Thursday | August 27, 2026 |

ವರ್ಗಾವಣೆ ರದ್ದುಗೊಳಿಸಲು ತಲಾ 20 ಲಕ್ಷಕ್ಕೆ ಬೇಡಿಕೆ ಆರೋಪ; ಟೆಂಡರ್ ಕಮಿಷನ್ ಆಪಾದನೆ ಬೆನ್ನಲ್ಲೇ ಕರೀಗೌಡರ ವಿರುದ್ಧ ದೂರು

ಬೆಂಗಳೂರು; ಒಂದೆಡೆ ಮಂಜೂರಾಗಿರುವ ಹುದ್ದೆಗಳನ್ನು  ಭರ್ತಿ ಮಾಡುತ್ತಿಲ್ಲ, ಶೇ. 40ರಷ್ಟು ಹುದ್ದೆಗಳು ಖಾಲಿ ಇದ್ದರೂ ನೇಮಕ ಪ್ರಕ್ರಿಯೆ ನಡೆಸಿಲ್ಲ. ವಿವಿಧ ವೃಂದದ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಆಗಿರುವ ವಿಳಂಬವನ್ನೂ ತಪ್ಪಿಸಿಲ್ಲ. ಇದರಿಂದಾಗಿ ಆಡಳಿತಾತ್ಮಕವಾಗಿ ಮತ್ತು ಅಭಿವೃದ್ಧಿ ಕೆಲಸಗಳು ಕುಂಠಿತಗೊಳ್ಳುವುದೂ ತಪ್ಪಿಲ್ಲ.  ಈ ಎಲ್ಲಾ ಬೆಳವಣಿಗೆಗಳ ಮಧ್ಯೆಯೆ  ವರ್ಗಾವಣೆಯಾಗಿರುವ ಪರಿಸರ ವಿಭಾಗದ ಇಂಜಿನಿಯರ್‍‌ಗಳನ್ನು  ಹಾಲಿ ಸ್ಥಳದಲ್ಲಿಯೇ ಮುಂದುದವರೆಸಲು ತಲಾ 20 ಲಕ್ಷ ರು ನಷ್ಟು ಲಂಚಕ್ಕೆ  ಬೇಡಿಕೆ ಇಡುತ್ತಿರುವ ಪ್ರಕರಣವು ಬಹಿರಂಗವಾಗಿದೆ.

ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಐಎಎಸ್‌ ಕರೀಗೌಡ ಮತ್ತು ಮುಖ್ಯ ಪ್ರಧಾನ ವ್ಯವಸ್ಥಾಪಕ ಎಸ್‌ ವಿ ರಾಜೇಶ್‌ ಅವರ ವಿರುದ್ಧ  ಇದೇ ಪ್ರಕರಣದಲ್ಲಿ 20 ಲಕ್ಷ ರು ಲಂಚಕ್ಕೆ ಬೇಡಿಕೆ ಇರಿಸಿರುವ ಗುರುತರವಾದ ಆರೋಪವು ಕೇಳಿ ಬಂದಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಲಿಖಿತ ದೂರೊಂದು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಕೆಯಾಗಿದೆ.

ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತವು ಆಹ್ವಾನಿಸಿದ್ದ  ಟೆಂಡರ್‍‌ನ್ನು ಅಂತಿಮಗೊಳಿಸಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಐಎಎಸ್‌ ಕರೀಗೌಡ ಅವರು ಶೇ.15ರಷ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಕುರಿತು ಸಲ್ಲಿಕೆಯಾಗಿದ್ದ ದೂರಿನ ಕುರಿತು ನಿನ್ನೆಯಷ್ಟೇ ಹೈಕೋರ್ಟ್‌ನಲ್ಲಿ  ವಿಚಾರಣೆ ನಡೆದಿದೆ. ಇಂದೂ ಸಹ ಇದೇ ದೂರಿನ ಕುರಿತು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಈ ಬೆಳವಣಿಗೆ ಬೆನ್ನಲ್ಲೇ ಇದೇ ಐಎಎಸ್‌ ಕರೀಗೌಡ ಅವರ ವಿರುದ್ಧ  27 ಮಂದಿ ಪರಿಸರ ಇಂಜಿನಿಯರ್‍‌ಗಳನ್ನು ಬಿಎಸ್‌ಡಬ್ಲ್ಯೂಎಂಎಲ್‌ ನಲ್ಲೇ ಉಳಿಸಿಕೊಳ್ಳಲು ತಲಾ 20 ಲಕ್ಷ ರುಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಮುಖ್ಯಮಂತ್ರಿಗೆ ಸಲ್ಲಿಕೆಯಾಗಿರುವ ದೂರು ಮುನ್ನೆಲೆಗೆ ಬಂದಿದೆ.

ಬಿಬಿಎಂಪಿಯ ಆಡಳಿತ ಪಕ್ಷದ ಮಾಜಿ ನಾಯಕರೂ ಆಗಿರುವ ಬಿಜೆಪಿಯ ರಮೇಶ್‌ ಎನ್ ಆರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 2026ರ ಏಪ್ರಿಲ್‌ 24ರಂದು ಲಿಖಿತ ದೂರು ಸಲ್ಲಿಸಿದ್ದಾರೆ. ಈ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಭರ್ತಿಯಾಗದ ಹುದ್ದೆಗಳು- ಅಭಿವೃದ್ಧಿ ಕುಂಠಿತ

ರಾಜ್ಯದ ಒಟ್ಟು 325 ನಗರ ಸ್ಥಳೀಯ ಸಂಸ್ಥೆಗಳಿಗೆ ಮಂಜೂರಾಗಿರುವ ಖಾಯಂ ಹುದ್ದೆಗಳ ಪೈಕಿ ಎಲ್ಲಾ ವೃಂದಗಳಲ್ಲಿಯೂ ಶೇ.40ರಷ್ಟು ಹುದ್ದೆಗಳು ಖಾಲಿ ಇವೆ. ಮತ್ತು ಇಲಾಖೆಯಲ್ಲಿ ವಿವಿಧ ವೃಂದದ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯೂ ಸಹ ವಿಳಂಬವಾಗುತ್ತಿದೆ. ಹೀಗಾಗಿ ಆಡಳಿತಾತ್ಮಕವಾಗಿ ಮತ್ತು ಅಭಿವೃದ್ದಿ ಕೆಲಸಗಳು ಕುಂಠಿತವಾಗುತ್ತಿದೆ ಎಂದು ಸ್ವತಃ ನಗರಾಭಿವೃದ್ಧಿ ಇಲಾಖೆಯೇ ಒಪ್ಪಿಕೊಂಡಿದೆ.

 

 

ಎನ್‌ಜಿಟಿ ನಿರ್ದೇಶನದ ಪ್ರಕಾರ ರಾಜ್ಯದಲ್ಲಿ ಖಾಲಿ ಇರುವ ಪರಿಸರ ಇಂಜಿನಿಯರ್‍‌ಗಳ ವೃಂದದ ಹುದ್ದೆಗಳನ್ನು ಭರ್ತಿ ಮಾಡಬೇಕಿತ್ತು. ಆದರೆ ಈ ವೃಂದದ ಇಂಜಿನಿಯರ್‍‌ಗಳು ಅನ್ಯ ಇಲಾಖೆಯಲ್ಲಿ  ನಿಯೋಜನೆ ಮೇಲೆ ಕೆಲಸ ಮಾಡುತ್ತಿದ್ದರು. ಹೀಗಾಗಿ ಇವರನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಪೌರಾಡಳಿತ ಇಲಾಖೆಗೆ ಹಿಂಪಡೆಯುವ ನಿಟ್ಟಿನಲ್ಲಿ  ಒಟ್ಟಾರೆ 24 ಮಂದಿ ಇಂಜಿನಿಯರ್‍‌ಗಳನ್ನು ಸ್ಥಳ ನಿಯುಕ್ತಿಗೊಳಿಸಿ 2026ರ ಏಪ್ರಿಲ್‌ 13ರಂದೇ ಅಧಿಸೂಚನೆ ಹೊರಡಿಸಿತ್ತು.

 

 

ಈ ಅಧಿಸೂಚನೆ ಹೊರಬಿದ್ದ ಕೂಡಲೇ ಅನ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ  ಪರಿಸರ ಇಂಜಿನಿಯರ್‍‌ಗಳ ಪೈಕಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಮಂಡಳಿಯಲ್ಲಿಯೇ ಉಳಿದುಕೊಳ್ಳಲು ಲಾಬಿ ನಡೆಸಿದ್ದರು. ಇಂತಹ ಅಧಿಕಾರಿಗಳಿಂದಲೇ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಐಎಎಸ್‌ ಕರೀಗೌಡ ಮತ್ತು ಎಸ್‌ ವಿ ರಾಜೇಶ್‌ ಎಂಬುವರು ತಲಾ 20 ಲಕ್ಷಕ್ಕೆ ಬೇಡಿಕೆ ಇರಿಸಿದ್ದರು ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ.  ಈ ಹಣ ನೀಡಿದಲ್ಲಿ ಮಾತ್ರ ಬಿಎಸ್‌ಡಬ್ಲ್ಯೂಎಂಎಲ್‌ ನಲ್ಲಿ ಉಳಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂಬ ಆಪಾದನೆಗೂ ಗುರಿಯಾಗಿದ್ದಾರೆ. ಈ ಕುರಿತು ಎನ್‌ ಆರ್‍‌ ರಮೇಶ್‌ ಅವರು ದೂರಿನಲ್ಲಿ ವಿವರಿಸಿದ್ದಾರೆ.

ದೂರಿನಲ್ಲೇನಿದೆ?

ಈ ಹಿಂದಿನ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಇಲಾಖೆ ಆಥವಾ ಈಗಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದಲ್ಲಿ ಕಳೆದ ಆರೇಳು ವ‍ರ್ಷಗಳಿಗಿಂತಲೂ ಹೆಚ್ಚು ಕಾಲದಿಂದಲೂ ಪರಿಸರ ಆಭಿಯಂತರರು ಬೇರು ಬಿಟ್ಟಿದ್ದಾರೆ ಎಂದು ದೂರಿನಲ್ಲಿ  ಆರೋಪಿಸಿದ್ದಾರೆ.

 

 

ಅಲ್ಲದೇ ಈ ಪೈಕಿ 03 ಮಂದಿ ಕಾರ್ಯಪಾಲಕ ಅಭಿಯಂತರರು ಮತ್ತು 24 ಮಂದಿ ಸಹಾಯಕ ಕಾರ್ಯಪಾಲಕ ಅಭಿಯಂತರ ಹುದ್ದೆಯಲ್ಲಿದ್ದ ಪರಿಸರ ಅಭಿಯಂತರುಗಳನ್ನು ಸಾಮೂಹಿಕವಾಗಿ 2026ರ ಏಪ್ರಿಲ್‌ 13ರಂದು ವರ್ಗಾವಣೆ ಮಾಡಿದೆ. ಇದು ಕಾನೂನಿನ ಪ್ರಕಾರ ಸರಿಯಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

 

 

ಆದರೆ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕರೀಗೌಡ ಮತ್ತು ಮುಖ್ಯ ಪ್ರಧಾನ ವ್ಯವಸ್ಥಾಪಕ ಎಸ್‌ ವಿ ರಾಜೇಶ್‌ ಎಂಬುವರು ರಾಜ್ಯದ ಬೇರೆ ಬೇರೆ ಜಿಲ್ಲಾ ಕೇಂದ್ರಗಳಿಗೆ ವರ್ಗಾವಣೆಗೊಂಡಿರುವ 3 ಮಂದಿ  ಕಾರ್ಯಪಾಲಕ ಆಭಿಯಂತರರು ಮತ್ತು 24 ಮಂದಿ ಸಹಾಯಕ ಕಾರ್ಯಪಾಲಕ ಅಭಿಯಂತರುಗಳಿಂದ ಜಿಬಿಎ ಮುಖ್ಯ ಆಯುಕ್ತರಿಗೆ, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ತಲಾ 20 ಲಕ್ಷ ರು ನೀಡಿದರೆ ವರ್ಗಾವಣೆಯನ್ನು ರದ್ದುಗೊಳಿಸಲಾಗುವುದು. ಅಲ್ಲದೇ ಬಿಎಸ್‌ಡಬ್ಲ್ಯೂಎಂಎಲ್‌ನಲ್ಲಿಯೇ ಉಳಿಸಿಕೊಳ್ಳಲಾಗುವುದು ಎಂಬ ಭರವಸೆ ನೀಡಿ ಕಾನೂನುಬಾಹಿರವಾಗಿ ವಸೂಲಿ ಮಾಡುತ್ತಿದ್ದಾರೆ ಎಂದು ಎನ್‌ ಆರ್‍‌ ರಮೇಶ್‌ ಅವರು ದೂರಿನಲ್ಲಿ ಆಪಾದಿಸಿರುವುದು ತಿಳಿದು ಬಂದಿದೆ.

ಘನತ್ಯಾಜ್ಯ ನಿರ್ವಹಣಾ ಪ್ಯಾಕೇಜ್‌ಗಳಿಗೆ ಟೆಂಡರ್‌ ಪ್ರಕ್ರಿಯೆಯಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಆರೋಪದ ಕುರಿತು ಹೈಕೋರ್ಟ್‌ನಲ್ಲಿಯೂ ವಿಚಾರಣೆ ನಡೆಯುತ್ತಿದೆ.

ಜಿಬಿಎ ಟೆಂಡರ್ ಪ್ರಕ್ರಿಯೆ ತೆರವುಗೊಳಿಸಲು ಶೇ.15 ರಷ್ಟು ಕಮಿಷನ್ ಗೆ ಇಬ್ಬರು ಐಎಎಸ್ ಅಧಿಕಾರಿಗಳು ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎನ್. ಬಾಲಸುಬ್ರಮಣ್ಯಂ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ನಿರ್ದೇಶನಗಳನ್ನು ಕೋರಿ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಐಎಎಸ್ ಅಧಿಕಾರಿಗಳಾದ ತುಷಾರ್ ಗಿರಿನಾಥ್ ಮತ್ತು ಕರಿಗೌಡ ವಿರುದ್ಧ ಲಂಚದ ಆರೋಪ ಮಾಡಿರುವ ಗುತ್ತಿಗೆದಾರ ಎಸ್.ಎನ್.ಬಾಲಸುಬ್ರಮಣಿಯನ್ ಸಲ್ಲಿಸಿದ್ದ ರಿಟ್ ಅರ್ಜಿ ಹೈಕೋರ್ಟ್​ ವಿಚಾರಣೆ ಕೈಗೆತ್ತಿಕೊಂಡಿದ್ದು, ಈ ವೇಳೆ ಸರ್ಕಾರದ ಪರವಾಗಿ ಎಜಿ ಶಶಿಕಿರಣ್ ಶೆಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗುತ್ತಿಗೆದಾರ ಎಸ್.ಎನ್. ಬಾಲಸುಬ್ರಮಣಿಯನ್, ಸಿ.ವಿ. ರಾಮನ್ ನಗರ ಪ್ಯಾಕೇಜ್-1ರ ಟೆಂಡರ್‌ನಲ್ಲಿ ಎಲ್1 ಬಿಡ್‌ದಾರರಾಗಿದ್ದರು. ಆದರೆ, ಜಿಬಿಎ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತು ಅಧಿಕಾರಿ ಕರಿಗೌಡ ಸರ್ಕಾರದ ಪರವಾಗಿ ಒಟ್ಟು ಗುತ್ತಿಗೆ ಮೊತ್ತದ ಶೇ. 15ರಷ್ಟು ಲಂಚ ನೀಡುವಂತೆ ಒತ್ತಡ ಹೇರಿದ್ದಾರೆ ಮತ್ತು ಹಣ ನೀಡದಿದ್ದರೆ ಟೆಂಡರ್ ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಅರ್ಜಿದಾರರ ಪರ ವಕೀಲ ಪಿ. ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು.

ಲಂಚ ನೀಡಲು ಒಪ್ಪದ ಕಾರಣ ಮಾರ್ಚ್ 26ರಂದು ಟೆಂಡರ್ ರದ್ದುಪಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಇನ್ನು ಸರ್ಕಾರದ ಪರವಾಗಿ ವಾದ ಮಾಡಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಗುತ್ತಿಗೆದಾರರ ಪರ ವಕೀಲರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.  ‘ಮಾರ್ಚ್ 10ರಂದು ಅಧಿಕಾರಿಗಳು ಲಂಚ ಕೇಳಿದ್ದಾರೆ ಎಂದು ಅರ್ಜಿದಾರರು ಹೇಳುತ್ತಿದ್ದಾರೆ, ಆದರೆ ಅಂದು ಅವರು ಬೆಂಗಳೂರಿನಲ್ಲಿ ಇರಲಿಲ್ಲ, ದೆಹಲಿಯಲ್ಲಿದ್ದರು. ಅದಕ್ಕೆ ಪೂರಕವಾಗಿ ವಿಮಾನ ಪ್ರಯಾಣದ ಬೋರ್ಡಿಂಗ್ ಪಾಸ್ ಇದೆ,’  ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಹಿರಿಯ ಅಧಿಕಾರಿಗಳ ಮೇಲೆ ಸುಳ್ಳು ಆರೋಪ ಮಾಡಿರುವುದಕ್ಕೆ ಅರ್ಜಿಯನ್ನು ವಜಾಗೊಳಿಸುವಂತೆ ಮನವಿ ಮಾಡಿದ್ದರು.

ಅರ್ಜಿದಾರರು ವಿವರಣೆ ನೀಡಲು ಕೇಳಿದಾಗ, ತುಷಾರ್ ಗಿರಿನಾಥ್ ಅವರನ್ನು ಒಳಗೊಂಡ ಮಂಡಳಿಯ ನೀತಿಯ ಪ್ರಕಾರ, ಟೆಂಡರ್‌ಗಳನ್ನು ಅಂತಿಮಗೊಳಿಸಲು, ಏಳು ವರ್ಷಗಳ ಕಾಲ ಬಿಡ್ ಬೆಲೆಯ ಶೇ. 3 ರಷ್ಟನ್ನು ಮಂಡಳಿಯ ಸದಸ್ಯರಿಗೆ ಪಾವತಿಸಬೇಕು ಎಂದು ಕರೀಗೌಡ ಹೇಳಿದ್ದಾರೆ ಎನ್ನಲಾಗಿದೆ.

ಇದಲ್ಲದೆ, ಬಿಡ್ ಬೆಲೆಯ ಶೇ. 3 ರಷ್ಟನ್ನು ತುಷಾರ್ ಗಿರಿನಾಥ್ ಮತ್ತು ಅವರ ನಗರಾಭಿವೃದ್ಧಿ ಇಲಾಖೆಯಲ್ಲಿರುವವರಿಗೆ ಮತ್ತು ಬಿಡ್ ಬೆಲೆಯ ಶೇ. 9 ರಷ್ಟು ಹಣವನ್ನು ಸರ್ಕಾರದ ಕೆಲವು ಜನರಿಗೆ ಎಂದು ಪಾವತಿಸಬೇಕು ಅದಾದ ನಂತರ ಟೆಂಡರ್‌ಗಳನ್ನು ಅಂತಿಮಗೊಳಿಸಲು ಮತ್ತು ಕೆಲಸದ ಆದೇಶಗಳನ್ನು ನೀಡಲಾಗುತ್ತದೆ ಎಂದು ಆರೋಪಿಸಲಾಗಿದೆ.

ಇದರಿಂದ ಕೋಪಗೊಂಡ ಅರ್ಜಿದಾರರು ಮಾರ್ಚ್ 11 ರಂದು ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದರು. ಈ ಮಧ್ಯೆ  ಬಿಎಸ್‌ಡಬ್ಲ್ಯೂಎಂಎಲ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕರು (ಸಿಜಿಎಂ) ಮಾರ್ಚ್ 25 ರಂದು ಶೇಕಡಾವಾರು ಪ್ರಮಾಣವನ್ನು 15% ರಿಂದ 9% ಕ್ಕೆ ಇಳಿಸಲಾಗಿದೆ ಎಂದು ಅರ್ಜಿದಾರರಿಗೆ ತಿಳಿಸಿದ್ದರು.  ಅದೇ ಸಂಜೆ, ಫಾರ್ಮಾಲಿಟಿಸ್ ಮತ್ತು ಆಕ್ಷೇಪಗಳನ್ನು ಪೂರೈಸಲು ಸಕಾರಾತ್ಮಕವಾಗಿ ಪ್ರತಿಕ್ರಿಯಿಸದ ಕಾರಣ ಟೆಂಡರ್‌ಗಳನ್ನು ರದ್ದುಗೊಳಿಸುವಂತೆ ಕರೀಗೌಡ ಅವರಿಗೆ ನಿರ್ದೇಶನ ನೀಡಿದ್ದಾರೆ ಎಂದು ದೂರಿರುವುದು ಗೊತ್ತಾಗಿದೆ.

ಅದರಂತೆ, ಜುಲೈ 30, 2025 ರಂದು ಟೆಂಡರ್‌ಗಳನ್ನು ರದ್ದುಗೊಳಿಸಲಾಯಿತು. ಆಕ್ಷೇಪಾರ್ಹ ಅಧಿಸೂಚನೆಯನ್ನು ಮಾರ್ಚ್ 25 ರಂದು ಹೊರಡಿಸಲಾಯಿತು ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಕರೀ ಗೌಡ ಮತ್ತು ತುಷಾರ್ ಗಿರಿನಾಥ್ ಅವರ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಲು ಮುಖ್ಯ ಕಾರ್ಯದರ್ಶಿಗೆ ನಿರ್ದೇಶನಗಳನ್ನು ನೀಡಬೇಕೆಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿರುವುದನ್ನು ಸ್ಮರಿಸಬಹುದು.

Hot this week

ನೀರಾವರಿ ನಿಗಮಗಳ ಗುತ್ತಿಗೆದಾರರಿಗೆ 15,429.51 ಕೋಟಿ ರು ಬಾಕಿ; ಸ್ಥಗಿತಗೊಂಡಿವೆಯೇ ಕಾಮಗಾರಿಗಳು?

ಬೆಂಗಳೂರು;  ಕೃಷ್ಣಭಾಗ್ಯ ಜಲನಿಗಮ ಸೇರಿದಂತೆ ರಾಜ್ಯದ ನಾಲ್ಕು ನೀರಾವರಿ ನಿಗಮಗಳು ಅನುಷ್ಠಾನಗೊಳಿಸುತ್ತಿರುವ...

ಟೆಂಡರ್ ಇಲ್ಲದೆಯೇ 3.11 ಕೋಟಿ ನೇರ ಹೂಡಿಕೆ, ಮುಂಗಡ ಹಣ ಹೊಂದಾಣಿಕೆಯಲ್ಲೂ ವಿಳಂಬ, ಲಕ್ಷಾಂತರ ರು ನಷ್ಟ; ಮಹರ್ಷಿ ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಅಕ್ರಮ!

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಯಾವುದೇ ಟೆಂಡರ್‍‌ ಕರೆಯದೇ ನೇರವಾಗಿ...

ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಲೋಪ; ಹಣ ಪಾವತಿಯಲ್ಲಿ ಸರ್ಕಾರದ ಆದೇಶಗಳ ಉಲ್ಲಂಘನೆ, 51.21 ಕೋಟಿ ಮೊತ್ತದ ವಹಿವಾಟು ಪಾರದರ್ಶಕವಾಗಿವೆಯೇ?

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು ಹಣ ಪಾವತಿ ಸಂದರ್ಭಗಳಲ್ಲಿ ಸರ್ಕಾರದ...
Please Scan to make Your Contribution

Topics

ನೀರಾವರಿ ನಿಗಮಗಳ ಗುತ್ತಿಗೆದಾರರಿಗೆ 15,429.51 ಕೋಟಿ ರು ಬಾಕಿ; ಸ್ಥಗಿತಗೊಂಡಿವೆಯೇ ಕಾಮಗಾರಿಗಳು?

ಬೆಂಗಳೂರು;  ಕೃಷ್ಣಭಾಗ್ಯ ಜಲನಿಗಮ ಸೇರಿದಂತೆ ರಾಜ್ಯದ ನಾಲ್ಕು ನೀರಾವರಿ ನಿಗಮಗಳು ಅನುಷ್ಠಾನಗೊಳಿಸುತ್ತಿರುವ...

ಟೆಂಡರ್ ಇಲ್ಲದೆಯೇ 3.11 ಕೋಟಿ ನೇರ ಹೂಡಿಕೆ, ಮುಂಗಡ ಹಣ ಹೊಂದಾಣಿಕೆಯಲ್ಲೂ ವಿಳಂಬ, ಲಕ್ಷಾಂತರ ರು ನಷ್ಟ; ಮಹರ್ಷಿ ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಅಕ್ರಮ!

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಯಾವುದೇ ಟೆಂಡರ್‍‌ ಕರೆಯದೇ ನೇರವಾಗಿ...

ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಲೋಪ; ಹಣ ಪಾವತಿಯಲ್ಲಿ ಸರ್ಕಾರದ ಆದೇಶಗಳ ಉಲ್ಲಂಘನೆ, 51.21 ಕೋಟಿ ಮೊತ್ತದ ವಹಿವಾಟು ಪಾರದರ್ಶಕವಾಗಿವೆಯೇ?

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು ಹಣ ಪಾವತಿ ಸಂದರ್ಭಗಳಲ್ಲಿ ಸರ್ಕಾರದ...

ಮಹರ್ಷಿ ವಾಲ್ಮೀಕಿ ವಿ.ವಿ.ಯಲ್ಲಿ 38.98 ಕೋಟಿ ರು ಗೆ ಆಕ್ಷೇಪಣೆ; ವಾರ್ಷಿಕ ಲೆಕ್ಕಪತ್ರಗಳಲ್ಲಿ ಬ್ಯಾಂಕ್‌ ಖಾತೆಗಳ ವಿವರ ಒದಗಿಸಿಲ್ಲವೇಕೆ?

ಬೆಂಗಳೂರು;  ರಾಯಚೂರಿನಲ್ಲಿರುವ  ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಟೆಂಡರ್ ಕರೆಯದೇ ನೇರವಾಗಿ ಏಜೆನ್ಸಿ...

ರಾಷ್ಟ್ರೋತ್ಥಾನ, ಜನಸೇವಾ ವಿಶ್ವಸ್ಥ, ಜನಸೇವಾ ಟ್ರಸ್ಟ್‌ಗೆ 121 ಎಕರೆ ಜಮೀನು ಮಂಜೂರು; ಸದನಕ್ಕೆ ಪಟ್ಟಿ ಒದಗಿಸಿದ ಸರ್ಕಾರ

ಬೆಂಗಳೂರು; ಕಳೆದ 16 ವರ್ಷಗಳಲ್ಲಿ  ರಾಷ್ಟ್ರೋತ್ಥಾನ ಪರಿಷತ್‌ ಮತ್ತು ಸಂಘ ಪರಿವಾರದ...

ಸಿಎಂ ಮಾಧ್ಯಮ ಕಾರ್ಯದರ್ಶಿಗಳಿಗೆ ಮಾಸಿಕ 3 ಲಕ್ಷ ರು ವೇತನ; ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು, ಅಧಿಕಾರಿವರ್ಗದಲ್ಲಿ ಚರ್ಚೆ

ಬೆಂಗಳೂರು;  ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಮತ್ತು ಹೊಸದಾಗಿ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಲು ಅನುದಾನ...

Related Articles

Popular Categories

error: Content is protected !!