ಬೆಂಗಳೂರು; ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಹೊಸದಾಗಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ಸ್ಥಾಪನೆಗೆ ಹೆಚ್ಚಿನ ಬೇಡಿಕೆ ಬರುತ್ತಿದ್ದರೂ ಸಹ ರಾಜ್ಯ ಕಾಂಗ್ರೆಸ್ ಸರ್ಕಾರವು ಹೊಸದಾಗಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಮಂಜೂರು ಮಾಡಲು ಆಸಕ್ತಿ ವಹಿಸುತ್ತಿಲ್ಲ. ಬದಲಿಗೆ ಸಂಖ್ಯಾಬಲ ಕಡಿಮೆ ಇರುವ ಯಾವುದಾದರೂ ವಿದ್ಯಾರ್ಥಿ ನಿಲಯಗಳನ್ನು ಸ್ಥಳಾಂತರ ಮಾಡಲು ಅತ್ಯಾಸಕ್ತಿ ವಹಿಸಿರುವುದು ಇದೀಗ ಬಹಿರಂಗವಾಗಿದೆ.
2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ 1 ಲಕ್ಷ 41 ಸಾವಿರ 773 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶವೇ ದೊರೆತಿರಲಿಲ್ಲ. ಇದರ ಬೆನ್ನಲ್ಲೇ ಸಂಖ್ಯಾಬಲ ಕಡಿಮೆ ಇರುವ ಯಾವುದಾದರೂ ವಿದ್ಯಾರ್ಥಿ ನಿಲಯಗಳನ್ನು ಸ್ಥಳಾಂತರ ಮಾಡಲು ಇಲಾಖೆಗೆ ಸೂಚಿಸಿರುವುದು ಮುನ್ನೆಲೆಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮತ್ತು ತರೀಕೆರೆ ತಾಲೂಕುಗಳಿಗೆ ಹೊಸದಾಗಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳನ್ನು ಮಂಜೂರು ಮಾಡಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ಸಂಖ್ಯಾಬಲ ಕಡಿಮೆ ಇರುವ ಯಾವುದಾದರೂ ವಿದ್ಯಾರ್ಥಿ ನಿಲಯಗಳನ್ನು ಸ್ಥಳಾಂತರ ಮಾಡಲು ಇಲಾಖೆಗೆ ಸೂಚಿಸಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿಯೂ ಹೊಸದಾಗಿ ವಿದ್ಯಾರ್ಥಿ ನಿಲಯಗಳ ಮಂಜೂರಾತಿಗೆ ಇಲಾಖೆಯಿಂದ ಪ್ರಸ್ತಾವ ಸಲ್ಲಿಕೆಯಾಗಿತ್ತು. ಆಗಲೂ ಸಹ ಆರ್ಥಿಕ ಇಲಾಖೆಯು ಹೊಸದಾಗಿ ವಿದ್ಯಾರ್ಥಿ ನಿಲಯಗಳನ್ನು ಮಂಜೂರಾತಿಗೆ ಅನುದಾನ ಲಭ್ಯವಿಲ್ಲ ಹೀಗಾಗಿ ಯಾವ ಪ್ರಸ್ತಾವನೆಗಳನ್ನು ಒಪ್ಪಿರಲಿಲ್ಲ. ಹಲವು ಪ್ರಸ್ತಾವನೆಗಳನ್ನು ಮುಂದೂಡಿತ್ತು. ಆದರೀಗ ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ಕೆಲವು ದಿನಗಳಲ್ಲಿ ವಿದ್ಯಾರ್ಥಿ ನಿಲಯಗಳನ್ನು ಸ್ಥಳಾಂತರ ಮಾಡಬೇಕು, ಹೊಸದಾಗಿ ವಿದ್ಯಾರ್ಥಿ ನಿಲಯ ಸ್ಥಾಪನೆಗೆ ಒಪ್ಪಲು ಸಾಧ್ಯವಿಲ್ಲ ಎಂದು ಆರ್ಥಿಕ ಇಲಾಖೆಯು ನೀಡಿರುವ ಹಿಂಬರಹವು ಮುನ್ನೆಲೆಗೆ ಬಂದಿದೆ.
ಈ ಸಂಬಂಧ 2026ರ ಜೂನ್ 6ರಂದು ಆರ್ಥಿಕ ಇಲಾಖೆಯು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಹಿಂಬರಹ ನೀಡಿದೆ.
ಹಿಂಬರಹದಲ್ಲೇನಿದೆ?
ಪ್ರಸ್ತಾವನೆಯನ್ನು ಪರಿಶೀಲಿಸಲಾಯಿತು. ಇಲಾಖೆಯು ಹೊಸದಾಗಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಮಂಜೂರು ಮಾಡುವ ಬದಲಾಗಿ ಸಂಖ್ಯಾಬಲ ಕಡಿಮೆ ಇರುವ ಯಾವುದಾದರೂ ವಿದ್ಯಾರ್ಥಿ ನಿಲಯಗಳನ್ನು ಸ್ಥಳಾಂತರ ಮಾಡುವ ಬಗ್ಗೆ ಇಲಾಖೆ ಹಂತದಲ್ಲಿ ಪರಿಶೀಲಿಸುವುದು. ಮುಂದುವರೆದು ಕುಂಟಿನಮಡು ಗ್ರಾಮದಲ್ಲಿ ಪದವಿಪೂರ್ವ ಕಾಲೇಜಿನಲ್ಲಿ ಇರುವ ವಿದ್ಯಾರ್ಥಿಗಳ ಸಂಖ್ಯೆ 16 ಇರುವುದರಿಂದ 100 ಸಂಖ್ಯಾಬಲದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯವನ್ನು ಮಂಜೂರಾತಿ ನೀಡುವ ಪ್ರಸ್ತಾವನೆಯನ್ನು ಒಪ್ಪಲು ಬರುವುದಿಲ್ಲ ಎಂದು ತಿಳಿಸಿರುವುದು ಹಿಂಬರಹದಿಂದ ತಿಳಿದು ಬಂದಿದೆ.

ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿರುವ ಜಿಲ್ಲೆಗಳಲ್ಲಿ ಹೊಸದಾಗಿ ವಿದ್ಯಾರ್ಥಿ ನಿಲಯಗಳ ಆರಂಭಕ್ಕೆ ಅನುದಾನ ಕೊರತೆ ಎದುರಿಸುತ್ತಿರುವ ನಡುವೆಯೇ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 1.41 ಲಕ್ಷದಷ್ಟು ಸಂಖ್ಯೆಯ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಸತಿನಿಲಯಗಳಲ್ಲಿ ಪ್ರವೇಶವೇ ದೊರೆತಿಲ್ಲ ಎಂದು ಸರ್ಕಾರವೇ ಖುದ್ದು ಒಪ್ಪಿಕೊಂಡಿತ್ತು.
ಬೆಂಗಳೂರಿನಲ್ಲಿ ನಡೆದಿದ್ದ ವಿಶೇಷ ಅಧಿವೇಶನದಲ್ಲಿ ವಿಧಾನ ಪರಿಷತ್ತಿನ ಸದಸ್ಯ ಕೆ ಎಸ್ ನವೀನ್ ಅವರು ನಿಯಮ 330ರ ಅಡಿಯಲ್ಲಿ ಈ ಕುರಿತು ಪ್ರಶ್ನೆ ಕೇಳಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದ ಶಿವರಾಜ ತಂಗಡಗಿ ಅವರು 1.41 ಲಕ್ಷ ಸಂಖ್ಯೆಯಷ್ಟು ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ಅವಕಾಶವಾಗಿಲ್ಲ ಎಂದು ತಿಳಿಸಿದ್ದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಸರ್ಕಾರಿ ವಸತಿ ವಿದ್ಯಾರ್ಥಿ ನಿಲಯಗಳಿವೆ. ಈ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶಾತಿ ಬಯಸಿ ಲಕ್ಷಾಂತರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಲೇ ಇದ್ದಾರೆ. ಆದರೆ ಬಹುತೇಕ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ಪ್ರವೇಶವೇ ದೊರೆತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನೇ ನಿಲ್ಲಿಸುತ್ತಿದ್ದಾರೆ!
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಒಟ್ಟು 1,245 ಮೆಟ್ರಿಕ್ ಪೂರ್ವ ಹಾಗೂ 1,414 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು ಸೇರಿ ಒಟ್ಟಾರೆ 2,659 ಸರ್ಕಾರಿ ವಿದ್ಯಾರ್ಥಿ ನಿಲಯಗಳಿವೆ. ಈ ವಿದ್ಯಾರ್ಥಿ ನಿಲಯಗಳಲ್ಲಿ 2,50,641 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ.
1,245 ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ 51,792 ಬಾಲಕರು, ಮತ್ತು 15,511 ಬಾಲಕಿಯರು ಸೇರಿ ಒಟ್ಟಾರೆ 67,303 ವಿದ್ಯಾರ್ಥಿಗಳ ಪ್ರವೇಶಕ್ಕೆ ಮಂಜೂರಾತಿ ದೊರೆತಿತ್ತು. ಆದರೆ ಈ ವಿದ್ಯಾರ್ಥಿ ನಿಲಯಗಳಲ್ಲಿ 965 ಬಾಲಕರು, 280 ಬಾಲಕಿಯರಿಗಷ್ಟೇ ಪ್ರವೇಶ ದೊರೆತಿತ್ತು ಅದೇ ರೀತಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ 85,764 ಬಾಲಕರು ಮತ್ತು 97,574 ಬಾಲಕಿಯರು ಸೇರಿ 1,83,338 ವಿದ್ಯಾರ್ಥಿಗಳ ಪ್ರವೇಶಕ್ಕೆ ಮಂಜೂರಾತಿ ದೊರೆತಿತ್ತು. ಆದರೆ ಈ ಪೈಕಿ ಕೇವಲ 665 ಬಾಲಕರು, 749 ಬಾಲಕಿಯರು ಸೇರಿ ಒಟ್ಟಾರೆ 1,414 ವಿದ್ಯಾರ್ಥಿಗಳಿಗಷ್ಟೇ ವಸತಿ ನಿಲಯಗಳಿಗೆ ಪ್ರವೇಶ ದೊರೆತಿತ್ತು.
1.41 ಲಕ್ಷ ಸಂಖ್ಯೆಯ ವಿದ್ಯಾರ್ಥಿಗಳಿಗೆ ಸಿಗದ ಪ್ರವೇಶ
2025-26ನೇ ಶೈಕ್ಷಣಿಕ ಸಾಲಿನಲ್ಲಿ ಹಿಂದುಳಿದ ವರ್ಗದ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿಗಳಲ್ಲಿ 1,34,817 ಸಂಖ್ಯೆಯಷ್ಟು ನವೀಕರಣ ವಿದ್ಯಾರ್ಥಿಗಳಿದ್ದಾರೆ. 1,15,824 ಖಾಲಿ ಸ್ಥಾನಗಳಿಗೆ ಅನಗುಣವಾಗಿ 2,41,682 ಅರ್ಜಿಗಳು ಸ್ವೀಕೃತವಾಗಿದ್ದವು.

99,909 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ಆದರೆ ಇನ್ನೂ 1,41,773 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವನ್ನು ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ಶಿವರಾಜ ತಂಗಡಗಿ ಅವರು ಉತ್ತರಿಸಿದ್ದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 2025-26ರ ಬಜೆಟ್‌ನಲ್ಲಿ ಒಟ್ಟು 4,389.75 ಕೋಟಿ ರು ಅನುದಾನ ಹಂಚಿಕೆಯಾಗಿತ್ತು. ಇದರಲ್ಲಿ ಪ್ರಾರಂಭಿಕ ಶಿಲ್ಕು- 62.36 ಕೋಟಿ ರು ಸೇರಿತ್ತು. 2026ರ ಜನವರಿ 15ರ ಅಂತ್ಯಕ್ಕೆ 2,244.63 ಕೋಟಿ ರು ಬಿಡುಗಡೆಯಾಗಿತ್ತು. ಬಿಡುಗಡೆಗೆ 2,306.99 ಕೋಟಿ ರು ಬಾಕಿ ಇತ್ತು. ಜನವರಿ 15ರ ಅಂತ್ಯಕ್ಕೆ 1,680.28 ಕೋಟಿ ರು ಖರ್ಚಾಗಿತ್ತು. ಖರ್ಚು ಮಾಡಲು 564.35 ಕೋಟಿ ರು ಬಾಕಿ ಇತ್ತು.

ಅದೇ ರೀತಿ 2025-26- 2026ರ ಜನವರಿ 15ರ ಅಂತ್ಯಕ್ಕೆ ಇಲಾಖಾವಾರು ಮಹತ್ವಾಕಾಂಕ್ಷೆ ತಾಲೂಕುಗಳಡಿಯಲ್ಲಿ ಹಾಸ್ಟೆಲ್ ಕಟ್ಟಡಗಳ ನಿರ್ಮಾಣ- 35.00 ಕೋಟಿ ರು ಅಂದಾಜಿಸಿತ್ತು. ಈ ಪೈಕಿ 17.50 ಕೋಟಿ ರು ಬಿಡುಗಡೆಯಾಗಿತ್ತು. ಬಿಡುಗಡೆಗೆ ಇನ್ನೂ 17.50 ಕೋಟಿ ರು ಬಾಕಿ ಇತ್ತು.

ಹಾಗೆಯೇ 2025-26ನೇ ಸಾಲಿನ ಜನವರಿ 15ರ ಅಂತ್ಯಕ್ಕೆ ಕೇಂದ್ರ ಪುರಸ್ಕೃತ ಯೋಜನೆಗಳಡಿಯಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಕೇಂದ್ರದ ಅನುದಾನವೂ ಸೇರಿ 215.81 ಕೋಟಿ ರು ಅನುದಾನವಿತ್ತು. ಈ ಪೈಕಿ ಕೇಂದ್ರ ಮತ್ತು ರಾಜ್ಯದಿಂದ 154.61 ಕೋಟಿ ರು ಬಿಡುಗಡೆಯಾಗಿತ್ತು.

ಕೇಂದ್ರ ಪುರಸ್ಕೃತ ಯೋಜನೆಗಳಡಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ರಾಜ್ಯ ಮತ್ತು ಕೇಂದ್ರದ ಪಾಲು- ಒಟ್ಟಾರೆ 346.84 ಕೋಟಿ ರು ಅನುದಾನ ಒದಗಿಸಿತ್ತು. 2026ರ ಜನವರಿ 15ರ ಅಂತ್ಯಕ್ಕೆ ಒಟ್ಟಾರೆ 199.56 ಕೋಟಿ ರು ಬಿಡುಗಡೆಯಾಗಿತ್ತು.

ಇಲಾಖೆಯಲ್ಲಿ ಲಭ್ಯವಿರುವ 150 ವಿದ್ಯಾರ್ಥಿ ನಿಲಯಗಳನ್ನು ಹಂಚಿಕೆ ಮಾಡಿದ್ದರೂ ಸಹ ರಾಜ್ಯದ ಶಾಸಕರುಗಳು ಸಹ ವಿದ್ಯಾರ್ಥಿ ನಿಲಯಗಳ ಮಂಜೂರಾತಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬೇಡಿಕೆ ಸಲ್ಲಿಸುತ್ತಿದ್ದಾರೆ. ಇದು 2024-25ನೇ ಸಾಲಿನ ಆಯವ್ಯಯದಲ್ಲಿ (ಕಂಡಿಕೆ 178(1)ರಲ್ಲಿ 100 ಸಂಖ್ಯಾಬಲದ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ 150 ವಿದ್ಯಾರ್ಥಿ ನಿಲಯಗಳ ಸಂಖ್ಯೆಯ ಗಡಿಯನ್ನು ದಾಟಿದೆ. ಶಾಸಕರು ಮುಂದಿರಿಸಿರುವ ಈ ಬೇಡಿಕೆಯನ್ನು ಈಡೇರಿಸಲು ಇಲಾಖೆಯು ಹರಸಾಹಸ ಪಡುತ್ತಿದೆ.
ಲಭ್ಯವಿರುವ 150 ವಿದ್ಯಾರ್ಥಿ ನಿಲಯಗಳನ್ನು ಜಿಲ್ಲಾವಾರು, ವಿದ್ಯಾಸಂಸ್ಥೆಗಳ ಸಂಖ್ಯೆಗಳ ಆಧಾರದ ಮೇಲೆ ಹಂಚಿಕೆ ಮಾಡಿದ್ದರೂ ಸಹ ಹಲವು ವಿಧಾನಸಭೆ ಕ್ಷೇತ್ರಗಳಿಗೆ ವಿದ್ಯಾರ್ಥಿ ನಿಲಯಗಳ ಮಂಜೂರು ಮಾಡಲು ಕೋರಿಕೆಗಳು ಸಲ್ಲಿಕೆಯಾಗಿದ್ದವು. 2023-24ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ 39,332 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ದೊರೆತಿರಲಿಲ್ಲ.
ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ 2024-25ನೇ ಸಾಲಿಗೆ 200 ಕೋಟಿ ರು ಅನುದಾನ ಒದಗಿಸಲಾಗಿದೆ. ಹೊಸ ವಿದ್ಯಾರ್ಥಿ ನಿಲಯಗಳ ಕಟ್ಟಡ ಕಾಮಗಾರಿಯ ಘಟಕ ವೆಚ್ಚದ ರೂಪದಲ್ಲಿ 400.00 ಲಕ್ಷ ರು. ಅನುದಾನ ಘೋಷಿಸಿತ್ತು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಪಾಲುದಾರಿಕೆಯೊಂದಿಗೆ ಒಟ್ಟು 82 ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಮುಂದುವರೆದಿದೆ. ಆರ್‍ಐಡಿಎಫ್ ಟ್ರಾಂಚ್ 30 ಕಾರ್ಯಕ್ರಮದಡಿ 15 ಹೊಸ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಕೈಗೊಳ್ಳಲು ಸರ್ಕಾರವು ಕ್ರಮವಹಿಸಿದೆಯಾದರೂ ಇನ್ನೂ ಕಟ್ಟಡ ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿಲ್ಲ.
ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿರುವ ಯಾದಗಿರಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿ ನಿಲಯಗಳಿಲ್ಲ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಬೇಕು ಎಂದು ಸ್ಥಳೀಯರು ಹಕ್ಕೊತ್ತಾಯ ಮಂಡಿಸುತ್ತಿದ್ದಾರೆ. ಆದರೂ ಸಹ ರಾಜ್ಯ ಸರ್ಕಾರವು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳೂ ಕೇಳಿ ಬಂದಿವೆ.
ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಹೊಸದಾಗಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಆರಂಭಕ್ಕೆ ಅನುದಾನವೇ ಲಭ್ಯವಿಲ್ಲ ಎಂದು ಆರ್ಥಿಕ ಇಲಾಖೆಯು ಹಿಂದುಳಿದ ವರ್ಗ ಕಲ್ಯಾಣ ಇಲಾಖೆಗೆ 2025ರ ಅಕ್ಟೋಬರ್ 7ರಂದು ಹಿಂಬರಹ ನೀಡಿತ್ತು.
ಹಿಂಬರಹದಲ್ಲೇನಿತ್ತು?
‘ಪ್ರಸ್ತಾವನೆಯನ್ನು ಪರಿಶೀಲಿಸಲಾಯಿತು. ಪ್ರಸಕ್ತ ಸಾಲಿನಲ್ಲಿ 62 ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲು ಆಯವ್ಯಯದಲ್ಲಿ ಘೋಷಣೆ ಮಾಡಲಾಗಿದೆ. ಈ ಸಂಬಂಧ ಮಾತ್ರ ಅನುದಾನವನ್ನು ಕಲ್ಪಿಸಿಕೊಳ್ಳಲಾಗಿದೆ. ಇದನ್ನು ಹೊರತುಪಡಿಸಿ ಹೊಸ ವಿದ್ಯಾರ್ಥಿ ನಿಲಯಗಳ ಪ್ರಾರಂಭಕ್ಕೆ ಅನುದಾನವು ಲಭ್ಯವಿರುವುದಿಲ್ಲ. ಪ್ರಸ್ತುತ ಹೆಚ್ಚುವರಿ ಅನುದಾನ ಒದಗಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರಸ್ತಾವನೆಯನ್ನು ಒಪ್ಪಲು ಸಾಧ್ಯವಿಲ್ಲ,’ ಎಂದು ಹಿಂದುಳಿದ ವರ್ಗ ಕಲ್ಯಾಣ ಇಲಾಖೆಗೆ ತಿಳಿಸಿತ್ತು.
ಯಾದಗಿರಿ ಜಿಲ್ಲೆ ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದೆ. ಉನ್ನತ ಶಿಕ್ಷಣ ಕೇಂದ್ರಗಳ ಸಂಖ್ಯೆ ಕಡಿಮೆ ಇದೆ. ಪ್ರೌಢಶಾಲಾ ಶಿಕ್ಷಣವೂ ಸರಿಯಾಗಿ ದೊರೆತಿಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ದೂರದ ಊರಿಗೆ ಹೋಗಿ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡಬೇಕಿದೆ. ಆದರೆ ದೂರದ ಊರುಗಳಿಗೆ ಕಳಿಸಿ ಮಕ್ಕಳನ್ನು ಅಕ್ಷರಸ್ಥರನ್ನಾಗಿಸಲು ಗ್ರಾಮಸ್ಥರು ಆರ್ಥಿಕವಾಗಿ ಶಕ್ತರಾಗಿಲ್ಲ.
ಗ್ರಾಮೀಣ ವಿದ್ಯಾರ್ಥಿಗಳಿಗೆ ಪಟ್ಟಣ, ಹೋಬಳಿ ಕೇಂದ್ರದಲ್ಲಿ ವಸತಿ ಸಮಸ್ಯೆ ನಿವಾರಿಸಲು ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯು ವಸತಿ ನಿಲಯಗಳನ್ನು ಆರಂಭಿಸಿದೆ. ಆದರೆ ಯಾದಗಿರಿ ಜಿಲ್ಲೆಯಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದರೆ ವಸತಿ ನಿಲಯಗಳ ಸಂಖ್ಯೆ ಕಡಿಮೆಯಾಗಿದೆ.
ಜಿಲ್ಲೆಯಾದ್ಯಂತ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 70ಕ್ಕೂ ವಸತಿ ನಿಲಯಗಳನ್ನು ನಡೆಸುತ್ತಿದೆ. ಸಮಾಜ ಕಲ್ಯಾಣ ಇಲಾಖೆಯಿಂದ 57ಕ್ಕೂ ಹೆಚ್ಚು ವಸತಿ ನಿಲಯಗಳು ನಡೆಯುತ್ತಿವೆ. ಆದರೂ ವಿದ್ಯಾರ್ಥಿಗಳು ಮಾತ್ರ ವಸತಿ ನಿಲಯದ ಪ್ರವೇಶಕ್ಕಾಗಿ ಪ್ರತೀ ವರ್ಷ ಕಸರತ್ತು ನಡೆಸುತ್ತಿದ್ದಾರೆ.
ಅದೇ ರೀತಿ ವಸತಿ ನಿಲಯಗಳ ಬಹುತೇಕ ಕಟ್ಟಡಗಳು ಕಿರಿದಾಗಿವೆ. ಇರುವ ವಿದ್ಯಾರ್ಥಿಗಳಿಗೆ ಸಾಕಾಗುತ್ತಿಲ್ಲ. ಇನ್ನು ಹೆಚ್ಚುವರಿ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಮಾಡುವುದು ತಲೆನೋವಾಗಿದೆ. ಅಲ್ಲದೇ ನಿಗದಿಪಡಿಸಿದ ವಿದ್ಯಾರ್ಥಿಗಳಿಗೆ ಊಟ, ಉಪಹಾರ ನೀಡಬೇಕು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಲ್ಲಿ ಊಟದ ಪ್ರಮಾಣದಲ್ಲಿಕಡಿಮೆ ಆಗುತ್ತಿದೆ ಎಂಬ ಅರೋಪಗಳು ಕೇಳಿ ಬಂದಿದ್ದವು.
ಶಾಲಾ ಕಾಲೇಜುಗಳಿಗೆ ಪ್ರವೇಶ ಪಡೆಯುವುದಕ್ಕೆ ತೊಂದರೆ ಅನುಭವಿಸದ ಯಾದಗಿರಿಯ ಜಿಲ್ಲೆಯ ವಿದ್ಯಾರ್ಥಿಗಳು ವಸತಿ ನಿಲಯಗಳ ಪ್ರವೇಶಕ್ಕಾಗಿ ಹರಸಾಹಸ ಪಡಯುತ್ತಾರೆ. ಪ್ರತೀ ಬಾರಿ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಸದಸ್ಯರ ಕಚೇರಿಗಳಿಗೆ ಅಲೆದಾಡುವ ವಿದ್ಯಾರ್ಥಿಗಳು ವಸತಿ ನಿಲಯಗಳ ಪ್ರವೇಶಕ್ಕೆ ಶಿಫಾರಸ್ಸು ಮಾಡಬೇಕು ಎಂದು ದುಂಬಾಲು ಬೀಳುವುದು ಸರ್ವೆ ಸಾಮಾನ್ಯವಾದ ಸಂಗತಿಯಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2535 ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 1620 ವಿದ್ಯಾರ್ಥಿನಿಲಯಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಲಾಗಿದ್ದು 199 ವಿದ್ಯಾರ್ಥಿನಿಲಯಗಳು ಉಚಿತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇನ್ನುಳಿದ 716 ವಿದ್ಯಾರ್ಥಿನಿಲಯಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿನಿಲಯಗಳಲ್ಲಿನ ನಿಲಯಾರ್ಥಿಗಳಿಗೆ ಅಗತ್ಯವಾದ ಸ್ಥಳಾವಕಾಶ, ಶೌಚಾಲಯ, ಸ್ನಾನಗೃಹದಂತಹ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಲಯಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಅತ್ಯಂತ ಅವಶ್ಯಕವಾಗಿರುತ್ತದೆ.
ಇದಕ್ಕಾಗಿ ಸ್ವಂತ ಕಟ್ಟಡಗಳನ್ನು ನಿರ್ಮಿಸಲು ಆಯವ್ಯಯದ ಲಭ್ಯತೆಯನುಸಾರ ಹಂತಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. 2024-25 ನೇ ಸಾಲಿನಲ್ಲಿ ವಿದ್ಯಾರ್ಥಿನಿಲಯಗಳ ಕಟ್ಟಡ ನಿರ್ಮಾಣಕ್ಕಾಗಿ ವಿವಿಧ ಯೋಜನೆಗಳಡಿ ರೂ.20000.00 ಲಕ್ಷ ರು ಒದಗಿಸಲಾಗಿದೆ. ಪ್ರಸ್ತುತ ಒಟ್ಟು 664 ನಿವೇಶನಗಳು ವಿದ್ಯಾರ್ಥಿನಿಲಯಗಳ ಕಟ್ಟಡ ನಿರ್ಮಾಣಕ್ಕೆ ಲಭ್ಯವಿವೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಿಂದ ತಿಳಿದು ಬಂದಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿನ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಸಿಗದೇ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಹೀಗಾಗಿ ಹೊಸದಾಗಿ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಬೇಕು ಎಂಬ ಬೇಡಿಕೆ ಪ್ರಸ್ತಾವನೆಗಳು ಇಲಾಖೆಗೆ ಸಲ್ಲಿಕೆಯಾಗುತ್ತಲೇ ಇವೆ. ಈ ಯಾವ ಪ್ರಸ್ತಾವನೆಗಳನ್ನು ಇಲಾಖೆಯು ಒಪ್ಪುತ್ತಿಲ್ಲ. ಇದಕ್ಕೆ ಅನುದಾನದ ಕೊರತೆಯೇ ಮೂಲ ಕಾರಣ ಎಂದು ಗೊತ್ತಾಗಿದೆ.
ಕಲ್ಬುರ್ಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಮಹಾಂತಪೂರ ಗ್ರಾಮದಲ್ಲಿ ಹೊಸ ವಿದ್ಯಾರ್ಥಿ ನಿಲಯಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಒಪ್ಪಿರಲಿಲ್ಲ . ಈ ಸಂಬಂಧ 2025ರ ಜುಲೈ 2ರಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು, ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿಯೇ ‘ಹೆಚ್ಚುವರಿ ಅನುದಾನ ಒದಗಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದರು.
ಪತ್ರದಲ್ಲೇನಿತ್ತು?
ಕಲ್ಬುರ್ಗಿ ಜಿಲ್ಲೆಯ ಅಫಲಜಲಫೂರ ತಾಲೂಕಿನ ಮಹಾಂತಪೂರ ಗ್ರಾಮದಲ್ಲಿ 100 ಸಂಖ್ಯಾಬಲದ 01 ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ಮಂಜೂರು ಮಾಡಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು ಸರ್ಕಾರಕ್ಕೆ 2025ರ ಜನವರಿ 28ರಂದು ಪ್ರಸ್ತಾವ (BCWD-12037/78/2024-BCWD_HOSTEL_BCWD 28.01.2025) ಸಲ್ಲಿಸಿದ್ದರು ಎಂಬುದು ಪತ್ರದಿಂದ ಗೊತ್ತಾಗಿದೆ.
ಈ ಪ್ರಸ್ತಾವವನ್ನು ಇಲಾಖೆಯು ಪರಿಶೀಲಿಸಿತ್ತು. ಪ್ರಸಕ್ತ ಸಾಲಿನ ಆಯವ್ಯಯ ಭಾಷಣದಲ್ಲಿ 62 ಮೆಟ್ರಿಕ್ -ನಂತರದ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲು ಘೋಷಣೆ ಮಾಡಲಾಗಿದೆ. ಇದರ ಅನ್ವಯ ಕಲ್ಬುರ್ಗಿ ಜಿಲ್ಲೆಗೆ 2 ವಿದ್ಯಾರ್ಥಿ ನಿಲಯಗಳೂ ಲಭ್ಯವಾಗುತ್ತವೆ. ಇದನ್ನು ಹೊರತುಪಡಿಸಿ ಹೊಸ ವಿದ್ಯಾರ್ಥಿ ನಿಲಯಗಳನ್ನು ಮಂಜೂರು ಮಾಡಿ ಹೆಚ್ಚುವರಿ ಅನುದಾನ ಒದಗಿಸಲು ಸಾಧ್ಯವಿರುವುದಿಲ್ಲ.
ಈ ಹಿನ್ನೆಲೆಯಲ್ಲಿ ಆಯವ್ಯಯ ಘೋಷಣೆಯಂತೆ ಲಭ್ಯವಾಗುವ 2 ವಿದ್ಯಾರ್ಥಿ ನಿಲಯಗಳನ್ನು ಆದ್ಯತೆ ಮೇಲೆ ಮಂಜೂರು ಮಾಡುವ ಬಗ್ಗೆ ಕ್ರಮ ವಹಿಸಲಾಗುತ್ತದೆ. ಹಾಗೂ ಈ ಪ್ರಸ್ತಾವನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಆಯುಕ್ತರಿಗೆ ತಿಳಿಸಿರುವುದು ಪತ್ರದಿಂದ ತಿಳಿದು ಬಂದಿದೆ.
2024-25ನೇ ಸಾಲಿಗೆ ಕಲ್ಬುರ್ಗಿ ಜಿಲ್ಲೆಗೆ 61 ಹಾಸ್ಟೆಲ್‌ಗಳು ಮೆಟ್ರಿಕ್ ನಂತರದ ವಿಭಾಗದಲ್ಲಿ ಮಂಜೂರಾಗಿದ್ದವು. 7,844 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿದ್ದವು. ಈ ಪೈಕಿ 7,521 ವಿದ್ಯಾರ್ಥಿಗಳು ಹಾಸ್ಟೆಲ್‌ಗಳಿಗೆ ದಾಖಲಾಗಿದ್ದರು. ಮೆಟ್ರಿಕ್ ಪೂರ್ವ ಹಾಸ್ಟೆಲ್‌ಗಳ ವಿಭಾಗದಲ್ಲಿ ಕಲ್ಬುರ್ಗಿಗೆ 73 ಹಾಸ್ಟೆಲ್‌ಗಳು ಮಂಜೂರಾಗಿವೆ. 3,930 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿದ್ದವು. ಈ ಪೈಕಿ 3,926 ವಿದ್ಯಾರ್ಥಿಗಳು ಹಾಸ್ಟೆಲ್‌ಗಳಿಗೆ ದಾಖಲಾಗಿದ್ದರು.
ರಾಜ್ಯ ವಸತಿ ನಿಲಯ ತಂತ್ರಾಂಶ (2024-25)ನೇ ಸಾಲಿನ ಅಂಕಿ ಅಂಶದ ಪ್ರಕಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಮೆಟ್ರಿಕ್ ನಂತರದ ವಿಭಾಗದಲ್ಲಿ 1,321 ಹಾಸ್ಟಲ್‌ಗಳು ಮಂಜೂರಾಗಿದ್ದವು. ಇವು 1,75,303 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿದ್ದವು. ಇದೇ ಅವಧಿಯಲ್ಲಿ 81,309 ನವೀಕರಣ ಅರ್ಜಿಗಳು ಸಲ್ಲಿಕೆಯಾಗಿದ್ದವು. ಹಾಗೂ ಹೊಸದಾಗಿ ಹಾಸ್ಟಲ್‌ಗಳಿಗೆ ಪ್ರವೇಶ ಬಯಸಿ 1,94,519 ಅರ್ಜಿಗಳು ಸಲ್ಲಿಕೆಯಾಗಿದ್ದವು.
ಹೊಸ ಅರ್ಜಿಗಳ ಪೈಕಿ 88,757 ಅಭ್ಯರ್ಥಿಗಳಿಗೆ ಹಾಸ್ಟೆಲ್ ಸೀಟುಗಳು ಹಂಚಿಕೆಯಾಗಿದ್ದವು. ಇದರಲ್ಲಿ 85,520 ವಿದ್ಯಾರ್ಥಿಗಳು ದಾಖಲಾಗಿದ್ದರು.ಹಾಗೆಯೇ 81,309 ವಿದ್ಯಾರ್ಥಿಗಳು ಹಾಸ್ಟೆಲ್ ಪ್ರವೇಶವನ್ನು ನವೀಕರಿಸಿಕೊಂಡಿದ್ದರು. ಒಟ್ಟಾರೆ 1,66,829 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದರು. ಮೆಟ್ರಿಕ್ ಪೂರ್ವ ವಿಭಾಗದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 2024-25ನೇ ಸಾಲಿನಲ್ಲಿ 1,276 ಹಾಸ್ಟೆಲ್‌ಗಳು ಮಂಜೂರಾಗಿದ್ದವು. ಇವು 68,783 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿದ್ದವು. 38,025 ಅರ್ಜಿಗಳು ನವೀಕರಣಕ್ಕಾಗಿ ಸಲ್ಲಿಕೆಯಾಗಿದ್ದವು. ಹೊಸದಾಗಿ 36,455 ಅರ್ಜಿಗಳು ಸಲ್ಲಿಸಲಾಗಿತ್ತು. ಹೊಸ ಅರ್ಜಿಗಳ ಪೈಕಿ 28,750 ಕ್ಕೆ ಮಾತ್ರ ಹಾಸ್ಟೆಲ್‌ಗಳು ಹಂಚಿಕೆಯಾಗಿದ್ದವು. ಇದರಲ್ಲಿ 28,678 ವಿದ್ಯಾರ್ಥಿಗಳೂ ಹಾಸ್ಟೆಲ್‌ಗಳಿಗೆ ದಾಖಲಾಗಿದ್ದರು.
ಹಿಂದುಳಿದ ವರ್ಗಗಳಿಗೆ ಸೇರಿದ 39,332 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶವೇ ದೊರೆತಿರಲಿಲ್ಲ. ಇಲಾಖೆಯಲ್ಲಿ ಲಭ್ಯವಿರುವ 150 ವಿದ್ಯಾರ್ಥಿ ನಿಲಯಗಳನ್ನು ಹಂಚಿಕೆ ಮಾಡಿದ್ದರೂ ಸಹ ರಾಜ್ಯದ ಶಾಸಕರುಗಳು ಸಹ ವಿದ್ಯಾರ್ಥಿ ನಿಲಯಗಳ ಮಂಜೂರಾತಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬೇಡಿಕೆ ಸಲ್ಲಿಸುತ್ತಿದ್ದಾರೆ. ಇದು 2024-25ನೇ ಸಾಲಿನ ಆಯವ್ಯಯದಲ್ಲಿ (ಕಂಡಿಕೆ 178(1)ರಲ್ಲಿ 100 ಸಂಖ್ಯಾಬಲದ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ 150 ವಿದ್ಯಾರ್ಥಿ ನಿಲಯಗಳ ಸಂಖ್ಯೆಯ ಗಡಿಯನ್ನು ದಾಟಿತ್ತು.
ಲಭ್ಯವಿರುವ 150 ವಿದ್ಯಾರ್ಥಿ ನಿಲಯಗಳನ್ನು ಜಿಲ್ಲಾವಾರು,ವಿದ್ಯಾಸಂಸ್ಥೆಗಳ ಸಂಖ್ಯೆಗಳ ಆಧಾರದ ಮೇಲೆ ಹಂಚಿಕೆ ಮಾಡಿದ್ದರೂ ಸಹ ಹಲವು ವಿಧಾನಸಭೆ ಕ್ಷೇತ್ರಗಳಿಗೆ ವಿದ್ಯಾರ್ಥಿ ನಿಲಯಗಳ ಮಂಜೂರು ಮಾಡಲು ಕೋರಿಕೆಗಳು ಸಲ್ಲಿಕೆಯಾಗಿದ್ದವು. ಹೀಗಾಗಿ ಈ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಊಟ ಮತ್ತು ವಸತಿ ಯೋಜನೆಯಡಿ ನೀಡಿದ್ದ 80.00 ಕೋಟಿ ರು ಅನುದಾನ ಬಳಸಿ ಸಹಾಯಧನ ವಿತರಿಸಿತ್ತು. ಇದೇ ಕಾರ್ಯಕ್ರಮಕ್ಕೆ 2024-25ನೇ ಸಾಲಿಗೆ 100.00 ಕೋಟಿ ರು. ಅನುದಾನ ಒದಗಿಸಿತ್ತು.
2023-24ನೇ ಸಾಲಿಗೆ ಕೇಂದ್ರ ಪುರಸ್ಕೃತ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಕಾರ್ಯಕ್ರಮದಡಿಯಲ್ಲಿ ಒಟ್ಟಾರೆ 61.91 ಕೋಟಿ ರು ಅನುದಾನ ಬಿಡುಗಡೆಯಾಗಿದೆ. ಈ ಅನುದಾನ ಬಳಸಿಕೊಂಡು 1,54,305 ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಪಾವತಿಸಿತ್ತು. 2024-25ನೇ ಸಾಲಿಗೆ ಅಗತ್ಯವಿರುವ ಅನುದಾನ ಬಿಡುಗಡೆ ಕುರಿತು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಅದೇ ರೀತಿ ಕೇಂದ್ರ ಸರ್ಕಾರದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಒಟ್ಟಾರೆ 257.35 ಕೋಟಿ ರು ಅನುದಾನ ಬಿಡುಗಡೆಯಾಗಿತ್ತು. ಈ ಅನುದಾನ ಬಳಸಿಕೊಂಡು 2,93,777 ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಪಾವತಿಸಿತ್ತು. ಹಾಗೆಯೇ 2023-24ನೇ ಸಾಲಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಕಾರ್ಯಕ್ರಮದಡಿ 400 ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ಈ ಅನುದಾನವನ್ನು ಬಳಸಿಕೊಂಡು 2020-21, 2021-22 ಮತ್ತು 2022-23ನೇ ಆರ್ಥಿಕ ವರ್ಷದಲ್ಲಿ ಬಾಕಿ ಇದ್ದ 3,49,743 ಅರ್ಹ ವಿದ್ಯಾರ್ಥಿಗಳಿಗೆ ಪಾವತಿ ಮಾಡಲು 312.22 ಕೋಟಿ ರು. ವಿನಿಯೋಗಿಸಿತ್ತು.
ಉಳಿಕೆ ಅನುದಾನದಲ್ಲಿ 2023-24ನೇ ಸಾಲಿನ 1,42,418 ಅರ್ಹ ವಿದ್ಯಾರ್ಥಿಗಳಿಗೆ ಶುಲ್ಕ ಮರು ಪಾವತಿ ಮಂಜೂರಾಗಿದೆ. ಈ ಕಾರ್ಯಕ್ರಮದಡಿಯಲ್ಲಿ 2020-21, 2021-22, 2022-23 ಮತ್ತು 2023-24ನೇ ಸಾಲಿನಲ್ಲಿ ಒಟ್ಟು 4,90,372 ವಿದ್ಯಾರ್ಥಿಗಳು ಶುಲ್ಕ ಮರುಪಾವತಿ ಪಡೆಯಲು ಅರ್ಹರಿದ್ದಾರೆ. ಈ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಮಾಡಲು 263.59 ಕೋಟಿ ರು ಅನುದಾನದ ಅವಶ್ಯಕತೆ ಇದೆ. ಈ ಕುರಿತೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಇಲಾಖೆಯು ಮಾಹಿತಿ ಒದಗಿಸಿತ್ತು.
ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ 2024-25ನೇ ಸಾಲಿಗೆ 200 ಕೋಟಿ ರು ಅನುದಾನ ಒದಗಿಸಲಾಗಿದೆ. ಹೊಸ ವಿದ್ಯಾರ್ಥಿ ನಿಲಯಗಳ ಕಟ್ಟಡ ಕಾಮಗಾರಿಯ ಘಟಕ ವೆಚ್ಚದ ರೂಪದಲ್ಲಿ 400.00 ಲಕ್ಷ ರು. ಅನುದಾನ ಘೋಷಿಸಿತ್ತು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಪಾಲುದಾರಿಕೆಯೊಂದಿಗೆ ಒಟ್ಟು 82 ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಮುಂದುವರೆಇದೆ. ಆರ್‍ಐಡಿಎಫ್ ಟ್ರಾಂಚ್ 30 ಕಾರ್ಯಕ್ರಮದಡಿ 15 ಹೊಸ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಕೈಗೊಳ್ಳಲು ಸರ್ಕಾರವು ಕ್ರಮವಹಿಸಿತ್ತು.
ಹಿಂದುಳಿದ ವರ್ಗಗಳು, ಪರಿಶಿಷ್ಟ ವರ್ಗಗಳು ಮತ್ತು ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ರಾಜ್ಯ ವಿದ್ಯಾರ್ಥಿ ವೇತನ ಪಾವತಿಸಲು ಅನುದಾನ ಕೊರತೆ ಎದುರಾಗಿತ್ತು. ಹೀಗಾಗಿ 2024-25ನೇ ಸಾಲಿಗೆ ಸಂಬಂಧಿಸಿದಂತೆ ಈ ಮೂರು ಇಲಾಖೆಗಳ ವ್ಯಾಪ್ತಿಯಲ್ಲಿ 48,019 ಅರ್ಜಿಗಳಿಗೆ ಅನುಮೋದನೆ ದೊರೆತಿರಲಿಲ್ಲ. ಹಾಗೆಯೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 1,00,672 ಅರ್ಜಿಗಳು ಸ್ವೀಕೃತವಾಗಿದ್ದವು. ಈ ಪೈಕಿ 90,671 ಅರ್ಜಿಗಳಿಗೆ ಅನುಮೋದನೆ ದೊರೆತಿತ್ತು. ಇನ್ನೂ 9,854 ಅರ್ಜಿಗಳಿಗೆ ಅನುಮೋದನೆ ದೊರೆತಿರಲಿಲ್ಲ. ಉಡುಪಿ ಜಿಲ್ಲೆಯಲ್ಲಿ 1,638, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,209 ಅರ್ಜಿಗಳು ಅನುಮೋದನೆಗೆ ಬಾಕಿ ಇರಿಸಿಕೊಂಡಿತ್ತು.
ಹಿಂದುಳಿದ ವರ್ಗಗಳ ಇಲಾಖೆಯಡಿಯಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಶುಲ್ಕ ಮರು ಪಾವತಿ, ಪಿಎಂ ಯಶಸ್ವಿ, ಅಲೆಮಾರಿ, ಅರೆಅಲೆಮಾರಿ ವಿದ್ಯಾರ್ಥಿ ವೇತನ ಯೋಜನೆಗಳಡಿಯಲ್ಲಿ 6,74,761 ಅರ್ಜಿಗಳನ್ನು ಸ್ವೀಕರಿಸಿತ್ತು. ಈ ಪೈಕಿ 6,52,577 ಅರ್ಜಿಗಳನ್ನು ಅನುಮೋದಿಸಿದೆ. 6,249 ಅರ್ಜಿಗಳನ್ನು ತಿರಸ್ಕರಿಸಿತ್ತು. ಅನುಮೋದಿತ ಅರ್ಜಿಗಳಲ್ಲಿ 5,61,419 ಅರ್ಜಿಗಳನ್ನು ಮಂಜೂರು ಮಾಡಿದೆ. ಇನ್ನುಳಿದ 5,20,567 ಅರ್ಜಿಗಳನ್ನು ಡಿಬಿಟಿಗೆ ಕಳಿಸಲಾಗಿದೆ. ಮಂಜೂರಾತಿಗೆ 91,158 ಅರ್ಜಿಗಳು ಹಾಗೂ ಡಿಬಿಟಿಗೆ ಕಳಿಸಲು 40,857 ಅರ್ಜಿಗಳು ಬಾಕಿ ಇವೆ. 4,67,952 ಅರ್ಜಿಗಳಿಗೆ 372.06 ಕೋಟಿ ರು ಪಾವತಿಯಾಗಿದೆ. ಉಳಿದ 51,833 ಅರ್ಜಿಗಳಿಗೆ ಪಾವತಿಯಾಗಿರುವ ಬಗ್ಗೆ ಮಾಹಿತಿ ಬರಬೇಕಿದೆ ಎಂದು ಇಲಾಖೆಯು ಮಾಹಿತಿ ಒದಗಿಸಿತ್ತು.




