ರಾಜ್ಯ ಸರ್ಕಾರದ ಸಾಲ ಪ್ರಮಾಣದಲ್ಲಿ ಗಣನೀಯ ಏರಿಕೆ; ಸಂಪನ್ಮೂಲ ಕೊರತೆ, ಹಣದ ಲಭ್ಯತೆಗೆ ತೊಡಕು

ಬೆಂಗಳೂರು; ರಾಜ್ಯ ಸರ್ಕಾರದ ಸಾಲವು ಇತ್ತೀಚಿನ ವರ್ಷಗಳಲ್ಲಿ ಒಂದೇ ಸಮನೆ ಏರುತ್ತಿರುವ ಪರಿಣಾಮ ಆದ್ಯತಾ ವೆಚ್ಚಗಳಿಗೆ ಸಂಪನ್ಮೂಲದ ಕೊರತೆ ಎದುರಾಗಬಹುದು ಎಂದು ಅಧ್ಯಯನವೊಂದು ಅಭಿಪ್ರಾಯಪಟ್ಟಿದೆ.

 

2028ರ ವೇಳೆಗೆ ಸಾಲದ ಮರುಪಾವತಿ ಬಾಬ್ತು (ಅಸಲು+ಬಡ್ಡಿ) ಪ್ರಮಾಣವು ರಾಜಸ್ವ ಸಂಗ್ರಹದ ಶೇಕಡಾ 26.84ರಷ್ಟನ್ನು ತಲುಪುವ ಅಂದಾಜಿದೆ. ಸಾಲ ಮರುಪಾವತಿ ಬಾಬ್ತಿಗೆ ದೊಡ್ಡ ಮೊತ್ತದ ಹಣ ಮೀಸಲಿಡಬೇಕಾಗಿದೆ. ಹೀಗಾಗಿ ಆದ್ಯತಾ ವೆಚ್ಚಗಳಿಗೆ ಸಂಪನ್ಮೂಲದ ಕೊರತೆ ಎದುರಾಗಬಹುದು ಎಂದು ಅಧ್ಯಯನ ವರದಿ ಹೇಳಿದೆ.

 

ರಾಜ್ಯ ಸರ್ಕಾರದ ವಿತ್ತೀಯ ಕಾರ್ಯನೀತಿ ಸಂಸ್ಥೆಯ ವತಿಯಿಂದ ನಡೆಸಲಾಗಿರುವ ‘ಕರ್ನಾಟಕ ಸರ್ಕಾರದ ಸಾಲ ಸಂಯೋಜನೆ ಹಾಗೂ ಸುಸ್ಥಿರತೆ’ ಕುರಿತ ಇಂಟರ್ನ್ ಷಿಪ್ ವರದಿ ಈ ಬಗ್ಗೆ ಬೆಳಕು ಚೆಲ್ಲಿದೆ.

 

ಇದರ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.

 

 

2023ರ ಮಾರ್ಚ್ ಪ್ರಕಾರ ರೂ 5.35 ಲಕ್ಷ ಕೋಟಿ ಇದ್ದ ರಾಜ್ಯದ ಸಾಲವು 2026ರ ಮಾರ್ಚ್ ವೇಳೆಗೆ 7.64 ಲಕ್ಷ ಕೋಟಿ ರೂಪಾಯಿಗಳನ್ನು ತಲುಪುವ ಅಂದಾಜಿದೆ. ಸಾಲ ಮರುಪಾವತಿ ಬಾಬ್ತಿಗೆ ರಾಜ್ಯವು 2024ರಲ್ಲಿ ರಾಜಸ್ವ ಸಂಗ್ರಹದ ಶೇಕಡಾ 23.36ರಷ್ಟನ್ನು ಪಾವತಿಸಿದೆ ಎಂಬುದನ್ನು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

 

 

 

 

ಬಡ್ಡಿ ಪಾವತಿ ಹಾಗೂ ರಾಜಸ್ವ ಸಂಗ್ರಹ

 

ಕರ್ನಾಟಕ ಸರ್ಕಾರವು ತಾನು ಪಡೆದಿರುವ ಸಾಲಕ್ಕೆ ಪಾವತಿಸುತ್ತಿರುವ ಬಡ್ಡಿ ಪ್ರಮಾಣ ಕೂಡ 2019ರಿಂದ ಸತತವಾಗಿ ಏರಿಕೆಯಾಗುತ್ತಿದೆ. ಇದು 2028ರ ವೇಳೆಗೆ ರಾಜಸ್ವ ಸಂಗ್ರಹದ ಶೇಕಡಾ 17.12ರಷ್ಟಾಗಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ರಾಜ್ಯವು ಸಾಲದ ಮೇಲಿನ ಬಡ್ಡಿ ಪಾವತಿಗಾಗಿ 2019ರಲ್ಲಿ ರಾಜಸ್ವ ಸಂಗ್ರಹದ ಶೇಕಡಾ 9.35ರಷ್ಟನ್ನು ಪಾವತಿಸುತ್ತಿತ್ತು.

 

 

ಇದು 2024ರ ವೇಳೆಗೆ ಶೇಕಡಾ 13.47ರಷ್ಟಕ್ಕೆ ಏರಿಕೆಯಾಯಿತು. ಬರುವ 2028ರ ವೇಳೆಗೆ ಬಡ್ಡಿ ಪ್ರಮಾಣ ಮತ್ತಷ್ಟು ಏರಿಕೆಯಾಗಿ ಶೇಕಡಾ 17.12ರಷ್ಟನ್ನು ತಲುಪುವ ಸಾಧ್ಯತೆ ಇದೆ. ಹೀಗಾಗಿ ಇನ್ನಿತರ ಆದ್ಯತಾ ವೆಚ್ಚಗಳಿಗೆ ಬೇಕಾದ ಹಣದ ಲಭ್ಯತೆಗೆ ತೊಡಕಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಗಮನಸೆಳೆದಿದ್ದಾರೆ.

 

 

 

ಬಡ್ಡಿ ಪಾವತಿ ಹಾಗೂ ರಾಜಸ್ವ ವೆಚ್ಚ

 

ಹಾಗೆಯೇ, ಸರ್ಕಾರದ ಬಡ್ಡಿ ಪಾವತಿ ಹಾಗೂ ರಾಜಸ್ವ ವೆಚ್ಚದ ನಡುವಿನ ಅನುಪಾತದಲ್ಲೂ ಹೆಚ್ಚಳ ಕಂಡುಬರುತ್ತಿದೆ. ಒಟ್ಟಾರೆ ರಾಜಸ್ವ ವೆಚ್ಚದಲ್ಲಿ ಬಡ್ಡಿ ಪಾವತಿ ಬಾಬ್ತು 2019ರಲ್ಲಿ ಶೇಕಡಾ 9.39ರಷ್ಟು ಇದ್ದುದು 2024ರಲ್ಲಿ ಶೇಕಡಾ 12.69ಕ್ಕೆ ಹೆಚ್ಚಳವಾಗಿದೆ. ಲೆಕ್ಕಾಚಾರದ ಪ್ರಕಾರ, ಈ ಪ್ರಮಾಣವು 2028ರ ವೇಳೆಗೆ ಶೇಕಡಾ 17.23ರಷ್ಟಾಗಬಹುದು. ಈ ಹೊರೆಯು ರಾಜ್ಯದ ಹಣಕಾಸು ಸ್ಥಿತಿಗತಿಯ ಮೇಲೆ ಒತ್ತಡ ಉಂಟಾಗಲು ಕಾರಣವಾಗಬಹುದೆಂದು ಅಧ್ಯಯನಕಾರರು ಎಚ್ಚರಿಸಿದ್ದಾರೆ.

 

 

ಸಾಲ ಮರುಪಾವತಿ (ಅಸಲು+ಬಡ್ಡಿ) ಹಾಗೂ ರಾಜ್ಯದ ಒಟ್ಟಾರೆ ವೆಚ್ಚದ ನಡುವಿನ ಅನುಪಾತ ಕೂಡ ಹೆಚ್ಚಾಗುತ್ತಿದೆ. ಇದು 2019ರಲ್ಲಿ ಶೇಕಡಾ 12.36ರಷ್ಟು ಇದ್ದರೇ, 2024ರಲ್ಲಿ ಶೇಕಡಾ 16.67ರಷ್ಟಕ್ಕೆ ಏರಿಕೆಯಾಗಿದೆ. ಈ ಪ್ರಮಾಣವು 2028ರ ವೇಳೆಗೆ ಶೇಕಡಾ 20.38ರಷ್ಟಾಗಬಹುದು ಎಂದು ಅಂದಾಜಿಸಲಾಗಿದೆ. ಅಂದರೆ, ರಾಜ್ಯದ ಹಣಕಾಸು ಸಂಪನ್ಮೂಲದ ಹೆಚ್ಚಿನ ಭಾಗವು ಸಾಲ ಮರುಪಾವತಿ ಬಾಬ್ತಿಗೆ ಹೋಗುವುದರಿಂದ ಇತರ ಅಗತ್ಯ ವೆಚ್ಚಗಳ ಹಣಕಾಸು ಸಂಪನ್ಮೂಲಕ್ಕೆ ಅಡಚಣೆ ಎದುರಾಗಬಹುದು ಎಂದು ಅಧ್ಯಯನದಲ್ಲಿ ಪ್ರಸ್ತಾಪಿಸಲಾಗಿದೆ.

 

ಬಂಡವಾಳ ವೆಚ್ಚ ಹಾಗೂ ಒಟ್ಟು ವೆಚ್ಚ

 

ಒಂದೆಡೆ ಸಾಲ ಮರುಪಾವತಿ ಬಾಬ್ತಿನ ಪ್ರಮಾಣವು ಏರಿಕೆಯಾಗುತ್ತಿದ್ದರೆ, ಮತ್ತೊಂದೆಡೆ, ಬಂಡವಾಳ ವೆಚ್ಚ ಹಾಗೂ ಒಟ್ಟಾರೆ ವೆಚ್ಚದ ನಡುವಿನ ಅನುಪಾತದಲ್ಲಿ ಇಳಿಕೆ ಕಂಡುಬರುತ್ತಿದೆ. ಈ ಅನುಪಾತ ಪ್ರಮಾಣವು 2019ರಲ್ಲಿ ಶೇಕಡಾ 16.16ರಷ್ಟು ಇದ್ದುದು 2025ರ ವೇಳೆಗೆ ಶೇಕಡಾ 14.24ಕ್ಕೆ ಇಳಿಕೆ ಕಂಡಿದೆ. ತಜ್ಞರ ಅಂದಾಜಿನ ಪ್ರಕಾರ, ಇದು 2028ರ ವೇಳೆಗೆ ಶೇಕಡಾ 17.15ರಷ್ಟಿರಲಿದ್ದು, ಬಂಡವಾಳ ವೆಚ್ಚದಲ್ಲಿ ಸ್ಥಗಿತತೆಯನ್ನು ಸೂಚಿಸುತ್ತದೆ. ಮೌಲ್ಯಯುತ ಆಸ್ತಿಗಳನ್ನು ಸೃಜಿಸಲು ಅತ್ಯಗತ್ಯವಾದ ಬಂಡವಾಳ ವೆಚ್ಚದಲ್ಲಿನ ಇಳಿಕೆಯು ರಾಜ್ಯದ ದೀರ್ಘಾವಧಿ ಆರ್ಥಿಕ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಅಧ್ಯಯನ ವರದಿಯಿಂದ ತಿಳಿದು ಬಂದಿದೆ.

 

 

 

ಬಂಡವಾಳ ವೆಚ್ಚ ಹಾಗೂ ಸಾಲ ಮರುಪಾವತಿ ಬಾಬ್ತು

 

ಕೆಲವು ವರ್ಷಗಳ ಹಿಂದೆ ರಾಜ್ಯದಲ್ಲಿ ಸಾಲ ಮರುಪಾವತಿ ಬಾಬ್ತಿಗೆ ಹೋಲಿಸಿದರೆ ಲಾಭದಾಯಕ ಸ್ವತ್ತುಗಳ ಸೃಜನೆಗೆ ಕಾರಣವಾಗುವ ಬಂಡವಾಳ ವೆಚ್ಚವು ಹೆಚ್ಚಾಗಿರುತ್ತಿತ್ತು. 2019ರಲ್ಲಿ ಬಂಡವಾಳ ವೆಚ್ಚ ಹಾಗೂ ಸಾಲ ಮರುಪಾವತಿ ಬಾಬ್ತಿನ ಅನುಪಾತವು ಶೇಕಡಾ 130.76ರಷ್ಟು ಇತ್ತು. ಅಂದರೆ, ಸರ್ಕಾರವು ಸಾಲ ಮರುಪಾವತಿ ಬಾಬ್ತಿಗೆ ತೆಗೆದಿರಿಸುತ್ತಿದ್ದ ಪ್ರತಿ 100 ರೂಪಾಯಿಗೆ 130.76 ರೂಪಾಯಿಗಳನ್ನು ಬಂಡವಾಳ ವೆಚ್ಚಕ್ಕೆ ನೀಡುತ್ತಿತ್ತು. ಆದರೆ, ಈ ಪ್ರಮಾಣವು 2025ರಲ್ಲಿ ಶೇಕಡಾ 82.39ಕ್ಕೆ ಕುಸಿತ ಕಂಡಿದೆ.

 

 

ಅಂದರೆ, ಪ್ರಸ್ತುತ, ಸಾಲ ಮರುಪಾವತಿ ಬಾಬ್ತಿನ ಮೊತ್ತವು ಬಂಡವಾಳ ವೆಚ್ಚವನ್ನು ಹಿಂದಿಕ್ಕಿರುವುದು ಕಳವಳ ಮೂಡಿಸುವ ಅಂಶವಾಗಿದೆ. ಇದು 2028ರ ವೇಳೆಗೆ ಶೇಕಡಾ 84.12ರಷ್ಟಾಗಬಹುದು. ಅಂದರೆ ಆ ವೇಳೆಗೆ, ಸರ್ಕಾರವು ಸಾಲ ಮರುಪಾವತಿ ಬಾಬ್ತಿಗೆಂದು ಮಾಡುವ ಪ್ರತಿ 100 ರೂಪಾಯಿ ವೆಚ್ಚಕ್ಕೆ 84.12 ರೂಪಾಯಿಯನ್ನು ಮಾತ್ರ ಬಂಡವಾಳ ವೆಚ್ಚಕ್ಕಾಗಿ ಮೀಸಲಿಡುವ ಸಾಮರ್ಥ್ಯ ಹೊಂದಿರುತ್ತದೆ.

 

ಇಂತಹ ಪರಿಸ್ಥಿತಿಯು ಮಹತ್ವದ ಮೂಲಸೌಕರ್ಯಗಳು ಹಾಗೂ ಅಭಿವೃದ್ಧಿ ಯೋಜನೆಗಳಿಗಾಗಿ ಹೂಡಿಕೆ ಮಾಡಬಲ್ಲ ರಾಜ್ಯದ ಸಾಮರ್ಥ್ಯದ ಮೇಲೆ ಅನುಮಾನಗಳನ್ನು ಮೂಡಿಸುತ್ತದೆ; ಆರ್ಥಿಕ ಬೆಳವಣಿಗೆಗೆ ಪೂರಕವಾದ ಆದಾಯ ಸೃಷ್ಟಿಸುವ ಸ್ವತ್ತುಗಳಿಗಿಂತ ಸಾಲ ಮರುಪಾವತಿ ಬಾಬ್ತಿಗೆ ಹೆಚ್ಚು ವೆಚ್ಚ ಮಾಡಬೇಕಾಗಿ ಬರುವುದು ಆರ್ಥಿಕ ಸ್ವಾಸ್ಥ್ಯದ ಸೂಚಕವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದು ವರದಿಯಿಂದ ತಿಳಿದು ಬಂದಿದೆ.

 

ಸಾಲ ಬಾಧ್ಯತೆ ಹಾಗೂ ಜಿ.ಎಸ್.ಡಿ.ಪಿ.

 

ರಾಜ್ಯದ ಸಾಲ ಬಾಧ್ಯತೆ ಹಾಗೂ ಜಿ.ಎಸ್.ಡಿ.ಪಿ. (ರಾಜ್ಯದ ಒಟ್ಟಾರೆ ಆಂತರಿಕ ಉತ್ಪಾದನೆ) ಅನುಪಾತವು 2021ರಲ್ಲಿ ಶೇಕಡಾ 25.68ರಷ್ಟು ಇದು. ನಂತರ, ಇಳಿಕೆ ಕಂಡ ಈ ಪ್ರಮಾಣವು 2023ರಲ್ಲಿ ಶೇಕಡಾ 23.58ರಷ್ಟಾಯಿತು. ಅಂದಾಜಿನ ಪ್ರಕಾರ 2028ರ ವೇಳೆಗೆ ಇದು ಶೇಕಡಾ 24ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ರಾಜ್ಯದ ಸಾಲದ ಹೊರೆಯು ಬರುವ ವರ್ಷಗಳಲ್ಲೂ ಮುಂದುವರಿಯಲಿದೆ ಎಂಬುದನ್ನು ಹಾಗೂ ಜಾಗರೂಕ ವಿತ್ತೀಯ ನಿರ್ವಹಣೆಯ ಅಗತ್ಯವನ್ನು ಇದು ಸೂಚಿಸುತ್ತದೆ ಎಂದು ವರದಿಯಲ್ಲಿ ಗಮನಸೆಳೆಯಲಾಗಿದೆ.

 

 

 

 

ರಾಜ್ಯದ ಠೇವಣಿಗಳಿಗೆ ಕಡಿಮೆ ಬಡ್ಡಿ

 

ಇನ್ನು, 2023ರ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ಸ್ಥಿತಿಗತಿ ಕುರಿತ ಸಿಎಜಿ ವರದಿ ಪ್ರಕಾರ, ಕರ್ನಾಟಕದ ಒಟ್ಟಾರೆ ನಗದು ಶಿಲ್ಕು (ಕ್ಯಾಶ್ ಬ್ಯಾಲೆನ್ಸ್) ರೂ 83,628 ಕೋಟಿ ಆಗಿದೆ. ಆರ್ ಬಿ ಐ ನಲ್ಲಿ ಇರಿಸಿರುವ ಠೇವಣಿಗಳು ಹಾಗೂ ನಿಗದಿತ ನಿಧಿಗಳ ಮೇಲಿನ ಹೂಡಿಕೆಗಳನ್ನು ಇದು ಒಳಗೊಂಡಿದೆ. ಇದು ಆ ಹಿಂದಿನ ವರ್ಷದ ನಗದು ಶಿಲ್ಕು ರೂ 63,412.35 ಕೋಟಿಗೆ ಹೋಲಿಸಿದರೆ ಶೇಕಡಾ 82ರಷ್ಟು ಹೆಚ್ಚಳವಾಗಿದ್ದು, ರಾಜ್ಯದ ವಿತ್ತೀಯ ಸಾಮರ್ಥ್ಯವನ್ನು ಸೂಚಿಸುತ್ತದೆ.

 

 

ಆದರೆ ಈ ನಗದು ಶಿಲ್ಕಿನ ಹೆಚ್ಚಿನ ಪಾಲನ್ನು ಭಾರತ ಸರ್ಕಾರದ (ಜಿಒಐ) ಅಲ್ಪಾವಧಿ ಹಾಗೂ ದೀರ್ಘಾವಧಿ ಸೆಕ್ಯುರಿಟೀಸ್ ಮತ್ತು ಟ್ರೆಷರಿ ಬಿಲ್ ಗಳಲ್ಲಿ ಹೂಡಿಕೆ ಮಾಡಲಾಗಿದ್ದು, 2022-23ರಲ್ಲಿ ಇದರಿಂದ ಸರ್ಕಾರಕ್ಕೆ ರೂ 1,139.09 ಕೋಟಿ ಬಡ್ಡಿ ಬಂದಿದೆ. ಇದರಲ್ಲಿ, ಸರ್ಕಾರವು 14 ದಿನಗಳ ಟ್ರೆಷರಿ ಬಿಲ್ ಗಳ ಮೇಲೆ ಸರಾಸರಿ ಶೇಕಡಾ 1.17ರಷ್ಟು ಹಾಗೂ 91 ದಿನಗಳ ಟ್ರೆಷರಿ ಬಿಲ್ ಗಳ ಮೇಲೆ ಸರಾಸರಿ ಶೇಕಡಾ 3.46ರಷ್ಟು ಬಡ್ಡಿಯನ್ನು ಪಡೆದಿದೆ.

 

ಇದಕ್ಕೆ ಬದಲಾಗಿ, ಸರ್ಕಾರವು ತಾನು ಮಾರುಕಟ್ಟೆಯಲ್ಲಿ ಪಡೆದಿರುವ ಸಾಲಗಳಿಗೆ ವಾರ್ಷಿಕ ಸರಾಸರಿ ಶೇಕಡಾ 6.38ರಷ್ಟು ಬಡ್ಡಿ ಪಾವತಿಸುತ್ತಿದೆ. ಸರ್ಕಾರವು ತನ್ನ ನಗದು ಹೂಡಿಕೆಗಳ ಮೇಲೆ ಪಡೆಯುತ್ತಿರುವ ಬಡ್ಡಿ ಹಾಗೂ ತಾನು ಪಡೆದ ಸಾಲಕ್ಕೆ ನೀಡುತ್ತಿರುವ ಬಡ್ಡಿಯಲ್ಲಿನ ಈ ವ್ಯತ್ಯಾಸವು ಹಣಕಾಸು ನಿರ್ವಹಣೆಯ ಅದಕ್ಷತೆಗೆ ಎಡೆಮಾಡಿಕೊಡಲಿದೆ ಎಂದು ವರದಿ ಹೇಳಿದೆ.

 

ಹಣಕಾಸು ಸುಸ್ಥಿರತೆಯ ಆತಂಕ

 

2019ರಿಂದ 2028ರವರೆಗಿನ ಹಣಕಾಸು ಪರಿಸ್ಥಿತಿಯ ವಿಶ್ಲೇಷಣೆಯು ರಾಜ್ಯದ ವಿತ್ತೀಯ ನಿರ್ವಹಣೆಯ ಶಕ್ತಿ ಹಾಗೂ ದೌರ್ಬಲ್ಯಗಳೆರಡನ್ನೂ ತೋರಿಸುತ್ತದೆ. ರಾಜ್ಯದ ಸಾಲ ಹಾಗೂ ಜಿಎಸ್ ಡಿ ಪಿ ಅನುಪಾತವು ಸ್ಥಿರತೆಯನ್ನು ಕಾಯ್ದುಕೊಂಡಿದ್ದು, ಎಫ್.ಆರ್.ಬಿ.ಎಂ/ ಕೆ.ಎಫ್.ಆರ್.ಎ .ಸೂಚಿತ ಶೇಕಡಾ 25ರ ಮಿತಿಯೊಳಗೇ ಇದೆ. ಆದಾಗ್ಯೂ, ದೀರ್ಘಾವಧಿ ಹಣಕಾಸು ಪರಿಸ್ಥಿತಿ ಹಾಗೂ ಸುಸ್ಥಿರತೆಗೆ ಸಂಬಂಧಿಸಿದ ಆತಂಕಗಳಿಂದ ಇದು ಹೊರತಾಗಿಲ್ಲ ಎಂಬುದು ತಜ್ಞರ ಅಭಿಮತವಾಗಿದೆ.

 

ಸಾಲ ಮರುಪಾವತಿ ಬಾಬ್ತಿನ ಹೊರೆಯು 2028ರ ವೇಳೆಗೆ ರಾಜಸ್ವ ಸಂಗ್ರಹದ ಶೇಕಡಾ 26.84ರಷ್ಟಾಗಲಿದ್ದು, ಇದು 2019ರ ಶೇಕಡಾ 14.69ಕ್ಕೆ ಹೋಲಿಸಿದರೆ ಗಣನೀಯ ಪ್ರಮಾಣದ ಹೆಚ್ಚಳವಾಗಲಿದೆ. ಇಳಿಕೆ ಹಾದಿಯಲ್ಲಿರುವ ಬಂಡವಾಳ ವೆಚ್ಚವು 2028ರ ವೇಳೆಗೆ ಒಟ್ಟಾರೆ ವೆಚ್ಚಕ್ಕೆ ಹೋಲಿಸಿದರೆ ಶೇಕಡಾ 17.15.ರಷ್ಟಾಗಲಿದೆ. ಹಾಗೆಯೇ, ಒಟ್ಟಾರೆ ವೆಚ್ಚಕ್ಕೆ ಹೋಲಿಸಿದರೆ ಸಾಲ ಮರುಪಾವತಿ ಬಾಬ್ತು 2019ರಲ್ಲಿ ಶೇಕಡಾ12.36ರಷ್ಟು ಇದ್ದುದು 2028ರ ವೇಳೆಗೆ ಶೇಕಡಾ 20.38ರಷ್ಟಾಗಲಿದೆ.

 

ಬಂಡವಾಳ ವೆಚ್ಚಕ್ಕಿಂತ ಸಾಲ ಮರುಪಾವತಿ ಬಾಬ್ತು ಅಧಿಕಗೊಳ್ಳುವುದು ಗಂಭೀರವಾಗಿ ಪರಿಗಣಿಸಬೇಕಾದ ಅಂಶವಾಗಿದೆ. ಒಂದೆಡೆ ಸಾಲ ಮರುಪಾವತಿ ಬಾಬ್ತು ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಬಂಡವಾಳ ವೆಚ್ಚ ಇಳಿಕೆಯಾಗುತ್ತಿರುವುದರಿಂದ ಒಂದೊಮ್ಮೆ ಅನಿರೀಕ್ಷಿತ ಆರ್ಥಿಕ ಸಂಕಷ್ಟ ಅಥವಾ ಪ್ರತಿಕೂಲ ಸನ್ನಿವೇಶ ಎದುರಾದರೆ ಅಂತಹ ಸ್ಥಿತಿಯನ್ನು ನಿರ್ವಹಿಸಲು ಸರ್ಕಾರಕ್ಕೆ ಹಣಕಾಸು ಕೊರತೆಯಾಗಲಿದೆ.

 

ಅಂದರೆ, ಕೋವಿಡ್ ತರಹದ ಪರಿಸ್ಥಿತಿ ಅಥವಾ ಆರ್ಥಿಕ ಹಿಂಜರಿತ ತಲೆದೋರಿದರೆ ರಾಜ್ಯದ ಹಣಕಾಸು ಪರಿಸ್ಥಿತಿ ಮೇಲೆ ಒತ್ತಡ ಸೃಷ್ಟಿಯಾಗಲಿದೆ ಎಂದು ತಜ್ಞರು ವಿವರಿಸಿದ್ದಾರೆ. ಇನ್ನು, ಕರ್ನಾಟಕ ಸರ್ಕಾರವು ಇಂಧನ ತೆರಿಗೆ ಹಾಗೂ ಅಬಕಾರಿ ತೆರಿಗೆಯನ್ನು ಈಗಾಗಲೇ ಗಣನೀಯವಾಗಿ ಹೆಚ್ಚಿಸಿರುವುದರಿಂದ ಅವನ್ನು ಮತ್ತೆ ಹೆಚ್ಚಿಸಲು ಮುಂದಾದರೆ ಸಾರ್ವಜನಿಕರ ತೀವ್ರ ಆಕ್ರೋಶ ಎದುರಿಸಬೇಕಾಗಿ ಬರಬಹುದು ಎನ್ನಲಾಗಿದೆ.

 

ಶಿಫಾರಸುಗಳೇನು?

 

ರಾಜ್ಯವು ಅಗತ್ಯ ವೆಚ್ಚಗಳಿಗೆ ಮಾತ್ರ ಸಾಲ ಪಡೆಯುವ ಬಗ್ಗೆ ಜಾಗ್ರತೆ ವಹಿಸುವ ಮೂಲಕ ಅನಗತ್ಯ ಮರುಪಾವತಿ ಬಾಬ್ತುಗಳನ್ನು ತಗ್ಗಿಸಬೇಕು; ಲಾಭದಾಯಕವಲ್ಲದ ನಗದು ಶಿಲ್ಕುಗಳನ್ನು ಕಡಿಮೆಗೊಳಿಸುವ ಮೂಲಕ ಅಧಿಕ ದರದ ಸಾಲಗಳ ಅಗತ್ಯವನ್ನು ಕಡಿಮೆಗೊಳಿಸಬೇಕು.

 

ಖಾಸಗಿ-ಸಾರ್ವಜನಿಕ ಸಹಭಾಗಿತ್ವಗಳು, ಸ್ವತ್ತುಗಳ ನಗದೀಕರಣ, ಹೊಸ ತೆರಿಗೆ ಸುಧಾರಣೆಗಳು ಇತ್ಯಾದಿ ಮೂಲಕ.ತೆರಿಗೆಯೇತರ ರಾಜಸ್ವ ವೃದ್ಧಿಯ ಮಾರ್ಗಗಳನ್ನು ಶೋಧಿಸಬೇಕು; ರಾಜಸ್ವ ಸಂಗ್ರಹಣ ಮೂಲಗಳನ್ನು ವಿಕೇಂದ್ರೀಕರಣಗೊಳಿಸಬೇಕು; ತೆರಿಗೆದಾರರಿಗೆ ಅಧಿಕ ಹೊರೆಯಾಗದಂತೆ ವಿತ್ತೀಯ ಸಾಮರ್ಥ್ಯವನ್ನು ಸದೃಢಗೊಳಿಸಬೇಕು ಎಂದು ಶಿಫಾರಸ್ಸು ಮಾಡಿದೆ.

 

ದೀರ್ಘಾವಧಿ ಬೆಳವಣಿಗೆ ಬೆಂಬಲಿಸುವ ದೃಷ್ಟಿಯಿಂದ ಬಂಡವಾಳ ವೆಚ್ಚಕ್ಕೆ ಆದ್ಯತೆ ನೀಡಿ ಇದು ಕನಿಷ್ಠ ಒಟ್ಟಾರೆ ವೆಚ್ಚದ ಶೇಕಡಾ 20ಕ್ಕಿಂತ ಹೆಚ್ಚಿಗೆ ಇರುವುದನ್ನು ಖಾತರಿಪಡಿಸಿಕೊಳ್ಳಬೇಕು; ಮೂಲಸೌಕರ್ಯ, ಶಿಕ್ಷಣ ಮತ್ತು ಆರೋಗ್ಯದ ಮೇಲೆ ಹೂಡಿಕೆ ಮಾಡುವ ಮೂಲಕ ಆರ್ಥಿಕ ಬೆಳವಣಿಗೆ ಉತ್ತೇಜಿಸಬೇಕು ಎಂಬ ಶಿಫಾರಸುಗಳನ್ನು ಈ ಅಧ್ಯಯನ ಒಳಗೊಂಡಿದೆ.

 

ಕ್ರಿಯಾತ್ಮಕ ವಿತ್ತೀಯ ನಿರ್ವಹಣೆಗೆ ಒತ್ತು ನೀಡಬೇಕು; ರಾಜಸ್ವ ಸೃಜನೆಯ ಹೆಚ್ಚಳಕ್ಕೆ ಮಾರ್ಗೋಪಾಯಗಳನ್ನು ಶೋಧಿಸಬೇಕು. ವೆಚ್ಚಗಳನ್ನು ತರ್ಕಬದ್ಧಗೊಳಿಸಬೇಕು. ಬಂಡವಾಳ ವೆಚ್ಚ ಹೆಚ್ಚಿಸಲು ಗಮನ ಕೇಂದ್ರೀಕರಿಸಬೇಕು; ಮರುಪಾವತಿ ಬಾಬ್ತಿನ ಹೆಚ್ಚಳವನ್ನು ನಿಯಂತ್ರಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅಧ್ಯಯನದಲ್ಲಿ ಅಭಿಪ್ರಾಯಪಡಲಾಗಿದೆ. ದೀರ್ಘಾವಧಿ ವಿತ್ತೀಯ ಆರೋಗ್ಯದ ಜೊತೆಗೆ ಆರ್ಥಿಕ ಸಂಕಷ್ಟಗಳಿಗೆ ಕ್ಷಮತೆಯನ್ನು ಹೆಚ್ಚಿಸಲು ಈ ಕ್ರಮಗಳು ಅತ್ಯಗತ್ಯ ಎಂದೂ ಉಲ್ಲೇಖಿಸಲಾಗಿದೆ.

 

7 ತಿಂಗಳಲ್ಲಿ 7,399.60 ಕೋಟಿ ರು ಸಾಲ; ಬಿಜೆಪಿ ಅವಧಿಗೆ ಹೋಲಿಸಿದರೆ 2,576.82 ಕೋಟಿ ರು. ಅಧಿಕ

 

ಸಿದ್ದರಾಮಯ್ಯ ಅವರು ಎರಡನೆ ಬಾರಿಗೆ ಅಧಿಕಾರಕ್ಕೆ ಬಂದಿದ್ದ ಎಂಟೇ ಎಂಟು ತಿಂಗಳಲ್ಲಿ ನಿರಂತರವಾಗಿ ಸಾರ್ವಜನಿಕ ಸಾಲದ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಈ ಕುರಿತು ದಿ ಫೈಲ್‌ ವರದಿ ಪ್ರಕಟಿಸಿತ್ತು.

 

ನಿರಂತರ ಏರಿಕೆ; ಎಂಟೇ ತಿಂಗಳಲ್ಲಿ 32,289.99 ಕೋಟಿ ರು. ಸಾರ್ವಜನಿಕ ಸಾಲ

 

ಅಲ್ಲದೇ ಮೊದಲ ತ್ರೈಮಾಸಿಕದಲ್ಲೂ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಈ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು.

 

ಮೊದಲ ತ್ರೈಮಾಸಿಕದ ಹಣಕಾಸು ಪರಿಸ್ಥಿತಿ;18,952 ಕೋಟಿ ರು. ರಾಜಸ್ವ ಕೊರತೆ, 7,270.69 ಕೋಟಿ ರು. ವ್ಯತ್ಯಾಸ

 

ಹಾಗೆಯೇ ಸಂಪನ್ಮೂಲ ಸಂಗ್ರಹವು ಸರಳವಾಗಿರಲಿಲ್ಲ. ಹೀಗಿದ್ದರೂ ಸಾಲವನ್ನು ಮಿತಿಮೀರಿ ಪಡೆಯಲಾಗಿತ್ತು. ಈ ಕುರಿತು ಸಿಎಜಿಯೂ ಸಹ ತನ್ನ ಅವಲೋಕನದಲ್ಲಿ ವಿವರಿಸಿತ್ತು. ಈ ಬಗ್ಗೆ ದಿ ಫೈಲ್ ವರದಿ ಪ್ರಕಟಿಸಿತ್ತು.

 

ಏಪ್ರಿಲ್‌-ಜೂನ್ ತ್ರೈಮಾಸಿಕದಲ್ಲಿ 10,000 ಕೋಟಿ ಸಾಲ; ಆರ್‍‌ಬಿಐಗೆ ಮಾಹಿತಿ ಒದಗಿಸಿದ ಸರ್ಕಾರ

 

2024ರ ಏಪ್ರಿಲ್ ಜೂನ್ ತ್ರೈಮಾಸಿಕದಲ್ಲಿ 10,000 ಕೋಟಿ ಸಾಲ ಪಡೆಯುವುದಾಗಿ ಆರ್‍‌ಬಿಐಗೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ಮಾಹಿತಿ ಒದಗಿಸಿತ್ತು. ಈ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು.

 

ಮುಕ್ತ ಮಾರುಕಟ್ಟೆಯಿಂದ 58,000 ಕೋಟಿ ರು. ಸಾಲ ಎತ್ತುವಳಿ; ಆರ್‍‌ಬಿಐ ಕದ ತಟ್ಟಿದ ಸರ್ಕಾರ

 

ಮುಕ್ತ ಮಾರುಕಟ್ಟೆಯಿಂದಲೂ 58,000 ಕೋಟಿ ಸಾಲ ಎತ್ತುವಳಿ ಮಾಡಲು ಸರ್ಕಾರವು ಆರ್‍‌ಬಿಐ ಕದ ತಟ್ಟಿತ್ತು. ಈ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು.

 

ಸಂಪನ್ಮೂಲ ಸಂಗ್ರಹಣೆ ಸರಳವಲ್ಲ, ಮಿತಿಮೀರಿದೆ ಸಾಲ, ಎದೆ ನಡುಗಿಸಿದೆ ಕೊರತೆ ಮೊತ್ತ, ಖಜಾನೆಯಲ್ಲೆಲ್ಲಿದೆ ಹಣ?

ಕರ್ನಾಟಕ ರಾಜ್ಯ ವಿತ್ತೀಯ ಸಂಸ್ಥೆಯು ನೀಡಿರುವ ವರದಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

Your generous support will help us remain independent and work without fear.

Latest News

Related Posts