ಬೆಂಗಳೂರು; ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ವಸತಿ ಕಾಲೇಜು ವಿದ್ಯಾರ್ಥಿಗಳಿಗೆ ಆಫ್‌ಲೈನ್ ಮಾದರಿಯಲ್ಲಿ ನೀಟ್, ಕೆ-ಸಿಇಟಿ ತರಬೇತಿ, ಕ್ಲಾಟ್ ಮತ್ತು ಸಿವಿಲ್ ಸರ್ವಿಸ್ ಹುದ್ದೆಗಳ ಪರೀಕ್ಷೆಗಳಿಗೆ ಕರೆದಿರುವ ಟೆಂಡರ್‍ನಲ್ಲಿ ಹಲವು ಲೋಪಗಳು ಕಂಡು ಬಂದಿವೆ.
ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮತ್ತು ಅಲ್ಪಸಂಖ್ಯಾತರ ಇಲಾಖೆಯ ನಿರ್ದೇಶಕರಿಗೆ ಪ್ರೈಮ್ ಲಾ ಅಸೋಸಿಯೇಟ್ಸ್ ಕಾನೂನು ತಿಳಿವಳಿಕೆ (ಲೀಗಲ್ ನೋಟೀಸ್) ನೋಟೀಸ್ ಜಾರಿಗೊಳಿಸಿದೆ.
ನೀಟ್, ಕೆ-ಸಿಇಟಿ, ಕ್ಲಾಟ್ ಮತ್ತು ಸಿವಿಲ್ ಸರ್ವಿಸ್ ಪರೀಕ್ಷೆಗಳಿಗೆ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಸೇವಾದಾರರ ಆಯ್ಕೆ ಪ್ರಕ್ರಿಯೆಗಳಲ್ಲಿಯೇ ಹಲವು ರೀತಿಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದೀಗ ಪ್ರೈಮ್ ಲಾ ಅಸೋಸಿಯೇಟ್ಸ್‌ನ ಎಚ್ ರಜ್ವಿ ಮತ್ತಿತರರು ಸರ್ಕಾರಕ್ಕೆ ಲೀಗಲ್ ನೋಟೀಸ್ ನೀಡಿರುವುದು ಮುನ್ನೆಲೆಗೆ ಬಂದಿದೆ.
ಈ ನೋಟೀಸ್‌ಗೂ ಮುನ್ನವೇ ಹಲವು ಬಿಡ್‌ದಾರರು ಟೆಂಡರ್‍ನಲ್ಲಿ ಕಂಡು ಬಂದಿದ್ದ ಲೋಪಗಳನ್ನು ಸಚಿವ ಬಿ ಝಡ್ ಝಮೀರ್ ಅಹ್ಮದ್ ಖಾನ್ ಅವರ ಗಮನಕ್ಕೂ ತಂದಿದ್ದರು. ಆದರೆ ಯಾವುದೇ ಕ್ರಮವಹಿಸಿರಲಿಲ್ಲ ಎಂದು ಗೊತ್ತಾಗಿದೆ.
2026ರ ಏಪ್ರಿಲ್ 24ರಂದು ರಾಜ್ಯ ಸರ್ಕಾರಕ್ಕೆ ನೀಡಿರುವ ಲೀಗಲ್ ನೋಟೀಸ್‌ನ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ನೀಟ್, ಕ್ಲಾಟ್, ಕೆ-ಸಿಇಟಿ ಮತ್ತು ಸಿವಿಲ್ ಸರ್ವಿಸ್ ತರಬೇತಿ ಸೇರಿದಂತೆ ವಿವಿಧ ತರಬೇತಿಗಳಿಗಾಗಿ ಇಲಾಖೆಯ ಈಚೆಗಷ್ಟೇ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ. ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಹೊರಡಿಸಲಾದ ಈ ಟೆಂಡರ್‌ಗಳಲ್ಲಿ ಹಲವು ಉಲ್ಲಂಘನೆಗಳು ಕಂಡು ಬಂದಿವೆ. ಹೀಗಾಗಿ ಟೆಂಡರ್ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು. ಹಾಗೆಯೇ ಸ್ವತಂತ್ರ ತನಿಖೆ ನಡೆಸಬೇಕು. ವಂಚಕ ಬಿಡ್ದರ್‌ಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಮತ್ತು ಹಿಂದಿನ ಎಲ್ಲಾ ಒಪ್ಪಂದಗಳ ಕಾರ್ಯಕ್ಷಮತೆ ಪರಿಶೀಲನೆ ನಡೆಸಬೇಕು ಎಂದು ಲೀಗಲ್ ನೋಟೀಸ್‌ನಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಈ ನೋಟೀಸ್‌ನ್ನು ಸಿವಿಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 80ರ ಅಡಿಯಲ್ಲಿ ನೀಡಲಾಗಿದೆ. ಟೆಂಡರ್ ದಾಖಲೆಗಳಲ್ಲಿ ದೊಡ್ಡ ಮಟ್ಟದ ಉಲ್ಲಂಘನೆಗಳು ಕಂಡುಬಂದಿವೆ. ವಿಶೇಷವಾಗಿ ಸೆಕ್ಷನ್ 5 ಜೊತೆಗೆ ಸೆಕ್ಷನ್ 6ರ ಉಲ್ಲಂಘನೆಯಾಗಿದೆ. ಇದು ಮುಕ್ತ ಸ್ಪರ್ಧೆಯ ತತ್ವಕ್ಕೆ ವಿರುದ್ಧವಾದ ನಿರ್ಬಂಧಿತ ಖರೀದಿ ಕ್ರಮವಾಗಿದೆ ಎಂದು ಲೀಗಲ್ ನೋಟೀಸ್‌ನಲ್ಲಿ ಹೇಳಲಾಗಿದೆ.
ಸೆಕ್ಷನ್ 6 ಪ್ರಕಾರ, ಸಾರ್ವಜನಿಕ ಖರೀದಿ ನ್ಯಾಯಸಮ್ಮತವಾಗಿರಬೇಕು. ಅಲ್ಲದೇ ಮುಕ್ತ ಮತ್ತು ಪಾರದರ್ಶಕವಾಗಿರಬೇಕು. ಇದಕ್ಕೆ ಪೂರಕವಾಗಿ ಯಾವುದೇ ಟೆಂಡರ್ ಅನ್ನು ಕಾಯ್ದೆ ಮತ್ತು ಅದರ ನಿಯಮಾವಳಿಗಳಲ್ಲಿ ನೀಡಿರುವ ವಿಧಾನಕ್ಕೆ ಅನುಗುಣವಾಗಿ ಮಾತ್ರ ಆಹ್ವಾನಿಸಬೇಕು. ಅಲ್ಲದೇ ಟೆಂಡರ್‍ನ್ನು ಪ್ರಕ್ರಿಯೆಗೊಳಿಸಬೇಕು ಅಥವಾ ಅಂಗೀಕರಿಸಬೇಕು. ಆದರೆ ಇಲಾಖೆಯು ಕರೆದಿರುವ ಟೆಂಡರ್ ತಾರತಮ್ಯಗಳಿಂದ ಕೂಡಿವೆ. ಟೆಂಡರ್‌ನ ಅರ್ಹತೆ ಮತ್ತು ಮೌಲ್ಯಮಾಪನ ಮಾನದಂಡಗಳನ್ನು ಉಲ್ಲಂಘಿಸಲಾಗಿದೆ ಎಂದು ವಿವರಿಸಿದೆ.
‘ಟೆಂಡರ್ ಮಾನದಂಡವನ್ನು ಮರುರೂಪಗೊಳಿಸಲಾಗುತ್ತಿದೆ. ಉದಾಹರಣೆಗೆ, ಒಂದು ಷರತ್ತು ಪ್ರಕಾರ ಬಿಡ್ದರ್‌ಗಿಂತ ಕನಿಷ್ಠ ಮೂರು ವರ್ಷಗಳ ಕಾಲ ಗೂಗಲ ಪ್ಲೇ ಸ್ಟೋರ್‍ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಇರಬೇಕು. ಮತ್ತು ಡೌನ್‌ಲೋಡ್‌ಗಳ ಸಂಖ್ಯೆಯ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತಿದೆ. ಈ ಮಾನದಂಡಕ್ಕೆ ಆಫ್‌ಲೈನ್ ಕೋಚಿಂಗ್‌ನ ಗುಣಮಟ್ಟದೊಂದಿಗೆ ಯಾವುದೇ ತಾರ್ಕಿಕ ಸಂಬಂಧವಿಲ್ಲ. ಮತ್ತು ಇದು ಹಿಂದಿನ ಒಪ್ಪಂದದಾರರಿಗೆ ಮಾತ್ರ ಅನುಕೂಲವಾಗುವಂತೆ ರೂಪಿಸಲಾಗಿದೆ. ಹಿಂದಿನ ಒಪ್ಪಂದಗಳಲ್ಲಿ ಇಂತಹ ಅಪ್ಲಿಕೇಶನ್‌ಗಳನ್ನು ಸೃಷ್ಟಿಸಲು ಸೂಚಿಸಲಾಗಿತ್ತು,’ ಎಂದು ಟೆಂಡರ್ ಹಿಂದೆ ಬಿಡ್ಡರ್‍ಗಳೊಂದಿಗೆ ನಡೆದಿದೆ ಎನ್ನಲಾಗಿರುವ ಪೂರ್ವ ನಿರ್ಧರಿತ ಒಪ್ಪಂದಗಳನ್ನು ಲೀಗಲ್ ನೋಟೀಸ್‌ನಲ್ಲಿ ವಿವರಿಸಿದೆ.

ಟೆಂಡರ್‌ಗಳಲ್ಲಿನ ಷರತ್ತು ಪ್ರಕಾರ ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಸರ್ಕಾರದ ಇಲಾಖೆಗೆ ಪುಸ್ತಕಗಳು, ಕಂಪ್ಯೂಟರ್‌ಗಳು ಮತ್ತು ಟ್ಯಾಬ್ಲೆಟ್‌ಗಳನ್ನು ಪೂರೈಸಿದ ಅನುಭವ ಬಿಡ್‌ದಾರನಿಗೆ ಇರಬೇಕು. ಈ ಅರ್ಹತೆಯು, ಹಿಂದಿನ ಸರ್ಕಾರದ ಒಪ್ಪಂದಗಳನ್ನು ಪಡೆದ ಸಂಸ್ಥೆಗಳಿಗೂ ಮಾತ್ರ ಸೀಮಿತಗೊಳಿಸುತ್ತದೆ. ಹೀಗಾಗಿ ಇದು ಕಾನೂನುಬಾಹಿರವಾಗಿದೆ ಎಂದು ಹೇಳಿದೆ.
ಟೆಂಡರ್‌ಗಳ ಮಾನದಂಡಗಳನ್ನು ಪರಿಶೀಲಿಸಿದಾಗ ಸಮಾನ ಟೆಂಡರ್‌ಗಳ ಹಿಂದಿನ ಒಪ್ಪಂದದಾರರು ಮಾತ್ರ ಸೃಷ್ಟಿಸಬಹುದಾದ ದಾಖಲೆಗಳನ್ನು ನೀಡುವಂತಿದೆ. ಇದರಿಂದ ಯಾವುದೇ ಹೊಸ ಅರ್ಹ ಸಂಸ್ಥೆಗೆ ಭಾಗವಹಿಸುವುದು ಅಸಾಧ್ಯವಾಗುತ್ತದೆ. ಇದು ಕೆಟಿಪಿಪಿ ಕಾಯ್ದೆಯ ಗಂಭೀರ ಉಲ್ಲಂಘನೆಯಾಗಿದೆ ಎಂದು ವಿವರಿಸಿದೆ.
ಜೊತೆಗೆ ವಸ್ತುಗಳ ಪೂರೈಕೆಗೆ ಸಂಬಂಧಿಸಿದ ಟೆಂಡರ್‌ಗಳಿಗೆ ಒಂದು ಪ್ರತ್ಯೇಕ ವಿಧಾನವಿದೆ. ಮತ್ತು ಸೇವೆಗಳ ಪೂರೈಕೆಗೆ ಸಂಬಂಧಿಸಿದ ಟೆಂಡರ್‌ಗಳಿಗೆ ಇನ್ನೊಂದು ಪ್ರತ್ಯೇಕ ವಿಧಾನವಿದೆ. ಆದರೆ, ಕೆಲವು ಸಂದರ್ಭಗಳಲ್ಲಿ ವಸ್ತುಗಳ ಪೂರೈಕೆಯನ್ನು ಸೇವೆಗಳ ಟೆಂಡರ್‌ನಲ್ಲಿಯೇ ಸೇರಿಸಲಾಗಿದೆ. ಕಾನೂನಿನ ಪ್ರಕಾರ ಈ ಎರಡನ್ನೂ ಒಟ್ಟಿಗೇ ಸೇರಿಸಬಾರದು. ಮತ್ತು ವಸ್ತುಗಳಿಗೆ ಸಂಬಂಧಿಸಿದ ವಿವರಗಳನ್ನು ಹಣಕಾಸು ಇಲಾಖೆಯ ಅನುಮೋದನೆಯ ನಂತರವೇ ನಿಗದಿಪಡಿಸಬೇಕು. ಈ ಅನುಮೋದನೆಯನ್ನು ಬಿಟ್ಟುಕೊಡಲಾಗಿದೆ ಎಂದು ಕಾಣುತ್ತದೆ ಎಂದು ಲೀಗಲ್ ನೋಟೀಸ್‌ನಲ್ಲಿ ಹೇಳಲಾಗಿದೆ.
‘ಆದ್ದರಿಂದ ತಕ್ಷಣ ಟೆಂಡರ್‌ಗಳನ್ನು ಸ್ಥಗಿತಗೊಳಿಸಬೇಕು. ಮತ್ತು ಅರ್ಹತಾ ಮಾನದಂಡಗಳನ್ನು ಮರುಪರಿಶೀಲಿಸಬೇಕು. ಇದರಿಂದ ಕೆಟಿಪಿಪಿ ಕಾಯ್ದೆಯ ಸೆಕ್ಷನ್ 5 ಮತ್ತು 6 ಪ್ರಕಾರ ಮುಕ್ತ, ನ್ಯಾಯಸಮ್ಮತ ಮತ್ತು ತಾರತಮ್ಯರಹಿತವಾಗಿರುತ್ತದೆ,’ ಎಂದು ಲೀಗಲ್ ನೋಟೀಸ್‌ನಲ್ಲಿ ಸಮರ್ಥಿಸಿಕೊಂಡಿದೆ.
ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಹೊರಡಿಸಲಾದ ಈ ಹಿಂದಿನ ನೀಟ್, ಕೆ-ಸಿಇಟಿ, ಕೋಚಿಂಗ್ ಟೆಂಡರ್‌ಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಕೆಪಿಪಿಪಿ ಪೋರ್ಟಲ್‌ನಲ್ಲಿ ಪ್ರಕಟಿಸಬೇಕು. ಈ ಎಲ್ಲವನ್ನೂ ವಿಶ್ಲೇಷಣೆ ಮಾಡಬೇಕು. ಅಲ್ಲದೇ ಮೌಲ್ಯಮಾಪನ ವರದಿಗಳು ಮತ್ತು ಒಪ್ಪಂದ ಕಾರ್ಯಗತಗೊಳಿಸುವ ದಾಖಲೆಗಳು ಒಳಗೊಂಡಿರಬೇಕು.
ಕೆಟಿಪಿಪಿ ಕಾಯ್ದೆಯ ಸೆಕ್ಷನ್ 10 ಪ್ರಕಾರ, ಟೆಂಡರ್ ಪರಿಶೀಲನಾ ಸಮಿತಿ (Tender Scrutiny Committee) ಒಂದಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರಬೇಕು. ಈ ಸಮಿತಿ ಟೆಂಡರ್ ಆಹ್ವಾನಿಸುವ ಪ್ರಾಧಿಕಾರ ಮತ್ತು ಟೆಂಡರ್ ಅಂಗೀಕರಿಸುವ ಪ್ರಾಧಿಕಾರದಿಂದ ಪ್ರತ್ಯೇಕವಾಗಿರಬೇಕು. ಆದರೆ ಈ ಪ್ರತ್ಯೇಕತೆ ಪಾಲಿಸಲಾಗಿಲ್ಲ.
ಈ ಸಮಿತಿಯಲ್ಲಿ ನ್ಯಾಯಯುತ ಪ್ರಕ್ರಿಯೆಗಾಗಿ ಹಲವಾರು ಸದಸ್ಯರು ಇರಬೇಕು. ಇದರ ರಚನೆಯಲ್ಲಿ ಅಧ್ಯಕ್ಷರು ಟೆಂಡರ್ ಆಹ್ವಾನಿಸುವ ಪ್ರಾಧಿಕಾರಕ್ಕಿಂತ ಒಂದು ಹಂತ ಮೇಲಿನ ಅಧಿಕಾರಿಯಾಗಿರಬೇಕು. ಮತ್ತು ತಾಂತ್ರಿಕ ಸದಸ್ಯ ಹಾಗೂ ಹಣಕಾಸು ಸದಸ್ಯರನ್ನು ಒಳಗೊಂಡಿರಬೇಕು. ಈ ನ್ಯಾಯಯುತ ವಿಧಾನವನ್ನು ಉಲ್ಲಂಘಿಸಲಾಗಿದೆ. ಆದ್ದರಿಂದ ಟೆಂಡರ್ ದಾಖಲೆಗಳು ಮಾನ್ಯತೆ ಕಳೆದುಕೊಂಡಿವೆ.
ಈ ಟೆಂಡರ್‌ಗೆ ಸಂಬಂಧಿಸಿದ ಟೆಂಡರ್ ಪರಿಶೀಲನಾ ಸಮಿತಿಯ ರಚನೆ, ಸಂಯೋಜನೆ ಮತ್ತು ಕಾರ್ಯವಿಧಾನವು ಕಾನೂನಿನಲ್ಲಿ ನಿರ್ದಿಷ್ಟಪಡಿಸಿದಂತೆ ಇರಬೇಕು ಮತ್ತು ಟೆಂಡರ್ ದಾಖಲೆಗಳು ಅದನ್ನು ಪ್ರತಿಬಿಂಬಿಸಬೇಕು. ಕೆಟಿಪಿಪಿ ಕಾಯ್ದೆಯ ಸೆಕ್ಷನ್ 13 ಪ್ರಕಾರ, ಟೆಂಡರ್ ಅಂಗೀಕರಿಸುವ ಪ್ರಾಧಿಕಾರವು ಕೆಪಿಪಿಪಿ ಪೋರ್ಟಲ್‌ನಲ್ಲಿ ಟೆಂಡರ್ ಸ್ವೀಕಾರದ ವಿಶ್ಲೇಷಣೆ ಮತ್ತು ಕಾರಣಗಳನ್ನು ಪ್ರಕಟಿಸಬೇಕು. ಇಂತಹ ವಿಶ್ಲೇಷಣೆ ಅಥವಾ ಕಾರಣಗಳ ವಿವರಣೆ ನ್ಯಾಯಯುತ ಪ್ರಕ್ರಿಯೆಗೆ ಅತ್ಯವಶ್ಯಕವಾಗಿದೆ ಎಂದು ಲೀಗಲ್ ನೋಟೀಸ್‌ನಲ್ಲಿ ಸೂಚಿಸಿದೆ.

ಕೆಟಿಪಿಪಿ ಕಾಯ್ದೆಯ ಸೆಕ್ಷನ್ 14A(1) ಪ್ರಕಾರ, ಖರೀದಿ ಸಂಸ್ಥೆಗೆ ಭ್ರಷ್ಟ ಅಥವಾ ವಂಚಕ ಚಟುವಟಿಕೆಗಳಲ್ಲಿ ತೊಡಗಿರುವ ಟೆಂಡರ್‌ದಾರರನ್ನು ಗರಿಷ್ಠ ಮೂರು ವರ್ಷಗಳವರೆಗೆ ಟೆಂಡರ್ ಪ್ರಕ್ರಿಯೆಯಿಂದ ವಜಾಗೊಳಿಸುವ ಅಧಿಕಾರವಿದೆ. ಹಿಂದಿನ ಟೆಂಡರ್‌ಗಳಲ್ಲಿ ಯಶಸ್ವಿಯಾದ ಸಂಸ್ಥೆಗಳ ಮೂಲಕ ದೊಡ್ಡ ಮಟ್ಟದಲ್ಲಿ ನಿಯಮಬಾಹಿರ ಚಟುವಟಿಕೆಗಳು ನಡೆದಿವೆ. ಇದರಿಂದ ತುಂಬಾ ದುರ್ಬಲ ಕಾರ್ಯಕ್ಷಮತೆ ಮತ್ತು ಫಲಿತಾಂಶಗಳು ಕಂಡುಬಂದಿವೆ. ಇದೇ ರೀತಿ, ಹಿಂದಿನ ಸಂಸ್ಥೆಗಳ ಕಾರ್ಯಕ್ಷಮತೆಯ ಪರಿಶೀಲನೆ (performance audit) ನಡೆದಿಲ್ಲ. ಬಹುತೇಕ ಸಂಸ್ಥೆಗಳು ಕಾರ್ಯಕ್ಷಮತಾ ಮಾನದಂಡಗಳನ್ನು ಪೂರೈಸಲು ವಿಫಲವಾಗಿವೆ ಎಂಬುದಕ್ಕೆ ಸಾಕ್ಷಿಗಳು ಇವೆ. ಹೀಗಾಗಿ ಆ ಎಲ್ಲಾ ಸಂಸ್ಥೆಗಳನ್ನೂ ವಜಾಗೊಳಿಸಲು ಅರ್ಹವಾಗಿವೆ ಎಂದು ಲೀಗಲ್ ನೋಟೀಸ್‌ನಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಸಿಬ್ಬಂದಿ ನೇಮಕಾತಿ ದಾಖಲೆಗಳ (PF/TDS ದಾಖಲೆಗಳು)ಗಳು ಕೃತಕವಾಗಿ ಸೃಷ್ಟಿಸಲ್ಪಟ್ಟಿವೆ. ಅಥವಾ ಹೆಚ್ಚಾಗಿ ತೋರಿಸಲ್ಪಟ್ಟಿರುವ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಸಾಧನಾ ಪಟ್ಟಿಗಳ ಪರಿಶೀಲನೆ ನಡೆಸಬೇಕು. ಎಂಬಿಬಿಎಎಸ್, ಐಐಟಿ, ಎನ್‌ಐಟಿ ಪ್ರವೇಶ, ಕೆಇಎ ಅಥವಾ ನೀಟ್, ಜೆಇಇ ಪ್ರಾಧಿಕಾರಗಳೊಂದಿಗೆ ಪರಿಶೀಲನೆ ಮಾಡಬೇಕು. ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಹೊರಗೆ ಸಲ್ಲಿಸಲಾದ ಅಧ್ಯಯನ ಸಾಮಗ್ರಿಗಳ ಪರಿಶೀಲನೆ ನಡೆಸಲಾಗಿದೆ. ಇದರಿಂದ ಭೌತಿಕ ಬದಲಾವಣೆ (substitution) ಮತ್ತು ಪರಿಶೀಲಿಸಲಾಗದ ಮೌಲ್ಯಮಾಪನಕ್ಕೆ ಅವಕಾಶ ಸೃಷ್ಟಿಯಾಗಿದೆ ಎಂದು ಲೀಗಲ್ ನೋಟೀಸ್‌ನಲ್ಲಿ ವಿವರಿಸಿದೆ.
ಹಿಂದಿನ ಯಾವುದೇ ಒಪ್ಪಂದ ಅವಧಿಯಲ್ಲಿ ವಿದ್ಯಾರ್ಥಿಗಳ ನೈಜ ಸಾಧನೆಗಳ ಪರಿಶೀಲನೆ ಮತ್ತು ಅದನ್ನು ಸಾರ್ವಜನಿಕ ವಲಯದಲ್ಲಿ ಪ್ರಕಟಿಸಬೇಕು. ವಂಚನೆ ಮೂಲಕ ಟೆಂಡರ್‌ಗಳನ್ನು ಪಡೆದ ಅಥವಾ ಯಾವುದೇ ಕಾರ್ಯಕ್ಷಮತೆಯನ್ನು ತೋರಿಸದ ಮತ್ತು ರಾಜ್ಯಕ್ಕೆ ನಷ್ಟ ಉಂಟುಮಾಡಿದ ಹಿಂದಿನ ಎಲ್ಲಾ ಒಪ್ಪಂದದಾರರನ್ನು ನಿರ್ಬಂಧಿಸುವ ಪ್ರಕ್ರಿಯೆ ಆರಂಭಿಸಬೇಕು ಎಂದು ಲೀಗಲ್ ನೋಟೀಸ್‌ನಲ್ಲಿ ಸೂಚಿಸಲಾಗಿದೆ.
ಹೀಗಾಗಿ ಕೆಟಿಪಿಪಿ ಕಾಯ್ದೆಯ ಸೆಕ್ಷನ್ 5, 6 ಮತ್ತು 7ಗಳಿಗೆ ಅನುಗುಣವಾಗಿರುವುದನ್ನು ಪರಿಶೀಲಿಸುವ ನಿಟ್ಟಿನಲ್ಲಿ ಈ ಎಲ್ಲಾ ಅರ್ಹತಾ ಮಾನದಂಡಗಳ ಸಮಗ್ರ ವಿಮರ್ಶೆ ನಡೆಯುವವರೆಗೆ ಎಲ್ಲಾ ಟೆಂಡರ್‌ಗಳನ್ನು ತಕ್ಷಣ ಸ್ಥಗಿತಗೊಳಿಸಬೇಕು. ಎಲ್ಲಾ ನಿರ್ಬಂಧಿತ ಅರ್ಹತಾ ಮಾನದಂಡಗಳನ್ನು ಪುನರ್ ಪರಿಶೀಲನೆ ಮಾಡಿ, KTPP ಕಾಯ್ದೆಗೆ ಅನುಗುಣವಾಗಿ ಮುಕ್ತ, ನ್ಯಾಯಸಮ್ಮತವಾಗಿರಲು ಕ್ರಮವಹಿಸಬೇಕು.
ಕೆಟಿಪಿಪಿ ಕಾಯ್ದೆಯ ಸೆಕ್ಷನ್ 10 ಪ್ರಕಾರ, ಸರಿಯಾದ ಬಹು ಸದಸ್ಯರಿರುವ ಟೆಂಡರ್ ಪರಿಶೀಲನಾ ಸಮಿತಿಯನ್ನು ರಚಿಸಿ ಮತ್ತು ಅದರ ವಿವರಗಳನ್ನು ಬಹಿರಂಗಪಡಿಸಬೇಕು. ಕರ್ನಾಟಕ ಸಾರ್ವಜನಿಕ ಖರೀದಿ ಪೋರ್ಟಲ್ ನಲ್ಲಿ ಕೆಳಗಿನ ಮಾಹಿತಿಯನ್ನು ಪ್ರಕಟಿಸಬೇಕು.

ಕಳೆದ ಐದು ವರ್ಷಗಳಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ನೀಡಲಾದ ಎಲ್ಲಾ ನೀಟ್, ಕೆ-ಸಿಇಟಿ ತರಬೇತಿ ಸಂಬಂಧ ಆಗಿರುವ ಒಪ್ಪಂದಗಳ ಕುರಿತು, ಕರ್ನಾಟಕದ ಪ್ರಧಾನ ಲೆಕ್ಕ ಪರಿಶೋಧಕರ ಅವರ ಮೂಲಕ ಅಥೌಆ ಭಾರತದ ನಿಯಂತ್ರಕ ಮತ್ತು ಮಹಾ ಲೆಕ್ಕ ಪರಿಶೋಧಕರ ಕಾಯ್ದೆ, 1971 ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಉಪಯೋಗಿಸಿ ಅಧಿಕೃತ ತನಿಖೆ ಮತ್ತು ಕಾರ್ಯಕ್ಷಮತಾ ಪರಿಶೀಲನೆ ಪ್ರಾರಂಭಿಸಬೇಕು ಎಂದು ಲೀಗಲ್ ನೋಟೀಸ್‌ನಲ್ಲಿ ಸೂಚಿಸಿದೆ.




