ಬೆಂಗಳೂರು; ಸಿಬಿಐ ವಿಚಾರಣೆಗೆ ಗುರಿಯಾಗಿರುವ ಪಶ್ಚಿಮ ಬಂಗಾಳ ಮೂಲದ ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೈಟ್ ಲಿಮಿಟೆಡ್‌ಗೆ ರಾಜ್ಯ ಸರ್ಕಾರವು 10,000 ಕೋಟಿ ರು ವೆಚ್ಚದ ಕಾಮಗಾರಿಗೆ ಗುತ್ತಿಗೆ ಕರಾರು ಮಾಡಿಕೊಂಡಿರುವುದು ಇದೀಗ ಬಹಿರಂಗವಾಗಿದೆ.
ಹೊಸಕೋಟೆ, ಮಾಲೂರು ಮತ್ತು ಮಾಲೂರಿನಲ್ಲಿ ಎಲೆವೇಟೆಡ್ ಕಾರಿಡಾರ್, ಮಾಲೂರು ಕೈಗಾರಿಕೆ ಪ್ರದೇಶದ ಒಳಗೊಂಡ ರಸ್ತೆ ನಿರ್ಮಾಣ ಕಾಮಗಾರಿ ಗುತ್ತಿಗೆ ನೀಡಿರುವ ಲೋಕೋಪಯೋಗಿ ಇಲಾಖೆಯು ಈಗ ವಿವಾದದ ಸುಳಿಗೆ ಸಿಲುಕಿದೆ.
ಜಾರ್ಖಂಡ್‌ನಲ್ಲಿ ಹೆದ್ದಾರಿಯ ಚತುಷ್ಪಥ ನಿರ್ಮಾಣ ಪ್ರಕರಣದಲ್ಲಿ ಸಿಬಿಐ ಸಂಸ್ಥೆಯು ಪಶ್ಚಿಮ ಬಂಗಾಳ ಮೂಲದ ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೈಟ್ ಲಿಮಿಟೆಡ್ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಸಿಬಿಐ ತನಿಖಾ ಸಂಸ್ಥೆಯು ಎಫ್‌ಐಆರ್ ದಾಖಲಿಸಿದ್ದ ಮಾಹಿತಿಯು ಸರ್ಕಾರದ ಗಮನದಲ್ಲಿದ್ದರೂ ಸಹ ಗುತ್ತಿಗೆ ಕರಾರು ಮಾಡಿಕೊಂಡಿದೆ. ಇದೇ ಪ್ರಕರಣದಲ್ಲಿ ಈ ಕಂಪನಿಯು ಪ್ರಭಾವಿ ಸಚಿವರೊಬ್ಬರಿಗೆ ಹೆಲಿಕಾಪ್ಟರ್ ಉಡುಗೊರೆ ನೀಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹೊಸಕೋಟೆ, ಮಾಲೂರು ಮತ್ತು ಮಾಲೂರಿನಲ್ಲಿ ಎಲೆವೇಟೆಡ್ ಕಾರಿಡಾರ್, ಮಾಲೂರು ಕೈಗಾರಿಕೆ ಪ್ರದೇಶದ ಒಳಗೊಂಡ ರಸ್ತೆ ನಿರ್ಮಾಣ ಕಾಮಗಾರಿ ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದ್ದ ಸಂಧರ್ಭದಲ್ಲೇ ಪಶ್ಚಿಮ ಬಂಗಾಳ ಮೂಲದ ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೈಟ್ ಲಿಮಿಟೆಡ್ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಎಫ್‌ಐಆರ್ ದಾಖಲಾದ ನಂತರವೂ ಈ ಕಂಪನಿಯ ತಾಂತ್ರಿಕ ಬಿಡ್‌ನ್ನು ತೆರೆದಿತ್ತು. ಅಲ್ಲದೇ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಈ ಕಂಪನಿಯನ್ನು ನಿರ್ಬಂಧಿಸಿರಲಿಲ್ಲ ಎಂಬ ನೆಪವನ್ನೊಡ್ಡಿದ್ದ ಲೋಕೋಪಯೋಗಿ ಇಲಾಖೆಯು ಗುತ್ತಿಗೆ ಕರಾರನ್ನು ಮಾಡಿಕೊಂಡಿರುವುದು ಗೊತ್ತಾಗಿದೆ.
ಈ ಪ್ರಕರಣದ ಕುರಿತು ವಿಧಾನಪರಿಷತ್‌ನಲ್ಲಿ ಎನ್ ರವಿಕುಮಾರ್ ಅವರು ಚುಕ್ಕೆ ಗುರುತಿನ ಮತ್ತು ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದ್ದರು. ಆದರೆ ಸರ್ಕಾರವು ಚುಕ್ಕೆ ಗುರುತಿನ ಪ್ರಶ್ನೆಗೆ ಇದುವರೆಗೂ ಯಾವುದೇ ಉತ್ತರ ನೀಡಿಲ್ಲ.

ಆದರೆ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸರ್ಕಾರವು ಉತ್ತರ ನೀಡಿದೆ. ಮತ್ತೊಂದು ವಿಶೇಷವೆಂದರೇ ಈ ಕಾಮಗಾರಿ ಗುತ್ತಿಗೆ ಪ್ರಕರಣದಲ್ಲಿ ಇಲಾಖೆಯ ಉನ್ನತ ಅಧಿಕಾರಿಯೊಬ್ಬರೂ ಸಹ ಪಶ್ಚಿಮ ಬಂಗಾಳದ ಮೂಲದವರು ಎಂದು ತಿಳಿದು ಬಂದಿದೆ. ಅದೇ ರೀತಿ ಅಬಕಾರಿ ಇಲಾಖೆಯ ಬೆಳಗಾವಿ ಮೂಲದ ಮತ್ತೊಬ್ಬ ಉಪ ಆಯುಕ್ತರು ಸಹ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಇಲಾಖೆಯ ಉನ್ನತ ಮೂಲಗಳು ‘ದಿ ಫೈಲ್’ಗೆ ತಿಳಿಸಿವೆ.
ಸಿಬಿಐ ದಾಖಲಿಸಿದ್ದ ಎಫ್‌ಐಆರ್‍ನಲ್ಲೇನಿತ್ತು?
ಝಾರ್ಖಂಡ್ ರಾಜ್ಯದಲ್ಲಿ 147.450 ಕಿ ಮೀ ನಿಂದ 196.870 ಕಿ ಮೀ ಉದ್ದದ ಎನ್‌ಹೆಚ್-75 (ಸೆಕ್-III) ಮಾರ್ಗದ 4-ಲೇನ್ ನಿರ್ಮಾಣಕ್ಕೆ ಟೆಂಡರ್ ಕರೆದಿತ್ತು. ಈ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡ ನಂತರ 2023ರಲ್ಲಿ 818 ಕೋಟಿ ರು ವೆಚ್ಚದಲ್ಲಿ ಇನ್ಫ್ರಾಕಾನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಗುತ್ತಿಗೆ ಒಪ್ಪಂದ ಮಾಡಿಕೊಂಡಿತ್ತು. ನಂತರ ಈ ಕಂಪನಿಯು ಪಶ್ಚಿಮ ಬಂಗಾಳ ಮೂಲದ ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೈಟ್ ಲಿಮಿಟೆಡ್‌ಗೆ 769.36 ಕೋಟಿ ರು ವೆಚ್ಚದಲ್ಲಿ ಉಪ ಒಪ್ಪಂದ ಮಾಡಿಕೊಂಡಿತ್ತು.

ಈ ರಸ್ತೆ ಕಾಮಗಾರಿ ಗುಣಮಟ್ಟ ಪರಿಶೀಲಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಾಕೇಶ್ ಭಾಸಿನ್ ನೇತೃ ಗುಣಮಟ್ಟ ಪರಿಶೀಲನಾ ತಂಡವು 2025ರ ಜೂನ್ 26ರಿಂದ 2025ರ ಮೇ 30ರವರೆಗೆ ಪರಿಶೀಲನೆ ನಡೆಸಿತ್ತು. ಈ ವೇಳೆ ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೈಟ್ ಲಿಮಿಟೆಡ್‌ನ ಸಿಇಓ ಮನೀಶ್ ಮಿಶ್ರಾ ಅವರು ಅನುಕೂಲಕರವಾದ ವರದಿ ಪಡೆಯುವ ಉದ್ದೇಶದಿಂದ ಗುಣಮಟ್ಟ ಪರಿಶೀಲನಾ ತಂಡದ ಸದಸ್ಯರಾಗಿದ್ದ ಉಮೇಶ್ ಮಾಥೂರ್, ರಾಕೇಶ್ ಬಾಸಿನ್ ಎಂಬುವರಿಗೆ 5 ಲಕ್ಷ ಹಾಗೂ ವಿಶ್ವಜಿತ್ ಸಿಂಗ್ ಅವರಿಗೆ 1 ಲಕ್ಷ ರು ಲಂಚ ನೀಡಲು ನಿರ್ದೇಶಿಸಿದ್ದರು.
ಹಾಗೆಯೇ ಇದೇ ಪ್ರಕರಣದಲ್ಲಿ ರೋಹಿತ್ ಪ್ರಸಾದ್ ಅವರಿಗೆ ಸ್ವತಂತ್ರ ಗೌರವ್ ಅವರ ಸ್ನೇಹಿತ ಎಂದು ಹೇಳಲಾಗಿದ್ದ ಧೀರಜ್ (ಹರ್ಯಾಣ ಗುರುಗ್ರಾಮ್) ಅವರಿಗ ಲಂಚದ ಮೊತ್ತವನ್ನು ನೀಡಬೇಕು ಎಂದು ಸೂಚಿಸಿದ್ದರು. ನಂತರ ಧೀರಜ್ ಅವರು ಸ್ವತಂತ್ರ ಗೌರವ್ ಪರವಾಗಿ 5 ಲಕ್ಷ ಲಂಚದ ಮೊತ್ತವನ್ನು 2025ರ ಜುಲೈ 1ರಂದು ಸ್ವೀಕರಿಸಿದ್ದರು. ಲಂಚದ ಮೊತ್ತವನ್ನು ಸ್ವೀಕರಿಸಿದ್ದರ ಬಗ್ಗೆ ಧೀರಜ್ ಅವರು ಒಪ್ಪಿಕೊಂಡಿದ್ದರು.

ಹಾಗೆಯೇ ರಾಕೇಶ್ ಭಾಸಿನ್ ಅವರು ತಮ್ಮ ಸಂಬಂಧಿಕರಿಗೆ, ಒಪ್ಪಂದದ ಗುತ್ತಿಗೆದಾರರು ಅನುಕೂಲಕರ ವರದಿ ನೀಡಲು ಒತ್ತಾಯಿಸುತ್ತಿದ್ದರೆಂದು ತಿಳಿಸಿದ್ದರು. ಆ ಗುತ್ತಿಗೆದಾರರಿಂದ ಉಡುಗೊರೆಗಳನ್ನು ಸ್ವೀಕರಿಸಿರುವುದನ್ನೂ ಒಪ್ಪಿಕೊಂಡಿದ್ದರು. ಅಲ್ಲದೆ, ಆ ಗುತ್ತಿಗೆದಾರರು ಜೈಪುರದಲ್ಲಿರುವ ಅವರ ನಿವಾಸದಲ್ಲಿ ಸಭೆ ನಡೆಸಲು ಒತ್ತಾಯಿಸಿದ್ದರು. ಅದೇ ರೀತಿ ಉಮೇಶ್ ಮಾಥೂರ್ ಅವರು ರಾಕೇಶ್ ಬಾಸಿನ್ ಅವರನ್ನು ಜೈಪುರದಲ್ಲಿನ ಸಭೆಗೆ 2025ರ ಜುಲೈ 7ರಂದು ಆಹ್ವಾನಿಸಿದ್ದರು. ಅನುಕೂಲಕರ ವರದಿ ಪಡೆಯಲು ಲಂಚ ನೀಡಲು ತಿಳಿಸಿದ್ದರು.

ಇದಾದ ನಂತರ ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೈಟ್ ಲಿಮಿಟೆಡ್‌ನ ಸಿಇಓ ಮನೀಶ್ ಮಿಶ್ರಾ ಅವರು ಉಮೇಶ್ ಮಾಥೂರ್ ಅವರನ್ನು 2025ರ ಜುಲೈ 11ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಜೈಪುರ ಪ್ರಯಾಣಕ್ಕಾಗಿ ವಾಹನ ಒದಗಿಸಲಾಗುವುದು ಎಂದು ಹೇಳಿದ್ದರು. ಒಪ್ಪಂದದಂತೆ ಉಮೇಶ್ ಮಾಥೂರ್ ಅವರು 4 ಲಕ್ಷ ರು. ಲಂಚದ ಮೊತ್ತವನ್ನು ಜೈಪುರದಲ್ಲಿರುವ ರಾಕೇಶ್ ಭಾಸಿನ್ ಅವರ ನಿವಾಸದಲ್ಲಿ ನೀಡಲಾಗುವುದು ಎಂದು ಹೇಳಿದ್ದರು. ಅದೇ ಸಮಯದಲ್ಲಿ ಮನೀಶ್ ಮಿಶ್ರಾ ಅವರೂ ಸಹ 2025ರ ಜುಲೈ11ರಂದು ವಿಮಾನ ನಿಲ್ದಾಣದಲ್ಲಿಯೇ 4 ಲಕ್ಷ ನೀಡಲಾಗುವುದು ಎಂದು ಭರವಸೆ ನೀಡಿದ್ದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಪರಿಚಿತ ಅಧಿಕಾರಿಗಳು ಸಾರ್ವಜನಿಕ ನೌಕರರಾಗಿದ್ದಾರೆ. ಇವರು ಖಾಸಗಿ ವ್ಯಕ್ತಿಗಳಿಂದ ಅಕ್ರಮವಾಗಿ ಲಾಭ ಪಡೆಯುವ ಮತ್ತು ಸ್ವೀಕರಿಸಿದ್ದಾರೆ. ಇದು ಭ್ರಷ್ಟಾಚಾರ ತಡೆ ಕಾಯ್ದೆ 1988 (2018ರ ತಿದ್ದುಪಡಿ ಕಾಯ್ದೆ) ಅಡಿಯಲ್ಲಿ ಕಲಂ 7, 7 ಎ, 8,9,10 ಮತ್ತು 12 ಹಾಗೂ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 61(2) ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಾಗಿವೆ.
ಖಾಸಗಿ ಮೂಲಸೌಕರ್ಯ ಕಂಪನಿಯೊಂದಕ್ಕೆ ಅನುಕೂಲವಾಗುವಂತೆ ಲಂಚ ಪಡೆದ ಆರೋಪದ ಮೇಲೆ ಎನ್‌ಎಚ್‌ಎಐನ ವಿವಾದ ಪರಿಹಾರ ಮಂಡಳಿಯ ಸದಸ್ಯ ಮತ್ತು ಹೆದ್ದಾರಿ ಪ್ರಾಧಿಕಾರದ ಇಬ್ಬರು ಉಪ ವ್ಯವಸ್ಥಾಪಕರನ್ನು ಸಿಬಿಐ ಬಂಧಿಸಿತ್ತು. ಜಾರ್ಖಂಡ್‌ನಲ್ಲಿ ಹೆದ್ದಾರಿ ಯೋಜನೆಗೆ ಸಂಬಂಧಿಸಿದಂತೆ 10 ಲಕ್ಷ ರೂ.ಗೂ ಹೆಚ್ಚು ಲಂಚ ಪಡೆದ ಆರೋಪದ ಮೇಲೆ ಡಿಆರ್‌ಬಿ ಸದಸ್ಯ ಹಾಗೂ ಮಾಜಿ ಎಂಜಿನಿಯರ್ ರಾಕೇಶ್ ಭಾಸಿನ್ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಉಪ ವ್ಯವಸ್ಥಾಪಕರಾದ ಸ್ವತಂತ್ರ ಗೌರವ್ ಮತ್ತು ವಿಶ್ವಜೀತ್ ಸಿಂಗ್ ಅವರನ್ನು ಸಿಬಿಐ ಬಂಧಿಸಿತ್ತು.

ಅಲ್ಲದೇ ಇದೇ ಪ್ರಕರಣದಲ್ಲಿ ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೇಟ್ ಲಿಮಿಟೆಡ್ (ಬಿವಿಇಪಿಎಲ್) ನ ಮುಖ್ಯ ಕಾರ್ಯಾಚರಣಾ ಅಧಿಕಾರಿ (ಸಿಒಒ) ಮನೀಶ್ ಮಿಶ್ರಾ ಮತ್ತು ಅವರ ಉದ್ಯೋಗಿ ಉಮೇಶ್ ಮಾಥುರ್ ಅವರನ್ನು ಸಿಬಿಐ ಬಂಧಿಸಿತ್ತು.
ಈ ಎಲ್ಲಾ ಪ್ರಕ್ರಿಯೆಗಳು ನಡೆಯುತ್ತಿದ್ದ ಹೊತ್ತಿನಲ್ಲಿಯೇ ಕರ್ನಾಟಕದಲ್ಲಿ ಹೊಸಕೋಟೆ, ಮಾಲೂರು ಮತ್ತು ಮಾಲೂರಿನಲ್ಲಿ ಎಲೆವೇಟೆಡ್ ಕಾರಿಡಾರ್, ಮಾಲೂರು ಕೈಗಾರಿಕೆ ಪ್ರದೇಶದ ಒಳಗೊಂಡ ರಸ್ತೆ ನಿರ್ಮಾಣ ಕಾಮಗಾರಿ ಗುತ್ತಿಗೆ ನೀಡಲಾಗಿತ್ತು. ಸಿಬಿಐ ದಾಖಲಿಸಿದ್ದ ಎಫ್‌ಐಆರ್ ಆಧರಿಸಿ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಅವರು ಸದನದಲ್ಲಿ ಪ್ರಶ್ನಿಸಿದ್ದರು.
ಸರ್ಕಾರ ನೀಡಿರುವ ಉತ್ತರದಲ್ಲೇನಿದೆ?
ಹೊಸಕೋಟೆ, ಮಾಲೂರು ಮತ್ತು ಮಾಲೂರಿನಲ್ಲಿ ಎಲೆವೇಟೆಡ್ ಕಾರಿಡಾರ್, ಮಾಲೂರು ಕೈಗಾರಿಕೆ ಪ್ರದೇಶದ ಒಳಗೊಂಡ ರಸ್ತೆ ನಿರ್ಮಾಣ ಕಾಮಗಾರಿಯನ್ನು ಹೈಬ್ರಿಡ್ ವರ್ಷಾಸನ ಮಾದರಿಯಲ್ಲಿ ಅನುಷ್ಠಾನಗೊಳಿಸಲು 2025ರ ಮಾರ್ಚ್ 1ರಂದು ಟೆಂಡರ್ ಆಹ್ವಾನಿಸಲಾಗಿತ್ತು. 2025ರ ಏಪ್ರಿಲ್ 16ರಂದು ಟೆಂಡರ್ ಸ್ವೀಕರಿಸಲು ಕೊನೆಯ ದಿನಾಂಕವಾಗಿತ್ತು.
2025ರ ಸೆ.27ರಂದು ತಾಂತ್ರಿಕ ಬಿಡ್‌ಗಳನ್ನು ತೆರೆಯಲಾಗಿತ್ತು. ಈ ವೇಳೆ ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೈಟ್ ಲಿಮಿಟೆಡ್, ಭಾರ್ತಿಯಾ ಇನ್ಫ್ರಾ ಪ್ರಾಜೆಕ್ಟ್ ಲಿಮಿಟೆಡ್, ದಿನೇಶ್ ಚಂದ್ರ ಅಗರವಾಲ್ ಇನ್ಫ್ರಾಕಾನ್ ಪ್ರೈ ಲಿ., ಕೆಎನ್‌ಆರ್ ಕನ್ಸ್ಟ್ರಕ್ಷನ್ಸ್ ಲಿಮಿಟೆಡ್, ಪಿಎಸ್‌ಜಿ, ರಾಮಲಿಂಗಂ ಕನ್ಸ್‌ಟ್ರಕ್ಷನ್ಸ್ ಕಂಪನಿ ಪೈವೈಟ್ ಲಿಮಿಟೆಡ್ ಭಾಗವಹಿಸಿದ್ದವು ಎಂದು ಉತ್ತರದಲ್ಲಿ ತಿಳಿಸಿತ್ತು.

ಟೆಂಡರ್ ನಿಯಮಾನುಸಾರ ಮತ್ತು ಬಿಡ್ ಮಾನ್ಯತೆಯನ್ನು ವಿಸ್ತರಿಸದ ಕಾರಣಕ್ಕೆ ದಿನೇಶ್ ಚಂದ್ರ ಅಗರವಾಲ್ ಇನ್ಫ್ರಾಕಾನ್ ಪ್ರೈ ಲಿ., ಕೆಎನ್‌ಆರ್ ಕನ್ಸ್ಟ್ರಕ್ಷನ್ಸ್ ಲಿಮಿಟೆಡ್, ಪಿಎಸ್‌ಜಿ, ರಾಮಲಿಂಗಂ ಕನ್ಸ್‌ಟ್ರಕ್ಷನ್ಸ್ ಕಂಪನಿ ಪೈವೈಟ್ ಲಿಮಿಟೆಡ್ ಬಿಡ್‌ಗಳನ್ನು ಅನರ್ಹಗೊಳಿಸಲಾಗಿತ್ತು ಎಂಬ ಮಾಹಿತಿ ನೀಡಿತ್ತು.
ಬಿಡ್ ಮಾನ್ಯತೆಯನ್ನು ವಿಸ್ತರಿಸಿದ್ದ ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೈಟ್ ಲಿಮಿಟೆಡ್, ಭಾರ್ತಿಯಾ ಇನ್ಫ್ರಾ ಪ್ರಾಜೆಕ್ಟ್ ಲಿಮಿಟೆಡ್, ತಾಂತ್ರಿಕ ಬಿಡ್‌ನಲ್ಲಿ ಅರ್ಹತೆ ಪಡೆದುಕೊಂಡಿತ್ತು. ಈ ಬಿಡ್‌ದಾರರ ಆರ್ಥಿಕ ಬಿಡ್‌ಗಳನ್ನು 2025ರ ಅಕ್ಟೋಬರ್ 6ರಂದು ತೆರೆಯಲಾಗಿತ್ತು. ಆರ್ಥಿಕ ಬಿಡ್‌ನಲ್ಲಿ ಕನಿಷ್ಟ ಬಿಡ್ ಸಲ್ಲಿಸಿದ್ದ ಬಿಡ್‌ದಾರರೊಂದಿಗೆ 2025ರ ಅಕ್ಟೋಬರ್ 17ರಂದು ಗುತ್ತಿಗೆ ಕರಾರು ಮಾಡಿಕೊಂಡಿತ್ತು ಎಂದು ಉತ್ತರದಲ್ಲಿ ವಿವರಿಸಿದೆ.
ಪಶ್ಚಿಮ ಬಂಗಾಳ ಮೂಲದ ಬಿವಿಇಪಿಎಲ್ ಸಂಸ್ಥೆಯ ವಿರುದ್ಧ ಸಿಬಿಐ ಸಂಸ್ಥೆಯು 2025ರ ಜುಲೈ 11ರಂದೇ ವಂಚನೆ ಆರೋಪ ಕುರಿತು ಎಫ್‌ಐಆರ್ ದಾಖಲಿಸಿತ್ತು. ಈ ಸಂಸ್ಥೆಯ ವಿರುದ್ಧ ಸಿಬಿಐ ಪ್ರಕರಣ ದಾಖಲಾಗಿರುವ ಬಗ್ಗೆ ಟೆಂಡರ್‍ನಲ್ಲಿ ಭಾಗವಹಿಸಿರುವ ಇನ್ನಿತರೆ ಯಾವುದೇ ಬಿಡ್‌ದಾರರಿಂದ ಮಾಹಿತಿ ಸ್ವೀಕೃತವಾಗಿರುವುದಿಲ್ಲ. ಈ ಸಂಸ್ಥೆಯ ವಿರುದ್ಧ ಸಿಬಿಐ ಪ್ರಕರಣ ದಾಖಲಾಗಿರುವ ಗ್ಗೆ ಟೆಂಡರ್‍ಗೆ ಸಂಬಂಧಪಡದ 3ನೇ ವ್ಯಕ್ತಿಯಿಂದ 2025ರ ಜುಲೈ 24ರಂದು ಪತ್ರದ ಮೂಲಕ ಸರ್ಕಾರಕ್ಕೆ ಮಾಹಿತಿ, ಗಮನಕ್ಕೆ ಬಂದಿತ್ತು.

ಇದನ್ನು ಇಲಾಖೆಯು ಪರಿಶೀಲಿಸಿತ್ತು. ಈ ಸಂಸ್ಥೆಯ ವಿರುದ್ಧ 2025ರ ಜುಲೈ 11ರಂದು ಪ್ರಕರಣ ದಾಖಲಿಸಿರುವುದು ಕಂಡು ಬಂದಿರುತ್ತದೆ. ಆದರೆ ಈ ಪ್ರಕರಣವು ಅಂತಿಮಗೊಂಡು ಆದೇಶವಾಗಿರುವುದು ಕಂಡು ಬಂದಿರುವುದಿಲ್ಲ.ಹಾಗೂ ಈ ಪ್ರಕರಣದ ಹಿನ್ನೆಲೆಯಲ್ಲಿ ಈ ಕಂಪನಿಯನ್ನು ಟೆಂಡರ್‍ಗಳಲ್ಲಿ ಭಾಗವಹಿಸಲು ನಿರ್ಬಂಧಿಸಿರುವುದಿಲ್ಲ. ಆದ ಕಾರಣ ಟೆಂಡರ್ ಪ್ರಕ್ರಿಯೆಯನ್ನು ನಿಯಮಾನುಸಾರ ಮುಂದುವರೆಸಲಾಗಿದೆ ಎಂದು ಉತ್ತರಿಸಿರುವುದು ತಿಳಿದು ಬಂದಿದೆ.





