ಅದಾನಿ ಅಧಿಪತ್ಯದ ಎಸಿಸಿ ಸಿಮೆಂಟ್ಸ್‌ಗೆ ಗಣಿ ಗುತ್ತಿಗೆ ಕರಾರು; ವಸೂಲಿಗೆ 850 ಕೋಟಿ ಬಾಕಿ ಇದ್ದರೂ ಕೇಂದ್ರಕ್ಕೆ ಪ್ರಸ್ತಾವ?

ಬೆಂಗಳೂರು;  ರಾಜ್ಯ ಸರ್ಕಾರಕ್ಕೆ ಒಟ್ಟಾರೆ  850.21 ಕೋಟಿ ರುಪಾಯಿ ಪಾವತಿಸದೇ  ಬಾಕಿ ಉಳಿಸಿಕೊಂಡಿರುವ  ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಲಿಮಿಟೆಡ್‌ಗೇ  ಗಣಿ ಗುತ್ತಿಗೆ ಕರಾರನ್ನು ಕಾರ್ಯಗತಗೊಳಿಸಲು  ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು  ವಿಶೇಷ ಪ್ರಕರಣದ ವ್ಯಾಪ್ತಿಯಲ್ಲಿ ತರಲು ತೀರ್ಮಾನಿಸಿದೆ!

 

ಹಾಗೆಯೇ ಈ ಕಂಪನಿಯು ವಿಶೇಷ ಪ್ರಕರಣದಡಿಯಲ್ಲಿನ ರಿಯಾಯಿತಿ ಪಡೆಯಲು ಯಾವುದೇ ಅರ್ಹತೆಯನ್ನೂ ಹೊಂದಿಲ್ಲ. ಆದರೂ ಎಂಎಂಡಿಆರ್ ಕಾಯ್ದೆ 1957ರ ನಿಯಮ 31ರ ಅಡಿ  ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವ ಪ್ರಕ್ರಿಯೆಗಳನ್ನು ಬಿರುಸಿನಿಂದ ನಡೆಸಿದೆ.

 

ಅಲ್ಲದೆ ಎಸಿಸಿ ಸಿಮೆಂಟ್ಸ್‌ ಲಿಮಿಟೆಡ್‌ ಗಣಿ ಗುತ್ತಿಗೆ ಕರಾರನ್ನು ಕಾರ್ಯಗತಗೊಳಿಸುವ ಸಂಬಂಧ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು, ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯ ಮತ್ತು ಈ ಅಭಿಪ್ರಾಯದ ಕುರಿತು ಕಾನೂನು ಸಚಿವ ಎಚ್‌ ಕೆ ಪಾಟೀಲ್‌ ಅವರ ಅಭಿಪ್ರಾಯವು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗೆ ತಲುಪಿಲ್ಲ. ಅಲ್ಲದೇ ಈ ಕಂಪನಿಗೆ ಗಣಿ ಗುತ್ತಿಗೆ ಕರಾರನ್ನು ಕಾರ್ಯಗತಗೊಳಿಸಲಿರುವ ಪ್ರಕರಣದಲ್ಲಿ ಆರ್ಥಿಕ ಪರಿಣಾಮಗಳಿರುವ ಕಾರಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮತಿ ಅತೀ ಅಗತ್ಯ. ಆದರೆ ಈ ಯಾವ ಪ್ರಕ್ರಿಯೆಗಳೂ ನಡೆದಿಲ್ಲ.

 

ಆದರೂ ಅದಾನಿ ಸಮೂಹದ ಅಧಿಪತ್ಯದಲ್ಲಿರುವ ಎಸಿಸಿ ಸಿಮೆಂಟ್ಸ್‌ಗೆ ಗಣಿ ಗುತ್ತಿಗೆ ಕರಾರನ್ನು ಕಾರ್ಯಗತಗೊಳಿಸಲು ವಿಶೇಷ ಪ್ರಕರಣ ಎಂದು ಪರಿಗಣಿಸಿ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಮುಂದಾಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

 

ಅದಾನಿ ಸಮೂಹದ ವಿರುದ್ಧ ಲೋಕಸಭೆಯಲ್ಲಿನ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ವರಿಷ್ಠರು ದಿನನಿತ್ಯ ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ನಿಂದ 850 ಕೋಟಿ ರು ವಸೂಲಿಗೆ ಬಾಕಿ ಇದ್ದರೂ ಸಹ ಗಣಿ ಗುತ್ತಿಗೆ ಕರಾರನ್ನು ಕಾರ್ಯಗತಗೊಳಿಸಲು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲು ತಯಾರಿ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ತೀರ್ಮಾನಿಸಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ.

 

ಸಿಎಂ, ಎಂ ಬಿ ಪಾಟೀಲ್‌ರ  ಗಮನದಲ್ಲಿದೆಯೇ?

 

ಎಸಿಸಿ ಸಿಮೆಂಟ್ಸ್‌ಗೆ ಗಣಿ ಗುತ್ತಿಗೆ ಕರಾರನ್ನು ಕಾರ್ಯಗತಗೊಳಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಮುಂದಾಗಿರುವ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚಿಸಿಲ್ಲ. ಅಲ್ಲದೇ ಸ್ವತಃ ಇಲಾಖೆಯ ಸಚಿವ ಎಂ ಬಿ ಪಾಟೀಲ್‌ ಅವರ ಗಮನಕ್ಕೂ ಬಂದಿಲ್ಲ. ಆದರೆ ಗಣಿ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ ಅವರಿಗಷ್ಟೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿಯನ್ನೇ ಕತ್ತಲಲ್ಲಿಟ್ಟಿದ್ದಾರೆ ಎಂದು ಗಣಿ ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ‘ದಿ ಫೈಲ್‌’ಗೆ ತಿಳಿಸಿದ್ದಾರೆ.

 

ಎಚ್‌ ಕೆ ಪಾಟೀಲ್‌ರ ಬಳಿ ಇದೆ ಕಡತ

 

ರಾಜ್ಯದ ಅಡ್ವೋಕೇಟ್‌ ಜನರಲ್ ಶಶಿಕಿರಣ್‌ ಶೆಟ್ಟಿ ಅವರು ಈಗಾಗಲೇ ತಮ್ಮ ಅಭಿಪ್ರಾಯವನ್ನು ಕಾನೂನು ಇಲಾಖೆಗೆ ಕಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಕಡತವು ಕಾನೂನು ಸಚಿವ ಎಚ್‌ ಕೆ ಪಾಟೀಲ್‌ ಅವರಿಗೆ 3 ದಿನದ ಹಿಂದೆಯಷ್ಟೇ ಸಲ್ಲಿಕೆಯಾಗಿದೆ. ಅಡ್ವೋಕೇಟ್ ಜನರಲ್‌ ಅವರು ನೀಡಿರುವ ಮಾಹಿತಿಯನ್ನು ಸಚಿವ ಎಚ್‌ ಕೆ ಪಾಟೀಲ್ ಅವರು  ಪ್ರಾಥಮಿಕ ಹಂತದ ಪರಿಶೀಲನೆ ನಡೆಸಿದ್ದಾರೆ. ಸಚಿವ ಎಚ್‌ ಕೆ ಪಾಟೀಲ್ ಅವರು ಇನ್ನೂ ಸಹ ಅಂತಿಮ ಅಭಿಪ್ರಾಯ ನೀಡಿಲ್ಲ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

 

ಈ ಪ್ರಕರಣದಲ್ಲಿ ಕೈಗಾರಿಕೆ, ವಾಣಿಜ್ಯ ಇಲಾಖೆ ಸಚಿವರು, ಮುಖ್ಯಮಂತ್ರಿ ಮತ್ತು ಕಾನೂನು ಸಚಿವರ ಅನುಮೋದನೆ ದೊರಕದೇ ಇದ್ದರೂ ಸಹ ಕೇಂದ್ರ ಸರ್ಕಾರಕ್ಕೆ ನೇರವಾಗಿ  ಪ್ರಸ್ತಾವ ಸಲ್ಲಿಸಲು ಮುಂದಾಗಿರುವುದು ಸಂಶಯಗಳಿಗೆ ಕಾರಣವಾಗಿದೆ.

 

ಈ ಸಂಬಂಧ  ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರಿಗೆ ದಿ ಫೈಲ್‌, ಪ್ರಶ್ನಾವಳಿ ಕಳಿಸಿತ್ತಲ್ಲದೇ  ಮತ್ತು ಪ್ರತಿಕ್ರಿಯೆ ಕೋರಿತ್ತು. ಇದುವರೆಗೂ ಯಾವುದೇ ಮಾಹಿತಿ ನೀಡಿಲ್ಲ.

 

ಕರ್ನಾಟಕದಲ್ಲಿ 850.21 ಕೋಟಿ ಬಾಕಿ

 

ಕಲ್ಬುರ್ಗಿಯ ವಾಡಿ ಪ್ರದೇಶದಲ್ಲಿ ಸುಣ್ಣದ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಎಸಿಸಿ ಸಿಮೆಂಟ್ಸ್‌ ಲಿಮಿಟೆಡ್‌,  ಸರ್ಕಾರಕ್ಕೆ 850.21 ಕೋಟಿ ರು ದಂಡ ಪಾವತಿಸಲು ಬಾಕಿ ಉಳಿಸಿಕೊಂಡಿದೆ.   ಈ ಕಂಪನಿಯು 2021ರಲ್ಲೇ ಹರಾಜಿನಲ್ಲಿ ಯಶಸ್ವಿಯಾಗಿತ್ತು. 2021ರ ಜನವರಿ 4ರಂದೇ ಲೆಟರ್‍‌ ಆಫ್‌ ಇಂಟೆಂಟ್‌ನ್ನು 5 ವರ್ಷಗಳ ಅವಧಿಗೆ ನೀಡಲಾಗಿತ್ತು. ಇದೀಗ ಇದರ ಅವಧಿಯು 2026ರ ಜನವರಿ 3ರವರೆಗೆ ಚಾಲ್ತಿಯಲ್ಲಿದೆ. ಹೀಗಾಗಿ ಗಣಿ ಗುತ್ತಿಗೆ ಕರಾರನ್ನು ಅನುಷ್ಠಾನಗೊಳಿಸದಿದ್ದಲ್ಲಿ ಹರಾಜು ಪ್ರಕ್ರಿಯೆಯು ರದ್ದಾಗಲಿದೆ.

 

ರಾಜಧನ ಬಾಕಿ ಮತ್ತು ವಿಧಿಸಿರುವ ದಂಡದ ಮೊತ್ತ ಪಾವತಿಗೆ ಸರ್ಕಾರವು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿರುವ ಎಸಿಸಿ ಲಿಮಿಟೆಡ್‌, ಹೈಕೋರ್ಟ್‌ನಲ್ಲಿ 2 ರಿಟ್‌ ಅರ್ಜಿಗಳನ್ನು ಸಲ್ಲಿಸಿದೆ. ಮತ್ತೊಂದು ಅರ್ಜಿಯನ್ನು ಸರ್ಕಾರವೇ ಹೈಕೋರ್ಟ್‌ನಲ್ಲಿ ಸಲ್ಲಿಸಿದೆ. ಈ ಮೂರು ರಿಟ್‌ ಅರ್ಜಿಗಳು 2026ರ ಫೆ.10ರಂದು ವಿಚಾರಣೆಗೆ ನಿಗದಿಯಾಗಿದೆ. ಹೀಗಿದ್ದರೂ ಸಹ ಉಚ್ಛ ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ಪ್ರಕರಣಗಳ ಆದೇಶವನ್ನು ಪಾಲಿಸುವ ಷರತ್ತಿಗೆ ಒಳಪಟ್ಟು ಕಂಪನಿಯಿಂದ ಪ್ರಮಾಣ ಪತ್ರ ಪಡೆಯಲು ನಿರ್ಧರಿಸಿದೆ.

 

ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಈ ಕುರಿತು ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ್‌ ಅವರು ಅಧಿಕಾರಿಗಳೊಂದಿಗೆ ಹಲವು ಸುತ್ತಿನ (ಕಡತ ಸಂಖ್ಯೆ; CI 14/CMC/2024) ಚರ್ಚೆ ನಡೆಸಿದ್ದರು.

 

ಗಣಿಗಾರಿಕೆ ಚಟುವಟಿಕೆಗಳಲ್ಲಿ ವಿವಿಧ ರೀತಿಯ ಉಲ್ಲಂಘನೆ ನಡೆಸಿರುವ ಗುರುತರವಾದ ಆರೋಪಕ್ಕೆ ಗುರಿಯಾಗಿರುವ ಎಸಿಸಿ ಲಿಮಿಟೆಡ್‌ ವಿರುದ್ಧ ಸರ್ಕಾರವು 482.69 ಕೋಟಿಯಷ್ಟು ದಂಡ ವಿಧಿಸಿತ್ತು. ಈ ಕುರಿತು ಎಸಿಸಿ ಲಿಮಿಟೆಡ್‌, ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ (ಸಂಖ್ಯೆ; ಡಬ್ಲ್ಯೂ ಪಿ 18655/2025) ಸಲ್ಲಿಸಿತ್ತು.

 

 

ಅಲ್ಲದೇ ರಾಜಧನ ರೂಪದಲ್ಲಿ 492.51 ಕೋಟಿ ರು ಪಾವತಿಸಬೇಕಿತ್ತು. ಒಟ್ಟಾರೆ ಸರ್ಕಾರಕ್ಕೆ 850.21 ಕೋಟಿಯಷ್ಟು ಪಾವತಿಸಲು ಬಾಕಿ ಉಳಿಸಿಕೊಂಡಿದೆ.

 

ಈ ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ (ಗಣಿ ಗುತ್ತಿಗೆ ಸಂಖ್ಯೆ 2641) ಸರ್ಕಾರದ ಹಂತದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು 2023ರ ಮಾರ್ಚ್‌ 31ರಂದು ಸರ್ಕಾರಕ್ಕೆ ವರದಿ ನೀಡಿತ್ತು. ಇದರ ಪ್ರಕಾರ ಎಸಿಸಿ ಲಿಮಿಟೆಡ್‌, 492.51 ಕೋಟಿ ರು ಮತ್ತು ಉಚ್ಛ ನ್ಯಾಯಾಲಯವು 2024ರ ಅಕ್ಟೋಬರ್‍‌ 29ರಂತೆ ಎಸಿಸಿ ಲಿಮಿಟೆಡ್‌ ರಾಜಧನ ರೂಪದಲ್ಲಿ 125.00 ಕೋಟಿ ರು ಪಾವತಿಸಿದೆ. ಸರ್ಕಾರಕ್ಕೆ ಇನ್ನೂ 367.51 ಕೋಟಿ ರು ರಾಜಧನ ಪಾವತಿಸಲು ಬಾಕಿ ಇದೆ.

 

 

ಈ ಸಂಬಂಧವೂ ಎಸಿಸಿ ಲಿಮಿಟೆಡ್‌, ಉಚ್ಛ ನ್ಯಾಯಾಲಯದಲ್ಲಿ ರಿಟ್‌ ಅರ್ಜಿ (ಡಬ್ಲ್ಯೂ ಪಿ 25298/2024) ಸಲ್ಲಿಸಿದೆ. ಈ ಪ್ರಕರಣವು ಇನ್ನೂ ವಿಚಾರಣೆ ಹಂತದಲ್ಲಿದೆ ಎಂದು ಉನ್ನತ ಮಟ್ಟದ ಸಮಿತಿಯು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

 

ಹಾಗೆಯೆ ಪ್ರಶ್ನಿತ ಈ ಕಂಪನಿಯು ರಾಜಧನ ಮೊತ್ತದಲ್ಲಿ ಇನ್ನೂ 367.51 ಕೋಟಿ ರು ಪಾವತಿಸುವುದಕ್ಕೆ ಬಾಕಿ ಉಳಿಸಿಕೊಂಡಿದೆ. ಇದನ್ನು ಎಸ್ಕ್ರೋ ಖಾತೆಗೆ ಪಾವತಿಸಿಲ್ಲ. ಬದಲಿಗೆ ಕೇಂದ್ರದ ಗಣಿ ಸಚಿವಾಲಯದಲ್ಲಿ ಪರಿಷ್ಕರಣಾ ಅರ್ಜಿಯನ್ನು ಸಲ್ಲಿಸಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಪರಿಷ್ಕರಣೆ ಪ್ರಾಧಿಕಾರವು ‘ಈ ಪ್ರಕರಣವನ್ನು ಹೊಸದಾಗಿ ಪರಿಗಣಿಸಬೇಕು,’ ಎಂದು ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಿತ್ತು.

 

ಕೇಂದ್ರ ಸರ್ಕಾರದ ಗಣಿ ಮಂತ್ರಾಲಯ ಮತ್ತು ಪರಿಷ್ಕರಣೆ ಪ್ರಾಧಿಕಾರ ನೀಡಿದ್ದ ತೀರ್ಪನ್ನು ರಾಜ್ಯ ಸರ್ಕಾರವೂ ಸಹ  ಉಚ್ಛ ನ್ಯಾಯಾಲಯದಲ್ಲಿ 2025ರ ಡಿಸೆಂಬರ್‍‌ 2ರಂದು   ರಿಟ್‌ ಅರ್ಜಿ (ಸಂಖ್ಯೆ ಡಬ್ಲ್ಯೂ ಪಿ 36850/2025) ಸಲ್ಲಿಸಿತ್ತು. ಈ ಪ್ರಕರಣವೂ ಸಹ ಇನ್ನೂ ವಿಚಾರಣೆ ಹಂತದಲ್ಲಿ ಬಾಕಿ ಇದೆ.

 

 

 

ಅಲ್ಲದೇ ಈ ಗಣಿ ಗುತ್ತಿಗೆಯು (2641) 2023ರ ಫೆಬ್ರವರಿ 18ರಂದೇ ಮುಕ್ತಾಯಗೊಂಡಿದೆ. ಆದರೂ ಈ ಪ್ರದೇಶದಲ್ಲಿ ಎಸಿಸಿ ಲಿಮಿಟೆಡ್‌ ಅನಧಿಕೃತವಾಗಿ ಗಣಿಗಾರಿಕೆ ನಡೆಸಿತ್ತು. ಹೀಗಾಗಿ ಈ ಕಂಪನಿಗೆ 482.69 ಕೋಟಿ ರು ದಂಡವನ್ನು ವಿಧಿಸಿತ್ತು. ಇದನ್ನು ಪ್ರಶ್ನಿಸಿದ್ದ ಎಸಿಸಿ ಲಿಮಿಟೆಡ್‌, ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ (ಸಂಖ್ಯೆ ಡಬ್ಲ್ಯೂ ಪಿ 18655/2025) ಸಲ್ಲಿಸಿತ್ತು. ಈ ಪ್ರಕರಣವೂ ವಿಚಾರಣೆ ಹಂತದಲ್ಲಿದೆ.

 

 

 

850.21 ಕೋಟಿಯಷ್ಟು ಮೊತ್ತವನ್ನು ಸರ್ಕಾರಕ್ಕೆ ಪಾವತಿಸಲು ಬಾಕಿ ಉಳಿಸಿಕೊಂಡಿದ್ದರೂ ಸಹ ಕಲ್ಬುರ್ಗಿಯ ಕಣ್ಣೂರು ವಾಡಿಯಲ್ಲಿನ ಸುಣ್ಣದ ಕಲ್ಲು ಗಣಿಗಾರಿಕೆಗೆ ಎಸಿಸಿ ಲಿಮಿಟೆಡ್‌ ಹೊಸದಾಗಿ ಅರ್ಜಿ ಸಲ್ಲಿಸಿತ್ತು. ಮತ್ತು ಈ ಗಣಿ ಗುತ್ತಿಗೆ ಪ್ರದೇಶವನ್ನು ಹರಾಜಿನಲ್ಲಿ ಪಡೆಯುವುದರಲ್ಲಿ ಯಶಸ್ವಿಯಾಗಿತ್ತು. 850.21 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದ ಈ ಕಂಪನಿಯನ್ನು, ಹರಾಜಿನಲ್ಲಿ ಭಾಗವಹಿಸುವುದನ್ನು ಇಲಾಖೆಯು ತಡೆಹಿಡಿಯಲಿಲ್ಲ.

 

ಎಸಿಸಿ ಲಿಮಿಟೆಡ್‌ನ ಸುಣ್ಣದ ಕಲ್ಲಿನ ಗಣಿ ಗುತ್ತಿಗೆ ಪ್ರದೇಶ

 

ಕಲ್ಬುರ್ಗಿಯ ವಾಡಿ ಪ್ರದೇಶವು ಪ್ರಮುಖವಾಗಿ ಸುಣ್ಣದ ಕಲ್ಲು ಗಣಿಗಾರಿಕೆ ಮತ್ತು ಕಲ್ಲು ಗಣಿಗಾರಿಕೆಗೆ ಹೆಸರುವಾಸಿಯಾಗಿದೆ. ವಿಶೇಷವಾಗಿ ಈ ಪ್ರದೇಶದಲ್ಲಿ ಎಸಿಸಿ ಸಿಮೆಂಟ್‌ ಕಂಪನಿ ಮತ್ತು ಗಣಿಗಳಿವೆ. ಇಲ್ಲಿ ಉತ್ಪಾದನೆಯಾಗುವ ಸುಣ್ಣದ ಕಲ್ಲು ಮತ್ತು ಶಹಬಾದಿ ಕಲ್ಲುಗಳು ರಾಜ್ಯಾದ್ಯಂತ ಕಟ್ಟಡ ನಿರ್ಮಾಣಕ್ಕೆ ಬಳಕೆಯಾಗುತ್ತವೆ.

 

 

ಆದರೆ, ಈ ಕಂಪನಿಯ ಗಣಿಗಾರಿಕೆಯಿಂದಾಗಿ ರೈತರ ಭೂಮಿ ಫಲವತ್ತತೆ ಕಣ್ಮರೆಯಾಗುತ್ತಿದೆ ಮತ್ತು ಪರಿಸರ ಸಮಸ್ಯೆಗಳು ಉಂಟಾಗುತ್ತಿದೆ. ಈ ಕಂಪನಿಯ ಗಣಿ ಚಟುವಟಿಕೆಗೆ ಸ್ಥಳೀಯ ವಿರೋಧವೂ ಇದೆ.

 

ಅದಾನಿ ಸಮೂಹವು ಎಸಿಸಿ ಸಿಮೆಂಟ್ಸ್‌ನ್ನು 2022ರಲ್ಲಿಯೇ ಹೋಲ್ಸಿಮ್ (Holcim) ನಿಂದ ಸುಮಾರು $10.5 ಬಿಲಿಯನ್ (₹81,500 ಕೋಟಿ) ಗೆ ಸ್ವಾಧೀನಪಡಿಸಿಕೊಂಡಿತ್ತು.  ಅದಾನಿ ಗ್ರೂಪ್ ಈಗ ಅಂಬುಜಾ, ಎಸಿಸಿ ಮತ್ತು ಓರಿಯಂಟ್ ಸಿಮೆಂಟ್ಸ್‌ಗಳನ್ನು ಒಂದೇ ಕಾರ್ಪೊರೇಟ್ ರಚನೆಗೆ ವಿಲೀನಗೊಳಿಸಿದೆ.   ಅಂಬುಜಾ ಸಿಮೆಂಟ್ಸ್ ಲಿಮಿಟೆಡ್,  ಎಸಿಸಿ  ಲಿಮಿಟೆಡ್ ಮತ್ತು ಓರಿಯಂಟ್ ಸಿಮೆಂಟ್ ಲಿಮಿಟೆಡ್ ಅನ್ನು ವಿಲೀನಗೊಳಿಸುವ ಮೂಲಕ ಒಂದೇ ಏಕೀಕೃತ ‘ಒಂದು ಸಿಮೆಂಟ್ ಪ್ಲಾಟ್‌ಫಾರ್ಮ್’ ಅನ್ನು ಸ್ಥಾಪಿಸಲು ತನ್ನ ನಿರ್ದೇಶಕರ ಮಂಡಳಿಯಿಂದ ಎರಡು ಪ್ರತ್ಯೇಕ ವಿಲೀನ ಯೋಜನೆಗಳಿಗೆ ಅನುಮೋದನೆ ಪಡೆದಿದೆ.

 

 

“ಈ ವಿಲೀನವು ಪ್ಯಾನ್-ಇಂಡಿಯಾ ಸಿಮೆಂಟ್ ಪವರ್‌ಹೌಸ್ ಅನ್ನು ಸೃಷ್ಟಿಸುತ್ತದೆ” ಎಂದು ಅದಾನಿ ಗ್ರೂಪ್ ಕಂಪನಿ ಪ್ರಕಟಣೆಯಲ್ಲಿ ತಿಳಿಸಿತ್ತು.

 

 

ಎಸಿಸಿಯ ಪ್ರತಿ ಷೇರಿಗೆ 10 ರೂ. ಮುಖಬೆಲೆಯ ಪ್ರತಿ 100 ಈಕ್ವಿಟಿ ಷೇರುಗಳಿಗೆ, ಅಂಬುಜಾ, ಎಸಿಸಿಯ ಅರ್ಹ ಷೇರುದಾರರಿಗೆ 2 ರೂ. ಮುಖಬೆಲೆಯ 328 ಈಕ್ವಿಟಿ ಷೇರುಗಳನ್ನು ವಿತರಿಸಲಿದೆ ಎಂದು ಅದು ಹೇಳಿತ್ತು.

 

 

ಇದಷ್ಟೇ ಅಲ್ಲ  ಅದಾನಿ ಗ್ರೂಪ್ ಸ್ವಾಧೀನಪಡಿಸಿಕೊಂಡಿರುವ ಎಸಿಸಿ ಸಿಮೆಂಟ್ಸ್‌ಗೆ ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ₹23.07 ಕೋಟಿ ದಂಡ ವಿಧಿಸಿತ್ತು.  ಅದಾನಿ ಗ್ರೂಪ್ ಸ್ವಾಧೀನಪಡಿಸಿಕೊಳ್ಳುವ ಮೊದಲು ಇದ್ದ ಅವಧಿಗೆ ಸಂಬಂಧಿಸಿದವು. ಎಸಿಸಿ ಕಂಪನಿಯು ಈ ಆದೇಶಗಳನ್ನು ಪ್ರಶ್ನಿಸುವುದಾಗಿ ತಿಳಿಸಿತ್ತು.

Your generous support will help us remain independent and work without fear.

Latest News

Related Posts