ಬೆಂಗಳೂರು; ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಕೋರಿದ್ದ ಮಾಹಿತಿಯ ಕಡತ, ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ಸಮಿತಿ ವರದಿ ಆಧರಿಸಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದು, ಎಲೆಕ್ಟ್ರಾನಿಕ್ ಸಿಟಿಗೆ ದೇವರಾಜ ಅರಸು ಹೆಸರು ನಾಮಕರಣ, ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ಸಿ ಎ ನಿವೇಶನ ಗುತ್ತಿಗೆ ಕರಾರು ಪತ್ರ ನೋಂದಾವಣೆ ಸೇರಿದಂತೆ 80 ಕಡತಗಳು ಡಿ ಕೆ ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಿಗದಿತ ಅವಧಿಯೊಳಗೆ ವಿಲೇವಾರಿಯಾಗಿರಲಿಲ್ಲ.
ವಿಶೇಷವೆಂದರೇ ಈ ಕಡತಗಳ ಪೈಕಿ ಲೋಕಾಯುಕ್ತ ವಿಚಾರಣೆಗೆ ಗುರಿಯಾಗಿದ್ದ ಅಧಿಕಾರಿಗಳಿಗೆ ಸಂಬಂಧಿಸಿದ ಕಡತಗಳೂ ಇದ್ದವು. 2026ರ ಮೇ 29ರಂದು ಸಚಿವ ಸಂಪುಟ ವಿಸರ್ಜನೆಗೊಳ್ಳುತ್ತಿದ್ದಂತೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಕಚೇರಿಯು ಯಾವುದೇ ಕ್ರಮವಿಲ್ಲದೇ 10 ಕಡತಗಳನ್ನು ಮುಂದಿನ ಕ್ರಮಕ್ಕಾಗಿ 70 ಕಡತಗಳನ್ನು ನಗರಾಭಿವೃದ್ಧಿಗೆ ಇಲಾಖೆಗೆ 2026ರ ಮೇ 30 ಮತ್ತು ಜೂನ್ 1ರಂದು ಹಿಂದಿರುಗಿಸಿತ್ತು.
ಈ ಸಂಬಂಧ ಡಿ ಕೆ ಶಿವಕುಮಾರ್ ಅವರ ವಿಶೇಷ ಕರ್ತವ್ಯಾಧಿಕಾರಿ ಮತ್ತು ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್ ಅವರು ಟಿಪ್ಪಣಿ ಸಮೇತ ಕಡತಗಳನ್ನು ನಗರಾಭಿವೃದ್ಧಿ ಇಲಾಖೆಗೆ ಹಿಂದಿರುಗಿಸಿದ್ದರು.
ಇದಕ್ಕೆ ಸಂಬಂಧಿಸಿದಂತೆ ಕಡತಗಳ ಸಂಖ್ಯೆಯೊಂದಿಗಿನ ಟಿಪ್ಪಣಿ ಪ್ರತಿಯು ದಿ ಫೈಲ್‌ಗೆ ಲಭ್ಯವಾಗಿದೆ.

10 ಕಡತಗಳ ಮೇಲೆ ಉಪ ಮುಖ್ಯಮಂತ್ರಿಗಳ ಕಚೇರಿಯು ಯಾವುದೇ ಕ್ರಮವಹಿಸಿರಲಿಲ್ಲ. ಪ್ರಸ್ತುತ ಹಂತದಲ್ಲಿ ಯಾವುದೇ ಕ್ರಮವಿಲ್ಲದೇ ಇರುವ ಕಾರಣ ಈ ಕಡತಗಳನ್ನು ಯಥಾವತ್ತಾಗಿ ನಗರಾಭಿವೃದ್ಧಿ ಇಲಾಖೆಗೆ ವಾಪಸ್ ಕಳಿಸಿತ್ತು.

ನಗರಾಭಿವೃದ್ಧಿ ಇಲಾಖೆಗೆ ಹಿಂದಿರುಗಿಸಿರುವ ಕಡತಗಳು 2016ರಿಂದ 2025ರ ಮಧ್ಯದಲ್ಲಿ ತೆರೆದಿದ್ದವು. ಈ ಕಡತಗಳ ಮೇಲೆ ಕ್ರಮ ವಹಿಸಲು ಉಪ ಮುಖ್ಯಮಂತ್ರಿಯಾಗಿದ್ದ ಡಿ ಕೆ ಶಿವಕುಮಾರ್ ಅವರ ಅನುಮೋದನೆಗಾಗಿ ಇಲಾಖೆಯು ಕಳಿಸಿತ್ತು. ಈ ಕಡತಗಳು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಕಚೇರಿಯಲ್ಲಿ 3 ವರ್ಷದಿಂದಲೂ ಧೂಳು ಹಿಡಿದಿದ್ದವು. ಸಚಿವ ಸಂಪುಟವು ವಿಸರ್ಜನೆಯಾಗುತ್ತಿದ್ದಂತೆ ಈ ಎಲ್ಲಾ ಕಡತಗಳನ್ನೂ ನಗರಾಭಿವೃದ್ದಿ ಇಲಾಖೆಗೆ ಕಳಿಸಿರುವುದು ಗೊತ್ತಾಗಿದೆ.
ಮೂರ್ನಾಲ್ಕು ವರ್ಷಗಳಿಂದಲೂ 70 ಕಡತಗಳಿಗೆ ಧೂಳು
ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿ ಚಿಕ್ಕವಡೇರಪುರ ಗ್ರಾಮದ ವಿವಿಧ ಸರ್ವೆ ನಂಬರ್‍ಗಳ ಒಟ್ಟಾರೆ 09 ಎಕರೆ 1 ಗುಂಟೆ ವಿಸ್ತೀರ್ಣದ ಉದ್ದೇಶಕ್ಕೆ ವಸತಿಯೇತರ (ಶೈಕ್ಷಣಿಕ) ಅಭಿವೃದ್ಧಿ ಯೋಜನಾ ನಕ್ಷೆಗೆ ಅನುಮೋದನೆ ನೀಡುವುದಕ್ಕೆ ಸಂಬಂಧಿಸಿದಂತೆ ಕೆ ಸಿ ವಿಜಯಕುಮಾರ್ ಅವರು ಕೋರಿದ್ದರು. ಈ ಸಂಬಂಧ ನಗರಾಭಿವೃದ್ದಿ ಇಲಾಖೆಯಲ್ಲಿ 2023ರಲ್ಲಿ ಕಡತ (ಕಡತ ಸಂಖ್ಯೆ; ಯುಡಿಡಿ 81 ಎಂಎನ್‌ಯು 2023- ಕಂಪ್ಯೂಟರ್ ನಂಬರ್ 181823) ತೆರೆದಿತ್ತು. ಈ ಕಡತದಲ್ಲಿನ ವಿಷಯಕ್ಕೆ ಸಂಬಂಧಿಸಿದಂತೆ ಅನುಮೋದನೆ ಪಡೆಯಲು ಉಪ ಮುಖ್ಯಮಂತ್ರಿಯಾಗಿದ್ದ ಡಿ ಕೆ ಶಿವಕುಮಾರ್ ಅವರ ಕಚೇರಿಗೆ ಕಳಿಸಿತ್ತು.

ಬಿಬಿಎಂಪಿ ಪಾಲಿಕೆ ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮ ಮತ್ತು ಅವ್ಯವಹಾರದ ಕುರಿತು ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ಸಮಿತಿ ವರದಿ ನೀಡಿತ್ತು. ಈ ವರದಿಯಲ್ಲಿ ತಪ್ಪಿತಸ್ಥರೆಂದು ಗುರುತಿಸಿದ್ದ ಪ್ರಧಾನ ಇಂಜಿನಿಯರ್ ಕೆ ಸಿದ್ದೇಗೌಡ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ನಗರಾಭಿವೃದ್ಧಿ ಇಲಾಖೆಯು ಉಪ ಮುಖ್ಯಮಂತ್ರಿ ಅವರ ಅನುಮೋದನೆ ಕೋರಿತ್ತು. ಈ ಕಡತವನ್ನು 2021ರಲ್ಲಿ (ಕಡತ ಸಂಖ್ಯೆ; ಯುಡಿಡಿ 100 ಎಂಎನ್‌ಯು 2021- ಕಂಪ್ಯೂಟರ್ ನಂಬರ್ 176817) ತೆರೆದಿತ್ತು. ಈ ಕಡತವು ಧೂಳಿಡಿದಿತ್ತು.
ಭೂ ಉಪಯೋಗ ಬದಲಾವಣೆ ಮಾಹಿತಿ ಕುರಿತಂತೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಕೋರಿದ್ದರು. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯು 2024ರಲ್ಲಿ ಕಡತ (ಕಡತ ಸಂಖ್ಯೆ; ಯುಡಿಡಿ 105 ಬೆಂಭೂಸ್ವಾ 2024- ಕಂಪ್ಯೂಟರ್ ನಂಬರ್ 1416596) ತೆರೆದಿತ್ತು. ಈ ಕಡತವು 2 ವರ್ಷಗಳಿಂದಲೂ ಉಪ ಮುಖ್ಯಮಂತ್ರಿಗಳ ಕಚೇರಿಯಲ್ಲಿಯೇ ಕೊಳೆಯುತ್ತಿತ್ತು.

ರಾಜ್ಯ ಚುನಾವಣೆ ಆಯೋಗವು ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಅಧಿನಿಯಮ 2020ರ ಕಲಂ 13, 21 ಮತ್ತು 56ಕ್ಕೆ ತಿದ್ದುಪಡಿ ತರುವ ಸಂಬಂಧ ಅನುಮತಿ ಕೋರಿತ್ತು. ಈ ಸಂಬಂಧ ಇಲಾಖೆಯು 2023ರಲ್ಲಿ ಕಡತ (ಕಡತ ಸಂಖ್ಯೆ; ಯುಡಿಡಿ 229 ಬಿಬಿಎಸ್ 2023 ಕಂಪ್ಯೂಟರ್ ನಂಬರ್ 1217491) ತೆರೆದಿತ್ತು. ಈ ಕಡತವು ಸಹ ಮೂರು ವರ್ಷದಿಂದಲೂ ಧೂಳಿಡಿದು ಕೂತಿತ್ತು. ಇದೀಗ ಈ ಕಡತವನ್ನು ಮುಂದಿನ ಕ್ರಮಕ್ಕಾಗಿ ನಗರಾಭಿವೃದ್ಧಿ ಇಲಾಖೆಗೆ ಹಿಂದಿರುಗಿಸಿರುವುದು ತಿಳಿದು ಬಂದಿದೆ.
ಘನತ್ಯಾಜ್ಯ ವಿಲೇವಾರಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ 91.86 ಕೋಟಿ ರು ವೆಚ್ಚದಲ್ಲಿ ಮಾರ್ಷಲ್‌ಗಳ ಸೇವೆ ಪೂರೈಕೆ ಸಂಬಂಧ ಆಡಳಿತಾತ್ಮಕ ಅನುಮೋದನೆ ಮತ್ತು ಟೆಂಡರ್ ಗೆ ಅನುಮೋದನೆ ನೀಡುವ ಸಂಬಂಧ ಉಪ ಮುಖ್ಯಮಂತ್ರಿ ಅವರ ಅನುಮೋದನೆ ಕೋರಿತ್ತು. ಈ ಸಂಬಂಧ ಇಲಾಖೆಯು 2025ರಲ್ಲೇ ಕಡತ (ಕಡತ ಸಂಖ್ಯೆ; ಯುಡಿಡಿ 265 ಎಂಎನ್‌ವೈ 2025 ಕಂಪ್ಯೂಟರ್ ನಂಬರ್ 1803141) ತೆರೆದಿತ್ತು. ಈ ಕಡತವೂ ಸಹ ಒಂದು ವರ್ಷದಿಂದಲೂ ಉಪ ಮುಖ್ಯಮಂತ್ರಿ ಕಚೇರಿಯಲ್ಲಿಯೇ ಧೂಳಿಡಿದಿತ್ತು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ವಿವಿಧ ಸಂಘ ಸಂಸ್ಥೆಗಳಿಗೆ ಹಂಚಿಕೆ ಮಾಡಿರುವ ನಾಗರೀಕ ಸೌಲಭ್ಯ ನಿವೇಶನಗಳ ಗುತ್ತಿಗೆ ಮೊತ್ತದ ಮೇಲಿನ ಬಡ್ಡಿಯ ಶೇ. 50ರನ್ನು ಮನ್ನಾ ಮಾಡುವ ಕುರಿತು ಉಪ ಮುಖ್ಯಮಂತ್ರಿಗಳ ಅನುಮತಿ ಕೋರಿತ್ತು. ಈ ಸಂಬಂಧ ಇಲಾಖೆಯು 2020ರಲ್ಲೇ ಕಡತ ತೆರೆದಿತ್ತು. ಆದರೆ ಈ ಕಡತದ (ಕಡತ ಸಂಖ್ಯೆ; ಯುಡಿಡಿ 113 ಬೆಂಭೂಸ್ವಾ 2020 (2) +1 ) ಕಂಪ್ಯೂಟರ್ ನಂಬರ್ 1215117) ಮೇಲೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂತಿಮ ನಿರ್ಧಾರ ಕೈಗೊಂಡಿರಲಿಲ್ಲ. ಹೀಗಾಗಿ ಈ ಕಡತದ ಮೇಲೆ ಕ್ರಮವಹಿಸುವ ಸಂಬಂಧ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಕಳಿಸಿತ್ತು. ಈ ಕಡತವೂ ಸಹ ಮುಂದಿನ ಕ್ರಮಕ್ಕಾಗಿ 2026ರ ಜೂನ್ 1ರಂದು ಇಲಾಖೆಗೆ ಕಳಿಸಿದೆ.

ಬಿಬಿಎಂಪಿಯ ಸಹಾಯಕ ಇಂಜಿನಿಯರ್ ಅಶೋಕ ಬಿರಾದಾರ ಅವರ ವಿರುದ್ಧದ ಕರ್ತವ್ಯಲೋಪಕ್ಕೆ ಸಂಬಂಧಿಸಿದ ಇಲಾಖೆ ವಿಚಾರಣೆಗಾಗಿ ಪ್ರಕರಣವನ್ನು ಲೋಕಾಯುಕ್ತರಿಗೆ ವಹಿಸುವ ಕುರಿತು ಇಲಾಖೆಯು ಅನುಮತಿ ಕೋರಿತ್ತು ಈ ಸಂಬಂಧ ಇಲಾಖೆಯು 2025ರಲ್ಲಿ ಕಡತ (ಕಡತ ಸಂಖ್ಯೆ; ಯುಡಿಡಿ 455 ಎಂಎನ್‌ಯು 2025 ಕಂಪ್ಯೂಟರ್ ನಂಬರ್ 1898704) ತೆರೆದಿತ್ತು. ಈ ಕಡತವೂ ಸಹ ವರ್ಷದಿಂದಲೂ ಡಿಸಿಎಂ ಕಚೇರಿಯಲ್ಲಿ ಧೂಳಿಡಿದಿತ್ತು.
ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ಆರೋಗ್ಯ ಅಧಿಕಾರಿ ಹೆಚ್ ಜಿ ಸುರೇಶ್ ಅವರ ವಿರುದ್ಧ ಕರ್ತವ್ಯಲೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಿಚಾರಣೆ ವಹಿಸುವ ಸಂಬಂಧ ಉಪ ಲೋಕಾಯುಕ್ತರಿಗೆ ಅನುಮತಿ ನೀಡಬೇಕಿತ್ತು. ಈ ಸಂಬಂಧ ಇಲಾಖೆಯು 2025ರಲ್ಲಿ ಕಡತ (ಕಡತ ಸಂಖ್ಯೆ; ಯುಡಿಡಿ 131 ಬಿಬಿಎಲ್ 2025 +6- ಕಂಪ್ಯೂಟರ್ ನಂಬರ್ 1719493) ತೆರೆದಿತ್ತು. ಈ ಕಡತಕ್ಕೂ ವರ್ಷದಿಂದಲೂ ಧೂಳು ಮೆತ್ತಿಕೊಂಡಿತ್ತು.

ಹಾಗೆಯೇ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಿ ಎಂ ಲಿಂಗಣ್ಣ, ಚಂದ್ರಯ್ಯ ಅವರ ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಶಿಸ್ತು ಕ್ರಮ ವಹಿಸಲು ನಗರಾಭಿವೃದ್ಧಿ ಇಲಾಖೆಯು 2015ರಲ್ಲೇ ಕಡತ (ಯುಡಿಡಿ/ 1043/ಎಂಎನ್‌ಯು/2015) ತೆರೆದಿತ್ತು. ಲಂಚ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿ ಮೊದಲನೇ ಆರೋಪಿಯಾಗಿದ್ದ ಬಿಬಿಎಂಪಿ ಹೆಬ್ಬಾಳ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜನಿಯರ್ ಮಾಧವರಾವ್ ಅವರ ಅಮಾನತು ಮತ್ತು ಲೀನ್ ಬದಲಾವಣೆ ಕುರಿತು ನಗರಾಭಿವೃದ್ಧಿ ಇಲಾಖೆಯು ಉಪ ಮುಖ್ಯಮಂತ್ರಿ ಆಗಿದ್ದ ಡಿ ಕೆ ಶಿವಕುಮಾರ್ ಅವರ ಅನುಮೋದನೆ ಕೋರಿತ್ತು. ಈ ಪ್ರಕರಣಗಳಿಗೆ ಸಂಬಂಧಿಸಿದ ಕಡತವನ್ನು (ಯುಡಿಡಿ 253 ಎಂಎನ್‌ಯು 2025 – ಕಂಪ್ಯೂಟರ್ ನಂಬರ್ 1807780) 2025ರಲ್ಲೇ ತೆರೆದಿತ್ತು. ಈ ಕಡತವೂ ಸಹ ಉಪ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಧೂಳಿಡಿದಿತ್ತು.

ಬಿಡಿಎನ ಎಇಇ ವೆಂಕಟೇಶ್, ಬಸವರಾಜ್ ಅವರ ವಿರುದ್ಧ ಲೋಕಾಯುಕ್ತ ಕಾಯ್ದೆ 1984ರ ಕಲಂ 12ರ ಅಡಿ ವರದಿ (ಕಡತ ಸಂಖ್ಯೆ; ಯುಡಿಡಿ 260 ಎಂಎನ್‌ಜೆ 2024- ಕಂಪ್ಯೂಟರ್ ನಂಬರ್ 1530021), ಬಿಡಿಎಯ ಉಪ ಕಾರ್ಯದರ್ಶಿ ಅನಿಲ್ ಕುಮಾರ್, ಮಹದೇವಮ್ಮ, ಮುನಿಬಚ್ಚೇಗೌಡ ಅವರ ವಿರುದ್ಧ ವಿಚಾರಣೆ ಹಾಗೂ ತನಿಖೆ ಕೈಗೊಳ್ಳಲು ಪೂರ್ವಾನುಮತಿ (ಕಡತ ಸಂಖ್ಯೆ; ಯುಡಿಡಿ 274 ಎಂಎನ್‌ಜೆ 2021- ಕಂಪ್ಯೂಟರ್ ನಂಬರ್ 636744), ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ಹಂಚಿಕೆಯಾಗಿರುವ ಸಿ ಎ ನಿವೇಶನಕ್ಕೆ ಗುತ್ತಿಗೆ ಕರಾರು ಪತ್ರ ನೋಂದಾಯಿಸುವುದು ( ಕಡತ ಸಂಖ್ಯೆ; ಯುಡಿಡಿ 213 ಬೆಂಭೂಸ್ವಾ 2023- ಕಂಪ್ಯೂಟರ್ ನಂಬರ್ 1163995) ಕಡತಕ್ಕೂ ಧೂಳು ಮೆತ್ತಿಕೊಂಡಿತ್ತು.

ಬಿಬಿಎಂಪಿಯಲ್ಲಿ ಕರ್ತವ್ಯ ಲೋಪ ಆರೋಪಕ್ಕೆ ಗುರಿಯಾಗಿದ್ದ ರಂಗಸ್ವಾಮಿ, ಮಂಜುನಾಥ್, (ಯುಡಿಡಿ 405 ಎಂಎನ್‌ಯು 2017+3- ಕಂಪ್ಯೂಟರ್ ನಂಬರ್ 154808) ಡಾ ಟಿ ಆಂಜನೇಯ, ಡಾ ಆರ್ ಸುರೇಂದ್ರ (ಕಡತ ಸಂಖ್ಯೆ; ಯುಡಿಡಿ 343 ಎಂಎನ್‌ಐ 2016- ಕಂಪ್ಯೂಟರ್ ನಂಬರ್ 145238), ಕೆ ಎಲ್ ಗಂಗಾಧರಯ್ಯ ಮತ್ತಿತರರು (ಕಡತ ಸಂಖ್ಯೆ; ಯುಡಿಡಿ 591 ಎಂಎನ್‌ಯು 2017- ಕಂಪ್ಯೂಟರ್ ನಂಬರ್ 158076) ಕಡತವೂ ಧೂಳಿಡಿದಿತ್ತು.

ಅದೇ ರೀತಿ ಬಿಬಿಎಂಪಿಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ 2022ರಲ್ಲೇ ಅಮೃತ ನಗರೋತ್ಥಾನ ಯೋಜನೆಯಡಿಯಲ್ಲಿ ಒದಗಿಸಿದ್ದ 6,000 ಕೋಟಿ ರುಪಾಯಿ ಮೊತ್ತದ ಕ್ರಿಯಾಯೋಜನೆಗಳಿಗೆ ಸರ್ಕಾರದ ಅನುಮೋದನೆ ಕೋರಿ ಕಡತ (ಕಡತ ಸಂಖ್ಯೆ; ಯುಡಿಡಿ 299 ಎಂಎನ್‌ವೈ 2022 ಕಂಪ್ಯೂಟರ್ ನಂಬರ್ 794956) ಸಲ್ಲಿಸಿತ್ತು. ಆರ್‍ಪಿಸಿ ಬಡಾವಣೆಯ ಸಿಎ ನಿವೇಶನ (ಸಂಖ್ಯೆ; 22, 23, 24ರಲ್ಲಿ) ಈಜುಕೊಳ ನಿರ್ಮಾಣ ಪ್ರಕರಣದಲ್ಲಿ ಆರೋಪಿಯಾಗಿರುವ ಎಸ್ ಎಲ್ ಶಿವಪ್ರಸಾದ್, ಚೆಲವಯ್ಯ, ನಾಗರಾಜು, ಎಂ ಸಿ ಮುನಿಕೃಷ್ಣ, ಪಿ ಎಸ್ ಸದಾನಂದಮೂರ್ತಿ, ಟಿ ಶ್ಯಾಮಸುಂದರ್, ಕೆ ಬಾಬುರೆಡ್ಡಿ ಅವರನ್ನು ಪ್ರಕರಣದಿಂದ ಕೈ ಬಿಡುವ ಬಗ್ಗೆಯೂ ಕಡತ ಸಲ್ಲಿಸಿತ್ತು.

ಹಾಗೆಯೇ ಎಇಇ ಎಂ ಶಾಂತಕುಮಾರ್, ಕೆ ಎಸ್ ಸುಷ್ಮ ಇವರ ವಿರುದ್ಧ ಕರ್ತವ್ಯ ಲೋಪ ಆರೋಪದ ಪ್ರಕರಣವನ್ನು ಲೋಕಾಯುಕ್ತಕರಿಗೆ ವಹಿಸುವುದು, ಬಿಡಿಎಯ ನಿವೃತ್ತ ನೌಕರ ಬಿ ಎಂ ಚಿಕ್ಕಯ್ಯ ಸೇರಿದಂತೆ ಬಿಡಿಎನ ಇತರೆ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವುದು, ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಘನತ್ಯಾಜ್ಯ ನಿರ್ವಹಣೆ ಮಂಡಳಿಯ ಉಪ ಪ್ರಧಾನ ವ್ಯವಸ್ಥಾಪಕ ಬಿ ಸಣ್ಣ ಪರಶುರಾಮ ಅವರ ಅಮಾನತು ಮತ್ತು ಲೀನ್ ಬದಲಾವಣೆ, ಎಇಇ ಎಸ್ ಪಿ ರಂಗನಾಥ್ ಅವರ ವಿರುದ್ಧ ಕರ್ತವ್ಯ ಲೋಪ ಪ್ರಕರಣವನ್ನು ಉಪ ಲೋಕಾಯುಕ್ತರಿಗೆ ವಹಿಸುವುದು, ಎಸ್ ವಿ ರಮೇಶ್, ಕೆ ಎಂ ಶಿವಪ್ರಕಾಶ್, ಎಚ್ ಎಸ್ ಜಯಪ್ರಕಾಶ್, ಚಂದ್ರೇಗೌಡ, ದೇವರಾಜಯ್ಯ, ಪ್ರಸನ್ನಕುಮಾರ್ ಮತ್ತು ಇತರರು, ಶ್ರೀನಿವಾಸ್, ಬಿ ಎಲ್ ಜಯಲಿಂಗಪ್ಪ, ಈ ರಂಗಸ್ವಾಮಿ ವಿರುದ್ಧದ ಕರ್ತವ್ಯಲೋಪ ಪ್ರಕರಣವನ್ನು ಉಪ ಲೋಕಾಯುಕ್ತರಿಗೆ ವಹಿಸಲು ಅನುಮತಿ ಕೋರಿದ್ದ ಇಲಾಖೆಯು ಕಡತವನ್ನು ಡಿ ಕೆ ಶಿವಕುಮಾರ್ ಅವರಿಗೆ ಪ್ರತ್ಯೇಕ ಕಡತಗಳನ್ನು ಸಲ್ಲಿಸಿತ್ತು. ಆದರೆ ಈ ಕಡತಗಳೂ ಸಹ ನಿಗದಿತ ಅವಧಿಯೊಳಗೆ ವಿಲೇವಾರಿಯಾಗಿರಲಿಲ್ಲ ಎಂದು ತಿಳಿದು ಬಂದಿದೆ.

ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ ಹೆಸರನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪ್ರದೇಶಕ್ಕೆ ನಾಮಕರಣ ಮಾಡುವುದು, ಬಿಡಿಎನ ವೆಂಕಟೇಶ್, ಡಿ ಡಿ., ಬಿ ಶಿವಸ್ವಾಮಿ ಅವರ ವಿರುದ್ಧ ವಿಚಾರಣೆ ಮತ್ತು ತನಿಖೆ ಕೈಗೊಳ್ಳಲು ಪೂರ್ವಾನುಮತಿ ನೀಡುವುದು, ಎಸ್ ಎಂ ಮಂಗಳ, ಕಮಲಮ್ಮ, ವಿರೂಪಾಕ್ಷಪ್ಪ, ವೆಂಕಟರಮಣಪ್ಪ ಅವರ ವಿರುದ್ಧ ವಿಚಾರಣೆ, ತನಿಖೆ ನಡೆಸಲು ಪೂರ್ವಾನುಮತಿ ಕೋರಿರುವ ಕಡತಗಳ ಮೇಲೂ ಉಪ ಮುಖ್ಯಮಂತ್ರಿ ಕಚೇರಿಯಲ್ಲಿಯೇ ಧೂಳಿಡಿದು ಕೂತಿದ್ದವು.
69,894 ಕಡತಗಳು ವಿಲೇವಾರಿಗೆ ಬಾಕಿ; ಸಿಎಂ, ಡಿಸಿಎಂ ಇಲಾಖೆ ಸೇರಿ 41 ಇಲಾಖೆಗಳಲ್ಲಿ ಶೇ.41ರಷ್ಟು ಮಾತ್ರ ಪ್ರಗತಿ
ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿಯೂ ನಿಗದಿತ ಅವಧಿಯಲ್ಲಿ ಕಡತಗಳು ವಿಲೇವಾರಿಯಾಗಿರಲಿಲ್ಲ.
120 ದಿನಗಳಾದರೂ ಕಡತಗಳ ಮಾಹಿತಿ ಒದಗಿಸದ ಸಿಎಂ ಸಚಿವಾಲಯ; ಹಿರಿಯ ಅಧಿಕಾರಿಯಿಂದ ತಡೆ?
ಅಲ್ಲದೇ ಸಿಎಂ ಸಚಿವಾಲಯದಲ್ಲಿಯೂ ಸಹ 120 ದಿನಗಳಾದರೂ ಕಡತಗಳ ವಿಲೇವಾರಿ ಕುರಿತು ಮಾಹಿತಿಯನ್ನೇ ನೀಡಿರಲಿಲ್ಲ. ಈ ಕುರಿತು ದಿ ಫೈಲ್ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.




