ಬೆಂಗಳೂರು; ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರ ಸಂಬಂಧಿಯೂ ಆಗಿರುವ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ಡಾ.ವೈ.ಮಂಜುನಾಥ ಅವರ ವಿರುದ್ಧದ ಲೋಕಾಯುಕ್ತ ಪ್ರಕರಣದಲ್ಲಿ ವಿಚಾರಣೆಗೊಳಪಡಿಸಲು ಸರ್ಕಾರವು ಮೂರು ಬಾರಿ ಲೋಕಾಯುಕ್ತ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು.
ಡಾ ವೈ ಮಂಜುನಾಥ್ ಅವರಿಗೆ ಸೇರಿದ ಎನ್ನಲಾದ ಸೇರಿದ ನಿವಾಸ ಸೇರಿದಂತೆ ಆರು ಕಡೆಗಳಲ್ಲಿ ಜಾರಿ ನಿರ್ದೇಶನಾಲಯ (ಈಡಿ) ಅಧಿಕಾರಿಗಳು ಬುಧವಾರ ಬೆಳಗ್ಗೆ ದಾಳಿ ನಡೆಸಿರುವ ಬೆನ್ನಲ್ಲೇ ಲೋಕಾಯುಕ್ತ ಪ್ರಕರಣದಲ್ಲಿ ವಿಚಾರಣೆಗೆ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಮೂರು ಬಾರಿಯೂ ಅನುಮತಿ ದೊರೆತಿರಲಿಲ್ಲ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.
ಮದ್ಯದ ಅಂಗಡಿಗಳ ಪರವಾನಿಗೆ ನವೀಕರಿಸಲು ಲಂಚ ಪಡೆದಿದ್ದ ಪ್ರಕರಣದಲ್ಲಿ ಅಬಕಾರಿ ಜಂಟಿ ಆಯುಕ್ತ ಹಾಗೂ ಜಾರಕಿಹೊಳಿ ಕುಟುಂಬ ಸದಸ್ಯರೂ ಆಗಿರುವ ಡಾ ವೈ ಮಂಜುನಾಥ್ ಅವರನ್ನು ವಿಚಾರಣೆಗೊಳಪಡಿಸಲು ಅನುಮತಿ ಕೋರಿ ಲೋಕಾಯುಕ್ತ ಸಂಸ್ಥೆ ಸಲ್ಲಿಸಿದ್ದ ಪ್ರಸ್ತಾವನೆಯು ಮೂರು ಬಾರಿ ತಿರಸ್ಕೃತಗೊಂಡಿತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಎರಡೂ ಅವಧಿಯಲ್ಲಿಯೂ ಇವರನ್ನು ವಿಚಾರಣೆಗೊಳಪಡಿಸಲು ಲೋಕಾಯುಕ್ತಕ್ಕೆ ಅನುಮತಿ ನೀಡಿರಲಿಲ್ಲ. ಅದೇ ರೀತಿ ಬಿ ಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೂ ಸಹ ಲೋಕಾಯುಕ್ತ ವಿಚಾರಣೆಗೆ ಅನುಮತಿ ದೊರೆತಿರಲಿಲ್ಲ.
ಮತ್ತೊಂದು ವಿಶೇಷವೆಂದರೇ ಕೆಎಎಸ್ ವೃಂದದಲ್ಲದ ಅಧಿಕಾರಿಗಳಿಗೆ (ನಾನ್ ಕೆಎಎಸ್) ಐಎಎಸ್ ಹುದ್ದೆಗೆ ಬಡ್ತಿ ನೀಡಲು ಹಿಂದಿನ ಬಿಜೆಪಿ ಸರ್ಕಾರವು ಮಂಜುನಾಥ್ ಅವರ ಹೆಸರನ್ನೊಳಗೊಂಡಿರುವ ಪಟ್ಟಿಯನ್ನು ಕೇಂದ್ರಕ್ಕೆ ರವಾನೆ ಮಾಡಿತ್ತು. ಅಲ್ಲದೇ ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೂ ಐಎಎಸ್ ಗೆ ಬಡ್ತಿ ನೀಡುವ ಪಟ್ಟಿಯಲ್ಲಿ ಡಾ ವೈ ಮಂಜುನಾಥ್ ಅವರ ಹೆಸರನ್ನು ಸೇರಿಸಿದೆ ಎಂದು ವಿಶ್ವಸನೀಯ ಮೂಲಗಳು ದಿ ಫೈಲ್‌ಗೆ ಖಚಿತಪಡಿಸಿವೆ. ಸದ್ಯ ಈ ಕಡತವು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಬಳಿ ಇದೆ. ಸದ್ಯದಲ್ಲೇ ಈ ಪಟ್ಟಿಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಅನುಮೋದನೆ ಸಲ್ಲಿಸಲಿದೆ ಎಂದು ಗೊತ್ತಾಗಿದೆ.
ಲೋಕಾಯುಕ್ತ ಪ್ರಕರಣದ ವಿವರ
ಮೈಸೂರು ಅಬಕಾರಿ ಉಪ ಆಯುಕ್ತರ ಕಚೇರಿ ಮತ್ತು ವ್ಯಾಪ್ತಿಯ ಕಚೇರಿಗಳ ಮೇಲೆ 2012ರಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಅಲ್ಲದೇ ಈ ಸಂಬಂಧ 2 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು. ಮೈಸೂರಿನ ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪರವಾನಗಿಗಳ ನವೀಕರಣಕ್ಕಾಗಿ ಲಂಚ ಸಂಗ್ರಹಿಸುತ್ತಿದ್ದಾರೆ ಎಂಬ ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ, ಕರ್ನಾಟಕ ಲೋಕಾಯುಕ್ತ ಪೊಲೀಸರು 2012ರ ಜೂನ್ 27ರಂದು ದಾಳಿ ನಡೆಸಿದ್ದರು.
ಭ್ರಷ್ಟಾಚಾರ ನಿಗ್ರಹ ಕಾಯ್ದೆ, 1988ರ ಕಲಂ 13(1)(d) ಹಾಗೂ 13(2) ಅಡಿಯಲ್ಲಿ ಎಫ್‌ಐಆರ್ (ಸಂಖ್ಯೆ 11/2012 ) ದಾಖಲಿಸಿದ್ದರು. ಲೋಕಾಯುಕ್ತ ಪೊಲೀಸರು ಮೈಸೂರು ಅಬಕಾರಿ ಉಪ ಆಯುಕ್ತರಾಗಿದ್ದ ಡಾ. ವೈ. ಮಂಜುನಾಥ್ ಅವರ ವಿರುದ್ಧವೂ ಎಫ್‌ಐಆರ್ (ಸಂಖ್ಯೆ 11/2012) ದಾಖಲಿಸಿದ್ದರು.
ಲೋಕಾಯುಕ್ತದ ಕ್ರಮದಿಂದ ಅಸಮಾಧಾನಗೊಂಡಿದ್ದ ಡಾ. ವೈ. ಮಂಜುನಾಥ್ ಅವರು ಎಫ್‌ಐಆರ್ (ಸಂಖ್ಯೆ 11/2012) ನ್ನು ಪ್ರಶ್ನಿಸಿದ್ದರು. ಹೈಕೋರ್ಟ್‌ನಲ್ಲಿ ಕ್ರಿಮಿನಲ್ ಪಿಟಿಷನ್ (ಸಂಖ್ಯೆ 7053/2013) ನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್ 2016ರ ಅಕ್ಟೋಬರ್ 25ರಂದು ಅಂತಿಮ ಆದೇಶ ನೀಡಿತ್ತು. ಮಂಜುನಾಥ್ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ (ಸಂಖ್ಯೆ 11/2012) ವಿರುದ್ಧ ನೀಡಲಾಗಿದ್ದ ಮಧ್ಯಂತರ ಆದೇಶವನ್ನು ತೆರವುಗೊಳಿಸಿತ್ತಲ್ಲದೇ ಅರ್ಜಿದಾರರ ಅರ್ಜಿಯನ್ನು ವಜಾಗೊಳಿಸಿತ್ತು.

ಹೀಗಾಗಿ ಸರ್ಕಾರವು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳ (CCA Rules) ನಿಯಮ 14-A ಅಡಿಯಲ್ಲಿ ಈ ಪ್ರಕರಣವನ್ನು ಮಾನ್ಯ ಲೋಕಾಯುಕ್ತರಿಗೆ (ಆದೇಶ ಸಂಖ್ಯೆ FD 143 EPS 2014, ದಿನಾಂಕ 16.05.2015) ವಹಿಸಿತ್ತು. ಸರ್ಕಾರ ಹೊರಡಿಸಿದ್ದ ಈ ಆದೇಶವನ್ನೂ ಡಾ. ವೈ. ಮಂಜುನಾಥ್ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (KAT) ಮುಂದೆ ಅರ್ಜಿ (ಸಂಖ್ಯೆ 5582/2015) ಸಲ್ಲಿಸಿದ್ದರು.
ಕೆಎಟಿಯು ಸಹ 2017ರ ನವೆಂಬರ್ 25ರಂದು ಅಂತಿಮ ಆದೇಶ ನೀಡಿತ್ತು. ಈ ಅರ್ಜಿಯನ್ನು ಮಾನ್ಯಗೊಳಿಸಿತ್ತು. ಹಾಗೆಯೇ ಸರ್ಕಾರವು ಹೊರಡಿಸಿದ್ದ ಆದೇಶ (ಸಂಖ್ಯೆ FD 143 EPS 2014, ದಿನಾಂಕ 16.05.2015)ವನ್ನು ಡಾ. ವೈ. ಮಂಜುನಾಥ್ ಅವರಿಗೆ ಸಂಬಂಧಿಸಿದ ಮಟ್ಟಿಗೆ ರದ್ದುಗೊಳಿಸಿತ್ತು.
ಇದಾದ ನಂತರ ಸರ್ಕಾರವು ಎಫ್‌ಐಆರ್ ಸಂಖ್ಯೆ 11/2012ರಲ್ಲಿ ಆಗಿನ ಮೈಸೂರು ಅಬಕಾರಿ ಉಪ ಆಯುಕ್ತರಾಗಿದ್ದ ಡಾ. ವೈ. ಮಂಜುನಾಥ್ ಅವರ ವಿರುದ್ಧ ದೋಷಾರೋಪಣೆ (Prosecution) ನಡೆಸಲು ಅನುಮತಿ ನೀಡುವುದನ್ನು ನಿರಾಕರಿಸಿತ್ತು. ಈ ಸಂಬಂಧ ಕರ್ನಾಟಕ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ತನ್ನ ಪತ್ರ (ಸಂಖ್ಯೆ FD 109 EPS 2012, ದಿನಾಂಕ 23.12.2017ನಂತರ ಪತ್ರ ಬರೆದಿತ್ತು. 2020ರ ಆಗಸ್ಟ್ 11ರಂದು ಎರಡನೇ ಬಾರಿಯೂ ಸಹ ಬಿಜೆಪಿ ಸರ್ಕಾರವು ಹಿಂದಿನ ನಿರ್ಧಾರವನ್ನು ಪುನರುಚ್ಚರಿಸಿತ್ತು. ಈ ಮೂಲಕ ಎರಡನೇ ಬಾರಿಯೂ ದೋಷಾರೋಪಣೆಗೆ ಅನುಮತಿ ನೀಡುವುದನ್ನು ನಿರಾಕರಿಸಿತ್ತು.
ಅಲ್ಲದೇ ಇದಕ್ಕೂ ಮುನ್ನ ಎಫ್‌ಐಆರ್ ಸಂಖ್ಯೆ 12/2012ರಲ್ಲಿ ಆಗಿನ ಮೈಸೂರು ಅಬಕಾರಿ ಉಪ ಆಯುಕ್ತರಾಗಿದ್ದ ಡಾ. ವೈ. ಮಂಜುನಾಥ್ ಅವರನ್ನು 2012ರ ಜೂನ್ 28ರಿಂದ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಹಾಗೆಯೇ ಸರ್ಕಾರವು ( ಆದೇಶ ಸಂಖ್ಯೆ FD 109 EPS 2012, ದಿನಾಂಕ 07.07.2012) ಡಾ. ವೈ. ಮಂಜುನಾಥ್ ಅವರನ್ನು ಅಮಾನತುಗೊಳಿಸಿತ್ತು.
ಅಮಾನತು ಆದೇಶವನ್ನು ಪ್ರಶ್ನಿಸಿದ್ದ (ಸರ್ಕಾರದ ಆದೇಶ ಸಂಖ್ಯೆ FD 109 EPS 2012, ದಿನಾಂಕ 07.07.2012) ಡಾ. ವೈ. ಮಂಜುನಾಥ್ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಮುಂದೆ (ಅರ್ಜಿ ಸಂಖ್ಯೆ 3542/2012) ಸಲ್ಲಿಸಿದ್ದರು. ಕರ್ನಾಟಕ ನ್ಯಾಯಮಂಡಳಿಯು 2012ರ ಜುಲೈ 17ರಂದು ಮಧ್ಯಂತರ ಆದೇಶ ನೀಡಿತ್ತಲ್ಲದೇ ಅರ್ಜಿದಾರರು ಕರ್ತವ್ಯಕ್ಕೆ ಹಾಜರಾಗುವಂತೆ ನಿರ್ದೇಶಿಸಿತ್ತು.
ಡಾ. ವೈ. ಮಂಜುನಾಥ್ ಅವರ ಅಮಾನತು ಆದೇಶವನ್ನು ಹಿಂತೆಗೆದುಕೊಂಡಿದ್ದ ಸರ್ಕಾರವು ಅವರನ್ನು ಮೈಸೂರು ಅಬಕಾರಿ ಉಪ ಆಯುಕ್ತರಾಗಿ ಮರು ನೇಮಕ ಆದೇಶ ಸಂಖ್ಯೆ FD 109 EPS 2012, ದಿನಾಂಕ 02.08.2012ರ ಮಾಡಿತ್ತು. ಈ ಬೆಳವಣಿಗೆ ನಂತರ ನ್ಯಾಯಮಂಡಳಿಯು ಅರ್ಜಿ ಸಂಖ್ಯೆ 3542/2012ರಲ್ಲಿ 2012ರ ಅಕ್ಟೋಬರ್ 17ರಂದು ಅಂತಿಮ ಆದೇಶ ನೀಡಿತ್ತು. ಡಾ. ವೈ. ಮಂಜುನಾಥ್ ಅವರಿಗೆ ಸಂಬಂಧಿಸಿದಂತೆ (FD 109 EPS 2012, ದಿನಾಂಕ 07.07.2012) ಅಮಾನತು ಆದೇಶವನ್ನು ರದ್ದುಗೊಳಿಸಿತ್ತಲ್ಲದೇ ತನಿಖೆಯನ್ನು ಲೋಕಾಯುಕ್ತರಿಗೆ ವಹಿಸಿತ್ತು.

ಡಾ. ವೈ. ಮಂಜುನಾಥ್ ಅವರು ಕರ್ನಾಟಕ ಲೋಕಾಯುಕ್ತ ದಾಖಲಿಸಿದ್ದ ಎಫ್‌ಐಆರ್ (ಸಂಖ್ಯೆ 12/2012) ಹೈಕೋರ್ಟ್‌ನಲ್ಲಿ ಕ್ರಿಮಿನಲ್ ಪಿಟಿಷನ್ (ಸಂಖ್ಯೆ 4680/2012) ಸಲ್ಲಿಸಿದರು. ಕರ್ನಾಟಕ ಉಚ್ಚ ನ್ಯಾಯಾಲಯವು 2013ರ ಫೆ.15ರಂದು ಆದೇಶ ನೀಡಿತ್ತು. ಲೋಕಾಯುಕ್ತ ಪೊಲೀಸರು ಡಾ. ವೈ. ಮಂಜುನಾಥ್ ಅವರ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ (ಸಂಖ್ಯೆ 12/2012) ಅನ್ನು ರದ್ದುಗೊಳಿಸಿತ್ತು.
ಕೆಎಎಸ್ ವೃಂದದಲ್ಲದ ಅಧಿಕಾರಿಗಳಿಗೆ (ನಾನ್ ಕೆಎಎಸ್) ಐಎಎಸ್ ಹುದ್ದೆಗೆ ಬಡ್ತಿ ನೀಡುವ ಸಂಬಂಧ ರಾಜ್ಯ ಸರ್ಕಾರವು ಕೇಂದ್ರಕ್ಕೆ ಕಳುಹಿಸಿರುವ ಪಟ್ಟಿಯಲ್ಲಿ ಜಾರಕಿಹೊಳಿ ಕುಟುಂಬ ಸದಸ್ಯ ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಡಾ ವೈ ಮಂಜುನಾಥ್ ಅವರ ಹೆಸರಿತ್ತು.
ಪಟ್ಟಿಯಲ್ಲಿದ್ದ ಹೆಸರುಗಳಿವು
ಡಾ ವಿಜಯಪ್ರಕಾಶ್ (ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ), ಅನಿಲ್‌ಕುಮಾರ್ (ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ) ಡಾ ಎನ್ ಶ್ರೀನಿವಾಸ್ ( ಜಂಟಿ ನಿರ್ದೇಶಕ, ಆಹಾರ ನಾಗರಿಕ ಗ್ರಾಹಕ ವ್ಯವಹಾರಗಳ ಇಲಾಖೆ)ಟಿ, ವೇಣುಗೋಪಾಲ್ ರೆಡ್ಡಿ (ಜಂಟಿ ನಿರ್ದೇಶಕರು, ರಾಜ್ಯ ಲೆಕ್ಕಪತ್ರ ಇಲಾಖೆ), ಪಿ ಕುಮಾರ್ (ರಿಜಿಸ್ಟ್ರಾರ್, ಬೆಂಗಳೂರು ವಿ ವಿ), ಸಿ ಪಿ ನಾರಾಯಣಸ್ವಾಮಿ (ಹೆಚ್ಚುವರಿ ಕಮಿಷನರ್, ಸಾರಿಗೆ ಇಲಾಖೆ) ವಿ ಗೋವಿಂದರಾಜ್ (ಮುಖ್ಯ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ) ದೀಪಕ್ ದೊರೈವರ್ (ನಿರ್ದೇಶಕರು, ರಾಜ್ಯ ಲೆಕ್ಕಪತ್ರ ಇಲಾಖೆ) ಕೆ ಎನ್ ಗಂಗಾಧರ್ (ಜಂಟಿ ನಿಯಂತ್ರಕರು, ರಾಜ್ಯ ಲೆಕ್ಕಪತ್ರ ಇಲಾಖೆ) ಡಾ ಎಂ ಆರ್ ಏಕಾಂತಪ್ಪ (ನಿರ್ದೇಶಕರು, ಪಂ.ರಾಜ್) ಜೆ ಜ್ಞಾನೇಂದ್ರಕುಮಾರ್ (ಹೆಚ್ಚುವರಿ ಕಮಿಷನರ್, ಸಾರಿಗೆ ಇಲಾಖೆ) ಆರ್ ರಮೇಶ್ (ನಿರ್ದೇಶಕರು ತಾಂತ್ರಿಕ ಕೋಶ,ವಾಣಿಜ್ಯ ಕೈಗಾರಿಕೆ)

6 ವರ್ಷಗಳಿಂದಲೂ ಡಾ ವೈ ಮಂಜುನಾಥ್‌ಗೆ ಶಿಫಾರಸ್ಸು
ಅಬಕಾರಿ ಜಂಟಿ ಆಯುಕ್ತ ಡಾ ವೈ ಮಂಜುನಾಥ್, ಹಾಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಭಾವ. ಇವರನ್ನು ಐಎಎಸ್ ಹುದ್ದೆಗೆ ಬಡ್ತಿ ನೀಡಲು 2017ರಲ್ಲೇ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿತ್ತು. ಅರ್ಹತೆ ಇರುವವರನ್ನು ಕೈಬಿಟ್ಟು ಕಳಂಕಿತರು, ಪ್ರಭಾವಿಗಳ ಹೆಸರನ್ನು 2017ರಲ್ಲೇ ಶಿಫಾರಸು ಮಾಡಿದ್ದಕ್ಕೆ ಅಧಿಕಾರಿಗಳ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಕಳಿಸಿರುವ 14 ಅಧಿಕಾರಿಗಳ ಪಟ್ಟಿಯಲ್ಲಿ ಡಾ ವೈ ಮಂಜುನಾಥ್ ಅವರ ಹೆಸರು ಇತ್ತು. ಈಗಿನ ಕಾಂಗ್ರೆಸ್ ಸರ್ಕಾರವು ಕಳಿಸಿರುವ ಪಟ್ಟಿಯಲ್ಲಿಯೂ ಡಾ ವೈ ಮಂಜುನಾಥ್ ಅವರ ಹೆಸರೂ ಇದೆ ಎಂದು ಗೊತ್ತಾಗಿದೆ.

ಹಾಗೆಯೇ ಲೋಕಾಯುಕ್ತ ಪೊಲೀಸರು, ಮಂಜುನಾಥ್ ಆದಾಯ ಮೀರಿ ಆಸ್ತಿ ಗಳಿಸಿರುವುದನ್ನು ಪತ್ತೆ ಹಚ್ಚಿದ್ದರು. ಎಂಟು ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ವಿಚಾರಣೆಗೆ ಗುರಿಪಡಿಸಲು ಮೈಸೂರು ಲೋಕಾಯುಕ್ತ ಎಸ್.ಪಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇವರಲ್ಲಿ ಏಳು ಜನರನ್ನು ವಿಚಾರಣೆಗೆ ಗುರಿಪಡಿಸಲು ಅನುಮತಿ ನೀಡಲಾಗಿತ್ತು. ಇವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದನ್ನು ಸ್ಮರಿಸಬಹುದು.




