ಬೆಂಗಳೂರು; ಸುಲಭ್ ಶೌಚಾಲಯ ಮತ್ತು ಸಾರ್ವಜನಿಕ ಮೂತ್ರಾಲಯ ನಿರ್ವಹಣೆಗೆ ಸಂಬಂಧಿಸಿದಂತೆ ಗುತ್ತಿಗೆದಾರರು ಜಮೆ ಮಾಡಿರುವ ಶುಲ್ಕದ ಹಣದ ವಿವರಗಳನ್ನು ಬೃಹತ್ ಬೆಂಗಳೂರು ಮಹಾನಗರಪಾಲಿಕೆಯು ಲೆಕ್ಕ ಪರಿಶೋಧಕರಿಗೇ ನೀಡಿಲ್ಲ. ಸಾರ್ವಜನಿಕರಿಂದ ಹಣ ವಸೂಲಿ ಮಾಡಿರುವ ಗುತ್ತಿಗೆದಾರರು ಬಿಬಿಎಂಪಿಗೆ ಜಮೆ ಮಾಡಿದ್ದಾರೆಯೇ ಇಲ್ಲವೇ ಎಂಬ ಮಾಹಿತಿಯೂ ಲೆಕ್ಕ ಪರಿಶೋಧಕರಿಗೆ ಇಲ್ಲವಾಗಿದೆ.
2023-24ನೇ ಸಾಲಿನ ವಾರ್ಷಿಕ ಲೆಕ್ಕ ಪರಿಶೋಧನೆಯಲ್ಲಿ ಸುಲಭ್ ಶೌಚಾಲಯ ನಿರ್ವಹಣೆ, ಸಾರ್ವಜನಿಕರಿಂದ ವಸೂಲಿ ಮಾಡಿರುವ ಹಣವನ್ನು ಜಮೆ ಮಾಡದೇ ಇರುವ ಪ್ರಕರಣಗಳ ಕುರಿತು ವಿವರಿಸಿದೆ.
ಈ ವರದಿಯ ಪ್ರತಿಯು ‘ದಿ ಫೈಲ್’ ಗೆ ಲಭ್ಯವಾಗಿದೆ.

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ನಗರಾಭಿವೃದ್ದಿ ಖಾತೆಯನ್ನು ವಹಿಸಿಕೊಂಡಿದ್ದ ಅವಧಿಯಲ್ಲಿ 2023-24ನೇ ಸಾಲಿನವರೆಗೂ ತುಷಾರ್ ಗಿರಿನಾಥ್ ಅವರು ಬಿಬಿಎಂಪಿ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು.
ಸರ್ವಜ್ಞನಗರ ಘನ ತ್ಯಾಜ್ಯ ನಿರ್ವಹಣೆ ವಿಭಾಗದ ಕಚೇರಿ ವ್ಯಾಪ್ತಿಯಲ್ಲಿ ಕಾಚರಕನಹಳ್ಳಿ ವಾರ್ಡ್, ಕಮ್ಮನಹಳ್ಳಿ ಮುಖ್ಯ ರಸ್ತೆ, ಚರ್ಚ್ ಪಕ್ಕದಲ್ಲಿರುವ ಬಿಬಿಎಂಪಿ ಸುಲಭ್ ಶೌಚಾಲಯವನ್ನು ನಿರ್ವಹಣೆ ಮಾಡಲಾಗುತ್ತಿದೆ. ಇದನ್ನು ಉತ್ತರ ಕುಮಾರ ದುಬೆ ಎಂಬಾತನಿಗೆ ಗುತ್ತಿಗೆ ನೀಡಿದೆ. ಈ ಶೌಚಾಲಯವು ಬಿಬಿಎಂಪಿ ಆಸ್ತಿಯಾಗಿದೆ. ಈ ಶೌಚಾಲಯವನ್ನು ಉಪಯೋಗಿಸುತ್ತಿರುವ ಸಾರ್ವಜನಿಕರಿಂದ ಶುಲ್ಕದ ರೂಪದಲ್ಲಿ ತಿಂಗಳಿಗೆ 5,000 ರು ನಂತೆ ವಾರ್ಷಿಕವಾಗಿ ಅಂದರೇ 12 ತಿಂಗಳಿಗೆ 60,000 ರು.ಗಳನ್ನು ಬಿಬಿಎಂಪಿ ಆಯುಕ್ತರ ಖಾತೆಗೆ ಡಿಡಿ ಮೂಲಕ ಜಮೆ ಮಾಡಬೇಕು ಎಂದು ಆದೇಶವನ್ನು ಹೊರಡಿಸಿತ್ತು.
ಅದೇ ರೀತಿ ಶಾಂಪುರ ಮುಖ್ಯ ರಸ್ತೆ ಮತ್ತು ವೀರಣ್ಣನ ಪಾಳ್ಯದ ಫ್ಲೈ ಓವರ್ ಕೆಳಭಾಗದಲ್ಲಿ , ಪೆಟ್ರೋಲ್ ಬಂಕ್ ಎದುರಿನ ಶೌಚಾಲಯ, ಸ್ನಾನದ ಗೃಹ, ಮೂತ್ರಾಲಯವನ್ನು ಸಾರ್ವಜನಿಕರು ಉಪಯೋಗಿಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರು ನಿಗದಿಪಡಿಸಿದ ಶುಲ್ಕವನ್ನು ಪಾವತಿಸುತ್ತಿದ್ದಾರೆ. ಇದನ್ನು ಜನ ಕಲ್ಯಾಣ ಫೌಂಡೇಷನ್ ಎಂಬುವರಿಗೆ ಗುತ್ತಿಗೆ ನೀಡಿದೆ. ಬಿಬಿಎಂಪಿಯ ಈ ಆಸ್ತಿಯನ್ನು ಉಪಯೋಗಿಸುತ್ತಿರುವ ಜನ ಕಲ್ಯಾಣ ಫೌಂಡೇಷನ್, ಮಾಸಿಕ 1,000 ರು ನೆಲಬಾಡಿಗೆ ರೂಪದಲ್ಲಿ ವಾರ್ಷಿಕವಾಗಿ 12,000 ರು.ಗಳನ್ನು ಬಿಬಿಎಂಪಿ ಆಯುಕ್ತರ ಖಾತೆಗೆ ಡಿಡಿ ಮೂಲಕ ಜಮೆ ಮಾಡಬೇಕು ಎಂದು 2019ರಲ್ಲೇ ಆದೇಶಿಸಿತ್ತು.

ಉತ್ತರಕುಮಾರ ದುಬೆ ಎಂಬಾತ 60,000 ರು ಮತ್ತು ಜನ ಕಲ್ಯಾಣ ಫೌಂಡೇಷನ್ 12,000 ರು. ಸೇರಿ ಒಟ್ಟಾರೆ 72,000 ರು.ಗಳನ್ನು ವಸೂಲು ಮಾಡಿ ಬಿಬಿಎಂಪಿ ಆಯುಕ್ತರ ಖಾತೆಗೆ ಜಮೆ ಮಾಡಬೇಕು. ಆದರೆ ಬಿಬಿಎಂಪಿಯು ಆಯುಕ್ತರ ಖಾತೆಗೆ ಈ ಗುತ್ತಿಗೆದಾರರು ಶುಲ್ಕದ ಹಣವನ್ನು ಪಾವತಿಸಿದ್ದಾರೆಯೇ ಎಂಬ ಬಗ್ಗೆ ಖಚಿತಪಡಿಸಿಕೊಂಡಿಲ್ಲ. ಲೆಕ್ಕ ಪರಿಶೋಧಕರಿಗೂ ಈ ಸಂಬಂಧ ಮಾಹಿತಿಯನ್ನು ನೀಡಿಲ್ಲ. ಅಲ್ಲದೆ ಬ್ಯಾಂಕ್ ಖಾತೆಯ ಪಾಸ್ ಶೀಟ್‌ಗಳನ್ನು ಲೆಕ್ಕ ಪರಿಶೋಧಕರಿಗೆ ಒದಗಿಸಿಲ್ಲ ಎಂದು ಮುಖ್ಯ ಲೆಕ್ಕ ಪರಿಶೋಧಕರ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಅದೇ ರೀತಿ ರಾಜಾಜಿನಗರದಲ್ಲಿರುವ ಘನ ತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿಯೂ ಇಂತಹದ್ದೇ ಮತ್ತೊಂದು ಪ್ರಕರಣವನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ. ಕಿರಿಯ ಆರೋಗ್ಯ ನಿರೀಕ್ಷಕರು 2023-24ನೇ ಸಾಲಿನಲ್ಲಿ ವಿವಿಧ ದಂಡಗಳ ಮೂಲಕ ವಸೂಲು ಮಾಡಿರುವ ಮೊತ್ತದ ವಿವರಗಳನ್ನು ಲೆಕ್ಕ ಪರಿಶೋಧಕರು ಪರಿಶೀಲಿಸಿದ್ದರು. ದಂಡದ ಮೊತ್ತವನ್ನು ನಿರ್ದಿಷ್ಟ ಉಲ್ಲಂಘಿತ ಪ್ರಕರಣಗಳಿಂದ ಇಂತಿಷ್ಟೆ ವಸೂಲಿ ಮಾಡಬೇಕು ಎಂದು ಸಕ್ಷಮ ಪ್ರಾಧಿಕಾರವು ಅನುಸರಿಸಿದ ಮಾನದಂಡವಾಗಲೀ, ಶುಲ್ಕ ನಿಗದಿಗೊಳಿಸಿರುವುದಕ್ಕೆ ಆಗಲಿ ಯಾವುದೇ ದರ ಪಟ್ಟಿಯನ್ನು ಹೊರಡಿಸಿಲ್ಲ. ಅಲ್ಲದೇ ಈ ಕಿರಿಯ ಆರೋಗ್ಯ ನಿರೀಕ್ಷಕರುಗಳಿಗೆ ತಮ್ಮ ಕರ್ತವ್ಯದಲ್ಲಿ ಅನುಸರಿಸಬೇಕಾದ ಕರ್ತವ್ಯಗಳ ಬಗ್ಗೆಯೂ ಯಾವುದೇ ಜ್ಞಾನ ಹೊಂದಿಲ್ಲ ಎಂದು ಲೆಕ್ಕ ಪರಿಶೋಧಕರು ತಮ್ಮ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
‘ಈ ಸಂಬಂಧ ಸಕ್ಷಮ ಅಧಿಕಾರಿಗಳು ಸಹ ಯಾವುದೇ ಸುತ್ತೋಲೆ, ತರಬೇತಿ ನೀಡಿದ ನಿರ್ದೇಶನ ಸಹ ಇರುವುದಿಲ್ಲ. ಇವುಗಳ ಅನುಪಸ್ಥಿತಿಯಲ್ಲಿ ದಂಡದ ನಿಖರತೆ ಬಗ್ಗೆ ಲೆಕ್ಕ ಪರಿಶೋಧನೆಗೆ ಸ್ಪಷ್ಟ ಚಿತ್ರಣ ಲಭ್ಯವಿಲ್ಲ,’ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ದಂಡದ ಮೊತ್ತಗಳನ್ನು ಇಡೀ ವರ್ಷದಲ್ಲಿ ವಸೂಲು ಮಾಡಲಾಗಿದೆ. ಇದು ತೀರಾ ಕನಿಷ್ಟ ಮೊತ್ತವಾಗಿದೆ. ಅಲ್ಲದೇ ವಸೂಲಾದ ಮೊತ್ತವನ್ನು ಆಗಿದ್ದಾಂಗ್ಗೆ ನಿಗದಿತ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ನಿಗದಿತ ಅವಧಿಯೊಳಗೆ ಜಮೆ ಮಾಡದೇ ಇರುವ ಬಗ್ಗೆ ಲೆಕ್ಕ ಪರಿಶೋಧಕರು ಆಕ್ಷೇಪಿಸಿದ್ದರು. ಆ ನಂತರ ದೀರ್ಘ ಕಾಲದ ವಿಳಂಬದ ನಂತರ ಜಮೆ ಮಾಡಿರುವುದನ್ನು ಪತ್ತೆ ಹಚ್ದಿದ್ದಾರೆ.
ಈ ರೀತಿ ವಸೂಲು ಮಾಡಲಾದ ಮೊತ್ತ ಮತ್ತು ಜಮೆಯಾಗಿರುವ ಮೊತ್ತವು ಹೊಂದಾಣಿಕೆಯಾಗಿದೆಯೇ ಇಲ್ಲವೇ ಎಂಬ ಬಗ್ಗೆ ಲೆಕ್ಕ ಪರಿಶೋಧಕರೂ ಸಹ ಖಾತ್ರಿಪಡಿಸಿಕೊಂಡಿಲ್ಲ. ಏಕೆಂದರೇ ಲೆಕ್ಕ ಪರಿಶೋಧಕರಿಗೆ ಬ್ಯಾಂಕ್ ಪುಸ್ತಕ, ಲೆಕ್ಕ ಸಮನ್ವಯದ ವಿವರ, ಬ್ಯಾಂಕ್ ಚಲನ್ ಮತ್ತು ಖಾತೆಗೆ ಮೊತ್ತ ಹೊಂದಾಣಿಕೆಯಾಗಿರುವ ಬಗ್ಗೆ ಯಾವುದೇ ವಿವರಗಳನ್ನು ಲೆಕ್ಕ ಪರಿಶೋಧಕರಿಗೆ ಒದಗಿಸಿಲ್ಲ. ಹೀಗಾಗಿ ಲೆಕ್ಕ ಪರಿಶೋಧಕರು 1,74,600 ರು.ಗಳನ್ನು ಆಕ್ಷೇಪಣೆಯಲ್ಲಿರಿಸಿರುವುದು ವರದಿಯಿಂದ ತಿಳಿದು ಬಂದಿದೆ.

ಈ ಕಿರಿಯ ಆರೋಗ್ಯ ನಿರೀಕ್ಷಕರುಗಳಿಗೆ ಪಾಲಿಕೆಯು 2023-24ರಲ್ಲಿ ಪಿಒಎಸ್ ಯಂತ್ರಗಳನ್ನು ವಿತರಿಸಿತ್ತು. ಈ ಸಾಲಿನಲ್ಲಿ ಸಾರ್ವಜನಿಕರಿಂದ ವಿವಿಧ ಘನತ್ಯಾಜ್ಯಗಳಿಗೆ ಸಂಬಂಧಿಸಿದಂತೆ ಉಲ್ಲಂಘನೆಗಳಿಗೆ ದಂಡ ವಿಧಿಸಿ ಹಣ ವಸೂಲು ಮಾಡಿದ್ದರು. ಆದರೆ ಇಂತಿಷ್ಟೇ ದಂಡ ವಸೂಲು ಮಾಡಬೇಕು ಎಂದು ಸಕ್ಷಮ ಪ್ರಾಧಿಕಾರವು ಯಾವುದೇ ಮಾನದಂಡವನ್ನು ವಿಧಿಸಿಲ್ಲ. ಅಲ್ಲದೇ ಶುಲ್ಕ ನಿಗದಿಗೊಳಿಸಿರುವ ಸಂಬಂಧ ದರ ಪಟ್ಟಿಯನ್ನು ನೀಡಿಲ್ಲ. ಅಲ್ಲದೇ ಈ ಸಂಬಂಧ ಯಾವುದೇ ಸುತ್ತೋಲೆ, ಆದೇಶವನ್ನೂ ಹೊರಡಿಸಿಲ್ಲ. ಆದರೂ ಇಡೀ ವರ್ಷ ದಂಡವನ್ನು ವಸೂಲು ಮಾಡಲಾಗಿದೆ.
ಈ ಮೊತ್ತವು ತೀರಾ ಕನಿಷ್ಟದಿಂದ ಕೂಡಿದೆ. ಹೀಗೆ ವಸೂಲಿ ಮಾಡಿರುವ ಮೊತ್ತವನ್ನು ಬಿಬಿಎಂಪಿಯ ನಿಗದಿತ ಬ್ಯಾಂಕ್ ಖಾತೆಗೆ ಜಮೆ ಮಾಡಿಲ್ಲ. ಲೆಕ್ಕ ಪರಿಶೋಧಕರು ಆಕ್ಷೇಪಿಸಿದ ನಂತರ ಈ ಮೊತ್ತವನ್ನು ದೀರ್ಘ ಕಾಲದ ವಿಳಂಬದ ನಂತರ ಜಮೆ ಮಾಡಲಾಗಿತ್ತು. ಈ ರೀತಿ ವಸೂಲು ಮಾಡಿರುವ ದಂಡದ ಮೊತ್ತ ಮತ್ತು ಇದನ್ನು ಜಮೆ ಮಾಡಿರುವುದು, ಬ್ಯಾಂಕ್‌ನ ಲೆಕ್ಕಕ್ಕೆ ಹೊಂದಾಣಿಕೆ ಅಥವಾ ಸಮನ್ವಯ ಮಾಡಿರುವ ಕುರಿತೂ ಲೆಕ್ಕ ಪರಿಶೋಧಕರಿಗೆ ಯಾವುದೇ ಮಾಹಿತಿಯನ್ನೂ ಒದಗಿಸಿಲ್ಲ. ಹೀಗಾಗಿ 1,37,100 ರು.ಗಳನ್ನು ಲೆಕ್ಕ ಪರಿಶೋಧಕರು ಆಕ್ಷೇಪಿಸಿರುವುದು ವರದಿಯಿಂದ ಗೊತ್ತಾಗಿದೆ.
ಚಾಮರಾಜಪೇಟೆ ವ್ಯಾಪ್ತಿಯ ಜಾಲಿ ಮೊಹಲ್ಲಾದಲ್ಲಿ ಪಾವತಿಸಿ ಉಪಯೋಗಿಸುವ ಸುಲಭ್ ಶೌಚಾಲಯ ನಿರ್ವಹಣೆಗೆ ಪಾವತಿಸಬೇಕಾದ ಮೊತ್ತವನ್ನೇ ಪಾವತಿಸಿರಲಿಲ್ಲ. ಈ ಸುಲಭ್ ಶೌಚಾಲಯವನ್ನು ದಿ ಹನಿ ಕಂಟ್ರೋಲರ್ ಸುಲಭ್ ಇಂಟರ್ ನ್ಯಾಷನಲ್ ಸೋಷಿಯಲ್ ಸರ್ವಿಸ್ ಆರ್ಗನೈಜೇಷನ್ ಗೆ ಗುತ್ತಿಗೆ ನೀಡಿತ್ತು. ಈ ಸಂಸ್ಥೆಯು ಸಾರ್ವಜನಿಕರಿಂದ ಶುಲ್ಕವನ್ನು ವಸೂಲು ಮಾಡಿತ್ತು. ಪ್ರತಿ ತಿಂಗಳು 5,000 ರು ನಂತೆ ಬಿಬಿಎಂಪಿ ಆಯುಕ್ತರ ಖಾತೆಗೆ ಜಮೆ ಮಾಡಬೇಕಿತ್ತು.

ಆದರೆ ನವೆಂಬರ್ 2023ರಿಂದ ಮಾರ್ಚ್ 2024ವರೆಗೆ 5 ತಿಂಗಳ ಒಟ್ಟು ಮೊತ್ತ 25,000 ರು.ಗಳನ್ನು ಬಿಬಿಎಂಪಿ ಆಯುಕ್ತರ ಖಾತೆಗೆ ಜಮೆ ಮಾಡಲಾಗಿದೆಯೇ ಇಲ್ಲವೇ ಎಂಬ ಬಗ್ಗೆ ಲೆಕ್ಕ ಪರಿಶೋಧಕರು ಖಾತ್ರಿಪಡಿಸಿಕೊಂಡಿಲ್ಲ. ಏಕೆಂದರೇ ಸುಲಭ್ ಇಂಟರ್ ನ್ಯಾಷನಲ್ ಅವರು ಡಿಡಿಗಳನ್ನು ಬಿಬಿಎಂಪಿ ಆಯುಕ್ತರ ಖಾತೆಗೆ ಜಮೆ ಮಾಡಿರುವ ಬಗ್ಗೆ ಲೆಕ್ಕ ಪರಿಶೋಧಕರಿಗೆ ಯಾವುದೇ ವಿವರಣೆಗಳನ್ನು ನೀಡಿಲ್ಲ. ಹೀಗಾಗಿ 25,000 ರು ಗಳನ್ನು ಲೆಕ್ಕ ಪರಿಶೋಧಕರು ಆಕ್ಷೇಪಣೆಯಲ್ಲಿರಿಸಿರುವುದು ತಿಳಿದು ಬಂದಿದೆ.




