ಸಂಪನ್ಮೂಲ ಸಂಗ್ರಹಣೆ ಸರಳವಲ್ಲ, ಮಿತಿಮೀರಿದೆ ಸಾಲ, ಎದೆ ನಡುಗಿಸಿದೆ ಕೊರತೆ ಮೊತ್ತ, ಖಜಾನೆಯಲ್ಲೆಲ್ಲಿದೆ ಹಣ?

ಬೆಂಗಳೂರು; ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಣಿಕೆಯಲ್ಲಿ ಐದು ಗ್ಯಾರಂಟಿಗಳ ಆಶ್ವಾಸನೆ ನೀಡಿತ್ತು. ಇದೀಗ ಅದು ಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದಿದೆ. ಈಗ ಅದಕ್ಕೆ ತಾನು ನೀಡಿದ್ದ ಗ್ಯಾರಂಟಿ ಆಶ್ವಾಸನೆಗಳನ್ನು ಅನುಷ್ಠಾನಗೊಳಿಸುವ ಗುರುತರವಾದ ಸವಾಲು ಎದುರಾಗಿದೆ.

 

 

ಸರ್ಕಾರವೇ ಹೇಳಿರುವಂತೆ ಈ ಗ್ಯಾರಂಟಿಗಳ ಅನುಷ್ಠಾನಕ್ಕೆ ವಾರ್ಷಿಕ ರೂ. 60,000 ಕೋಟಿ ಅಗತ್ಯವಾಗಿದೆ. ಇದು 2023-24ನೆಯ ಸಾಲಿನ (ಸಿದ್ಧರಾಮಯ್ಯ)ಬಜೆಟ್ಟಿನ ಒಟ್ಟು ವೆಚ್ಚದ(ರೂ. 327747 ಕೋಟಿ) ಶೇ. 18.31 ರಷ್ಟಾಗುತ್ತದೆ. ಇದನ್ನು ಹೇಗೆ ಹೊಂದಿಸುವುದು ಎಂಬುದು ದೊಡ್ಡ ಸಮಸ್ಯೆ. ಸರ್ಕಾರವೇನೋ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವುದು ಗ್ಯಾರಂಟಿ ಎಂದು ಹೇಳುತ್ತಿದೆ.

 

 

ಆದರೆ ರಾಜ್ಯದ ಖಜಾನೆಯಲ್ಲಿ ಎಲ್ಲಿದೆ ಹಣ?  ಗ್ಯಾರಂಟಿಗಳನ್ನು ಜನ ಕಲ್ಯಾಣ ಕಾರ್ಯಕ್ರಮದ ದೃಷ್ಟಿಯಿಂದ, ಮಾನವ ಅಭಿವೃದ್ಧಿ ಪ್ರಣಾಳಿಕೆಯ ಆಧಾರದಲ್ಲಿ ಮತ್ತು ಸಾಮಾಜಿಕ ನ್ಯಾಯ ನೆಲೆಯಲ್ಲಿ ಸಮರ್ಥಿಸುವುದು ಬೇರೆ; ಇದರ ಅನುಷ್ಠಾನಕ್ಕೆ ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ಬಲಿ ಕೊಡದೆ ಹಣವನ್ನು ಹೊಂದಿಸುವುದು ಬೇರೆ. ಇದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ತೆರಿಗೆಗಳ ಮೂಲಕ ಸಂಪನ್ಮೂಲ ಸಂಗ್ರಹಿಸಿಕೊಳ್ಳುವುದು ಸರಳವಾದ ಸಂಗತಿಯಲ್ಲ. ಏಕೆಂದರೆ ರಾಜ್ಯ ಎಲ್ಲ ಸ್ವಂತ ತೆರಿಗೆಗಳು ಗರಿಷ್ಠಮಟ್ಟ ತಲುಪಿ ಬಿಟ್ಟಿವೆ.

 

 

ಈ ಸಮಸ್ಯೆಯನ್ನು ನಿರ್ವಹಿಸುವುದಕ್ಕೆ ಎರಡು ಮಾರ್ಗಗಳಿವೆ. ಮೊದಲನೆಯದು ಒಕ್ಕೂಟ ಸರ್ಕಾರ ತನ್ನ ‘ಅಸಹಕಾರ ಒಕ್ಕೂಟ’ ಧೋರಣೆಯನ್ನು ಬದಲಾಯಿಸಿ ಸಂವಿಧಾನಾತ್ಮಕವಾಗಿ ಸಹಕಾರಿ ಒಕ್ಕೂಟ ನೀತಿಯನ್ನು ಪಾಲಿಸಿ ಹಣಕಾಸನ್ನು ರಾಜ್ಯಗಳಿಗೆ(ಕರ್ನಾಟಕ) ನಿಯಮಬದ್ಧವಾಗಿ ವರ್ಗಾವಣೆ ಮಾಡಿದರೆ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವುದು ಕಷ್ಟವಾಗುವುದಿಲ್ಲ ಮತ್ತು ರಾಜ್ಯದ ಹಣಕಾಸು ಸ್ಥಿತಿಯು ಹದಗೆಡುವುದಿಲ್ಲ.

 

 

ಅದರ ಮೇಲೆ ಹೆಚ್ಚಿನ ಒತ್ತಡವೂ ಉಂಟಾಗುವುದಿಲ್ಲ. ಒಕ್ಕೂಟ ಸರ್ಕಾರವು ಸಂವಿಧಾನಾತ್ಮಕ ನೆಲೆಯಲ್ಲಿ ಕರ್ನಾಟಕವನ್ನು ಸೇರಿಸಿಕೊಂಡು ರಾಜ್ಯಗಳಿಗೆ ಹಣಕಾಸನ್ನು ನಿಯಮಬದ್ಧವಾಗಿ ವರ್ಗಾವಣೆ ಮಾಡುತ್ತಿಲ್ಲ(ಇದು ಹೇಗೆ ಎಂಬುದನ್ನು ಮುಂದೆ ತೋರಿಸಲಾಗಿದೆ). ಅದಕ್ಕೆ ಸಂವಿಧಾನಾತ್ಮಕ ಒಕ್ಕೂಟ ತತ್ವದ ಬಗ್ಗೆಯೇ ನಂಬಿಕೆಯಿಲ್ಲ. ಅದು ಏಕಾತ್ಮಕ ರಾಜಕೀಯ ವ್ಯವ್ಯಸ್ಥೆಯನ್ನು ನಂಬಿರುವ ಸರ್ಕಾರವಾಗಿದೆ. ಉದಾ, ಒಂದು ದೇಶ; ಒಂದು ತೆರಿಗೆ, ಒಂದು ದೇಶ; ಒಂದು ಮಾರುಕಟ್ಟೆ ಇತ್ಯಾದಿ.

 

 

ಎರಡನೆಯ ಮಾರ್ಗವೆಂದರೆ ಕರ್ನಾಟಕ ಸರ್ಕಾರ ತನ್ನ ಸಾರ್ವಜನಿಕ ಆಡಳಿತ ಹಾಗೂ ಹಣಕಾಸು ನಿರ್ವಹಣೆಯಲ್ಲಿ ಆಮೂಲಾರ್ಗ ಬದಲಾವಣೆ ಮಾಡಿಕೊಳ್ಳುವುದರಿಂದ ಮತ್ತು ಅವುಗಳ ಕಾರ್ಯಕ್ಷಮತೆಯನ್ನು ಉತ್ತಮಪಡಿಸಕೊಳ್ಳುವುದರಿಂದ ಇದು ಸಾಧ್ಯವಾಗಬಹುದು. ರಾಜ್ಯದಲ್ಲಿ ಸಾರ್ವಜನಿಕ ಆಡಳಿತವು ಬುಡದಿಂದ ತುದಿಯವರೆಗೂ ಭ್ರಷ್ಠಾಚಾರದಿಂದ ಕೊಳೆತು ಹೋಗಿದೆ.

 

 

ಸಿಎಜಿಯು ತನ್ನ 2022ಕ್ಕೆ ಕೊನೆಗೊಂಡ ವರ್ಷದ ವರದಿಯಲ್ಲಿ ನೀಡಿರುವ ರಾಜ್ಯ ಸಾರ್ವಜನಿಕ ವಲಯದಲ್ಲಿ 125 ಉದ್ದಿಮೆಗಳಿವೆ. ಇವೆಲ್ಲವೂ ರಾಜಕೀಕರಣಕ್ಕೆ ಒಳಗಾಗಿ ರಾಜಕಾರಣಿಗಳ ಆಸ್ತಿಯಾಗಿ ಬಿಟ್ಟಿವೆ (ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಲ್ಲಿ ಅದರ ಅಧ್ಯಕ್ಷ(ಬಿಜೆಪಿ ಎಂಎಲ್‌ಎ) ಮತ್ತು ಕೆಎಎಸ್ ಅಧಿಕಾರಿಯಾಗಿದ್ದ ಅವರ ಮಗ ನಡೆಸಿದ್ದ ಬ್ರಹ್ಮಾಂಡ ಭಷ್ಠಾಚಾರ ಬಟ್ಟಬಯಲಾದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇಲ್ಲಿ ರಾಜಕಾರಣಿ ಮತ್ತು ಅಧಿಕಾರಿ ನಡುವಿನ ಅಪವಿತ್ರ ಭ್ರಷ್ಠಾಚಾರದ ಸಂಬಂಧವನ್ನು ಗಮನಿಸಬೇಕು). ಸರ್ಕಾರದ ಸಾಲ ಮಿತಿಮೀರುತ್ತಿದೆ. ಇಲ್ಲಿ ಯಾವುದೂ ಸರಿಯಿಲ್ಲ.

 

 

ಸಾರ್ವಜನಿಕ ಆಡಳಿತ ಎಷ್ಟು ಕೆಟ್ಟ್ಟಿದೆಯೆಂದರೆ ರಾಜಕಾರಣಿಗಳು ಕೇಳಿದ ಅಥವಾ ಶಿಫಾರಸ್ಸು ಮಾಡಿದ ಅಧಿಕಾರಿಗಳನ್ನು(ತಹಸೀಲ್ದಾರ್, ಸಬ್‌ಇನ್ಸ್ಪೆಕ್ಟರ್, ಎಕ್ಸಿಕ್ಯುಟಿವ್ ಆಫೀಸರ್ ಇತ್ಯಾದಿ). ಅವರ ವಿಧಾನ ಸಭಾ ಕ್ಷೇತ್ರಕ್ಕೆ ವರ್ಗಾವಣೆ ಮಾಡಿಕೊಡಬೇಕು ಎಂಬುದು ‘ನಿಯಮ’ವಾಗಿ ಬಿಟ್ಟಿದೆ. ಇಲ್ಲಿ ಆಡಳಿತ ನಿಯಮ ಎಂಬುದೇ ಇಲ್ಲ(ಅಕ್ರಮ ಗಣಿಗಾರಿಕೆಯು ನಡೆದ 2007-2012ರ ನಡುವೆ ಅಂದಿನ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜನಾರ್ದನರೆಡ್ಡಿ ಅವರು ಅನುಸರಿಸುತ್ತಿದ್ದ ಕ್ರಮ ಇದಾಗಿದೆ. ವಿವರಗಳಿಗೆ ನೋಡಿ: ಕರ್ನಾಟಕ ಲೋಕಾಯುಕ್ತ ವರದಿ 2008). ಇಲ್ಲಿ ಜಾತೀಯತೆ, ರಕ್ತ ಸಂಬಂಧದ ವ್ಯವಹಾರ, ಹಣದ ವಿನಿಮಯ ಹೀಗೆ ಎಲ್ಲವೂ ನಡೆಯುತ್ತವೆ.

 

 

ಇಲ್ಲಿ ಜನತಂತ್ರ ಎಲ್ಲಿದೆ? ಸಾರ್ವಜನಿಕ ಪಾರದರ್ಶಕತೆ ಎಲ್ಲಿದೆ? ಅಧಿಕಾರಿಗಳನ್ನು ನೇಮಕ ಮಾಡಲು ಆಡಳಿತಾತ್ಮಕ ನಿಯಮಗಳಿರಬೇಕು. ಅದರ ಪ್ರಕಾರ ಅಧಿಕಾರಿಗಳ ನೇಮಕ-ವರ್ಗಾವಣೆ ನಡೆಯಬೇಕು. ಆದರೆ ಅದು ಹೀಗೆ ನಡೆಯುತ್ತಿಲ್ಲ. ಅಲ್ಲಿರುವುದು ಮೌಖಿಕ ಸಂಪ್ರದಾಯ. ಇದರಲ್ಲಿ ಯಾವ ಪಕ್ಷವೂ ಕಡಿಮೆಯಿಲ್ಲ. ಇತ್ತೀಚಿಗೆ ವಿಧಾನ ಸಭೆಯಲ್ಲಿ ‘ವರ್ಗಾವಣೆ’ ದಂದೆಯ ಬಗ್ಗೆ ಕೋಲಾಹಲಕಾರಿ ವಾಗ್ವಾದ-ಚರ್ಚೆ ನಡೆಯಿತು. ವರ್ಗಾವಣೆ ದಂದೆಯ ಬಗ್ಗೆ ಆಪಾದನೆ ಮಾಡುವವರಾಗಲಿ ಅಥವಾ ಅದನ್ನು ಅಲ್ಲಗಳೆಯುತ್ತಿರುವ ಅಡಳಿತ ಪಕ್ಷದ ಸದಸ್ಯರಾಗಲಿ ಅದರಿಂದ ಹೊರತಾಗಿಲ್ಲ ಎಂಬುದು ರಾಜ್ಯದ ಆರು ಕೋಟಿಗೂ ಮೀರಿ ಜನರಿಗೂ ಗೊತ್ತಿದೆ.

 

 

ಗ್ರಾಮ ಪಂಚಾಯತಿ, ನಗರ ಸ್ಥಳೀಯ ಸಂಸ್ಥೆಗಳು, ತಾಲ್ಲೂಕು ಕಚೇರಿ, ಸಬ್‌ರಿಜಿಸ್ಟಾçರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಸರ್ಕಾರಿ ಆರೋಗ್ಯ ಕೇಂದ್ರಗಳು — ಹೀಗೆ ಎಲ್ಲವೂ ಭ್ರಷ್ಠಾಚಾರದಲ್ಲಿ ಮುಳುಗಿ ಹೋಗಿವೆ, ಇದಕ್ಕೆ ಸಂಬಂಧಿಸಿದಂತೆ ವಾರ್ತಾ ಪತ್ರಿಕೆಗಳಲ್ಲಿ ದಿನವೂ ಒಂದಲ್ಲ ಒಂದು ಭ್ರಷ್ಠಾಚಾರದ ಘಟನೆಗಳು ವರದಿಯಾಗುತ್ತಿರುತ್ತವೆ. ಈ ಭ್ರಷ್ಠಾಚಾರದಲ್ಲಿ ಜನಪ್ರತಿನಿಧಿಗಳ ಪಾಲು ಇದೆ ಎಂಬುದು ರಹಸ್ಯವಾದ ಸಂಗತಿಯೇನಲ್ಲ.
ಈಗ ಉದ್ಬವವಾಗಿರುವ ಹಣಕಾಸು ಒತ್ತಡವನ್ನು ಮೇಲೆ ವಿವರಿಸಿರುವಂತೆ ಪರಿಹರಿಸಿಕೊಳ್ಳಲು ಎರಡು ಮಾರ್ಗಗಳಿವೆ. ಅವುಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.

 

 

ರಾಜ್ಯದ ಸಾರ್ವಜನಿಕ ಆಡಳಿತ ಮತ್ತು ಸರ್ಕಾರಿ ಹಣಕಾಸು ನಿರ್ವಹಣೆ

 

 

ಮೇಲೆ ತಿಳಿಸಿರುವ ಎರಡು ಮಾರ್ಗಗಳಲ್ಲಿ ಎರಡನೆಯದನ್ನು ಮೊದಲು ಪರಿಶೀಲಿಸೋಣ. ಇಲ್ಲಿ ಯಾವ ರೀತಿಯ ಸುಧಾರಣೆಯಾಗಬೇಕು ಎಂಬುದನ್ನು ವಿವರಿಸಲಾಗಿದೆ.

 

 

(i). ರಾಜ್ಯದಲ್ಲಿ ವಿತ್ತೀಯ ಶಿಸ್ತು ಒತ್ತಡಕ್ಕೆ ಒಳಗಾಗಿದೆ. ರಾಜಸ್ವ ಕೊರತೆ ಮತ್ತು ವಿತ್ತೀಯ ಕೊರತೆಯು ಮಿತಿಮೀರಿ ಬೆಳೆಯುತ್ತಿದೆ. ಉದಾ: 2017-18 ರಲ್ಲಿ ರಾಜಸ್ವ ಖಾತೆಯಲ್ಲಿ ರೂ. 4,518 ಕೋಟಿ ಆಧಿಕ್ಯವಿತ್ತು. ಆದರೆ 2020-21ರಲ್ಲಿ ರೂ(-) 19,338 ಕೋಟಿ ಕೊರತೆಯಿತ್ತು. ಈ ಕೊರತೆಯು 2021-22 ರಲ್ಲಿ ರೂ(-) 23,666 ಕೋಟಿಯಿದ್ದುದು 2023-24 ರಲ್ಲಿ ರೂ(-) 12,522 ಕೋಟಿಯಾಗಿದೆ.

 

 

ಇದು ಅತ್ಯಂತ ಆತಂಕಕಾರಿ ಬೆಳವಣಿಗೆ. ಏಕೆಂದರೆ ಈ ಕೊರತೆಯನ್ನು ತುಂಬಲು ಸರ್ಕಾರವು ಸಾಲವನ್ನು ಅವಲಂಬಿಸಬೇಕಾಗುತ್ತದೆ. ಮನೆ ಕಟ್ಟಲು ಸಾಲ ಮಾಡಿದರೆ ಅದನ್ನು ಅರ್ಥ ಮಾಡಿಕೊಳ್ಳಬಹುದು(ಬಂಡವಾಳ ವೆಚ್ಚ). ಆದರೆ ಮನೆಯ ಬಾಡಿಗೆ ಕಟ್ಟಲು ಸಾಲ ಮಾಡಿದರೆ ಅದನ್ನು ವಿತ್ತೀಯ ಅಶಿಸ್ತು ಎನ್ನಲಾಗುತ್ತದೆ(ಅನುಭೋಗ ವೆಚ್ಚ). ರಾಜ್ಯ ಒಟ್ಟು ಆಂತರಿಕ ಉತ್ಪನ್ನದ ಶೇಕಡವಾರು ರಾಜಸ್ವ ಕೊರತೆಯು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯಿದೆಯು ನಿಗದಿಪಡಿಸಿರುವ ಮಿತಿಯಲ್ಲಿದೆ. ಆದರೆ ಕೊರತೆಯ ಮೊತ್ತವು ಹಣಕಾಸು ಇಲಾಖೆಯ ಎದೆ ನಡುಗಿಸುವಂತಿದೆ. ಆದ್ದರಿಂದ ಸರ್ಕಾರ ಕಠಿಣ ಕ್ರಮಗಳ ಮೂಲಕ ರಾಜಸ್ವ ಖಾತೆಯಲ್ಲಿ ಕೊರತೆಯನ್ನು ಸರಿಪಡಿಸಿ ಅಲ್ಲಿ ಆಧಿಕ್ಯವನ್ನು ಸಾಧಿಸಿಕೊಳ್ಳಬೇಕು.

 

 

(ii). ಸಾಲ ಮತ್ತು ಅದರ ಮೇಲಿನ ಬಡ್ಡಿ ಮಿತಿಮೀರಿ ಏರಿಕೆಯಾಗುತ್ತಿದೆ. ಇಲ್ಲಿಯೂ ಸಾಲದ ಮೊತ್ತವು ವಿತ್ತೀಯ ಹೊಣೆಗಾರಿಕೆ ಕಾಯಿದೆಯು ನಿಗದಿಪಡಿಸಿರುವ ಮಟ್ಟದಲ್ಲಿದೆ(ಜಿಎಸ್‌ಡಿಪಿಯ ಶೇ. 25 ). ಇಲ್ಲಿ ನಾವು ಗಮನಿಸಬೇಕಾದುದು ವಾರ್ಷಿಕ ಸಾಲ ಮತ್ತು ಬಡ್ಡಿ ಪಾವತಿ. ಸರ್ಕಾರವು 2023-24ರಲ್ಲಿ ಎತ್ತಲಿರುವ ಸಾಲ ರೂ. 85,818 ಕೋಟಿ ಮತ್ತು ವಾರ್ಷಿಕ ಬಡ್ಡಿ ಪಾವತಿಯು 2021-22ರಲ್ಲಿ  ರೂ. 24, 948 ಕೋಟಿಯಿದ್ದರೆ 2023-24ರಲ್ಲಿ ಇದು ರೂ. 34,023 ಕೋಟಿಗೇರಿದೆ. ಇದು ಸಂಬಂಧಿಸಿದ ವರ್ಷದ ಒಟ್ಟು ರಾಜಸ್ವ ಸ್ವೀಕೃತಿಯ ಶೇ. 12.76 ರಷ್ಟಿದ್ದುದು ಪ್ರಸಕ್ತ ವರ್ಷದಲ್ಲಿ ಇದು ಶೇ. 14.27 ಕ್ಕೇರಿದೆ.

 

 

(iii). ಸಾರ್ವಜನಿಕದ ಉದ್ದಿಮೆಗಳು ಜನ ಕಲ್ಯಾಣ ಉದ್ದೇಶವನ್ನು ನಿರ್ವಹಿಸುತ್ತಿವೆ. ಕುಡಿಯುವ ನೀರು, ವಿದ್ಯುತ್ತು, ಸಾರಿಗೆ, ಮೂಲ ಸೌಕರ್ಯ ಮತ್ತು ಸಮುದಾಯ ಅಭಿವೃದ್ಧಿ ಮುಂತಾದ ಕ್ಷೇತ್ರದಲ್ಲಿ ಅವು ಕಾಣಿಕೆ ನೀಡುತ್ತಿವೆ. ಇಂತಹ 135 ಉದ್ದಿಮೆಗಳಿಗೆ(ಆರ್ಥಿಕ ಸಂಸ್ಥೆಗಳು: 26 , ಮೂಲ ಸೌಕರ್ಯ ಸಂಸ್ಥೆಗಳು: 27, ವಿದ್ಯುತ್ ಉದ್ದಿಮೆಗಳು: 11, ಸೇವಾ ಸಂಸ್ಥೆಗಳೂ: 61 . ಒಟ್ಟು 125 ). ಈ ಉದ್ದಿಮೆಗಳ ಮೇಲೆ ತೊಡಗಿಸಿದ ಬಂಡವಾಳ(ಈಕ್ವಿಟಿ + ಸಾಲ) 2021-22ರಲ್ಲಿ ರೂ. 190939 ಕೋಟಿ. ಒಟ್ಟು ಬಂಡವಾಳದಲ್ಲಿ ವಿದ್ಯುತ್ ಮತ್ತು ಮೂಲಸೌಕರ್ಯ ಘಟಕಗಳ ಪಾಲು ಶೇ. 94.80 ರಷ್ಟಿದೆ.

 

 

ಒಟ್ಟು ಸಾರ್ವಜನಿಕ ಉದ್ದಿಮೆಗಳಲ್ಲಿ 5೦ ರಷ್ಟು ಲಾಭ ಗಳಿಸುತ್ತಿದ್ದರೆ ಉಳಿದವು ನಷ್ಟ ಅನುಭವಿಸುತ್ತಿವೆ. ಲಾಭ ಗಳಿಸುತ್ತಿರುವ ಉದ್ದಿಮೆಗಳ ಈಕ್ವಿಟಿ ಮೇಲಿನ ಪ್ರತಿಫಲ 2020-21 ರಲ್ಲಿ ಶೇ. 8.53 ರಷ್ಟಿದ್ದರೆ 2021-22 ರಲ್ಲಿ ಇದು ಶೇ, 6.70 ಕ್ಕಿಳಿದಿದೆ.

 

 

ಈ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಉತ್ತಮ ಪಡಿಸುವುದರ ಕಡೆಗೆ ಸರ್ಕಾರ ಗಮನ ನೀಡುತ್ತಿಲ್ಲ. ಈ ಸಂಸ್ಥೆಗಳ ನಿರ್ವಹಣೆಗೆ ರಾಜಕಾರಣಿಗಳನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತಿದೆ. ಇವರೆಲ್ಲರೂ ಖಾಲಿ “ಬಿಳಿ ಆನೆಗಳು”. ಉದ್ದಿಮೆಗಳ ನಿರ್ವಹಣೆ ಬಗ್ಗೆ ಇವರಿಗೆ ಯಾವ ಜ್ಞಾನ, ಕೌಶಲ್ಯ, ನಿರ್ವಹಣಾ ಪರಿಣಿತಿ ಇರುವುದಿಲ್ಲ. ಇದೇ ರೀತಿಯಲ್ಲಿ ಈ ಉದ್ದಿಮೆಗಳ ನಿರ್ವಹಣೆಗೆ ಅರ್ಹ ತಾಂತ್ರಿಕ ಪರಿಣಿತರನ್ನು ಕಾರ್ಯನಿರ್ವಹಣಾಧಿಕಾರಗಳನ್ನಾಗಿ ನೇಮಿಸುವುದಕ್ಕೆ ಪ್ರತಿಯಾಗಿ ಐಎಎಸ್ ಅಥವಾ ಕೆಎಎಸ್ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ.

 

 

ಇಲ್ಲಿದೆ ನಿಜವಾದ ಸಮಸ್ಯೆ. ಈಗಾಗಲೆ ಹೇಳಿರುವಂತೆ ಈ ಉದ್ದಿಮೆಗಳ ಮೇಲಿನ ಸರ್ಕಾರದ ಹೂಡಿಕೆ ರೂ. 190939 ಕೋಟಿ. ಇದರ ಮೇಲೆ ಶೇ. 10 ಪ್ರತಿಫಲ ಎಂದರೆ ರೂ 19,094 ಕೋಟಿಯಾಗುತ್ತದೆ. ಗ್ಯಾರಂಟಿಗಳನ್ನು ನಿರ್ವಹಿಸಲು ಸರಿಯಾದ ಕ್ರಮವೆಂದರೆ ಕರ್ನಾಟಕ ಸರ್ಕಾರವು ತನ್ನ ಉದ್ದಿಮೆಗಳನ್ನು ಲಾಭದಾಯಕವನ್ನಾಗಿ ಮಾಡುವುದು. ಇದರ ಬಗ್ಗೆ ಸರ್ಕಾರವು ಮೌನವಾಗಿದೆ.

the fil favicon

SUPPORT THE FILE

Latest News

Related Posts