ 335 ಎಂಎನ್‌ವೈ 2026- ಪ್ರಕರಣ ಸಂಖ್ಯೆ ಸಿ. 306/2026) ರಹಸ್ಯ ಹಾಳೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ವಿಶೇಷವೆಂದರೇ 2026ರ ಮೇ 22ರಂದು ನಡೆದ ಸಚಿವ ಸಂಪುಟದ ಮುಖ್ಯ ಕಾರ್ಯಸೂಚಿಯಲ್ಲಿ ಈ ವಿಷಯವೇ ಇರಲಿಲ್ಲ. ಸಚಿವ ಸಂಪುಟವು ಮುಕ್ತಾಯಗೊಳ್ಳಲು ಕೆಲವೇ ನಿಮಿಷ ಬಾಕಿ ಇರುವ ಹೊತ್ತಿನಲ್ಲೇ ದಿಢೀರ್ ಎಂದು ಹೆಚ್ಚುವರಿ ಕಾರ್ಯಸೂಚಿಯಲ್ಲಿ ಈ ವಿಷಯವನ್ನು ಸಂಪುಟದ ಮುಂದೆ ಇರಿಸಿದಂತೆ ಮಾಡಿ ಅನುಮೋದನೆ ಪಡೆದುಕೊಂಡಿರುವುದು ತಿಳಿದು ಬಂದಿದೆ. ಹೀಗಾಗಿ ಸಚಿವ ಸಂಪುಟದ ಸದಸ್ಯರಿಗೆ ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯೂ ಇಲ್ಲದಂತಾಗಿದೆ.
ಏನಿದು ಪ್ರಕರಣ?
ಬೆಂಗಳೂರಿನ ಸಮಗ್ರ ಘನತ್ಯಾಜ್ಯ ನಿರ್ವಹಣೆಗಾಗಿ ಹೊರಡಿಸಲಾಗಿದ್ದ ಆದೇಶವನ್ನು 2024ರ ಸೆ. 2ರಂದು ಮಾರ್ಪಡಿಸಿತ್ತು. ಪ್ರಾಥಮಿಕ ಹಂತದ ಸಂಗ್ರಹಣೆ ಮತ್ತು ಸಾಗಾಣಿಕೆಯನ್ನು ಪ್ರತ್ಯೇಕಿಸಿ ಭೂಮಿಯ ಲಭ್ಯತೆಗೆ ಅನುಗುಣವಾಗಿ ನಾಲ್ಕು ಪ್ಯಾಕೇಜ್‌ಗಳ ಬದಲಿಗೆ ಎರಡು ಪ್ಯಾಕೇಜ್‌ಗಳನ್ನಾಗಿ ಮಾರ್ಪಡಿಸಿತ್ತು.

ಇದರ ಪ್ರಕಾರ ಬೆಂಗಳೂರು ಉತ್ತರ ಪ್ಯಾಕೇಜ್ 1ರ ಅಂದಾಜು ಬಂಡವಾಳ 1,912.00 ಕೋಟಿ ರು ವೆಚ್ಚ ಮತ್ತು ಕಾರ್ಯಾಚರಣೆ ಮತ್ತು ನಿರ್ವಹಣೆ ಅಂದಾಜು ಮೊತ್ತ 17,266.00 ಕೋಟಿ ರು ಗಳನ್ನು ರಿಯಾಯಿತಿದಾರರಿಂದ ಭರಿಸಿಕೊಳ್ಳಲಾಗುತ್ತದೆ. ಮಾಸಿಕ ಟಿಪ್ಪಿಂಗ್ ಶುಲ್ಕ ಪಾವತಿಯನ್ನು ಆಧಾರವಾಗಿಟ್ಟುಕೊಂಡು ಪ್ರತಿ ಟನ್‌ಗೆ 2,151 ರು ದರದಂತೆ (ವಾರ್ಷಿಕ ಶೇ.5ರಷ್ಟು ಏರಿಕೆ) 30 ವರ್ಷಗಳ ಅವಧಿಗೆ ರಿಯಾಯಿತಿದಾರರಿಗೆ ಪಾವತಿಸಲು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯಿಂದ ಟೆಂಡರ್ ಕರೆಯಲು ಷರತ್ತಿಗೊಳಪಟ್ಟು ಅನುಮೋದನೆ ನೀಡಿತ್ತು.



ಅಲ್ಲದೇ ಪ್ರಾಥಮಿಕ ಹಂತದ ಸಂಗ್ರಹಣೆ ಮತ್ತು ಸಾಗಾಣಿಕೆಯನ್ನು ಪ್ರತ್ಯೇಕಿಸಿ, ಭೂಮಿಯ ಲಭ್ಯತೆಗೆ ಅನುಗುಣವಾಗಿ ನಾಲ್ಕು ಪ್ಯಾಕೇಜ್‌ಗಳ ಬದಲಿಗೆ ಎರಡು ಪ್ಯಾಕೇಜ್‌ಗಳಲ್ಲಿ ಪ್ಯಾಕೇಜ್-2 (ದಕ್ಷಿಣ) ಅಂದಾಜು ಬಂಡವಾಳ ವೆಚ್ಚದ ಮೊತ್ತವು 1,812.00 ಕೋಟಿ ರು ಎಂದು ಅಂದಾಜಿಸಲಾಗಿತ್ತು. ಹಾಗೆಯೇ ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚವೆಂದು 14,812.00 ಕೋಟಿ ರು ಗಳನ್ನು ರಿಯಾಯಿತಿದಾರರಿಂದ ಭರಿಸಿಕೊಳ್ಳಲಾಗುತ್ತದೆ. ಮಾಸಿಕ ಟಿಪ್ಪಿಂಗ್ ಶುಲ್ಕ ಪಾವತಿಯನ್ನು ಆಧಾರವಾಗಿಟ್ಟುಕೊಂಡು ಪ್ರತಿ ಟನ್‌ಗೆ 1,801.00 ರು ನಂತೆ (ವಾರ್ಷಿಕ ಶೇ.5ರಷ್ಟು ದರ ಏರಿಕೆ ನೀಡಿ) 30 ವರ್ಷ ಅವಧಿಗೆ ರಿಯಾಯಿತಿದಾರರಿಗೆ ಪಾವತಿಸಲು ಟೆಂಡರ್ ಕರೆಯಲು ಷರತ್ತುಗೊಳಪಟ್ಟು ಅನುಮೋದಿಸಿತ್ತು.
ದಕ್ಷಿಣ ಪ್ಯಾಕೇಜ್‌ಗೆ 17,993.33 ಕೋಟಿ ರು – ಶೇ. 19.43 ಹೆಚ್ಚುವರಿ
ಅದರಂತೆ 2025ರ ಜೂನ್ 9ರಂದು ಸರ್ಕಾರದ ಅನುಮೋದನೆ ಪಡೆದು ದಕ್ಷಿಣ ಪ್ಯಾಕೇಜ್‌ಗೆ ಟೆಂಡರ್ ಆಹ್ವಾನಿಸಿತ್ತು. ಆದರೆ ಯಾವುದೇ ಬಿಡ್ ಸ್ವೀಕೃತವಾಗಿರಲಿಲ್ಲ. ಹೀಗಾಗಿ ಎರಡನೇ ಬಾರಿ ಆಹ್ವಾನಿಸಿದ್ದ ಟೆಂಡರ್‍ನಲ್ಲಿ ಮೂರು ಬಿಡ್‌ದಾರರು ಭಾಗವಹಿಸಿದ್ದರು. ಆದರೆ ತಾಂತ್ರಿಕವಾಗಿ ಯಾವೊಬ್ಬ ಬಿಡ್‌ದಾರರು ಅರ್ಹರಾಗಿರಲಿಲ್ಲ. ಹೀಗಾಗಿ 2025ರ ನವೆಂಬರ್ 5ರಂದು ಮೂರನೇ ಬಾರಿಗೆ ಟೆಂಡರ್ ಆಹ್ವಾನಿಸಿತ್ತು.

ಈ ಟೆಂಡರ್‍ನಲ್ಲಿ ಸಂಜೀವ್ ಕುಮಾರ್ (ದೆಹಲಿ ಎಂಎಸ್‌ಡಬ್ಲ್ಯೂ ಸೊಲ್ಯೂಷನ್ಸ್ ), ವೆಂಕಟ ಸಾಂಬಶಿವರಾವ್ ಬೆಲ್ಲಂಕೊಂಡ (ಕೆಪಿಸಿ ಪ್ರಾಜೆಕ್ಟ್ಸ್ ) ಬ್ರಿಜ್ ಗೋಪಾಲ್ ಕನ್ಸ್‌ಟ್ರಕ್ಷನ್ಸ್ ಕಂಪನಿ ಪ್ರೈ ಲಿ, ಭಾಗವಹಿಸಿದ್ದವು. ಅಂದಾಜು ಟಿಪ್ಪಿಂಗ್ ಫೀ ಯನ್ನು ಪ್ರತಿ ಟನ್ ಗೆ 1,801.01 ರು ಎಂದು ನಮೂದಿಸಲಾಗಿತ್ತು. ತಾಂತ್ರಿಕವಾಗಿ ಅರ್ಹರಾಗಿದ್ದ ಬಿಡ್‌ದಾರರ ಆರ್ಥಿಕ ಬಿಡ್‌ನ್ನು 2026ರ ಜನವರಿ 22ರಂದು ತೆರೆದಿತ್ತು.

ಸಂಜೀವ್ ಕುಮಾರ್ (ದೆಹಲಿ ಎಂಎಸ್‌ಡಬ್ಲ್ಯೂ ಸೊಲ್ಯೂಷನ್ಸ್ ) 3,249 ರು, (ಶೇ.80.40ರಷ್ಟು ಹೆಚ್ಚಳ), ವೆಂಕಟ ಸಾಂಬಶಿವರಾವ್ ಬೆಲ್ಲಂಕೊಂಡ (ಕೆಪಿಸಿ ಪ್ರಾಜೆಕ್ಟ್ಸ್ ) 3,502 ರು. (ಶೇ.94.44ರಷ್ಟು) ಬ್ರಿಜ್ ಗೋಪಾಲ್ ಕನ್ಸ್‌ಟ್ರಕ್ಷನ್ಸ್ ಕಂಪನಿ ಪ್ರೈ ಲಿ 4,334 ರು (ಶೇ.140.64) ರು ನಮೂದಿಸಿತ್ತು.



ಇದರ ಪ್ರಕಾರ 3,249 ರು ನಮೂದಿಸಿದ್ದ ಸಂಜೀವ್ ಕುಮಾರ್ (ದೆಹಲಿ ಎಂಎಸ್‌ಡಬ್ಲ್ಯೂ ಸೊಲ್ಯೂಷನ್ಸ್ ) ಎಲ್ 1 ಆಗಿ ಹೊರಹೊಮ್ಮಿತ್ತು. ಈ ಬಿಡ್‌ದಾರರು ನಮೂದಿಸಿದ್ದ ದರವು ಟೆಂಡರ್‍ಗಿಟ್ಟ ಮೊತ್ತಕ್ಕಿಂತ ಶೇ. 77.90ರಷ್ಟು ಹೆಚ್ಚಾಗಿತ್ತು.



ಹೀಗಾಗಿ ದರಗಳನ್ನು ಮರು ಪರಿಶೀಲಿಸಲು 2026ರ ಮಾರ್ಚ್ 6ರಂದು ದರದ ಮರು ಸಂಧಾನ ನಡೆಸಿತ್ತು. ಆಗ ಎಲ್ 1 ಬಿಡ್‌ದಾರರು 2,484 ರು.ಗಳನ್ನು ಮರು ಸಲ್ಲಿಸಿದ್ದರು. ಈ ದರವೂ ಸಹ ಟೆಂಡರ್‍ಗಿಟ್ಟ ಮೊತ್ತಕ್ಕಿಂತ ಶೇ. 32.92ರಷ್ಟು ಹೆಚ್ಚಾಗಿತ್ತು. ಹೀಗಾಗಿ ಪುನಃ ಮೂರನೇ ಬಾರಿ ದರ ಸಂಧಾನ ನಡೆಸಲಾಗಿತ್ತು. ನಂತರ ಪ್ರತಿ ಟನ್‌ಗೆ 2,151 ರು ನಮೂದಿಸಿದ್ದರು. ಇದು ಸಹ ಟೆಂಡರ್‍ಗಿಟ್ಟ ಮೊತ್ತಕ್ಕಿಂತ ಶೇ. 19.43ರಷ್ಟು ಹೆಚ್ಚಾಗಿತ್ತು. ಅಂತಿಮವಾಗಿ 2026ರ ಮಾರ್ಚ್ 27ರಂದು ನಡೆದಿದ್ದ 3ನೇ ತಾಂತ್ರಿಕ ಸಲಹಾ ಸಮಿತಿಯ ನಡವಳಿ ಪ್ರಕಾರ 2,151 ರು ಪರಿಗಣಿಸಬಹುದು ಎಂದು ಶಿಫಾರಸ್ಸು ಮಾಡಲಾಗಿತ್ತು.
ಈ ಸಂಬಂಧ 2026ರ ಏಪ್ರಿಲ್ 2ರಂದು ಬಿಎಸ್‌ಡಬ್ಲ್ಯೂಎಂಎಲ್‌ನ 25ನೇ ಆಡಳಿತ ಮಂಡಳಿ ಸಭೆಯು ನಡೆದಿತ್ತು. ಈ ಸಭೆಯಲ್ಲಿ ಬಿಸಿಜಿ ಸಂಸ್ಥೆ, ತಾಂತ್ರಿಕ ಸಲಹಾ ಸಮಿತಿ ಮತ್ತು ವ್ಯವಸ್ಥಾಪಕ ನಿರ್ದೇಶಕರ ಶಿಫಾರಸ್ಸಿನ ಪ್ರಕಾರ ದರಗಳನ್ನು ಸಮಂಜಸವೆಂದು ಪರಿಗಣಿಸಲಾಗಿತ್ತು. ಅಲ್ಲದೇ ಈ ದರಗಳನ್ನು ಸರ್ಕಾರದ ಅನುಮೋದನೆಗೆ ಸಲ್ಲಿಸಲು ತೀರ್ಮಾನಿಸಿತ್ತು.
ಟೆಂಡರ್‍ನ ಅಂದಾಜಿನಂತೆ ಟಿಪ್ಪಿಂಗ್ ಫೀ ದರವು 1,801 ರು ಗಳನ್ನು ಈ ಹಿಂದೆ ಅಂದಾಜಿಸಿದ ಪ್ರತ್ಯೇಕ ದ್ವಿತೀಯ ಹಂತದ ಸಾಗಾಣಿಕೆ ಹಾಗೂ ಸಂಸ್ಕರಣೆ ಹಾಗೂ ವಿಲೇವಾರಿ ಕಾರ್ಯಗಳ ದರಗಳ ಪ್ರಕಾರ ಹಾಗೂ ಟೆಂಡರ್ ನಿಯಮಾವಳಿಗಳ ಅನ್ವಯ ದ್ವಿತೀಯ ಹಂತದ ಸಾಗಾಣಿಕೆ, ಸಂಸ್ಕರಣೆ ಹಾಗೂ ವಿಲೇವಾರಿ ಕಾರ್ಯಗಳಿಗೆ 50;50ರ ಅನುಪಾತದಲ್ಲಿ ಪಾವತಿಸುವ ನಿಬಂಧನೆ ಅನ್ವಯ 30 ವರ್ಷದ ಅವಧಿಗೆ ವಾರ್ಷಿಕ ಶೇ. 5ರಷ್ಟು ಏರಿಕೆಯಂತೆ ಟಿಪ್ಪಿಂಗ್ ಫೀ ವಿವರಿಸಿತ್ತು.

ಇದರ ಪ್ರಕಾರ ಪ್ರತಿ ಟನ್ ಟಿಪ್ಪಿಂಗ್‌ಗೆ ಫೀ 1,801 ರು ನಂತೆ ಪರಿಗಣಿಸಿದಲ್ಲಿ 30 ವರ್ಷದ ಅವಧಿಗೆ ವಾರ್ಷಿಕ ಶೇ. 5ರಷ್ಟು ಏರಿಕೆಯಂತೆ 15,065.54 ಕೋಟಿ ರು ಆಗಲಿದೆ. ಹಾಲಿ ಮೂರನೇ ಬಾರಿಯ ಟೆಂಡರ್ ದರಗಳ ಪ್ರಕಾರ ಎಲ್ 1 ಗುತ್ತಿಗೆದಾರರು ದರ ಸಂಧಾನ ನಂತರ ನಮೂದಿಸಿದ್ದ ಟಿಪ್ಪಿಂಗ್ ಫೀ ಪ್ರತಿ ಟನ್ ಗೆ 2,151 ರು ನಂತೆ 30 ವರ್ಷದ ಗುತ್ತಿಗೆ ಅವಧಿಗೆ ವಾರ್ಷಿಕ ಶೇ. 5ರಷ್ಟು ಏರಿಕೆಯಂತೆ 17,993.33 ಕೋಟಿ ರು (ಶೇ. 19.43 ಹೆಚ್ಚುವರಿ ಮೊತ್ತ) ಪರಿಷ್ಕೃತ ಮೊತ್ತವಾಗಿತ್ತು.


ಉತ್ತರ ಪ್ಯಾಕೇಜ್‌ಗೆ 21,444.04- ಶೇ. 19.25ರಷ್ಟು ಹೆಚ್ಚುವರಿ ಮೊತ್ತ
ವಿಶೇಷವೆಂದರೇ ದಕ್ಷಿಣ ಪ್ಯಾಕೇಜ್‌ನಲ್ಲಿ ಎಲ್ 1 ಬಿಡ್‌ದಾರರಾಗಿದ್ದ ಸಂಜೀವ್ ಕುಮಾರ್ (ದೆಹಲಿ ಎಂಎಸ್‌ಡಬ್ಲ್ಯೂ ಸೊಲ್ಯೂಷನ್ಸ್ ) ಉತ್ತರ ಪ್ಯಾಕೇಜ್‌ನಲ್ಲಿಯೂ ಎಲ್ 1 ಬಿಡ್‌ದಾರರಾಗಿ ಹೊರಹೊಮ್ಮಿದ್ದರು. ಇಲ್ಲಿಯೂ ಸಹ ಪ್ರತಿ ಟನ್ ಟಿಪ್ಪಿಂಗ್ ಫೀ ಗೆ 2,151 ರು ಪರಿಗಣಿಸಲಾಗಿತ್ತು.

ಇದರ ಪ್ರಕಾರ 30 ವರ್ಷದ ಅವಧಿಗೆ ವಾರ್ಷಿಕ ಶೇ. 5ರಷ್ಟು ಏರಿಕೆಯಂತೆ ಒಟ್ಟಾರೆ 17,982.90 ಕೋಟಿ ರು ಆಗಿತ್ತು. ಮೂರನೇ ಕರೆಗೆ ಟೆಂಡರ್ ದರಗಳ ಪ್ರಕಾರ ಎಲ್ 1 ಗುತ್ತಿಗೆದಾರರು ದರ ಸಂಧಾನ ನಂತರ ನಮೂದಿಸಿದ್ದ ಪ್ರತಿ ಟನ್ ಟಿಪ್ಪಿಂಗ್ ಗೆ 2,565 ರು ನಂತೆ ಒಟ್ಟಾರೆ 21,444.04 ಕೋಟಿ ರು ಪರಿಷ್ಕೃತ ಟೆಂಡರ್ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ಕೋರಿದ್ದರು.



ಈ ಬಗ್ಗೆ ಅಧಿಕಾರಯುಕ್ತ ಸಮಿತಿಯು 21,444.04 ಕೋಟಿ ರು (ಶೇ.19.25 ಹೆಚ್ಚುವರಿ ಮೊತ್ತ) ಪರಷ್ಕೃತ ಮೊತ್ತಕ್ಕೇ ಆಡಳಿತಾತ್ಮಕ ಅನುಮೋದನೆ ಪಡೆಯಲು ಸಚಿವ ಸಂಪುಟದ ಮುಂದೆ ಮಂಡಿಸಲು ತೀರ್ಮಾನಿಸಿತ್ತು.





‘ಇದು ಒಂದು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಯೋಜನೆಯಾಗಿದೆ. ಘನ ತ್ಯಾಜ್ಯ ನಿರ್ವಹಣೆಯು ದೀರ್ಘಾವಧಿಯಲ್ಲಿ ಶಾಶ್ವತ ಪರಿಹಾರ ದೊರಕಿಸಿಕೊಡುವ ಒಂದು ಏಕೈಕ ಮಾರ್ಗವಾಗಿದೆ. ಪ್ರಸ್ತುತ ಪ್ರಸ್ತಾವನೆಯು ಪರಿಷ್ಕೃತ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ಹಾಗೂ ಆರ್ಥಿಕ ಇಲಾಖೆಯ ನಿರ್ಬಂಧದ ಕಾರಣ ಶೇ. 5ಕ್ಕೆ ಮೀರಿದ ಟೆಂಡರ್ ಪ್ರೀಮಿಯಂಗೆ ಅನುಮೋದನೆ ಕೋರಿ ಸಚಿವ ಸಂಪುಟದ ಮುಂದೆ ಮಂಡಿಸಬಹುದಾಗಿದೆ,’ ಎಂದು ಪ್ರಸ್ತಾವನೆಯಲ್ಲಿ ಕೋರಿದೆ. ಇದಕ್ಕೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಅನುಮೋದಿಸಿರುವುದು ತಿಳಿದು ಬಂದಿದೆ.
ಆರ್ಥಿಕ ಇಲಾಖೆಯ ಅಭಿಪ್ರಾಯವೇನು?
ಈ ಪ್ರಸ್ತಾವನೆಗೆ ಅನುಮೋದನೆ ಕೋರಿ ನಗರಾಭಿವೃದ್ದಿ ಇಲಾಖೆಯು ಆರ್ಥಿಕ ಇಲಾಖೆಯನ್ನು ಕೋರಿತ್ತು.

ಈ ಎರಡೂ ಸಂದರ್ಭಗಳಲ್ಲಿ ಟೆಂಡರ್ ಪ್ರೀಮಿಯಂ 19 ಪ್ರತಿಶತವಾಗಿದ್ದರೂ, ಅವಧಿಯಟೆಂಡರ್ ಅವಧಿ 30 ವರ್ಷಗಳಾಗಿದೆ. ಈ ಒಪ್ಪಂದಗಳ ಆರ್ಥಿಕ ಪ್ರಮಾಣವು 30 ವರ್ಷಗಳಲ್ಲಿ ಸುಮಾರು ರೂ.39,437 ಕೋಟಿ (ಟೆಂಡರ್ ದಾಖಲೆಗಳಲ್ಲಿ ಸೇರಿಸಲಾದ ವಾರ್ಷಿಕ 5% ಹೆಚ್ಚಳವನ್ನು ಒಳಗೊಂಡಂತೆ) ಆಗಿದೆ. ಟಿಪ್ಪಿಂಗ್ ಶುಲ್ಕದ ಹೆಚ್ಚಳ ಕಂಡು ಬಂದಿದೆ ಎಂದು ಹೇಳಿತ್ತು.
ದಕ್ಷಿಣ ಪ್ಯಾಕೇಜ್ ಟೆಂಡರ್ ದಾಖಲೆ ಪ್ರಕಾರ ಪ್ರಸ್ತಾಪಿತ ದರ ರೂ.1,801. ಮಾತುಕತೆ ನಂತರದ ಎಲ್ 1 ಬಿಡ್ ದರ ಪ್ರತಿ ಟನ್‌ಗೆ ರೂ.2,151 (19.43% ಹೆಚ್ಚು ಅಥವಾ ಟೆಂಡರ್ ಮೊತ್ತಕ್ಕಿಂತ ರೂ.2867.79 ಹೆಚ್ಚು). ಉತ್ತರ ಪ್ಯಾಕೇಜ್ ಟೆಂಡರ್ ದಾಖಲೆ ಪ್ರಕಾರ ರೂ.2,151 . ಮಾತುಕತೆ ನಂತರದ ಎಲ್ 1 ಬಿಡ್ ದರ ಪ್ರತಿ ಟನ್‌ಗೆ ರೂ.2,565 (19.25% ಹೆಚ್ಚು ಅಥವಾ ಟೆಂಡರ್ ಮೊತ್ತಕ್ಕಿಂತ ರೂ.3461.14 ಹೆಚ್ಚು) ದರಗಳನ್ನು ಪರಿಶೀಲಿಸಿತ್ತು.

‘ಹೀಗಾಗಿ ಉತ್ತರ ಪ್ಯಾಕೇಜ್‌ನಲ್ಲಿ ಸುಮಾರು ರೂ.4127 ಕೋಟಿ ಮತ್ತು ದಕ್ಷಿಣ ಪ್ಯಾಕೇಜ್‌ನಲ್ಲಿ ಸುಮಾರು ರೂ.3400 ಕೋಟಿ ಹೆಚ್ಚುವರಿ ವೆಚ್ಚವಾಗುತ್ತದೆ, ಇದು ಭಾರೀ ಖರ್ಚಾಗಿದೆ,’ ಎಂದು ಹೇಳಿತ್ತು.
ನಾಲ್ಕೂವರೆ ಪಟ್ಟು ಹೆಚ್ಚಳ
ಇದಲ್ಲದೆ ಇದು ವಾರ್ಷಿಕ ಶೇ 5ರಷ್ಟು ಏರಿಕೆ ವ್ಯವಸ್ಥೆಯನ್ನೂ ಒಳಗೊಂಡಿದೆ. ಇದರರ್ಥ, ಆರಂಭದಲ್ಲೇ ಹೆಚ್ಚಿನ ಟೆಂಡರ್ ಪ್ರೀಮಿಯಂ ಜೊತೆಗೆ ಹೆಚ್ಚುವರಿ ವಾರ್ಷಿಕ ಏರಿಕೆಯನ್ನು ಹೊಂದಿರುವ ದೀರ್ಘಾವಧಿಯ ವೆಂಡರ್ ಲಾಕ್-ಇನ್ ಆಗುತ್ತದೆ. ಶೇ. 5ರಷ್ಟು ಚಕ್ರಬಡ್ಡಿ ಆಧಾರದ ಮೇಲೆ 30 ವರ್ಷಗಳ ಅಂತ್ಯಕ್ಕೆ ಮೂಲ ದರವು ಪ್ರಸ್ತುತ ದರಕ್ಕಿಂತ ಸುಮಾರು ನಾಲ್ಕೂವರೆ ಪಟ್ಟು ಹೆಚ್ಚಾಗುತ್ತದೆ. ಅಂದರೆ ಇದು ಶೇ. 430ರಷ್ಟು ಹೆಚ್ಚಳವಾಗುತ್ತದೆ ಎಂಬುದನ್ನು ಗಮನಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಗಮನಸೆಳೆದಿತ್ತು.
ಅಪಾಯವೇನು?
‘ಈ ಎರಡೂ ಪ್ಯಾಕೇಜ್‌ಗಳು ಒಂದೇ ವೆಂಡರ್‌ಗೆ ನೀಡಲ್ಪಟ್ಟಿರುವುದನ್ನೂ ಗಮನಿಸಬೇಕು. ಇದರಿಂದ ಬೆಂಗಳೂರು ನಗರದ ದೊಡ್ಡ ಭಾಗವನ್ನು ದೀರ್ಘಾವಧಿಗೆ ಒಂದೇ ವೆಂಡರ್‌ಗೆ ಅವಲಂಬಿತವಾಗುವ ಅಪಾಯವಿದೆ. ಈ ಆತಂಕಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಪ್ರೀಮಿಯಂ ಒಪ್ಪಿಕೊಳ್ಳಬೇಕಾದರೆ ಟೆಂಡರ್ ಅವಧಿಯನ್ನು ಸುಮಾರು 10 ವರ್ಷಗಳಂತಹ ಸಮಂಜಸ ಅವಧಿಗೆ ಕಡಿತಗೊಳಿಸುವುದು ಸೂಕ್ತವಾಗಿದೆ,’ ಎಂದು ಸಲಹೆ ನೀಡಿತ್ತು.

ಅಲ್ಲದೇ ವಾರ್ಷಿಕ ಏರಿಕೆಯನ್ನು ಕೂಡ ವರ್ಷಕ್ಕೆ ಶೇ. 2.5 ಕ್ಕೆ ಮಿತಿಗೊಳಿಸಬೇಕು, ಇದರಿಂದ ದೀರ್ಘಾವಧಿಯ ಒಪ್ಪಂದದಲ್ಲಿ ವರ್ಷದಿಂದ ವರ್ಷಕ್ಕೆ ಆಗುವ ಹೆಚ್ಚಳ ನಿಯಂತ್ರಿತವಾಗಿರುತ್ತದೆ. 10 ವರ್ಷದ ಅವಧಿಯಲ್ಲಿಯೂ ಗುತ್ತಿಗೆದಾರನು ತನ್ನ ಹೂಡಿಕೆಗಳನ್ನು ಮರುಪಡೆಯಲು ಸಾಧ್ಯವಾಗುತ್ತದೆ ಎಂದೂ ಸಲಹೆ ನೀಡಿತ್ತು.
ಯತ್ನಾಳ್ ಪತ್ರವನ್ನು ಪರಿಶೀಲಿಸಿ
2026ರ ಏಪ್ರಿಲ್ 30ರಂದು ಶಾಸಕರು ಬರೆದ ಪತ್ರದಲ್ಲಿ ಉಲ್ಲೇಖಿಸಿದ ವಿಷಯಗಳನ್ನು ವಿವರವಾಗಿ ಪರಿಶೀಲಿಸುವ ಅಗತ್ಯವಿದೆ. ಬೆಂಗಳೂರಿನ ಘನ ತ್ಯಾಜ್ಯ ನಿರ್ವಹಣೆ (SWM) ಒಂದು ದೊಡ್ಡ ಸವಾಲಾಗಿದೆ. ಅದಕ್ಕೆ ಸೂಕ್ತ ಪರಿಹಾರ ಅಗತ್ಯವೆಂದು ಒಪ್ಪಲಾಗಿದೆ. ಈ ವಿಷಯಗಳನ್ನು ಮುಖ್ಯಮಂತ್ರಿಗಳು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ಸಮ್ಮುಖದಲ್ಲಿ ಚರ್ಚಿಸಿದ್ದಾರೆ. ಮತ್ತು ಟೆಂಡರ್ ಪರಿಶೀಲನೆಗಾಗಿ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮತ್ತು ಅಭಿವೃದ್ದಿ ಆಯುಕ್ತರ ಅಧ್ಯಕ್ಷತೆಯಲ್ಲಿ, ಹೊರಗಿನ ತಜ್ಞರು ಮತ್ತು ಇತರ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸುವುದಾಗಿ ತೀರ್ಮಾನಿಸಲಾಗಿದೆ ಎಂದು ಅಭಿಪ್ರಾಯದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಆದ್ದರಿಂದ ಹಣಕಾಸು ಇಲಾಖೆಯ ಅಭಿಪ್ರಾಯವೇನೆಂದರ ‘ಆರ್ಥಿಕ ಇಲಾಖೆಯು ಗುರುತಿಸಿರುವ ಬಾಕಿ ಇರುವ ಸಮಸ್ಯೆಗಳು ಹಾಗೂ ಶಾಸಕರು ಉಲ್ಲೇಖಿಸಿರುವ ಕೆಲವು ವಿಷಯಗಳು, ಜೊತೆಗೆ ದೀರ್ಘಾವಧಿಯ ಲಾಕ್-ಇನ್ ಅವಧಿಯಿಂದ ಉಂಟಾಗುವ ಭಾರೀ ಹಣಕಾಸು ಪರಿಣಾಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಎಸಿಎಸ್ ಮತ್ತು ಅಧ್ಯಕ್ಷತೆಯಲ್ಲಿ ಹೊರಗಿನ ತಜ್ಞರು ಮತ್ತು ಕೆಲವು ಅಧಿಕಾರಿಗಳನ್ನು ಒಳಗೊಂಡ ಪರಿಣಿತರ ಸಮಿತಿಯನ್ನು ರಚಿಸಬೇಕು. ಈ ವಿಷಯವನ್ನು ಪರಿಶೀಲಿಸಿ, ಮುಂದಿನ ಕ್ರಮಗಳ ಕುರಿತು ಸಚಿವ ಸಂಪುಟಕ್ಕೆ ಸ್ಪಷ್ಟ ವರದಿ ಸಲ್ಲಿಸಬೇಕು,’ ಎಂದು ಸೂಚಿಸಿರುವುದು ತಿಳಿದು ಬಂದಿದೆ.

ಹೆಚ್ಚುವರಿ ಟೆಂಡರ್ ಪ್ರೀಮಿಯಂ ಗೆ ನಗರಾಭಿವೃದ್ದಿ ಇಲಾಖೆಯು ಸಮರ್ಥನೆ ಒದಗಿಸಿತ್ತು. ಈ ಸಮರ್ಥನೆ ಪ್ರಕಾರ ಅಂದಾಜು ಪಟ್ಟಿಯಂತೆ Bio-Methanation ಪ್ರಮಾಣವನ್ನು ಉತ್ತರ ಮತ್ತು ದಕ್ಷಿಣ ಪ್ಯಾಕೇಜ್‌ಗೆ ಕ್ರಮವಾಗಿ 1403 ಟಿಪಿಡಿ ಮತ್ತು 1946 ಟಿಪಿಡಿ ಎಂದು ಹಾಗೂ ಕಾಂಪೋಸ್ಟಿಂಗ್ ಪ್ರಮಾಣವನ್ನು ಉತ್ತರ ಮತ್ತು ದಕ್ಷಿಣ ಪ್ಯಾಕೇಜ್ ಗೆ ಕ್ರಮವಾಗಿ 1068 ಟಿಪಿಡಿ ಮತ್ತು 1481 ಟಿಪಿಡಿ ಎಂದು ಪರಿಗಣಿಸಲಾಗಿದೆ. ಬಿಡ್‌ದಾರರು Bio-Methanation ಪ್ರಮಾಣವನ್ನು ಕಡಿಮಗೊಳಿಸಿ 600 ಟಿಪಿಡಿ ನಮೂದಿಸಿದ್ದಾರೆ ಎಂದು ಸಮರ್ಥಿಸಿಕೊಂಡಿತ್ತು.

ಅಲ್ಲದೇ ಪ್ರಸ್ತುತ ಇಂದೋರ್ ನಗರದಲ್ಲಿ 550 ಟಿಪಿಡಿ Bio-Methanation ಘಟಕ ಸ್ಥಾಪಿಸಲಾಗಿದೆ. ವಾಸ್ತವವಾಗಿ ಆ ಘಟಕದಲ್ಲಿ 350 ಟಿಪಿಡಿ ಹಸಿ ತ್ಯಾಜ್ಯ ಮಾತ್ರ ಸಂಸ್ಕರಣೆಗೊಳಿಸಲಾಗುತ್ತಿದೆ. ಕೈಗಾರಿಕೆ ತಜ್ಞರ ಪ್ರಕಾರ ಗರಿಷ್ಠ 900 ಟಿಪಿಸಿ ಮಾತ್ರ ಕೈಗೊಳ್ಳಬಹುದು. ಇದರಿಂದಾಗಿ ಟಿಪ್ಪಿಂಗ್ ಶುಲ್ಕವು 75ರಿಂದ 250 ರು ವರೆಗೆ ವ್ಯತ್ಯಾಸ ಬರಲಿದೆ ಎಂದು ವಿವರಿಸಿರುವುದು ಗೊತ್ತಾಗಿದೆ.

Bio-Methanation ಘಟಕದ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಪ್ರತಿ ಟನ್‌ಗೆ ಬಿಡ್‌ದಾರರು 2,006 ರು ಎಂದು ನಮೂದಿಸಿದ್ದಾರೆ. ಅಂದಾಜಿನಲ್ಲಿ 333.00 ರು ಎಂದು ಪರಿಗಣಿಸಲಾಗಿದೆ. ಬಿಸಿಜಿ ವರದಿ ಪ್ರಕಾರ ವಾಸ್ತವಿಕವಾಗಿ 750 ರು ಎಂದು ಊಹಿಸಲಾಗಿದೆ. ಇದರಿಂದಾಗಿ ಟಿಪ್ಪಿಂಗ್ ಶುಲ್ಕವು 80 ರು 100 ರುವರೆಗೆ ವ್ಯತ್ಯಾಸ ಬರಲಿದೆ. ಹಾಗೆಯೇ ಬಿಡ್‌ದಾರರು ಸಂಸ್ಕರಣೆಯಲ್ಲಿ ಉತ್ಪತ್ತಿಯಾಗುವ ವಿದ್ಯುತ್‌ನಿಂದ ಬರುವ ಆದಾಯವನ್ನು ಪ್ರತಿ ಯೂನಿಟ್‌ಗೆ 7.08 (ಪ್ರತಿ ವರ್ಷ ಯಾವುದೇ ಏರಿಕೆಯಿಲ್ಲದೇ) ನಮೂದಿಸಿದೆ. ಅಂದಾಜಿನಂತೆ ಪ್ರತಿ ಯೂನಿಟ್‌ಗೆ 7.08 ರು ನಿಗದಿಪಡಿಸಿ ಪ್ರತಿ ವರ್ಷ ಶೇ. 5ರಷ್ಟು ಏರಿಕೆಯಂತೆ ಪರಿಗಣಿಸಲಾಗಿದೆ.
ಬಿಸಿಜಿ ವರದಿ ಪ್ರಕಾರ ವಾಸ್ತವಿಕವಾಗಿ ಸರಾಸರಿ 7.70 ರು (ಪ್ರತಿ ವರ್ಷ ಯಾವುದೇ ಏರಿಕೆ ಇಲ್ಲದೇ) ಊಹಿಸಿದೆ. ಇದರಿಂದಾಗಿ ಟಿಪ್ಪಿಂಗ್ ಶುಲ್ಕವು 40 ರು ನಿಂದ 90ರುವರೆಗೆ ವ್ಯತ್ಯಾಸ ಬರಲಿದೆ ಎಂದು ಹೇಳಿದೆ.

‘ಸುಮಾರು ಸರಾಸರಿ 300 ರುನಷ್ಟು ಟಿಪ್ಪಿಂಗ್ ಶುಲ್ಕವು ವ್ಯತ್ಯಾಸವಿದೆ. ಈ ವ್ಯತ್ಯಾಸ ದರವನ್ನು ಪರಿಗಣಿಸಿದ್ದಲ್ಲಿ ಉತ್ತರ ಪ್ಯಾಕೇಜ್‌ಗೆ ಪರಿಷ್ಕೃತ ದರ 2,451 ಗಳಿಗೆ ಅಂತಿಮ ಬಿಡ್ ಟಿಪ್ಪಿಂಗ್ ಶುಲ್ಕ 2,565 ರು ಗೆ ಹೋಲಿಸಿದಾಗ ಟೆಂಡರ್ ಪ್ರೀಮಿಯಂ ಶೆ. 4.65ರಷ್ಟು ಹೆಚ್ಚಿದೆ. ದಕ್ಷಿಣ ಪ್ಯಾಕೇಜ್‌ಗೆ ಪರಿಷ್ಕೃತ ದರ 2,101 ರುಗಳಿಗೆ ಅಂತಿಮ ಬಿಡ್ ಟಿಪ್ಪಿಂಗ್ ಶುಲ್ಕ 2,151 ರು ಗೆ ಹೋಲಿಸಿದಾಗ ಟೆಂಡರ್ ಪ್ರೀಮಿಯಂ ಶೆ. 2.38ರಷ್ಟು ಹೆಚ್ಚಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಟೆಂಡರ್ ಪ್ರೀಮಿಯಂ ಶೇ. 19.25 ಮತ್ತು ಶೇ. 19.43 ಗಳ ಟೆಂಡರ್‍ಗಳನ್ನು ಪರಿಗಣಿಸಬಹುದು,’ ಎಂದು ಇಲಾಖೆಯು ಅನುಮೋದನೆ ಕೋರಿತ್ತು.
ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದಿದ್ದ ಪತ್ರವನ್ನಾಧರಿಸಿ ‘ದಿ ಫೈಲ್’ 2026ರ ಮೇ 12ರಂದು ವರದಿ ಪ್ರಕಟಿಸಿತ್ತು.




