ಬೆಂಗಳೂರು; ರಾಮಗಢ್, ದೋಣಿಮಲೈ, ಡೆಕ್ಕನ್ ಮೈನಿಂಗ್, ಕುಮಾರಸ್ವಾಮಿ ಬ್ಲಾಕ್, ಹನುಮಾನ್ ಮೈನ್ಸ್ ಸೇರಿದಂತೆ ಒಟ್ಟು 14 ಗಣಿ ಗುತ್ತಿಗೆ ಬ್ಲಾಕ್‌ಗಳನ್ನು ಹರಾಜು ಮಾಡಲು ವೇಳಾಪಟ್ಟಿ ಅಂತಿಮಗೊಳಿಸಿ ತಕ್ಷಣವೇ ಹರಾಜು ಮಾಡಲು ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಾಣಿಜ್ಯ, ಕೈಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ನಿರ್ದೇಶನ ನೀಡಿರುವುದು ಇದೀಗ ಬಹಿರಂಗವಾಗಿದೆ.
ಬಳ್ಳಾರಿ, ತುಮಕೂರು, ವಿಜಯನಗರ ಜಿಲ್ಲೆಯಲ್ಲಿ ಒಟ್ಟು 14 ಬ್ಲಾಕ್‌ಗಳನ್ನು ಹರಾಜು ಮಾಡುವ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಈ ಪ್ರಸ್ತಾವಗಳನ್ನು ಪರಿಶೀಲಿಸಿದ್ದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ (ಗಣಿ) ಸರ್ಕಾರದ ಕಾರ್ಯದರ್ಶಿಯು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೊಂದಿಗೆ ಚರ್ಚಿಸಿತ್ತು. ಈ ಪ್ರಸ್ತಾವದ ಕುರಿತು ಅಧಿಕಾರಿಗಳೊಂದಿಗಿನ ಚರ್ಚೆ ನಂತರ 14 ಬ್ಲಾಕ್‌ಗಳನ್ನು ಹರಾಜು ಮಾಡಲು ವೇಳಾಪಟ್ಟಿಯನ್ನು ಅಂತಿಮಗೊಳಿಸಿ ಎಂದು ಸೂಚಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಟಿಪ್ಪಣಿ ಹಾಳೆಗಳು ಮತ್ತು ಕೆಲವು ದಾಖಲೆಗಳು ದಿ ಫೈಲ್‌ಗೆ ಲಭ್ಯವಾಗಿವೆ.
ಅದೇ ರೀತಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಅಂತರ-ಇಲಾಖೆ ಸಮನ್ವಯಕ್ಕಾಗಿ ಪ್ರತ್ಯೇಕವಾದ ಒಂದು ಸಿಸಿಎಫ್ ಹುದ್ದೆಯನ್ನು ಸಹ ಸೃಜಿಸಲು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಅನುಮೋದಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಮುಖ್ಯಮಂತ್ರಿಯ ನಿರ್ದೇಶನಗಳೇನು?
ಗುತ್ರಿಗೆ ಅಮಲ್ಜಾರಿಗೊಂಡು ಕಾರ್ಯಾಚರಣೆ ಪ್ರಾರಂಭಿಸದೇ ಇರುವ 2 ಪ್ರಕರಣಗಳಲ್ಲಿನ ತಾಂತ್ರಿಕ ಕಾನೂನು ತೊಡಕುಗಳನ್ನು ಕೂಡಲೇ ಪರಿಹರಿಸಬೇಕು. ಮತ್ತು ಕಾರ್ಯಾಚರಣೆ ಪ್ರಾರಂಭಿಸಲು ಅಥವಾ ರದ್ದುಪಡಿಸಲು ಕ್ರಮವಹಿಸಬೇಕು. ಹರಾಜುಗೊಂಡು ಗುತ್ತಿಗೆ ಅಮಲ್ಜಾರಿ ಆಗದೇ ಇರುವ ಹಳೆಯ 9 ಗಣಿ ಗುತ್ತಿಗೆಗಳು ಮತ್ತು ಇತ್ತೀಚೆಗೆ ಹರಾಜುಗೊಂಡ 10 ಬ್ಲಾಕ್‌ಗಳನ್ನು ಕಾರ್ಯಾಚರಣೆಗೆ ತರಲು ಕಾಲಮಿತಿ ಯೋಜನೆ ರೂಪಿಸಬೇಕು. ತಕ್ಷಣವೇ ಗಣಿ ಚಟುವಟಿಕೆ ಪ್ರಾರಂಭಿಸಲು ಕ್ರಮವಹಿಸಬೇಕು ಎಂದು ಸೂಚಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಮುಂದಿನ ದಿನಗಳಲ್ಲಿ ಹರಾಜು ಪ್ರಕ್ರಿಯೆ ನಡೆಸಲು ಗುರುತಿಸಿರುವ 14 ಬ್ಲಾಕ್‌ಗಳನ್ನು ಹರಾಜು ಮಾಡಲು ವೇಳಾಪಟ್ಟಿ ಅಂತಿಮಗೊಳಿಸಬೇಕು. ತಕ್ಷಣವೇ ಹರಾಜು ಮಾಡಲು ಕ್ರಮ ವಹಿಸಬೇಕು. ಕಾನೂನು ತೊಡಕುಗಳಿದ್ದಲ್ಲಿ ಅಡ್ವೋಕೇಟ್ ಜನರಲ್ ಅವರ ಸಲಹೆ ಪಡೆದು ಹರಾಜು ನಡೆಸಬೇಕು ಎಂದು ನಿರ್ದೇಶಿಸಿರುವುದು ಗೊತ್ತಾಗಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಅಂತರ-ಇಲಾಖೆ ಸಮನ್ವಯಕ್ಕಾಗಿ ಪ್ರತ್ಯೇಕವಾದ ಒಂದು ಸಿಸಿಎಫ್ ಹುದ್ದೆಯನ್ನು ಸೃಜಿಸಲು ಅನುಮೋದಿಸಿದ್ದಾರೆ. ಅಲ್ಲದೇ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯು ಅರಣ್ಯ ಇಲಖೆಯಿಂದ ಒಂದು ಸಿಸಿಎಫ್ ಹುದ್ದೆಯನ್ನು ಸ್ಥಳಾಂತರಿಸಿ ಸೂಕ್ತ ಅಧಿಕಾರಿಯನ್ನು ನಿಯೋಜಿಸಬೇಕು ಎಂದು ಸೂಚಿಸಿರುವುದು ತಿಳಿದು ಬಂದಿದೆ.
ಹರಾಜುಗೊಂಡ ಗಣಿ ಗುತ್ತಿಗೆಗಳನ್ನು ಕೂಡಲೇ ಕಾರ್ಯಾಚರಣೆಗೆ ತರಬೇಕು. ಇತರೆ ಪ್ರಸ್ತಾವಿತ ಕಾರ್ಯಗಳಿಗೆ ಗಣಿ ಇಲಾಖೆಯಲ್ಲಿ ಒಂದು ಪ್ರಾಜೆಕ್ಟ್ ಮಾನಿಟರಿಂಗ್ ಯುನಿಟ್ ಸ್ಥಾಪಿಸಲು ತಾತ್ವಿಕ ಅನುಮೋದನೆ ನೀಡಿದೆ. ಅದರಂತೆ ಪಿಎಂಯು ರಚನೆ ಸೇರಿದಂತೆ ಇತರೆ ಅಂಶಗಳ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚಿಸಿ ಸೂಕ್ತ ಆದೇಶ ಹೊರಡಿಸಬೇಕು. ಹಾಗೆಯೇ ಗಣಿ ಇಲಾಖೆಯಲ್ಲಿ ಪ್ರತ್ಯೇಕವಾದ ಕಾನೂನು ಕೋಶ ಸ್ಥಾಪಿಸುವ ಕುರಿತು ಅಡ್ವೋಕೇಟ್ ಜನರಲ್ ಅವರೊಂದಿಗೆ ಸಮಾಲೋಚಿಸಿ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ನಿರ್ದೇಶಿಸಿರುವುದು ಗೊತ್ತಾಗಿದೆ.

ಬಳ್ಳಾರಿಯ ರಾಮದುರ್ಗದ ಉತ್ತರ ಬ್ಲಾಕ್‌ನಲ್ಲಿ ಒಟ್ಟು 117.00 ಹೆಕ್ಟೇರ್,ದಕ್ಷಿಣ ಬ್ಲಾಕ್‌ನಲ್ಲಿ 64.76 ಹೆಕ್ಟೇರ್ ಪ್ರದೇಶದಲ್ಲಿ ಗಣಿ ಗುತ್ತಿಗೆ ಹರಾಜು ಪ್ರಕ್ರಿಯೆಯನ್ನು ಒಂದು ತಿಂಗಳ ಒಳಗೇ ಪೂರ್ಣಗೊಳಿಸಬೇಕಿದೆ. ಈ ಬ್ಲಾಕ್‌ನಲ್ಲಿ ಗಣಿ ಗುತ್ತಿಗೆ ಸಂಬಂಧ 2022ರ ಏಪ್ರಿಲ್ 8ರಂದು ಅಧಿಸೂಚನೆ ಹೊರಡಿಸಿತ್ತು. ಈ ವೇಳೆ ಎಂಎಸ್‌ಪಿಎಲ್ ಕೂಡ ಇದಕ್ಕೆ ಆಕ್ಷೇಪಣೆ ಎತ್ತಿತ್ತು. ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನೂ (14510/2021) ಸಹ ಸಲ್ಲಿಸಿತ್ತು. ಈ ಅರ್ಜಿಗೆ ಸಂಬಂಧಿಸಿದಂತೆ 2022ರ ಜನವರಿ 20ರಂದು ಹರಾಜು ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ.
ಬಳ್ಳಾರಿಯ ರಾಮಘಡ್‌ನಲ್ಲಿನ 106.05 ಹೆಕ್ಟೇರ್ , ತುಮಕೂರಿನಲ್ಲಿನ ಹಬ್ಬಿಗೆ ಗುಡ್ಡದಲ್ಲಿನ 108.43 ಹೆಕ್ಟೇಪ್ರದೇಶದಲ್ಲಿ ಕಬ್ಬಿಣ ಅದಿರು ಗಣಿಗಾರಿಕೆ ಹರಾಜು ಪ್ರಕ್ರಿಯೆ ನಡೆಸಬೇಕಿದೆ. ಆದರೆ ಈ ಎರಡೂ ಗಣಿ ಗುತ್ತಿಗೆಗೆಳನ್ನು ಒಟ್ಟುಗೂಡಿಸಲಾಗಿದೆ. 2025ರ ಏಪ್ರಿಲ್ 8ರಂದು ಸಿಇಸಿಯು ಕೂಡ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಪಿಟೀಷನ್ (ಸಿವಿಲ್) ವರದಿ ಸಲ್ಲಿಸಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಕೆಐಎಸ್‌ಎಂಎಯು ಸಹ ಸುಪ್ರೀಂ ಕೋರ್ಟ್‌ನಲ್ಲ ಅರ್ಜಿ ಸಲ್ಲಿಸಿದೆ. ಇದನ್ನೂ ಸಹ ಒಂದು ತಿಂಗಳೊಳಗೇ ಹರಾಜು ಮಾಡಬೇಕಿದೆ.
ಬಳ್ಳಾರಿಯ ದೋಣಿ ಮಲೈ ರೇಂಜ್‌ನಲ್ಲಿ 75.22 ಹೆಕ್ಟೇರ್‍ನಲ್ಲಿ ಗಣಿಗಾರಿಕೆ ನಡೆಸಲು ಎಂಇಸಿಎಲ್ ಅರಣ್ಯ ಇಲಾಖೆಯ ಅನುಮತಿಗಾಗಿ ಪ್ರಸ್ತಾವ ಸಲ್ಲಿಸಿದೆ. ಅರಣ್ಯ ಇಲಾಖೆಯು ತೀರುವಳಿ ನೀಡಿದ 6 ತಿಂಗಳ ನಂತರ ಗಣಿಗಾರಿಕೆ ಚಟುವಟಿಕೆಗಳು ನಡೆಯಲಿವೆ. 2025ರ ಡಿಸೆಂಬರ್ 15ರಂದು ಸರ್ವೆ ನಡೆಸಲು ಅನುಮತಿ ನೀಡಿತ್ತು.

2026ರ ಜನವರಿ 17ರಮದು ಪ್ರಾಥಮಿಕ ಸರ್ವೆ ನಡೆದಿದೆ. ಇದಾದ ನಂತರ 2026ರ ಜೂನ್ 15ರಂದು ಬಳಕೆದಾರ ಏಜೆನ್ಸಿಯು ಪರಿಷ್ಕೃತ ಪ್ರಸ್ತಾವ ಸಲ್ಲಿಸಿದೆ. ಇದು ಸಹ ಪಿಎಸ್‌ಸಿ ಸಭೆಯ ಮುಂದೆ ಇಡಲಾಗಿದೆ. ಏಕ ಗವಾಕ್ಷಿ ಸಮಿತಿಯು ಸಹ 2026ರ ಜೂನ್ 24ರಂದು ನಡೆದಿತ್ತು. 2026ರ ಜುಲೈ 7ರೊಳಗೆ ಅರಣ್ಯ ಇಲಾಖೆಯೂ ಸಹ ತನ್ನ ತೀರುವಳಿ ನೀಡಲಾಗುವುದು ಎಂದು ಹೇಳಿತ್ತು.
ಧರ್ಮಾಪುರ ಬ್ಲಾಕ್‌ನಲ್ಲಿ 130.44 ಹೆಕ್ಟೇರ್‍ನಲ್ಲಿ ಎಂಇಸಿಎಲ್ ಈಗಾಗಲೇ ಅರಣ್ಯ ಇಲಾಖೆಯಿಂದ ತೀರುವಳಿ ಪಡೆಯಲು 2024ರ ಆಗಸ್ಟ್ 6ರಂದು ಪ್ರಸ್ತಾವ ಸಲ್ಲಿಸಿದೆ. ಡಿಜಿಪಿಎಸ್ ಸರ್ವೆಯಲ್ಲಿನ ದತ್ತಾಂಶಗಳನ್ನು ಅಧಿಕೃತಗೊಳಿಸಲಾಗಿದೆ. ಅರಣ್ಯ ಪ್ರದೇಶದ ಸರ್ವೇ ಮಾಡಲು 2025ರ ನವೆಂಬರ್ 19 ಮತ್ತು ಡಿಸೆಂಬರ್ 15ರಂದು ನೆನಪೋಲೆ ಕಳಿಸಿದೆ. ಈ ಸಂಬಂಧ 2026ರ ಜೂನ್ 15ರಂದು ಬಳಕೆದಾರ ಏಜೆನ್ಸಿಯು ಇಡಿಎಸ್ ಗೆ ಪ್ರತಿಕ್ರಿಯೆ ನೀಡಿದೆ.

ಏಕ ಗವಾಕ್ಷಿ ಸಮಿತಿಯೂ ಸಹ 2026ರ ಜೂನ್ 24ರಂದು ಅರಣ್ಯ ಇಲಾಖೆಯೊಂದಿಗೆ ಸಭೆ ನಡೆಸಿತ್ತು. 2026ರ ಜುಲೈ 7ರೊಳಗೆ ಅರಣ್ಯ ತೀರುವಳಿ ಸಂಬಂಧದ ಪ್ರಸ್ತಾವನೆಯನ್ನು ಇತ್ಯರ್ಥಗೊಳಿಸಲಾಗುವುದು ಎಂದು ತಿಳಿಸಿತ್ತು. ಅರಣ್ಯ ತೀರುವಳಿ ಸಿಕ್ಕಿದ 6 ತಿಂಗಳ ನಂತರ ಗಣಿಗಾರಿಕೆ ಚಟುವಟಿಕೆಗಳು ನಡೆಯಲಿವೆ ಎಂದು ಗೊತ್ತಾಗಿದೆ.
ಬಳ್ಳಾರಿಯ ಎತ್ತಿನಹಟ್ಟಿನ ಬ್ಲಾಕ್‌ನಲ್ಲಿನ 160 ಹೆಕ್ಟೇರ್ ನಲ್ಲಿ ಗಣಿಗಾರಿಕೆ ನಡೆಸಲು 2024ರ ಫೆ.20ರಂದು ಎಂಇಸಿಎಲ್ ಅರ್ಜಿ ಸಲ್ಲಿಸಿದೆ. 4 ಬೋರ್‍ವೆಲ್‌ಗಳನ್ನು ಕೊರೆಯಲು ಅರ್ಜಿಯಲ್ಲಿ ಅನುಮತಿ ಕೋರಿದೆ. ಇದನ್ನು 2024ರ ಮಾರ್ಚ್ 12ರಂದು ಪಿಸಿಸಿಎಫ್ ಗೆ ರವಾನಿಸಿದೆ. ಇಲ್ಲಿಯೂ ಸಹ ಅರಣ್ಯ ತೀರುವಳಿ ಸಿಗಬೇಕಿದೆ. ಈ ತೀರುವಳಿ ಸಿಕ್ಕಿದ 6 ತಿಂಗಳ ನಂತರ ಗಣಿಗಾರಿಕೆ ಚಟುವಟಿಕೆಗಳು ನಡೆಯಲಿವೆ.

ಹದ್ದಿನಪಡೆ ಬ್ಲಾಕ್‌ನಲ್ಲಿ 434 ಹೆಕ್ಟೇರ್‍ನಲ್ಲಿ 9 ಬೋರ್ ವೆಲ್‌ಗಳನ್ನು ಕೊರೆಯಲು ಕೆಐಒಸಿಎಲ್ ಅನುಮತಿ ಕೋರಿದೆ. ಈ ಪ್ರಸ್ತಾವನೆಯನ್ನು ಬಳ್ಳಾರಿಯ ಡಿಎಫ್‌ಒಗೆ 2024ರ ಫೆ.2ರಂದೇ ಕಳಿಸಲಾಗಿದೆ. ಇದಕ್ಕೆ 2024ರ ಜೂನ್ 26ರಂದು ಕೆಐಒಸಿಎಲ್ 6 ಬೋರ್‍ವೆಲ್‌ಗಳನ್ನು ಕೊರೆಯಲು ಅನುಮತಿ ಕೋರಿದೆ. ಆದರೆ ಈ ಪ್ರಸ್ತಾವನೆಯನ್ನು ಪಿಸಿಸಿಎಫ್ 2024ರ ನವೆಂಬರ್ 28ರಂದು ತಿರಸ್ಕರಿಸಿದ್ದಾರೆ.
ರಾಮಗಢ್ ಬ್ಲಾಕ್‌ನ 200 ಹೆಕ್ಟೇರ್‍ನಲ್ಲಿ ಗಣಿಗಾರಿಕೆ ಚಟುವಟಿಕೆ ನಡೆಸಲು ಎಕೋಮನ್ ಮೈನಿಂಗ್ ಪ್ರೈವೈಟ್ ಲಿಮಿಟೆಡ್ ಮುಂದಾಗಿದೆ. ಈ ಚಟುವಟಿಕೆ ನಡೆಸಲು ಕನಿಷ್ಟ 8 ತಿಂಗಳ ಅವಕಾಶ ಬೇಕಿದೆ. ಚಟುವಟಿಕೆ ಕಾರ್ಯ ಪೂರ್ಣಗೊಂಡ ನಂತರ ಒಂದು ತಿಂಗಳ ಅವಧಿಯೊಳಗೆ ಗಣಿ ಗುತ್ತಿಗೆ ಪ್ರದೇಶವನ್ನು ಹರಾಜು ಹಾಕಲು ಪ್ರಸ್ತಾವ ಸಲ್ಲಿಸಲಿದೆ. ವಿಜಯನಗರದ ಆರ್‍ಇಬಿಎಸ್‌ಎಸ್‌ಎನ್ ( ಗಣಿ ಗುತ್ತಿಗೆ 2682) 45 ಹೆಕ್ಟೇರ್‍ನಲ್ಲಿ ಗಣಿ ಗುತ್ತಿಗೆಯು 2026ರ ಜೂನ್ 26ರಂದು ಮುಕ್ತಾಯಗೊಳ್ಳಲಿದೆ. 2026ರ ಅಕ್ಟೋಬರ್ ರೊಳಗೆ ಹರಾಜು ಹಾಕಲು ಪ್ರಸ್ತಾವ ಸಲ್ಲಿಸಲಿದೆ.

ಆರ್‍ಎಂಎಂಪಿಎಲ್ ( ಗಣಿ ಗುತ್ತಿಗೆ ಸಂಖ್ಯೆ 39.5) ಕಂಪನಿಯ ಗಣಿ ಗುತ್ತಿಗೆಯು 2026ರ ಫೆ.23ರಂದೇ ಪೂರ್ಣಗೊಂಡಿದೆ. ಇಲ್ಲಿಯೂ ಸಹ ಗಣಿಗಾರಿಕೆ ಚಟುವಟಿಕೆಗಳು ಪೂರ್ಣಗೊಳ್ಳಲು 6 ತಿಂಗಳ ಅವಧಿ ಬೇಕಿದೆ. ಇದಾದ ನಂತರ ಒಂದು ತಿಂಗಳ ಅವಧಿಯೊಳಗೆ ಹರಾಜು ಪ್ರಕ್ರಿಯೆ ನಡೆಸಬೇಕು. ತುಮಕೂರಿನಲ್ಲಿ ಹನುಮಾನ್ ಮೈನ್ಸ್ ( ಎಂ ಎಲ್ ನಂಬರ್ 2220) ಗಣಿ ಗುತ್ತಿಗೆ ಅವಧಿಯನ್ನು ವಿಸ್ತರಿಸುವ ಪ್ರಸ್ತಾವವನ್ನು ಸರ್ಕಾರವು ತಿರಸ್ಕರಿಸಿದೆ. ಗುತ್ತಿಗೆದಾರರು ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಇದುವರೆಗೂ ನ್ಯಾಯಾಲಯವು ತಡೆಯಾಜ್ಞೆ ನೀಡಿಲ್ಲ. ಈ ಗಣಿ ಗುತ್ತಿಗೆ ಪ್ರದೇಶವನ್ನು ಕೆಐಒಸಿಎಲ್ ಗೆ ಹಂಚಿಕೆ ಮಾಡಿದೆ. ಭೌಗೋಳಿಕ ವರದಿ ಬಂದ ನಂತರ ಈ ಗಣಿ ಗುತ್ತಿಗೆಯನ್ನು ಹರಾಜು ಪ್ರಕ್ರಿಯೆ ನಡೆಸಬಹುದು ಎಂದು ಇಲಾಖೆಯು ಹೇಳಿರುವುದು ಗೊತ್ತಾಗಿದೆ.

ಅದೇ ರೀತಿ ಬಳ್ಳಾರಿಯಲ್ಲಿ 88 ಹೆಕ್ಠೇರ್‍ನಲ್ಲಿರುವ ಕುಮಾರಸ್ವಾಮಿ ಐರನ್ ಓರ್ ಬ್ಲಾಕ್ ಮತ್ತು ಡೆಕ್ಕನ್ ಮೈನಿಂಗ್ ಸಿಂಡಿಕೇಟ್‌ನ್ನು 2026ರ ಅಕ್ಟೋಬರ್‍ನಲ್ಲಿ ಹರಾಜು ಪ್ರಕ್ರಿಯೆ ನಡೆಸಲಿದೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಒಟ್ಟಾರೆ 1,156.26 ಹೆಕ್ಟೇರ್‍ನಲ್ಲಿ 18 ಗುಣಿ ಗುತ್ತಿಗೆ ಬ್ಲಾಕ್‌ಗಳಿವೆ. ಇದರಲ್ಲಿ 13.441 ಎಂಎಂಟಿ ಅದಿರು ಹೊರತೆಗೆಯುವ ಚಟುವಟಿಕೆಯು ನಡೆಯುತ್ತಿದೆ.

71.25 ಹೆಕ್ಟೇರ್‍ನಲ್ಲಿ 2 ಗಣಿ ಬ್ಲಾಕ್‌ಗಳಿವೆಯಾದರೂ ಗಣಿಗಾರಿಕೆ ಚಟುವಟಿಕೆ ನಡೆಯುತ್ತಿಲ್ಲ. ಅರಣ್ಯ ಇಲಾಖೆಯ ತೀರುವಳಿ ಬಾಕಿ ಇದೆ. 1,365 ಹೆಕ್ಟೇರ್‍ನಲ್ಲಿ 9 ಗಣಿ ಗುತ್ತಿಗೆ ಬ್ಲಾಕ್‌ಗಳಿವೆ. ಈ ಬ್ಲಾಕ್‌ಗಳಿಗೆ ಗಣಿ ಗುತ್ತಿಗೆಯನ್ನು ಅನುಷ್ಠಾನಗೊಳಿಸಿಲ್ಲ. ಅರಣ್ಯ ಇಲಾಖೆಯ ತೀರುವಳಿಗಾಗಿ ಮಂಡಿಸಿದೆ. ಈಚೆಗಷ್ಟೇ 946.11 ಹೆಕ್ಟೇರ್‍ನಲ್ಲಿ 10 ಗಣಿ ಗುತ್ತಿಗೆಗಳಿಗೆ ಲೆಟರ್ ಆಫ್ ಇಂಟೆಂಟ್‌ನ್ನು ಕಾರ್ಯಗತಗೊಳಿಸಿರುವುದು ಗೊತ್ತಾಗಿದೆ.




