ಬೆಂಗಳೂರು; ವಿಧಾನಸೌಧ, ವಿಕಾಸ ಸೌಧ, ಬಹುಮಹಡಿ ಕಟ್ಟಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ, ತಾಲೂಕು, ಗ್ರಾಮೀಣ ಪ್ರದೇಶಗಳಲ್ಲಿರುವ ಸರ್ಕಾರಿ ನೌಕರರು ಕರ್ತವ್ಯ ಮೊಬೈಲ್ ಅಪ್ಲಿಕೇಷನ್‌ನಲ್ಲಿ ನೋಂದಾಯಿಸಿಕೊಳ್ಳಲು ಭಾರೀ ನಿರಾಸಕ್ತಿ ಪ್ರದರ್ಶಿಸಿದ್ದಾರೆ. 2026ರ ಜೂನ್ 16ರ ಅಂತ್ಯಕ್ಕೆ ಇನ್ನೂ 2,13,925 ಅಧಿಕಾರಿ, ನೌಕರರು ನೋಂದಾಯಿಸಿಕೊಂಡಿಲ್ಲ.
ಸರ್ಕಾರಿ ನೌಕರರು ಸಮಯಕ್ಕೆ ಸರಿಯಾಗಿ ಅಂದರೇ ಬೆಳಗ್ಗೆ 10ಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕಟ್ಟಾಜ್ಞೆ ಮಾಡಿದ್ದರು. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರೂ ಸಹ ಸುತ್ತೋಲೆ ಹೊರಡಿಸಿದ್ದರು. ಸುತ್ತೋಲೆ ಹೊರಡಿಸಿದ ನಂತರವೂ ರಾಜ್ಯದಲ್ಲಿ ಇನ್ನೂ 2,13,925 ಅಧಿಕಾರಿ ನೌಕರರು ಕರ್ತವ್ಯ ಮೊಬೈಲ್ ಅಪ್ಲಿಕೇಷನ್‌ನಲ್ಲಿ ನೊಂದಾಯಿಸಿಕೊಳ್ಳದೇ ಇರುವುದು ಮುನ್ನೆಲೆಗೆ ಬಂದಿದೆ.
ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರು 2026ರ ಜೂನ್ 17ರಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಟಿಪ್ಪಣಿ ಹೊರಡಿಸಿದ್ದಾರೆ. ಈ ಟಿಪ್ಪಣಿ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.

2026ರ ಜೂನ್ 16ರ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಇದುವರೆಗೂ 2,13,925 ಅಧಿಕಾರಿ ನೌಕರರು ಕರ್ತವ್ಯ ಮೊಬೈಲ್ ಅಪ್ಲಿಕೇಷನ್‌ನಲ್ಲಿ ನೋಂದಾಯಿಸಿಕೊಂಡಿಲ್ಲ. ಆದ್ದರಿಂದ ಈ ಬಗ್ಗೆ ವೈಯಕ್ತಿಕವಾಗಿ ಗಮನಹರಿಸಬೇಕು. ತಮ್ಮ ಜಿಲ್ಲೆಯಲ್ಲಿ ಇದುವರೆಗೂ ಕರ್ತವ್ಯ ಮೊಬೈಲ್ ಅಪ್ಲಿಕೇಷನ್‌ನಲ್ಲಿ ನೋಂದಾಯಿಸದ ಅಧಿಕಾರಿ, ನೌಕರರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಅಲ್ಲದೇ ಈ ಬಗ್ಗೆ 7 ದಿನದೊಳಗೆ ವರದಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸೂಚಿಸಿದ್ದಾರೆ.
5 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಸರ್ಕಾರಿ ನೌಕರರು, ಅಧಿಕಾರಿಗಳ ಪೈಕಿ 2025ರ ಸೆ.24ರ ಹೊತ್ತಿಗೆ 3,15,907 ಸಂಖ್ಯೆಯಲ್ಲಿನ ಅಧಿಕಾರಿ, ನೌಕರರು, ಸಿಬ್ಬಂದಿಗಳಷ್ಠೇ ಈ ವ್ಯವಸ್ಥೆಗೆ ನೋಂದಣಿ ಮಾಡಿಕೊಂಡಿದ್ದರು. ಇನ್ನುಳಿದ 2 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಅಧಿಕಾರಿ, ನೌಕರರು, ಸಿಬ್ಬಂದಿಗಳು ನೋಂದಣಿಯೇ ಅಗಿರಲಿಲ್ಲ.
ದಿ ಫೈಲ್ ಕೂಡ 2026ರ ಜೂನ್ 17ರಂದು ಕರ್ತವ್ಯ ಅಪ್ಲಿಕೇಷನ್‌ನ್ನು ಪರಿಶೀಲಿಸಿತು. ಇದರ ಪ್ರಕಾರ 2026ರ ಜೂನ್ 17ರ ಸಂಜೆ 7.28ರ ಹೊತ್ತಿಗೆ 3,68, 077 ಮಂದಿ ಅಧಿಕಾರಿ ನೌಕರರಷ್ಟೇ ನೋಂದಾಯಿಸಿಕೊಂಡಿದ್ದರು.


ಇದೇ ಸಮಯಕ್ಕೆ 30, 261 ಮಂದಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಲು ಹಾಜರಾಗಿದ್ದರು.
ಸರ್ಕಾರಿ ಕಚೇರಿಗಳಿಗೆ ಸರ್ಕಾರಿ ನೌಕರರು, ಅಧಿಕಾರಿಗಳು ನಿಗದಿತ ಸಮಯದೊಳಗೇ ಹಾಜರಾಗುತ್ತಿಲ್ಲ. ಅಲ್ಲದೇ ಬೆಳಿಗ್ಗೆ 10 ಗಂಟೆಗೆ ಹಾಜರಾಗಬೇಕಿರುವ ಸರ್ಕಾರಿ ನೌಕರರು 11 ಗಂಟೆಯಾದರೂ ಕಚೇರಿಗೆ ಬರುತ್ತಿಲ್ಲ. ಸರ್ಕಾರಿ ಕಚೇರಿಗಳಿಗೆ ನಿಗದಿತ ಅವಧಿಯೊಳಗೇ ಹಾಜರಾಗದ ಅಧಿಕಾರಿ, ನೌಕರರ ಕಳ್ಳಾಟ ಈಗಲೂ ಮುಂದುವರೆದಿದೆ. ಹಾಗೆಯೇ ಕರ್ನಾಟಕ ಸರ್ಕಾರಿ ನೌಕರರ ಹಾಜರಾತಿ ನಿರ್ವಹಣೆಗಾಗಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆಗೆ 2025ರ ಹೊತ್ತಿಗೆ ಕೇವಲ 19 ಇಲಾಖೆಗಳಷ್ಟೇ ಒಪ್ಪಿಗೆ ನೀಡಿದ್ದವು. ಉಳಿದ ಇಲಾಖೆಗಳು ಈ ವ್ಯವಸ್ಥೆಯನ್ನು ಒಪ್ಪಿಕೊಳ್ಳಲು ಈಗಲೂ ಮೀನಮೇಷ ಮಾಡುತ್ತಿವೆ.
ಹೀಗಾಗಿ ಕಚೇರಿಗಳಿಗೆ ಅನಧಿಕೃತವಾಗಿ ಗೈರು ಹಾಜರಾಗುವ ಅಧಿಕಾರಿ, ಸಿಬ್ಬಂದಿಗಳನ್ನು ಕಂಡು ಹಿಡಿಯಲು ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗಿಲ್ಲ. ಅಲ್ಲದೇ ಈ ವ್ಯವಸ್ಥೆಯನ್ನು ಇನ್ನೂ ಒಪ್ಪಿಕೊಳ್ಳದ ಇಲಾಖೆಗಳಲ್ಲಿ ಅಧಿಕಾರಿ, ಸಿಬ್ಬಂದಿಗಳು ಅನಧಿಕೃತವಾಗಿ ಗೈರು ಹಾಜರಾಗುವ ಓಟಕ್ಕೆ ಕಡಿವಾಣವೂ ಬಿದ್ದಿಲ್ಲ.
ಕರ್ನಾಟಕ ಸರ್ಕಾರಿ ನೌಕರರ ಹಾಜರಾತಿ ನಿರ್ವಹಣೆ ವ್ಯವಸ್ಥೆ (KAAMS) ಕಾರ್ಯವೈಖರಿ ಕುರಿತು ಸಭೆಯಲ್ಲಿ ಚರ್ಚೆಯಾಗಿತ್ತು. ಸರ್ಕಾರಿ ಕಚೇರಿಗಳಲ್ಲಿನ ಹಿಂದಿನ ಹಾಜರಾತಿ ವ್ಯವಸ್ಥೆ ಹಾಗೂ ಹಾಲಿ ಕರ್ನಾಟಕ ಸರ್ಕಾರಿ ನೌಕರರ ಹಾಜರಾತಿ ನಿರ್ವಹಣೆ ವ್ಯವಸ್ಥೆಯಲ್ಲಿ ಹಲವು ವ್ಯತ್ಯಾಸಗಳು ಇದ್ದವು.
ಬಜೆಟ್‌ನಲ್ಲಿ ಘೋಷಣೆ
ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆ (KAAMS) ಕಾರ್ಯವೈಖರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಘೋಷಣೆಯಲ್ಲಿಯೇ ಪರಿಚಯಿಸಲಾಗಿತ್ತು. ಅನಧಿಕೃತವಾಗಿ ಗೈರು ಹಾಜರಾಗುವ ಅಧಿಕಾರಿ, ನೌಕರರು, ಸಿಬ್ಬಂದಿಗಳನ್ನು ಕಂಡು ಹಿಡಿಯಲು ಈ ವ್ಯವಸ್ಥೆಯಿಂದ ಅನುಕೂಲವಾಗುತ್ತದೆ ಎಂದು ಬಜೆಟ್ ಘೋಷಣೆಯಲ್ಲಿ ಹೇಳಲಾಗಿತ್ತು. ಆದರೂ 19 ಇಲಾಖೆಗಳು ಹೊರತುಪಡಿಸಿ ಉಳಿದ ಇಲಾಖೆಗಳ ಅಧಿಕಾರಿ, ನೌಕರರು, ಸಿಬ್ಬಂದಿಗಳು ಈ ವ್ಯವಸ್ಥೆಯಡಿಯಲ್ಲಿ ಬರಲು ಹಿಂದೇಟು ಹಾಕಿರುವುದು ನಡವಳಿಯಿಂದ ಕಂಡು ಬಂದಿತ್ತು.

ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆ (KAAMS)ಯು ಹೇಗೆ ಕಾರ್ಯನಿರ್ವಹಿಸುತ್ತಿದೆ, ಎಷ್ಟು ಸಂಖ್ಯೆಯ ಅಧಿಕಾರಿ, ನೌಕರರು, ಸಿಬ್ಬಂದಿಗಳು ನೋಂದಾಯಿಸಿಕೊಂಡಿದ್ದಾರೆ, ಎಷ್ಟು ಸಂಖ್ಯೆಯ ಅಧಿಕಾರಿ, ನೌಕರರು, ಸಿಬ್ಬಂದಿಗಳು ಎಷ್ಟು ಗಂಟೆಗೆ ಕಚೇರಿಗೆ ಹಾಜರಾಗುತ್ತಿದ್ದಾರೆ ಎಂಬ ಕುರಿತು ‘ದಿ ಫೈಲ್,’ ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆ ಜಾಲತಾಣದಲ್ಲಿನ ಅಂಕಿ ಅಂಶಗಳ ಮೇಲೆ 2025ರ ಸೆ. 24ರಂದು ಕಣ್ಣಾಡಿಸಿತ್ತು.
ಸೆ.24ರಂದು ಹಾಜರಾತಿ ವಿವರ ಹೇಗಿತ್ತು?
2205ರ ಸೆ.24 ಹೊತ್ತಿಗೆ ರಾಜ್ಯ ಸರ್ಕಾರಿ ಇಲಾಖೆಗಳ ಒಟ್ಟಾರೆ 3,51,907 ನೌಕರರು ಈ ವ್ಯವಸ್ಥೆಗೆ ನೋಂದಾಯಿಸಿಕೊಂಡಿದ್ದರು. ಸೆಪ್ಟಂಬರ್ 24ರಂದು ಒಟ್ಟಾರೆ 44,164 ನೌಕರರು ಕಚೇರಿಗಳಿಗೆ ಹಾಜರಾಗಿದ್ದರು ಎಂಬುದು ಕೆಎಎಎಂಎಸ್‌ನ ಜಾಲತಾಣದಿಂದ ಕಂಡು ಬಂದಿತ್ತು.


ಬೆಳಗ್ಗೆ 9 ಗಂಟೆಯೊಳಗೆ ಶೇ. 29.6ರಷ್ಟು

ಬೆಳಗ್ಗೆ 9-30ರಿಂದ 10 ಗಂಟೆಯೊಳಗೆ ಶೇ.17.3ರಷ್ಟು,

ಬೆಳಗ್ಗೆ 10 ಗಂಟೆಯಿಂದ 11 ಗಂಟೆಯೊಳಗೆ ಶೇ.20.4,

11 ಗಂಟೆ ನಂತರ ಶೇ. 14.3ರಷ್ಟು ನೌಕರರು, ಅಧಿಕಾರಿಗಳು, ಸಿಬ್ಬಂದಿಗಳು ಕಚೇರಿಗಳಿಗೆ ಹಾಜರಾಗಿದ್ದರು ಎಂಬುದು ಜಾಲತಾಣದಿಂದ ತಿಳಿದು ಬಂದಿದೆ.

ಕೆಎಎಎಂಎಸ್ ಹೇಗೆ ಕಾರ್ಯ ನಿರ್ವಹಿಸಲಿದೆ?
ರಾಜ್ಯ ಸರ್ಕಾರವು ಪರಿಚಯಿಸಿರುವ ಈ ವ್ಯವಸ್ಥೆಗೆ ನೌಕರರ ಆಧಾರ್‌ಗೆ ಲಿಂಕ್ ಮಾಡಲಾದ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಅವರ ಹಾಜರಾತಿಯನ್ನು ಪರಿಶೀಲಿಸುತ್ತದೆ. ನೌಕರರು ತಮ್ಮ ಕೆಲಸದ ಸ್ಥಳದಲ್ಲಿರುವಾಗ ಕಚೇರಿಯ 100-200 ಮೀಟರ್ ವ್ಯಾಪ್ತಿಯಲ್ಲಿ ಸೆಲ್ಫಿ ತೆಗೆದುಕೊಳ್ಳಬೇಕು. ಈ ಅಪ್ಲಿಕೇಶನ್ ಮೂಲಕ ತಡವಾದ ಪ್ರವೇಶ ಅಥವಾ ಬೇಗನೆ ನಿರ್ಗಮನದಂತಹ ಉಲ್ಲಂಘನೆಗಳ ಬಗ್ಗೆ ಇಲಾಖೆ ಮುಖ್ಯಸ್ಥರಿಗೆ ಎಚ್ಚರಿಕೆ ನೀಡುತ್ತದೆ.
ನೌಕರರು, ಅಧಿಕಾರಿಗಳು, ಸಿಬ್ಬಂದಿಗಳು ತೆಗೆದುಕೊಳ್ಳುವ ಸೆಲ್ಫಿಯನ್ನು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಆಧಾರ್‌ನಲ್ಲಿರುವ ಮೂಲ ಫೋಟೋ ಮತ್ತು ನೋಂದಣಿಯ ಸಮಯದಲ್ಲಿ ತೆಗೆದ ಸೆಲ್ಫಿಯೊಂದಿಗೆ ಹೋಲಿಸುತ್ತದೆ.
ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ತಮ್ಮ ಬುದ್ದಿವಂತಿಕೆಯಿಂದ ಬದಲಾಯಿಸಿ ನಿರ್ವಹಿಸಲು ಸಾಧ್ಯವಿದೆ. ಅಲ್ಲದೇ ಸಿಬ್ಬಂದಿ ತಮ್ಮ ಅನಿಯಮಿತ ಹಾಜರಾತಿಯನ್ನು ಮರೆಮಾಚಲು ಉಪಕರಣಗಳನ್ನು ಹಾನಿಗೊಳಿಸಬಹುದು ಅಥವಾ ಬೇರೆ ಯಾವುದಾದರೂ ತಂತ್ರವನ್ನು ಆಶ್ರಯಿಸಬಹುದು ಎಂದು ಹೇಳಲಾಗಿತ್ತು.
ಆದರೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (DPAR) ಇ-ಆಡಳಿತ ಕೇಂದ್ರವು ಅಭಿವೃದ್ಧಿಪಡಿಸಿರು ಕೆಎಎಎಂಎಸ್‌ನ್ನು ಜಿಯೋಫೆನ್ಸ್ ನಿಂದ ವಿನ್ಯಾಸಗೊಳಿಸಿದೆ. ಹೀಗಾಗಿ ಅದನ್ನು ಹಾಳು ಮಾಡುವುದು ಅಸಾಧ್ಯವಾಗಿದೆ.
ಎಚ್‌ಆರ್‍ಎಂಎಸ್‌ನಲ್ಲಿನ ದತ್ತಾಂಶವು ಕೆಲಸದ ಸ್ಥಳದ ವಿವರಗಳನ್ನು ನೀಡಲಿದೆ. ಪ್ರತಿದಿನ, ಉದ್ಯೋಗಿ ತನ್ನ ಕೆಲಸದ ಸ್ಥಳಕ್ಕೆ ಬಂದಾಗ, ಅವನು/ಅವಳು ಸೆಲ್ಫಿ ತೆಗೆದುಕೊಳ್ಳಬೇಕು. ಈ ಫೋಟೋವನ್ನು ಅಪ್ಲಿಕೇಶನ್‌ನಲ್ಲಿ ನೋಂದಣಿ ಸಮಯದಲ್ಲಿ ತೆಗೆದ ಸೆಲ್ಫಿಯೊಂದಿಗೆ ಹೋಲಿಸಲಾಗುತ್ತದೆ. ಅವರ ಹಾಜರಾತಿಯನ್ನು ಗುರುತಿಸಲು ಯಾವುದೇ ಉಪಕರಣಗಳು ಅಥವಾ ಗ್ಯಾಜೆಟ್‌ಗಳು ಇರುವುದಿಲ್ಲ. ಮತ್ತು ಅವರ ಸೆಲ್ ಫೋನ್ ಅನ್ನು ಮಾತ್ರ ಬಳಸಲಾಗುತ್ತದೆ.





