Wednesday | April 8, 2026 |

ತರಕಾರಿ ಬೀಜಗಳ ಕಿಟ್ ವಿತರಣೆ; ದಾಸ್ತಾನು ಇಲ್ಲದ ಏಜೆನ್ಸಿಗೆ 4 ಜಿ ವಿನಾಯಿತಿ, ಬಹುಕೋಟಿ ಅಕ್ರಮ, ಭ್ರಷ್ಟಾಚಾರ ಸುಳಿಯಲ್ಲಿ ಸರ್ಕಾರ?

ಬೆಂಗಳೂರು; 2023-24 ಮತ್ತು 2025-26ನೇ ಸಾಲಿನವರೆಗೆ  ತೋಟಗಾರಿಕೆ ಇಲಾಖೆಯು ಜಾರಿಗೊಳಿಸಿದ್ದ   ತರಕಾರಿ ಬೀಜ ವಿತರಣೆಯ ಕಾರ್ಯಕ್ರಮಗಳಲ್ಲಿ  ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿರುವ ಪ್ರಕರಣವನ್ನು ‘ದಿ ಫೈಲ್’ ಇದೀಗ ಹೊರಗೆಡವುತ್ತಿದೆ.

2023-24 ಮತ್ತು 2024-25ನೇ ಸಾಲಿನಲ್ಲಿ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರೂ ಸೇರಿದಂತೆ ಒಟ್ಟಾರೆ  ರೈತರಿಗೆ ತರಕಾರಿ ಬೀಜ ವಿತರಣೆ ಮಾಡುವ ಕಾರ್ಯಕ್ರಮಗಳಲ್ಲಿ ಅಂದಾಜು 80 ಕೋಟಿಗೂ ಹೆಚ್ಚು ಮೊತ್ತದ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ರೈತರಿಗೆ ತರಕಾರಿ ಬೀಜ ವಿತರಣೆ ಕಾರ್ಯಕ್ರಮದಲ್ಲಿ ನಡೆದಿದೆ ಎನ್ನಲಾಗಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಹಲವು ದಾಖಲೆಗಳು ‘ದಿ ಫೈಲ್’ ಗೆ ಲಭ್ಯವಾಗಿವೆ.

ತರಕಾರಿ ಬೀಜ ವಿತರಣೆ ಕಾರ್ಯಕ್ರಮವು ಹಿಂದಿನ ಆರ್ಥಿಕ ವರ್ಷದ ಆರಂಭದಲ್ಲಿಯೇ ನಿಗದಿಯಾಗಿತ್ತು. ಆದರೆ ವರ್ಷ ಪೂರ್ತಿ ಕಳೆದರೂ ಈ ಸಂಬಂಧ ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸದ ಅಧಿಕಾರಿ ವರ್ಗವು, ವರ್ಷದ ಕೊನೆಯ ದಿನಗಳಲ್ಲಿ 4 ಜಿ ವಿನಾಯಿತಿ ಪಡೆದು ಭ್ರಷ್ಟಾಚಾರ ನಡೆಸಿರುವುದು ದಾಖಲೆಗಳಿಂದ ಕಂಡು ಬಂದಿದೆ.

ಏನಿದು ಕಾರ್ಯಕ್ರಮ?

ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ  ತರಕಾರಿ ಬೀಜಗಳನ್ನು (ಹೈಬ್ರಿಡ್) ವಿತರಣೆ ಮಾಡುವ ಮೂಲಕ ತರಕಾರಿ ಉತ್ಪಾದಾನಾ ವೆಚ್ಚ ಕಡಿಮೆ ಮಾಡುವುದು ಮತ್ತು ಗುಣಮಟ್ಟದ ತರಕಾರಿ ಬೀಜಗಳನ್ನು ದೊರಕಿಸಿಕೊಡುವುದು ಈ ಯೋಜನೆಯ ಉದ್ದೇಶ. ರೈತರ ಬೇಡಿಕೆ ಮತ್ತು ಹವಾಮಾನಕ್ಕೆ ಅನುಗುಣವಾಗಿ ಹೈಬ್ರಿಡ್ ಹಾಗೂ ಸುಧಾರಿತ ತಳಿ ತರಕಾರಿ ಬೀಜ ಒದಗಿಸಲು ಇಲಾಖೆಯು ಈ ಕಾರ್ಯಕ್ರಮವನ್ನು ಜಾರಿಗೊಳಿಸಿತ್ತು.

ಇದಕ್ಕಾಗಿ ಪ್ರತಿ ಫಲಾನುಭವಿಗೆ 5,000 ರು ಮೊತ್ತದಲ್ಲಿ ಒಟ್ಟು 40,000 ಫಲಾನುಭವಿಗಳಿಗೆ ತರಕಾರಿ ಬೀಜಗಳ ವಿತರಣೆ ಮಾಡಲು ಭೌತಿಕ ಗುರಿ ನಿಗದಿಪಡಿಸಿತ್ತು.  ಇದಕ್ಕಾಗಿ ಸೂಕ್ತ ಅನುದಾನವನ್ನೂ ನಿಗದಿಪಡಿಸಿತ್ತು.  ಅದೇ ರೀತಿ ಕಲ್ಯಾಣ ಕರ್ನಾಟಕ ಭಾಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಉತ್ತಮ ಗುಣಮಟ್ಟದ ತರಕಾರಿ ಬೀಜಗಳನ್ನು ಯೋಜನೆಯನ್ನು ತೋಟಗಾರಿಕೆ ಇಲಾಖೆಯು ಅನುಷ್ಠಾನಗೊಳಿಸಿತ್ತು. ಈ ಕಾರ್ಯಕ್ರಮವನ್ನು ಜಾರಿಗೊಳಿಸುವ ಪ್ರತೀ ಹಂತದಲ್ಲಿಯೂ ತೋಟಗಾರಿಕೆ ಇಲಾಖೆಯು ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದೆ.

2023-24ನೇ ಸಾಲಿನ ಆಯವ್ಯಯದಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ರೈತರಿಗೆ ತರಕಾರಿ ಬೀಜಗಳ ಕಿಟ್ ವಿತರಣೆಗಾಗಿ ಅನುದಾನ ಮೀಸಲಿರಿಸಿತ್ತು. ಈ ಅನುದಾನದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮದಿಂದಲೇ ಈ ಅನುದಾನ ಬಳಸಿಕೊಳ್ಳಲು ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು.

 

 

ಈ ನಿಗಮದಿಂದಲೇ ತರಕಾರಿ ಬೀಜಗಳ ಕಿಟ್ ಖರೀದಿಸಲು 4 ಜಿ ವಿನಾಯಿತಿ ಪಡೆಯಲು ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಬೇಕು ಎಂದು ಸಚಿವ ಎಸ್‌ ಎಸ್ ಮಲ್ಲಿಕಾರ್ಜುನ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು.

 

 

ಆಯಾ ಕೃಷಿ ವಲಯಕ್ಕೆ ಹಾಗೂ ಋತುವಿಗೆ ಅನುಗುಣವಾಗಿ ತರಕಾರಿ ಬೆಳೆಗಳನ್ನು ಬೆಳೆಯಲು ಈ ಯೋಜನೆ ಅನುಷ್ಟಾನಕ್ಕೆ ಪ್ರತಿ ಫಲಾನುಭವಿಗೆ 2,000 ರು ಮೊತ್ತದಂತೆ ಒಟ್ಟು 20 ಕೋಟಿ ರು ವೆಚ್ಚದಲ್ಲಿ ತರಕಾರಿ ಬೀಜಗಳನ್ನು 1 ಲಕ್ಷ ಫಲಾನುಭವಿಗಳಿಗೆ ನೀಡುವ ಗುರಿ ಹೊಂದಿದೆ. ಈ ಬೀಜಗಳನ್ನು ಕರ್ನಾಟಕ ರಾಜ್ಯ ಬೀಜ ನಿಗಮದಿಂದಲೇ ಖರೀದಿಸಬೇಕು ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕರು ಸಹ ನಿರ್ದೇಶನ ನೀಡಿದ್ದರು.

 

 

ಟೆಂಡರ್ ಆಹ್ವಾನಿಸದ ಇಲಾಖೆ

2023-24ನೇ ಸಾಲಿನಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿಯಲ್ಲಿ ತರಕಾರಿ ಬೀಜಗಳ ವಿತರಣೆ ಕಾರ್ಯಕ್ರಮವು ಹಿಂದಿನ  ಆರ್ಥಿಕ  ವರ್ಷದಲ್ಲಿಯೇ ನಿಗದಿಯಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆಯು ಆರಂಭದಲ್ಲಿಯೇ ಯಾವುದೇ ಟೆಂಡರ್ ಆಹ್ವಾನಿಸಲು  ಕ್ರಮವಹಿಸಿರಲಿಲ್ಲ.  ಬದಲಿಗೆ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು 4 ಜಿ ವಿನಾಯಿತಿ ಕೋರಿದ್ದ  ತೋಟಗಾರಿಕೆ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು.

ಇದನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು 1500.00 ಲಕ್ಷ ರು ವೆಚ್ಚದಲ್ಲಿ ಕರ್ನಾಟಕ ಬೀಜ ನಿಗಮ ಮೂಲಕ ಖರೀದಿಸಲು  ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂ 4 (ಜಿ) ಅಡಿ 2023ರ ಡಿಸೆಂಬರ್ 12ರಂದೇ ವಿನಾಯಿತಿ ನೀಡಿತ್ತು.

 

 

 

 

ಬೀಜ ನಿಗಮದಲ್ಲಿ ದಾಸ್ತಾನೇ ಇರಲಿಲ್ಲ

ಕರ್ನಾಟಕ ರಾಜ್ಯ ಬೀಜ ನಿಗಮದಿಂದಲೇ ತರಕಾರಿ ಬೀಜಗಳನ್ನು ಖರೀದಿಸಿ ಫಲಾನುಭವಿ ರೈತರಿಗೆ ಒದಗಿಸಲಾಗುವುದು ಎಂದು ತೋಟಗಾರಿಕೆ ಇಲಾಖೆಯು ತನ್ನ ಪ್ರಸ್ರಾವನೆಯಲ್ಲಿ ತಿಳಿಸಿತ್ತು. ಇಲಾಖೆಗೆ ನಿಗದಿಪಡಿಸಿದ್ದ ಗುರಿ ಪ್ರಕಾರ ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿ ಬೀಜಗಳು ದಾಸ್ತಾನೇ ಇರಲಿಲ್ಲ.

 

 

ಈ ಸಂಬಂಧ ಯಾದಗಿರಿಯ ರಾಘವೇಂದ್ರ ಬಿ ಗಿರಣಿ ಎಂಬುವರು ಕರ್ನಾಟಕ ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಮಾಹಿತಿ ಕೋರಿದ್ದರು. ತೋಟಗಾರಿಕೆ ಇಲಾಖೆಗೆ ತರಕಾಋಇ ಬೀಜ ವಿತರಣೆ ಯೋಜನೆ ಅಡಿಅಯಲ್ಲಿ ವಿವಿಧ ಜಿಲ್ಲೆಯ ಕೆಎಸ್‌ಎಸ್‌ಸಿನಿಂದ ತರಕಾರಿ ಬೀಜ ವಿತರಣೆಗೆ ಅಧಿಕೃತವಾಗಿ ತರಕಾರಿ ಬೀಜಗಳ ದಾಸ್ತಾನಿನ ವಿವರ ಕೋರಿದ್ದರು. ಅಲ್ಲದೇ ಈ ಬೀಜ ಭವನದಲ್ಲಿ ಯಾವ ಯಾವ ತರಕಾರಿ ಬೀಜಗಳು, ಎಷ್ಟು ಪ್ರಮಾಣದಲ್ಲಿ ದಾಸ್ತಾನು ಹೊಂದಿವೆ, ಲಾಟ್‌ ನಂಬರ್‍‌ನೊಂದಿಗೆ ಮಾಹಿತಿ ಒದಗಿಸಬೇಕು ಎಂದು ರಾಘವೇಂದ್ರ ಕೋರಿದ್ದರು. ಇದಕ್ಕೆ ಉತ್ತರಿಸಿದ್ದ ಬೀಜ ನಿಗಮವು ನಿಗಮದಲ್ಲಿ ತರಕಾರಿ ಬೀಜಗಳ ದಾಸ್ತಾನು ಇರುವುದಿಲ್ಲ ಎಂದು ಮಾಹಿತಿ ಒದಗಿಸಿತ್ತು.

ಬೀಜ ನಿಗಮದಲ್ಲಿ ತರಕಾರಿ ಬೀಜಗಳ ದಾಸ್ತಾನೇ ಇಲ್ಲದಿದ್ದರೂ ಸಹ ತೋಟಗಾರಿಕೆ ಇಲಾಖೆಯು ಈ ನಿಗಮದಿಂದಲೇ ತರಕಾರಿ ಬೀಜ ಖರೀದಿಸಲು 4 ಜಿ ವಿನಾಯಿತಿ ಕೋರಿತ್ತು. ಇಲಾಖೆಯ ಈ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

ಮಾರುಕಟ್ಟೆ ದರಕ್ಕಿಂತಲೂ 4 ಪಟ್ಟು ಹೆಚ್ಚಿನ ದರ

4 ಜಿ ವಿನಾಯಿತಿ ಪಡೆದಿದ್ದ ಕರ್ನಾಟಕ ರಾಜ್ಯ ಬೀಜ ನಿಗಮವು ಮಾರುಕಟ್ಟೆ ದರಕ್ಕಿಂತಲೂ 4 ಪಟ್ಟು ಹೆಚ್ಚು ದರದಲ್ಲಿ ಇಲಾಖೆಗೆ ತರಕಾರಿ ಬೀಜಗಳನ್ನು ಪೂರೈಕೆ ಮಾಡಿತ್ತು. ಅಲ್ಲದೇ ಈ ಬೀಜ  ನಿಗಮವು ಸ್ವತಃ ತರಕಾರಿ ಬೀಜಗಳನ್ನು ಸರಬರಾಜು ಮಾಡದೇ ಶೇ. 6ಷ್ಟು ಕಮಿಷನ್ ಪಡೆದು ಸೋಮನಾಥ್ ಸೀಡ್ಸ್‌ ಪ್ರೈವೈಟ್‌ ಲಿಮಿಟೆಡ್ ಸೇರಿದಂತೆ  ಕೆಲ ಏಜೆನ್ಸಿಗಳ ಮೂಲಕ ಸರಬರಾಜು ಮಾಡಿತ್ತು.

 

 

 

 

 

 

ಏಜೆನ್ಸಿಗಳು ಸರಬರಾಜು ಮಾಡಿದ್ದ ದರವನ್ನು ಮಾರುಕಟ್ಟೆ ದರಕ್ಕೆ ಹೋಲಿಸಿದಲ್ಲಿ 4 ಪಟ್ಟು ಹೆಚ್ಚು ದುಬಾರಿ ದರವಿರುವುದು ಕಂಡು ಬಂದಿದೆ. ವಿಶೇಷವೆಂದರೇ ಟೊಮ್ಯಾಟೋ, ಬೆಂಡೆಕಾಯಿ, ಹೀರೇಕಾಯಿ, ಬದನೆ ಮತ್ತು ಬೀನ್ಸ್‌ ತರಕಾರಿ ಬೀಜಗಳಿಗೆ ಒಂದೇ ತೆರನಾದ ದರ ವಿಧಿಸಿತ್ತು. ತಲಾ ಬೀನ್ಸ್‌ ಹೊರತುಪಡಿಸಿ ಉಳಿದ ತರಕಾರಿಗಳ ಬೀಜಗಳಿಗೆ ತಲಾ 10 ಗ್ರಾಂ ಗೆ 350 ರು ವಿಧಿಸಿತ್ತು. ಈ ಎಲ್ಲಾ ತರಕಾರಿ ಬೀಜಗಳ ದರವು ಒಂದೇ ರೀತಿ ಇರಲು ಸಾಧ್ಯವೇ ಎಂಬ ಪ್ರಶ್ನೆಯು ಸಹ ಎದುರಾಗಿದೆ.

4 ಜಿ ಷರತ್ತು ಉಲ್ಲಂಘಿಸಿದೆಯೇ ಇಲಾಖೆ?.

ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯ ಉಪ ಯೋಜನೆಯಾಗಿರುವ ತರಕಾರಿ ಬೀಜಗಳ ವಿತರಣೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು 4 ಜಿ ವಿನಾಯಿತಿ ನೀಡಿದ್ದ ಆರ್ಥಿಕ ಇಲಾಖೆಯು ಷರತ್ತುಗಳನ್ನು ವಿಧಿಸಿತ್ತು. ಕರ್ನಾಟಕ ರಾಜ್ಯ ಬೀಜ ನಿಗಮವು ಕನಿಷ್ಠ ಬೆಂಬಲ ಬೆಲೆ ಕಾರ್ಯ ವಿಧಾನದ ಪ್ರಕಾರ ರೈತರಿಂದಲೇ ತರಕಾರಿ ಬೀಜಗಳನ್ನು ನೇರವಾಗಿ ಖರೀದಿ ಮಾಡಬೇಕು. ನಿಗಮವು ಬೇರೆ ಯಾವುದೇ ಮೂಲದಿಂದ ತರಕಾರಿ ಬೀಜಗಳನ್ನು ಪಡೆಯುತ್ತಿದ್ದರೇ ಅದನ್ನು ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳ ಪ್ರಕಾರ ಟೆಂಡರ್ ಪ್ರಕ್ರಿಯೆ ಮೂಲಕವೇ ಸಂಗ್ರಹಿಸಬೇಕು. ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಟೆಂಡರ್ ಪ್ರಕ್ರಿಯೆ ಮೂಲಕ ಸಂಗ್ರಹಣೆ ಮಾಡಿಕೊಳ್ಳಬೇಕು ಎಂದು ಆರ್ಥಿಕ ಇಲಾಖೆಯು ಷರತ್ತನ್ನು ವಿಧಿಸಿತ್ತು.

 

 

ಆದರೆ ಕರ್ನಾಟಕ ರಾಜ್ಯ ಬೀಜ ನಿಗಮವು  ಈ ಪೈಕಿ ಯಾವ ಷರತ್ತನ್ನೂ ಪಾಲಿಸಿಲ್ಲ.

ಅದೇ ರೀತಿ ಪ್ರಥಮ ವರ್ಷದಲ್ಲಿ 4 ಜಿ ವಿನಾಯಿತಿ ನೀಡುವಾಗ ಇದೇ ಕಡೆಯ ಅನುಮತಿ, ಮುಂದಿನ ದಿನಗಳಲ್ಲಿ 4 ಜಿ ವಿನಾಯಿತಿ ಪಡೆಯದೇ ಟೆಂಡರ್ ಪ್ರಕ್ರಿಯೆ ಮೂಲಕವೇ ತರಕಾರಿ ಬೀಜಗಳನ್ನು ಪಡೆಯಬೇಕು ಎಂದು ಸ್ಪಷ್ಟವಾಗಿ ತಿಳಿಸಿತ್ತು.  ಮುಂದಿನ ವರ್ಷದಿಂದ ವರ್ಷದ ಆರಂಭದಲ್ಲಿಯೇ ಪ್ರಸ್ತಾಪಿತ ಬೀಜಗಳನ್ನು ನಿಯಮಾನುಸಾರ ಟೆಂಡರ್ ಆಹ್ವಾನಿಸಿ ಖರೀದಿಸಬೇಕು ಎಂಬ ಷರತ್ತಿಗೆ ಒಳಪಡಿಸಿತ್ತು. ಈ ಸಂಬಂಧ  2023ರ ಡಿಸೆಂಬರ್ 14ರಂದು  ಇಲಾಖೆಯ ನಿರ್ದೇಶಕರಿಗೆ ಪತ್ರವನ್ನೂ ಬರೆದಿತ್ತು. ಮತ್ತು 4 ವಿನಾಯಿತಿಯನ್ನು 2023ನೇ ವರ್ಷಕ್ಕೆ ಮಾತ್ರ ಸೀಮಿತಗೊಳಿಸಿತ್ತು.

 

ಆದರೂ ನಂತರದ ವರ್ಷಗಳಲ್ಲೂ ಟೆಂಡರ್ ಪ್ರಕ್ರಿಯೆ ನಡೆಸದೆಯೇ ನೇರವಾಗಿ 4 ಜಿ ವಿನಾಯಿತಿಗೆ ಪ್ರಸ್ತಾವ ಸಲ್ಲಿಸಿತ್ತು.

2025-26ನೇ ಸಾಲಿನಲ್ಲಿಯೂ ತರಕಾರಿ ಬೀಜಗಳ ಕಿಟ್ ಕಾರ್ಯಕ್ರಮ ಅನುಷ್ಠಾನಗೊಳಿಸಲು ತೋಟಗಾರಿಕೆ ಇಲಾಖೆಯು 4 ಜಿ ವಿನಾಯಿತಿಗೆ ಕದ ತಟ್ಟಿತ್ತು. ಟೆಂಡರ್ ಪ್ರಕ್ರಿಯೆ ಕೈಗೊಳ್ಳದೇ ನೇರವಾಗಿ ಕರ್ನಾಟಕ ರಾಜ್ಯ ಬೀಜನಿಗಮದ ಮೂಲಕವೇ ಖರೀದಿಸುವುದರ ಸಾಧಕ ಬಾಧಕಗಳ ಕುರಿತು ಸಂಕ್ಷಿಪ್ತ ವರದಿಯನ್ನು ಆರ್ಥಿಕ ಇಲಾಖೆಯು ಕೇಳಿತ್ತು. ಈ ಸಂಬಂಧ ತೋಟಗಾರಿಕೆ ಇಲಾಖೆಯು ವರದಿ ನೀಡಿತ್ತು.

ವರದಿಯಲ್ಲೇನಿದೆ?

ಕರ್ನಾಟಕ ರಾಜ್ಯ ಬೀಜ ನಿಗಮವು ನೋಂದಾಯಿತ ಸರ್ಕಾರಿ ಸ್ವಾಮ್ಯದ್ದಾಗಿದೆ. ಕೃಷಿ ಪ್ರಮುಖ ಪರಿಕರದಂತಹ ಬೀಜಗಳ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದೆ. ರಾಜ್ಯದ ರೈತರಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಮೂಲಕ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡುವ ಕಾರ್ಯಚಟುವಟಿಕೆ ನಡೆಸುತ್ತಿದೆ.

 

 

ಹಲವು ಬಗೆಯಲ್ಲಿ ತರಕಾರಿ ಬೀಜಗಳಿದ್ದು ವಿವಿಧ ಹೈಬ್ರಿಡ್ ಹಾಗೂ ಸುಧಾರಿತ ತಳಿಗಳೂ ಇರುತ್ತವೆ. ಸ್ಥಳೀಯ ಪ್ರದೇಶಗಳ ರೈತರ ಬೇಡಿಕೆ ಬೇರೆ ಬೇರೆ ಇದೆ. ಒಂದೇ ತರಕಾರಿ ಬೆಳೆಯಲ್ಲಿ ಬಹಳಷ್ಟು ಸಂಖ್ಯೆಯ ಬೀಜೋತ್ಪಾದನೆ ಮಾಡುವ ಕಂಪನಿಗಳು ತೊಡಗಿಸಿಕೊಂಡಿವೆ. ಹಾಗೂ ಪ್ರತಿಯೊಂದು ಕಂಪನಿಗಳ ಬೀಜಗಳ ದರಗಳು ಸಹ ವಿಭಿನ್ನವಾಗಿವೆ. ಹೀಗಾಗಿ ಕರ್ನಾಟಕ ರಾಜ್ಯ ಬೀಜನಿಗಮದಿಂದಲೇ ತರಕಾರಿ ಬೀಜಗಳನ್ನು ಖರೀದಿಸಲು 4 ಜಿ ವಿನಾಯಿತಿ ನೀಡಬೇಕು ಎಂದು ತೋಟಗಾರಿಕೆ ಇಲಾಖೆಯು ಸಮರ್ಥಿಸಿಕೊಂಡಿತ್ತು.

 

 

ಅದೇ ರೀತಿ ಪ್ರಸ್ತಾಪಿತ ಬೀಜಗಳನ್ನು ಕರ್ನಾಟಕ ರಾಜ್ಯ ಬೀಜನಿಗಮವು ತನ್ನ ಸ್ವಂತ ಸಂಪನ್ಮೂಲಗಳಿಂದಲೇ ಉತ್ಪಾದಿಸಿ ಸರಬರಾಜು ಮಾಡುತ್ತದೆಯೇ ಅಥವಾ ಬಾಹ್ಯ ಸಂಗ್ರಹಣೆ ಮೂಲಕ ಸರಬರಾಜು ಮಾಡಲಿದೆಯೇ ಎಂದು ಆರ್ಥಿಕ ಇಲಾಖೆಯು ಮಾಹಿತಿ ಕೋರಿತ್ತು.  ಇದಕ್ಕೆ ಮಾಹಿತಿ ನೀಡಿದ್ದ ಇಲಾಖೆಯು ‘ ಕರ್ನಾಟಕ ರಾಜ್ಯ ಬೀಜನಿಗಮವು ಕೃಷಿ ಬೆಳೆಗಳಿಗೆ ಸಂಬಂಧಿಸಿದಂತೆ ಬೀಜೋತ್ಪಾದನೆಯಲ್ಲಿ ತೊಡಗಿದೆ. ತರಕಾರಿ ಬೀಜಗಳನ್ನು ಸ್ವತಃ ಬೀಜೋತ್ಪಾದನೆ ಮಾಡುತ್ತಿಲ್ಲ,’ ಎಂದು ವರದಿಯಲ್ಲಿ ವಿವರಿಸಿತ್ತು.

ಇದಷ್ಟೇ ಅಲ್ಲ ಟೆಂಡರ್ ನಿಯಮಾವಳಿಗಳ ಅನ್ವಯ ಇ-ಪ್ರೊಕ್ಯೂರ್‍‌ಮೆಂಟ್‌ ಪೋರ್ಟಲ್‌ ಮೂಲಕ ಟೆಂಡರ್ ಆಹ್ವಾನಿಸಿ ಅರ್ಹ ತರಕಾರಿ ಬೀಜಗಳು, ತರಕಾರಿ ಕಿರು ಬುತ್ತಿಗೆಗಳನ್ನು ಬೀಜೋತ್ಪಾದಕರು, ಬೀಜ ಪೂರೈಕೆದಾರರನ್ನು ಗುರುತಿಸಲಾಗುವುದು. 2025-26ನೇ ಸಾಲಿನಲ್ಲಿಯೂ ಸಹ ಸುಧಾರಿತ, ಸಂಕರಣ ತರಕಾರಿ ಬಿತ್ತನೆ ಬೀಜಗಳನ್ನು  ಮತ್ತು ತರಕಾರಿ ಕಿರು ಬುತ್ತಿಗೆಗಳ ನೋಂದಾಯಿತ ಸರಬರಾಜುದಾರನ್ನು 2025-26ನೇ ಸಾಲಿಗೆ ಎಂಪ್ಯಾನಲ್ ಮಾಡಿಕೊಂಡಿದೆ. ಈ ಪೂರೈಕೆದಾರರ ಮೂಲಕ ಪ್ರಸ್ತಾಪಿತ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡಲಾಗುವುದು ಎಂದು ನಿಗಮವು ನೀಡಿದ್ದ ವರದಿಯನ್ನೇ ಆರ್ಥಿಕ ಇಲಾಖೆಗೆ ಸಲ್ಲಿಸಿತ್ತು.  ಇದೇ ವರದಿಯಲ್ಲಿ ಕರ್ನಾಟಕ ರಾಜ್ಯ ಬೀಜನಿಗಮವು ಸ್ವಂತ ಸಂಪನ್ಮೂಲಗಳಿಂದ ತರಕಾರಿ ಬಿತ್ತನೆ ಬೀಜ ಉತ್ಪಾದಿಸುತ್ತಿಲ್ಲ ಎಂದು ಪುನರುಚ್ಛರಿಸಿತ್ತು.

ಹಾಗೆಯೇ ಈ ಸಂಸ್ಥೆಯು ಸರಬರಾಜು ಮಾಡಿರುವ ಬೀಜಗಳ ಕುರಿತು ಇಲ್ಲಿಯವರೆಗೂ ಯಾವುದೇ ದೂರುಗಳು ಸಲ್ಲಿಕೆಯಾಗಿಲ್ಲ. ಇಲಾಖೆಯು ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಪ್ರತೀ ವರ್ಷವೂ ಕೆಎಸ್‌ಎಸ್‌ಸಿಯಿಂದಲೇ ಪ್ರಸ್ತಾಪಿತ ಬೀಜಗಳನ್ನು ಪಡೆದುಕೊಳ್ಳುತ್ತಿದೆ. ಈ ವರ್ಷವೂ ಸಹ ಇದೇ ಸಂಸ್ಥೆಯಿಂದಲೇ ಬೀಜಗಳನ್ನು ಖರೀದಿಸಲು ಮುಂದಾಗಿದೆ ಎಂದು ತಿಳಿಸಿತ್ತು.

ಟೆಂಡರ್ ಏಕೆ ಬೇಡವೆಂದಿತ್ತು?

ತೋಟಗಾರಿಕೆ ಇಲಾಖೆಗೆ ಕೇವಲ ಒಂದು ವರ್ಷದ ಅವಧಿಗಷ್ಟೇ 4 ಜಿ ವಿನಾಯಿತಿ ನೀಡಿದ್ದ  ಅರ್ಥಿಕ ಇಲಾಖೆಯು, ಮುಂದಿನ ವರ್ಷದಿಂದ ಟೆಂಡರ್ ಪ್ರಕ್ರಿಯೆ ನಡೆಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿತ್ತು. ಆದರೆ ತೋಟಗಾರಿಕೆ ಇಲಾಖೆಯು ಟೆಂಡರ್ ಪ್ರಕ್ರಿಯೆಯೇ ಬೇಡವೆಂದಿತ್ತು. ‘ ಟೆಂಡರ್ ಪ್ರಕ್ರಿಯೆ ಮೂಲಕ ಇಂತಹ ಬೀಜಗಳನ್ನು  ಖರೀದಿ ಮಾಡಿದಲ್ಲಿ ಕೆಲವು ಸಂಸ್ಥೆಗಳು ಕಡಿಮೆ ದರಗಳನ್ನು  ಟೆಂಡರ್‍‌ನಲ್ಲಿ ನಮೂದಿಸಿ ನಂತರದಲ್ಲಿ ಉತ್ತಮ ಗುಣಮಟ್ಟದ ಬೀಜಗಳನ್ನು ಸರಬರಾಜು ಮಾಡಲು ವಿಫಲವಾದಲ್ಲಿ ರೈತರಿಗೆ ಉತ್ತಮ ಬೆಳೆ ಬೆಳೆಯಲು ಅವಕಾಶವಾಗುವುದಿಲ್ಲ. ಮತ್ತು ಇಂತಹ ಸಂದರ್ಭದಲ್ಲಿ ಇಲಾಖೆಯು ಯೋಜನೆಯ ಅನುಷ್ಠಾನಕ್ಕೆ ಬಹಳ ತೊಂದರೆಯಾಗಲಿದೆ,’ ಎಂದು ಅಲವತ್ತುಕೊಂಡಿತ್ತು.

2 ಬಾರಿ ಪ್ರಸ್ತಾವನೆ ತಿರಸ್ಕರಿಸಿದ್ದ ಮುಖ್ಯಮಂತ್ರಿ

ಆದರೆ ಈ ಪ್ರಸ್ತಾವವನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು 2024 ಮತ್ತು 2025ರಲ್ಲಿ  ಎರಡು ಬಾರಿ  ತಿರಸ್ಕರಿಸಿತ್ತು. ಆಡಳಿತ ಇಲಾಖೆಯು ಪ್ರಸ್ತಾವಿಸಿದ ತರಕಾರಿ ಬಿತ್ತನೆ ಬೀಜಗಳಾದ ಟೊಮಾಟೋ, ಬೆಂಡಿ, ಬದನೆ, ಹಸಿ ಮೆಣಸಿನಕಾಯಿ, ಮೂಲಂಗಿ, ಬೀನ್ಸ್‌ ಮುಂತಾದವುಗಳನ್ನು ಸ್ವಂತ ಸಂಪನ್ಮೂಲದಿಂದ ಉತ್ಪಾದಿಸಿ ಸರಬರಾಜು ಮಾಡುತ್ತಿರುವುದು ಕಂಡುಬರುತ್ತಿಲ್ಲ.

 

 

ಟೆಂಡರ್ ಮೂಲಕವೇ ಇದನ್ನು ಸಂಗ್ರಹಿಸಬೇಕು. ಈ ರೀತಿ ಕೆಎಸ್‌ಎಸ್‌ಸಿ ಸಂಸ್ಥೆಯ ಆಡಳಿತಾತ್ಮಕ ವೆಚ್ಚದೊಂದಿಗೆ ಹೆಚ್ಚುವರಿ ವೆಚ್ಚ ಪಾವತಿಸಿ ಖರೀದಿ ಮಾಡುವ ಬದಲಾಗಿ ಇಲಾಖೆಯಿಂದ ನೇರವಾಗಿ ಟೆಂಡರ್ ಮೂಲಕವೇ ಖರೀದಿಸಿದಲ್ಲಿ 2,000 ರು. ಗಳ ಮೊತ್ತದಲ್ಲಿ ಹೆಚ್ಚಿನ ಪ್ರಮಾಣದ ಬೀಜಗಳನ್ನು ರೈತರಿಗೆ ವಿತರಿಸಲು ಅವಕಾಶವಾಗುತ್ತದೆ ಎಂದು 2024ರ ಆಗಸ್ಟ್‌ 22ರಂದೇ ಆರ್ಥಿಕ ಇಲಾಖೆಯು ತಿಳಿಸಿತ್ತು. ಇಲಾಖೆಯ ಈ ಅಭಿಪ್ರಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದ್ದರು.

 

 

ಆದರೂ ಸಹ ತೋಟಗಾರಿಕೆ ಇಲಾಖೆಯು 2025ರಲ್ಲಿಯೂ ಮತ್ತೊಮ್ಮೆ ಕೆಎಸ್‌ಎಸ್‌ಸಿ ಪರವಾಗಿಯೇ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು  ಕೆಎಸ್‌ಎಸ್‌ಸಿಯು ಕೇವಲ ಏಜೆಂಟ್ ಮಾತ್ರವಾಗಿದೆ. ಈ ಏಜೆನ್ಸಿಯು ಯಾವುದೇ ಉತ್ಪನ್ನವನ್ನು ಉತ್ಪಾದಿಸುವುದಿಲ್ಲ. ಹೀಗಾಗಿ ಈ ಸಂಸ್ಥೆಗೆ 4 ಜಿ ವಿನಾಯಿತಿ ನೀಡುವುದು ಸಮಂಜಸವಲ್ಲವೆಂದು ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವವನ್ನು 2025ರ ಸೆ.19ರಂದೇ ತಿರಸ್ಕರಿಸಿತ್ತು. ಇದಕ್ಕೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದ್ದರು.

 

ಆದರೂ ಇಲಾಖೆಯು ಕೆಎಸ್‌ಎಸ್‌ಸಿಯಿಂದಲೇ ಬೀಜಗಳನ್ನು ಪೂರೈಕೆ ಮಾಡಲು ಹಠಕ್ಕೆ ಬಿದ್ದಿತ್ತು.

ಕಲ್ಯಾಣ ಕರ್ನಾಟಕಕ್ಕೆ 5,000 ರು ನಿಗದಿಪಡಿಸಿದ್ದ ಇಲಾಖೆ

ಕಲ್ಯಾಣ ಕರ್ನಾಟಕದಲ್ಲಿ ತರಕಾರಿ ಬೆಳೆಯುವ ರೈತರು ಇರದಿದ್ದರೂ ಸಹ ಈ ಭಾಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 38,000 ಫಲಾನುಭವಿ ರೈತರಿಗೆ ತರಕಾರಿ ಬೀಜಗಳನ್ನು ವಿತರಣೆ ಮಾಡಲು ಇಲಾಖೆಯು ಹೇಳಿದೆ. ವಾಸ್ತವದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ರೈತರು ತರಕಾರಿ ಬೆಳೆ ಬೆಳೆಯುತ್ತಿಲ್ಲ. ಆದರೂ ಈ ಕಾರ್ಯಕ್ರಮದ ಅನುದಾನವನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕದ ತಟ್ಟಿತ್ತು.

 

 

ಮಂಡಳಿಯು ಸಹ ಈ ಕಾರ್ಯಕ್ರಮದ ಕ್ರಿಯಾ ಯೋಜನೆಗೆ  2024ರ ನವೆಂಬರ್‍‌ 20ರಂದು ಆದೇಶ ಹೊರಡಿಸಿತ್ತು.  ಬೀದರ್, ಕಲ್ಬುರ್ಗಿ ಮತ್ತು ರಾಯಚೂರು ಜಿಲ್ಲೆಗಳಿಗೆ 9.50 ಕೋಟಿ ರು ವೆಚ್ಚದಲ್ಲಿ ತರಕಾರಿ ಬೀಜಗಳನ್ನು ವಿತರಿಸಲು ಅನುಮೋದನೆ ನೀಡಿ ಆದೇಶಿಸಿತ್ತು. ಅದೂ ಸಹ ಕರ್ನಾಟಕ ರಾಜ್ಯ ಬೀಜ ನಿಗಮದಿಂದಲೇ ಖರೀದಿಸಿ ಯೋಜನೆ ಅನುಷ್ಠಾನ ಮಾಡಲು ಕೋರಿತ್ತು.

 

 

ಸುಳ್ಳು ಹೇಳಿದ್ದ ಬೀಜ ನಿಗಮ?

ಕಲ್ಯಾಣ ಕರ್ನಾಟಕ ಭಾಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಉತ್ತಮ ಗುಣಮಟ್ಟದ ತರಕಾರಿ ಬೀಜಗಳನ್ನು ವಿತರಣೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಬೀಜ ನಿಗಮವು ಸರ್ಕಾರಕ್ಕೇ  ಸುಳ್ಳು ಹೇಳಿತ್ತು. ಮಾಹಿತಿ ಹಕ್ಕಿನಡಿಯಲ್ಲಿ ಕೇಳಿದ್ದ ಅರ್ಜಿಗೆ ಮಾಹಿತಿ ಒದಗಿಸಿದ್ದ ನಿಗಮವು, ತನ್ನ ಬಳಿ ಯಾವುದೇ ದಾಸ್ತಾನು ಇರುವುದಿಲ್ಲ ಎಂದು ಹೇಳಿತ್ತು. ಆದರೆ 2025ರ ಮಾರ್ಚ್‌ 11ರಂದು ಸರ್ಕಾರಕ್ಕೆ ಬರೆದಿದ್ದ ಪತ್ರದಲ್ಲಿ  ಕೆಎಸ್‌ಎಸ್‌ಸಿ ಸಂಸ್ಥೆಯಲ್ಲಿ ಪ್ರಸ್ತುತ 35 ಕೋಟಿ ಮೌಲ್ಯದ ತರಕಾರಿ ಬಿತ್ತನೆ ಬೀಜಗಳಾದ ಟೊಮ್ಯಾಟೋ, ಬೆಂಡೆ, ಬದನೆ, ಹಸಿಮೆಣಸಿನ ಕಾಯಿ, ಕ್ಯಾಪ್ಸಿಕಮ್, ಬೀನ್ಸ್, ಮೂಲಂಗಿ, ಹೀರೇಕಾಯಿ, ಸೋರೇಕಾಯಿ, ಹಾಗಲಕಾಯಿ, ಸೌತೇಕಾಯಿ, ಚವಳಿಕಾಯಿ, ಕ್ಯಾರೆಟ್, ಸೊಪ್ಪಿನ ತರಕಾರಿ ಹಾಗೂ ಇನ್ನಿತರೆ ಸುಧಾರಿತ ತರಕಾರಿ ಬೀಜಗಳು ಲಭ್ಯವಿದೆ ಎಂದು ಹೇಳಿತ್ತು.

 

 

ಬೀದರ್, ಕಲ್ಬುರ್ಗಿ, ರಾಯಚೂರು, ಯಾಧಗಿರಿ, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ತರಕಾರಿ ಬಿತ್ತನೆ ಬೀಜಗಳನ್ನು ಪೂರೈಸಲು  ತೋಟಗಾರಿಕೆ ಇಲಾಖೆಯು 19.00 ಕೋಟಿ ರು ವೆಚ್ಚಕ್ಕೆ 2025ರ ಮಾರ್ಚ್‌ 15ರಂದು ಆದೇಶ ಹೊರಡಿಸಿತ್ತು.

 

 

‘ಫಲಾನುಭವಿಗಳಿಗೆ ವಿತರಣೆ ಮಾಡುವ 10 ಗ್ರಾಂನಲ್ಲಿ ಎಷ್ಟು ಪ್ರದೇಶದಲ್ಲಿ ತರಕಾರಿ ಬೆಳೆಯಬಲ್ಲದು, ಈ 10 ಗ್ರಾಂನಲ್ಲಿ ತರಕಾರಿ ಬೆಳೆಯುವ ರೈತರು ಆರ್ಥಿಕವಾಗಿ ಲಾಭಗಳಿಸಲು ಸಾಧ್ಯವೇ, ಈ ರೀತಿ 1 ಲಕ್ಷ ರೈತರಿಗೆ ಬೀಜ ವಿತರಣೆ ಮಾಡಿದಲ್ಲಿ 100 ಜನರ ರೈತರಿಗೂ ಸಹ  ಅನುಕೂಲವಾಗುವುದಿಲ್ಲ. 1 ಲಕ್ಷ ರೈತರಲ್ಲಿ ಕೇವಲ 100 ಮಂದಿ ರೈತರು ತರಕಾರಿ ಬೆಳೆದಿರುವ ಬಗ್ಗೆ ದಾಖಲೆ ಬಹಿರಂಗಪಡಿಸಬೇಕು. ಅಲ್ಲದೇ ಕೆಎಸ್‌ಎಸ್‌ಸಿಯವರು ಶೇ. 6ರಷ್ಟು ಕಮಿಷನ್ ಪಡೆದು ರೈತರಿಗೆ ದ್ರೋಹ ಎಸಗಿದೆ. ಇದೊಂದು ಬಹಿರಂಗ ಭ್ರಷ್ಟಾಚಾರವಾಗಿದೆ,’ ಎಂದು ಆಪಾದಿಸುತ್ತಾರೆ ರಾಘವೇಂದ್ರ.

Hot this week

13,646.51 ಕೋಟಿ ಹೆಚ್ಚುವರಿ ವೆಚ್ಚ; ಗೃಹ ಲಕ್ಷ್ಮಿಯದ್ದೇ ಸಿಂಹಪಾಲು, ಹೆಚ್ಚುವರಿ ಖರ್ಚಿಗೆ ಕಾರಣಗಳೇ ಇಲ್ಲ, ಸಿಎಜಿ ಆಕ್ಷೇಪ

ಬೆಂಗಳೂರು;  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯು 2024-25ನೇ ಸಾಲಿನಲ್ಲಿ ...

2,298 ಕೋಟಿ ರು ಮೊತ್ತದ ಬಿಲ್‌ ಬಾಕಿ; 276 ಕಾಮಗಾರಿ ಅಪೂರ್ಣ, ಬೊಕ್ಕಸ ಬರಿದಾಯಿತೇ?

ಬೆಂಗಳೂರು; ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಕೈಗೆತ್ತಿಕೊಂಡಿದ್ದ  ಕಾಮಗಾರಿಗಳು ನಿಗದಿತ ಅವಧಿಯಲ್ಲಿ...

ಪುಸ್ತಕಗಳ ಖರೀದಿಯಲ್ಲಿ ವಂಚನೆ, ಭ್ರಷ್ಟಾಚಾರ ಆರೋಪ;ಎಚ್ ಟಿ ಪೋತೆ ಅವರ ವಿರುದ್ಧ ಕ್ರಮಕ್ಕೆ ಮೀನಮೇಷ

ಬೆಂಗಳೂರು;  ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ...

ಬಿಆರ್‍‌ಜಿಎಫ್‌ ಅನುದಾನದಲ್ಲಿ ಅಕ್ರಮ; ಲೋಕಾ ಶಿಫಾರಸ್ಸು ತಿರಸ್ಕೃತ, ಹಿರಿಯ ಐಎಎಸ್ ಅಧಿಕಾರಿ ವಿರುದ್ಧದ ಪ್ರಕರಣ ಮುಕ್ತಾಯ!

ಬೆಂಗಳೂರು; ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ನೀಡಿದ್ದ ಅನುದಾನ ಮತ್ತು...

96.73 ಕೋಟಿ ರು ರಿಯಾಯಿತಿ ಕೋರಿದ ದಾಲ್ಮಿಯಾ ಸಿಮೆಂಟ್ಸ್‌; ನಿಯಮ ಪಾಲನೆಯೋ, ಉಲ್ಲಂಘನೆಯೋ?

ಬೆಂಗಳೂರು; ಗಣಿಗಾರಿಕೆ ಉದ್ಯಮದಲ್ಲಿ  ಆಂಧ್ರ ಪ್ರದೇಶ, ರಾಜಸ್ತಾನ ಸರ್ಕಾರವು ನೀಡಿರುವ ರಿಯಾಯಿತಿಯನ್ನು...

Topics

13,646.51 ಕೋಟಿ ಹೆಚ್ಚುವರಿ ವೆಚ್ಚ; ಗೃಹ ಲಕ್ಷ್ಮಿಯದ್ದೇ ಸಿಂಹಪಾಲು, ಹೆಚ್ಚುವರಿ ಖರ್ಚಿಗೆ ಕಾರಣಗಳೇ ಇಲ್ಲ, ಸಿಎಜಿ ಆಕ್ಷೇಪ

ಬೆಂಗಳೂರು;  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯು 2024-25ನೇ ಸಾಲಿನಲ್ಲಿ ...

2,298 ಕೋಟಿ ರು ಮೊತ್ತದ ಬಿಲ್‌ ಬಾಕಿ; 276 ಕಾಮಗಾರಿ ಅಪೂರ್ಣ, ಬೊಕ್ಕಸ ಬರಿದಾಯಿತೇ?

ಬೆಂಗಳೂರು; ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಕೈಗೆತ್ತಿಕೊಂಡಿದ್ದ  ಕಾಮಗಾರಿಗಳು ನಿಗದಿತ ಅವಧಿಯಲ್ಲಿ...

ಪುಸ್ತಕಗಳ ಖರೀದಿಯಲ್ಲಿ ವಂಚನೆ, ಭ್ರಷ್ಟಾಚಾರ ಆರೋಪ;ಎಚ್ ಟಿ ಪೋತೆ ಅವರ ವಿರುದ್ಧ ಕ್ರಮಕ್ಕೆ ಮೀನಮೇಷ

ಬೆಂಗಳೂರು;  ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ...

ಬಿಆರ್‍‌ಜಿಎಫ್‌ ಅನುದಾನದಲ್ಲಿ ಅಕ್ರಮ; ಲೋಕಾ ಶಿಫಾರಸ್ಸು ತಿರಸ್ಕೃತ, ಹಿರಿಯ ಐಎಎಸ್ ಅಧಿಕಾರಿ ವಿರುದ್ಧದ ಪ್ರಕರಣ ಮುಕ್ತಾಯ!

ಬೆಂಗಳೂರು; ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ನೀಡಿದ್ದ ಅನುದಾನ ಮತ್ತು...

96.73 ಕೋಟಿ ರು ರಿಯಾಯಿತಿ ಕೋರಿದ ದಾಲ್ಮಿಯಾ ಸಿಮೆಂಟ್ಸ್‌; ನಿಯಮ ಪಾಲನೆಯೋ, ಉಲ್ಲಂಘನೆಯೋ?

ಬೆಂಗಳೂರು; ಗಣಿಗಾರಿಕೆ ಉದ್ಯಮದಲ್ಲಿ  ಆಂಧ್ರ ಪ್ರದೇಶ, ರಾಜಸ್ತಾನ ಸರ್ಕಾರವು ನೀಡಿರುವ ರಿಯಾಯಿತಿಯನ್ನು...

ಬ್ಯಾಕ್‌ ಟು ಬ್ಯಾಕ್ ಸಾಲ,12 ಪ್ರತಿಶತದಷ್ಟು ಹೆಚ್ಚಳ, ಅಸಲನ್ನೂ ಮೀರಿಸಲಿದೆಯೆ ಬಡ್ಡಿ ಮರುಪಾವತಿ?

ಬೆಂಗಳೂರು; 2024-25ನೇ ಸಾಲಿನಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರವು ಪಡೆದಿರುವ ಸಾರ್ವಜನಿಕ ಸಾಲವು...

1.16 ಕೋಟಿ ನಿಷ್ಕ್ರೀಯ ಖಾತೆಗಳಲ್ಲಿದೆ 3,403 ಕೋಟಿ; ಪರಿಣಾಮ ಬೀರದ ಆರ್‍‌ಬಿಐ ಮೇಲ್ವಿಚಾರಣೆ

ಬೆಂಗಳೂರು; ಸರ್ಕಾರಿ ಸೌಲಭ್ಯ ಪಡೆಯಲು ರಾಜ್ಯದ ರಾಷ್ಟ್ರೀಕೃತ ಮತ್ತಿತರೆ ಖಾಸಗಿ ಬ್ಯಾಂಕ್‌ಗಳಲ್ಲಿ...

ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ನ 850 ಕೋಟಿ ಬಾಕಿ ಪ್ರಕರಣ; ಕೇಂದ್ರ, ರಾಜ್ಯ ಸರ್ಕಾರಕ್ಕೆ ಲೀಗಲ್ ನೋಟೀಸ್‌

ಬೆಂಗಳೂರು; ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಲಿಮಿಟೆಡ್‌ಗೆ ನಿಯಮಬಾಹಿರವಾಗಿ ಲೆಟರ್ ಆಫ್‌...

Related Articles

Popular Categories

error: Content is protected !!