ಬೆಂಗಳೂರು; ಮಾರುಕಟ್ಟೆಯಲ್ಲಿ ಅಂದಾಜು 94 ಕೋಟಿ ರು ಬೆಲೆಬಾಳುವ 11.83 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು ಶ್ರೀ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠ ಸೇರಿದಂತೆ ಒಟ್ಟು 22 ಸಂಘ ಸಂಸ್ಥೆಗಳು ಮತ್ತು ಮಠಗಳಿಗೆ ನಿಯಮ ಉಲ್ಲಂಘಿಸಿ ಮಂಜೂರು ಮಾಡಲು ಸಚಿವ ಸಂಪುಟವು ಅನುಮೋದಿಸಿದೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯಿಂದ 18 ಕಿ ಮೀ ವ್ಯಾಪ್ತಿಯೊಳಗೆ ಬರುವ ರಾವುತನಹಳ್ಳಿ ಗ್ರಾಮದಲ್ಲಿರುವ ಜಮೀನುಗಳಿಗೆ ಸರ್ಕಾರಿ ಮಾರ್ಗಸೂಚಿ ಮೌಲ್ಯದ ಪ್ರಕಾರ ಎಕರೆಗೆ 4,85,62,000 ರು ಬೆಲೆ ಇದೆ. ಇದರ ಪ್ರಕಾರವೇ 92.93 ಕೋಟಿಯಷ್ಟು ಈ ಜಮೀನು ಬೆಲೆಬಾಳಲಿದೆ. ಈ ಜಮೀನನ್ನು ಮಂಜೂರು ಮಾಡಲು ಕಾನೂನು ಮತ್ತು ಆರ್ಥಿಕ ಇಲಾಖೆಯು ಅಸಮ್ಮತಿ ವ್ಯಕ್ತಪಡಿಸಿತ್ತು. ಆದರೂ ಸಹ ಸಿದ್ದರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟವು ಮಂಜೂರಾತಿಗೆ ಅನುಮತಿ ನೀಡಿದೆ.
ಈ ಮೊದಲು ಇವೇ ಸಂಘ ಸಂಸ್ಥೆ, ಮಠಗಳಿಗೆ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಮಾಚೋಹಳ್ಳಿ ಅರಣ್ಯ ಪ್ರದೇಶದಲ್ಲೇ ಜಮೀನುಗಳನ್ನು ಮಂಜೂರು ಮಾಡಿತ್ತು. ಈ ಮಂಜೂರಾತಿಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆಯಲ್ಲದೇ ಪ್ರಕರಣವು ವಿಚಾರಣೆ ಹಂತದಲ್ಲಿದೆ. ಹೀಗಾಗಿ ನ್ಯಾಯಾಲಯದಿಂದ ಛೀಮಾರಿ ತಪ್ಪಿಸಿಕೊಳ್ಳುವ ಭರದಲ್ಲಿ ಇವೇ ಸಂಘ ಸಂಸ್ಥೆ, ಮಠಗಳಿಗೆ ಗೋಮಾಳವನ್ನು ಮಂಜೂರು ಮಾಡಲು ಅನುಮತಿ ನೀಡಿ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದೆ.
ಇದಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದ ರಹಸ್ಯ ಹಾಳೆಗಳು ದಿ ಫೈಲ್ ಗೆ ಲಭ್ಯವಾಗಿವೆ.

ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿಯಲ್ಲಿ ರಾವುತ್ತನಹಳ್ಳಿಯಲ್ಲಿ ಕೃಷಿ ಜಮೀನು ಮಾರ್ಗಸೂಚಿ ಮೌಲ್ಯದ ಪ್ರಕಾರ ಎಕರೆಗೆ ಒಂದು ಕೋಟಿ ರುಪಾಯಿ ಇದೆ. ಅಭಿವೃದ್ಧಿ ಹೊಂದದ ಕೃಷಿಯೇತರ ಜಮೀನು, ಎಕರೆಗೆ 1,80,00,000 ರು ಇದೆ. ಅಭಿವೃದ್ಧಿ ಹೊಂದದ ಜಮೀನು ಮಾರ್ಗಸೂಚಿ ಮೌಲ್ಯದ ಪ್ರಕಾರ ಎಕರೆಗೆ 4,85,62,000 ರು ಇದೆ. ಮಾರುಕಟ್ಟೆ ಮೌಲ್ಯವು ಕನಿಷ್ಠ 6ರಿಂದ 8 ಕೋಟಿಯಷ್ಟು ಇದೆ. ಎಕರೆಗೆ 8 ಕೋಟಿ ರುಪಾಯಿ ಲೆಕ್ಕಾಚಾರದ ಪ್ರಕಾರ 11.83 ಎಕರೆಗೆ 94 ಕೋಟಿ ರು ಬೆಲೆಬಾಳಲಿದೆ.

ಬೆಂಗಳೂರು ನಗರ ಜಿಲ್ಲೆ ಉತ್ತರ ತಾಲೂಕಿನ ದಾಸನಪುರ ಹೋಬಳಿಯ ರಾವುತ್ತನಹಳ್ಳಿ ಗ್ರಾಮದ ಸರ್ವೆ ನಂಬರ್ 57 ಮತ್ತು 58ರಲ್ಲಿ ಸರ್ಕಾರಿ ಗೋಮಾಳ ಜಮೀನಿದೆ. ಸರ್ವೆ ನಂಬರ್ 57ರಲ್ಲಿ ಆಕಾರ್ ಬಂದ್ ಪ್ರಕಾರ 34 ಎಕರೆ 9 ಗುಂಟೆ, ಸರ್ವೆ ನಂಬರ್ 58ರಲ್ಲಿ ಆಕಾರ್ ಬಂದ್ ನಂತೆ 18 ಎಕರೆ 5 ಗುಂಟೆ ವಿಸ್ತೀರ್ಣವಿದೆ.
ಈ ಜಮೀನಿನಲ್ಲಿ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠಕ್ಕೆ 1 ಎಕರೆ ವಿಸ್ತೀರ್ಣ ಸೇರಿದಂತೆ ಒಟ್ಟಾರೆ 22 ಸಂಘ ಸಂಸ್ಥೆಗಳಿಗೆ 40 ಎಕರೆ 16 ಗುಂಟೆ ಜಮೀನನ್ನು ಮಂಜೂರು ಮಾಡಲು ಪ್ರಸ್ತಾವಿಸಿತ್ತು. ಈ ಪೈಕಿ ಸಚಿವ ಸಂಪುಟವು 11.83 ಎಕರೆಯನ್ನು ಮಂಜೂರು ಮಾಡಿದೆ. ಮಂಜೂರಾತಿ ಪ್ರಸ್ತಾವವಕ್ಕೆ ಸಚಿವ ಕೃಷ್ಣಬೈರೇಗೌಡ ಅವರು ಅನುಮೋದಿಸಿದ್ದಾರೆ.
22 ಖಾಸಗಿ ಸಂಘ ಸಂಸ್ಥೆಗಳು ಒಟ್ಟಾರೆ 40.16 ಎಕರೆ ಮಂಜೂರಾತಿಗೆ ಮನವಿ ಸಲ್ಲಿಸಿದ್ದವು.


ಈ ಪೈಕಿ ಸಚಿವ ಸಂಪುಟವು 11.83 ಎಕರೆಯನ್ನು ಮಾತ್ರ ಮಂಜೂರು ಮಾಡಿದೆ.
ಸಂಘ ಸಂಸ್ಥೆ-ಮಠಗಳ ವಿವರ
ಕಾಗಿನೆಲೆ ಮಹಾಸಂಸ್ಥಾನದ ಕನಕಗುರುಪೀಠಕ್ಕೆ 1.00 ಎಕರೆ, ಹೊಸದುರ್ಗದ ಜಗದ್ಗುರು ಅಖಿಲ ಕುಂಚಿಟಿಗ ಮಹಾಸಂಸ್ಥಾನ ಮಠಕ್ಕೆ 1 ಎಕರೆ ಗುಂಟೆ, ಚಿತ್ರದುರ್ಗದ ಎಂ ಕೆ ಹಟ್ಟಿಯ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ ಬೋವಿ ಗುರುಪೀಠಕ್ಕೆ 1 ಎಕರೆ, ಚಿತ್ರದುರ್ಗದ ದಾವಣಗೆರೆ ರಸ್ತೆಯಲ್ಲಿರುವ ಶ್ರೀ ಶಿವಶರಣ ಮಾದರ ಚೆನ್ನಯ್ಯ ಗುರುಪೀಠ ಟ್ರಸ್ಟ್‌ಗೆ 1 ಎಕರೆ ಗುಂಟೆ,

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್‌ಗೆ 1 ಎಕರೆ , ಹೊಸದರ್ಗು ಮಧುರೆಯಲ್ಲಿನ ಶ್ರೀ ಉಪವೀರ ಜಗದ್ಗುರು ವಿದ್ಯಾಸಂಸ್ಥೆಗೆ 1ಎಕರೆ, ಚಿತ್ರದುರ್ಗದ ಗೊಲ್ಲಗಿರಿಯಲ್ಲಿರುವ ಅಖಿಲ ಭಾರತ ಶ್ರೀ ಕೃಷ್ಣಯಾದವ ಮಹಾಸಂಸ್ಥಾನಕ್ಕೆ 0-31 ಗುಂಟೆ, ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಕಾಳಿದಾಸ ಮತ್ತು ಸಂಗೊಳ್ಳಿ ರಾಯಣ್ಣ ವಿದ್ಯಾರ್ಥಿ ನಿಲಯದ ಹಳೇ ವಿದ್ಯಾರ್ಥಿಗಳ ಸಂಘಕ್ಕೆ 1 ಎಕರೆ, ತೀರ್ಥಹಳ್ಳಿಯ ಹುಂಚದಕಟ್ಟೆಯಲ್ಲಿರುವನಾರಾಯಣ ಗುರು ಮಹಾಸಂಸ್ಥಾನಕ್ಕೆ 0-31.08 ಎಕರೆ ಮಂಜೂರು ಮಾಡಿದೆ.

ಅದೇ ರೀತಿ ಚಿತ್ರದುರ್ಗದ ದಾವಣಗೆರೆ ರಸ್ತೆಯಲ್ಲಿರುವ ಜಗದ್ಗುರು ಮಾಚಿದೇವ ಮಠಕ್ಕೆ 0-32 ಎಕರೆ, ಹಾವೇರಿ ಜಿಲ್ಲೆಯ ನರಸೀಪುರ ತಾಲೂಕಿನ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠಕ್ಕೆ 0-32 ಎಕರೆ, ವಿಜಯಪುರದ ಮುದ್ದೇಬಿಹಾಳದ ಶ್ರೀ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನ ಟ್ರಸ್ಟ್‌ಎ 0-31 ಎಕರೆ ಬೆಳಗಾವಿಯ ಅಥಣಿ ತಾಲೂಕಿನ ತೆಲಸಂಗದ ಕುಂಬಾರ ಗುಂಡಯ್ಯ ಮಹಾಸಂಸ್ಥಾನ ಮಠಕ್ಕೆ 0-31 ಎಕರೆ,

ಕಲ್ಬುರ್ಗಿಯ ಚಿತ್ತಾಪುರ ತಾಲೂಕಿನ ಕೊಂಚೂರ ಗ್ರಾಮದಲ್ಲಿರುವ ಸವಿತಾ ಪೀಠ ಚಾರಿಟೇಬಲ್ ಟ್ರಸ್ಟ್‌ಗೆ 0-30 ಎಕರೆ, ಹರಿಹರ ತಾಲೂಕಿನ ಹೇಮಾ-ವೇಮಾ ಸದ್ಬಾವನ ಗುರುಪೀಠಕ್ಕೆ 0-23.12 ಎಕರೆ, ಬೆಂಗಳೂರಿನ ನಿಕೇತನ ಎಜುಕೇಷನ್ ಟ್ರಸ್ಟ್‌ಗೆ 1 ಎಕರೆ, ತುಮಕೂರಿನ ಎಸ್‌ವಿಎಸ್ ಊರುಗೋಲು ವೃದ್ಧಾಶ್ರಮ ಚಾರಿಟೇಬಲ್ ಟ್ರಸ್ಟ್‌ಗೆ 0-35.08 ಎಕರೆ, ಬೆಂಗಳೂರಿನ ವಿಜಯನಗರದಲ್ಲಿರುವ ಹಿಂದುಳಿದ ದಲಿತ ಮಠಾಧೀಶ್ವರ ಒಕ್ಕೂಟಕ್ಕೆ 0-35 ಎಕರೆ ಮಂಜೂರು ಮಾಡಿದೆ.

ಹಾಗೆಯೇ ಕರ್ನಾಟಕ ರಾಜ್ಯ ಅಹಲ್ಯಾಬಾಯಿ ಹೋಲ್ಕರ್ ಮಹಿಳಾ ಸಂಘದ ಉದ್ದೇಶಿತ ಸಮುದಾಯ ಭವನ, ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ 1 ಎಕರೆ, ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚಲವಾದಿ ಗುರುಪೀಠಕ್ಕೆ 0-32 ಎಕರೆ,


ಚಿತ್ರದುರ್ಗದಲ್ಲಿರುವ ಅಖಿಲ ಕರ್ನಾಟಕ ಶ್ರೀ ಗುರು ಮೇದಾರ ಕೇತೇಶ್ವರ ಟ್ರಸ್ಟ್‌ಗೆ 0-30 ಎಕರೆ, ಬೆಂಗಳೂರಿನ ತಾವರೆಕೆರೆಯಲ್ಲಿರುವ ಶ್ರೀ ಹಠಯೋಗಿ ಕಾಳಪ್ಪ ಸ್ವಾಮಿಗಳ ಮಠದ ಸೇವಾ ಟ್ರಸ್ಟ್‌ಗೆ 0-32 ಎಕರೆಯನ್ನು ಮಂಜೂರು ಮಾಡಿದೆ.

ನಗರ ವ್ಯಾಪ್ತಿಯಲ್ಲಿದೆ 11.83 ಎಕರೆ
ಪ್ರಸ್ತಾವಿತ ಸರ್ವೆ ನಂಬರ್ 57 ಮತ್ತು 58ರಲ್ಲಿನ ಜಮೀನುಗಳಿಗೆ ರಸ್ತೆ ಸಂಪರ್ಕವಿದೆ. ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97ರ ಅಡಿಯಲ್ಲಿ ರಾಸುಗಳ ಮೇವಿಗಾಗಿ ಗೋಮಾಳವನ್ನು ಮೀಸಲಿರಿಸಲು ಬೇರೆ ಸರ್ಕಾರಿ ಜಮೀನು ಲಭ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು ವರದಿಯಲ್ಲಿ ವಿವರಿಸಿದ್ದರು. ಅಲ್ಲದೇ ಈ ಸರ್ವೆ ನಂಬರ್ 57 ಮತ್ತು 58ರ ಜಮೀನುಗಳು ಅರ್ಕಾವತಿ ನದಿಗೆ ಹೊಂದಿಕೊಂಡಿವೆ. ಅಲ್ಲದೇ ಈ ಜಮೀನು ನಗರ ವ್ಯಾಪ್ತಿಯಲ್ಲಿದೆ.
ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22-ಎ(2) ಪ್ರಕಾರ ನಗರ ಪೌರ ಸರಹದ್ದಿನೊಳಗೆ ಇರುವ ಸರ್ಕಾರಿ ಭೂಮಿಯನ್ನು ಯಾವುದೇ ಖಾಸಗಿ ವ್ಯಕ್ತಿ, ಸಂಸ್ಥೆಗೆ ಮಂಜೂರು ಮಾಡಲು ಅವಕಾಶವಿಲ್ಲ.

ಅಲ್ಲದೇ ಗೋಮಾಳ ಜಮೀನುಗಳನ್ನು ಖಾಸಗಿ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಅವಕಾಶವೇ ಇಲ್ಲ. ಸರ್ವೋಚ್ಛ ನ್ಯಾಯಾಲಯವು ಜಗಪಾಲ್ ಸಿಂಗ್/ಪಂಜಾಬ್ ರಾಜ್ಯ ಸರ್ಕಾರ, ಜೋಗಿಂದರ್ ಮತ್ತು ಹರ್ಯಾಣ ರಾಜ್ಯ ಸರ್ಕಾರದ ವಿಶೇಷ ಮೇಲ್ಮನವಿ ಪ್ರಕರಣದಲ್ಲಿ ಗೋಮಾಳ, ಜಲಮೂಲ ಜಮೀನುಗಳನ್ನು ಸಾರ್ವಜನಿಕ ಉಪಯೋಗಕ್ಕೆ ಸಂರಕ್ಷಿಸಿಡಬೇಕು. ಈ ಸಂಬಂಧ ಸುಪ್ರೀಂ ಕೋರ್ಟ್ ಸಹ ಎಲ್ಲಾ ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನವನ್ನೂ ನೀಡಿದೆ. ಹೀಗಾಗಿ 22 ಸಂಘ ಸಂಸ್ಥೆಗಳಿಗೆ ಈ ಜಮೀನು ಮಂಜೂರಾತಿಗೆ ಅವಕಾಶವಿಲ್ಲ ಎಂದು ಸಚಿವ ಸಂಪುಟ ಟಿಪ್ಪಣಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ಕಾನೂನು ಅಭಿಪ್ರಾಯವೇನು?
ರಾವುತನಹಳ್ಳಿ ಗ್ರಾಮದಲ್ಲಿರುವ 40.16 ಎಕರೆ ವಿಸ್ತೀರ್ಣದ ಜಮೀನುಗಳನ್ನು ಖಾಸಗಿ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡುವ ಸಂಬಂಧ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ನೀಡಿದ್ದ ಮಾಹಿತಿ ಅನುಸಾರ ಕಾನೂನು ಇಲಾಖೆಯೂ ಅಭಿಪ್ರಾಯ ನೀಡಿದೆ.

ಇದರ ಪ್ರಕಾರ ರಾವುತನಹಳ್ಳಿ ಗ್ರಾಮದ ಸರ್ವೇ ನಂಬರ್ 57ರಲ್ಲಿ ಕರ್ದಾ; ಖರಾಬು ಇಲ್ಲ, ಮುಫೋತ್ ಗೋಮಾಳ ಮತ್ತು ಸರ್ವೇ ನಂಬರ್ 58ರಲ್ಲಿ ಕರ್ದಾ; ಖರಾಬು ಇಲ್ಲ, ಬೀಳು ಎಂದು ದಾಖಲಾಗಿದೆ. ಅಲ್ಲದೇ ಈ ಜಮೀನು ನಗರ ವ್ಯಾಪ್ತಿಯೊಳಗೆ ಇರುವ ಕಾರಣ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22-ಎ(2)ರ ಅನ್ವಯ ಪೌರ ಸರಹದ್ದಿನೊಳಗೆ ಇರುವ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿ, ಸಂಘ ಸಂಸ್ಥೆಗೆ ಮಂಜೂರು ಮಾಡಲು ಅವಕಾಶವಿಲ್ಲ ಎಂದು ಕಾನೂನು ಇಲಾಖೆಯು ತನ್ನ ಅಭಿಪ್ರಾಯದಲ್ಲಿ ವಿವರಿಸಿದೆ.

ಅಲ್ಲದೇ ಕಾನೂನು ಇಲಾಖೆಯು ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನವನ್ನೂ ತನ್ನ ಅಭಿಪ್ರಾಯದಲ್ಲಿ ಉಲ್ಲೇಖಿಸಿದೆ.

ಈ ಎಲ್ಲಾ ಕಾರಣಗಳನ್ನು ಮುಂದೊಡ್ಡಿದ್ದ ಕಾನೂನು ಇಲಾಖೆಯು, 40.16 ಎಕರೆ ಜಮೀನನನ್ನು ಮಂಜೂರು ಮಾಡಲು ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಇದೇ ಅಭಿಪ್ರಾಯವನ್ನು ಆರ್ಥಿಕ ಇಲಾಖೆಯೂ ಮುಂದುವರೆಸಿದೆಯಲ್ಲದೇ ಅನುಮೋದಿಸಿ, ಕಂದಾಯ ಇಲಾಖೆಯ ಪ್ರಸ್ತಾವವನ್ನು ತಿರಸ್ಕರಿಸಿದೆ. ಕಾನೂನು ಮತ್ತು ಆರ್ಥಿಕ ಇಲಾಖೆಯು ನೀಡಿದ್ದ ಅಭಿಪ್ರಾಯವನ್ನೂ ಕಂದಾಯ ಇಲಾಖೆಯು ಒಪ್ಪಿಕೊಂಡಿದೆ.

ಆದರೂ ಈ ಪ್ರಸ್ತಾವವನ್ನು ಸಚಿವ ಸಂಪುಟಕ್ಕೆ ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದರು.

ಅಂತಿಮವಾಗಿ 40.16 ಎಕರೆ ಜಮೀನಿನ ಪೈಕಿ 11.83 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು 22 ಖಾಸಗಿ ಸಂಘ ಸಂಸ್ಥೆಗಳಿಗೆ ಮಾರುಕಟ್ಟೆ ಮೌಲ್ಯದ ಶೇ.100ರಷ್ಟು ಹಾಗೂ ಇನ್ನಿತರೆ ಶಾಸನಬದ್ಧ ಶುಲ್ಕಗಳನ್ನು ವಿಧಿಸಿ ಮಂಜೂರು ಮಾಡಿದೆ.
ಮಾಚೋಹಳ್ಳಿ ಅರಣ್ಯ ಜಮೀನು ಹಂಚಿಕೆ; ಅರಣ್ಯ, ಆರ್ಥಿಕ, ಕಾನೂನು ಇಲಾಖೆ ಅಸಮ್ಮತಿಸಿದ್ದರೂ ಮಂಜೂರು
ಮಾಚೋಹಳ್ಳಿ ಅರಣ್ಯ ಜಮೀನನ್ನು ಹಂಚಿಕೆ ಮಾಡಿದ್ದ ಪ್ರಕರಣದ ಕುರಿತು ದಿ ಫೈಲ್, ಸಚಿವ ಸಂಪುಟದ ಕಡತದ ರಹಸ್ಯ ಹಾಳೆಗಳನ್ನಾಧರಿಸಿ ವರದಿ ಪ್ರಕಟಿಸಿತ್ತು.









