ಬೆಂಗಳೂರು; ಕಾನೂನುಬಾಹಿರವಾಗಿ ಗಣಿಗಾರಿಕೆ ನಡೆಸುತ್ತಿದೆ ಎಂಬ ಗಂಭೀರ ಆರೋಪಕ್ಕೆ ಗುರಿಯಾಗಿರುವ ಆರ್‍ಬಿಎಸ್‌ಎನ್ ಗಣಿ ಕಂಪನಿಗೆ 64.50 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನನ್ನು ಬೆನಿಫಕೇಷನ್ ಪ್ಲಾಂಟ್ ಉದ್ದೇಶಕ್ಕೆ ಮಂಜೂರು ಮಾಡಲು ಎರಡು ಬಾರಿ ಅಸಮ್ಮತಿ ವ್ಯಕ್ತಪಡಿಸಿದ್ದರೂ ಕಂದಾಯ ಇಲಾಖೆಯು ಮೂರನೇ ಬಾರಿಗೆ ಸಹಮತಿ ಕೋರಿ ಪ್ರಸ್ತಾವನೆ ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಹೊಸಪೇಟೆ ಹೋಬಳಿ ಸಂಕಲಾಪುರ ಗ್ರಾಮದ ಸರ್ವೆ ನಂಬರ್ 185/2ರ ಪೈಕಿ 64.50 ಎಕರೆ ವಿಸ್ತೀರ್ಣ ಜಮೀನನ್ನು 30 ವರ್ಷಕ್ಕೆ ಗುತ್ತಿಗೆ ನೀಡಲು ಆರ್ಥಿಕ ಇಲಾಖೆಯು 2 ಬಾರಿ ಒಪ್ಪಿರಲಿಲ್ಲ. ಆದರೂ ಮೂರನೇ ಬಾರಿಗೆ ಪ್ರಸ್ತಾವನೆ ಸಲ್ಲಿಸಿರುವ ಕಂದಾಯ ಇಲಾಖೆಯು ಆರ್ಥಿಕ ಇಲಾಖೆಯ ಮೇಲೆ ಒತ್ತಡ ಹೇರುತ್ತಿದೆ. ಅಲ್ಲದೇ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ಅನುಮೋದಿಸಿದ್ದಾರೆ.
ಮತ್ತೊಂದು ವಿಶೇಷವೆಂದರೇ ಆರ್‍ಬಿಎಸ್‌ಎಸ್ಎನ್ ಗಣಿ ಗುತ್ತಿಗೆ ಕಂಪನಿಯಿಂದ ಹಾನಿಯಾಗುತ್ತಿದೆ ಎಂದು ವಲಯ ಅರಣ್ಯಾಧಿಕಾರಿಗಳು ವರದಿ ನೀಡಿದ್ದರೇ, ಅರಣ್ಯ ಇಲಾಖೆಯ ಹೊಸಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರು ಇದಕ್ಕೆ ವಿರುದ್ಧವಾದ ವರದಿಯನ್ನು ನೀಡಿದ್ದಾರೆ.
ಅರ್ಥಿಕ ಇಲಾಖೆ ಅಭಿಪ್ರಾಯವೇನು?
ಆಡಳಿತ ಇಲಾಖೆಯಾದ ಕಂದಾಯ ಇಲಾಖೆಯು ಆರ್‍ಬಿಎಸ್‌ಎನ್ ಕಂಪನಿಗೆ 64.50 ಎಕರೆ ಸರ್ಕಾರಿ ಜಮೀನನ್ನು ಆರ್‍ಬಿಎಸ್‌ಎಸ್‌ಎನ್ ಕಂಪನಿಗೆ ಬೆನಿಫಿಕೇಷನ್ ಪ್ಲಾಂಟ್ ಉದ್ದೇಶಕ್ಕಾಗಿ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸಿತ್ತು. ಇದನ್ನು ಆರ್ಥಿಕ ಇಲಾಖೆಯು ಪರಿಶೀಲಿಸಿದೆ. ಈ ಪ್ರಸ್ತಾವಕ್ಕೆ ಆರ್ಥಿಕ ಇಲಾಖೆಯ ಸಹಮತಿ ಇರುವುದಿಲ್ಲ ಎಂದು 2025ರ ಸೆ.27 ಮತ್ತು 2026ರ ಏಪ್ರಿಲ್ 27ರಂದು ಹಿಂಬರಹ ನೀಡಿದ್ದ ಅಭಿಪ್ರಾಯವನ್ನೇ ಪುನರುಚ್ಚರಿಸಲಾಗಿದೆ ಎಂದು ಆರ್ಥಿಕ ಇಲಾಖೆಯು ತನ್ನ ಅಭಿಪ್ರಾಯದಲ್ಲಿ ಮೂರನೇ ಬಾರಿ ಸ್ಪಷ್ಟಪಡಿಸಿದೆ.

ಅಲ್ಲದೇ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಸುತ್ತೋಲೆ (ಸಂಖ್ಯೆ; ಸಸಂಶಾ (ಎಂ) 62/2022 13.04.2022) ಅನ್ವಯ ಮುಖ್ಯಮಂತ್ರಿ ಅವರ ಆದೇಶಕ್ಕಾಗಿ ಮಂಡಿಸಿತ್ತು. ಈ ಪ್ರಕರಣವು ಸಚಿವ ಸಂಪುಟದ ಮುಂದೆ ಮಂಡಿಸಲು ಮುಖ್ಯಮಂತ್ರಿಯವರು ಅನುಮೋದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅದರಂತೆ ಕ್ರಮ ಕೈಗೊಳ್ಳಬೇಕು ಎಂದು ಆಡಳಿತ ಇಲಾಖೆಯಾದ ಕಂದಾಯ ಇಲಾಖೆಗೆ ಅರ್ಥಿಕ ಇಲಾಖೆಯು ತಿಳಿಸಿರುವುದು ಗೊತ್ತಾಗಿದೆ.
ಸದ್ಯ ಈ ಕಡತವನ್ನು (RD/24/LGE/2025-COMPUTER NUMBER 1916390) ಮುಖ್ಯಮಂತ್ರಿ ಅವರ ಅನುಮೋದನೆಗೆ ಮಂಡಿಸಿದೆ.

ಕಾನೂನುಬಾಹಿರ ಗಣಿಗಾರಿಕೆ ಆರೋಪ
ಅರಣ್ಯ ಇಲಾಖೆಯ ನಿರಾಕ್ಷೇಪಣ ಪ್ರಮಾಣ ಪತ್ರ ಪಡೆಯದೇ ಅನಧಿಕೃತವಾಗಿ ಅರಣ್ಯ ಪ್ರದೇಶದಲ್ಲಿ ಹೊಂಡಗಳನ್ನು ನಿರ್ಮಿಸದೇ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಷರತ್ತುಗಳನ್ನು ಪಾಲಿಸದೇ ಕಾನೂನುಬಾಹಿರವಾಗಿ ಗಣಿಗಾರಿಕೆ ನಡೆಸುತ್ತಿದೆ ಎಂದು ಶಬ್ಬೀರ್ ಎಂಬುವರು ದೂರು ಸಲ್ಲಿಸಿದ್ದರು. ಹೀಗಾಗಿ ಈ ಗಣಿ ಗುತ್ತಿಗೆ ಮತ್ತು ಕಾರ್ಖಾನೆಯನ್ನು ಮುಚ್ಚಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದ್ದರು.

ಈ ಸಂಬಂಧ ಹೊಸಪೇಟೆ ಪ್ರಾದೇಶಿಕ ಅರಣ್ಯ ವಲಯದ ವಲಯ ಅರಣ್ಯ ಅಧಿಕಾರಿಗಳು 2025ರ ಮೇ 2ರಂದು ವರದಿ ನೀಡಿದ್ದರು. ವಲಯ ಅರಣ್ಯಾಧಿಕಾರಿಗಳು ಈ ಜಾಗವನ್ನು ಭೌತಿಕವಾಗಿ ತಪಾಸಣೆ ನಡೆಸಿದ್ದರು.
ವರದಿಯಲ್ಲೇನಿದೆ?
ಸಂಕ್ಲಾಪುರ ಗ್ರಾಮದ ಸರ್ವೆ ನಂಬರ್ 178/3 ಸಿ, 182, 185ರಲ್ಲಿರುವ ಆರ್ ಬಿ ಎಸ್ ಎಸ್ ಎನ್ (ರಾಯ್ ಬಹದೂರ್ ಸೇಠ್ ಶ್ರೀರಾಮ್ ನರಸಿಂಗದಾಸ್ ಪ್ರೈ ಲಿಮಿಟೆಡ್) ಕಾರಿಗನೂರು ಗಣಿ ಕಂಪನಿ ಮತ್ತು ವಾಷಿಂಗ್ ಪ್ಲಾಂಟ್‌ನ್ನು ಸುತ್ತುವರೆದು ಜಾಗವನ್ನು ಪರಿಶೀಲಿಸಿದ್ದರು. ಈ ಜಾಗವು ಕೈಗಾರಿಕೆ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಲಾಗಿತ್ತು. ಈ ಆರ್‍ಬಿಎಸ್‌ಎಸ್‌ಎನ್ ಗಣಿ ಗುತ್ತಿಗೆ ಕಂಪನಿಯ ವಾಷಿಂಗ್ ಪ್ಲಾಂಟ್ ಇರುವ ಸ್ಥಳದಲ್ಲಿ ಒಂದು ಕಡೆ ಕಾಯ್ದಿಟ್ಟ ಅರಣ್ಯ ಪ್ರದೇಶದ ಕಾರಿಗನೂರು ಅರಣ್ಯ ಸರ್ವೆ ನಂಬರ್ 192ರಲ್ಲಿ ಬರುತ್ತದೆ. ಆದರೆ ಯಾವುದೇ ರೀತಿಯ ತಡೆಗೋಡೆ ನಿರ್ಮಿಸಿಲ್ಲ ಎಂದು ವಲಯ ಅರಣ್ಯಾಧಿಕಾರಿಗಳು ವರದಿಯಲ್ಲಿ ವಿವರಿಸಿದ್ದರು.

ವಾಷಿಂಗ್ ಪ್ಲಾಂಟ್‌ನಲ್ಲಿರುವ ಕಲುಷಿತ ನೀರು ಕಾಯ್ದಿಟ್ಟ ಅರಣ್ಯ ಪ್ರದೇಶದೊಳಗೆ ( ಕಬ್ಬಿಣದ ಅದಿರನ್ನು ತೊಳೆದಾಗ ಬರುವ ಅನುಪಯುಕ್ತ ಸಿಲ್ಟ್,/ಕೆಸರು/ನೀರು) ಬಸಿ ಹೋಗುವ ಸಾಧ್ಯತೆ ಇದೆ. ತಡೆ ಗೋಡೆ ನಿರ್ಮಿಸದೇ ಇರುವ ಕಾರಣ ಅರಣ್ಯ ಪ್ರದೇಶದ ವನ್ಯ ಪ್ರಾಣಿಗಳು ಹೊಂಡದಲ್ಲಿ ಬೀಳುವ ಸಾಧ್ಯತೆ ಇದೆ. ಈ ಗಣಿ ಗುತ್ತಿಗೆ ಕಂಪನಿಯು ವಾಷಿಂಗ್ ಪ್ಲಾಂಟ್‌ನ್ನು ನಿರ್ಮಿಸಲು ಅರಣ್ಯ ಇಲಾಖೆಯ ನಿರಾಕ್ಷೇಪಣ ಪ್ರಮಾಣ ಪತ್ರ ಹೊಂದಿಲ್ಲ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಈ ಬಗ್ಗೆ ಅರಣ್ಯ ವೀಕ್ಷಕ, ಗಸ್ತು ಅರಣ್ಯ ಪಾಲಕರು ಪಂಚನಾಮೆ ವರದಿಯನ್ನೂ ಸಲ್ಲಿಸಿದ್ದರು.
‘ಪ್ಲಾಂಟ್‌ನಲ್ಲಿ ಕಬ್ಬಿಣದ ಅದಿರನ್ನು ತೊಳೆದಾಗ ಬರುವಂತಹ ಅನುಪಯುಕ್ತ ನೀರು ಮಿಶ್ರಿತ ಸಿಲ್ಟ್‌ನ್ನು ಕಾಯ್ದಿಟ್ಟ ಅರಣ್ಯ ಪ್ರದೇಶದ ಕಾರಿಗನೂರು ಸರ್ವೆ ನಂಬರ್ 192ರ ಪಕ್ಕದಲ್ಲಿ ಹೊಂಡಗಳಣ್ನು ನಿರ್ಮಿಸಿ ಅದರಲ್ಲಿ ಹಾಕಿರುತ್ತಾರೆ. ಈ ಹೊಂಡಗಳಿಗೆ ಯಾವುದೇ ರೀತಿಯಾದ ತಡೆಗೋಡೆ ನಿರ್ಮಿಸದೇ ಇರುವುದರಿಂದ ಕಾಡುಪ್ರಾಣಿಗಳು ಹೊಂಡದಲ್ಲಿ ಬೀಳುವ ಸಾಧ್ಯತೆ ಇದೆ. ಈ ಹೊಂಡದಲ್ಲಿ ಇರುವ ಕಲುಷಿತ ನೀರು ಅರಣ್ಯ ಪ್ರದೇಶದೊಳಗೆ ಬಸಿಯುತ್ತಿರುವುದು ಕಂಡುಬಂದಿತು,’ ಎಂದು ವರದಿಯಲ್ಲಿ ವಿವರಿಸಿದ್ದರು.

ಈ ಗಣಿ ಕಂಪನಿಯ ಸುತ್ತ ಮೂರು ಕಡೆ ಅರಣ್ಯ ಪ್ರದೇಶವಿದೆ. ಒಂದು ಕಡೆ ಜಂಬುನಾಥಹಳ್ಳಿ ಅರಣ್ಯ ಸರ್ವೆ ನಂಬರ್ 115/ಬಿ ರಲ್ಲಿ 2024-24ನೇ ಸಾಲಿನ ಹೆಕ್ಎಟೇರ್ ಕೆಎಂಇಆರ್‍ಸಿ ಯೋಜನೆಯ ಫಿಟ್ ನೆಡುತೋಪಿನಲ್ಲಿರುವ ಗಿಡಗಳ ಬೆಳವಣಿಗೆ ಕುಂಠಿತವಾಗಿದೆ. ಇದಕ್ಕೆ ಈ ಗಣಿ ಗುತ್ತಿಗೆ ಕಂಪನಿಯ ಧೂಳು ಕಾರಣ ಎಂದು ವಲಯ ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿರುವುದು ವರದಿಯಿಂದ ತಿಳಿದು ಬಂದಿದೆ.

ಹಾಗೆಯೇ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ್ದ ಪತ್ರಗಳನ್ನು ಪರಿಶೀಲಿಸಿದ್ದಾರೆ. ಈ ಪತ್ರದಲ್ಲಿರುವ ಕೆಲವು ಷರತ್ತುಗಳನ್ನೂ ಸಹ ಈ ಕಂಪನಿಯು ಪಾಲಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

‘ಆದರೂ ಅರಣ್ಯ ಮತ್ತು ಪರಿಸರ ಅಧಿಕಾರಿಗಳು ಕಂಪನಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಮೋಡ ಕವಿದ ವಾತಾವರಣ ಹಾಗೂ ಕಾರ್ಖಾನೆಯು ಕಾರ್ಯನಿರ್ವಹಿಸದೇ ಇರುವಂತಹ ಸಮಯದಲ್ಲಿ ಪರಿಸರ ಇಲಾಖೆಯ ಪರಿಶೀಲನೆ ಮಾಡಿತ್ತು. ಹೀಗಾಗಿ ವ್ಯತಿರಿಕ್ತವಾದ ವರದಿಗಳನ್ನು ನೀಡಿದ್ದರು. ಅಲ್ಲದೇ ಯಾವುದೇ ಸರ್ವೆ ವರದಿಗಳನ್ನೂ ಸಲ್ಲಿಸಿರಲಿಲ್ಲ.

ಸಂಕ್ಲಾಪುರ ಗ್ರಾಮದ ಸರ್ವೆ ನಂಬರ್ 185ರ ಒಟ್ಟು 355.87 ಎಕರೆ ಪೈಕಿ 188 ಎಕರೆ ಜಮೀನು 40 ವರ್ಷಗಳವರೆಗೆ ಗುತ್ತಿಗೆ ಪಡೆದಿತ್ತು. ಕಳೆದ 39 ವರ್ಷಗಳಿಂದ ಈ ಸರ್ವೆ ನಂಬರ್‍ನ ಒಟ್ಟು ಜಮೀನನ್ನು ಕಾನೂನುಬಾಹಿರವಾಗಿ ಬಳಸಿಕೊಳ್ಳುತ್ತಿದೆ,’ ಎಂದು ಸಾಮಾಜಿಕ ಹೋರಾಟಗಾರ ಶಬ್ಬೀರ್ ಎಂಬುವರು ದೂರಿನಲ್ಲಿ ವಿವರಿಸಿದ್ದರು.

ಆದರೆ ಹೊಸಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು 2025ರ ಜೂನ್ 26ರಂದು ಜಿಲ್ಲಾಧಿಕಾರಿಗೆ ವರದಿ ನೀಡಿದ್ದರು.

ಗಣಿ ಗುತ್ತಿಗೆ ಕಂಪನಿಯು ವಾಷಿಂಗ್ ಪ್ಲಾಂಟ್ ನಿರ್ಮಿಸಿರುವ ಸ್ಥಳದ ಸರ್ವೆ ನಂಬರ್‍ಗಳು ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿಲ್ಲ. ಪ್ರಸ್ತುತ ವಾಷಿಂಗ್ ಪ್ಲಾಂಟ್‌ನ ತ್ಯಾಜ್ಯವನ್ನು ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ಹೊಂಡಗಳನ್ನು ನಿರ್ಮಿಸಿ ಕಾರ್ಖಾನೆಯ ತ್ಯಾಜ್ಯವನ್ನು ಬಿಟ್ಟಿಲ್ಲ. ಹಾಗೂ ಈ ತ್ಯಾಜ್ಯವು ಅರಣ್ಯ ಪ್ರದೇಶದೊಳಗೆ ಬಂದಿಲ್ಲ. ಹಾಗೂ ಕಂಪನಿಯವರಿಗೆ ಕಲುಷಿತ ನೀರು ಕಾಯ್ದಿಟ್ಟ ಅರಣ್ಯ ಪ್ರದೇಶದೊಳಗೆ ಬಸಿದು ಹೋಗುವ ಸಾಧ್ಯತೆ ಇರುವುದರಿಂದ ಆ ಸ್ಥಳದಲ್ಲಿ ತಡೆಗೋಡೆ ನಿರ್ಮಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

ಹಾಗೆಯೇ ಆರ್‍ಬಿಎಸ್‌ಎಸ್‌ಎನ್ ಗಣಿ ಗುತ್ತಿಗೆ ಕಂಪನಿಗೆ ಅದಿರು ಸಾಗಾಣಿಕೆ ಸಮಯದಲ್ಲಿ ರಸ್ತೆಯುದ್ದಕ್ಕೂ ನೀರನ್ನು ಹೊಡೆದು ಧೂಳನ್ನು ನಿಯಂತ್ರಿಸಬೇಕು. ಹಾಗೂ ಈ ಪ್ರದೇಶದಲ್ಲಿ ಗಾಳಿಯ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಎಂದು ಅರಣ್ಯಾಧಿಕಾರಿಗೆ ಸೂಚಿಸಿರುವುದು ತಿಳಿದು ಬಂದಿದೆ.




